ಭಾರತದಲ್ಲಿ ಜಾತಿ ಮತ್ತು ನ್ಯಾಯಾಂಗ
ಕೋಮು ಪ್ರಾತಿನಿಧ್ಯ ಮತ್ತು ಮೀಸಲಾತಿ ನೀತಿಗಳು ವಸಾಹತು ಕಾಲಘಟ್ಟದ ಭಾಗವಾಗಿದ್ದವು. ಬ್ರಾಹ್ಮಣೇತರರಿಗೆ ಶಿಕ್ಷಣದಲ್ಲಿ ಸಮಾನ ಅವಕಾಶ ಮತ್ತು ಉದ್ಯೋಗ, ಸ್ವಾತಂತ್ರ್ಯ ಪೂರ್ವದ ಬೇಡಿಕೆಗಳಾಗಿದ್ದವು. 1920ರ ದಶಕದ ಉತ್ತರಾರ್ಧದಿಂದ ಬ್ರಾಹ್ಮಣರ ಪ್ರಾಧಾನ್ಯತೆಯನ್ನು ಕಡಿಮೆ ಮಾಡಲು ಮತ್ತು ಬ್ರಾಹ್ಮಣೇತರರಿಗೆ ಶಿಕ್ಷಣ ನೀಡಲು ವಿವಿಧ ಪ್ರಯತ್ನಗಳನ್ನು ಮಾಡಲಾಗಿದೆ. ಅಂತಿಮವಾಗಿ ಅನುಪಾತದ ಪ್ರಾತಿನಿಧ್ಯವನ್ನು ಖಾತ್ರಿಪಡಿಸುವುದಕ್ಕಾಗಿ 16 ಸೆಪ್ಟಂಬರ್ 1921ರಂದು ಮೊದಲ ಕೋಮು ಆದೇಶ 613 ಅನ್ನು ಮದ್ರಾಸ್ ಪ್ರಾಂತದಲ್ಲಿ ಅಂಗೀಕರಿಸಲಾಯಿತು. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿನ ಪ್ರತೀ 14 ಸ್ಥಾನಗಳಿಗೆ ಆದೇಶವು ಈ ಕೆಳಗಿನ ಆಧಾರದ ಮೇಲೆ ಸ್ಥಾನಗಳನ್ನು ಕಾಯ್ದಿರಿಸಿದೆ.
ಬ್ರಾಹ್ಮಣೇತರರು (ಹಿಂದುಗಳು): 6
ಹಿಂದೂ ಹಿಂದುಳಿದ ವರ್ಗ: 2
ಬ್ರಾಹ್ಮಣರು: 2
ದಲಿತರು: 2
ಆಂಗ್ಲೋ-ಇಂಡಿಯನ್ಸ್ ಮತ್ತು ಭಾರತ ಕ್ರೈಸ್ತರು:1
ಮುಸ್ಲಿಮರು: 1
ಆದೇಶದಲ್ಲಿ ಶೇ.20ರಷ್ಟು ಮೀಸಲಾತಿ ಕೋಟಾವನ್ನು ಪ್ರತಿಯೊಂದು ಪ್ರವರ್ಗದಲ್ಲಿಯೂ ಅರ್ಹತೆ ಇರುವ ಹೆಚ್ಚು ಸಂಖ್ಯೆಯ ಮಹಿಳೆಯರು ಆಯ್ಕೆಯಾಗಲಿ ಎಂಬ ಉದ್ದೇಶದಿಂದ ಅವಕಾಶವನ್ನೂ ಕಲ್ಪಿಸಲಾಗಿತ್ತು.
ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಾತಿಗೆ ಮೀಸಲಾತಿ ನೀಡಿರುವುದನ್ನು ಮದ್ರಾಸ್ ಉಚ್ಚ ನ್ಯಾಯಾಲಯ ತಳ್ಳಿ ಹಾಕಿತು. ಚಂಪಕಮ್ ದೊರೈರಾಜನ್ ಮತ್ತು ಶ್ರೀನಿವಾಸನ್ ಎಂಬವರು ಸಂವಿಧಾನದ ವಿಧಿ 15 (1) ಮತ್ತು ವಿಧಿ 29 (2)ಉಲ್ಲಂಘನೆಯಾಗಿವೆ ಎಂದು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ನ್ಯಾಯಾಲಯದಲ್ಲಿ ಪ್ರಶ್ನಿಸಿದ ಇಬ್ಬರೂ ಬ್ರಾಹ್ಮಣರಾಗಿದ್ದು, ಅವರನ್ನು ಸಂವಿಧಾನದ ಕರಡು ಸಮಿತಿಯ ಸದಸ್ಯರಾಗಿದ್ದ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರು ನ್ಯಾಯಾಲಯದಲ್ಲಿ ಪ್ರತಿನಿಧಿಸಿದ್ದರು. ಮೇಲ್ಮನವಿಯಲ್ಲಿ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವಾನುಮತದಿಂದ ಎತ್ತಿ ಹಿಡಿಯಿತು.
ಅರ್ಜಿದಾರರು ಕಾಲೇಜು ಪ್ರವೇಶಾತಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಭಾವಿಸಿದರೂ ಅರ್ಹತೆ ಮತ್ತು ಯೋಗ್ಯತೆ ಇದ್ದಲ್ಲಿ ಇಬ್ಬರಿಗೂ ಪ್ರವೇಶ ಮತ್ತು ಸ್ಥಾನಗಳನ್ನು ನೀಡುವುದನ್ನು ನಿರಾಕರಿಸಲಾಗುವುದಿಲ್ಲ ಎಂಬ ಅಭಿಪ್ರಾಯ ನ್ಯಾಯಾಲಯದ್ದಾಗಿತ್ತು. ಬ್ರಾಹ್ಮಣೇತರರಿಗೆ ಶಿಕ್ಷಣವನ್ನು ನಿರಾಕರಿಸುವ, ಜಾತಿ ಪದ್ಧತಿಯನ್ನು ಅನುಮೋದಿಸುವ ನಿರ್ಧಾರವು ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಅವರ ನ್ಯಾಯಾಲಯದ ಹಾಜರಿಯಿಂದ ಬೆಂಬಲಿಸಲ್ಪಟ್ಟಿತು ಎಂದು ಹೇಳುವುದು ಅತಿಶಯೋಕ್ತಿಯಲ್ಲ. ತಾರತಮ್ಯ ಮತ್ತು ಪ್ರಾತಿನಿಧ್ಯದ ತಿಳುವಳಿಕೆಗೆ ಅವಕಾಶವಿದ್ದರೂ ಸಂವಿಧಾನ ರಚನಾಕಾರರೊಬ್ಬರ ವಿವರಣೆಯ ಪ್ರಭಾವವು ನ್ಯಾಯಾಂಗವನ್ನು ಓಲೈಸುವಷ್ಟು ಪ್ರಬಲವಾಗಿತ್ತು ಎಂಬುದನ್ನು ಅಲ್ಲಗಳೆಯಲಾಗುವುದಿಲ್ಲ. ಅಧಿಕಾರ ಸ್ಥಾನದ ಭಾರತೀಯ ಮೌಲ್ಯ ವ್ಯವಸ್ಥೆಯನ್ನು ಗಮನಿಸಿದರೆ ನ್ಯಾಯಾಲಯಗಳು ಈ ನಿರ್ಧಾರದಿಂದ ಉಂಟಾದ ಪರಿಣಾಮಗಳ ಬಗ್ಗೆ ಚಿಂತಿಸಲಿಲ್ಲ.
ಶಿಕ್ಷಣದ ನಂತರ, ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಯನ್ನು ವಿಧಿ 13 ಮತ್ತು ವಿಧಿ 16 ರೊಂದಿಗೆ ಅಸಂಬದ್ಧವಾಗಿ ವಿರೋಧಿಸಲಾಯಿತು. ಭಾರತೀಯ ಸಂವಿಧಾನದ ಮೊದಲ ಐತಿಹಾಸಿಕ ತಿದ್ದುಪಡಿಯನ್ನು ನಿಖರವಾಗಿ ಮೀಸಲಾತಿಯ ನ್ಯಾಯಾಂಗದ ನಿರ್ಧಾರಗಳನ್ನು ರದ್ದುಗೊಳಿಸಲು ತರಲಾಯಿತು. ವಿಧಿ 15 ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯವನ್ನು ನಿಷೇಧಿಸಿದೆ; ಇದು ಮೂಲತಃ ಮೂರು ಖಂಡಗಳನ್ನು ಒಳಗೊಂಡಿತ್ತು. ಇವುಗಳನ್ನು ತಿದ್ದುಪಡಿ ಮಾಡಲಾಯಿತು ಮತ್ತು ಖಂಡ 4 ಅನ್ನು ಸಂವಿಧಾನದ (ಮೊದಲ ತಿದ್ದುಪಡಿ) ಕಾಯ್ದೆ, 1951 ಅನ್ನು ಸೇರಿಸಲಾಯಿತು. ಅದು ಈ ಕೆಳಗಿನಂತಿದೆ:
‘‘ಈ ಅನುಚ್ಛೇದದಲ್ಲಿ ಅಥವಾ 29ನೆಯ ಅನುಚ್ಛೇದದ(2)ನೇ ಖಂಡದಲ್ಲಿ ಇರುವುದು ಯಾವುದೂ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಗರಿಕರ ಯಾವುದೇ ವರ್ಗಗಳ ಪುರೋಭಿವೃದ್ಧಿಗಾಗಿ ಅಥವಾ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಸಲುವಾಗಿ ರಾಜ್ಯವು ಯಾವುದೇ ವಿಶೇಷ ಉಪಬಂಧವನ್ನು ಮಾಡದಂತೆ ಪ್ರತಿಬಂಧಿಸತಕ್ಕದ್ದಲ್ಲ.’’
ನ್ಯಾಯಾಂಗದ ಬದಲಾವಣೆಯ ದೃಷ್ಟಿಕೋನಗಳು
ಸ್ಪಷ್ಟವಾಗಿ ಅಂಬೇಡ್ಕರ್ ಮೀಸಲಾತಿ ಮೇಲಿನ ನಿಯಮಗಳನ್ನು ಬಲವಾಗಿ ಸಮರ್ಥಿಸಿಕೊಂಡರು. ಮೊದಲ ಸಾಂವಿಧಾನಿಕ ತಿದ್ದುಪಡಿಯ ಹೊರತಾಗಿಯೂ ಸರ್ವೋಚ್ಚ ನ್ಯಾಯಾಲಯ 1950ರಿಂದ ಮೊದಲ ಎರಡು ದಶಕಗಳಲ್ಲಿ ವಿಧಿ 16(4) ಅನ್ನು ವಿಧಿ 16(1)ಕ್ಕೆ ಅಪವಾದ ಎಂದು ವ್ಯಾಖ್ಯಾನಿಸಿತು. ವಿಧಿ16 (4) ಕೇವಲ ರಾಜ್ಯ ಸರಕಾರವನ್ನು ಮೀಸಲಾತಿ ತರಲು ಶಕ್ತಗೊಳಿಸುತ್ತದೆಯೇ ವಿನಃ ಕಡ್ಡಾಯವಾಗಿ ಬದ್ಧತೆಗೊಳಿಸುವುದಿಲ್ಲ. ಟಿ. ದೇವದಾಸನ್ v/s ಭಾರತ ಒಕ್ಕೂಟ( 1964,4 SCR
680:AIR S C 179) ಪ್ರಕರಣದಲ್ಲಿ ನ್ಯಾ.ಕೆ. ಸುಬ್ಬರಾವ್ ಅವರ ಭಿನ್ನಾಭಿಪ್ರಾಯವು ಈ ವಿಚಾರದಿಂದ ಮಾತ್ರ ಹೊರಗುಳಿದಿದೆ. ವಿಧಿ16(4) ವಿಧಿ16(1)ರ ಒಂದು ಮುಖ ಎಂದು ಅಭಿಪ್ರಾಯಪಟ್ಟರು.
‘ಆಡಳಿತ ದಕ್ಷತೆ’ ಎಂಬ ಪದಗುಚ್ಛವನ್ನು ಬಳಸುವ ವಿಧಿ 335 ಅನ್ನು ಸರ್ವೋಚ್ಚ ನ್ಯಾಯಾಲಯ 16(4)ರ ಮೇಲಿನ ಕ್ರಮವೆಂದು ನಿರ್ಣಯಿಸಿದೆ. ‘ಆಡಳಿತ ದಕ್ಷತೆ’ ಎಂಬ ಪದಗುಚ್ಛವನ್ನು ನ್ಯಾಯಾಲಯವು ಮೀಸಲಾತಿ ಹಕ್ಕಿನ ಕೃತಕ ನಿರ್ಬಂಧವಾಗಿ ಬಳಸಿದೆ. ಮೀಸಲಾತಿ ಮತ್ತು ದಕ್ಷತೆಯು ಒಂದಕ್ಕೊಂದು ವಿರುದ್ಧವಾಗಿರುವಂತೆ ದ್ವಂದ್ವಾತ್ಮಕತೆ ಸೃಷ್ಟಿಸಿದೆ.
ದಲಿತ, ಆದಿವಾಸಿ ಮತ್ತು ಒಬಿಸಿಗಳಿಗೆ ನ್ಯಾಯಾಂಗಗಳ ಅಡಚಣೆ ಇದೆಯೇ?
ಸರ್ವೋಚ್ಚ ನ್ಯಾಯಾಲಯ ಇತ್ತೀಚೆಗೆ ಸಾರ್ವಜನಿಕ ಹುದ್ದೆಗಳಿಗೆ ನೇಮಕಾತಿಗಳಲ್ಲಿ ಮೀಸಲಾತಿ ಅಥವಾ ಭಡ್ತಿ ಮೂಲಭೂತ ಹಕ್ಕಲ್ಲ ಮತ್ತು ಅವುಗಳನ್ನು ಒದಗಿಸಲು ರಾಜ್ಯವು ಬದ್ಧವಾಗಿಲ್ಲ ಎಂದು ಹೇಳಿದೆ. ಆಶ್ಚರ್ಯಕರವಾಗಿ, ಮೇಲಿನ ಹಲವು ನಿರ್ಣಯಗಳನ್ನು ವಿವಿಧ ಸಾಂವಿಧಾನಿಕ ತಿದ್ದುಪಡಿಗಳ ಮೂಲಕ ರದ್ದುಗೊಳಿಸಲಾಗಿದೆ.
1989ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯನ್ನು, ನಿರ್ಲಜ್ಜ ವ್ಯಕ್ತಿಗಳು ಅಮಾಯಕ ನಾಗರಿಕರನ್ನು ದಮನಿಸಲು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಎಸಗಿರುವ ಅಪರಾಧಗಳನ್ನು ಲೆಕ್ಕಿಸದೆ ಹೇಳಿರುವುದು ಕಹಿ ಸತ್ಯ. ಎಫ್‌ಐಆರ್ ದಾಖಲಾತಿಗೂ ಮುನ್ನ ಬಂಧನ ಮತ್ತು ಪ್ರಾಥಮಿಕ ವಿಚಾರಣೆಗೂ ಮುನ್ನ ನಿರೀಕ್ಷಣಾ ಜಾಮೀನು ಮಂಜೂರಾತಿ ನೇಮಕಾತಿ ಪ್ರಾಧಿಕಾರ ಅಥವಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮೋದನೆಯನ್ನು ಕಡ್ಡಾಯಗೊಳಿಸುವ ಮೂಲಕ ನ್ಯಾಯಾಲಯಗಳು ಕಾಯ್ದೆ ಉದ್ದೇಶವನ್ನೇ ದುರ್ಬಲಗೊಳಿಸಿವೆ. ಕಾನೂನು ಜಾರಿ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ವಹಿಸುತ್ತಿವೆ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ನುಣುಚಿಕೊಳ್ಳುವ ಉಪಾಯಗಳನ್ನು ಹೊಂದಿರುವುದರಿಂದ ಅಪರಾಧಿಗಳು ನಿರ್ಭಯದಿಂದ ಇರುತ್ತಾರೆ ಎಂಬ ವಾಸ್ತವ ಎದುರಿಸಿದಾಗಲೂ ನ್ಯಾಯಾಲಯಗಳು ‘ದುರ್ಬಲ ಅಪರಾಧ’ವನ್ನು ‘ಸುಳ್ಳು ಪ್ರಕರಣ’ಗಳು ಎಂದು ತಪ್ಪಾಗಿ ಅರ್ಥೈಸುವ ಅವಕಾಶವಿದೆ.
ನ್ಯಾಯಾಧೀಶರ ನೇಮಕಾತಿ ನ್ಯಾಯಕ್ಕೆ ಹೇಗೆ ಅಡ್ಡಿಯಾಗುತ್ತವೆ?
ಭಾರತೀಯ ನ್ಯಾಯಾಂಗವು ತನ್ನ ಮೂಲಭೂತ ಬ್ರಾಹ್ಮಣ ವ್ಯವಸ್ಥೆಯನ್ನು ಉಳಿಸಿಕೊಂಡಿದೆ. ಭಾರತದ ಸಂವಿಧಾನ ಅಂಗೀಕಾರದ ಸಮಯದಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹೆಚ್ಚಾಗಿ ಸಾಮಾಜಿಕ ಪ್ರತಿಷ್ಠಿತ ಮತ್ತು ಆರ್ಥಿಕವಾಗಿ ಅನುಕೂಲಸ್ಥ ಕುಟುಂಬಗಳನ್ನು ಪ್ರತಿನಿಧಿಸುತ್ತಾರೆ. 1950-67ರ ವರೆಗಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೊದಲ ಪಟ್ಟಿಯನ್ನು ಸರ್ವೋಚ್ಚ ನ್ಯಾಯಾಲಯದ ಹಾಲಿ ನ್ಯಾಯಾಧೀಶರ ಪಟ್ಟಿಯೊಂದಿಗೆ ಹೋಲಿಸಿದಾಗ ಓರ್ವ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಮತ್ತೋರ್ವ ನ್ಯಾಯಾಧೀಶರನ್ನು ಹೊರತುಪಡಿಸಿದಂತೆ ವ್ಯವಸ್ಥೆಯಲ್ಲಿ ಏನೂ ಬದಲಾಗಿಲ್ಲ.
ಪ್ರಸಕ್ತ 33 ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಪೈಕಿ ಒಬ್ಬರು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಅವರು 2010ರಲ್ಲಿ ನ್ಯಾ.ಕೆ. ಜಿ. ಬಾಲಕೃಷ್ಣನ್ ನಿವೃತ್ತಿಯ ದಶಕದ ನಂತರ ನೇಮಕಗೊಂಡವರು. ಶೇ.80ಕ್ಕಿಂತ ಹೆಚ್ಚು ಬ್ರಾಹ್ಮಣರು ಮತ್ತು ಮೇಲ್ಜಾತಿಯವರಿದ್ದಾರೆ. 2019ರಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ ನ್ಯಾ.ಬಿ.ಆರ್. ಗವಾಯಿ 2019ರಲ್ಲಿ ಒಂದು ದಶಕದ ನಂತರ ನೇಮಕಗೊಂಡ ಪರಿಶಿಷ್ಟ ಜಾತಿಗೆ ಸೇರಿದ ನ್ಯಾಯಾಧೀಶರು.
ಅಧೀನ ನ್ಯಾಯಾಧೀಶರ ಹುದ್ದೆಗಳಿಗೆ ಮೀಸಲಾತಿ ಇದ್ದರೂ, ಉನ್ನತ ನ್ಯಾಯಾಂಗದಲ್ಲಿ ಮೀಸಲಾತಿ ಇರುವುದಿಲ್ಲ. ಇದರ ಪರಿಣಾಮವಾಗಿ ಪರಿಶಿಷ್ಟ ಜಾತಿಗೆ 30 ವರ್ಷಗಳ ನಂತರ ಮತ್ತು ಮೊದಲ ಬಾರಿಗೆ ಒಬಿಸಿಗೆ ಮತ್ತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಲು ಮತ್ತೆ 8 ವರ್ಷಗಳು ಬೇಕಾಯಿತು. ನ್ಯಾ.ಎ. ವರದರಾಜನ್ 1980ರಲ್ಲಿ ನೇಮಕಗೊಂಡ ಮೊದಲ ಪರಿಶಿಷ್ಟ ಜಾತಿಯ ನ್ಯಾಯಾಧೀಶರು. ಆನಂತರ 1988ರಲ್ಲಿ ಎಸ್. ರತ್ನವೇಲು ಪಾಂಡಿಯನ್ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡ ಹಿಂದುಳಿದ ವರ್ಗದ ನ್ಯಾಯಾಧೀಶರು. ಗಮನಿಸಬೇಕಾದ ಅಂಶವೆಂದರೆ- ಇವರೆಲ್ಲರೂ ತಮಿಳುನಾಡಿಗೆ ಸೇರಿದವರು. ಇದು ತಮಿಳುನಾಡಿಗೆ ಸಾಧ್ಯವಾದರೆ ಬೇರೆ ರಾಜ್ಯಗಳಿಗೆ ಏಕೆ ಸಾಧ್ಯವಿಲ್ಲ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಏಕೆಂದರೆ ತಮಿಳುನಾಡಿನಲ್ಲಿ ರಾಜಕೀಯ ಮತ್ತು ಸಾಮಾಜಿಕ ನ್ಯಾಯ ಮತ್ತು ಸುಧಾರಣೆಯ ತತ್ವಕ್ಕೆ ಬದ್ಧರಾಗುವ ಪ್ರಯತ್ನವಿದೆ. ಈ ನೀತಿ ನಿರ್ಧಾರದ ಪರಿಣಾಮವಾಗಿ ತಮಿಳುನಾಡು ರಾಜ್ಯವು ದೇಶದ ಇತರ ರಾಜ್ಯಗಳಿಗಿಂತ ಹೆಚ್ಚು ವೈವಿಧ್ಯಮಯ ಮತ್ತು ನ್ಯಾಯಾಂಗ ನೇಮಕಾತಿಗಳನ್ನು ಒಳಗೊಂಡಿದೆ.
ಸ್ವಾತಂತ್ರ್ಯದ ಏಳು ದಶಕಗಳ ನಂತರವೂ ಸಾಕಷ್ಟು ಪ್ರಾತಿನಿಧ್ಯವನ್ನು ಸಾಧಿಸಲು ಸಾಧ್ಯವಾಗದಿದ್ದರೆ, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರಲ್ಲಿ ಹಿಂದುಳಿದ ವರ್ಗಗಳಿಗೆ ಅಂತಹ ಮೀಸಲಾತಿ ಮತ್ತು ಪ್ರಾತಿನಿಧ್ಯಕ್ಕೆ ಸ್ಪಷ್ಟವಾದ ಅವಕಾಶಗಳನ್ನು ಮಾಡಬೇಕಾದ ಸಮಯವಿದು. ಆದರೆ, ಆ ನಿಟ್ಟಿನಲ್ಲಿ ಬದ್ಧತೆ ಇರುವ ಉದಾರ ಮನಸ್ಸುಗಳಿಲ್ಲ.
ವೈವಿಧ್ಯಮಯ, ಒಳಗೊಳ್ಳುವ ಮತ್ತು ಪ್ರಾತಿನಿಧಿಕ ನ್ಯಾಯಾಂಗವು ನ್ಯಾಯವನ್ನು ಸುಲಭವಾಗಿ ಮತ್ತು ಸಮಾನವಾಗಿ ನೀಡುತ್ತದೆ. ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ರೂಪಿಸುವುದು ದೇಶದ ಪ್ರಜಾಪ್ರಭುತ್ವವನ್ನು ಮತ್ತು ಅದರ ಅಸ್ತಿತ್ವವನ್ನು ರಕ್ಷಿಸುವ ಏಕೈಕ ಮಾರ್ಗವಾಗಿದೆ ಎಂದು ನಮ್ಮ ನ್ಯಾಯಾಂಗವು ಅರಿಯುವ ಅವಶ್ಯಕತೆ ಇದೆ.