2025ರ ಕೇಂದ್ರ ಸರಕಾರದ ಬಜೆಟ್ ಮತ್ತು ಸವಾಲುಗಳು
ಕೇಂದ್ರ ಸರಕಾರದ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ರ ದಾಖಲೆಯ 8ನೆಯ ಬಜೆಟ್ ಫೆಬ್ರವರಿ ಒಂದನೇ ತಾರೀಕಿಗೆ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಈಗಾಗಲೇ ಮಂತ್ರಿಯವರು ವಿವಿಧ ಆರ್ಥಿಕ ಕ್ಷೇತ್ರಗಳ ಮುಖಂಡರ ಜೊತೆ ಬಜೆಟಿನ ಬಗ್ಗೆ ಸಮಾಲೋಚನೆ ಯನ್ನು ನಡೆಸಿದ್ದಾರೆ. ಹತ್ತು ವರ್ಷ ದೀರ್ಘವಾದ ಆಡಳಿತದ ಸೂತ್ರ ಹಿಡಿದು ಆ ಬಳಿಕ ಹೋದ ವರ್ಷದ ಲೋಕಸಭೆಯ ಚುನಾವಣೆಯಲ್ಲಿ ಸಂಪೂರ್ಣ ಬಹುಮತವಿಲ್ಲದೆ, ಸಮ್ಮಿಶ್ರ ಸರಕಾರ ರಚಿಸಬೇಕಾಗಿ ಬಂದ ನರೇಂದ್ರ ಮೋದಿಯವರ ಆರ್ಥಿಕ ನೀತಿಗೆ ಅತ್ಯಂತ ಕಠಿಣವಾದ ಸವಾಲುಗಳನ್ನು ಈ ಬಜೆಟ್ ನೀಡಲಿದೆ.
ಆತಂಕ ಹುಟ್ಟಿಸುವ ಬೆಳವಣಿಗೆಗಳು
ಈ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಭಾರತದ ಅರ್ಥವ್ಯವಸ್ಥೆಯನ್ನು ಇಂದು ಬಾಧಿಸುವ ಕೆಲವು ತೀವ್ರವಾದ ಸಮಸ್ಯೆಗಳತ್ತ ಗಮನವನ್ನು ಹರಿಸಬೇಕಾಗುತ್ತದೆ. ಅವುಗಳು ಪ್ರಮುಖವಾಗಿ ಹೀಗಿವೆ:
1. ಅಗತ್ಯ ವಸ್ತುಗಳ ಬೆಲೆ ಏರಿಕೆ
2. ದುಡಿಯುವ ವರ್ಗಗಳ ಸಂಪಾದನೆಯಲ್ಲಿ ನಿರಂತರ ಕಡಿತ.
3. ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರ ಉಳಿತಾಯದಲ್ಲಿ ಕಡಿತ.
4. ಉದ್ಯೋಗ ಸೃಷ್ಟಿಯಲ್ಲಿ ನಿರಂತರ ಇಳಿಕೆ.
5. ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ಕಾರ್ಮಿಕರ ಮರುವಲಸೆ.
6. ಕೈಗಾರಿಕೆಗಳ ಉತ್ಪಾದನೆಯಲ್ಲಿ ಹಿಂಜರಿಕೆ.
7. ಕೃಷಿಕರ ಆದಾಯದಲ್ಲಿ ಹೆಚ್ಚಳ ಆಗದೆ ಇರುವುದು.
8. ತೀವ್ರವಾಗುತ್ತಿರುವ ಆರ್ಥಿಕ ಅಸಮಾನತೆಗಳು.
ಹೋದ ದಶಕದ ನಿರ್ಧಾರಗಳು
ಈ ಪರಿಸ್ಥಿತಿ ಹೇಗೆ ಉದ್ಭವಿಸಿತು ಎಂಬುದನ್ನು ಅರಿಯಲು 2014-24ರ ಅವಧಿಯಲ್ಲಿ ದೇಶದ ಅರ್ಥವ್ಯವಸ್ಥೆಯ ಮೇಲೆ ಪ್ರಭಾವ ಬೀರಿದ್ದ ಮತ್ತು ಆ ಪ್ರಭಾವ ಇಂದಿಗೂ ಮುಂದುವರಿಯುತ್ತಿರುವ ಕೆಲವು ನಿರ್ಧಾರಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳಬೇಕಾಗುತ್ತದೆ. ಈ ನಿರ್ಧಾರಗಳಲ್ಲಿ ಪ್ರಮುಖವಾದವು 2016ರ ನೋಟು ರದ್ದತಿ, 2017ರ ಜಿಎಸ್‌ಟಿ ಮತ್ತು 2020ರ ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ ಹೇರಿದ ರಾಷ್ಟ್ರವ್ಯಾಪಿ ‘ಲಾಕ್‌ಡೌನ್’. ಇವುಗಳು ಬಹುಚರ್ಚಿತ ವಿಷಯಗಳಾದುದರಿಂದ ಅವುಗಳ ಕುರಿತು ಮತ್ತೆ ಚರ್ಚೆ ಇಲ್ಲಿ ಅನವಶ್ಯಕವಾಗುತ್ತದೆ. ಆದರೆ ಅವುಗಳಿಂದಾದ ಹೃಸ್ವಾವಧಿ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಮರೆಯುವಂತಿಲ್ಲ. ಸಂಕ್ಷಿಪ್ತವಾಗಿ ಅವು ಇಂತಿವೆ:
1. ಸಣ್ಣ ಸಣ್ಣ ವ್ಯಾಪಾರಿಗಳಿಗೆ, ಸ್ವೋದ್ಯೋಗಿಗಳಿಗೆ, ಅತಿ ಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ಸಂಭವಿಸಿದ ನಷ್ಟ ಮತ್ತು ಅದರಿಂದಾಗಿ ವ್ಯವಹಾರಗಳ ಮುಳುಗಡೆ.
2. ಉದ್ಯೋಗ ನಷ್ಟ ಮತ್ತು ಹೊಸ ಉದ್ಯೋಗಗಳ ಸೃಷ್ಟಿಗೆ ಹೊಡೆತ
3. ಗ್ರಾಮೀಣ ಪ್ರದೇಶದಿಂದ ಬಂದು ನಗರ ಮತ್ತು ಪಟ್ಟಣಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಸಂಪಾದನೆಯ ದಾರಿಯನ್ನು ಕಳಕೊಂಡು ತಮ್ಮ ತಮ್ಮ ಊರುಗಳಿಗೆ ಮಾಡಿದ ಮರುವಲಸೆಯಿಂದಾಗಿ ಕೃಷಿಕ್ಷೇತ್ರದ ಮೇಲೆ ಒತ್ತಡ.
ಈ ಮೂರೂ ನಿರ್ಧಾರಗಳು ದೇಶಕ್ಕೆ ಮೋದಿ ಸರಕಾರವು ತನ್ನ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ನೀಡಿದ ಬಳುವಳಿಗಳು; ಅವುಗಳ ಪ್ರಭಾವವನ್ನು ದೇಶದ ಅರ್ಥವ್ಯವಸ್ಥೆಯ ನಿಯಂತ್ರಕರಿಗೆ ಇನ್ನೂ ಹತ್ತಿಕ್ಕಲು ಸಾಧ್ಯವಾಗಿಲ್ಲ ಎಂಬುದು ಇಂದಿನ ಕಟು ವಾಸ್ತವ.
ಈ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಂತೆ ಆರ್ಥಿಕ ವ್ಯವಸ್ಥೆಯಲ್ಲಿಯೂ ಸರಕಾರವು ಕೆಲವು ಮೂಲಭೂತ ಬದಲಾವಣೆಗಳನ್ನು ಮಾಡಿತು.
ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಗಳು
1950ರಲ್ಲಿಯೇ ಅಸ್ತಿತ್ವಕ್ಕೆ ಬಂದು ಯಶಸ್ವಿಯಾಗಿ ಕಾರ್ಯವೆಸ ಗಿದ ಯೋಜನಾ ಆಯೋಗವನ್ನು ಮೋದಿ ಸರಕಾರವು 2015ರಲ್ಲಿ ರದ್ದು ಪಡಿಸಿ ಅದರ ಸ್ಥಾನದಲ್ಲಿ ನೀತಿ ಆಯೋಗವನ್ನು ಸ್ಥಾಪಿಸಿತು. ಅದು ಕೇವಲ ಚಿಂತಕರ ಚಾವಡಿ (Think Tank-ಥಿಂಕ್ ಟ್ಯಾಂಕ್) ಅಷ್ಟೆ. ಸರಕಾರವು ಮೂಲಸೌಕರ್ಯಗಳಾದ ಬಂದರು ಮತ್ತು ವಿಮಾನನಿಲ್ದಾಣಗಳ ಮತ್ತು ವಿದ್ಯುಚ್ಛಕ್ತಿಯ ಉತ್ಪಾದನೆಯನ್ನು ಖಾಸಗೀಕರಣಗೊಳಿಸಿತು. ಕಾರ್ಪೊರೇಟ್ (ಕಂಪೆನಿಗಳ) ಆದಾಯ ತೆರಿಗೆಯಲ್ಲಿ ಗಣನೀಯವಾದ ಕಡಿತವನ್ನು ಮಾಡಿತು. ದೊಡ್ಡ ಬ್ಯಾಂಕುಗಳು ಬೇಕೆಂದು ಸರಕಾರಿ ಬ್ಯಾಂಕುಗಳ ವಿಲಯನ ಮಾಡಿತು. ಟೆಲಿಫೋನ್, ‘ಆನ್ ಲೈನ್’ ಹಾಗೂ ಬಿಡಿ ವ್ಯಾಪಾರ ರಂಗಗಳಲ್ಲಿ ಸ್ಪರ್ಧೆಯ ಬದಲಿಗೆ ಕೆಲವೇ ಬಲಶಾಲಿ ಉದ್ಯೋಗಪತಿಗಳು ಮುನ್ನೆಲೆಗೆ ಬರುವಂತೆ ಉತ್ತೇಜಿಸಿತು.
ವಾಣಿಜ್ಯ ಮತ್ತು ದೊಡ್ಡ ಕಂಪೆನಿಗಳ ಒತ್ತಡಗಳಿಗೆ ಮಣಿದು ಕಾರ್ಮಿಕರ ನೇಮಕಾತಿ, ಸೇವಾ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಕೈಗಾರಿಕಾ ಸಂಬಂಧಗಳಿಗೆ (Hiring, Job security, Social security and Industrial Relationsಗೆ) ಅನ್ವಯವಾಗುವ ಕಾಯ್ದೆಗಳನ್ನು ಈಗಾಗಲೇ ಬದಲಾಯಿಸಿದೆ. ಸರಕಾರದ ವಿವಿಧ ವಿಭಾಗಗಳಲ್ಲಿ ಮತ್ತು ಸರಕಾರದ ಅಧೀನ ಸಂಸ್ಥೆಗಳಲ್ಲಿ ಹೊಸ ಉದ್ಯೋಗಗಳನ್ನು ಉಂಟುಮಾಡುವುದರ ಬದಲಾಗಿ ಕಡಿತಗೊಳಿಸಲಾಗುತ್ತಿದೆ; ಖಾಲಿ ಹುದ್ದೆಗಳನ್ನು ಭರ್ತಿಮಾಡುತ್ತಿಲ್ಲ. ಉಚ್ಚ ಸ್ತರಗಳಲ್ಲಿ ತಜ್ಞರು ಬೇಕು ಎಂದು ಹೇಳಿ, ಖಾಸಗಿ ರಂಗಗಳಿಂದ ಅಲ್ಪಾವಧಿಗೆ ನೇಮಕಾತಿಯನ್ನು ಸರಕಾರವೇ ಆರಂಭಿಸಿದೆ. ಅನೇಕ ಹುದ್ದೆಗಳಿಗೆ ನೇರ ನೇಮಕಾತಿಯ ಬದಲು, ಗುತ್ತಿಗೆ ಆಧಾರದಲ್ಲಿ ಸೀಮಿತ ಅವಧಿಗೆ ಕಡಿಮೆ ವೇತನದಲ್ಲಿ ನೇಮಕಾತಿಯನ್ನು ಮಾಡಲಾಗುತ್ತಿದೆ.
ಮಾಹಿತಿಯನ್ನು ಮರೆಮಾಚುವ ಪ್ರವೃತ್ತಿ
ಇನ್ನೊಂದು ಬೆಳವಣಿಗೆಯೂ ಗಮನಾರ್ಹ. ಇತ್ತೀಚೆಗಿನ ವರ್ಷಗಳಲ್ಲಿ ಮಾಹಿತಿಯನ್ನು ತಡೆಹಿಡಿಯುವ, ಬದಲಾಯಿಸುವ ಮತ್ತು ಮಾಹಿತಿ ಸಂಗ್ರಹದ ಪ್ರಕ್ರಿಯೆಯನ್ನೇ ಮುಂದೆ ಹಾಕುವ ಪ್ರವೃತ್ತಿಯನ್ನು ಈಗ ಸ್ಪಷ್ಟವಾಗಿ ಕಾಣಬಹುದು. ಈ ಸರಕಾರದ ಹತ್ತು ವರ್ಷಗಳಲ್ಲಿ ಎಷ್ಟು ಮಂದಿ ಬಡತನ ರೇಖೆಯಿಂದ ಹೊರಬಂದಿದ್ದಾರೆ, ಎಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ, ಅವರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಷ್ಟಿದ್ದಾರೆ ಮುಂತಾದ ಪ್ರಶ್ನೆಗಳಿಗೆ ಖಚಿತವಾದ ಮಾಹಿತಿ ಸರಕಾರವು ನೀಡುವುದಿಲ್ಲ. ಕೆಲವೊಮ್ಮೆ ಪ್ರಶ್ನೆಗಳಿಗೆ ದಿಕ್ಕುತಪ್ಪಿಸುವ ಉತ್ತರವನ್ನು ಕೊಡಲಾಗುತ್ತದೆ. ರೂಪಾಯಿಯ ಬೆಲೆ ನಿರಂತರ ಕುಸಿಯುತ್ತಿರುವಾಗ, ಹಣಕಾಸು ಸಚಿವೆ, ಭಾರತದ ರೂಪಾಯಿ ಬೆಲೆ ಸ್ಥಿರವೇ ಇದೆ; ಡಾಲರ್ ಬೆಲೆ ಏರುತ್ತಾ ಇದೆ ಅಥವಾ ನೀರುಳ್ಳಿ-ಬೆಳ್ಳುಳ್ಳಿ ಬೆಲೆ ಏರುತ್ತಿದ್ದಾಗ ತಾನು ಅವುಗಳನ್ನು ತಿನ್ನುವ ಕುಟುಂಬದವಳಲ್ಲ ಎಂಬ ಸಮಜಾಯಿಷಿ ನೀಡಿದ್ದನ್ನು ನೆನಪಿಸಿಕೊಂಡರೆ ಈ ಧೋರಣೆ ಸ್ಪಷ್ಟವಾಗುತ್ತದೆ. ದೇಶದಲ್ಲಿ ಬಡವರ ಸಂಖ್ಯೆ 75 ವರ್ಷಗಳಲ್ಲಿಯೇ ಅತ್ಯಂತ ಕಡಿಮೆಗೆ ಇಳಿದಿದೆ ಎಂದು ಸರಕಾರ ಹೇಳುತ್ತಿದೆ; ಆದರೆ ಇನ್ನೊಂದೆಡೆ 80 ಕೋಟಿ ನಾಗರಿಕರಿಗೆ ಬಡವರಾದುದರಿಂದ ಆಹಾರ ಭದ್ರತೆ ಹಕ್ಕಿನಡಿ ಉಚಿತ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ. ಈಗಾಗಲೇ ವರದಿಯಾದಂತೆ 2021ರಲ್ಲಿ ಆಗಬೇಕಾಗಿದ್ದ ಜನಗಣತಿಯನ್ನು ಸರಕಾರ ಇನ್ನೂ ಕೈಗೊಂಡಿಲ್ಲ.
ಒಟ್ಟು ಪರಿಸ್ಥಿತಿ
ಮೋದಿ ಸರಕಾರದ ಗೊತ್ತುಗುರಿಯಿಲ್ಲದ ಆರ್ಥಿಕ ನೀತಿಯಿಂದಾಗಿ ದೇಶದ ಆರ್ಥಿಕತೆ ತೀವ್ರವಾದ ಅನಿಶ್ಚಿತತೆಗೆ ಈಗ ಒಳಗಾಗಿದೆ. ಇದಕ್ಕೆ ಪೂರಕವಾದ ಅನೇಕ ಮಾನಕಗಳು ವಿಭಿನ್ನ ಅಧ್ಯಯನಗಳ ಮೂಲಕ ಹೊರಬಂದಿವೆ. ಜಿಡಿಪಿಯಲ್ಲಿ ಕುಸಿತ, ಬೆಲೆಗಳ ಏರಿಕೆ, ಸಂಪಾದನೆಯಲ್ಲಿ ಕಡಿತ, ಕೆಳವರ್ಗದ ಪ್ರಜೆಗಳ ಸಾಲದಲ್ಲಿ ಏರಿಕೆ, ದೇಶದ ಆಂತರಿಕ ಉಳಿತಾಯದಲ್ಲಿ ಕಡಿತ ಮತ್ತು ಡಾಲರಿನ ಎದುರು ಕುಸಿಯುತ್ತಲೇ ಇರುವ ರೂಪಾಯಿಯ ಮೌಲ್ಯ-ಮುಂತಾದವುಗಳು ಆರ್ಥಿಕ ಅಭದ್ರತೆಯ ಸಂಕೇತಗಳು.
ಆರ್ಥಿಕತೆಯು ಸ್ಥಿರವಾಗಿದ್ದರೆ ವಿವಿಧ ಮಾನಕಗಳು ಉತ್ತೇಜನ ಕಾರಿಯಾಗಬೇಕಿತ್ತು. ಆದರೆ ದೇಶದಲ್ಲಿ ಆರ್ಥಿಕ ಅಸಮಾನತೆಗಳು ತೀವ್ರವಾಗಿವೆ; ನಿರುದ್ಯೋಗ ಹೆಚ್ಚುತ್ತಿದೆ; ಸರಕಾರವೇ ಒಪ್ಪಿಕೊಂಡಂತೆ 80 ಕೋಟಿ ಜನ ಬಡವರಾಗಿಯೇ ಉಳಿದಿದ್ದಾರೆ.
2014ರಲ್ಲಿ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆಗಳು ಘೋಷಣೆಗಳಿಗೆ ಮಾತ್ರ ಸೀಮಿತವಾಗಿದ್ದವು ಎಂಬುದು ಎಲ್ಲರಿಗೂ ತಿಳಿದ ವಿಚಾರ. 2014ರಿಂದ ಮುಂದಿನ ಹತ್ತು ವರ್ಷಗಳಲ್ಲಿ ಅನೇಕ ಕ್ರಮಗಳನ್ನು ಸರಕಾರವು ಕೈಗೊಂಡಿತು. ಆದರೆ ಅವುಗಳು ಮೇಲೆ ಹೇಳಿದಂತೆ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವಲ್ಲಿ ವಿಫಲವಾಗಿವೆ ಎಂಬುದು ಒಂದು ಕಹಿ ವಾಸ್ತವ. ಈ ವಾಸ್ತವವನ್ನು ಮರೆಮಾಚಲು ಹಿಂದಿನ ಸರಕಾರಗಳನ್ನು ತೆಗಳುವ, ಮಾಹಿತಿಯನ್ನು ಹತ್ತಿಕ್ಕುವ ಮತ್ತು ಇನ್ನಷ್ಟು ಕನಸುಗಳನ್ನು ಬಿತ್ತುವ ನಿಟ್ಟಿನಲ್ಲಿ ಸರಕಾರವು ನಿರಂತರವಾಗಿ ಶ್ರಮಿಸುತ್ತಿದೆ. ತಾವು ಅಧಿಕಾರಕ್ಕೆ ಬಂದಮೇಲೆ ಭಾರತವು ಜಗತ್ತಿನಲ್ಲಿ ಐದನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಹಾಗೂ 2027ರಲ್ಲಿ ಜಗತ್ತಿನ ಮೂರನೆಯ ಸ್ಥಾನಕ್ಕೆ ಏರಲಿದೆ, ಮುಂದೆ 2047ಕ್ಕೆ ಭಾರತವು ವಿಕಸಿತ ಭಾರತವಾಗಲಿದೆ ಎಂಬ ಕನಸನ್ನು ಬಿತ್ತರಿಸುತ್ತಿದೆ. ಆದರೆ ಈ ಧೋರಣೆ ಸರಕಾರದ ಆರ್ಥಿಕ ನೀತಿಯ ಬಗ್ಗೆ ಶಂಕೆಯನ್ನು ಉಂಟುಮಾಡುತ್ತದೆ, ಸರಕಾರದ ವಿಶ್ವಾಸಾರ್ಹತೆಗೆ ಧಕ್ಕೆಯನ್ನು ಉಂಟುಮಾಡುತ್ತದೆ.
ಬದಲಾವಣೆಯ ಅಗತ್ಯ
ಈ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಮುಂಬರುವ ಬಜೆಟಿನಲ್ಲಿ ಕೆಲವು ಪ್ರಮುಖವಾದ ನಿರ್ಧಾರಗಳನ್ನು ಸರಕಾರವು ಕೈಗೊಳ್ಳಬೇಕಾಗುತ್ತದೆ. ಈ ನಿರ್ಧಾರಗಳು ಉದ್ಯೋಗ ಸೃಷ್ಟಿ, ಏರುತ್ತಿರುವ ಬೆಲೆಗಳ ಮೇಲೆ ನಿಯಂತ್ರಣ, ಗ್ರಾಹಕ ವಸ್ತುಗಳ ಮೇಲಿನ ಬೇಡಿಕೆಯ ವೃದ್ಧಿ, ಉಳಿತಾಯಕ್ಕೆ ಉತ್ತೇಜನ, ಸಾಮಾಜಿಕ ಭದ್ರತೆ ಮತ್ತು ವಿಭಿನ್ನ ಜನಕಲ್ಯಾಣ ಯೋಜನೆಗಳಿಗೆ ಸಂಬಂಧಿಸಿವೆ. ಅವುಗಳಲ್ಲಿ ಮುಖ್ಯವಾದವು ಹೀಗಿವೆ:
1. ಒಂದೆರಡು ವರ್ಷಗಳ ಹೃಸ್ವಾವಧಿಯಲ್ಲಿ ಗ್ರಾಹಕ ವಸ್ತುಗಳಿಗೆ ಬೇಡಿಕೆ ಹೆಚ್ಚಿಸಲು ಉತ್ತೇಜನ, ಸರಕಾರಿ ವಿಭಾಗಗಳಲ್ಲಿ ಮತ್ತು ಅದರ ಅಧೀನಸ್ಥ ಸಂಸ್ಥೆಗಳಲ್ಲಿನ ಹುದ್ದೆಗಳಿಗೆ ಕೂಡಲೇ ನೇಮಕಾತಿ, ಕೃಷಿಗೆ ಕನಿಷ್ಠ ಬೆಲೆಯ ಘೋಷಣೆ ಮತ್ತು ಜನ ಕಲ್ಯಾಣ ಯೋಜನೆಗಳ ಅನುಷ್ಠಾನ.
2. ಎರಡರಿಂದ ಐದು ವರ್ಷದ ಮಧ್ಯಮಾವಧಿಯಲ್ಲಿ (ಫಲಿತಾಂಶ ಕಾಣುವಂತಾಗಲು) ಹೊಸ ಉದ್ದಿಮೆಗಳಿಗೆ ಉತ್ತೇಜನ, ತ್ವರಿತಗತಿಯಲ್ಲಿ ಸಹಾಯ ಧನ, ಸಾಲ ಮತ್ತು ಜಿಎಸ್‌ಟಿಯ ಮರುಪಾವತಿ (ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್-ಹೂಡುವಳಿ ತೆರಿಗೆ ಜಮೆ) ಮುಂತಾದ ಕ್ರಮಗಳ ಮೂಲಕ, ಕೃಷಿರಂಗದ ಆಧುನೀಕರಣಕ್ಕೆ ಕ್ರಮಗಳು, ದೇಶದ ಆಂತರಿಕ ಉಳಿತಾಯಕ್ಕೆ ಇನ್ನಷ್ಟು ಉತ್ತೇಜನ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿರಂಗದಲ್ಲಿ ಸರಕಾರದ ಹೂಡಿಕೆಗೇ ಆದ್ಯತೆ. ಇದರ ಜೊತೆಗೇ ದೇಶೀ ಉತ್ಪಾದನೆಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ.
3. ಸಂಪತ್ತಿನ ಅಸಮಾನತೆಯನ್ನು ಕಡಿಮೆಮಾಡಲು ಶ್ರೀಮಂತರ ಮೇಲೆ ವಿಶೇಷ ತೆರಿಗೆ ಮತ್ತು ನಿರುದ್ಯೋಗಿಗಳಿಗೆ ಮಾಸಿಕ ಕನಿಷ್ಠ ಆದಾಯದ ಯೋಜನೆ, ಜನ ಸಾಮಾನ್ಯರ ಆರೋಗ್ಯ ಭದ್ರತೆಗೆ ಸರಕಾರವೇ ಆರಂಭಿಸಿದ ವಿಮಾಯೋಜನೆಗಳ ವಿಸ್ತಾರ ಮತ್ತು ಸುಧಾರಣೆ, ರಾಷ್ಟ್ರೀಯ ಕನಿಷ್ಠ ವೇತನ ನೀತಿಯ ಅನುಷ್ಠಾನ.
4. ಜಿಎಸ್‌ಟಿಯನ್ನು ಮತ್ತಷ್ಟು ಸರಳಗೊಳಿಸುವುದು- ಮುಖ್ಯವಾಗಿ ಜನಸಾಮಾನ್ಯರ ದೈನಂದಿನ ಬಳಕೆಯ ವಸ್ತುಗಳ ಮೇಲೆ, ಆರೋಗ್ಯ ಮತ್ತು ಜೀವರಕ್ಷಕ ಔಷಧಿಗಳ ಮೇಲೆ ಜೀವ ಮತ್ತು ಆರೋಗ್ಯ ವಿಮೆಯ ‘ಪ್ರೀಮಿಯಂ’ ಮೇಲೆ ದರವನ್ನು ಇಳಿಸುವುದು.
5. ಸರಕಾರದ ಅಧೀನದ ಹಣಕಾಸು ಸಂಸ್ಥೆಗಳ ದಕ್ಷತೆಯನ್ನು ಹೆಚ್ಚಿಸುವುದು,ಸಂಸ್ಥೆಗಳಲ್ಲಿ ಉಳಿತಾಯಕ್ಕೆ ಉತ್ತೇಜನೆ ಮತ್ತು ಹೆಚ್ಚಿನ ಭದ್ರತೆ, ಅವುಗಳ ವ್ಯವಹಾರದ ನೀತಿಗಳನ್ನು ಪ್ರಜಾಕೇಂದ್ರಿತವಾಗಿ ಮಾಡುವುದು, ಕೃಷಿ, ಸಣ್ಣ ಉದ್ದಿಮೆ, ವ್ಯಾಪಾರ, ರಫ್ತು ಮುಂತಾದ ಚಟುವಟಿಕೆಗಳಿಗೆ ಸುಲಭವಾಗಿ ಸಾಲ ನೀಡುವಂತೆ ನೀತಿಯನ್ನು ಸುಧಾರಿಸುವುದು; ಖಾಸಗಿ ಹಣಕಾಸು ಸಂಸ್ಥೆಗಳ ಕಾರ್ಯಶೈಲಿಯ ಮೇಲೆ ಇನ್ನೂ ಕಟ್ಟುನಿಟ್ಟಿನ ಮೇಲ್ವಿಚಾರಣೆ.
ಈ ಹತ್ತು ವರ್ಷಗಳಲ್ಲಿ ಸಾಧಿಸಲಾಗದ ಆರ್ಥಿಕ ಸ್ಥಿರತೆಗೆ ಮುಂಬರುವ ಬಜೆಟು ದಾರಿ ತೋರಿಸೀತೇ? ಅಸ್ಥಿರತೆ, ಅಸಮಾನತೆ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಬಡತನಕ್ಕೆ ದೀರ್ಘಾವಧಿಯ ಮಾರ್ಗಗಳನ್ನು ತೋರಿಸಲಿದೆಯೇ? ಕಾದು ನೋಡಬೇಕು.