ಭಾರತೀಯ ಉನ್ನತ ಶಿಕ್ಷಣ: ಶಿಕ್ಷಕರು ಎದುರಿಸುತ್ತಿರುವ ಸವಾಲುಗಳು
ಭಾರತದಲ್ಲಿ ಉನ್ನತ ಶಿಕ್ಷಣಕ್ಕಾಗಿ ವಿಶ್ವವಿದ್ಯಾನಿಲಯ ಗಳು, ಸ್ವಾಯತ್ತ ಕಾಲೇಜುಗಳು, ಡೀಮ್ಡ್-ಟು-ಬೀ ವಿಶ್ವವಿದ್ಯಾನಿಲಯಗಳು ಮತ್ತು ರಾಷ್ಟ್ರೀಯ ಮಹತ್ವದ ಸಂಸ್ಥೆಗಳಿವೆ. ದೇಶಾದ್ಯಂತ 40,000ಕ್ಕೂ ಅಧಿಕ ಕಾಲೇಜುಗಳು ಮತ್ತು 1,000ಕ್ಕೂ ಅಧಿಕ ವಿಶ್ವವಿದ್ಯಾನಿಲಯಗಳಿವೆ. ಇವುಗಳ ಪೈಕಿ ಇಂಡಿಯನ್ ಇನ್‌ಸ್ಟಿಟ್ಯೂಟ್ಸ್ ಆಪ್ ಟೆಕ್ನಾಲಜಿ (ಐಐಟಿಗಳು), ಇಂಡಿಯನ್ ಇನ್ಸ್‌ಟಿಟ್ಯೂಟ್ಸ್ ಆಫ್ ಮ್ಯಾನೇಜ್‌ಮೆಂಟ್ (ಐಐಎಮ್‌ಗಳು), ನ್ಯಾಶನಲ್ ಇನ್ಸ್‌ಟಿಟ್ಯೂಟ್ಸ್ ಆಫ್ ಟೆಕ್ನಾಲಜಿ (ಎನ್‌ಐಟಿಗಳು) ಮುಂತಾದ ರಾಷ್ಟ್ರೀಯ ಸಂಸ್ಥೆಗಳು ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳು ಮತ್ತು ರಾಜ್ಯ ಮತ್ತು ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಸೇರಿವೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಪದವಿಪೂರ್ವ, ಪದವಿ ಮತ್ತು ಡಾಕ್ಟರೇಟ್ ಕೋರ್ಸ್‌ಗಳು ಲಭ್ಯವಿವೆ. ಈ ಸಂಸ್ಥೆಗಳು ಸಾಂಪ್ರದಾಯಿಕ ಮತ್ತು ಆಧುನಿಕ ಪಠ್ಯಕ್ರಮಗಳನ್ನು ಅಳವಡಿಸಿಕೊಂಡಿವೆ. ಕೆಲವು ವಿಶ್ವವಿದ್ಯಾನಿಲಯಗಳು ಅಂತರ್‌ರಾಷ್ಟ್ರೀಯ ಮಾನದಂಡಗಳು ಮತ್ತು ವಿಧಾನಗಳನ್ನು ಅನುಸರಿಸುತ್ತಿವೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಶಿಕ್ಷಕರು ಮುಖ್ಯವಾಗಿ ಉಪನ್ಯಾಸ ನೀಡುವ, ವಿಚಾರಸಂಕಿರಣಗಳನ್ನು ನಡೆಸುವ ಮತ್ತು ವಿದ್ಯಾರ್ಥಿಗಳಿಗೆ ಅವರ ಅಸೈನ್‌ಮೆಂಟ್‌ಗಳಲ್ಲಿ ಸಹಾಯ ಮಾಡುವ ಪಾತ್ರಗಳನ್ನು ವಹಿಸುತ್ತಾರೆ. ಪಠ್ಯಕ್ರಮಗಳು ಮತ್ತು ಕಲಿಕಾ ಸಾಮಗ್ರಿಗಳ ಅಭಿವೃದ್ಧಿಯಲ್ಲೂ ಅವರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಹೆಚ್ಚಿನ ಪ್ರೊಫೆಸರ್‌ಗಳು ಬೋಧನೆಯ ಜೊತೆಗೆ ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಅವರು ತಮ್ಮ ಸಂಶೋಧನಾ ವರದಿಗಳು ಹಾಗೂ ದೇಶಿ ಮತ್ತು ವಿದೇಶಿ ಸಂಸ್ಥೆಗಳೊಂದಿಗಿನ ಭಾಗೀದಾರಿಕೆಗಳ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಇದರ ಜೊತೆಗೆ, ತಮ್ಮ ವಿಭಾಗಗಳ ಮುಖ್ಯಸ್ಥರಾಗುವುದು, ಸಮಿತಿಗಳಲ್ಲಿ ಸೇವೆ ಸಲ್ಲಿಸುವುದು, ಸಾಂಸ್ಥಿಕ ಆಡಳಿತಗಳಲ್ಲಿ ಭಾಗವಹಿಸುವುದು ಮುಂತಾದ ಆಡಳಿತಾತ್ಮಕ ಕರ್ತವ್ಯಗಳನ್ನು ವಹಿಸಿಕೊಳ್ಳುವ ಆಯ್ಕೆಯೂ ಅವರಿಗಿದೆ. ಸಮಿತಿಗಳ ಕೆಲಸ ಮತ್ತು ಸಾಂಸ್ಥಿಕ ಆಡಳಿತದಲ್ಲಿ ಪಾಲ್ಗೊಳ್ಳುವುದರಿಂದ ಅವರ ಕೆಲಸದ ಒತ್ತಡ ಹೆಚ್ಚುವ ಸಾಧ್ಯತೆಯಿದೆ. ಇದರಿಂದಾಗಿ, ಮಹತ್ವದ ಶೈಕ್ಷಣಿಕ ಕೆಲಸಗಳಲ್ಲಿ ಪಾಲ್ಗೊಳ್ಳಲು ಅವರಿಗೆ ಸಿಗುವ ಸಮಯ ಕಡಿಮೆ ಆಗುತ್ತದೆ. ಬೋಧನೆ, ಸಂಶೋಧನೆ, ಆಡಳಿತಾತ್ಮಕ ಕೆಲಸ ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದು ಮುಂತಾದ ಕೆಲಸಗಳಲ್ಲಿ ಶಿಕ್ಷಕರು ತೊಡಗಿಸಿಕೊಳ್ಳಬೇಕಾಗುತ್ತದೆ. ಈ ಜವಾಬ್ದಾರಿಗಳನ್ನು ನಿಭಾಯಿಸುವುದು ಮತ್ತು ಅವುಗಳ ನಡುವೆ ಸಮತೋಲನ ಸಾಧಿಸುವುದು ಸವಾಲಿನ ಕೆಲಸವಾಗಬಹುದು. ಇದು ಅಂತಿಮವಾಗಿ ಒತ್ತಡ ಮತ್ತು ಬಳಲಿಕೆಗೆ ಕಾರಣವಾಗಬಹುದು.
ವಿವಿಧ ಸಂಸ್ಥೆಗಳ ಶಿಕ್ಷಕರ ವೇತನ ಮತ್ತು ಉದ್ಯೋಗ ಭದ್ರತೆ ನಡುವೆ ಬೃಹತ್ ಅಂತರವಿರಬಹುದು. ಅದರಲ್ಲೂ, ಖಾಸಗಿ ಮತ್ತು ಸರಕಾರಿ ಸಂಸ್ಥೆಗಳ ಶಿಕ್ಷಕರ ನಡುವೆ ಈ ಅಂತರ ಅಗಾಧವಾಗಿರುತ್ತದೆ. ಒಂದೇ ಸಂಸ್ಥೆಯಲ್ಲಿದ್ದರೂ ಅವರ ಹಿರಿತನ, ಸ್ಥಾನ ಮತ್ತು ಅನುದಾನಗಳಲ್ಲಿ ವ್ಯತ್ಯಾಸವಿರಬಹುದು. ಹೆಚ್ಚಿನ ಶಿಕ್ಷಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಾರೆ. ವಿಶೇಷವಾಗಿ ಖಾಸಗಿ ಸಂಸ್ಥೆಗಳಲ್ಲಿ, ಅವರಿಗೆ ದೀರ್ಘಾವಧಿ ಉದ್ಯೋಗ ಭದ್ರತೆ ಅಥವಾ ಸವಲತ್ತುಗಳು ಇರುವುದಿಲ್ಲ.
ಶಿಕ್ಷಕರು ಜಾಗತಿಕ ಗುಣಮಟ್ಟವನ್ನು ಹೊಂದಲು ಅವರಿಗೆ ನಿರಂತರ ತರಬೇತಿ, ಸಂಶೋಧನಾ ಪ್ರವೃತ್ತಿಗಳ ಬಗ್ಗೆ ಮಾಹಿತಿ ಮತ್ತು ನೂತನ ಬೋಧನಾ ವಿಧಾನಗಳ ಪರಿಚಯ ಬೇಕಾಗುತ್ತದೆ. ಸಂಸ್ಥೆಗಳ ಮೂಲಸೌಕರ್ಯ ಮತ್ತು ಸಂಪನ್ಮೂಲಗಳ ನಡುವಿನ ವ್ಯತ್ಯಾಸಗಳಿಂದಾಗಿ ಶೈಕ್ಷಣಿಕ ಮಾನದಂಡಗಳು ಮತ್ತು ಉನ್ನತ ಗುಣಮಟ್ಟದ ಶಿಕ್ಷಣವನ್ನು ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಬಹುದು.
ಕೆಲವು ಶೈಕ್ಷಣಿಕ ಸಂಸ್ಥೆಗಳಲ್ಲಿ ವಾಚನಾಲಯದ ಸ್ಥಳ ಕಿರಿದಾಗಿರುತ್ತದೆ, ಹಳೆಯ ಪ್ರಯೋಗಾಲಯಗಳಿರುತ್ತವೆ ಮತ್ತು ಡಿಜಿಟಲ್ ಸಂಪನ್ಮೂಲದ ಲಭ್ಯತೆ ಕಡಿಮೆಯಾಗಿರು ತ್ತದೆ. ಸೀಮಿತ ಅನುದಾನದಿಂದಾಗಿ ಪತ್ರಿಕೆಗಳು, ಪುಸ್ತಕಗಳು ಮತ್ತು ಸಾಂದರ್ಭಿಕ ಕಲಿಕಾ ನೆರವು ಉಪಕರಣಗಳನ್ನು ಪಡೆಯಲು ಶಿಕ್ಷಕರಿಗೆ ಕಷ್ಟವಾಗಬಹುದು.
ಪಠ್ಯಕ್ರಮಗಳ ಗುಣಮಟ್ಟದಲ್ಲಿ ಇರುವ ವ್ಯತ್ಯಾಸ ಗಳಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಹಾಲಿ ಶಿಕ್ಷಣವನ್ನು ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಪಡೆಯಲು ಸಾಧ್ಯವಾಗಲಾರದು. ದೊಡ್ಡ ಗಾತ್ರದ ತರಗತಿಗಳಲ್ಲಿ ಶಿಕ್ಷಕರಿಗೆ ಉತ್ತಮ ಬೋಧನಾ ಅಭ್ಯಾಸಗಳನ್ನು ನಿರ್ವಹಿಸಿಕೊಂಡು ಬರಲು ಮತ್ತು ಪ್ರತಿಯೊಬ್ಬರ ಮೇಲೆ ನಿಗಾ ಇಡಲು ಕಷ್ಟವಾಗಬಹುದು. ವಿದ್ಯಾರ್ಥಿಗಳು ವಿವಿಧ ಮಟ್ಟಗಳ ಪ್ರೇರಣೆ ಮತ್ತು ಶೈಕ್ಷಣಿಕ ಸಿದ್ಧತೆಗಳನ್ನು ಹೊಂದಿರುವಾಗ ಅವರು ತಮ್ಮ ಗಮನವನ್ನು ಒಂದು ವಿಷಯದ ಮೇಲೆ ಕೇಂದ್ರೀಕರಿಸುವಂತೆ ಮಾಡಲು ಶಿಕ್ಷಕರಿಗೆ ಕಷ್ಟವಾಗಬಹುದು.
ಭಾರತೀಯ ಉನ್ನತ ಶಿಕ್ಷಣ ಬೋಧಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಂಸ್ಥಿಕ ಹೊಂದಾಣಿಕೆಗಳು, ಬೆಂಬಲ ವ್ಯವಸ್ಥೆ ಮತ್ತು ಸರಕಾರಿ ಸುಧಾರಣೆಗಳನ್ನು ಒಳಗೊಂಡ ಸಮಗ್ರ ತಂತ್ರಗಾರಿಕೆಯೊಂದರ ಅಗತ್ಯವಿದೆ.
2020ರ ರಾಷ್ಟ್ರೀಯ ಶಿಕ್ಷಣ ನೀತಿಯು ಉನ್ನತ ಶಿಕ್ಷಣ ಸೇರಿದಂತೆ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸುವ ಉದ್ದೇಶವನ್ನು ಹೊಂದಿದೆ. ಅದರ ಪ್ರಮುಖ ಗುರಿಗಳೆಂದರೆ, ಶೈಕ್ಷಣಿಕ ಮಟ್ಟವನ್ನು ಏರಿಸುವುದು, ಸಮಗ್ರ ಕಲಿಕೆಯನ್ನು ಅಭಿವೃದ್ಧಿಪಡಿಸು ವುದು, ನ್ಯಾಯೋಚಿತತೆ ಮತ್ತು ಲಭ್ಯತೆಯನ್ನು ವಿಸ್ತರಿಸುವುದು ಹಾಗೂ ರಚನಾತ್ಮಕ ಬೋಧನೆ ಮತ್ತು ಸಂಶೋಧನೆಗೆ ಬೆಂಬಲ ನೀಡುವುದು. ಶೈಕ್ಷಣಿಕ ಹೊಂದಾಣಿಕೆ ಮತ್ತು ಹೊಸತನವನ್ನು ಹೆಚ್ಚಿಸಲು ಹಾಗೂ ಆಡಳಿತವನ್ನು ಬಲಪಡಿಸಲು ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತೆಯನ್ನು ನೀಡಬೇಕೆಂದು ಹೊಸ ನೀತಿ ಹೇಳುತ್ತದೆ. ಬೋಧನಾ ಮತ್ತು ಕಲಿಕಾ ಪ್ರಕ್ರಿಯೆಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಹಾಗೂ ಆ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವುದು ಮತ್ತು ಅದರ ಲಭ್ಯತೆಯನ್ನು ಹೆಚ್ಚಿಸುವುದು ಕೂಡ ನೂತನ ನೀತಿಯ ಉದ್ದೇಶವಾಗಿದೆ. ಸಂಶೋಧನೆ ಮತ್ತು ಶೈಕ್ಷಣಿಕ ಮಾನದಂಡಗಳನ್ನು ಸುಧಾರಿಸಲು ಹೆಚ್ಚೆಚ್ಚು ಅಂತರ್‌ರಾಷ್ಟ್ರೀಯ ಭಾಗೀದಾರಿಕೆಗಳಿಗಾಗಿ ಭಾರತ ಎದುರು ನೋಡುತ್ತಿದೆ.
ಆದರೆ, ಶೈಕ್ಷಣಿಕ ಸಂಸ್ಥೆಗಳಲ್ಲಿನ ಬೋಧನಾ ಪರಿಸರವನ್ನು ಹೆಚ್ಚಿಸಲು ಹಲವು ಉಪಕ್ರಮಗಳ ಅಗತ್ಯವಿದೆ. ಪರಿಣಾಮಕಾರಿ ಆಡಳಿತಾತ್ಮಕ ವಿಧಾನ ಗಳು ಮತ್ತು ವ್ಯವಸ್ಥೆಗಳನ್ನು ಜಾರಿಗೆ ತರುವ ಮೂಲಕ ಶಿಕ್ಷಕರ ಆಡಳಿತಾತ್ಮಕ ಕೆಲಸದ ಒತ್ತಡವನ್ನು ಕಡಿಮೆಗೊಳಿಸಬಹುದಾಗಿದೆ. ಬೋಧನಾ ಸಹಾಯಕರು ಅಥವಾ ಕಿರಿಯ ಬೋಧನಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಮೂಲಕ ಬೋಧನಾ ಒತ್ತಡವನ್ನು ಕಡಿಮೆಗೊಳಿಸಬಹುದಾಗಿದೆ ಮತ್ತು ದೊಡ್ಡ ಗಾತ್ರದ ತರಗತಿಗಳನ್ನು ನಿಭಾಯಿಸಬಹುದಾಗಿದೆ. ನಿಯಮಿತವಾಗಿ ಬೋಧಕರ ಮೌಲ್ಯಮಾಪನ ಮಾಡಿ ಅವರ ವೇತನಶ್ರೇಣಿಯನ್ನು ಪರಿಷ್ಕರಿಸುವ ಮೂಲಕ ಅವರು ಪಡೆಯುವ ಪ್ರತಿಫಲವನ್ನು ಹೆಚ್ಚಿಸಬಹುದಾಗಿದೆ. ಎಲ್ಲಾ ಸಂಸ್ಥೆಗಳಲ್ಲಿ ಒಂದೇ ರೀತಿಯ ವೇತನಶ್ರೇಣಿಗಳನ್ನು ತರುವ ಮೂಲಕ ಅವರ ವೇತನ ಅಸಮಾನತೆಗಳನ್ನು ನಿಭಾಯಿಸಬಹುದಾಗಿದೆ. ದೀರ್ಘಾವಧಿ ಗುತ್ತಿಗೆಗಳನ್ನು ನೀಡುವ ಮೂಲಕ ಶಿಕ್ಷಕರ ಉದ್ಯೋಗ ಭದ್ರತೆಯನ್ನು ಹೆಚ್ಚಿಸಬಹುದಾಗಿದೆ. ಈ ಮೂಲಕ ಗುತ್ತಿಗೆ ಆಧಾರಿತ ಅಥವಾ ತಾತ್ಕಾಲಿಕ ಪ್ರೊಫೆಸರ್‌ಗಳನ್ನು ಶಿಕ್ಷಣ ಸಂಸ್ಥೆಗಳು ಅವಲಂಬಿಸುವುದನ್ನು ಕಡಿಮೆಗೊಳಿಸಬಹುದಾಗಿದೆ.
ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಿಂದ ಹೆಚ್ಚಿನ ನಿಧಿಗಾಗಿ ಬೇಡಿಕೆ ಸಲ್ಲಿಸುವ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿರುವ ಸೌಕರ್ಯಗಳು ಮತ್ತು ಸಂಪನ್ಮೂಲಗಳನ್ನು ವೃದ್ಧಿಸಬಹುದಾಗಿದೆ. ಸಂಘಟಿತ ವೃತ್ತಿ ಜೀವನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಮತ್ತು ನೇರ ಭಡ್ತಿ ಅವಕಾಶಗಳನ್ನು ನೀಡುವ ಮೂಲಕ ಬೋಧಕರ ವೃತ್ತಿಪರತೆಯಲ್ಲಿ ಅಭಿವೃದ್ಧಿ ಸಾಧಿಸಬಹುದಾಗಿದೆ.