ಪೌರಸೇನಾನಿಗಳಿಗೆ ಸ್ವಾಭಿಮಾನದ ಬದುಕು ಕೊಟ್ಟವರು

ಬದುಕಿಗಾಗಿ, ಗೇಣು ಹೊಟ್ಟೆ, ತುಂಡು ಬಟ್ಟೆಗಾಗಿ ಶ್ರಮಿಕರು, ಶೋಷಿತರು ಮಲ ಹೊರುವಂತಹ ಹೀನ ಕೆಲಸ ಮಾಡಿಕೊಂಡು ಬಂದಿದ್ದರು. ಪೌರಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದೇವರಾಜ ಅರಸು ಅವರು ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಿದರು. ಈಗ ಸಿದ್ದರಾಮಯ್ಯ ಅವರು ಪೌರಕಾರ್ಮಿಕರ ಸೇವೆಯನ್ನು ಖಾಯಂ ಮಾಡುವ ಮೂಲಕ ಮತ್ತೊಂದು ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ.
‘ಪೌರಕಾರ್ಮಿಕರನ್ನು ಖಾಯಂಗೊಳಿಸಿ ಮೇ 1ರ ಕಾರ್ಮಿಕ ದಿನಾಚರಣೆಯ ದಿನ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ. ನಮ್ಮ ಬೀದಿಗಳ ಜೊತೆಗೆ ನಮ್ಮ ಮನಸ್ಸುಗಳನ್ನೂ ಶುದ್ಧಗೊಳಿಸುವ ‘ಪೌರ ಸೇನಾನಿ’ಗಳ ಬಗ್ಗೆ ಕಾಳಜಿ ಇರುವವರು ಮಾತ್ರ ಇಂತಹ ಘೋಷಣೆ ಮಾಡಲು ಸಾಧ್ಯ. ಬಡವರ, ನಿರ್ಲಕ್ಷ್ಯಕ್ಕೆ ಒಳಗಾದವರ, ಶೋಷಿತರ ಧ್ವನಿಯಾಗಿ ನಿಂತಿರುವ ಸಿದ್ದರಾಮಯ್ಯ ಅವರಿಂದ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯ. ಇಡೀ ದೇಶದಲ್ಲಿ ಮೊದಲ ಬಾರಿಗೆ ಪೌರಕಾರ್ಮಿಕರನ್ನು ಸರಕಾರಿ ನೌಕರರನ್ನಾಗಿ ಮಾಡಿ ಅವರಿಗೆ ಘನತೆ, ಗೌರವ ಕಲ್ಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ನಾನು ಮನಸಾರೆ ಅಭಿನಂದಿಸುತ್ತೇನೆ.
‘‘ಸರಕಾರದ ಮುಖ್ಯಕಾರ್ಯದರ್ಶಿಗೂ, ಪೌರಕಾರ್ಮಿಕರಿಗೂ ಯಾವುದೇ ವ್ಯತ್ಯಾಸವಿಲ್ಲ. ಎಲ್ಲಾ ಸೇವೆಗಳೂ ಪವಿತ್ರವೇ. ಪೌರಕಾರ್ಮಿಕರಿಗೂ ವೃತ್ತಿ ಗೌರವ, ಘನತೆ ದೊರೆಯಬೇಕು’’ ಎಂದು ಹೇಳಿರುವ ಸಿದ್ದರಾಮಯ್ಯ ಪೌರಸೇನಾನಿಗಳ ಸೇವೆಯ ಮಹತ್ವವನ್ನು ಸಾರಿದ್ದಾರೆ. ಹಲವು ತಲೆಮಾರುಗಳಿಂದಲೂ ಪೌರಕಾರ್ಮಿಕರು ಘನತೆಯ ಬದುಕಿಗಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಇಷ್ಟು ವರ್ಷಗಳ ಕಾಲ ಕೇಂದ್ರ ಸರಕಾರವೂ ಸೇರಿದಂತೆ ಹಲವು ರಾಜ್ಯಗಳು, ಹಲವು ಪಕ್ಷಗಳು ಕೈಗೊಳ್ಳಲಾಗದ ನಿರ್ಧಾರವನ್ನು ಸಿದ್ದರಾಮಯ್ಯ ಕೈಗೊಂಡಿರುವುದು ಹೆಮ್ಮೆಯ ಸಂಗತಿ.
ಸಿದ್ದರಾಮಯ್ಯ ಅವರ ನಿರ್ಧಾರದ ಹಿಂದೆ ಒಂದು ಬಲವಾದ ಉದ್ದೇಶವಿರಬಹುದು. ಪೌರ ಕಾರ್ಮಿಕರ ಮಕ್ಕಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು. ರಾಜಕಾರಣದಲ್ಲಿ ಅಧಿಕಾರ ಪಡೆಯಬೇಕು ಎಂಬೆಲ್ಲಾ ಮುಂದಾಲೋಚನೆಗಳಿರಬಹುದು. ಆ ನಿಟ್ಟಿನಲ್ಲಿ ಪೌರಕಾರ್ಮಿಕರ ಕುಟುಂಬಗಳನ್ನು ಬಲಗೊಳಿಸುವ ಧ್ಯೇಯದೊಂದಿಗೆ ಅವರಿಗೆ ಮೇ ದಿನದ ಕೊಡುಗೆ ನೀಡುತ್ತಿರಬಹುದು.
ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಅವರು ಮ್ಯಾನುವಲ್ ಸ್ಕ್ಯಾವೆಂಜಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸಿದರು. ಅಂದಿನ ಕಾಲಕ್ಕೆ ಈ ನಿರ್ಧಾರ ಕೂಡ ಐತಿಹಾಸಿಕವಾಗಿತ್ತು. ದೇವರಾಜ ಅರಸು ಅವರಿಗೆ ಬಡವರ ಮೇಲೆ, ಶ್ರಮಿಕರ ಮೇಲೆ ಅಪಾರವಾದ ಕಾಳಜಿ ಇತ್ತು. ಇದೇ ಕಾರಣಕ್ಕೆ ಅವರು ಮ್ಯಾನುವಲ್ ಸ್ಕ್ಯಾವೆಂಜಿಂಗ್ ರದ್ದತಿಗೆ ಕಾರಣಕರ್ತರಾದರು.
ಶ್ರೀಮಂತರು, ಬಲಿತವರು ತಲೆತಲಾಂತರದಿಂದಲೂ ಮಲಹೊರುವ ಅನಿಷ್ಠ ಪದ್ಧತಿಯನ್ನು ಕಾಪಾಡಿಕೊಂಡು ಬಂದಿದ್ದರು. ಬದುಕಿಗಾಗಿ, ಗೇಣು ಹೊಟ್ಟೆ, ತುಂಡು ಬಟ್ಟೆಗಾಗಿ ಶ್ರಮಿಕರು, ಶೋಷಿತರು ಮಲ ಹೊರುವಂತಹ ಹೀನ ಕೆಲಸ ಮಾಡಿಕೊಂಡು ಬಂದಿದ್ದರು. ಪೌರಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ದೇವರಾಜ ಅರಸು ಅವರು ಈ ಅನಿಷ್ಟ ಪದ್ಧತಿಯನ್ನು ನಿಷೇಧಿಸಿದರು. ಈಗ ಸಿದ್ದರಾಮಯ್ಯ ಅವರು ಪೌರಕಾರ್ಮಿಕರ ಸೇವೆಯನ್ನು ಖಾಯಂ ಮಾಡುವ ಮೂಲಕ ಮತ್ತೊಂದು ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ.
ನಾನು ಕಾಲೇಜು ಕಲಿಯುವಾಗ ನಮ್ಮ ಹಾಸ್ಟೆಲ್‌ನ ಸ್ವಾತಂತ್ರ್ಯ ದಿನಾಚರಣೆ (ಆಗಸ್ಟ್ 15, 1985) ಸಂದರ್ಭದಲ್ಲಿ ಪೌರಕಾರ್ಮಿಕರೊಬ್ಬರಿಂದ ಧ್ವಜಾರೋಹಣ ಮಾಡಿಸಿದ್ದು ಈಗಲೂ ನನ್ನ ನೆನಪಿಗೆ ಬರುತ್ತಿದೆ. ಕಳೆದ 35 ವರ್ಷಗಳಿಂದಲೂ ಪೌರಕಾರ್ಮಿಕರ ಪರವಾಗಿ ಮಾತನಾಡುತ್ತಾ, ಅವರ ಕಷ್ಟ ಕೇಳುತ್ತಲೇ ಬಂದಿದ್ದೇನೆ. ಅವರನ್ನು ಪೌರ ಕಾರ್ಮಿಕರು ಎಂದು ಕರೆಯುವ ಬದಲಿಗೆ ‘ಪೌರ ಸೇನಾನಿ’ ಎಂದು ಕರೆಯಬೇಕು ಎಂಬುದು ನನ್ನ ಒತ್ತಾಯವಾಗಿತ್ತು. ತದನಂತರ ಹಲವು ಸಭೆ, ಸಮಾರಂಭಗಳಲ್ಲಿ ಅವರನ್ನು ‘ಪೌರ ಸೇನಾನಿ’ ಎಂದೇ ಸಂಭೋದಿಸುತ್ತಿರುವುದು ನನಗೆ ಖುಷಿಯ ವಿಚಾರ.
ಪ್ರತಿ ವರ್ಷ ನಾನು ಪೌರಕಾರ್ಮಿಕರನ್ನು ನಮ್ಮ ಬಡಾವಣೆಗೆ ಆಹ್ವಾನಿಸಿ ಅವರಿಗೆ ಔತಣಕೂಟ ಆಯೋಜಿಸುತ್ತಾ ಬಂದಿದ್ದೇನೆ. ಬೀದಿಯಲ್ಲಿ ಕೆಲಸ ಮಾಡುವಾಗ ಅವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಅವರಿಗೆ ಚಪ್ಪಲಿ, ಶೂ ಕೊಡಿಸುವ, ಚಳಿಗಾಲದಲ್ಲಿ ಸ್ವೆಟರ್, ಬೆಡ್‌ಶೀಟ್, ಸ್ವಚ್ಛತಾ ಸಾಮಗ್ರಿಗಳನ್ನು ಕೊಡಿಸುವ ಕೆಲಸ ಮಾಡಿದ್ದೇನೆ. ಕೋವಿಡ್ ಕಾಲದಲ್ಲಿ ಸಂಕಷ್ಟದಲ್ಲಿದ್ದ ಪೌರ ಸೇನಾನಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಿದ್ದೇನೆ ಮತ್ತು ಆರೋಗ್ಯ ಶಿಬಿರವನ್ನು ಆಯೋಜಿಸಿದ್ದೇನೆ.
ಪೌರ ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಅವರ ಮಕ್ಕಳಿಗೆ ಕಲಿಕಾ ಉಪಕರಣ ವಿತರಿಸುವ ಕೆಲಸ ಮಾಡಿದ್ದೇನೆ. ಜೊತೆಗೆ ಉನ್ನತ ಶಿಕ್ಷಣ ಮಾಡುತ್ತಿರುವ ಪೌರಕಾರ್ಮಿಕರ ಮತ್ತು ಇತರ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡುತ್ತಾ ಬಂದಿದ್ದೇನೆ. ಪೌರ ಕಾರ್ಮಿಕರ ಬದುಕಿಗೆ ಭದ್ರತೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಮಳವಳ್ಳಿಯ 75 ಪೌರಕಾರ್ಮಿಕರಿಗೆ ಜೀವ ವಿಮಾ ಪಾಲಿಸಿ ಮಾಡಿಸಿ ಹಲವು ವರ್ಷಗಳಿಂದ ಪ್ರೀಮಿಯಂ ತುಂಬುತ್ತಾ ಬಂದಿದ್ದೇನೆ.
ಈಗ ಪೌರ ಕಾರ್ಮಿಕರ ಕೆಲಸ ಖಾಯಂ ಆಗುತ್ತಿರುವುದು ವೈಯಕ್ತಿಕವಾಗಿ ನನಗೆ ಹೆಮ್ಮೆ ತಂದಿದೆ. ಹಲವು ದಶಕಗಳಿಂದ ಖಾಸಗಿ ಹೊರಗುತ್ತಿಗೆಯ ಗುತ್ತಿಗೆದಾರರ ಲಾಬಿಯಿಂದ ಬಸವಳಿದಿದ್ದ ಪೌರ ಸೇನಾನಿಗಳಿಗೆ ಈಗ ನೇರವಾಗಿ ವೇತನ ದೊರೆಯಲಿದೆ. ಗುತ್ತಿಗೆ ಲಾಬಿ ಎಂಬ ಹಂಗು ಇಲ್ಲದೇ ಅವರು ಸ್ವಾಭಿಮಾನದಿಂದ ಬದುಕುವ ದಿನಗಳು ಬಂದಿರುವುದು ಅತೀವ ಸಂತಸದ ಸಂಗತಿ.
ಪೌರ ಸೇನಾನಿಗಳು ರಾಜಕೀಯದಲ್ಲಿ ಸ್ಥಾನ ಪಡೆಯಬೇಕು ಎಂಬುದು ನನ್ನ ಬಲವಾದ ಒತ್ತಾಯವಾಗಿದೆ. ಪೌರ ಸೇನಾನಿಯೊಬ್ಬರು ದೇಶದ ಮೊದಲ ಪ್ರಜೆಯಾಗಬೇಕು ಎಂದು ಒತ್ತಾಯಿಸಿ ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ಅಪಾರ ಪ್ರಚಾರ ಪಡೆದರು. ಆದರೆ ಪೌರ ಸೇನಾನಿಗಳಿಗೆ ತಮ್ಮ 10 ವರ್ಷದ ಅವಧಿಯಲ್ಲಿ ಯಾವುದಾದರೂ ಒಂದು ಕಾರ್ಯಕ್ರಮ ರೂಪಿಸಿದ್ದಾರಾ ಎಂದು ಹುಡುಕಿದರೆ ನಮಗೆ ಸಿಗುವುದು ಶೂನ್ಯ ಮಾತ್ರ. ಪೌರ ಕಾರ್ಮಿಕರ ಸೇವೆಯನ್ನು ಖಾಯಂ ಮಾಡುತ್ತಿರುವ ಕರ್ನಾಟಕದ ನಡೆ ಇಡೀ ದೇಶಕ್ಕೆ ಮಾದರಿಯಾಗಿದೆ. ಈಗಲಾದರೂ ನರೇಂದ್ರ ಮೋದಿ ಅವರು ಪೌರಕಾರ್ಮಿಕರಿಗಾಗಿ ಯೋಜನೆ ರೂಪಿಸಬೇಕಾಗಿದೆ.
ಬುಡುಕಟ್ಟು ಸಮುದಾಯದ ನೆಲ್ಸನ್ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ರಾಷ್ಟ್ರಪತಿಯಾದಂತೆ, ಕರಿಯ ಜನಾಂಗದ ಬರಾಕ್ ಒಬಾಮಾ ಅವರು ಅಮೆರಿಕದ ಅಧ್ಯಕ್ಷರಾದಂತೆ ಪೌರ ಸೇನಾನಿಯೊಬ್ಬರು ಭಾರತ ದೇಶದ ರಾಷ್ಟ್ರಪತಿಯಾಗಬೇಕು ಎಂಬುದು ನನ್ನ ಬಲವಾದ ಒತ್ತಾಯವಾಗಿದೆ. ಅದಷ್ಟೇ ಮಾಡಿದರೆ ಸಾಲದು ಸರಕಾರ ಪೌರಕಾರ್ಮಿಕರಿಗಾಗಿ ಮೀಸಲಾತಿಯನ್ನೂ ರೂಪಿಸಬೇಕು ಮತ್ತು ಅವರ ಮಕ್ಕಳಿಗೆ ಉಚಿತವಾದ ಶಿಕ್ಷಣ ವ್ಯವಸ್ಥೆ ಮಾಡಬೇಕು. ಅವರಿಗಾಗಿ ಕೆಲವು ಲೋಕಸಭಾ, ವಿಧಾನಸಭಾ ಕ್ಷೇತ್ರಗಳನ್ನು ಮೀಸಲಿಡಬೇಕು. ಪೌರ ಸೇನಾನಿಗಳು ರಾಜಕೀಯ ಶಕ್ತಿಯಾಗಿ ಬೆಳೆಯಬೇಕು.