ಜನಸಾಮಾನ್ಯರಿಗೂ ಬೇಕಿದೆ ತುಟ್ಟಿ ಭತ್ತೆ
ಯುಗಾದಿ ಮತ್ತು ದೀಪಾವಳಿ ಹಬ್ಬಗಳು ಬಂದರೆ ರಾಜ್ಯ ಮತ್ತು ಕೇಂದ್ರ ಸರಕಾರಿ ನೌಕರರಿಗೆ ಒಂದಿಷ್ಟು ಸಂಭ್ರಮ ಮತ್ತು ಒಂದಿಷ್ಟು ನಿರಾಳತೆ. ಯಾಕೆಂದರೆ, ಈ ಅವಧಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಹಣದುಬ್ಬರ ಪ್ರಮಾಣವನ್ನು ಆಧರಿಸಿ ತಮ್ಮ ನೌಕರರಿಗೆ ತುಟ್ಟಿ ಭತ್ತೆಯನ್ನು ಬಿಡುಗಡೆ ಮಾಡುತ್ತವೆ. ಅದರಂತೆ ಈ ಬಾರಿ ಕೇಂದ್ರ ಸರಕಾರವು ಶೇ. 3ರಷ್ಟು ಹೆಚ್ಚುವರಿ ತುಟ್ಟಿ ಭತ್ತೆ ಬಿಡುಗಡೆ ಮಾಡಿದೆ. ರಾಜ್ಯ ಸರಕಾರವು ಶೇ. 3.75ರಷ್ಟು ಹೆಚ್ಚುವರಿ ತುಟ್ಟಿ ಭತ್ತೆ ಬಿಡುಗಡೆ ಮಾಡಿದೆ. ಇದು ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರೆಲ್ಲರ ಶಾಸನಾತ್ಮಕ ಹಕ್ಕಾಗಿದೆ.
1940ರಲ್ಲಿ ಎರಡನೇ ವಿಶ್ವ ಯುದ್ಧ ಸಂದರ್ಭದಲ್ಲಿ ಸರಕಾರಿ ನೌಕರರಿಗಾಗಿ ತುಟ್ಟಿ ಭತ್ತೆ ಯೋಜನೆಯನ್ನು ಜಾರಿಗೊಳಿಸಲಾಯಿತು. ಅಗತ್ಯ ವಸ್ತುಗಳ ಬೆಲೆಯೇರಿಕೆ ಹಾಗೂ ಹಣದುಬ್ಬರದಿಂದ ಸರಕಾರಿ ನೌಕರರು ಬಾಧಿತರಾಗಕೂಡದು ಎಂಬ ಸದುದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಇದೀಗ ತುಟ್ಟಿ ಭತ್ತೆ ಎಲ್ಲ ಸಂಘಟಿತ ನೌಕರರ ಶಾಸನಬದ್ಧ ಹಕ್ಕಾಗಿದೆ. ಖಾಸಗಿ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಅವರ ವೇತನದೊಂದಿಗೇ ನಿಶ್ಚಿತ ತುಟ್ಟಿ ಭತ್ತೆ (Fixed DA) ನೀಡಿದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರು ತಿಂಗಳಿಗೊಮ್ಮೆ ಹಣದುಬ್ಬರ ಹಾಗೂ ಬೆಲೆಯೇರಿಕೆ ದರವನ್ನು ಪರಿಗಣಿಸಿ ಹೆಚ್ಚುವರಿ ತುಟ್ಟಿ ಭತ್ತೆಯನ್ನು ತಮ್ಮ ನೌಕರರಿಗೆ ಬಿಡುಗಡೆ ಮಾಡುತ್ತವೆ. ಇದೊಂದು ಜನಪರ ಯೋಜನೆ ಎಂಬುದರಲ್ಲಿ ಅನುಮಾನವೇ ಇಲ್ಲ.
ಆದರೆ, ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸಂಘಟಿತ ನೌಕರರ ವೇತನ ಹಲವು ಪಟ್ಟು ಹೆಚ್ಚಾಗಿದ್ದರೆ, ಅಸಂಘಟಿತ ನೌಕರರು, ರೈತರು, ದಿನಗೂಲಿಗಳು, ಕೃಷಿ ಕಾರ್ಮಿಕರ ವೇತನ ಪ್ರಮಾಣ ಬೆರಳೆಣಿಕೆ ಪ್ರಮಾಣದಲ್ಲಿ ಮಾತ್ರ ಏರಿಕೆ ಆಗಿದೆ. ಅಲ್ಲದೆ ಬೆಲೆಯೇರಿಕೆಯಿಂದ ನಲುಗುತ್ತಿರುವ ವಲಯ ಕೂಡಾ ಇವೇ ಆಗಿವೆ. ಹೀಗಾಗಿಯೇ ಭಾರತದಲ್ಲಿ ಕಡು ಬಡವರ ಸಂಖ್ಯೆ ಈಗಲೂ 20 ಕೋಟಿಯಷ್ಟು ಆಘಾತಕಾರಿ ಪ್ರಮಾಣದಲ್ಲಿದೆ.
ಬೆಲೆಯೇರಿಕೆ ಮತ್ತು ಹಣದುಬ್ಬರದ ಕಾರಣಗಳು
ಜಾಗತೀಕರಣ ಜಾರಿಗೊಂಡ ನಂತರ ಇಡೀ ವಿಶ್ವದಾದ್ಯಂತ ಬೆಲೆಯೇರಿಕೆ ಮತ್ತು ಹಣದುಬ್ಬರಕ್ಕೆ ಜಾಗತಿಕ ವಿದ್ಯಮಾನಗಳು ಕಾರಣವಾಗುತ್ತಿವೆ. ಉದಾಹರಣೆಗೆ: 2014-15 ಅವಧಿಯಲ್ಲಿ ಡಾಲರ್ ಎದುರು ರೂ. 66.33ರಷ್ಟಿದ್ದ ರೂಪಾಯಿ ಮೌಲ್ಯವು, 2024ರ ವೇಳೆಗೆ ರೂ. 84.09ಗೆ ಕುಸಿತ ಕಂಡಿದೆ. ಅರ್ಥಾತ್ ಅಪಮೌಲ್ಯಕ್ಕೀಡಾಗಿದೆ. ಜಾಗತೀಕರಣ ನೀತಿಯು ರಫ್ತು ಮತ್ತು ಆಮದು ಅವಲಂಬನೆಯನ್ನು ಆಧರಿಸಿದ್ದು, ದೇಶದ ಆಮದು ಪ್ರಮಾಣ ಹೆಚ್ಚಿದ್ದು, ರಫ್ತು ಪ್ರಮಾಣ ಕಡಿಮೆಯಿದ್ದರೆ, ಅಂತರ್‌ರಾಷ್ಟ್ರೀಯ ವಿನಿಮಯ ನಗದಾಗಿರುವ ಡಾಲರ್‌ಗೆ ಬೇಡಿಕೆ ಏರಿಕೆಯಾಗುತ್ತದೆ. ಆಗ, ರೂಪಾಯಿ ಮೌಲ್ಯದ ಹೊರ ಹರಿವು ಹೆಚ್ಚಾಗಿ, ವಿದೇಶಿ ವಿನಿಮಯಕ್ಕೆ ಮಾಡುವ ವೆಚ್ಚ ಹೆಚ್ಚುತ್ತದೆ. ಅದರಿಂದ ಬೊಕ್ಕಸದ ಮೇಲೆ ಹೆಚ್ಚು ಹೊರೆ ಬೀಳುತ್ತದೆ.
ಮತ್ತೊಂದು ಕಾರಣವೆಂದರೆ, ಆಡಳಿತಾರೂಢ ಸರಕಾರಗಳು ದುರಾಡಳಿತ ಹಾಗೂ ದುಂದುವೆಚ್ಚದಲ್ಲಿ ಮುಳುಗಿದಾಗಲೂ ಬೊಕ್ಕಸದ ಆದಾಯಕ್ಕೆ ಕನ್ನ ಬೀಳುತ್ತದೆ. ಆಗ ಅನಿವಾರ್ಯವಾಗಿ ಆಳುವ ಸರಕಾರಗಳು ತೆರಿಗೆ ಪ್ರಮಾಣವನ್ನು ಏರಿಕೆ ಮಾಡಿ, ಆ ಕೊರತೆಯನ್ನು ನೀಗಿಸಿಕೊಳ್ಳಲು ಮುಂದಾಗುತ್ತವೆ. ಆ ತೆರಿಗೆಯ ಹೊರೆಯ ಕಾರಣಕ್ಕೂ ಅಗತ್ಯ ವಸ್ತುಗಳು ಅಂಕೆ ಮೀರಿ ದುಬಾರಿಯಾಗುತ್ತವೆ.
ಮೋದಿ ಸರಕಾರದ ದುರಾಡಳಿತ
‘‘ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದೂ ಇಲ್ಲ’’ ಎಂಬ ಜನಪ್ರಿಯ ಘೋಷವಾಕ್ಯದೊಂದಿಗೆ 2014ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ, ತನ್ನ ಆಪ್ತ ಉದ್ಯಮಿಗಳಿಗೆ ತಿನ್ನಲು ಅವಕಾಶ ನೀಡಿದ್ದೇ ಹೆಚ್ಚು. ಅದೂ ಬ್ಯಾಂಕ್ ಸಾಲಗಳ ರೈಟ್ ಆಫ್ ಅಥವಾ ಮನ್ನಾ ಯೋಜನೆಗಳ ಮೂಲಕ. 2014-15ನೇ ಸಾಲಿನಿಂದ ಇಲ್ಲಿಯವರೆಗೆ ಕೇಂದ್ರ ಸರಕಾರವು ಕಾರ್ಪೊರೇಟ್ ಉದ್ಯಮಿಗಳ ಸುಮಾರು ರೂ. 14.56 ಲಕ್ಷ ಸಾಲವನ್ನು ರೈಟ್ ಆಫ್ ಮಾಡಿದೆ. ಇಷ್ಟೂ ಸಾಲವನ್ನು ಕೇಂದ್ರ ಸರಕಾರವು ಸಾರ್ವಜನಿಕರು ಹೂಡಿಕೆ ಮಾಡಿದ ನಿಶ್ಚಿತ ಠೇವಣಿಯ ಮೂಲಕ ಮಂಜೂರು ಮಾಡಿರುತ್ತದೆ. ಇಷ್ಟು ಮೊತ್ತದ ಕಾರ್ಪೊರೇಟ್ ಸಾಲದ ರೈಟ್ ಆಫ್ ಎಂದರೆ, ಸರಕಾರದ ಬೊಕ್ಕಸಕ್ಕೆ ಅಷ್ಟು ಮೊತ್ತದ ಲುಕ್ಸಾನು ಎಂದು ಅರ್ಥ.
ಕಳೆದ ಹತ್ತು ವರ್ಷಗಳಲ್ಲಿ ನಿರಂತರವಾಗಿ ಏರುಗತಿಯಲ್ಲಿರುವ ಬೆಲೆಯೇರಿಕೆಯ ಮೂಲ ಅಡಗಿರುವುದೇ ಈ ಬ್ಯಾಂಕ್ ಸಾಲಗಳ ರೈಟ್ ಆಫ್ ಅಥವಾ ಮನ್ನಾದಲ್ಲಿ. ಕುಬೇರ ಉದ್ಯಮಿಗಳಿಗೆ ಇಷ್ಟು ದೊಡ್ಡ ಮೊತ್ತದ ಸಾಲವನ್ನು ರೈಟ್ ಆಫ್ ಇಲ್ಲವೇ ಮನ್ನಾ ಮಾಡಿರುವ ಕೇಂದ್ರ ಸರಕಾರ, ಅದರಿಂದ ತನ್ನ ಬೊಕ್ಕಸಕ್ಕಾಗಿರುವ ಆದಾಯದ ಕೊರತೆಯನ್ನು ನೀಗಿಸಿಕೊಳ್ಳಲು ದುಬಾರಿ ಜಿಎಸ್‌ಟಿ ಹೇರಿಕೆಯ ಮೊರೆ ಹೋಗಿದೆ. ಅದರಲ್ಲೂ ದಿನನಿತ್ಯ ಬಳಕೆಯ ವಸ್ತುಗಳ ಮೇಲೆ ಅತ್ಯಂತ ಗರಿಷ್ಠ ಜಿಎಸ್‌ಟಿಯನ್ನು ವಿಧಿಸುತ್ತಿದೆ. ಉದಾಹರಣೆಗೆ: ಅಗತ್ಯ ವಸ್ತುವೇನಲ್ಲದ ಚಿನ್ನದ ಮೇಲೆ ಶೇ. 3ರಷ್ಟು ಜಿಎಸ್‌ಟಿ ವಿಧಿಸಲಾಗಿದ್ದರೆ, ದಿನನಿತ್ಯದ ಬಳಕೆಯ ವಸ್ತುಗಳಾದ ಸಂಸ್ಕರಿತ ಆಹಾರ ಪದಾರ್ಥಗಳ ಮೇಲೆ ಶೇ. 5, ಶೇ. 12 ಹಾಗೂ ಶೇ. 18ರಷ್ಟು ವಿವಿಧ ಹಂತದ ಜಿಎಸ್‌ಟಿಯನ್ನು ವಿಧಿಸಲಾಗಿದೆ. ಹಾಗೆಯೇ ಕುಬೇರರೇ ಹೆಚ್ಚಾಗಿ ಖರೀದಿಸುವ ವಜ್ರದ ಆಭರಣಗಳ ಮೇಲೆ ಶೇ. 3ರಷ್ಟು ತೆರಿಗೆ ವಿಧಿಸಲಾಗಿದ್ದರೆ, 25 ಕೆಜಿಗಿಂತ ಹೆಚ್ಚಿನ ತೂಕದ ಅಕ್ಕಿಯ ಚೀಲದ ಮೇಲೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.
ಶೇ. 80ಕ್ಕೂ ಹೆಚ್ಚು ಮಧ್ಯಮ ಹಾಗೂ ಬಡ ವರ್ಗಗಳನ್ನು ಹೊಂದಿರುವ ದೇಶದಲ್ಲಿ ಅಗತ್ಯ ವಸ್ತುಗಳನ್ನೇ ಗುರಿಯಾಗಿಸಿಕೊಂಡು ದುಬಾರಿ ದರದ ಜಿಎಸ್‌ಟಿ ವಿಧಿಸುತ್ತಿರುವುದರಿಂದ ಕಳೆದ ಒಂದು ದಶಕದಲ್ಲಿ ಬೆಲೆಯೇರಿಕೆ ಮತ್ತು ಹಣದುಬ್ಬರ ಅಂಕೆ ಮಿರಿ ಏರಿಕೆಯಾಗಿದೆ, ಆಗುತ್ತಿದೆ. ದೇಶದ ಬೊಕ್ಕಸಕ್ಕೆ ಕುಬೇರ ಉದ್ಯಮಿಗಳಿಂದ ನ್ಯಾಯಯುತವಾಗಿ ಹರಿದು ಬರಬೇಕಿದ್ದ ಆದಾಯಕ್ಕೆ ವಿನಾಯಿತಿ ನೀಡಿ, ಅದರಿಂಟಾಗಿರುವ ಕೊರತೆಯನ್ನು ನೀಗಿಸಿಕೊಳ್ಳಲು ಸಾಮಾನ್ಯ ಜನರ ಮೇಲೆ ದುಬಾರಿ ತೆರಿಗೆಯ ಬರೆಯನ್ನು ಎಳೆಯಲಾಗಿದೆ. ಇದನ್ನೇ ದುರಾಡಳಿತ ಎಂದು ಕರೆಯುವುದು. ಯಾವುದೇ ಸಮಾಜವಾದಿ ಚಿಂತನೆಯುಳ್ಳ ದೇಶಗಳಲ್ಲಿ ಈ ಪ್ರಕ್ರಿಯೆ ತಿರುಗಾಮುರುಗಾ ಆಗಿರುತ್ತದೆ ಮತ್ತು ಆಗಿರಲೇಬೇಕು. ಆದರೆ, ಸಂವಿಧಾನದ ಪೀಠಿಕೆಯಲ್ಲೇ ಸಮಾಜವಾದಿ ದೇಶ ಎಂದು ನಮ್ಮ ದೇಶ ಘೋಷಿಸಿಕೊಂಡಿದ್ದರೂ, ಅದಕ್ಕೆ ವಿರುದ್ಧವಾಗಿ ಬಂಡವಾಳಶಾಹಿ ಪರವಾದ ಆಡಳಿತ ಕಳೆದ ಒಂದು ದಶಕದಿಂದ ನಡೆದುಕೊಂಡು ಬರುತ್ತಿದೆ.
ಕೇಂದ್ರ ಸರಕಾರದ ಕುಬೇರ ಬಂಡವಾಳಶಾಹಿಗಳ ಪರವಾದ ಆಡಳಿತಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ ಕುರಿತು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗತೊಡಗಿದೆ. ಬೆಲೆಯೇರಿಕೆ ಹಾಗೂ ಹಣದುಬ್ಬರದಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಮಾಸಿಕ ಸರಾಸರಿ ತಲಾ ರೂ. 5,000 ಪರಿಹಾರ ನೀಡುವ ಮೂಲಕ ಬಡ, ಮಧ್ಯಮ ವರ್ಗದ ಕುಟುಂಬಗಳಿಗೆ ಈ ಗ್ಯಾರಂಟಿ ಯೋಜನೆಗಳು ಆರ್ಥಿಕ ಹಾಗೂ ಸಾಮಾಜಿಕ ಚೈತನ್ಯ ತುಂಬಿವೆ. ಈ ಚೈತನ್ಯದ ನೇರ ಪರಿಣಾಮ ಉಂಟಾಗಿರುವುದು ಕರ್ನಾಟಕದ ಜಿಡಿಪಿ ಬೆಳವಣಿಗೆ ಹಾಗೂ ಜಿಎಸ್‌ಟಿ ಸಂಗ್ರಹದ ಮೇಲೆ. ಇಡೀ ದೇಶದಲ್ಲೇ ರಾಜ್ಯದ ಜಿಡಿಪಿ ಬೆಳವಣಿಗೆ ಅಗ್ರ ಸ್ಥಾನದಲ್ಲಿದ್ದರೆ, ಜಿಎಸ್‌ಟಿ ಸಂಗ್ರಹದಲ್ಲಿ ಎರಡನೆ ಸ್ಥಾನದಲ್ಲಿದೆ. ಸುಸ್ಥಿರ ಸಾಮಾಜಿಕ ಸಬಲೀಕರಣದ ಯಶಸ್ವಿ ಮಾದರಿಯಿದು.
ಬೆಲೆಯೇರಿಕೆ ಮತ್ತು ಹಣದುಬ್ಬರದ ನೇರ ಹೊಡೆತಕ್ಕೆ ಈಡಾಗುವುದು ಬಡ ಮತ್ತು ಮಧ್ಯಮ ವರ್ಗಗಳು. ಬೆಲೆಯೇರಿಕೆ ಮತ್ತು ಹಣದುಬ್ಬರದಿಂದ ಬಡ ಕುಟುಂಬಗಳ ದೈನಂದಿನ ಬದುಕಿಗೆ ತೊಂದರೆಯುಂಟಾದರೆ, ಮಧ್ಯಮ ವರ್ಗದ ಅಷ್ಟೂ ಉಳಿತಾಯ ಕರಗಿ ಹೋಗುತ್ತದೆ. ಅಧ್ಯಯನ ವರದಿಯೊಂದರ ಪ್ರಕಾರ, ಕಳೆದ ಹತ್ತು ವರ್ಷಗಳಲ್ಲಿನ ಬೆಲೆಯೇರಿಕೆ ಹಾಗೂ ಹಣದುಬ್ಬರದಿಂದ ಮಧ್ಯಮ ವರ್ಗದ ಉಳಿತಾಯ ಸಾಮರ್ಥ್ಯ ಆಘಾತಕಾರಿ ಪ್ರಮಾಣದಲ್ಲಿ ಕ್ಷೀಣಿಸಿದೆ. ಇದರಿಂದ ದೇಶದ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಉಂಟಾಗುವುದು ನಿಶ್ಚಿತ.
ಹೀಗಾಗಿ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನಸಾಮಾನ್ಯರಿಗೂ, ಮುಖ್ಯವಾಗಿ ಬಡ ವರ್ಗಗಳಿಗೆ ತುಟ್ಟಿ ಭತ್ತೆಯ ಶಾಸನಾತ್ಮಕ ಹಕ್ಕನ್ನು ಜಾರಿಗೆ ತರಬೇಕಿದೆ. ಈಗಾಗಲೇ, ಶಾಸನಾತ್ಮಕ ರೂಪದಲ್ಲಿ ಅಲ್ಲವಾದರೂ, ಪ್ರಣಾಳಿಕೆ ಭರವಸೆಯನುಸಾರ ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಸರಕಾರಗಳು ಗ್ಯಾರಂಟಿ ರೂಪದಲ್ಲಿ ತಮ್ಮ ಪಾಲಿನ ಬೆಲೆಯೇರಿಕೆ ಮತ್ತು ಹಣದುಬ್ಬರದ ಪರಿಹಾರವನ್ನು ನೀಡುತ್ತಿವೆ. ಆದರೆ, ಇಂತಹ ಗ್ಯಾರಂಟಿ ಯೋಜನೆಗಳಿಗೆ ಶಾಸನಾತ್ಮಕ ಚೌಕಟ್ಟು ಒದಗಿದಾಗ ಮಾತ್ರ ಬಡವರ್ಗ ಬೆಲೆಯೇರಿಕೆ ಹಾಗೂ ಹಣದುಬ್ಬರದ ಹೊರೆಯಿಂದ ನಲುಗುವುದು ತಪ್ಪುತ್ತದೆ.
ಕಳೆದ ಒಂದು ದಶಕದಲ್ಲಿ ಕೇಂದ್ರ ಸರಕಾರವು ರೂ. 14.56 ಲಕ್ಷ ಕೋಟಿಯಷ್ಟು ಉದ್ಯಮಿಗಳ ಸಾಲವನ್ನು ರೈಟ್ ಆಫ್ ಇಲ್ಲವೇ ಮನ್ನಾ ಮಾಡಿದೆ. ಅಂದರೆ, ವರ್ಷಕ್ಕೆ ಸರಾಸರಿ ರೂ. 1.45 ಲಕ್ಷ ಕೋಟಿಯಷ್ಟು ಉದ್ಯಮಿಗಳ ಸಾಲವನ್ನು ರೈಟ್ ಆಫ್ ಮಾಡಿದಂತಾಗಿದೆ. ಇದೇ ವೇಳೆ ಕರ್ನಾಟಕ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಯೋಜನೆಗಳಿಗೆ ವ್ಯಯಿಸುತ್ತಿರುವ ಮೊತ್ತ ಸುಮಾರು ರೂ. 60,000 ಕೋಟಿ ಮಾತ್ರ. ಈ ಗ್ಯಾರಂಟಿ ಯೋಜನೆಯಡಿ ಸುಮಾರು 4 ಕೋಟಿ ಮಂದಿ ಫಲಾನುಭವಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ.
ಸದ್ಯ ಭಾರತದ ಜನಸಂಖ್ಯೆ ಸುಮಾರು 140 ಕೋಟಿಯಷ್ಟಿದ್ದು, ಈ ಪೈಕಿ 20 ಕೋಟಿ ಮಂದಿ ಕಡು ಬಡತನದಲ್ಲಿ ಜೀವಿಸುತ್ತಿದ್ದಾರೆ. ಕನಿಷ್ಠ ಪಕ್ಷ ಈ ಕಡು ಬಡತನದ ಕುಟುಂಬಗಳನ್ನು ಗುರುತಿಸಿ, ಅವರಿಗೆ ಶಾಸನಾತ್ಮಕ ತುಟ್ಟಿ ಭತ್ತೆ ಯೋಜನೆ ಜಾರಿಗೊಳಿಸಿದರೆ ವರ್ಷಕ್ಕೆ ಸುಮಾರು 3 ಲಕ್ಷ ಕೋಟಿಯಷ್ಟು ಮೊತ್ತವನ್ನು ಮೀಸಲಿಡಬೇಕಾಗುತ್ತದೆ. ಆದರೆ, ಇಷ್ಟು ಬೃಹತ್ ಮೊತ್ತ ಕುಬೇರ ಉದ್ಯಮಿಗಳಿಗೆ ಸಾಲ ಮನ್ನಾ ಮಾಡುವ ಮೂಲಕ ಮಾಡಲಾಗಿರುವ ಅನುತ್ಪಾದಕ ವೆಚ್ಚವಾದಂತಾಗುವುದಿಲ್ಲ. ಬದಲಿಗೆ, ಆ ಮೊತ್ತ ಮಾರುಕಟ್ಟೆಗೆ ಮರಳಿ ಹರಿದು ಬರುವುದರಿಂದ, ದೇಶದ ಹಣಕಾಸು ವ್ಯವಸ್ಥೆ ಚೇತರಿಸಿಕೊಂಡು, ಮಾರುಕಟ್ಟೆ ವಹಿವಾಟು ಮತ್ತಷ್ಟು ಚುರುಕು ಪಡೆಯುತ್ತದೆ. ಆ ಮೂಲಕ ದೇಶವು ಸುಸ್ಥಿರ ಅಭಿವೃದ್ಧಿಯತ್ತ ಸಾಗುತ್ತದೆ.
ಸದ್ಯ ಆಡಳಿತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಕುಬೇರ ಉದ್ಯಮಿಗಳ ಹಿತಾಸಕ್ತಿಯೇ ಪ್ರಮುಖವಾಗಿರುವುದು ಕಳೆದ ಒಂದು ದಶಕದ ಆಡಳಿತದಲ್ಲಿ ಸಂಶಯಕ್ಕೆಡೆ ಇಲ್ಲದಂತೆ ಸಾಬೀತಾಗಿದೆ. ಆದರೆ, ಮುಂಬರುವ ದಿನಗಳಲ್ಲಾದರೂ ಸರಕಾರಗಳು ಈ ದಿಕ್ಕಿನತ್ತ ಗಂಭೀರವಾಗಿ ಯೋಚಿಸಿ, ಕಡು ಬಡತನದ ಕುಟುಂಬಗಳಿಗಾದರೂ ವಾರ್ಷಿಕ ತುಟ್ಟಿ ಭತ್ತೆ ಬಿಡುಗಡೆ ಮಾಡುವ ಕ್ರಾಂತಿಕಾರಕ ನಿರ್ಧಾರ ಕೈಗೊಳ್ಳಬೇಕಿದೆ. ಆಗ ಮಾತ್ರ ಸಮಾಜವಾದಿ ದೇಶ ಎಂದು ಸಂವಿಧಾನದ ಪೀಠಿಕೆಯಲ್ಲಿ ಘೋಷಿಸಿಕೊಂಡಿರುವುದಕ್ಕೂ ಸಾರ್ಥಕವಾಗಲಿದೆ.