ಪಕ್ಷದೊಳಗಿನ ಕಲಹ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಮಾನ ದುಃಖಿಗಳು!

PC: X.com
ರಾಜಕಾರಣ ಎನ್ನುವುದು ನಾಯಕರ ನುಡಿಮುತ್ತುಗಳಿಂದ ಅರ್ಥವಾಗುವ ವಿಷಯವಲ್ಲ. ಸರಿಯಾಗಿ ಗ್ರಹಿಸಬೇಕಾದರೆ ನಾಯಕರ ನಡೆಗಳ ಕಡೆ ನೋಡಬೇಕು. ಈಗ ರಾಜ್ಯದಲ್ಲಿ ಯಾವ ಚುನಾವಣೆಯೂ ಇಲ್ಲ. ಇಂದು ಅಧ್ಯಕ್ಷರಾದವರು ನಾಳೆ ಸಿಎಂ ಆಗಿಯೇ ಬಿಡುತ್ತಾರೆ ಎಂಬ ಖಾತರಿ ಇಲ್ಲ. ರಾಜಕಾರಣದಲ್ಲಿ ಮೂರು ವರ್ಷಗಳ ಅವಧಿ ಚಿಕ್ಕದಲ್ಲ. ಆದರೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ನೆಮ್ಮದಿಯಾಗಿಲ್ಲ.
ಏಕೆ ಹೀಗಾಗುತ್ತಿದೆ? ಇವನ್ನು ಹೇಗೆ ಗ್ರಹಿಸಬೇಕು? ರಾಜ್ಯದ ನಾಯಕರು ಎಷ್ಟಾದರೂ ಬಡಿದಾಡಿಕೊಳ್ಳಲಿ ಎಂದು ತೆಪ್ಪಗಿರುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರ ಮೌನದ ಮೂಲಕ. ಕಾವೇರಿ ಅತಿಥಿ ಗೃಹದಲ್ಲಿ ಕೂತು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿರುವ ಸಿದ್ದರಾಮಯ್ಯ ಮೂಲಕ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೆಹಲಿ-ಬೆಂಗಳೂರು-ಕೊಯಮತ್ತೂರಿಗೆ ಓಡಾಡಿದ ಡಿಕೆ ಶಿವಕುಮಾರ್ ದಣಿವಿನ ಮೂಲಕ. ಬಿಜೆಪಿಯಲ್ಲಿ ಬಂಡಾಯ ಬಣದ ನಾಯಕ ಯತ್ನಾಳ್ ಅವರನ್ನು 72 ಗಂಟೆಗಳಲ್ಲಿ ಉತ್ತರ ಕೊಡಿ, ಇಲ್ಲವೇ ಪರಿಣಾಮ ಎದುರಿಸಲು ಸಜ್ಜಾಗಿ ಎಂಬ ಬೆದರಿಕೆ ಹಾಕಿ ಕಡೆಗೆ ತಾವೇ ಬಿಲದೊಳಗೆ ಅವಿತು ಕುಳಿತಿರುವ ಬಿಜೆಪಿ ಶಿಸ್ತು ಸಮಿತಿಯ ‘ಜಾಣತನ’ದ ಮೂಲಕ. ಪಕ್ಷ ಸಂಘಟನೆ ಪಾತಾಳಮುಖಿಯಾಗಿದ್ದರೂ ಕರ್ನಾಟಕದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ದೇಶದ ಅತಿ ದೊಡ್ಡ, ಅತಿ ಪ್ರಭಾವಿ ಪಕ್ಷದ ದಿವ್ಯ ನಿರ್ಲಕ್ಷ್ಯದ ಮೂಲಕ. ಜೆಡಿಎಸ್ ವಿಷಯಕ್ಕೆ ಬಂದರೆ ಬಿಜೆಪಿಯಾವರಿಗೇ ನಾಚಿಕೆಯಾಗುವಷ್ಟು ಮೋದಿಯನ್ನು ಹೊಗಳುತ್ತಿರುವ ಎಚ್.ಡಿ. ದೇವೇಗೌಡರ ಮೂಲಕ. ಕಾನೂನಿನ ಕುಣಿಕೆಗಳಿಂದ ಕಂಗೆಟ್ಟಿರುವ ಎಚ್.ಡಿ. ಕುಮಾರಸ್ವಾಮಿ ಮೂಲಕ.
ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು
ಕಾಂಗ್ರೆಸ್-ಬಿಜೆಪಿ ಹೈಕಮಾಂಡ್ ಮೌನ ನಡೆಗಳಲ್ಲಿ ಸಾಮ್ಯತೆ ಇದೆ. ರಾಜ್ಯ ನಾಯಕರ ತರಾತುರಿ ಹೈಕಮಾಂಡ್ ನಾಯಕರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಎರಡೂ ಪಕ್ಷದಲ್ಲಿ ಎಷ್ಟೇ ಅರ್ಹತೆ-ಯೋಗ್ಯತೆಗಳಿದ್ದರೂ ಯಾವುದೇ ಬಣವೊಂದಕ್ಕೆ ಪೂರಕವಾದ ತೀರ್ಮಾನ ತೆಗೆದುಕೊಂಡರೆ ಮತ್ತೊಂದು ಬಣ ಮುನಿಯುತ್ತದೆ. ಮಾತನಾಡುವವರನ್ನು ಮಣಿಸಬಹುದು-
ಮನವೊಲಿಸಬಹದು. ಆದರೆ ಜೊತೆಯಲ್ಲಿದ್ದೂ ಮುನಿಸಿಕೊಂಡಿರುವವರನ್ನು ಅರಗಿಸಿಕೊಳ್ಳುವುದು ಕಷ್ಟ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಜನನಾಯಕ, ಡಿಕೆ ಶಿವಕುಮಾರ್ ಸಂಘಟಕ. ನಡುವೆ ಹೈಕಮಾಂಡ್ ಅಸಹಾಯಕ.
ಬಿಗಡಾಯಿಸುತ್ತಿರುವ ಬಿಜೆಪಿ ಪರಿಸ್ಥಿತಿ
ಸದ್ಯದ ರಾಜ್ಯ ರಾಜಕಾರಣಕ್ಕೂ ತಲೆಬುಡವಿಲ್ಲದ ಟಿವಿ ಧಾರಾವಾಹಿಗಳಿಗೂ ಏನೇನೂ ವ್ಯತ್ಯಾಸವಿಲ್ಲ. ಧಾರಾವಾಹಿಗಳಲ್ಲಿ ಕತೆ ಎನಿಸಿಕೊಳ್ಳುವ ಸರಕು ಎರಡು-ಮೂರು ಟ್ರಾಕ್ಗಳಲ್ಲಿ ಚಲಿಸುವಂತೆ ರಾಜ್ಯ ರಾಜಕಾರಣವೂ ಪಥ ಬದಲಿಸುತ್ತಿರುತ್ತದೆ. ಒಮ್ಮೊಮ್ಮೆ ಬಿಜೆಪಿ ಬೆಳವಣಿಗೆಗಳು, ಒಮ್ಮೊಮ್ಮೆ ಕಾಂಗ್ರೆಸ್ ಬೆಳವಣಿಗೆಗಳು ರೋಚಕ ಎನಿಸುತ್ತವೆ. ನಡುವೆ ಜೆಡಿಎಸ್ ಪಾಡು ಅಯ್ಯೋ ಪಾಪ ಎನಿಸುತ್ತದೆ.
ಕಾಂಗ್ರೆಸ್ ಕಿತ್ತಾಟ ಹೆಚ್ಚಾಗಿದ್ದರಿಂದ ಪೆಚ್ಚಾಗಿದ್ದ ಬಿಜೆಪಿಯವರು ಮತ್ತೆ ಬೀದಿಗಿಳಿಯುವ ಸುಳಿವು ನೀಡುತ್ತಿದ್ದಾರೆ. ಬಿಜೆಪಿಯಲ್ಲಿ ವಿಜಯೇಂದ್ರಗೆ ಅವಕಾಶ ಕೊಟ್ಟಿದ್ದೇ ಯಡಿಯೂರಪ್ಪರ ಕಾರಣಕ್ಕೆ. ಮತ್ತೆ ಮುಂದುವರಿಸಿದರೆ ಅದೂ ಯಡಿಯೂರಪ್ಪ ಕಾರಣಕ್ಕೆ. ಆದರೆ ಬಿಜೆಪಿ ಮನೆಯಲ್ಲಿ ಬೆಂಕಿ ಬಿದ್ದಿರುವುದು ಮಾತ್ರ ವಿಜಯೇಂದ್ರ ಕಾರಣಕ್ಕೆ. ಕಾಲ ಮೀರಿದ ಬಳಿಕ ವಿಜಯೇಂದ್ರ ಬಣದವರು ಬಂಡಾಯ ಪಾಳಯವನ್ನು ಒಡೆದು ಆಳಲು ಪ್ರಯತ್ನಿಸುತ್ತಿದ್ದಾರೆ. ಬಂಡುಕೋರ ಗುಂಪಿನವರು ಪರ್ಯಾಯ ಲಿಂಗಾಯತ ನಾಯಕನನ್ನು ಸೃಷ್ಟಿಸುವ ತಯಾರಿಯಲ್ಲಿ ತೊಡಗಿದ್ದಾರೆ. ದಿನಕಳೆದಂತೆ ಹೊಸ ಹೊಸ ಮುಖಗಳ ರಂಗಪ್ರವೇಶವಾಗುತ್ತಿದೆ. ಪರಿಣಾಮ ಪರಿಸ್ಥಿತಿ ಮೊದಲಿಗಿಂತ ಬಿಗಡಾಯಿಸುತ್ತಿದೆ. ಬಿಗಡಾಯಿಸಲೆಂದೇ ಬಯಸುವವರು ಕೆಲವರು. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ, ಆ ಮೂರನೆಯವರು ನಾವೇ ಆಗುವೆವು ಎಂದು ನಗುತ್ತಿರುವವರು ಕೆಲವರು.
ಅಪ್ಪನ ಮಾತು ಕೇಳದ ವಿಜಯೇಂದ್ರ!
ರಾಜ್ಯ ಬಿಜೆಪಿಯಲ್ಲಿ ಮುಕ್ಕಾಲು ಪಾಲು ಜನ ‘ವಿಜಯೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋದರೆ ಯಾವ ಸಮಸ್ಯೆಯೂ ಇರಲ್ಲ’ ಎನ್ನುತ್ತಾರೆ. ಇದೇ ಹಿನ್ನೆಲೆಯಲ್ಲಿ ಹಿರಿಯ ನಾಯಕರೊಬ್ಬರು ‘ನೀವಾದರೂ ವಿಜಯೇಂದ್ರಗೆ ಬುದ್ಧಿವಾದ ಹೇಳಿ’ ಎಂದು ಯಡಿಯಪ್ಪನವರಿಗೆ ತಿಳಿಸಿದರಂತೆ. ಅದಕ್ಕೆ ಯಡಿಯೂರಪ್ಪ ‘ಅವನೆಲ್ಲಿ ನನ್ನ ಮಾತು ಕೇಳುತ್ತಾನೆ? ಎಂದಷ್ಟೇ ಹೇಳಿ ಟಿವಿ ನೋಡುತ್ತಾ ಕುಳಿತುಬಿಟ್ಟರಂತೆ. ಇನ್ನೊಂದು ಬೆಳವಣಿಗೆಯಲ್ಲಿ ಭಿನ್ನನಾಯಕರ ಬಣದಲ್ಲಿ ಗುರುತಿಸಿಕೊಂಡಿರುವ ನಾಯಕರೊಬ್ಬರ ಜೊತೆ ಮಾತನಾಡಿದರೆ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಎನ್ನುವ ಹಿನ್ನೆಲೆಯಲ್ಲಿ ಉಭಯ ನಾಯಕರು ಭೇಟಿಯಾಗುವ ಏರ್ಪಾಡು ಮಾಡಲಾಗಿತ್ತಂತೆ. ಅವರು ನಿಮ್ಮ ಮನೆಗೆ ಬರುವುದು ಬೇಡ, ನೀವು ಅವರ ಮನೆಗೂ ಹೋಗುವುದು ಬೇಡ ಎಂದು ಮಧ್ಯವರ್ತಿಯ ಮನೆಯೊಂದರಲ್ಲಿ ಭೇಟಿಗೆ ಸ್ಥಳ ಮತ್ತು ಸಮಯ ನಿಗದಿ ಮಾಡಲಾಗಿತ್ತಂತೆ. ಬರುತ್ತೇನೆ ಎಂದು ಹೇಳಿದ್ದ ವಿಜಯೇಂದ್ರ ಕೈಕೊಟ್ಟರಂತೆ.
ಸೋಮಣ್ಣ-ನಿರಾಣಿ ರೇಸಿನಲ್ಲಿ
ವಿಜಯೇಂದ್ರಗೆ ಅಧ್ಯಕ್ಷ ಪಟ್ಟ ತಪ್ಪಿಸುವುದು ಕಷ್ಟ ಎನ್ನುವುದು ಗೊತ್ತಾಗುತ್ತಿದ್ದಂತೆ ಯಡಿಯೂರಪ್ಪರಿಗೆ ಪರ್ಯಾಯವಾಗಿ ಲಿಂಗಾಯತ ನಾಯಕನನ್ನು ಸೃಷ್ಟಿಸಬೇಕು ಎನ್ನುವ ಯೋಜನೆ ರೂಪುಗೊಂಡಿದೆ. ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ, ಬಸವನಗೌಡ ಪಾಟೀಲ್ ಯತ್ನಾಳ್ ಎಂಬಿತ್ಯಾದಿ ವಿಷಯಗಳು ಚರ್ಚೆಯಾಗಿವೆ. ಆ ಪೈಕಿ ಬಸವಾಜ ಬೊಮ್ಮಾಯಿ ಯಾವಾಗ ಯಾವ ಬಣಕ್ಕೆ ಜಿಗಿಯುತ್ತಾರೆ ಎನ್ನುವ ಖಾತರಿ ಇಲ್ಲ. ಸದಾ ದ್ವೇಷ ಕಾರುವ ಬಸವನಗೌಡ ಪಾಟೀಲ್ ಯತ್ನಾಳ್ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಕಷ್ಟ. ವಿ. ಸೋಮಣ್ಣ ಮತ್ತು ಮುರುಗೇಶ್ ನಿರಾಣಿ ಇಬ್ಬರಲ್ಲಿ ಒಬ್ಬರನ್ನು ಮುಂದಿನ ನಾಯಕ ಎಂದು ಬಿಂಬಿಸಬೇಕು ಎಂಬ ರೂಪುರೇಷೆ ನಿರ್ಧಾರವಾಗಿದೆಯಂತೆ.
ಹೇಳಿಕೊಳ್ಳಲು ಸಚಿವ ಸ್ಥಾನ ಆದರೆ ಕಾಸು-ಕೆಲಸ ಎರಡೂ ಇಲ್ಲದಿರುವ ಕಾರಣಕ್ಕೆ ಸೋಮಣ್ಣ ರಾಜ್ಯಾಧ್ಯಕ್ಷನಾಗಲು ನಾನು ಸಿದ್ಧ ಎಂಬ ಸಂದೇಶ ರವಾನಿಸಿದ್ದಾರಂತೆ. ಮುರುಗೇಶ್ ನಿರಾಣಿ ಸಂಪನ್ಮೂಲ ಹರಿಸಲು ಸಿದ್ಧ ಎಂದು ಹೇಳಿದ್ದಾರಂತೆ. ಅಧಿಕೃತವಾಗಿ ರಾಜ್ಯಾಧ್ಯಕ್ಷರ ಆಯ್ಕೆಯಾದ ಬಳಿಕ ‘ಪರ್ಯಾಯ ಲಿಂಗಾಯತ’ ಅಭಿಯಾನ ಶುರುವಾಗಬಹುದು ಎನ್ನುತ್ತಾರೆ ಬಿಜೆಪಿ ನಾಯಕರು.
ಜೆಡಿಎಸ್ ಸ್ಥಿತಿ ಚಿಂತಾಜನಕ
ಮಗನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಬೇಕೆಂಬ ಕುಮಾರಸ್ವಾಮಿ ಕನಸು, ಹಿರಿಯ ನಾಯಕ ಜಿಟಿ ದೇವೇಗೌಡರ ಮುನಿಸು, ಶಾಸಕರು ಪಕ್ಷ ಬಿಟ್ಟು ಹೋದರೆ ಎಂಬ ಭಯ, ಕುಮಾರಸ್ವಾಮಿ ವಿರುದ್ಧ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಕಾನೂನು ಹೋರಾಟ ತಂದೊಡ್ಡಬಹುದಾದ ಅಪಾಯಗಳು ಜೆಡಿಎಸ್ ಅನ್ನು ಬಿಡದೇ ಕಾಡುತ್ತಿವೆ. ಕಾಂಗ್ರೆಸ್-ಬಿಜೆಪಿ ಹೀಗೆ ಕಚ್ಚಾಡುತ್ತಿರಲಿ, ಸದ್ಯಕ್ಕೆ ಯಾರು ನಮ್ಮ ಕಡೆ ನೋಡದಿದ್ದರೆ ಅಷ್ಟೇ ಸಾಕು ಎನ್ನುವ ಪರಿಸ್ಥಿತಿಗೆ ದೂಡಲ್ಪಟ್ಟಿದೆ. ಒಟ್ಟಿನಲ್ಲಿ ಸದ್ಯಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸಮಾನ ದುಃಖಿಗಳು.
ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿದ್ದೇಕೆ?
ಡಿಕೆಶಿ ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಹೋಗಿದ್ದು ಭಾರೀ ಚರ್ಚೆಯಾಗುತ್ತಿದೆ. ಜಗ್ಗಿ ವಾಸುದೇವ್ ಮೂಲಕ ಅಮಿತ್ ಶಾ ಭೇಟಿಯಾಗಿದ್ದಾರೆ. ಆ ಮೂಲಕ ಒಂದೇ ಏಟಿಗೆ ಡಿಕೆಶಿ ಮೂರೂ ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ಏಕಕಾಲಕ್ಕೆ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿಗೆ ಸಂದೇಶ ಕಳುಹಿಸಿದ್ದಾರೆ. ಬಿಜೆಪಿ ಸೇರಿಯೇ ಬಿಡುತ್ತಾರೆ ಎಂಬಿತ್ಯಾದಿ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾತನಾಡಿದ ಬಿಜೆಪಿ ನಾಯಕರೊಬ್ಬರು ‘ಜಗ್ಗಿ ವಾಸುದೇವ್ ಪ್ರಭಾವ ನಡೆಯುವುದಿದ್ದರೆ ಇಷ್ಟೊತ್ತಿಗೆ ಡಾ. ಕೆ. ಸುಧಾಕರ್ ಕೇಂದ್ರದಲ್ಲಿ ಮಂತ್ರಿಯಾಗಿರಬೇಕಾಗಿತ್ತು ಅಲ್ಲವೇ? ಎಂದರು.