ಗೆಲ್ಲಲೇ ಬೇಕೆಂಬ ಹಠದಲ್ಲಿ ಕಾಂಗ್ರೆಸ್
ಸರಣಿ- 32
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವುಗಳಲ್ಲಿ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಚಾಮರಾಜ ಮತ್ತು ನರಸಿಂಹರಾಜ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಹುಣಸೂರು ಮತ್ತು ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಹಾಗೂ ಕೃಷ್ಣರಾಜದಲ್ಲಿ ಬಿಜೆಪಿ ಶಾಸಕರಿದ್ಧಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಈಗಿನ ಒಟ್ಟು ಮತದಾರರ ಸಂಖ್ಯೆ : 20,72,337 ಅವರಲ್ಲಿ ಪುರುಷರು: 10,17,120, ಮಹಿಳೆಯರು: 10,55,035
► ಜಾತಿವಾರು ಅಂದಾಜು ಲೆಕ್ಕಾಚಾರ:
► ಒಕ್ಕಲಿಗ: 4.30ಲಕ್ಷ
► ದಲಿತ: 4 ಲಕ್ಷ
► ಮುಸ್ಲಿಮ್: 3 ಲಕ್ಷ
► ಲಿಂಗಾಯತ: 2.50 ಲಕ್ಷ
► ಕುರುಬ: 1.60 ಲಕ್ಷ
► ನಾಯಕ: 1.30 ಲಕ್ಷ
► ಓಬಿಸಿ: 3.80 ಲಕ್ಷ
► ಬ್ರಾಹ್ಮಣ: 1 ಲಕ್ಷ
► ಇತರ: 40 ಸಾವಿರ
► ಕ್ಷೇತ್ರದ ಒಂದು ನೋಟ
ರಾಜ್ಯದ ಇತಿಹಾಸದಲ್ಲಿ ಮೈಸೂರು ಲೋಕಸಭಾ ಕ್ಷೇತ್ರ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ.
ಮೈಸೂರು ಲೋಕಸಭಾ ಕ್ಷೇತ್ರದಿಂದ 1952 ರಲ್ಲಿ ಮೊತ್ತ ಮೊದಲ ಬಾರಿಗೆ ಕಿಸಾನ್ ಮಜ್ದೂರ್ ಪಾರ್ಟಿಯಿಂದ ಎಂ.ಎಸ್.ಗುರುಪಾದಸ್ವಾಮಿ ಆಯ್ಕೆಯಾಗುವ ಮೂಲಕ ಲೋಕಸಭೆಯಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.
ಆರಂಭದಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಚಾಮರಾಜನಗರ ಮೈಸೂರು ಜಿಲ್ಲೆಗೆ ಸೇರಿತ್ತು. 1952ರಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಎಂ.ಎಸ್. ಗುರುಪಾದಸ್ವಾಮಿ ಹಾಗೂ ಕಾಂಗ್ರೆಸ್‌ನಿಂದ ಎನ್.ರಾಚಯ್ಯ ಆಯ್ಕೆಯಾಗಿದ್ದರು. 1957ರಲ್ಲಿ ನಡೆದ ದ್ವಿತೀಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಶಂಕರಯ್ಯ ಹಾಗೂ ಎಸ್.ಎಂ.ಸಿದ್ದಯ್ಯ ಗೆದ್ದರು.
ಆನಂತರ 1996ರ ಚುನಾವಣೆವರೆಗೂ ಕಾಂಗ್ರೆಸ್ ನದ್ದೇ ಹಿಡಿತವಿತ್ತು. 1957 ಮತ್ತು 1962ರಲ್ಲಿ ಎಂ.ಶಂಕರಯ್ಯ, 1967 ಮತ್ತು 1971ರಲ್ಲಿ ತುಳಸೀದಾಸ್ ದಾಸಪ್ಪ, 1977ರಲ್ಲಿ ಎಸ್.ಎಂ.ಸಿದ್ಧಯ್ಯ, 1980ರಲ್ಲಿ ಎಂ.ರಾಜಶೇಖರ ಮೂರ್ತಿ, 1984 ಮತ್ತು 1996ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಈ ನಡುವೆ 1991ರಲ್ಲಿ ಚಂದ್ರಪ್ರಭಾ ಅರಸ್ ಗೆದ್ದಿದ್ದರು.
1998ರಲ್ಲಿ ಸಿ.ಎಚ್.ವಿಜಯಶಂಕರ್ ಗೆಲುವಿನೊಂದಿಗೆ ಬಿಜೆಪಿ ಇಲ್ಲಿ ತನ್ನ ನೆಲೆ ಸಾಧಿಸಿತು. 2004ರಲ್ಲೂ ಬಿಜೆಪಿಯ ವಿಜಯ್ ಶಂಕರ್ ಗೆದ್ದರು.
2009ರಲ್ಲಿ ಕಾಂಗ್ರೆಸ್ ನಿಂದ ಎಚ್.ವಿಶ್ವನಾಥ್ ಗೆದ್ದಿದ್ದರು.
ಆನಂತರ 2014 ಮತ್ತು 2019ರಲ್ಲಿ ಬಿಜೆಪಿಯಿಂದ ಪ್ರತಾಪ ಸಿಂಹ ಗೆದ್ದರು.
ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು ನಗರದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರಗಳು ಒಳಗೊಂಡು, ಗ್ರಾಮಾಂತರ ಭಾಗದ ಹುಣಸೂರು, ಪಿರಿಯಾಪಟ್ಟಣ, ಕೆ.ಆರ್.ನಗರ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳು ಸೇರಿದ್ದವು.
2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ನಂತರ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವಿರಾಜಪೇಟೆ ಎರಡು ಕ್ಷೇತ್ರಗಳನ್ನು ಸೇರ್ಪಡೆಗೊಳಿಸಿ ಕೆ.ಆರ್.ನಗರವನ್ನು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸೇರಿಸಲಾಗಿದೆ.
► ಬಿಜೆಪಿ ವಿರುದ್ಧದ ಅಲೆ
ಕಳೆದೆರಡು ಚುನಾವಣೆಗಳಲ್ಲಿ ಗೆದ್ದ ಪ್ರತಾಪ ಸಿಂಹ ಪರಿಚಯ ಮೈಸೂರು ಭಾಗದ ಜನರಿಗೆ ಅಷ್ಟಾಗಿ ಇರಲಿಲ್ಲ.
ಬಿಜೆಪಿ, ಮೋದಿ ಅಲೆ, ಒಕ್ಕಲಿಗ ಕೋಟಾ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರಿನ ಮೇಲೆ ಮೊದಲ ಚುನಾವಣೆಯಲ್ಲಿ ಪ್ರತಾಪ ಸಿಂಹ ಗೆಲುವು ಸಾಧಿಸಿದ್ದರು.
ಎರಡನೇ ಬಾರಿಯೂ ಬಿಜೆಪಿ, ಮೋದಿ, ಯಡಿಯೂರಪ್ಪ ಜೊತೆಗೆ ಜಾತಿ ಲೆಕ್ಕಾಚಾರಗಳು ಅವರ ಗೆಲುವಿಗೆ ಕಾರಣವಾದವು.
ಮೊದಲ ಬಾರಿ ಸಂಸದರಾಗಿ ಆಯ್ಕೆಯಾದಾಗ ಸಾಮಾನ್ಯವಾಗಿ ಕೇಂದ್ರ ಸರಕಾರದಿಂದ ನೀಡುತ್ತಿದ್ದ ಅನುದಾನಗಳ ಬಳಕೆಯನ್ನಷ್ಟೇ ಮಾಡಿದರೇ ವಿನಃ ಅಂತಹದ್ದೇನೂ ಹೇಳಿಕೊಳ್ಳುವಷ್ಟು ಕೆಲಸ ಮಾಡಲಿಲ್ಲ.
ಬರೀ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಜನರ ಗಮನ ಸೆಳೆದರು. ಇದೆಲ್ಲವೂ ಬಿಜೆಪಿ ವಿರುದ್ಧದ ಅಲೆಗೆ ಕಾರಣವಾಗಿದೆ. ಪಕ್ಷದ ಸಂಸದನ ಬಗ್ಗೆ ಬಿಜೆಪಿಯಲ್ಲಿಯೇ ಅಸಮಾಧಾನದ ಹೊಗೆ ಎದ್ದಿತು ಎಂಬುದೂ ನಿಜ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಭಾಗದ ಬಹುತೇಕ ಜನರು ತಂಬಾಕು ಬೆಳೆಯನ್ನೇ ಆಶ್ರಯಿಸಿದ್ದಾರೆ. ಈ ಭಾಗದಲ್ಲಿ ತಂಬಾಕು ಮಾರಾಟ ಕೇಂದ್ರವೂ ಇದೆ. ಆದರೆ ತಂಬಾಕು ಬೆಳೆಗೆ ಸೂಕ್ತ ಬೆಲೆ ಕೊಡಿಸುವಲ್ಲಿ ಸಂಸದರು ವಿಫಲರಾಗಿದ್ದಾರೆ ಎಂಬ ದೂರುಗಳಿವೆ.
ಕೊಡಗಿನಲ್ಲಿ ಕಾಫಿ ಬೆಳೆಗಾರರು ಹೆಚ್ಚಿದ್ದು, ಕಾಫಿ ಬೆಳೆಗೆ ಸೂಕ್ತ ಬೆಲೆ ಒದಗಿಸಲು ಕೇಂದ್ರ ಸರಕಾರದ ಗಮನ ಸೆಳೆಯುವಲ್ಲಿ ಸಂಸದ ಪ್ರತಾಪ ಸಿಂಹ ವಿಫಲರಾಗಿದ್ದಾರೆ.
ಮೈಸೂರು ವಿಮಾನ ನಿಲ್ದಾಣದ ರನ್ ವೇ ಹೆಚ್ಚಳ ಕುರಿತು ಕಳೆದ 9 ವರ್ಷಗಳಿಂದಲೂ ಪ್ರತಾಪ ಸಿಂಹ ಪ್ರಯತ್ನದಲ್ಲೇ ಇದ್ದಾರೆಯೇ ಹೊರತು ರನ್ ವೇ ಹೆಚ್ಚಳ ಗೊಳಿಸಿ ಹೆಚ್ಚಿನ ವಿಮಾನಗಳನ್ನು ಮೈಸೂರಿಗೆ ತರುವುದು ಆಗಲಿಲ್ಲ. ರನ್ ವೇ ಹೆಚ್ಚಳ ಸಂಬಂಧ ರೈತರ ಭೂಮಿ ವಶಕ್ಕೆ ಪಡೆಯುವಲ್ಲಿ ರೈತ ಸಂಘಟನೆಗಳ ವಿರೋಧ ಕಟ್ಟಿಕೊಂಡಿದ್ದಾರೆ. ಭೂಮಿಯನ್ನು ಯಾವುದೇ ಕಾರಣಕ್ಕೂ ಕೊಡುವುದಿಲ್ಲ ಎಂದು ರೈತರು ಹಠಕ್ಕೆ ಬಿದ್ದಿದ್ದಾರೆ. ವಿಮಾನದಿಂದ ರೈತರು, ಬಡವರಿಗೆ ಅನುಕೂಲವಿಲ್ಲ. ನಾವು ಭೂಮಿಯನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಅವರೆಲ್ಲರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ತರುವಲ್ಲಿ ಸಂಸದ ವಿಫಲರಾಗಿದ್ದಾರೆ.
ಮೊದಲ ಬಾರಿಗೆ ಸಂಸದರಾದ ಸಂದರ್ಭದಲ್ಲಿ ಮೈಸೂರು-ಮಡಿಕೇರಿಗೆ ಹೊಸ ರೈಲು ಮಾರ್ಗ ತರುತ್ತೇನೆ ಎಂಬ ಅವರ ಭರವಸೆ ಬರಿ ಭರವಸೆಯಾಗಿಯೇ ಉಳಿದಿದೆ.
► ಸ್ಪಪಕ್ಷದವರ ವಿರೋಧ
ಸಂಸದ ಪ್ರತಾಪ ಸಿಂಹ ಅಭಿವೃದ್ಧಿ ಮೂಲಕ ಹೆಚ್ಚು ಸುದ್ದಿಯಾಗುವ ಬದಲು ಸ್ವಪಕ್ಷದವರ ವಿರೋಧ ಮತ್ತು ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗಿದ್ದಾರೆ.
ಸಂಸದರಾದ ಮೊದಲ ದಿನದಿಂದಲೂ ತನ್ನದೇ ನಡೆಯಬೇಕು ಎಂಬ ಹಠಕ್ಕೆ ಬಿದ್ದಿರುವ ಸಂಸದ ಪ್ರತಾಪ ಸಿಂಹ ಸ್ವಪಕ್ಷದ ಹಿರಿಯ ನಾಯಕರು ಮಾಜಿ ಶಾಸಕರುಗಳಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ವಿರೋಧ ಕಟ್ಟಿಕೊಂಡಿದ್ದರು.
ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಲಿಲ್ಲ ಎಂಬ ಆರೋಪವೂ ಅವರ ಮೇಲಿತ್ತು.
ಕಡೆಗೆ ಸಂಸತ್ತಿನಲ್ಲಿ ಹೊಗೆ ಬಾಂಬ್ ಸಿಡಿಸಿದವರು ಪ್ರತಾಪ್ ಸಿಂಹ ಪಾಸ್ ಮೇಲೆಯೇ ಸಂಸತ್ ಪ್ರವೇಶಿಸಿದ್ದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಗೆ ತೀವ್ರ ಮುಜುಗರ ತಂದಿತ್ತು.
ಅಂತೂ ಈ ಬಾರಿ ಅವರಿಗೆ ಟಿಕೆಟ್ ಕೈತಪ್ಪಿತು.
ಈ ಬಾರಿ ಬಿಜೆಪಿಯಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್‌ನಿಂದ ಕೆಪಿಸಿಸಿ ವಕ್ತಾರ, ಒಕ್ಕಲಿಗ ನಾಯಕ
ಎಂ. ಲಕ್ಷ್ಮಣ್ ಕಣಕ್ಕಿಳಿದಿದ್ದಾರೆ.
► ಜಾತಿ ಲೆಕ್ಕಾಚಾರ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತಗಳೇ ಅಧಿಕವಾಗಿದ್ದು, ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ.
ದಲಿತ, ಹಿಂದುಳಿದ ಮತ್ತು ಇತರ ವರ್ಗಗಳ ಮತಗಳನ್ನು ಯಾರು ಹೆಚ್ಚು ಪಡೆಯುತ್ತಾರೋ ಅವರ ಗೆಲುವು ನಿಶ್ಚಿತ. ಲಿಂಗಾಯತ ಮತಗಳು ಮತ್ತು ಒಕ್ಕಲಿಗ ಮತಗಳು ನಿರ್ದಿಷ್ಟ ಪಕ್ಷಕ್ಕೆ ಬಂದರೆ ಆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವ ಸಾಧ್ಯತೆ ಇರುತ್ತದೆ.
ಅತೀ ಹೆಚ್ಚು ಮತದಾರರ ಒಲವು ಸದ್ಯದ ಮಟ್ಟಿಗೆ ಕಾಂಗ್ರೆಸ್ ಕಡೆ ಇದ್ದು, ಅಭಿವೃದ್ಧಿ ವಿಚಾರಕ್ಕಿಂತ ಜಾತಿ ಮತ್ತು ಹಣಬಲ ಈ ಚುನಾವಣೆಯಲ್ಲಿ ಹೆಚ್ಚು ಕೆಲಸ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
► ಅಭಿವೃದ್ಧಿ ವಿಚಾರವೇ ಕಾಂಗ್ರೆಸ್ ಮಂತ್ರ
ಕಾಂಗ್ರೆಸ್ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ದೂರದೃಷ್ಟಿ ಯೋಜನೆಗಳೇ ಪ್ರಚಾರದ ಸಮಯದಲ್ಲಿ ತಮಗೆ ಮುಖ್ಯವಾಗಲಿವೆ ಎಂಬುದು ಕಾಂಗ್ರೆಸ್ ನಾಯಕರ ನಿಲುವು.
ಮೈಸೂರಿನ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ ಕಾಂಗ್ರೆಸ್‌ನ ಕೆಲವು ಕೇಂದ್ರೀಕೃತ ಆದ್ಯತೆಗಳಾಗಿದ್ದು, ಅವುಗಳ ಬಗ್ಗೆ ಜನರಿಗೆ ಪ್ರಚಾರದ ವೇಳೆ ಮನವರಿಕೆ ಮಾಡಿಕೊಡಲಾಗುವುದು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ.
ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದನ್ನು ಕಾಂಗ್ರೆಸ್ ಗೆದ್ದುಕೊಂಡಿದ್ದು, ಅಂದಿನಿಂದ ಇಂದಿನವರೆಗೂ ಮತದಾರರ ಒಲವು ಕಾಂಗ್ರೆಸ್ ಕಡೆಗಿದೆ ಎಂಬುದು ನಾಯಕರ ವಿಶ್ವಾಸ.
ಬಿಜೆಪಿ ಒಕ್ಕಲಿಗರನ್ನು ಬದಿಗೊತ್ತಿದೆ ಮತ್ತು ಸಮುದಾಯದ ಸದಸ್ಯರು ಮತ್ತು ನಾಯಕರಲ್ಲಿ ಬಿರುಕು ತರಲು ಹೊರಟಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು, ಒಕ್ಕಲಿಗರಿಗೆ ಕಾಂಗ್ರೆಸ್ ತಕ್ಕ ಪ್ರಾಧಾನ್ಯತೆ ನೀಡಿದೆ ಎನ್ನುವುದನ್ನು ಎತ್ತಿಹೇಳುತ್ತಿದ್ದಾರೆ.
ಬಿಜೆಪಿಯ ದ್ವೇಷ ರಾಜಕಾರಣ ಮತ್ತು ಕೋಮುವಾದದ ವಿರುದ್ಧ ಕಾಂಗ್ರೆಸ್ ಸೌಹಾರ್ದವನ್ನು ಪ್ರತಿಪಾದಿಸಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
►ಗೆಲ್ಲಲೇಬೇಕೆಂಬ ರಣತಂತ್ರದಲ್ಲಿ ಕಾಂಗ್ರೆಸ್
ಈಗಾಗಲೇ ಕ್ಷೇತ್ರದ ಸಚಿವರು ಮತ್ತು ಪ್ರಮುಖ ನಾಯಕರ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ, ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಮತ್ತು ಇದಕ್ಕಾಗಿ ಪ್ರತಿಯೊಬ್ಬರೂ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ನಾಲ್ಕು ದಶಕದ ಬಳಿಕ ಮೈಸೂರಿನಲ್ಲಿ ಒಕ್ಕಲಿಗ ಅಭ್ಯರ್ಥಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಕಷ್ಟ ಅಲ್ಲವೇ ಅಲ್ಲ ಎಂದಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕಾರ್ಡ್‌ಗಳನ್ನು ಮನೆ ಮನೆಗೂ ತಲುಪಿಸಿ ಜನರಿಗೆ ಮನವರಿಕೆ ಮಾಡಿಕೊಡಿ. ರಾಜ್ಯ ಸರಕಾರದಿಂದ ಜಾರಿ ಮಾಡಲಾದ ಕಾರ್ಯಕ್ರಮಗಳ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿ ಎಂದು ಸಿಎಂ ಸಲಹೆ ನೀಡಿರುವುದು ವರದಿಯಾಗಿದೆ.
ಯದುವೀರ್ ಅವರನ್ನು ಟಾರ್ಗೆಟ್ ಮಾಡದಂತೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.
ಬಿಜೆಪಿ ಅಷ್ಟೇ ನಮ್ಮ ಟಾರ್ಗೆಟ್. ಯದುವೀರ್ ವಿರುದ್ಧ ಬೇಕಾಬಿಟ್ಟಿ ಹೇಳಿಕೆಯನ್ನು ಕೊಡಬೇಡಿ. ಎಮೋಷನಲ್ ವಿಚಾರವನ್ನು ತಿರುಗಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ಬಿಜೆಪಿಯವರಿಗೆ ನಿಮ್ಮ ಹೇಳಿಕೆಗಳು ಆಹಾರವಾಗಬಾರದು. ಈ ಕಾರಣದಿಂದ ಯದುವೀರ್ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಎಂದು ಶಾಸಕರು ಮತ್ತು ಮುಖಂಡರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಲೀಡ್ ಬರಲೇಬೇಕು ಎಂದು ಲೋಕಸಭಾ ಚುನಾವಣೆಯಲ್ಲಿ ಶಾಸಕರಿಗೆ ಮತಗಳಿಕೆಯ ಟಾರ್ಗೆಟ್ ಅನ್ನು ಕೂಡ ಸಿಎಂ ನಿಗದಿಪಡಿಸಿದ್ದಾರೆ.
ಇಡೀ ದೇಶದ ಗಮನ ಸೆಳೆದಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾಗಿರುವುದರಿಂದ ಗೆಲುವು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಇನ್ನೊಂದೆಡೆ, ಬಿಜೆಪಿ ಈ ಸಲ ಒಕ್ಕಲಿಗ ಸಮುದಾಯದ ಮತಗಳು ಕೈಕೊಡುವ ಆತಂಕದಲ್ಲಿದೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸುತ್ತಿದ್ದರೂ, ಮೈತ್ರಿ ನಾಯಕರ ಮಧ್ಯೆ ಮಾತ್ರ ಇದ್ದಂತಿದೆ. ಮೈಸೂರು ಭಾಗದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಹೊಂದಾಣಿಕೆ ಇದುವರೆಗೆ ಕಂಡುಬಂದಿಲ್ಲ. ಇದು ಕೂಡ ಬಿಜೆಪಿಗೆ ಹೊಡೆತ ಕೊಡುವ ಸಾಧ್ಯತೆ ಹೆಚ್ಚು.
ರಾಜ್ಯದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಮಟ್ಟದ ಪ್ರಭಾವ ಬೀರುವ ಸಾಧ್ಯತೆಗಳಿವೆ.