ಸಂವಿಧಾನವೆಂಬ ನ್ಯಾಯಸೌಧದ ರಕ್ಷಣೆ
ಕಳೆದ ತಿಂಗಳ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸಲಾಯಿತು. ಸಂವಿಧಾನದ ದಿನವೆಂದರೆ ಸಂವಿಧಾನ ರಚನಾ ಸಭೆಯು ಅಂತಿಮಗೊಳಿಸಿದ ಸಂವಿಧಾನದ ಪ್ರತಿಯನ್ನು ಸರಕಾರಕ್ಕೆ ಹಸ್ತಾಂತರಿಸಿದ ದಿನ. ನಂತರ, ಈ ಸಂವಿಧಾನವನ್ನು ಜನವರಿ 26, 1950ರಂದು ಜಾರಿಗೆ ತರಲಾಯಿತು.ಅಂದಿನಿಂದ, ಜನವರಿ 26ನ್ನು ಗಣರಾಜ್ಯ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ. ಸಂವಿಧಾನದ ದಿನವನ್ನು ಆಚರಿಸಿದ ಬೆನ್ನಲ್ಲೇ, ಸಂವಿಧಾನವನ್ನು ಬದಲಾಯಿಸಬೇಕೆಂಬ ಮತ್ತು ಭಾರತದ ಒಂದು ವರ್ಗದ ಜನರಿಗೆ ಸಾಂವಿಧಾನಿಕ ಹಕ್ಕುಗಳನ್ನು ಮೊಟಕುಗೊಳಿಸಬೇಕೆಂಬ ಮಾತುಗಳು ಬಲವಾಗಿ ಕೇಳಿ ಬಂದಿವೆ. ಇಲ್ಲಿಯವರೆಗೆ ರಾಜಕಾರಣಿಗಳಿಗೆ ಸೀಮಿತವಾಗಿದ್ದ ಸಂವಿಧಾನ ಬದಲಾವಣೆಯ ರಾಜಕೀಯ ಪರಿಭಾಷೆ ಈಗ ಮಠಾಧೀಶರ ಪಡಸಾಲೆಗಳಿಂದ ಕೇಳಿಬರುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ.
ಭಾರತದ ವಿಶೇಷವೆಂದರೆ, ಒಕ್ಕೂಟ ಅಥವಾ ರಾಜ್ಯ ಸರಕಾರಗಳು, ಅಧಿಕಾರ ಸ್ವೀಕರಿಸುವ ಸಮಯದಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಮಾಡುತ್ತಲೇ ಅಧಿಕಾರಕ್ಕೆ ಬಂದ ನಂತರ ಸಾಂವಿಧಾನಿಕ ಮೌಲ್ಯ, ನಂಬಿಕೆ, ಸಂಪ್ರದಾಯ ಮತ್ತು ಆಶಯಗಳನ್ನು ಒಂದಲ್ಲ ಒಂದು ಬಗೆಯಲ್ಲಿ ನಿರಂತರವಾಗಿ ಉಲ್ಲಂಘಿಸುತ್ತಿರುವ ಘಟನೆಗಳು ನಮ್ಮ ಕಣ್ಮುಂದೆ ನಿತ್ಯ ಘಟಿಸುತ್ತಿವೆ. ಮತ್ತೊಂದೆಡೆ, ಸಂವಿಧಾನಕ್ಕೆ ತಲೆಬಾಗಿ ವಂದಿಸುತ್ತಲೇ ಸಾಂವಿಧಾನಿಕ ಸಂಸ್ಥೆಗಳನ್ನು ನಿರ್ಜೀವಗೊಳಿಸುವ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಕೆಲಸ ವ್ಯವಸ್ಥಿತವಾಗಿ ಮತ್ತು ಉದ್ದೇಶಪೂರ್ವಕವಾಗಿ ನಡೆಯುತ್ತಿದೆ.
ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದೇ ಕರೆಯಲ್ಪಡುವ 1857ರ ಸಿಪಾಯಿ ದಂಗೆಯೊಂದಿಗೆ ಪ್ರಾರಂಭವಾದ ಸ್ವಾತಂತ್ರ್ಯ ಚಳವಳಿಯು, ಆಗಸ್ಟ್ 15, 1947ರಂದು ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ಸ್ವತಂತ್ರಗೊಳಿಸುವುದರೊಂದಿಗೆ ಕೊನೆಗೊಂಡಿತು. ಸುಮಾರು ಒಂದು ಶತಮಾನದ ಈ ಸುದೀರ್ಘ ಹೋರಾಟದಲ್ಲಿ ಹಲವು ನಾಯಕರು ಪ್ರಮುಖ ಪಾತ್ರವನ್ನು ವಹಿಸಿದರು. ಅಸಂಖ್ಯಾತ ಹೋರಾಟಗಾರರು ಮತ್ತು ದೇಶ ಪ್ರೇಮಿಗಳು ಹುತಾತ್ಮರಾದರು. ಈ ದೇಶಪ್ರೇಮಿಗಳ ತ್ಯಾಗ ಬಲಿದಾನದ ಮೂಲಕ ನಾವು ಸ್ವಾತಂತ್ರ್ಯವನ್ನು ಗಳಿಸಿದ್ದೇವೆ.
ಈ ತ್ಯಾಗ ಬಲಿದಾನಗಳ ಉದ್ದೇಶ ಸ್ವತಂತ್ರ ಭಾರತವನ್ನು ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಬಲಿಷ್ಠಗೊಳಿಸುವ ಮೂಲಕ ಸ್ವಾತಂತ್ರ್ಯ ಚಳವಳಿಯ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯವನ್ನು ಈಡೇರಿಸುವುದಾಗಿತ್ತು. ಈ ಉದ್ದೇಶದ ಸಾಧನೆಗಾಗಿ ಸ್ವಾತಂತ್ರ್ಯದ ಬೆನ್ನಲ್ಲೇ ಸಂವಿಧಾನ ರಚನೆಗಾಗಿ ಸಂವಿಧಾನ ಸಭೆಯನ್ನು ರಚಿಸಲಾಯಿತು. ಸಂವಿಧಾನ ರಚನಾ ಸಭೆಯ ಸುಮಾರು 299 ಸದಸ್ಯರು ಒಟ್ಟಾಗಿ 2 ವರ್ಷ, 11 ತಿಂಗಳು ಮತ್ತು 18 ದಿನಗಳ ಸತತ ಪರಿಶ್ರಮದಿಂದ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕಾಗಿ ಅತಿದೊಡ್ಡ ಲಿಖಿತ ಸಂವಿಧಾನವನ್ನು ಸಿದ್ಧಪಡಿಸಿದರು. ನಿಜ ಹೇಳಬೇಕೆಂದರೆ, ನಮ್ಮ ಸಂವಿಧಾನ ಸ್ವಾತಂತ್ರ್ಯ ಚಳವಳಿಯ ತ್ಯಾಗ ಬಲಿದಾನಗಳ ಒಂದು ದೊಡ್ಡ ಉತ್ಪನ್ನ.
ಸಂವಿಧಾನದ ಪೀಠಿಕೆಯು ಭಾರತ ಹೇಗಿರಬೇಕು, ಎತ್ತಕಡೆ ಸಾಗಬೇಕು ಹಾಗು ಬಂಧುತ್ವದ ಮೂಲಕ ವ್ಯಕ್ತಿಯ ಘನತೆ ಮತ್ತು ದೇಶದ ಏಕತೆಯನ್ನು ಎತ್ತಿ ಹಿಡಿಯಲು ಯಾವ ಬಗೆಯ ಮೌಲ್ಯಗಳನ್ನು ಮೈದಾಳಬೇಕು ಎಂಬ ಬಗ್ಗೆ ಮೂಲ ತಳಹದಿಯಾಗಿದೆ. 1976ರ 42ನೇ ತಿದ್ದುಪಡಿ ‘ಸಮಾಜವಾದ’, ‘ಜಾತ್ಯತೀತ’ ಮತ್ತು ‘ಸಮಗ್ರತೆ’ ಎಂಬ ಪದಗಳನ್ನು ಸೇರಿಸುವ ಮೂಲಕ ಅದನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ಸಂವಿಧಾನ ಪೀಠಿಕೆ ದೇಶವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಪ್ರಭುತ್ವ ಗಣರಾಜ್ಯವನ್ನಾಗಿ ರೂಪಿಸುವ ಅಧಿಕಾರವನ್ನು ಭಾರತದ ಜನತೆಗೆ ನೀಡಿದೆ. ಈ ಅಧಿಕಾರದ ಉದ್ದೇಶ ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಘನತೆ, ಏಕತೆ, ಸಮಗ್ರತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಸಾಕಾರಗೊಳಿಸುವುದಾಗಿದೆ.
ಐತಿಹಾಸಿಕ ಸ್ವಾತಂತ್ರ್ಯ ಚಳವಳಿಯ ತ್ಯಾಗ ಬಲಿದಾನಗಳ ಮೂಲಕ ಪಡೆದ ಸ್ವಾತಂತ್ರ್ಯ ಮತ್ತು ಹೊಸ ಭಾರತವನ್ನು ನಿರ್ಮಿಸಲು ಉನ್ನತ ಸಾಂವಿಧಾನಿಕ ಮೌಲ್ಯಗಳ ಮೂಲಕ ಹಾಕಿದ್ದ ಅಡಿಪಾಯ ವರ್ಷಗಳು ಕಳೆದಂತೆ ಅಲುಗಾಡುತ್ತಿದೆ. ಅಂತಹ ಮಹೋನ್ನತ ಮೌಲ್ಯಗಳನ್ನು ತನ್ನ ಸಂವಿಧಾನದ ಪ್ರಸ್ತಾವನೆಯನ್ನಾಗಿ ಅಂಗೀಕರಿಸದ ದೇಶವೇ ಇದು ಎಂಬ ಅನುಮಾನ ಜನತೆಯನ್ನು ಕಾಡತೊಡಗಿದೆ. ಉದಾತ್ತ ಮೌಲ್ಯಗಳಾದ ಜಾತ್ಯತೀತತೆ ಮತ್ತು ಸಮಾಜವಾದ ಎಂಬ ತಾತ್ವಿಕ ಚೌಕಟ್ಟು ತನ್ನ ಮೂಲ ಆಶಯವನ್ನು ಕಳೆದುಕೊಂಡ ಸವಕಲು ಪದಗಳಾಗಿವೆ. ಜಾತಿ, ಧರ್ಮ, ಲಿಂಗ ಭೇದವಿಲ್ಲದ ತಾರತಮ್ಯರಹಿತ ಸಮಾನತೆಯ ಸಮ ಸಮಾಜವನ್ನು ರೂಪಿಸಿಕೊಳ್ಳಬೇಕಿದ್ದ ಭಾರತ ಇಂದು ಜಾತಿ-ಧರ್ಮದ ಹೆಸರಿನಲ್ಲಿ ಶಾಂತಿ ಸಾಮರಸ್ಯವನ್ನು ಹಾಳುಗೆಡವಿ ಕೋಮು ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ. ಅಸಮಾನತೆ, ಅಸ್ಪಶ್ಯತೆ, ಹಸಿವು, ಅನಕ್ಷರತೆ, ಬಡತನ ಮತ್ತು ಬಾಲ್ಯ ವಿವಾಹದಂತಹ ಸಾಮಾಜಿಕ ಅನಿಷ್ಟಗಳು ಇಂದಿಗೂ ಜೀವಂತವಾಗಿವೆ. ಜೊತೆಗೆ ಕಾಪ್‌ಪಂಚಾಯಿತಿ, ನೈತಿಕ ಪೊಲೀಸ್ ಮತ್ತು ಲಿಂಚಿಂಗ್ ಅವ್ಯಾಹತವಾಗಿ ನಡೆಯುತ್ತಿವೆ. ಮತ್ತೊಂದೆಡೆ, ಶಿಕ್ಷಣ ಮತ್ತು ಆರೋಗ್ಯ ಮಾರಾಟದ ಸರಕಾಗಿವೆ. ಆರ್ಥಿಕ ಅಸಮಾನತೆ ಜನಸಾಮಾನ್ಯರ ನಡುವೆ ದೊಡ್ಡ ಕಂದರವನ್ನು ಸೃಷ್ಟಿಸಿದೆ. ಮೌಲ್ಯಗಳಾದ ಪ್ರೀತಿ, ಸಾಮರಸ್ಯ, ಬಂಧುತ್ವ, ಶಾಂತಿಯುತ ಸಹಬಾಳ್ವೆ, ಸಹಾನುಭೂತಿ, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ದುರ್ಬೀನು ಹಾಕಿ ಹುಡುಕಬೇಕಿದೆ. ಇನ್ನು ಬಹುತ್ವ, ಬಹು ಸಂಸ್ಕೃತಿ, ಬಹುಭಾಷೆ, ಆಹಾರ ವೈವಿಧ್ಯತೆ ಮತ್ತು ವೈವಿಧ್ಯತೆಯಲ್ಲಿ ಏಕತೆ ಎಂಬ ಭಾರತದ ಅನೇಕತೆಯ ಸಾಂಸ್ಕೃತಿಕ ಅಡಿಪಾಯ ಕಳಚಿ ಒಂದು ದೇಶ, ಒಂದು ಭಾಷೆ, ಒಂದು ಆಹಾರ, ಒಂದು ಚುನಾವಣೆ ಮತ್ತು ಒಂದೇ ಪಕ್ಷ ಎಂಬ ಏಕರೂಪತೆಯ ಸಂಸ್ಕೃತಿ ಮೇಲುಗೈ ಸಾಧಿಸುತ್ತಿದೆ.
ಸಂವಿಧಾನವನ್ನು ಅಂಗೀಕರಿಸಿ ಸಾಗಿಬಂದ 75 ವರ್ಷಗಳ ಈ ಪ್ರಯಾಣದಲ್ಲಿ, ದೇಶದ ಆರ್ಥಿಕ ಬೆಳವಣಿಗೆ ಹಾಗೂ ಸಂಪತ್ತು ಹೆಚ್ಚಿದೆಯಾದರೂ ಅದು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರೀಕೃತವಾಗಿದೆ. ಹೆಚ್ಚು ಆತಂಕ ಹಾಗೂ ಕಳವಳಕಾರಿ ಅಂಶವೆಂದರೆ, ಈಗಾಗಲೇ ಜಾತಿ, ಧರ್ಮ, ಪ್ರದೇಶ ಮತ್ತು ಲಿಂಗಗಳ ಮೂಲಕ ಒಡೆದು ಹೋಗಿರುವ ಭಾರತೀಯ ಸಮಾಜದಲ್ಲಿ ಆರ್ಥಿಕ ಅಸಮಾನತೆಯು ಈ ಕಂದರವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಉದಾಹರಣೆಗೆ, ಭಾರತೀಯ ಜನಸಂಖ್ಯೆಯ ಶೇ. 10ರಷ್ಟು ಜನರು ರಾಷ್ಟ್ರೀಯ ಒಟ್ಟು ಸಂಪತ್ತಿನ ಶೇ. 77ರಷ್ಟನ್ನು ಹೊಂದಿದ್ದಾರೆ. 2017ರಲ್ಲಿ ಭಾರತದಲ್ಲಿ ಉತ್ಪತ್ತಿಯಾದ ಒಟ್ಟು ಸಂಪತ್ತಿನ ಶೇ. 73ರಷ್ಟು ಶೇ. 1ರಷ್ಟಿರುವ ಶ್ರೀಮಂತರ ಕೈಸೇರಿದೆ. ಇದೇ ಸಂದರ್ಭದಲ್ಲಿ 67 ಕೋಟಿ ಬಡಜನರು ತಮ್ಮ ಆರ್ಥಿಕ ಸಂಪತ್ತಿನಲ್ಲಿ ಕೇವಲ ಶೇ. 1ರಷ್ಟು ಹೆಚ್ಚಳವನ್ನು ಮಾತ್ರ ಕಂಡಿದ್ದಾರೆ.
ಭಾರತದಲ್ಲಿ 119 ಬಿಲಿಯನೇರ್‌ಗಳಿದ್ದಾರೆ. ಅವರ ಸಂಖ್ಯೆ 2000ದಲ್ಲಿ ಕೇವಲ 9ರಿಂದ 2017ರಲ್ಲಿ 101ಕ್ಕೆ ಏರಿದೆ. 2018 ಮತ್ತು 2022ರ ನಡುವೆ, ಭಾರತವು ಪ್ರತಿದಿನ 70 ಹೊಸ ಮಿಲಿಯನೇರ್‌ಗಳನ್ನು ಉತ್ಪಾದಿಸುತ್ತಿದೆ ಎಂದು ಅಂದಾಜಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಬಿಲಿಯನೇರ್‌ಗಳ ಸಂಪತ್ತು ಸುಮಾರು 10 ಪಟ್ಟು ಹೆಚ್ಚಾಗಿದೆ. ಅವರ ಒಟ್ಟು ಸಂಪತ್ತು 2018-19ರ ಆರ್ಥಿಕ ವರ್ಷದಲ್ಲಿ ಒಕ್ಕೂಟದ ಆಯವ್ಯಯಕ್ಕಿಂತ ಹೆಚ್ಚು. ಅಂದರೆ 24,42,200 ಕೋಟಿ ರೂ. ಸಾಮಾನ್ಯ ಜನರು ತಮಗೆ ಬೇಕಾದ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಭಾರತದ ಸುಮಾರು 6.3 ಕೋಟಿ ಜನರು ಪ್ರತೀ ವರ್ಷ ಆರೋಗ್ಯ ವೆಚ್ಚಗಳ ಕಾರಣದಿಂದಾಗಿ ಬಡತನಕ್ಕೆ ತಳ್ಳಲ್ಪಡುತ್ತಾರೆ. ಈ ಕಾರಣದಿಂದ ಪ್ರತೀ ಸೆಕೆಂಡಿಗೆ ಎರಡು ಜನರು ಬಡತನದ ಗುಂಪಿಗೆ ಸೇರುತ್ತಾರೆ. ಭಾರತದ ಪ್ರತಿಷ್ಠಿತ ಗಾರ್ಮೆಂಟ್ ಕಂಪೆನಿಯಲ್ಲಿ ಉನ್ನತ ವೇತನ ಪಡೆಯುವ ಕಾರ್ಯನಿರ್ವಾಹಕರೊಬ್ಬರು ಒಂದು ವರ್ಷದಲ್ಲಿ ಗಳಿಸುವ ಮೊತ್ತವನ್ನು ಗ್ರಾಮೀಣ ಭಾರತದಲ್ಲಿನ ಒಬ್ಬ ಕನಿಷ್ಠ ವೇತನ ಪಡೆಯುವ ಕೆಲಸಗಾರ ಗಳಿಸಲು 941 ವರ್ಷಗಳು ಬೇಕಾಗುತ್ತವೆ.
ಒಟ್ಟಾರೆ, ಭಾರತದ ಸಂವಿಧಾನ ಸೌಧವನ್ನು ಕಟ್ಟುವಲ್ಲಿ ಬಳಸಲಾಗಿದ್ದ ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವೆಂಬ ಮೌಲಿಕ ಇಟ್ಟಿಗೆಗಳು ಜಾರಿ ಬೀಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದನ್ನು ತುರ್ತಾಗಿ ರಕ್ಷಿಸಿ ಉಳಿಸಿಕೊಳ್ಳದಿದ್ದರೆ ಭಾರತದ ಐತಿಹಾಸಿಕ ನ್ಯಾಯಸೌಧವೆನಿಸಿರುವ ನಮ್ಮ ಸಂವಿಧಾನ ಕುಸಿದು ಬೀಳುವ ಸಾಧ್ಯತೆಗಳು ದಟ್ಟವಾಗಿವೆ. ಸಂವಿಧಾನದ ಅಭಿಯಾನದ ಮೂಲಕ ಸಂವಿಧಾನವನ್ನು ಗಟ್ಟಿಯಾಗಿ ಅಪ್ಪಿಕೊಂಡಿರುವ ಕರ್ನಾಟಕ ಸರಕಾರ ಸಂವಿಧಾನದ ಜಾರಿ ಕುರಿತಂತೆ ಒಂದು ವಿಶೇಷ ಅಧಿವೇಶನದ ಮೂಲಕ ದೇಶದ ಗಮನ ಸೆಳೆದರೆ, ಸಂವಿಧಾನ ದಿನಾಚರಣೆ ಸಾರ್ಥಕವೆನಿಸುತ್ತದೆ.