ಅಧ್ಯಾಪಕರು ಮತ್ತು ಸಮಾಜದ ಶ್ರೇಯಸ್ಸು

ಗಣ್ಯರೊಬ್ಬರ ನಿಧನದ ಬಳಿಕ ಅವರ ಕುರಿತಾದ ನೆನಪಿನ ಹೊತ್ತಗೆಯು ಅವರ ಸಾಧನೆ ಮತ್ತು ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಿ ಶ್ರದ್ಧಾಂಜಲಿಯನ್ನು ನೀಡುವ ಉದ್ದೇಶವನ್ನು ಹೊಂದಿರುತ್ತದೆ. ಅದು ಕೆಲವೊಮ್ಮೆ ಅವರ ಕಾಲಮಾನದಲ್ಲಿ ಆದ ಸಾಮಾಜಿಕ ಬದಲಾವಣೆಗಳ ದಾಖಲೆಯೂ ಆಗಿರುತ್ತದೆ.
ಈ ಎರಡೂ ದೃಷ್ಟಿಯಿಂದ ತೆಕ್ಕೆಕರೆ ಸುಬ್ರಹ್ಮಣ್ಯ ಭಟ್ಟರು ಸಂಪಾದಿಸಿದ ‘ಏತಡ್ಕ ಮಾಷ್ಟ್ರು (ಏತಡ್ಕ ಮಹಾಲಿಂಗ ಭಟ್)-ಸರಳ, ಶಿಸ್ತಿನ ಶಿಕ್ಷಕ: ನೆನಪಿನ ಹೊತ್ತಗೆ’ ಪುಸ್ತಕವು ಒಂದು ಅಪೂರ್ವ ಬರಹಗಳ ಸಂಗ್ರಹ. ಅವುಗಳ ಕೇಂದ್ರ ವ್ಯಕ್ತಿ 2023ರಲ್ಲಿ ನಿಧನರಾದ ಕಾಸರಗೋಡು ಜಿಲ್ಲೆಯ ಏತಡ್ಕ ಮಹಾಲಿಂಗ ಭಟ್ಟರು.
ಸ್ವಾತಂತ್ರ್ಯಪೂರ್ವದಲ್ಲಿ ಹಳ್ಳಿಯೊಂದರ ಕೂಡುಕುಟುಂಬದಲ್ಲಿ ಜನಿಸಿ, ಜೀವನೋಪಾಯಕ್ಕೆ ಕೈಗೆ ಬಂದ ಬ್ಯಾಂಕು ಉದ್ಯೋಗವನ್ನು ತಿರಸ್ಕರಿಸಿ ಪೆರಡಾಲದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪನವೃತ್ತಿಯನ್ನು ಮಾಡಿ 94 ವರ್ಷಗಳಷ್ಟು ಎಲೆಮರೆಯ ಕಾಯಿಯಂತೆ ಬಾಳಿದ ಓರ್ವ ಸಾಮಾನ್ಯ ಶಿಕ್ಷಕರ ಬಗ್ಗೆ ಅವರ ಕುಟುಂಬದವರು, ಶಿಷ್ಯವರ್ಗದವರು ಮತ್ತು ಅವರ ನಿಕಟಸಂಪರ್ಕವಿದ್ದ ಮಹನೀಯರು ತಮ್ಮ ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದಾರೆ. ಮಹಾಲಿಂಗ ಭಟ್ಟರು ಹೊರಗಿನವರಿಗೆ ಸಾಮಾನ್ಯರಂತೆ ಕಂಡರೂ ಇಲ್ಲಿರುವ ಬರಹಗಳು ಓರ್ವ ಸಮಾಜಶಾಸ್ತ್ರಜ್ಞನ ದೃಷ್ಟಿಯಿಂದ ಮೌಲ್ಯಯುತವಾಗಿವೆ.
ಸಾಮಾಜಿಕ ಪರಿವರ್ತನೆಗಳ ಕಾಲಘಟ್ಟ:
ಮಹಾಲಿಂಗ ಭಟ್ಟರ ಸುದೀರ್ಘವಾದ ಜೀವಿತಾವಧಿಯಲ್ಲಿ ಆದ ಸಾಮಾಜಿಕ ಬದಲಾವಣೆಗಳಲ್ಲಿ ಪ್ರಮುಖವಾದವು ಕೂಡುಕುಟುಂಬಗಳ ಶೈಥಿಲ್ಯ, ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಮತ್ತು ಆ ಮೂಲಕ ಬಾಲ್ಯವಿವಾಹಕ್ಕೆ ತಡೆ, ಸಾಮುದಾಯಿಕ ಪ್ರಯತ್ನದಿಂದ ಶಾಲೆಗಳ ಸ್ಥಾಪನೆ, ಸಮಾನತೆಯ ಬೆಳವಣಿಗೆ ಮತ್ತು ಜಾಗತೀಕರಣದ ಗಾಳಿಯಿಂದ ಆಗುತ್ತಿರುವ ಸ್ಥಿತ್ಯಂತರ. ಇವುಗಳಲ್ಲದೆ, ವೃತ್ತಿಯ ಮೌಲ್ಯಗಳ ಕುರಿತೂ ಪುಸ್ತಕದಲ್ಲಿರುವ ಲೇಖನಗಳು ಬೆಳಕು ಚೆಲ್ಲುತ್ತವೆ.
ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಕೃಷಿಪ್ರಧಾನವಾದ ಭಾರತದಲ್ಲಿ ಕೂಡು ಕುಟುಂಬಗಳ ವ್ಯವಸ್ಥೆ ಸರ್ವೇ ಸಾಮಾನ್ಯವಾಗಿತ್ತು. ಕರ್ನಾಟಕ ಕರಾವಳಿ ಮತ್ತು ಮಲೆನಾಡಿನ ಕೆಲವು ಜಿಲ್ಲೆಗಳಿಗೆ ಅಂದು ಸೀಮಿತವಾಗಿದ್ದ ಹವ್ಯಕ ಬ್ರಾಹ್ಮಣರಲ್ಲಿಯೂ ಇದೇ ವ್ಯವಸ್ಥೆ ವಾಡಿಕೆಯಲ್ಲಿತ್ತು. ಯುವಜನರು ವಿದ್ಯಾರ್ಜನೆಗಾಗಿ ದೂರಹೋಗಿ ಸ್ವತಂತ್ರವಾಗಿ ಬದುಕುವ ದಾರಿಯನ್ನು ಕಂಡುಕೊಳ್ಳುತ್ತಿದ್ದಂತೆ ದೊಡ್ಡ ದೊಡ್ಡ ಕೂಡುಕುಟುಂಬಗಳು ಶಿಥಿಲವಾಗಿ ಸಣ್ಣ ಸಣ್ಣ ಕುಟುಂಬಗಳು ಬೆಳೆದವು.
ಬೇರೆ ಸಮುದಾಯಗಳಂತೆ ಹವ್ಯಕರಲ್ಲಿಯೂ ಹೋದ ಶತಮಾನದಲ್ಲಿ ಹುಡುಗಿಯರಿಗೆ ಪ್ರಬುದ್ಧೆಯಾಗುವ ಮೊದಲೇ ಮದುವೆಯಾಗುತ್ತಿತ್ತು. ಮಹಾಲಿಂಗ ಮಾಷ್ಟ್ರು ಮದುವೆಯಾದಾಗ ಅವರ ವಧು ಲಕ್ಷ್ಮೀ ಇನ್ನೂ ಪ್ರೌಢ ಶಾಲೆಯ ವಿದ್ಯಾರ್ಥಿನಿ. ಕಾಲಕ್ರಮೇಣ, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಆರಂಭಿಸಿದಂತೆ ಆ ಹೆಣ್ಣು ಮಕ್ಕಳು ತಮ್ಮ ಮಕ್ಕಳಿಗೆ ವಿದ್ಯಾರ್ಜನೆಯ ಮಹತ್ವವನ್ನು ತಿಳಿಯ ಹೇಳುವುದರ ಮೂಲಕ, ಕೆಲವೊಮ್ಮೆ ಗಂಡಸರನ್ನು ಒತ್ತಾಯಿಸಿಯಾದರೂ, ಲಿಂಗಭೇದವಿಲ್ಲದೆ ಶಿಕ್ಷಣವನ್ನು ಕೊಡಿಸುತ್ತಿದ್ದರು. ಲಕ್ಷ್ಮೀಯವರಿಗೂ, ಮಾಷ್ಟ್ರಿಗೂ ತಮ್ಮ ಮೂರು ಹುಡುಗಿಯರೂ ಮೂರು ಹುಡುಗರೂ ಓದಬೇಕೆಂಬ ಹಠವಿತ್ತು. ಓದಿಗೆ ಆದ್ಯತೆ ನೀಡಿದಂತೆ ವಿವಾಹದ ವಯಸ್ಸೂ ಮುಂದೆ ಹೋಗಲು ಆರಂಭವಾಯಿತು.
ಈ ಬದಲಾವಣೆಗಳು ಅನೇಕ ಸಮುದಾಯಗಳಲ್ಲಿ ಆಗಿವೆ. ಆದರೆ, ಏತಡ್ಕ ಮಾಷ್ಟ್ರ ವ್ಯಕ್ತಿಚಿತ್ರಣದಲ್ಲಿ ಅಂದಿನ ಕಾಲಘಟ್ಟದಲ್ಲಿ ಮಕ್ಕಳ ವಿದ್ಯೆಗೆ ಕೊಟ್ಟ ಆದ್ಯತೆಯಿಂದ ಪರಿವರ್ತನೆಗಳು ಹೇಗಾದವು ಎಂಬುದನ್ನು ಗಮನಿಸಬಹುದು. 20ನೆಯ ಶತಮಾನದ ಉತ್ತರಾರ್ಧದಲ್ಲಿ ಹವ್ಯಕ ಕುಟುಂಬಗಳ ಅನೇಕ ಯುವಕ ಯುವತಿಯರು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ಈ ಧೋರಣೆಗಳು ಪ್ರೇರೇಪಿಸಿದವು.
ಶಾಲೆಗಳು ಮತ್ತು ಬದಲಾವಣೆಗಳು:
ಸ್ವಾತಂತ್ರ್ಯೋತ್ತರದ ದಶಕಗಳು ದೇಶದಲ್ಲಿ ಅಭೂತಪೂರ್ವವಾದ ಪರಿವರ್ತನೆಗಳು ಆಗುತ್ತಿದ್ದ ಕಾಲಘಟ್ಟ. ಕೆಲವು ಲೇಖನಗಳಲ್ಲಿ ಈ ಬದಲಾವಣೆಗಳ ಉಲ್ಲೇಖವನ್ನು ಗಮನಿಸಬಹುದು. ಊರಿನವರಿಗೇ ಶಾಲೆಯನ್ನು ಆರಂಭಿಸುವ ಉತ್ಸಾಹ, ಅದಕ್ಕೆ ಬರೀ ಹುಲ್ಲಿನ ಛಾವಣಿಯಾದರೂ ಸಾಕು, ಯಾರಾದರೊಬ್ಬರ ಮನೆಯ ಕೊಟ್ಟಿಗೆ-ಅಂದರೆ ‘ಹೊರಮನೆ’ಯೂ ಸಾಕು! ಮಾಷ್ಟ್ರ ಹುಟ್ಟೂರು ಏತಡ್ಕದ ಶಾಲೆಯೂ ಹೀಗೆಯೇ ಹುಟ್ಟಿಕೊಳ್ಳುತ್ತದೆ. ಅವರು ಅಧ್ಯಾಪಕರಾದ ಪೆರಡಾಲದ ನವಜೀವನ ಶಾಲೆಯೂ ಅದೇ ಊರಿನವರ ದೂರದೃಷ್ಟಿಯ ಫಲವಾಗಿ ಜನ್ಮತಾಳಿತು.
ಅಂದಿನ ದಿನಗಳಲ್ಲಿ ಸಾರಿಗೆ ಸಂಪರ್ಕ, ಸರಿಯಾದ ರಸ್ತೆ, ತೊರೆಗಳಿಗೆ ಸೇತುವೆ, ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯವಾದ ಕಟ್ಟಡ-ಇವುಗಳು ಇನ್ನೂ ಬಂದಿರಲಿಲ್ಲ. ಚಿಕ್ಕ ಮಕ್ಕಳು ತೋಡಿನ ಮೇಲೆ ಹಾಕಿದ ಮರದ ‘ಪಾಲ’ (ಸಂಕ)ವನ್ನು ದಾಟಬೇಕು, ಗದ್ದೆಗಳ ನಡುವಿನ ಸಪೂರದ ‘ಕಟ್ಟಪ್ಪುಣಿ’ಯ ಮೇಲೆ ಮಳೆ ಬರುವಾಗ ತೆಂಗಿನ ಮಡಲಿನಿಂದ ಮಾಡಿದ ‘ಗೊರಬೆ’ ಧರಿಸಿ ಜಾಗರೂಕರಾಗಿ ಶಾಲೆಗೆ ಹೋಗಬೇಕು; ಕೊಡಪಾನ ಹಿಡಿದು ಹತ್ತಿರದ ಮನೆಗಳ ಬಾವಿಯಿಂದಲೋ, ಕೆರೆಯಿಂದಲೋ ಕುಡಿಯುವ ನೀರನ್ನು ಸೇದಿ ತರಬೇಕು.
ವೃತ್ತಿಯ ಮೌಲ್ಯಗಳು:
ಕೆಲವು ಲೇಖನಗಳು ಅಧ್ಯಾಪನ ವೃತ್ತಿಯ ಮೌಲ್ಯಗಳು ಮತ್ತು ಅದಕ್ಕೆ ಅಗತ್ಯವಾದ ಮನೋವೃತ್ತಿಯ ಬಗ್ಗೆ ಗಮನ ಸೆಳೆಯುತ್ತವೆ. ಶಾಲೆಯ ಅಧ್ಯಾಪಕರು ಭವಿಷ್ಯತ್ತಿನ ಜನಾಂಗವನ್ನು ನಿರ್ಮಿಸುವ ಶಿಲ್ಪಿಗಳು. ಅವರ ಗುಣಗಳನ್ನು ವಿದ್ಯಾರ್ಥಿಗಳು ಸ್ವಾಭಾವಿಕವಾಗಿಯೇ ಮೈಗೂಡಿಸಿಕೊಳ್ಳುತ್ತಾರೆ. ಮಾಷ್ಟ್ರ ಗುಣಗಳಾದ ಜ್ಞಾನ, ಸಹನೆ, ಶಿಸ್ತು, ಸರಳತೆ, ಸಜ್ಜನಿಕೆ ಮತ್ತು ಸಮಯ ಪ್ರಜ್ಞೆ ಬೇರೆ ಬೇರೆ ಲೇಖನಗಳಲ್ಲಿ ಉಲ್ಲೇಖಗೊಂಡಿವೆ (ಉದಾ: ಪುಟಗಳು: 64, 80, 88, 103). ಒಂದು ಬರಹದಲ್ಲಿ ಮಹಾಲಿಂಗ ಮಾಷ್ಟ್ರಿಗೆ ‘ಗಣಿತ ನೀರು ಕುಡಿದ ಹಾಗೆ-ಅವರು ಸಣ್ಣ ಮಕ್ಕಳಿಗೆ ಅರ್ಥವಾಗುವ ಹಾಗೆ ಅವರ ತಲೆಯೊಳಗೆ ಹೊಕ್ಕಿಸಿ ಗಟ್ಟಿಮಾಡುವ ಅದ್ಭುತ ಸಹನಾ ಶಕ್ತಿ ಹೊಂದಿದ್ದರು’ ಎಂಬ ವಿವರಣೆ ಇದನ್ನು ಪುಷ್ಟೀಕರಿಸುತ್ತದೆ(ಪು.88).
ಸಾರ್ವಜನಿಕ ಶಾಲೆಗಳಲ್ಲಿ ಜಾತಿ ಧರ್ಮಗಳ ಭೇದವಿಲ್ಲದೆ ಎಲ್ಲ ವಿದ್ಯಾರ್ಥಿಗಳೂ ಓದುತ್ತಿರುತ್ತಾರೆ. ವಿದ್ಯಾರ್ಥಿಗಳಲ್ಲಿ ಮೇಲು-ಕೀಳು ಎಂಬ ಭಾವನೆ ಬರದಂತೆ ನೋಡುವುದು ಮಾಷ್ಟ್ರ ಕರ್ತವ್ಯ ಕೂಡ. ಮಹಾಲಿಂಗ ಮಾಷ್ಟ್ರು ಈ ಗುಣವನ್ನು ಮೈಗೂಡಿಸಿಕೊಂಡಿದ್ದರು. ಅವರ ಮಾನವೀಯತೆಯು ಜಾತಿಯ ಕಟ್ಟಳೆಯನ್ನು ಮೀರಿ ಕಾಣಬರುತ್ತಿತ್ತು. ಏತಡ್ಕ ಮನೆಯ ನೆರೆಯವರಾದ ನಾರಾಯಣ ಮಣಿಯಾಣಿಯವರ ಬರಹ (ಪು. 86-87) ಇದನ್ನು ಒತ್ತಿ ಹೇಳುತ್ತದೆ. ಸಮಾನತೆಯ ತತ್ವ, ಶಾಲೆಯ ಮೂಲಕ ಸಮಾಜದ ಉಳಿದ ಕಡೆಗೂ ಹರಡಿತು. ಲೇಖನಗಳಲ್ಲಿ ಕೆಲವೆಡೆ ಬರುವ ಪೆರಡಾಲದ ನವಜೀವನ ಶಾಲೆಯನ್ನು ಆರಂಭಿಸಿದವರಲ್ಲಿ ಒಬ್ಬರಾದ ಡಾ.ಪಿ.ಎಸ್.ಶಾಸ್ತ್ರಿ ಅವರೂ ಸಮಾಜದ ಐಕಮತ್ಯಕ್ಕೆ, ಸುಧಾರಣೆಗೆ ತಮ್ಮ ಜೀವನವಿಡೀ ಶ್ರಮಿಸಿದ್ದರು.
ಅಧ್ಯಾಪಕನಾದವನಿಗೆ ನಿರಂತರವಾದ ಓದು ಅತೀ ಅಗತ್ಯ. ವಿಷಯದ ಬಗ್ಗೆಯೂ ಅಗಾಧವಾದ ತಿಳಿವು ಬೇಕು. ಇಂಗ್ಲಿಷನ್ನೂ ಕಲಿಸುತ್ತಿದ್ದ ಅಪ್ಪನಿಗೆ ‘ರೆನ್ ಮತ್ತು ಮಾರ್ಟಿನ್’ ಅವರ ವ್ಯಾಕರಣ ಕರತಲಾಮಲಕವಾಗಿತ್ತು ಎಂದು ಮಗ ಶ್ರೀಕೃಷ್ಣ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ (ಪು. 158-160). ಅಂದಿನ ಕಾಲಕ್ಕೇ ಪ್ರತಿಷ್ಠಿತವಾದ ಇಂಗ್ಲಿಷ್ ದೈನಿಕಗಳನ್ನು ತರಿಸಿ ಓದುವ ಅಭ್ಯಾಸವನ್ನು ಅವರು ಬೆಳೆಸಿದ್ದರು.
ಈ ಎಲ್ಲ ಗುಣಗಳು ಸರ್ವಕಾಲಕ್ಕೂ ಪ್ರಸ್ತುತವಾಗುತ್ತವೆ.
ಪ್ರಕೃತಿಯಿಂದ ವಿಮುಖವಾಗುವ ಸನ್ನಿವೇಶ
ಇಂದಿನ ಕಾಲಮಾನದ ವೈರುಧ್ಯಗಳ ಕಡೆಗೂ ಕೆಲವು ಲೇಖನಗಳು ಕನ್ನಡಿ ಹಿಡಿಯುತ್ತವೆ. ತಾವು ಚಿಕ್ಕವರಾಗಿದ್ದಾಗ ಕಳೆದ ಹಳ್ಳಿಗಳ ಬಗ್ಗೆ ಬೇರೆ ಬೇರೆ ಲೇಖಕರು ನೀಡುವ ವಿವರಣೆಗಳು ಮುದ ನೀಡುತ್ತವೆ. ಶ್ರೀಕೃಷ್ಣರ ಲೇಖನದಲ್ಲಿ (ಪು.148-50) ಅಜ್ಜನ ಮನೆಯಲ್ಲಿ ಶಾಲೆಯ ರಜಾದಿನಗಳನ್ನು ಕಳೆದ ವರ್ಣನೆ, ಪ್ರಕೃತಿಯ ಸೊಬಗು, ಅದರ ವೈವಿಧ್ಯಗಳು, ಚಿಕ್ಕಂದಿನಲ್ಲಿ ಮರದಿಂದ ಬಿದ್ದ ಮಾವಿನ ಹಣ್ಣುಗಳನ್ನು ಸಂಗ್ರಹಿಸುವುದು, ಗಾಬರಿಗೊಂಡ ಅಳಿಲುಗಳು ಓಡುತ್ತಿದ್ದಂತೆ ಮತ್ತೆ ಹಣ್ಣುಗಳು ಉದುರುವುದು, ಕೆರೆ, ನೀರಿನ ಬುಗ್ಗೆ, ಹಕ್ಕಿಗಳ ಕಲರವ, ತುಳುವ ಹಲಸಿನ ಹಣ್ಣಿನ ಸೊಳೆಯನ್ನು ನುಂಗುವ ಕ್ರಮ ಮುಂತಾದ ವಿವರಣೆಗಳು ಅಪ್ಯಾಯಮಾನವಾಗುತ್ತವೆ. ಮಾಷ್ಟ್ರ ಅಣ್ಣನ ಮಗಳು ಡಾ.ಶೈಲಜಾ ಅವರ ಲೇಖನದಲ್ಲಿಯೂ ಸುಳ್ಯದ ಸಮೀಪದ ಕೊಡಂಚಡ್ಕದ ತೋಟ, ಬಯಲು, ಗುಡ್ಡೆ, ಅದರಾಚೆಯ ಹೊಳೆ, ಅಲ್ಲಿಗೆ ಅವರ ‘ಸಿರಿಯಣ್ಣ’ (ಶ್ರೀಕೃಷ್ಣ) ಬಂದಾಗ ಕಳೆದ ದಿನಗಳ (ಪು.113-4) ಬಗ್ಗೆ ನೀಡುವ ವಿವರಣೆ ಮಕ್ಕಳ ಮನಸ್ಸಿನಲ್ಲಿ ಪ್ರಕೃತಿಯು ಬೀರುವ ಪ್ರಭಾವದ ಬಗ್ಗೆ ಬೆಳಕನ್ನು ಚೆಲ್ಲುತ್ತದೆ. ಲೇಖನಗಳನ್ನು ಓದುತ್ತಿದ್ದಂತೆ ಬಹುಕಾಲ ನಗರದ ಪರಿಸರದಲ್ಲಿಯೇ ಬೆಳೆದವರಿಗೆ ನಾವು ನೋಡಿರದ ಇನ್ನೊಂದು ಜಗತ್ತಿಗೆ ಹೋದಂತೆ ಭಾಸವಾಗುತ್ತದೆ.
ಅದರ ಜೊತೆಗೆ ಸಮಾಜದ ಬದಲಾವಣೆಗಳು ಹೊಸ ಪೀಳಿಗೆಗಳನ್ನು ಪ್ರಕೃತಿಯ ಸೊಬಗಿನಿಂದ ವಿಮುಖಗೊಳಿಸಿವೆ ಎಂಬುದನ್ನು ಮಾರ್ಮಿಕವಾಗಿ ಶ್ರೀಕೃಷ್ಣರು ಹೇಳುತ್ತಾರೆ: ‘2011ರ ಸಂದರ್ಭಕ್ಕೆ ಜಾಗತೀಕರಣ (ಅವರ ಅಜ್ಜನ ಊರಾದ) ಪಾಣಾಜೆಗೂ ತಲುಪಿತ್ತು. ಒಂದು ಕಾಲಕ್ಕೆ ಜನತುಂಬಿ ತುಳುಕಾಡುತ್ತಿದ್ದ ಮನೆಯಲ್ಲಿ ಮಾವಂದಿರು ಈಗ ಇಲ್ಲ. ನಾವು ಮಕ್ಕಳು ಬೆಳೆದಿದ್ದೇವೆ, ನಗರಕ್ಕೆ ವಲಸೆಹೋಗಿದ್ದೇವೆ. ನಮ್ಮ ಮಕ್ಕಳು ಕಂಪ್ಯೂಟರ್ ಪರದೆಗಳ ಮೇಲೆ ಚಿಟ್ಟೆಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ’ (ಪು.150). ಇದು ಮಹಾಲಿಂಗ ಮಾಷ್ಟ್ರ ಮಕ್ಕಳ ಸಮಸ್ಯೆ ಮಾತ್ರವಲ್ಲ, ಮೂಲತಃ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಜೀವನೋಪಾಯಕ್ಕಾಗಿ ವಲಸೆ ಹೋದವರ ಮಕ್ಕಳ ಕತೆಯು ಇದೇ.
‘ನಾವು ಇನ್ನು ಸ್ವತಂತ್ರರು!’
ಮಹಾಲಿಂಗ ಮಾಷ್ಟ್ರು ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ದೇಶವು ಸ್ವಾತಂತ್ರ್ಯವನ್ನು ಪಡೆಯಿತು. ತಮ್ಮ ನೆನಪಿನ ಕಣಜದಿಂದ ಪ್ರಮುಖ ಘಟನೆಗಳನ್ನು ತಮ್ಮ ಮಕ್ಕಳಿಗೆ ಹೇಳುವ ಅಭ್ಯಾಸ ಮಾಷ್ಟ್ರಿಗೆ. ಜವಾಹರಲಾಲ್ ನೆಹರೂ ಮಂಗಳೂರಿಗೆ ಭೇಟಿ ನೀಡಿದ್ದು, ಆಗಸ್ಟ್ 14-15ರ ನಡುರಾತ್ರಿ ಭಾರತದ ಬಾವುಟವನ್ನು ಬದಿಯಡ್ಕದಲ್ಲಿ ಸಾರ್ವಜನಿಕವಾಗಿ ಹಾರಿಸಿ ಖುಷಿ ಪಟ್ಟ ಘಟನೆಗಳನ್ನು ಅಪ್ಪ ಆಗಾಗ ಹೇಳುತ್ತಿದ್ದರು ಎಂದು ಶ್ರೀಕೃಷ್ಣ ನೆನಪಿಸಿ ಬರೆಯುತ್ತಾರೆ (ಪು.158): ‘‘ನೆಹರೂ ಅವರ ‘ಭವಿತವ್ಯದೊಂದಿಗೆ ಒಂದು ಅನುಸಂಧಾನ’ದ (A Tryst With Destiny) ಭಾಷಣದಿಂದ ಉದ್ಧರಿಸಿ ಒಬ್ಬ ಅಧ್ಯಾಪಕರು ‘ನಾವು ಇನ್ನು ಸ್ವತಂತ್ರರು’ ಎಂದು ಹೆಮ್ಮೆಯಿಂದ ಹೇಳಿ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸಿದುದನ್ನು ಅಪ್ಪ ವಿವರಿಸುವಾಗ ನನಗೆ ರೋಮಾಂಚನವಾಗುತ್ತಿತ್ತು.’’
ಹೊತ್ತಗೆಯು ಕೇಂದ್ರ ಬಿಂದುವಾದ ದಿವಂಗತ ಏತಡ್ಕ ಮಹಾಲಿಂಗ ಮಾಷ್ಟ್ರ ಜೀವನದ ಬಗೆಗೆ ಆದರೂ ಅವುಗಳಲ್ಲಿ ಒಳಗೊಂಡ ಸಾಮಾಜಿಕ, ಕೌಟುಂಬಿಕ, ಮೌಲಿಕ ಮತ್ತು ವೈಯಕ್ತಿಕ ವಿಷಯಗಳು, ಓದುವಾಗ ಹಿತಾನುಭವ ಕೊಡುವುದು ಮಾತ್ರವಲ್ಲ, ಚಿಂತನೆಗೂ ಪ್ರೇರೇಪಿಸುತ್ತವೆ. ಸ್ವಸ್ಥ ಸಮಾಜದ ಬೆಳವಣಿಗೆಯಲ್ಲಿ ಪ್ರತೀ ಓರ್ವ ಸದಸ್ಯನ ಕೊಡುಗೆಯೂ ಮಹತ್ವದ್ದಾಗಿರುತ್ತದೆ. ‘ಏತಡ್ಕ ಮಾಷ್ಟ್ರು-ನೆನಪಿನ ಹೊತ್ತಗೆ’ ಯು ಇದನ್ನು ಮನದಟ್ಟುಮಾಡುವಲ್ಲಿ ಬಹುತೇಕ ಯಶಸ್ವಿಯಾಗಿದೆ.