ಬಲಿ ಚಕ್ರವರ್ತಿಯ ಸಾಂಸ್ಕೃತಿಕ ಇತಿಹಾಸ ಮತ್ತು ರಾಜಕಾರಣ
ಬಲಿ ಚಕ್ರವರ್ತಿ ಇಡೀ ದಕ್ಷಿಣ ಏಶ್ಯದಲ್ಲಿಯೇ ಜನಜನಿತ ಹೆಸರು ಮತ್ತು ಒಂದು ಸಾಂಸ್ಕೃತಿಕ ಅಸ್ಮಿತೆಯಾಗಿ ಇವತ್ತಿನ ಆಧುನಿಕ ಕಾಲದಲ್ಲೂ ಜನಮಾನಸದಲ್ಲಿ ಉಳಿದಿದ್ದಾನೆ.ಅವನ ಬಗೆಗಿನ ಜನರ ಸ್ಮರಣೆಗಳು ಜಾನಪದ, ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳು ಆಗಿ ಸಮಾಜದಲ್ಲಿ ವಿಸ್ತರಣೆಗಳನ್ನು ಪಡೆದುಕೊಂಡಿವೆ. ಆ ಮಟ್ಟಿಗೆ ಬಲಿ ಜನರ ಸ್ಮರಣೆಯಲ್ಲಿ ಆಳವಾಗಿ ನೆಲೆಗೊಂಡಿದ್ದಾನೆ. ತುಳುನಾಡಿನಲ್ಲಿ ಬಲಿ ಪಾಡ್ಯ, ಕೇರಳದಲ್ಲಿ ಓಣಂ, ಬಾಲಿ ದ್ವೀಪದಲ್ಲಿ (ಮಲೇಶ್ಯ ದೇಶ) ಬಾಲಿ ಯಾತ್ರೆ ಮುಂತಾದ ಆಚರಣೆಗಳ ಮೂಲಕ ನೆನಪಿಸಿಕೊಳ್ಳಲ್ಪಡುವ ಬಲಿ ಚಕ್ರವರ್ತಿ ಇಷ್ಟು ಜನಪ್ರಿಯತೆಯನ್ನು ಪಡೆದುಕೊಂಡದ್ದು ಹಾಗೂ ಒಂದು ಪ್ರಮುಖ ಸಾಂಸ್ಕೃತಿಕ ಅಸ್ಮಿತೆಯಾಗಿ ಪರಿವರ್ತನೆಯಾದದ್ದು ಆತನ ಹೆಚ್ಚುಗಾರಿಕೆಯಾಗಿದೆ. ಇಂತಹ ಬಲಿ ಚಕ್ರವರ್ತಿಯನ್ನು ಭಾರತದಲ್ಲಿ ಪುರಾಣದ ವ್ಯಕ್ತಿಯನ್ನಾಗಿ ಬಿಂಬಿಸಿಕೊಂಡು ಬರಲಾಗಿದೆ. ಇಂತಹ ಬಲಿ ಚಕ್ರವರ್ತಿಯ ಬಗ್ಗೆ ಗಮನಾರ್ಹ ವಿಚಾರಗಳನ್ನು ಜಗತ್ತಿಗೆ ಜ್ಯೋತಿಬಾ ಫುಲೆ ತನ್ನ ಕೃತಿ ‘ಗುಲಾಮಗಿರಿ’ಯ ಮೂಲಕ ತಂದಿದ್ದಾರೆ. ಈ ಮೂಲಕ ಬಲಿಗೆ ಸಂಬಂಧಿಸಿದಂತೆ ನಡೆದ ಒಂದು ಸಾಂಸ್ಕೃತಿಕ ರಾಜಕಾರಣವನ್ನು ಆ ರಾಜಕಾರಣವು ಬಲಿ ಚಕ್ರವರ್ತಿಯನ್ನು ಬಲಿ ಪಡೆದುಕೊಂಡಿರುವುದನ್ನು ಫುಲೆ ದಾಖಲಿಸುತ್ತಾರೆ
ಜ್ಯೋತಿಬಾ ಫುಲೆ ಬಲಿ ಚಕ್ರವರ್ತಿಯನ್ನು ‘ಕುಲ ಸ್ವಾಮಿ’ ಎಂಬುದಾಗಿ ಕರೆಯುತ್ತಾರೆ. ಬಹುಶಃ ಇಂದಿನ ಮಧ್ಯ ಪ್ರದೇಶವನ್ನು ಕೇಂದ್ರವಾಗಿಟ್ಟುಕೊಂಡು ಆಳುತ್ತಿದ್ದ ಬಲಿಯ ಸಾಮ್ರಾಜ್ಯಕ್ಕೆ ‘ಸತ್ಯ ರಾಜ್ಯ’ (ಸತಿಯ ಪುತ್ರ)’ ಅಂತ ಹೆಸರಿತ್ತು. ಅವನ ಸಾಮ್ರಾಜ್ಯವು ತುಂಬಾ ವಿಸ್ತಾರವಾಗಿದ್ದು ಶ್ರಿಲಂಕಾದ ಸುತ್ತಮುತ್ತಲಿನ ದ್ವೀಪಗಳು, ಬಾಲಿ ದ್ವೀಪ, ದಕ್ಷಿಣ ಭಾರತದಲ್ಲಿನ ಕೊಂಕಣ, ಮಹಾರಾಷ್ಟ್ರ ಹಾಗೂ ಮುಖ್ಯವಾಗಿ ಅವಿಭಜಿತ ತುಳುನಾಡು ಅವನ ಆಡಳಿತಕ್ಕೆ ಒಳಪಟ್ಟಿತ್ತು. ಈ ಹಿನ್ನೆಲೆಯಲ್ಲಿಯೇ ತುಳುನಾಡು ‘ಸತಿಯ ಪುತ್ರ ರಾಜ್ಯ’ ಎಂಬುದಾಗಿ ಕರೆಸಿಕೊಂಡಿದೆ. ಇಂತಹ ಬಲಿ ಚಕ್ರವರ್ತಿಗೆ ಸಂಗೀತದ ಮೇಲೆ ಒಲವು ಇದ್ದು ಮಲ್ಹಾರ ರಾಗವನ್ನು ಸಂಯೋಜಿಸುತ್ತಾನೆ. ಇದೇ ಮಾದರಿಯಲ್ಲಿ ಮುಂದೆ ಮಿಯಾನ್ ಎಂಬ ಮುಸ್ಲಿಮ್ ಸಂಗೀತಕಾರ ‘ಮಿಯಾನ್ ಮಲ್ಹಾರ್’ ರಾಗವನ್ನು ಸಂಯೋಜಿಸುತ್ತಾನೆ. ಅದಕ್ಕಿಂತಲೂ ಮಿಗಿಲಾಗಿ ಇವತ್ತಿನ ಕಂದಾಯ ಆಡಳಿತಕ್ಕೆ ಅಡಿಪಾಯವನ್ನು ಹಾಕಿದ್ದೇ ಬಲಿ ಚಕ್ರವರ್ತಿ. ಕಂದಾಯ ಆಡಳಿತವನ್ನು ನೋಡಿಕೊಳ್ಳಲು ‘ಮಹಾ ಸುಭಾ’ ಎಂದು ಕರೆಯಲ್ಪಡುತ್ತಿದ್ದ ೯ ಕಂದಾಯ ಖಂಡಗಳನ್ನು ನೋಡಿಕೊಳ್ಳಲು ಕಂದಾಯ ಆಧಿಕಾರಿಗಳನ್ನು ಮತ್ತು ಇಬ್ಬರು ಮುಖ್ಯ ನ್ಯಾಯಾಧೀಶರನ್ನು ನೇಮಿಸಿದ್ದ. ಈ ‘ಮಹಾ ಸುಭಾ’ವು ಬೇಸಾಯ ಮತ್ತು ಇತರ ಕೃಷಿ ಚಟುವಟಿಕೆಗಳನ್ನು ತುಂಬಾ ಜಾಗರೂಕವಾಗಿ ಸಮೀಕ್ಷೆ ನಡೆಸಿ ಕೃಷಿಕರಿಗೆ ಬೇಕಾದ ಬಿತ್ತನೆ ಬೀಜಗಳು ಮತ್ತಿತರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿತ್ತು. ಅಗತ್ಯ ಬಿದ್ದಾಗ ಕೃಷಿಕರಿಗೆ ರಿಯಾಯಿತಿಗಳನ್ನು ಕೊಡಲಾಗುತ್ತಿತ್ತು. ಬಲಿ ರಾಜನ ಕಂದಾಯ ಆಡಳಿತವನ್ನು ಆನಂತರದ ಮುಸ್ಲಿಮ್ ರಾಜರುಗಳು ಅನುಸರಿಸತೊಡಗಿದರು. ಮುಂದೆ ಈಜಿಪ್ಟ್ ದೇಶದ ವಿದ್ವಾಂಸರು ಬಲಿ ರಾಜನ ರಾಜ್ಯಾಡಳಿತವನ್ನು ಅಧ್ಯಯನ ಮಾಡಿದರು ಎಂದು ಹೇಳಲಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಇವತ್ತಿಗೂ ಕೃಷಿಕರು ಬಲಿ ಚಕ್ರವರ್ತಿಯನ್ನು ನೆನಪಲ್ಲಿ ಇರಿಸಿಕೊಂಡಿದ್ದಾರೆ.
ಬಲಿ ಚಕ್ರವರ್ತಿ ಒಬ್ಬನೇ ಅಲ್ಲ; ಅದೊಂದು ಪದವಿ ಎಂಬಂತೆ ತೋರಿ ಬರುತ್ತಿದೆ. ತುಳುನಾಡಿನಲ್ಲಿ ೧೩೧ ಜನ ಬಲಿಗಳು ಇದ್ದರು. ಅವರಲ್ಲಿ ತುಂಬಾ ಪ್ರಸಿದ್ಧನಾದವನೇ ವಿರೋಚನ ಬಲಿ ಚಕ್ರವರ್ತಿ ಎಂಬುದಾಗಿ ಡಾ. ಜಮನಾ ದಾಸ್ ಅಭಿಪ್ರಾಯವಾಗಿದೆ.
ವಿರೋಚನ ಬಲಿ ಚಕ್ರವರ್ತಿ ಮೂಲತಃ ಭೌತಿಕವಾದದ (Materialism-ಸರಳವಾಗಿ ಹೇಳುವುದಾದರೆ ವಿಜ್ಞಾನದ ಮತ್ತು ಈ ಜಗತ್ತಿಗೆ ಸಂಬಂಧಿಸಿದ ವ್ಯವಹಾರಗಳ ಪ್ರತಿಪಾದಕರು, ಚಿಂತಕರು) ಬಲು ದೊಡ್ದ ವಿದ್ವಾಂಸ ಮತ್ತು ಪ್ರತಿಪಾದಕನಾಗಿದ್ದ ಎಂಬುದಾಗಿ ತೋರಿ ಬರುತ್ತದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ ಬಲಿ ಚಕ್ರವರ್ತಿ ‘ಲೋಕಾಯತ’ ಸಿದ್ಧಾಂತದ ಬಲು ಅಗ್ರಗಣ್ಯ ಪ್ರತಿಪಾದಕನಾಗಿದ್ದ. ಬಲಿ ಚಕ್ರವರ್ತಿಗೂ ಸಿಂಧೂ ನಾಗರಿಕತೆಗೂ; ಸಿಂಧೂ ನಾಗ ನಾಗರಿಕತೆಗೂ ತುಳುನಾಡಿಗೂ ಹಾಗೂ ತುಳುನಾಡಿಗೂ ಬಲಿ ಚಕ್ರವರ್ತಿಗೂ ಬಲು ಹತ್ತಿರದ ಸಂಬಂಧ ಇದೆ. ಸಿಂಧೂ ನಾಗರಿಕತೆಯಲ್ಲಿದ್ದ ಲೋಕಾಯತ ಸಿದ್ಧಾಂತದ ಪ್ರತಿಪಾದಕನಾಗಿದ್ದ ಆದಿ ಬುದ್ಧನೇ ವಿರೋಚನ. ಇವನ ತಂದೆ ಪ್ರಹ್ಲಾದ. ಪ್ರಹ್ಲಾದನ ಮತ್ತೊಬ್ಬ ಮಗನೇ ಕಪಿಲ. ಈ ಕಪಿಲ ಮುನಿಯೇ ಸಾಂಖ್ಯ ಸಿದ್ಧಾಂತದ ಜನಕ. ಈ ಸಾಂಖ್ಯ ಸಿದ್ಧಾಂತದ ಆಧಾರದ ಮೇಲೆಯೇ ಬೌದ್ಧಧರ್ಮವನ್ನು ಗೌತಮ ಬುದ್ಧ ರೂಪಿಸಿದ್ದು. ಆದಿ ಬುದ್ಧ ವಿರೋಚನನ ಮಗನೇ ಬಲಿ ಚಕ್ರವರ್ತಿ. ಬಲಿ ಚಕ್ರವರ್ತಿಯಲ್ಲಿದ್ದ ಲೋಕಾಯತ ಸಿದ್ಧಾಂತ ಮತ್ತು ಸಮಾನತಾ ನೀತಿಯೇ ಅಪರಾಧವಾದದ್ದು. ಮಹಾರಾಷ್ಟ್ರದ ವಿದ್ವಾಂಸರಾದ ಸಾಳುಂಕೆ ಇಂದ್ರ-ಬಲಿಯ ಸಂಭಾಷಣೆ - ಮಾತುಕತೆಯನ್ನು ನಮ್ಮ ಗಮನಕ್ಕೆ ತರುತ್ತಾರೆ. ‘‘ಬಲಿಯಂತಹ ಬುದ್ಧನನ್ನು ನಾನು ಕೊಲ್ಲಲು ಬಯಸುವುದಿಲ್ಲ’’ ಎಂಬುದಾಗಿ ಇಂದ್ರ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ. ಈ ಕಾರಣಗಳಿಗಾಗಿಯೇ ಇಡೀ ದಕ್ಷಿಣ ಏಶ್ಯವನ್ನು ಬಲಿ ಚಕ್ರವರ್ತಿ ಮತ್ತು ಆತನ ಸ್ಮರಣೆ ಆವರಿಸಿಕೊಂಡಿದ್ದು ಎಂಬುದಾಗಿ ನಾವು ಕಂಡುಕೊಳ್ಳಬಹುದು.
ಬಲಿ ಚಕ್ರವರ್ತಿ ವಾಮನನಿಗೆ ಮಾಡಿದ ದಾನಕ್ಕೆ ಸಂಬಂಧಿಸಿದಂತೆ ಬರುವ ಮೂರು ಹೆಜ್ಜೆಗಳು(Three steps) ಎಪಿಸೋಡಿನ ಅರ್ಥಗಳನ್ನು ವಾಸ್ತವಕ್ಕೆ ತರ್ಕಕ್ಕೆ ನಿಲುಕದಂತೆ ಮಾಡಲಾಗಿದೆ. ತಾರ್ಕಿಕವಾಗಿ ನೋಡುವುದಾದರೆ ಬಲಿ ಚಕ್ರವರ್ತಿಯಲ್ಲಿ ವಾಮನ ಕೇಳಿದ ಮೂರು ದಾನಗಳನ್ನು ಮೂರು ಹೆಜ್ಜೆಗಳು ಇಲ್ಲವೇ ಮೂರು ಬಾರಿ ಮುಟ್ಟುವಿಕೆ(touch) (ಮೂರು ದಾನಗಳು -- ಮೂರು ಹೆಜ್ಜೆಗಳು ಮೂರು ಬಾರಿ ಮುಟ್ಟುವಿಕೆ) ಎಂಬುದಾಗಿ ಓದಿಕೊಂಡರೆ (ಬಲಿ ಚಕ್ರರ್ತಿಯ ತಲೆಯ ಮೇಲೆ ಇರಿಸಿದ ವಾಮನನ ಹೆಜ್ಜೆ ಅಥವಾ ಮುಟ್ಟುವಿಕೆ) ಮೊದಲನೇ ಹೆಜ್ಜೆ ಮೂಲನಿವಾಸಿ ಜನರು ಬುದ್ಧಿಯನ್ನು ಮತ್ತು ಭೂಮಿ ಮೇಲಿನ ಅಧಿಕಾರವನ್ನು ಕಳೆದುಕೊಂಡಿದ್ದನ್ನು ಸೂಚಿಸಿದರೆ; ಎರಡನೇ ಹೆಜ್ಜೆ ಮೂಲನಿವಾಸಿ ಜನರು ತಮ್ಮ ಸಂಸ್ಕೃತಿ ಧಾರ್ಮಿಕತೆಯ ಮೇಲಿನ ಅಧಿಕಾರವನ್ನು ಕಳೆದುಕೊಂಡಿದ್ದನ್ನು ಸೂಚಿಸುತ್ತದೆ. ‘ಮೂರನೆಯ ಹೆಜ್ಜೆ’ ಮೂಲನಿವಾಸಿಗಳು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದನ್ನು ಹಾಗೂ ಅವರು ತಮ್ಮ ‘ವಾಕ್’ ಇಲ್ಲವೇ ‘ವಾಣಿ’ (ಮಾತು) ಅನ್ನು ಬಳಕೆ ಮಾಡಲೇಬಾರದು ಎಂಬುದನ್ನು ಸೂಚಿಸುತ್ತದೆ.
ಭಾರತದ ಮೂಲ ನಿವಾಸಿಗಳ ಹಬ್ಬಗಳನ್ನು-ಸಾಂಸ್ಕೃತಿಕ ಆಚರಣೆಗಳನ್ನು ಬೇರೆ ಬೇರೆ ಸಾಂಸ್ಕೃತಿಕ, ಸಾಮಾಜಿಕ ಹಾಗೂ ರಾಜಕೀಯ ಉದ್ದೇಶಗಳಿಗಾಗಿ ತಳಕು ಹಾಕಲಾಗಿದೆ. ಜನರ ಕೃಷಿ ಅಚರಣೆಗಳು ಮತ್ತು ಅದಕ್ಕೆ ಸಂಬಂಧಪಟ್ಟ ಹಬ್ಬಗಳನ್ನು ಹಾಗೂ ಜಾನಪದಗಳನ್ನು ಸಂಘಟಿತ ಧರ್ಮಗಳು ತಮ್ಮ ಧಾರ್ಮಿಕ ವ್ಯವಸ್ಥೆ ಮತ್ತು ಹಬ್ಬಗಳ ಭಾಗಗಳನ್ನಾಗಿ ಮಾಡಿ ಅದರ ಮೂಲಗಳನ್ನು ಗುರುತಿಸದಂತೆ ಮಾಡಲಾಗಿದೆ. ಅದೇ ರೀತಿ ಮೂಲನಿವಾಸಿಗಳು, ಅವರ ರಾಜರುಗಳು, ಸಂತರು, ಕ್ರಾಂತಿಕಾರರು, ಕವಿಗಳು, ದಾರ್ಶನಿಕರು, ಧಾರ್ಮಿಕ ಗುರುಗಳು, ವಿದ್ವಾಂಸರ ಮೇಲೆ ನಡೆದ ಆಕ್ರಮಣಗಳು ಹಬ್ಬಗಳಾಗಿ ಪರಿವರ್ತನೆಯಾದರೆ, ಅದೇ ಪ್ರಕ್ರಿಯೆಗಳು ಮೂಲನಿವಾಸಿ ನಾಗಾ ದ್ರಾವಿಡ ಜನರಿಗೆ ತಮ್ಮ ತಮ್ಮ ರಾಜರನ್ನು ನೆನಪಿಸಿಕೊಳ್ಳುವ ಸ್ಮರಣಾ ದಿನಗಳಾಗುತ್ತವೆ. ಆಗಿ ಹೋದ ಹಿರಿಯರುಗಳನ್ನು ‘ಎಡೆ ಇಟ್ಟು’ ನೆನಪಿಸಿಕೊಳ್ಳುವುದು -ಆರಾಧಿಸುವುದು ದ್ರಾವಿಡ ಪರಂಪರೆಯಾಗಿದೆ. ಈ ಪರಂಪರೆಯೊಳಗೆ ಇರುವ ಆಕ್ರಮಣಗಳು, ಕೊಲೆ, ಹಿಂಸೆಗಳು, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪಲ್ಲಟಗಳು-ಅವನತಿಗಳ ಒಳಪದರಗಳ ಅರಿವು ಮೂಲನಿವಾಸಿ ಬಹುಜನರಿಗೆ ಸ್ಪಷ್ಟವಾಗಿ ಇದೆ. ಇದನ್ನು ಮರೆಮಾಚಲು ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಹಾಗೂ ಸಾಹಿತ್ಯಿಕ ವಿಸ್ಮತಿಯನ್ನು ಮೂಲನಿವಾಸಿಗಳ ಮೇಲೆ ಹೇರಲಾಗಿದೆ. ಒಟ್ಟಾರೆಯಾಗಿ ದುಃಖದ ದಿನಗಳು- ಸ್ಮರಣಾ ದಿನಗಳು ಹಬ್ಬಗಳಾಗುವಂತಹ; ಮೂಲನಿವಾಸಿಗಳ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಆಚರಣೆಗಳು -ಹಬ್ಬಗಳು ಮತ್ತು ಅವರಿಗೆ ಸೇರಿದ ಮಹಾನ್ ವ್ಯಕ್ತಿಗಳು ದುಷ್ಟತೆಯ ಪ್ರತೀಕವಾಗುವ; ಆ ಮೂಲಕ ಆ ವ್ಯಕ್ತಿಗಳನ್ನೆಲ್ಲಾ ಕೊಲ್ಲಲು justifications ಮತ್ತು ಅನುಮತಿಯನ್ನು ದಯಪಾಲಿಸುವ ಸಮಾಜೋ -ಸಾಂಸ್ಕೃತಿಕ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.
ಜ್ಯೋತಿಬಾ ಫುಲೆ ಈ ದೇಶವನ್ನು ‘ಬಲಿಸ್ತಾನ್’ ಎಂಬುದಾಗಿಯೇ ಕರೆಯಲು ಇಚ್ಛಿಸುತ್ತಾರೆ. ಹಾಗೆಯೇ ಈಗಿನ ಪಾಕಿಸ್ತಾನದಲ್ಲಿನ ಬಲೂಚಿಸ್ತಾನ್ ಪ್ರಾಂತದ ಹೆಸರು ಕೂಡ ಬಲಿಯ ನೆನಪಿಗೆ ಇಡಲಾಗಿದೆ ಎಂಬುದಾಗಿ ಹೇಳಲಾಗಿದೆ. ಇಟಲಿಯ ಸಂಶೋಧಕ ಜಿ. ವೆರಾರ್ಡಿ ಬಾದಾಮಿಯ ಬೌದ್ಧ ಗುಹೆಗಳಲ್ಲಿ ಬಲಿ ಚಕ್ರವರ್ತಿಯ ಕೆತ್ತನೆಗಳನ್ನು ಗುರುತಿಸುವ ಮೂಲಕ ಬಲಿ ಪುರಾಣದ ವ್ಯಕ್ತಿಯಲ್ಲ; ಬದಲಾಗಿ ಐತಿಹಾಸಿಕ ವ್ಯಕ್ತಿ ಎಂಬುದಕ್ಕೆ ಸಾಕ್ಷಿ ನುಡಿಯುತ್ತಾನೆ. ಆದರೆ ಭಾರತದ ಸಾಂಸ್ಕೃತಿಕ ಸಂಕಥನಗಳು ಹಾಗೂ ಸಾಂಸ್ಕೃತಿಕ ರಾಜಕಾರಣ ಬಲಿ ಚಕ್ರವರ್ತಿ ಅನ್ನು ಪುರಾಣ ಹಾಗೂ ಕೆಟ್ಟ ವ್ಯಕ್ತಿ ಎಂಬುದಾಗಿ ಬಿಂಬಿಸಲು ಸಾಕಷ್ಟು ಶ್ರಮಿಸಿವೆ. ಆದರೆ ದಕ್ಷಿಣ ಏಶ್ಯದ ಮೂಲ ನಿವಾಸಿಗಳಿಗೆ ಅವರ ಸಾಂಸ್ಕೃತಿಕ ಅಸ್ಮಿತೆ ಮತ್ತು ಜನಾಂಗದ ಭಾಗವಾಗಿಯೇ ಬಲಿ ಚಕ್ರವರ್ತಿ ಉಳಿದುಕೊಂಡಿರುವುದನ್ನು ನಾವು ಕಂಡುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಬಲಿ ಚಕ್ರವರ್ತಿ ಬಗ್ಗೆ ಇನ್ನೂ ಹೆಚ್ಚಿನ ಗಂಭೀರ ಅಧ್ಯಯನಗಳು ನಡೆಯಬೇಕಾಗಿದೆ.