ದೇಶದಲ್ಲಿ ಈ.ಡಿ., ಸಿಬಿಐ ಹುಟ್ಟುಹಾಕಿರುವ ಭಯವನ್ನೇ ದುರ್ಬಳಕೆ ಮಾಡಿಕೊಂಡು ಅಮಾಯಕರನ್ನು ದೋಚುತ್ತಿರುವ ಸೈಬರ್ ವಂಚಕರು
ಉಡುಪಿಯಲ್ಲಿ ಮೊನ್ನೆ ರವಿವಾರ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಪರೀಕ್ಷೆಗಾಗಿ ಓದುತ್ತಿದ್ದಾಗ, ಆಕೆಯ ಮೊಬೈಲ್‌ಗೆ ಒಂದು ಕರೆ ಬರುತ್ತದೆ.
ನಿಮ್ಮ ಫೋನ್ ನಂಬರ್ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವುದರಿಂದ ಅದನ್ನು ಎರಡು ತಾಸುಗಳಲ್ಲಿ ಬ್ಲಾಕ್ ಮಾಡುತ್ತೇವೆ. ವಿವರಗಳಿಗಾಗಿ 9 ಒತ್ತಿ ಎಂದು ಹೇಳಲಾಯಿತು.
ಫೋನ್ ಅನಿವಾರ್ಯ ಸಂಪರ್ಕ ಆಗಿದ್ದುದರಿಂದ ಆತಂಕಗೊಂಡ ಆಕೆ 9 ಒತ್ತಿದಾಗ, TRAI ಕಡೆಯಿಂದ ಆಕೆಯ ಹೆಸರು ಸಹಿತ ಮುದ್ರಿತವಾಗಿದ್ದ ಪತ್ರವೊಂದನ್ನು ತೋರಿಸಲಾಯಿತು. ಸಂಬಂಧಪಟ್ಟ ಪೊಲೀಸ್ ಠಾಣೆಗೆ ಸಂಪರ್ಕಿಸುತ್ತೇವೆ ಎಂದು ಹೇಳಲಾಯಿತು.
ಅದು ಮುಂಬೈಯ ಅಂಧೇರಿ ಈಸ್ಟ್ ಠಾಣೆ ಎಂದು ಹೇಳಲಾಯಿತು. ಅಲ್ಲಿಂದ ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಬೆದರಿಸಿ, ವೀಡಿಯೊ ಕಾಲ್ ಮಾಡುವುದಾಗಿ ಹೇಳಿ, ಕರೆ ಮಾಡಿ, ಆ ಸಂದರ್ಭದಲ್ಲಿ ಕೋಣೆಯಲ್ಲಿ ಬೇರಾರೂ ಇರುವಂತಿಲ್ಲ ಎಂಬ ಎಚ್ಚರಿಕೆ ನೀಡಿ, ಸುಮಾರು 40 ನಿಮಿಷಗಳ ತನಕ ಆಕೆಯ ವಿಚಾರಣೆ ನಡೆಸಿದ.
ಬಂಧಿತ ಏರ್‌ವೇಸ್ ಮುಖ್ಯಸ್ಥರೊಬ್ಬರ ಹೆಸರು ಹೇಳಿ, ಅವರ ಖಾತೆ ಮತ್ತು ನಿಮ್ಮ ಖಾತೆ ನಡುವೆ ನಾಲ್ಕು ಕೋಟಿ ರೂ.ಗಳ ಅಕ್ರಮ ಹವಾಲಾ ವ್ಯವಹಾರ ನಡೆದಿದೆ. ನಿಮ್ಮನ್ನು ಬಂಧಿಸಬೇಕಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಗಳ ವಿವರ ನೀಡಿ ಎಂದೆಲ್ಲ ಬೆದರಿಸಿದ.
ಅಷ್ಟೊಂದು ಹಣದ ಸುದ್ದಿ ಬಂದಾಗ ಅದು ತನಗೆ ಸಂಬಂಧಿಸಿದ್ದಲ್ಲ ಎಂದು ಖಚಿತಗೊಂಡದ್ದರಿಂದ ಆಕೆ ಬ್ಯಾಂಕ್ ಖಾತೆಗಳ ವಿವರ ಕೊಡಲಾಗುವುದಿಲ್ಲ. ಪೋಷಕರಿಗೆ ಕರೆ ಮಾಡಿ ಸಂಪರ್ಕಿಸಿ ಬಳಿಕ ಅಗತ್ಯ ಬಿದ್ದರೆ ಸ್ಥಳೀಯ ಪೊಲೀಸ್ ಠಾಣೆಗೆ ಬರುವೆ ಎಂದಾಗ ಅದಕ್ಕೆ ಅವಕಾಶ ಕೊಡದೇ ಬೆದರಿಸತೊಡಗಿದ. ಫೋನ್ ಸಂಪರ್ಕ ಕಡಿತಗೊಳಿಸಿದರೆ ಗಂಭೀರ ಕ್ರಮ ಕೈಗೊಳ್ಳಬೇಕಾದೀತೆಂದು ಬೆದರಿಸಿದ.
ಆಕೆಯ ಆಧಾರ್ ನಂಬರ್ ಮತ್ತು ವೀಡಿಯೊದಲ್ಲಿ ಮುಖದ ಚಿತ್ರ ಬಿಟ್ಟರೆ ಬೇರೆ ದಾಖಲೆಗಳು ಕೊನೆಗೂ ಆತನಿಗೆ ಸಿಗಲಿಲ್ಲ.
ಕಡೆಗೆ, ತಪ್ಪಾಗಿದ್ದರೆ ಜೈಲಿಗೆ ಹೋಗಲು ಸಿದ್ಧ ಎಂದು ಹೇಳಿದ ಆಕೆ ಫೋನ್ ಕರೆ ಕಟ್ ಮಾಡಿದರು. ತನ್ನ ತಂದೆಗೆ ವಿವರ ತಿಳಿಸಿದರು. ಕಾಲ್ ಕಟ್ ಮಾಡಿದ್ದರಿಂದ ಆಕೆ ಆ ಕ್ಷಣದ ಅಪಾಯದಿಂದ ಪಾರಾದಳು.
ಆದರೆ ಆಕೆಯ ಫೋನ್ ನಂಬರ್, ಫೋಟೊ, ಆಧಾರ್ ಕಾರ್ಡ್, ಮನೆಯ ವಿಳಾಸದಂತಹ ಮಹತ್ವದ ಮಾಹಿತಿಗಳು ಆ ವಂಚಕರ ಪಾಲಾಗಿವೆ ಎಂಬುದನ್ನು ಇಲ್ಲಿ ಗಮನಿಸಬೇಕು.
ಇದು ಸ್ಕ್ಯಾಮ್‌ಸ್ಟರ್ ಕ್ರಿಮಿನಲ್‌ಗಳು ವಂಚಿಸಲು ಆಡುವ ಆಟದ ಒಂದು ಹೊಸ ಮಾದರಿ. ವೈದ್ಯರು, ವೃತ್ತಿಪರರಂಥ ವಿದ್ಯಾವಂತರೇ ಈ ವಂಚಕರ ಕೈಗೆ ಸಿಕ್ಕಿಹಾಕಿಕೊಂಡು ಕೋಟಿಗಟ್ಟಲೆ ಹಣ ಕಳೆದುಕೊಂಡಿದ್ದಾರೆ.
ಅಧಿಕಾರದಲ್ಲಿರುವವರ, ಪ್ರಭಾವಿಗಳ, ಟೆಲಿಫೋನ್ ಸೇವಾ ಸಂಸ್ಥೆಗಳ ಸಹಾಯಹಸ್ತ ಇಲ್ಲದೆ ಹಾಡಹಗಲೇ ದೇಶದಾದ್ಯಂತ ಈ ರೀತಿಯ ಸುಲಿಗೆಗಳಲ್ಲಿ ತೊಡಗಿಕೊಳ್ಳುವುದು ಸಾಧ್ಯವಿಲ್ಲ ಎಂಬುದು ಖಚಿತ. ಈಗಾಗಲೇ ಕೆಲವು ಬಂಧನಗಳಾಗಿದ್ದೂ, ಇಂಥ ಘಟನೆಗಳು ಇನ್ನೂ ನಡೆಯುತ್ತಿವೆ ಎಂದರೆ, ಇದು ದೊಡ್ಡ, ವ್ಯವಸ್ಥಿತ ಜಾಲದ ಕರಾಮತ್ತು ಎಂಬುದಕ್ಕೆ ಸಂಶಯವೇ ಇಲ್ಲ.
ನಿತ್ಯವೂ ನೂರಾರು ಮಂದಿ ಇಂಥ ಸ್ಕ್ಯಾಮ್ ಕರೆಗಳಿಗೆ ಬಲಿಬೀಳುತ್ತಿದ್ದಾರೆ. ಎಲ್ಲೋ ಒಂದೆರಡು ಮಂದಿಯನ್ನು ಬಂಧಿಸಿದರೂ ಮತ್ತೆ ಅಷ್ಟೇ ಮಂದಿ ಇಂಥ ವಂಚನೆಯಲ್ಲಿ ನಿರತರಾಗಿಯೇ ಇದ್ದಾರೆ. ಪ್ರತೀ ಸಿಮ್ ಕಾರ್ಡಿಗೆ ಆಧಾರ್ ಸಹಿತ ದಾಖಲೆಗಳನ್ನು ಪಡೆದಿರುವ ಟೆಲಿಕಾಂ ಸೇವಾದಾತರು, ಅದರ ಉಸ್ತುವಾರಿ ಹೊತ್ತಿರುವ ಸರಕಾರ, ಖಿಖಂI ಇವರಿಗೆಲ್ಲ ಈ ವಂಚಕರ ಕೈಯಲ್ಲಿರುವ ಫೋನ್ ನಂಬರ್‌ಗಳ ಮಾಹಿತಿ ಸಿಕ್ಕಿಲ್ಲ ಎಂಬುದೇ ಅನುಮಾನ ಮೂಡಿಸುವ ಸಂಗತಿಯಾಗಿದೆ.
ಸಮಾಜದಲ್ಲಿ ಯಾವ ರೀತಿಯ ಭಯವಿದೆಯೋ, ಆ ಭಯವನ್ನೇ ಇಂಥ ವಂಚಕರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹೇಗೆ ಯಾರನ್ನೂ ಬಂಧಿಸಿ ಅವರ ಜೀವನ ಹಾಳು ಮಾಡಬಹುದು ಎಂಬ ಭಯವನ್ನು ಸಿಬಿಐ, ಈ.ಡಿ.ಯಂಥ ಏಜನ್ಸಿಗಳು ಸೃಷ್ಟಿಸಿವೆಯೋ, ಅದೇ ರೀತಿಯಲ್ಲಿಯೇ ಈಗ ಈ ವಂಚಕರು ಭಯ ಸೃಷ್ಟಿಸುತ್ತಿದ್ದಾರೆ.
ಈ.ಡಿ., ಸಿಬಿಐ, ಐಟಿ ಅಧಿಕಾರಿಗಳಂತೆ ಬಿಂಬಿಸಿಕೊಳ್ಳುವ ಈ ನಕಲಿಗಳು ಡಿಜಿಟಲ್ ಅರೆಸ್ಟ್ ಮಾಡಿ ಜನರ ಬ್ಯಾಂಕ್ ಖಾತೆಗೇ ಕನ್ನ ಹಾಕಿ ಎಲ್ಲವನ್ನೂ ದೋಚುತ್ತಾರೆ.
ಹೀಗೆ ಯಾವ್ಯಾವುದೋ ಅಧಿಕಾರಿಗಳ ಹೆಸರಲ್ಲಿ ಫೋನ್ ಕರೆ ಬರುತ್ತದೆ, ಬ್ಯಾಂಕ್ ಖಾತೆಯ ವಿವರ ಕೇಳುತ್ತಾರೆ. ಸ್ವಲ್ಪ ಯಾಮಾರಿದರೂ ಖಾತೆಯಲ್ಲಿನ ಹಣ ಅವರ ಪಾಲಾಗುತ್ತದೆ ಎಂಬ ಅದೆಷ್ಟೋ ಸುದ್ದಿಗಳನ್ನು ಜನ ದಿನಬೆಳಗಾದರೆ ಓದುತ್ತಾರೆ, ಕೇಳುತ್ತಾರೆ. ಆದರೆ ಇಂಥ ವಂಚನೆಗೆ ತುತ್ತಾಗುವುದು ಮಾತ್ರ ಕಡಿಮೆಯಾಗುತ್ತಲೇ ಇಲ್ಲ.
ಬಿಹಾರದ ಐಎಂಎ ಅಧ್ಯಕ್ಷ ಡಾ.ಅಭಯ್ ನಾರಾಯಣ್ ರಾಯ್ ಕೂಡ ಇಂಥ ವಂಚಕರ ಬಲಿಪಶುವಾಗಿದ್ದಾರೆ ಎಂದು ಕೇಳಿದರೆ ನಿಮಗೆ ಅಚ್ಚರಿಯಾಗಬಹುದು.
ಅವರಿಗೆ ಕರೆ ಮಾಡಿದ ವ್ಯಕ್ತಿ ತಾನು ಸಿಬಿಐನಿಂದ ಕರೆ ಮಾಡುತ್ತಿರುವುದಾಗಿ ಹೇಳುತ್ತಾನೆ. ಆ ವೈದ್ಯರು ಕಂಗಾಲಾಗಿ ಹೋಗುತ್ತಾರೆ. ನಿಮ್ಮ ಖಾತೆಯಲ್ಲಿ ಮನಿ ಲಾಂಡರಿಂಗ್ ನಡೆದಿದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳುತ್ತಾನೆ. ಇನ್ನೂ ಭಯಗೊಳ್ಳುತ್ತಾರೆ. ಅವರಿಗೆ ತಮ್ಮ ಸಂಬಳದ ಮೂಲ, ತಮ್ಮ ಖಾತೆಯಲ್ಲಿನ ಹಣದ ಬಗ್ಗೆ ನಿಖರವಾಗಿ ತಿಳಿದಿರುವಾಗ ಹೆದರುವ ಅಗತ್ಯವೇ ಇರಲಿಲ್ಲ.
ಅನೇಕ ಸಲ ಹನಿ ಟ್ರ್ಯಾಪ್ ಮೂಲಕವೂ ಹೀಗೆಯೇ ವಂಚಿಸಿ ದೋಚುವ ಪ್ರಕರಣಗಳು ನಡೆಯುತ್ತವೆ. ವೀಡಿಯೊ ಕಾಲ್ ಮಾಡಿ ನಿಮ್ಮ ಚಿತ್ರ ದಾಖಲಿಸಿಕೊಳ್ಳುತ್ತಾರೆ. ಬಳಿಕ ಬ್ಲ್ಯಾಕ್ ಮೇಲ್ ಮಾಡುವುದು ಶುರುವಾಗುತ್ತದೆ.
ತಮ್ಮ ಬಳಿ ಇರುವ ಹಣದ ಮತ್ತದರ ಪ್ರಾಮಾಣಿಕ ಮೂಲದ ಬಗ್ಗೆ ನಿಖರವಾಗಿ ಗೊತ್ತಿದ್ದೂ ಈ.ಡಿ., ಸಿಬಿಐ ಎಂದು ಕೇಳಿಸಿಕೊಂಡ ತಕ್ಷಣ ಜನ ಭಯಗೊಳ್ಳುವ ಮಟ್ಟಿಗೆ ಈ ತನಿಖಾ ಏಜೆನ್ಸಿಗಳ ಭಯ ಸಮಾಜವನ್ನು, ಜನರನ್ನು ಆವರಿಸಿಬಿಟ್ಟಿದೆಯೇ?
ಡಾ.ಅಭಯ್ ನಾರಾಯಣ್ ರಾಯ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿ ಕೂಡ, ಕ್ರಿಮಿನಲ್ ವಿಚಾರಣೆಯಿಂದ ಬಚಾವಾಗಬೇಕು ಎಂದಾದರೆ ನಿಮ್ಮ ಖಾತೆಯಲ್ಲಿರುವ ಅಷ್ಟೂ ಹಣವನ್ನು ನಮ್ಮ ಖಾತೆಗೆ ವರ್ಗಾಯಿಸಿ ಎಂದು ಬೆದರಿಸಿದ್ದಾನೆ. ಇಲ್ಲದೆ ಹೋದರೆ ಅರೆಸ್ಟ್ ವಾರಂಟ್ ಹೊರಡಿಸಲಾಗುತ್ತದೆ, ಬಂಧಿಸಬೇಕಾಗುತ್ತದೆ ಎಂದೂ ಬೆದರಿಕೆಯೊಡ್ಡಿದ್ದಾನೆ.
ಆ ಹಿರಿಯ ಡಾಕ್ಟರ್ ಅದೆಷ್ಟು ಹೆದರಿಹೋಗಿದ್ದರೆಂದರೆ, ಅರೆಸ್ಟ್ ಆಗುವುದರಿಂದ ಪಾರಾದರೆ ಸಾಕು ಎಂದುಕೊಂಡು ತಮ್ಮ ಖಾತೆಯಿಂದ 4 ಕೋಟಿಗೂ ಹೆಚ್ಚು ಹಣವನ್ನು ಆ ವ್ಯಕ್ತಿ ಹೇಳಿದ ಖಾತೆಗೆ ವರ್ಗಾಯಿಸಿಬಿಟ್ಟಿದ್ದಾರೆ.
ಒಮ್ಮೆಯಲ್ಲ, ಬೇರೆ ಬೇರೆ ದಿನ ಹೀಗೆ ಆ ಖಾತೆಗೆ ಹಣ ವರ್ಗಾಯಿಸಿದ್ದಾರೆ. 6 ದಿನಗಳಲ್ಲಿ ಅವರು ಬೇರೆ ಬೇರೆ 130 ಖಾತೆಗಳಿಗೆ ಹಣ ವರ್ಗಾಯಿಸಬೇಕಾಯಿತು.
ಹೇಗಿದೆ ನೋಡಿ ಈ ವಿಪರ್ಯಾಸ ?
ನಾವಿಲ್ಲಿ ಒಂದು ಬ್ಯಾಂಕ್ ಖಾತೆ ಸಂಬಾಳಿಸಲು ಕಾಲಕಾಲಕ್ಕೆ ಕೆವೈಸಿ ಕೊಡುವುದರಲ್ಲೇ ಸುಸ್ತಾಗುತ್ತಿರುತ್ತೇವೆ. ಆದರೆ ಎಲ್ಲೋ ಕೂತು ನಮ್ಮನ್ನು ವಂಚಿಸುವವರು 130 ಖಾತೆಗಳನ್ನು ಇಟ್ಟುಕೊಂಡು ಹೀಗೆ ವಂಚಿಸಿ ದೋಚಿದ ಹಣವನ್ನು ಡಿಜಿಟಲ್ ಆಗಿಯೇ ವರ್ಗಾಯಿಸಿಕೊಂಡು ಮಜಾ ಉಡಾಯಿಸುತ್ತಾರೆ.
ಹೆದರಿಕೊಂಡಿದ್ದ ಡಾ. ಅಭಯ್ ನಾರಾಯಣ್ ರಾಯ್ ಸ್ವಲ್ಪ ಸಾವರಿಸಿಕೊಳ್ಳುವ ಹೊತ್ತಿಗೆ ಅವರ ಖಾತೆಯಿಂದ 4 ಕೋಟಿಗೂ ಹೆಚ್ಚು ಹಣ ಕಂಡವರ ಪಾಲಾಗಿತ್ತು. ಆರೇ ದಿನಗಳಲ್ಲಿ ಅವರು ಜೀವನದಲ್ಲಿ ಗಳಿಸಿದ್ದ ಹಣದ ಬಹುದೊಡ್ಡ ಪಾಲು ಛೂ ಮಂತರ್ ಥರ ಮಾಯವಾಗಿತ್ತು. ನಾನು ಹೆದರಿಹೋಗಿದ್ದೆ ಎಂದು ಆಮೇಲೆ ಅವರು ಹೇಳಿಕೊಂಡಿದ್ದಾರೆ.
ಯಾವ ಫೋನ್‌ನಿಂದ ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡಿದ್ದವನ ಕಾಲ್ ಬಂದಿತ್ತೋ ಆ ಫೋನ್ ಬಂದ್ ಆಗಿತ್ತು. ಆ ವೈದ್ಯರೇಕೆ ಯಾವ ತಪ್ಪೂ ಮಾಡದೆಯೂ ಕಂಗಾಲಾಗಿ ಹೋದರು? ಯಾವುದರ ಬಗ್ಗೆ ಜನಸಾಮಾನ್ಯರೆಲ್ಲ ಹೀಗೆ ಹೆದರುವಂತಾಗಿದೆ?
ಕಾನೂನು ಮತ್ತು ನ್ಯಾಯ ವ್ಯವಸ್ಥೆ ಕುರಿತ ತಿಳುವಳಿಕೆಯ ಕೊರತೆಯೂ ಈ ಭಯದ ಹಿಂದೆ ಇದೆಯೇ?
ಮಾಧ್ಯಮ ಸಂಸ್ಥೆಯೊಂದರ ಸಂಪಾದಕನಿಂದ ಹಿಡಿದು ಸಂಸದನವರೆಗೆ ಈ.ಡಿ. ಅಥವಾ ಸಿಬಿಐ ಯಾರನ್ನೂ ಬೇಕಾದರೂ ಯಾವುದೋ ನೆಪದಲ್ಲಿ ಬಂಧಿಸಬಲ್ಲವು.ಸಂಸದರಿಗಾದರೂ ಪಕ್ಷ ಬದಲಿಸಿ ಬಚಾವಾಗುವ ದಾರಿ ಇದ್ದೀತು. ಆದರೆ ಜನಸಾಮಾನ್ಯರಿಗೆ ಯಾವ ದಾರಿ? ಕಡೆಗೆ ಅವರು ಭಯಬಿದ್ದು ತಮ್ಮ ಖಾತೆಯಲ್ಲಿರುವ ಹಣವನ್ನೇ ವರ್ಗಾಯಿಸಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆಯೆ?
ಈ.ಡಿ., ಸಿಬಿಐ ಯಾವ ಭಯವನ್ನು ಈ ಸಮಾಜದಲ್ಲಿ, ಜನರಲ್ಲಿ ಹುಟ್ಟುಹಾಕಿವೆಯೋ ಅದನ್ನೇ ವಂಚಕರೀಗ ತಮ್ಮ ಆಟವಾಡಲು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಜನರನ್ನು ಭಯಗೊಳಿಸುತ್ತಿದ್ದಾರೆ. ಅವರನ್ನು ವಂಚಿಸಿ ತಮ್ಮ ಖಾತೆ ತುಂಬಿಸಿಕೊಳ್ಳುತ್ತಿದ್ದಾರೆ.
ನ್ಯಾಯದ ಬಗೆಗಿನ ಭರವಸೆಯೂ ಕಮ್ಮಿಯಾಗಿರುವ ಹೊತ್ತಿನಲ್ಲಿ ವಂಚಕರ ಭಯದಲ್ಲಿ ಜನ ಇನ್ನೂ ಹೆಚ್ಚಾಗಿ ಬೀಳುವಂತಾಗಿದ್ದರೆ ಆಶ್ಚರ್ಯವೇನಿಲ್ಲ. ಯಾಕೆಂದರೆ ಸರಕಾರವೇ ಕಾನೂನನ್ನು ಅಸ್ತ್ರದಂತೆ ಬಳಸುತ್ತಿದೆ. ಯಾವುದೋ ಆರೋಪವನ್ನು ಹೊರಿಸಿ ಜನರನ್ನು ಜೈಲಿಗೆ ತಳ್ಳುವುದು ನಡೆಯುತ್ತಿದೆ, ಕಡೆಗೆ ನ್ಯಾಯವೇ ಸಿಗದಂತೆ ಸತಾಯಿಸುವ ಆಟಗಳನ್ನು ಆಡುತ್ತದೆ ಎಂದಾದ ಮೇಲೆ ಜನರು ಭಯಗೊಳ್ಳದೆ ಇರಲು ಹೇಗೆ ಸಾಧ್ಯ? ಎಂದು ಕೇಳುತ್ತಾರೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್
ಕಪ್ಪುಹಣವುಳ್ಳವರು ಭಯಬೀಳುವುದಿಲ್ಲ. ಆದರೆ ಜೀವನವಿಡೀ ಬೆವರು ಸುರಿಸಿ ಅಷ್ಟೋ ಇಷ್ಟೋ ಕೂಡಿಟ್ಟುಕೊಂಡವರೇ ಭಯಬಿದ್ದು ಕಡೆಗೆ ಅದನ್ನೂ ಯಾವುದೋ ವಂಚಕರಿಗಾಗಿ ಕಳೆದುಕೊಳ್ಳುವುದು ನಿಜಕ್ಕೂ ಘೋರ. ಇವೆಲ್ಲವನ್ನೂ ಗಮನಿಸುವಾಗ ಗೊತ್ತಾಗುವುದು ಏನೆಂದರೆ, ಇಡೀ ದೇಶವೇ ಈ.ಡಿ., ಸಿಬಿಐ, ಐಟಿಗಳ ಭಯದ ಭೂತಕ್ಕೆ ಕಂಗೆಡುತ್ತಿದೆ.
ಯಾಕೆಂದರೆ ಇಲ್ಲಿ ಯಾರನ್ನೂ ಯಾವುದಾದರೂ ನೆಪದಲ್ಲಿ ಬಂಧಿಸಿ, ಜೈಲಿನಲ್ಲಿಡಬಹುದಾಗಿದೆ. ಇದು ಈ ದೇಶದ ಕಾನೂನು ವ್ಯವಸ್ಥೆಯ ಅಸಲೀ ಸ್ವರೂಪವಾಗಿದೆ. ಹಾಗಿರುವಾಗ, ಇಂಥ ವಂಚಕರ ಕರೆ ಬಂದು ಬಂಧನದ ಬೆದರಿಕೆ ಒಡ್ಡಿದಾಗ, ಅದು ಮುಗಿಯದ ಕಾನೂನು ಹೋರಾಟದಲ್ಲಿ ಸಿಕ್ಕಿಹಾಕಿಕೊಳ್ಳುವ ಭಯವನ್ನು ಮೂಡಿಸದೇ ಇರುವುದಿಲ್ಲ.
ಡಿಜಿಟಲ್ ಅರೆಸ್ಟ್ ಎಂಬುದಕ್ಕೆ ಕಾನೂನಿನಲ್ಲಿ ಅವ ಕಾಶವೇ ಇಲ್ಲ. ವಂಚಕರಿಗೆ ಒಬ್ಬ ವ್ಯಕ್ತಿಯ ವಿವರಗಳು, ಆತನ ಬಳಿ ಇರಬಹುದಾದ ಹಣದ ಅಂದಾಜು ಇವೆಲ್ಲ ಹೇಗೆ ಗೊತ್ತಾಗುತ್ತದೆ ಎಂಬುದೇ ಒಂದು ಪ್ರಶ್ನೆ. ಹೀಗೆ ವಂಚಿಸುವವರ ಸಾವಿರಕ್ಕೂ ಹೆಚ್ಚು ಸ್ಕೈಪ್ ಐಡಿಗಳನ್ನು ಸರಕಾರವೇ ಬ್ಲಾಕ್ ಮಾಡಿದೆ. ಆದರೆ ಸೈಬರ್ ಅರೆಸ್ಟ್ ಎನ್ನುವ ವಂಚನೆ ನಿಲ್ಲುತ್ತಲೇ ಇಲ್ಲ.
ಅನೇಕ ರೀತಿಯಲ್ಲಿ ಇದರ ಬಗ್ಗೆ ಎಚ್ಚರಿಸುವ ಕೆಲಸಗಳು ನಡೆದಿವೆ. ಹಾಗಿದ್ದೂ ವಂಚನೆಗೆ ಬಲಿಯಾಗುವುದು ಮಾತ್ರ ನಿಂತಿಲ್ಲ.
ಕಳೆದ ತಿಂಗಳಷ್ಟೇ ಚಂಡಿಗಡದಲ್ಲಿನ ಮಹಿಳೆಯೊಬ್ಬರನ್ನು ಹೀಗೆಯೇ ವಂಚಕ ಜಾಲ ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿ, ಭಯಬೀಳಿಸಿ, 50 ಲಕ್ಷ ರೂ. ಲೂಟಿ ಮಾಡಿದೆ.
ಇದೇ ತಿಂಗಳಲ್ಲಿ ಆಗ್ರಾದ ಹಿರಿಯ ವಕೀಲರೊಬ್ಬರನ್ನು ಡಿಜಿಟಲ್ ಅರೆಸ್ಟ್‌ಗೆ ಒಳಪಡಿಸಿದ್ದ ವಂಚಕರು 48 ಗಂಟೆ ವೀಡಿಯೊ ಕಾಲ್ ಮೂಲಕ ಪೀಡಿಸಿದ್ದರು. ಆದರೆ ಇದು ವಂಚಕರ ಕರಾಮತ್ತೆಂದು ತಿಳಿದ ವಕೀಲರು ಹಣ ವರ್ಗಾವಣೆ ಮಾಡಲಿಲ್ಲ.
ಒಮ್ಮೆ ಹಣ ಈ ವಂಚಕರ ಖಾತೆಗೆ ಹೋಯಿತೆಂದರೆ ಅದರ ಕಥೆ ಮುಗಿಯಿತು ಎಂದೇ ಲೆಕ್ಕ. ಅದು ವಾಪಸ್ ಬರುವ ಸಾಧ್ಯತೆ ತೀರಾ ಕಡಿಮೆ.
ಪಾಟ್ನಾ ಪತ್ರಕರ್ತ ಸಂತೋಷ್ ಸಿಂಗ್ ಇಂಥ ವಂಚಕರ ಜಾಲಕ್ಕೆ ಬಲಿಯಾಗಿ, ಕಡೆಗೆ ಕಳೆದುಕೊಂಡ ಹಣ ವಾಪಸ್ ಪಡೆಯಲು ಮಾಡಿದ ಸಾಹಸ ಅಂತಿಂಥದ್ದಲ್ಲ. ಅವರ ಗಳಿಕೆಯೆಲ್ಲ ವಂಚಕರ ಪಾಲಾಗಿತ್ತು. ಅವರು ಕಳೆದುಕೊಂಡದ್ದನ್ನು ಮರಳಿ ಪಡೆಯುವ ಯತ್ನದಲ್ಲಿ ದಿಲ್ಲಿಯವರೆಗೂ ಹೋಗಬೇಕಾಯಿತು. ಅಪರಾಧ ವರದಿಗಾರಿಕೆಯಲ್ಲಿನ ಅವರ ಅನುಭವ ಕೆಲಸಕ್ಕೆ ಬಂತು. ಹಾಗಾಗಿ ಕಡೆಗೂ ಹಣ ಮರಳಿ ಸಿಕ್ಕಿತು. ಇದು ಎಲ್ಲರಿಗೂ ಸಾಧ್ಯವಾಗುವಂಥದ್ದಲ್ಲ ಮತ್ತು ಸರಳವೂ ಅಲ್ಲ.
ಯಾವುದೋ ನಕಲಿ ಈ.ಡಿ., ಸಿಬಿಐ ಮಾಡುವ ವೀಡಿಯೊ ಕಾಲ್ ಮೂಲಕ ವಿಚಾರಣೆ ಹೆಸರಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಳ್ಳ ಬೇಕಾದ ಸ್ಥಿತಿಯಿದೆ. ನಿಮ್ಮ ಹೆಸರಲ್ಲಿ ಸಿಕ್ಕಿರುವ ಪ್ಯಾಕೆಟ್ ಒಂದರಲ್ಲಿ ಡ್ರಗ್ ಸಿಕ್ಕಿದೆ ಎಂದು ಬೆದರಿಸುವುದು ಮತ್ತೊಂದು ಬಗೆ. ಹೀಗೆ ವಂಚಕರು ಬೆದರಿಸಲು ಬಳಸುವ ಅಸ್ತ್ರಗಳು ಹಲವು.
ಗುರ್ಗಾಂವ್ ಮೂಲದ ಐಟಿ ಇಂಜಿನಿಯರ್ ಒಬ್ಬರನ್ನು ಹೀಗೆಯೇ ನಕಲಿ ಪೊಲೀಸ್ ಅಧಿಕಾರಿ ಎರಡು ಗಂಟೆಗಳ ಕಾಲ ಸ್ಕೈಪ್ ಕಾಲ್ ಮೇಲೆ ಇರಿಸಿ ಬೆದರಿಸಿ, ಕಡೆಗೆ 7 ಲಕ್ಷ ರೂ. ವರ್ಗಾಯಿಸಲು ಹೇಳಿದ್ದ.
ಪತ್ರಕರ್ತ ರವೀಶ್ ಕುಮಾರ್ ಅವರು ಈ ಎಲ್ಲ ವಿವರಗಳನ್ನು ಕೊಡುತ್ತ, ಜನರು ಹೇಗೆ ಎಚ್ಚರ ವಹಿಸಬೇಕು ಎಂಬುದನ್ನು ಹೇಳುತ್ತಾರೆ.
ಮೊದಲನೆಯದಾಗಿ ಇಂಥ ಕರೆಗಳು ಬಂದರೆ ಭಯಬೀಳಬೇಡಿ. ಅವರು ಕೇಳಿದ ವಿವರಗಳನ್ನು ಕೊಡಬೇಡಿ. ಒಟಿಪಿ ಕೊಡಲೇಬೇಡಿ. ಬೆಂಗಳೂರು ಪೊಲೀಸರೂ ಈ ಬಗ್ಗೆ ವಿವರವಾದ ಮಾಹಿತಿಗಳನ್ನು ಬಿಡುಗಡೆ ಮಾಡಿದ್ದಾರೆ.
ಡಿಜಿಟಲ್ ಅರೆಸ್ಟ್ ಎನ್ನುವುದು ಏನೂ ಅಲ್ಲ, ಅದರಿಂದ ಯಾವ ತೊಂದರೆಯೂ ಆಗುವುದಿಲ್ಲ. ಕಾನೂನಿನಲ್ಲಿ ಅಂಥ ಯಾವುದೇ ಅವಕಾಶ ಇಲ್ಲ. ಯಾರೇ ತಾನು ಪೊಲೀಸ್ ಅಧಿಕಾರಿ ಅಥವಾ ಇನ್ನಾವುದೋ ಏಜೆನ್ಸಿಗೆ ಸಂಬಂಧಿಸಿದ ವ್ಯಕ್ತಿ ಎಂದು ಹೇಳಿಕೊಂಡು ವೀಡಿಯೊ ಕರೆ ಮಾಡಿ, ಡಿಜಿಟಲ್ ಹೌಸ್ ಅರೆಸ್ಟ್ ಗೆ ಒಳಪಟ್ಟಿದ್ದೀರಿ ಎಂದರೆ, ಅದು ಏನೂ ಅಲ್ಲ. ಹಾಗೆ ಯಾರನ್ನೂ ಡಿಜಿಟಲ್ ಹೌಸ್ ಅರೆಸ್ಟ್‌ನಲ್ಲಿ ಇಡುವ ಅವಕಾಶವೇ ಇಲ್ಲ. ಹಾಗಾಗಿ ಜನತೆ ಎಚ್ಚರವಾಗಿದ್ದು, ಅಂಥ ಯಾವುದೇ ವಂಚನೆಗೆ ಬಲಿಯಾಗಬಾರದು.
ಪೊಲೀಸರು ಅಭಿಯಾನ ನಡೆಸುತ್ತಲೇ ಇರುತ್ತಾರೆ.
ಆದರೆ ವಂಚನೆ ಮಾತ್ರ ನಿಲ್ಲುತ್ತಿಲ್ಲ.
ಮುಂಬೈ ಒಂದರಲ್ಲಿಯೇ 2021-24ರ ಅವಧಿಯಲ್ಲಿ 2,81,019 ಸೈಬರ್ ಕ್ರೈಂ ಕೇಸ್‌ಗಳು ದಾಖಲಾಗಿವೆ ಎಂದು ವರದಿಯೊಂದು ಹೇಳುತ್ತದೆ ಮತ್ತು ಈ ಪ್ರಕರಣಗಳಲ್ಲಿ 3,324.9 ಕೋಟಿ ರೂ.ಗಳನ್ನು ವಂಚಕರು ದೋಚಿದ್ದಾರೆ.ಇದರಲ್ಲಿ 358.77 ಕೋಟಿ ರೂ. ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂದರೆ 3 ಸಾವಿರ ಕೋಟಿ ರೂ. ಮರಳಿ ಸಿಗದಂತೆ ಲೂಟಿಯಾಗಿ ಹೋಗಿದೆ. ಇಷ್ಟೊಂದು ಹಣ ಯಾರ ಬಳಿ ಹೋಗಿ ಸೇರುತ್ತದೆ?
ಆನ್‌ಲೈನ್ ಸ್ಟಾಕ್ ಮಾರ್ಕೆಟ್ ಹಗರಣ ಎಂಬುದು ವಂಚನೆಯ ಮತ್ತೊಂದು ಬಾಗಿಲು. ನಿಮ್ಮನ್ನು ಯಾವ ಆ್ಯಪ್ ಮೂಲಕ ಹಣ ಹಾಕಲು ಹೇಳಲಾಗುತ್ತದೆಯೋ ಅದಕ್ಕೆ ನೀವು ಹಣ ಹಾಕಿದ ಮೇಲೆ ಅದಕ್ಕೆ ಅಕ್ಸೆಸ್ ಆಗುವ ಅವಕಾಶವೇ ನಿಮಗೆ ಇರುವುದಿಲ್ಲ. ವಾಟ್ಸ್‌ಆ್ಯಪ್, ಫೇಸ್‌ಬುಕ್, ಟೆಲಿಗ್ರಾಂ ಮೂಲಕ ಈ ಹಗರಣ ನಡೆಯುತ್ತದೆ.
ಹೀಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಹೋಗಿ ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಕಳೆದುಕೊಂಡವರಿದ್ದಾರೆ.
ಆಗಸ್ಟ್ 7ರಂದು ಮಿಡ್ ಡೇ ಪ್ರಕಟಿಸಿರುವ ವರದಿ ಪ್ರಕಾರ, ಸೈಬರ್ ವಂಚನೆ ಪ್ರಕರಣಗಳಲ್ಲಿ 2022ರಲ್ಲಿ 32 ಕೋಟಿ ರೂ. ಹಾಗೂ 2023ರಲ್ಲಿ 753 ಕೋಟಿ ರೂ. ವಂಚನೆಯಾಗಿದೆ. ಅಂದರೆ 23 ಪಟ್ಟು ಹೆಚ್ಚಾಗಿದೆ.
ಈ ವರ್ಷ ಇಷ್ಟು ಹೊತ್ತಿಗಾಗಲೇ, ಅಂದರೆ 7 ತಿಂಗಳಲ್ಲೇ 700 ಕೋಟಿ ರೂ.ಗಳ ಸೈಬರ್ ವಂಚನೆ ನಡೆದುಹೋಗಿದೆ.
ಹಣ ವರ್ಗಾಯಿಸಲು ಪಬ್ಲಿಕ್ ವೈಫೈ ಬಳಸದಂತೆ ಆರ್‌ಬಿಐ ಕೂಡ ಎಚ್ಚರಿಸುತ್ತಲೇ ಇರುತ್ತದೆ. ರೈಲೆ ನಿಲ್ದಾಣ, ಏರ್‌ಪೋರ್ಟ್‌ಗಳಲ್ಲಿನ ಸರಕಾರವೇ ಒದಗಿಸುವ ಉಚಿತ ವೈಫೈ ಸೌಲಭ್ಯ ನಿಮ್ಮ ಬ್ಯಾಂಕ್ ಖಾತೆಗೇ ಕನ್ನ ಹಾಕಲು ಬಳಕೆಯಾಗುವ ಅಪಾಯವಿದೆ. ಪಬ್ಲಿಕ್ ಪೋರ್ಟ್‌ನಲ್ಲಿ ಫೋನ್ ಚಾರ್ಜ್ ಕೂಡ ಮಾಡಕೂಡದು ಎಂದೇ ಆರ್‌ಬಿಐ ಎಚ್ಚರಿಸುತ್ತದೆ.
ಕಾಂಬೋಡಿಯಾ, ಮ್ಯಾನ್ಮಾರ್, ಲಾವೋಸ್ ಇಂಥ ಕಡೆಗಳಿಂದ ಸೈಬರ್ ವಂಚನೆ ನಡೆಯುತ್ತದೆ ಎಂದು ಪರಿಣಿತರು ಹೇಳುತ್ತಾರೆ.
ಪ್ರತಿಯೊಂದು ಬ್ಯಾಂಕ್ ಇಂಥ ವಂಚಕ ಜಾಲದ ಮೇಲೆ ಕಣ್ಣಿಡುವುದಕ್ಕಾಗಿಯೇ ಒಂದು ಸಮಿತಿಯನ್ನು ಹೊಂದಿರಬೇಕೆಂದು ಆರ್‌ಬಿಐ ಹೇಳುತ್ತದೆ. ಆದರೆ ಅಂಥದೊಂದು ಸಮಿತಿ ಇದೆಯೆ? ಅದು ಕೆಲಸ ಮಾಡುತ್ತಿದೆಯೆ?
ಹೇಗೆ ಸೈಬರ್ ವಂಚನೆ ಪ್ರಕರಣಗಳು ಏರುತ್ತಲೇ ಬಂದಿವೆ ಎಂಬುದನ್ನು ಗಮನಿಸಬೇಕು.
2019ರಲ್ಲಿ 26,049 ದೂರುಗಳು ದಾಖಲಾಗಿದ್ದವು.
2020ರಲ್ಲಿ ಅದು ಇದ್ದಕ್ಕಿದ್ದಂತೆ 2,57,000 ದೂರುಗಳಿಗೆ ಏರುತ್ತದೆ.
2021ರಲ್ಲಿ 4,52,000 ದೂರುಗಳು ದಾಖಲಾಗುತ್ತವೆ.
2022ರಲ್ಲಿ 9,66,000 ದೂರುಗಳಾಗುತ್ತವೆ.
2023ರಲ್ಲಿ 15 ಲಕ್ಷ ದೂರುಗಳು ದಾಖಲಾಗುತ್ತವೆ.
2024ರಲ್ಲಿ ಎಪ್ರಿಲ್ 30ರವರೆಗೆ ದಾಖಲಾಗಿರುವ ದೂರುಗಳೇ 7,40,000 ಮುಟ್ಟಿವೆ.
ಜನಸಾಮಾನ್ಯರ ಹಣ ಹೀಗೆ ಸೈಬರ್ ವಂಚನೆ ಜಾಲದ ಪಾಲಾಗುತ್ತಿದ್ದರೆ ಅದರ ಹೊಣೆಗಾರಿಕೆಯೂ ಹಣ ಕಳೆದುಕೊಂಡವರ ಮೇಲೆಯೇ ಬರುತ್ತದೆ. ಒಟಿಪಿ ಕೊಟ್ಟಿದ್ದೇಕೆ ಎಂದೇ ಕೇಳಲಾಗುತ್ತದೆ.
ಇವತ್ತಿನ ರಾಜಕೀಯ ಹೀಗೆ ಜನಸಾಮಾನ್ಯರನ್ನು ಭಯದಲ್ಲಿ ಬೀಳಿಸಿದೆ. ಆ ಭಯ ಅವರನ್ನು ಸೈಬರ್ ವಂಚನೆ ಜಾಲದ ಬಲಿಪಶುಗಳನ್ನಾಗಿ ಮಾಡುತ್ತಿದೆ. ಜನಸಾಮಾನ್ಯರ ಈ ಭಯವನ್ನು ವಂಚಕರು ದುರ್ಬಳಕೆ ಮಾಡಿಕೊಂಡು ದುಡ್ಡು ದೋಚುತ್ತಿದ್ದಾರೆ ಎನ್ನುತ್ತಾರೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್
ಇಂಥ ಕರೆಗಳು ಬಂದಾಗ, ಬೆದರಿಸಿದಾಗ, 1930 ನಂಬರ್‌ಗೆ ಕರೆ ಮಾಡಿ ದೂರು ದಾಖಲಿಸಬೇಕು. ಭಯಪಡದೇ ಇರುವುದು ಮುಖ್ಯ.
ಸೈಬರ್ ವಂಚನೆ ವಿರುದ್ಧ ಸರಕಾರ ಈವರೆಗೆ ಕೈಗೊಂಡಿರುವ ಕ್ರಮಗಳು ಸಾಕಷ್ಟು ಮಟ್ಟಿಗಿಲ್ಲ. 2023ರಲ್ಲಿ ಸರಕಾರ 70 ಲಕ್ಷ ಮೊಬೈಲ್ ನಂಬರುಗಳನ್ನು ಬ್ಲಾಕ್ ಮಾಡಿದೆ. ಅಷ್ಟಾದ ಮೇಲೆಯೂ ಸೈಬರ್ ವಂಚನೆಯನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಭಯಬೀಳುವವರ ದುಡ್ಡನ್ನು ವಂಚಕರು ದೋಚುವುದು ತಪ್ಪುತ್ತಿಲ್ಲ.