ಅಮೆರಿಕದ ಯುವತಿ ಸಿಂಥಿಯಾ ಫೆರಾರ್ ಭಾರತದಲ್ಲಿ ನಡೆಸಿದ ಅಕ್ಷರ ಕ್ರಾಂತಿ
ಜ್ಯೋತಿರಾವ್ ಪುಲೆ, ಸಾವಿತ್ರಿಬಾಯಿ ಮತ್ತು ಫಾತಿಮಾ ಶೇಕ್ ಅವರಿಗೆ ಗುರು ಮತ್ತು ಮಾರ್ಗದರ್ಶಕಿಯಾಗಿದ್ದ ಸಿಂಥಿಯಾ ಫೆರಾರ್
ಮೊನ್ನೆ ಜನವರಿ 24ಕ್ಕೆ ಸರಿಯಾಗಿ 162 ವರ್ಷದ ಹಿಂದೆ ಅಗಲಿದ ಸಿಂಥಿಯಾ ಫೆರಾರ್ ಭಾರತದಲ್ಲಿ ಹುಡುಗಿಯರ ಶಿಕ್ಷಣದ ಬೀಜ ಬಿತ್ತಿದವರು. ಅಮೆರಿಕದ ಮಾರ್ಲಬರೋ ನ್ಯೂ ಹ್ಯಾಂಪ್ ಶೈರ್‌ನಲ್ಲಿ ಎಪ್ರಿಲ್ 20, 1795ರಲ್ಲಿ ಹುಟ್ಟಿದ ಸಿಂಥಿಯಾ ಅಮೆರಿಕನ್ ಮಿಷನರಿಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸುತ್ತಾರೆ. ಬೇರೆಯ ವಸಾಹತುಗಳಿಗೆ ಹೋಗಿ ಸಮಾಜ ಸುಧಾರಣೆ ಮಾಡಬೇಕೆಂಬ ಕನಸು ಕಾಣುತ್ತಾ ಭಾರತಕ್ಕೆ ಬರಲು ಆಕೆ ಮಿಷನರಿಯಲ್ಲಿ ವಿನಂತಿಸಿಕೊಳ್ಳುತ್ತಾರೆ. ಆಕೆ ಮದುವೆಯಾಗದಿರುವುದು ಇದಕ್ಕೆ ಅಡ್ಡಿಯಾಗುತ್ತದೆ. ಕಾರಣ ಆ ತನಕ ಮಿಷನರಿಗಳ ವಿಧವೆ ಹೆಂಡತಿಯರನ್ನು ಮಾತ್ರ ಹೊರದೇಶಕ್ಕೆ ಕಳಿಸುವ ಸಂಪ್ರದಾಯವಿರುತ್ತದೆ. ಮೊದಲ ಬಾರಿಗೆ ಈ ಸಂಪ್ರದಾಯವನ್ನು ಮುರಿದು ಅಮೆರಿಕನ್ ಮರಾಠಿ ಮಿಷನರಿಗೆ ಮೊದಲ ಅವಿವಾಹಿತ ಮಹಿಳೆಯಾಗಿ 32 ವರ್ಷದ ಸಿಂಥಿಯಾ ಅವರನ್ನು ಭಾರತಕ್ಕೆ ಕಳಿಸಲಾಗುತ್ತದೆ. ಡಿಸೆಂಬರ್ 29, 1827ರಂದು ಸಿಂಥಿಯಾ ಮುಂಬೈಗೆ ಬರುತ್ತಾರೆ.
ಭಾರತದಲ್ಲಿ ಹುಡುಗಿಯರ ಶಿಕ್ಷಣದ ಬಗೆಗಿನ ಅಸಡ್ಡೆಯನ್ನು ಕಂಡು ಇಲ್ಲಿನ ವ್ಯವಸ್ಥೆಯನ್ನು ಅರಿಯಲು ಪ್ರಯತ್ನಿಸುತ್ತಾರೆ. ಸ್ವಲ್ಪಕಾಲ ಕಳೆದ ಮೇಲೆ ಇಲ್ಲಿ ಗಂಡು-ಹೆಣ್ಣು ಕೂಡಿ ಓದುವ ಶಾಲೆಗಳಿಗೆ ಹುಡುಗಿಯರನ್ನು ಕಳಿಸುವುದಿಲ್ಲ ಎಂಬುದು ಅರಿವಿಗೆ ಬರುತ್ತದೆ. ಈಗಾಗಲೇ ಇದ್ದ ಬಾಲಕಿಯರ ಸ್ಕೂಲಿಗೂ ಹೆಚ್ಚಿನ ಬಾಲಕಿಯರು ಬರದೆ ಇರುವುದನ್ನು ಗಮನಿಸುತ್ತಾರೆ. ಇದರಿಂದಾಗಿ ಬಾಲಕಿಯರ ಶಾಲೆಯ ಬಗೆಗೆ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಮತ್ತಷ್ಟು ಬಾಲಕಿಯರ ಪ್ರತ್ಯೇಕ ಶಾಲೆಯನ್ನು ತೆರೆಯುವ ಆಲೋಚನೆ ಮಾಡುತ್ತಾರೆ. ಫೆರಾರ್ ಬರುವ ಮುಂಚೆಯೇ ಮಾರ್ಚ್ 1824ರಲ್ಲಿ ಸ್ಥಳೀಯ ಗಂಗೂಬಾಯಿ ಎನ್ನುವ ಶಿಕ್ಷಕಿಯ ಮೂಲಕ ಅಮೆರಿಕನ್ ಮರಾಠಿ ಮಿಷನರಿ ಮೊದಲ ಶಾಲೆಯನ್ನು ತೆರೆಯಲಾಗುತ್ತದೆ. ಅಮೆರಿಕನ್ ಮಿಷನರಿ ಶಾಲೆಯೊಂದರಲ್ಲಿ ಮೊದಲ ದೇಸಿ ಶಿಕ್ಷಕಿಯಾಗಿ ಕೆಲಸ ಮಾಡಿದವರು ಗಂಗೂಬಾಯಿ. ಆದರೆ ಕ್ಷಾಮಕ್ಕೆ ತುತ್ತಾಗಿ ಅವರು ಬೇಗನೆ ಸಾವನ್ನಪ್ಪುತ್ತಾರೆ. ಈ ಮಧ್ಯೆ ಪುರುಷ ಮಿಷನರಿಗಳ ಸಹಾಯದಿಂದ ಮುಂಬೈನಲ್ಲಿ 1826ರ ತನಕ ಈ ಶಾಲೆಗಳು ಅಷ್ಟೇನು ಪ್ರಗತಿ ಕಾಣದೆ ನಡೆಯುತ್ತವೆ. 1827ರಲ್ಲಿ ಸಿಂಥಿಯಾ ಈ ಹುಡುಗಿಯರ ಶಾಲೆಯ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. 1829ರ ಹೊತ್ತಿಗೆ 4 ಬಾಲಕಿಯರ ಹೊಸ ಶಾಲೆಗಳು ತೆರೆಯುತ್ತವೆ. ಇದರಿಂದಾಗಿ 400ಕ್ಕೂ ಹೆಚ್ಚು ಭಾರತೀಯ ಹುಡುಗಿಯರು ಕಲಿಯತೊಡಗುತ್ತಾರೆ. ಮುಂಬೈನ ಶಾಲೆಗಳನ್ನು ಬೇರೊಬ್ಬರಿಗೆ ಜವಾಬ್ದಾರಿ ವಹಿಸಿ ನಂತರ ಸಿಂಥಿಯಾ ಅಹಮದ್ ನಗರಕ್ಕೆ ಬರುತ್ತಾರೆ. ಇಲ್ಲಿಯೂ ಬಾಲಕಿಯರ ಶಾಲೆಗಳನ್ನು ತೆರೆಯುತ್ತಾರೆ.
1848ರಲ್ಲಿ ಜ್ಯೋತಿರಾವ್ ಪುಲೆ ಸಿಂಥಿಯಾ ಫೆರಾರ್ ಅವರನ್ನು ಭೇಟಿಯಾಗುತ್ತಾರೆ. ಇವರು ಆರಂಭಿಸಿದ ಶಾಲೆಗಳನ್ನು ನೋಡುತ್ತಾರೆ. ಸಿಂಥಿಯಾ ಬಾಲಕಿಯರ ಶಾಲೆಗಳ ಮಹತ್ವವನ್ನು ಜ್ಯೋತಿಬಾಗೆ ವಿವರಿಸುತ್ತಾರೆ. ಸಾಮಾಜಿಕ ಸುಧಾರಣೆಯಲ್ಲಿ ಶಾಲೆಗಳ ಮಹತ್ವವನ್ನು ತಿಳಿಸುತ್ತಾರೆ. ಇದರಿಂದ ಪ್ರೇರಣೆಗೊಂಡ ಜ್ಯೋತಿಬಾ ಸಾವಿತ್ರಿಬಾಯಿ ಅವರನ್ನು ಕೆಲಕಾಲ ಸಿಂಥಿಯಾ ಅವರ ಬಳಿ ಕಲಿಯಲು ಕಳಿಸುತ್ತಾರೆ. ಮುಂದೆ ಪುಣೆಯಲ್ಲಿ ಬಾಲಕಿಯರ ಶಾಲೆಗಳನ್ನು ತೆರೆಯುತ್ತಾರೆ. 1853 ರಲ್ಲಿ ಪುಣೆಯಲ್ಲಿ ಮಾಡಿದ ಒಂದು ಸಾರ್ವಜನಿಕ ಭಾಷಣದಲ್ಲಿ ಫುಲೆ ಅವರು ‘‘ಒಬ್ಬ ಸ್ನೇಹಿತನೊಂದಿಗೆ, ನಾನು ಅಹ್ಮದ್ ನಗರದ ಬಾಲಕಿಯರ ಶಾಲೆಗಳಿಗೆ ಭೇಟಿ ನೀಡಿದ್ದೆ, ಅದನ್ನು ಅಮೆರಿಕದ ಮಿಷನರಿ ವಿಭಾಗದ ಸಿಂಥಿಯಾ ಫೆರಾರ್ ಮೇಡಮ್ ನಿರ್ವಹಿಸುತ್ತಿದ್ದರು. ಆ ಶಾಲೆಗಳನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಯಿತು. ಏಕೆಂದರೆ ಅವುಗಳನ್ನು ಬಹಳ ಶಿಸ್ತುಬದ್ಧವಾಗಿ ನಡೆಸಲಾಗುತ್ತಿದೆ. ನಾನು ಪುಣೆಗೆ ಹಿಂದಿರುಗಿದ ತಕ್ಷಣ ಹುಡುಗಿಯರಿಗಾಗಿ ಶಾಲೆಯನ್ನು ಪ್ರಾರಂಭಿಸಿದೆ’’ ಎನ್ನುತ್ತಾರೆ.
ಮುಂದೆ ಸಿಂಥಿಯಾ ಶಾಲೆಗಳಲ್ಲಿ ಟೀಚರ್ ಆಗಿ ಕೆಲಸಮಾಡಲು ಬೇಕಿದ್ದ ತರಬೇತಿ ಶಾಲೆಯನ್ನು ಅಹಮದ್ ನಗರದಲ್ಲಿ ತೆರೆಯುತ್ತಾರೆ. ಈ ಟೀಚರ್ ಟ್ರೈನಿಂಗ್ ಸ್ಕೂಲಿನ ಮೊದಲ ಬ್ಯಾಚಿನ ವಿದ್ಯಾರ್ಥಿನಿಯರಾಗಿ ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಕ್ ಸೇರುತ್ತಾರೆ. ಇಬ್ಬರೂ ಸಿಂಥಿಯಾ ಅವರ ನೇರ ಶಿಷ್ಯೆಯರಾಗುತ್ತಾರೆ. ಹೀಗೆ ಜ್ಯೋತಿರಾವ್‌ಫುಲೆ, ಸಾವಿತ್ರಿಬಾಯಿ, ಫಾತಿಮಾ ಶೇಕ್ ಅವರಲ್ಲಿ ಹುಡುಗಿಯರ ಶಾಲೆಯ ಕನಸಿನ ಬೀಜ ಬಿತ್ತಿದ್ದು ಸಿಂಥಿಯಾ ಫೆರಾರ್ ಎನ್ನುವುದನ್ನು ಮರೆಯುವಂತಿಲ್ಲ. ಸಿಂಥಿಯಾ ತನ್ನ 67ನೇ ವಯಸ್ಸಿನಲ್ಲಿ 1862 ಜನವರಿ 24ರಂದು ಅಹಮದ್ ನಗರದಲ್ಲಿ ಸಾವನ್ನಪ್ಪುತ್ತಾರೆ. ಅವರ ಚಿತಾಭಸ್ಮ ತೆಗೆದುಕೊಂಡು ಹೋಗಿ ಅಮೆರಿಕದ ಹ್ಯಾಂಪ್ ಶೈರ್‌ನಲ್ಲಿ ಅವರ ಸಮಾಧಿ ಕಟ್ಟುತ್ತಾರೆ.
ಸಿಂಥಿಯಾ ಅವರ ಬಗೆಗೆ ಅಮೆರಿಕನ್ ಮಿಷನರಿ ರಿಪೋರ್ಟ್‌ಗಳಲ್ಲಿ ಸಂಕ್ಷಿಪ್ತ ಮಾಹಿತಿ ಇದೆ. ಉಳಿದಂತೆ ಅವರ ಒಂದು ಭಾವಚಿತ್ರವೂ ಸಿಗುತ್ತಿಲ್ಲ. ಆದರೆ ಅವರ ಕಾಲದ ಒಂದು ಶಾಲೆಯ ಗ್ರೂಫ್ ಫೋಟೊ ದೊರಕಿದೆ. ಇದೊಂದು ಅಪರೂಪದ ದಾಖಲೆ. 200ಕ್ಕಿಂತ ಹೆಚ್ಚಿನ ಬಾಲಕಿಯರ ಮತ್ತು ಶಾಲೆಯ ಶಿಕ್ಷಕ ಶಿಕ್ಷಕಿ ಮತ್ತು ಪೋಷಕರೂ, ಆಡಳಿತ ಮಂಡಳಿಯ ಹಿರಿಯರೂ ಈ ಚಿತ್ರದಲ್ಲಿದ್ದಾರೆ.
ಅಂಬೇಡ್ಕರ್ ಹೇಗೆ ಅಮೆರಿಕದ ನ್ಯೂಯಾರ್ಕ್‌ನ ಕೊಲಂಬಿಯಾ ವಿಶ್ವವಿದ್ಯಾನಿಲಯದ ಮೂಲಕ ತಮ್ಮ ಅರಿವಿನ ದಿಗಂತವನ್ನು ವಿಸ್ತರಿಸಿಕೊಂಡರೋ ಹಾಗೆಯೇ ಅಂಬೇಡ್ಕರ್ ತನ್ನ ಗುರು ಎಂದು ಹೇಳುವ ಜ್ಯೋತಿರಾವ್ ಫುಲೆ ಅವರೂ ಅಮೆರಿಕದ ಒಬ್ಬ ಮಿಷನರಿಯಾದ ಸಿಂಥಿಯಾ ಫೆರಾರ್ ಎನ್ನುವವರ ಮೂಲಕ ಶಿಕ್ಷಣದ ಅರಿವಿನ ದಿಗಂತವನ್ನು ವಿಸ್ತರಿಸಿಕೊಂಡದ್ದು ಕಾಕತಾಳೀಯವಾದರೂ ಸತ್ಯವಾಗಿದೆ.