ದಲಿತ ವಿದ್ಯಾರ್ಥಿವೇತನದ ಆದಾಯ ಮಿತಿ 11 ವರ್ಷಗಳಿಂದ ಪರಿಷ್ಕರಿಸಲಾಗಿಲ್ಲ!

ಸಂವಿಧಾನದ ಭಾಗ 4, ಅನುಚ್ಛೇದ 46ರ ಪ್ರಕಾರ ದೇಶವು ಸಮಾನತೆಯ ಸ್ಥಾಪನೆಗಾಗಿ ವಂಚಿತ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಭಾರತ 1945-46ರಿಂದಲೇ ಯಾವುದೇ ಆದಾಯ ಮಿತಿಯಿಲ್ಲದೆ ಪ.ಜಾ/ಪ.ಪಂ. ಶಿಕ್ಷಣಕ್ಕಾಗಿ ವಿದ್ಯಾರ್ಥಿವೇತನವನ್ನು ನೀಡುತ್ತಿದೆ. 1980ರಲ್ಲಿ ಸರಕಾರ ಹಠಾತ್ತಾಗಿ ಆದಾಯ ಮಿತಿಯ ನಿಯಮವನ್ನು ಹೇರಿತು. 1995-96ರಲ್ಲಿ ಇದರ ಮಿತಿ ರೂ. 44,550 ಇತ್ತು. ಆನಂತರ ಇದನ್ನು 2000-01ರಲ್ಲಿ 1 ಲಕ್ಷ ರೂ., 2008-09ರಲ್ಲಿ 1.5 ಲಕ್ಷ, 2010-11 ರಲ್ಲಿ 2 ಲಕ್ಷ ಮತ್ತು 2013ರಲ್ಲಿ 2.5 ಲಕ್ಷ ರೂ. ಎಂದು ಕಾಲಕಾಲಕ್ಕೆ ಖರ್ಚುವೆಚ್ಚಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗಿದೆ. ಆದರೆ 2013ರಿಂದ ಇಲ್ಲಿಯವರೆಗೂ ಯಾವುದೇ ಸಡಿಲಿಕೆ ಅಥವಾ ಪರಿಷ್ಕರಣೆ ಮಾಡಿರುವುದಿಲ್ಲ. ಇದಕ್ಕೆ ಕಾರಣ ಎನ್‌ಡಿಎ ಸರಕಾರಕ್ಕೆ ಶೋಷಿತ ಸಮುದಾಯಗಳ ಮೇಲೆ ಇರುವ ನಿಯೋಜಿತ ನಿರ್ಲಕ್ಷ್ಯ.
ಈ ಸಂಬಂಧ ಇತ್ತೀಚೆಗೆ ತಮಿಳುನಾಡಿನ ಸಂಸದ ವಿಲ್ಸನ್ ರಾಜ್ಯಸಭೆಯಲ್ಲಿ ಮಾತನಾಡುತ್ತಾ ಕೇಂದ್ರವು ಪ.ಜಾ/ಪ.ಪಂ. ವಿದ್ಯಾರ್ಥಿಗಳ ವಿದೇಶಿ ಶಿಕ್ಷಣಕ್ಕೆ, ಮೆರಿಟ್ ವಿದ್ಯಾರ್ಥಿ ವೇತನಕ್ಕೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗೆ 4.5ರಿಂದ 6 ಲಕ್ಷ ರೂ. ಆದಾಯ ಮಿತಿಯನ್ನು ನಿಗದಿಪಡಿಸಿದ್ದು ಮತ್ತು ಹಿಂದುಳಿದ ವರ್ಗಗಗಳ ಮೀಸಲಾತಿಯ ಮಾನದಂಡಕ್ಕೂ 8 ಲಕ್ಷ ರೂ. ಆದಾಯ ಮಿತಿಯನ್ನು ವಿಧಿಸಿರುತ್ತದೆ, ಆದ್ದರಿಂದ ಇದೇ ಮಾದರಿಯಲ್ಲಿಯೇ ಪ.ಜಾ./ಪ.ಪಂ. ವಿದ್ಯಾರ್ಥಿ ವೇತನಕ್ಕೂ ರೂ. 8 ಲಕ್ಷ ಆದಾಯ ಮಿತಿ ನಿಗದಿ ಪಡಿಸಬೇಕೆಂದು ಕೇಳಿದ್ದಾರೆ. 2024ರಲ್ಲಿಯೇ ತಮಿಳನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಹ ಆರ್ಥಿಕವಾಗಿ ದುರ್ಬಲರಾಗಿರುವ ಸಮುದಾಯಗಳ ಮೀಸಲಾತಿಗೆ 8 ಲಕ್ಷ ರೂ. ಆದಾಯ ಮಿತಿಯನ್ನು ನಿಗದಿಪಡಿಸಿರುವ ಕೇಂದ್ರ ಸರಕಾರ ದಲಿತ ವಿದ್ಯಾರ್ಥಿವೇತನಕ್ಕೂ ಅದೇ ನಿಯಮವನ್ನು ಪಾಲಿಸಬೇಕು ಎಂದು ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಬದ್ಧತೆ ಕರ್ನಾಟಕ ಸರಕಾರಕ್ಕೆ ಎಂದೋ ಸತ್ತು ಹೋಗಿದೆ.
2023ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯವು ದಿಲ್ಲಿ ಸರಕಾರ ಆರ್ಥಿಕ ದುರ್ಬಲರಾಗಿರುವ ಸಮುದಾಯಗಳ ಮೀಸಲಾತಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿಧಿಸಿರುವ 1 ಲಕ್ಷ ರೂ. ಆದಾಯ ಮಿತಿಯನ್ನು ಪ್ರಶ್ನಿಸಿ ಪ್ರಸಕ್ತ ಸಮಾಜದಲ್ಲಿ ಖರ್ಚು ವೆಚ್ಚಗಳನ್ನು ಗಮನಿಸಿ ಕನಿಷ್ಠ 5 ಲಕ್ಷ ರೂ. ಆದಾಯ ಮಿತಿಯ ಮಾನದಂಡವನ್ನು ತರಬೇಕೆಂದು ಅಭಿಪ್ರಾಯ ಪಡುತ್ತದೆ. ನಂತರ ದಿಲ್ಲಿ ಸರಕಾರ ಕನಿಷ್ಠ ರೂ. 2.5 ಲಕ್ಷಕ್ಕೆ ಏರಿಸಲು ನಿರ್ಧರಿಸಿತು. ಮುಂದುವರಿದು ಗವರ್ನರ್ ಸಕ್ಸೇನ 2024ರಲ್ಲಿ ಈ ಮಿತಿಯನ್ನು ರೂ. 5 ಲಕ್ಷಕ್ಕೆ ಏರಿಸಲು ಕ್ರಮ ಕೈಗೊಂಡರು. ಈ ನಡೆ ಶಿಕ್ಷಣದಲ್ಲಿ ಆದಾಯ ಮಿತಿ ಮತ್ತು ಖರ್ಚುವೆಚ್ಚಗಳ ನಡುವಿನ ನೇರ ಸಂಬಂಧವನ್ನು ಅರ್ಥೈಸುತ್ತದೆ.
2025, ಎಪ್ರಿಲ್ 1ರಂದು ಹಿಂದುಳಿದ ವರ್ಗಗಗಳ ಕೆನೆ ಪದರ ಮೀಸಲಾತಿಯ ಆದಾಯ ಮಿತಿಯನ್ನು ರೂ. 8 ಲಕ್ಷದಿಂದ (2017) 15 ಲಕ್ಷಕ್ಕೆ (2025) ಏರಿಸಲು ಬಿಜೆಪಿ ಸಂಸದ ಗಣೇಶ್ ಸಿಂಗ್ ನೇತೃತ್ವದ ಸಂಸದೀಯ ಸಮಿತಿಯ ವರದಿಯು ಸರಕಾರಕ್ಕೆ ಸಲಹೆ ನೀಡಿದೆ. ಅಲ್ಲದೆ ಕೃಷಿ ಮತ್ತು ಸಂಬಳದ ಮೂಲವನ್ನು ಆದಾಯ ಮಿತಿಯಲ್ಲಿ ಸೇರಿಸಬಾರದೆಂಬ ಚರ್ಚೆಯನ್ನು ಮುನ್ನೆಲೆಗೆ ತಂದಿದೆ. ಇದೇ ನಿಯಮಗಳು ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಆದಾಯ ಮಿತಿಗೆ ಏಕೆ ಅನ್ವಯಿಸುವುದಿಲ್ಲ.
2011ರ ಜನಗಣತಿಯ ಪ್ರಕಾರ ರಾಷ್ಟ್ರೀಯ ಸಾಕ್ಷರತಾ ಸರಾಸರಿ ಪ್ರಮಾಣ ಶೇ. 75.2 ಇದ್ದು ಈ ಪ್ರಮಾಣವು ಪ.ಜಾತಿಯಲ್ಲಿ ಶೇ. 66.1 ಮತ್ತು ಪ.ಪಂಗಡದಲ್ಲಿ ಶೇ. 59 ಕಂಡುಬಂದಿದೆ. ಯುಜಿಸಿ ಮತ್ತು ಎಐಸಿಟಿಸಿ ನಿಯಂತ್ರಣದ ಎಲ್ಲಾ ಶಾಲಾ ಕಾಲೇಜುಗಳು ಶೇ. 50ರಿಂದ 100 ಪಟ್ಟು ಶುಲ್ಕಗಳನ್ನು ಹೆಚ್ಚಿಸಿವೆ. ಅಲ್ಲದೆ, 2014ರಲ್ಲಿ ರೂ. 61 ಇದ್ದ ಡಾಲರ್ ಮೌಲ್ಯವು ಸಹ ಇವತ್ತು 86.64 ರೂ. ಆಗಿದೆ. ಅಂದರೆ ಶೇ. 46.4 ಆರ್ಥಿಕ ಹೊರೆ ಪ್ರತೀ ಪ್ರಜೆಯ ದೈನಂದಿನ ಜೀವನದ ಮೇಲಿದೆ. ಮೇಟ್ರೊಪಾಲಿಟನ್ ನಗರಗಳಲ್ಲಿನ ಕಾರ್ಮಿಕರ ಜನರ ದಿನನಿತ್ಯದ ಜೀವನೋಪಾಯದ ಪಾಡೇನು, ಅವರ ಮಕ್ಕಳ ಭವಿಷ್ಯವೇನು? ಕಾಲಕಾಲಕ್ಕೆ ದಲಿತ ವಿದ್ಯಾರ್ಥಿವೇತನದ ಪರಿಷ್ಕರಣೆಗೊಂದು ಸೂಕ್ತ ಸಮಿತಿ ಅಥವಾ ಕಾನೂನು ಬೇಡವೆ. ಇದನ್ನು ಜಾರಿ ಮಾಡಲು ಕೇಂದ್ರ ಸರಕಾರ ಏಕೆ ಕ್ರಮ ಕೈಗೊಳ್ಳುವುದಿಲ್ಲ?
ಪಾರ್ಲಿಮೆಂಟ್‌ನ ವರದಿಯ ಪ್ರಕಾರ 21 ಐಐಟಿಗಳಲ್ಲಿ ಪ.ಜಾ./ಪ.ಪಂ.ವಿದ್ಯಾರ್ಥಿಗಳ ಪ್ರವೇಶಾತಿ ಪ್ರಮಾಣ ಶೇ. 6 ಮತ್ತು 1.6 ಇದೆ. ಅಂತೆಯೇ 13 ಐಐಎಂಗಳಲ್ಲಿ ಈ ಪ್ರಮಾಣ ಶೇ. 5 ಮತ್ತು 1ರಷ್ಟಿದೆ. ಹಾಗಾಗಿ ದಲಿತರಿಗೆ ಶಿಕ್ಷಣವೆಂಬುದು ದುಃಸ್ವಪ್ನವಾಗಿದೆ. 2017-2021ರಲ್ಲಿ ಸಿಎಜಿ ನಡೆಸಿದ ಒಂದು ಸಮೀಕ್ಷೆ ಪ್ರಕಾರ ಶೇ. 10-12ರಷ್ಟು ಪ. ಜಾತಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಸಿಕ್ಕಿಲ್ಲ. ಈ ಪ್ರಮಾಣ ಪ.ಪಂಗಡದಲ್ಲಿ ಶೇ. 20 ಇರುತ್ತದೆ. ಈ ಅಡಚಣೆಗೆ ಕಾರಣ ಏನೆಂದರೆ ಇವರು ಈ ಗ್ರಾಂಟ್ಸ್ ನಲ್ಲಿ ನೋಂದಣಿ ಆಗಿರುವುದಿಲ್ಲ. ಇದಕ್ಕೆ ಹೊಣೆ ಸರಕಾರ ಅಲ್ಲವೇ? ಈ ಎಲ್ಲಾ ಕಾರಣಗಳಿಂದ ಅತ್ಯಂತ ಕಡಿಮೆ ಉನ್ನತ ಶಿಕ್ಷಣದ ಅವಕಾಶಗಳನ್ನು ಹೊಂದಿರುವ ಶೋಷಿತ ಸಮುದಾಯದ ಅಭಿವೃದ್ಧಿಗೆ ಒತ್ತು ನೀಡುವ ಕಾರಣಕ್ಕಾದರೂ ಆದಾಯ ಮಿತಿಯನ್ನು ಸಡಿಲಿಸಬೇಕು.
ಎನ್‌ಡಿಎ ಸರಕಾರ ಬಂದಮೇಲೆ 12 ವರ್ಷಗಳಿಂದ ಇದುವರೆಗೂ ದಲಿತ ವಿದ್ಯಾರ್ಥಿವೇತನ ಆದಾಯ ಮಿತಿ ಪರಿಷ್ಕರಣೆ ಮಾಡಿಲ್ಲ. ಆದರೆ ಸಂಸದರ (2025ರಲ್ಲಿ ಶೇ. 24 ಹೆಚ್ಚಳ, ಅದು 2023ರಿಂದಲೇ ಜಾರಿ) ಮತ್ತು ಶಾಸಕರ (ಕರ್ನಾಟಕ, 2025ರಲ್ಲಿ ಶೇ. 50ರಷ್ಟು ಹೆಚ್ಚಳ) ಸಂಬಳ ಮಾತ್ರ ಸಕಾಲಕ್ಕೆ ಪರಿಷ್ಕರಣೆಯಾಗುತ್ತಿವೆ. ಒಟ್ಟು ವಿದ್ಯಾರ್ಥಿವೇತನ ಕೊಡುವುದರಲ್ಲಿ ಶೇ. 60 ಪಾಲನ್ನು ಕೇಂದ್ರ ಭರಿಸುತ್ತದೆ ಮತ್ತು ಶೇ. 40ರಷ್ಟು ಹೊರೆಯನ್ನು ರಾಜ್ಯಗಳ ಮೇಲೆ ಹಾಕಿದೆ. ಆದರೂ ಏಕಿಷ್ಟು ಮೀನಾಮೇಷ.
ಭಾರತದಲ್ಲಿ ವಾರ್ಷಿಕ ಪ.ಜಾತಿಯ ಮೆಟ್ರಿಕ್ ಪೂರ್ವ ವಿದಾರ್ಥಿವೇತನಕ್ಕೆ ತಗಲುವ ವೆಚ್ಚ ಸುಮಾರು ರೂ. 207.93 ಕೋಟಿ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಮೀಸಲಿಟ್ಟಿದ್ದ ವೆಚ್ಚ ಸುಮಾರು ರೂ. 6,349.97 ಕೋಟಿ. ಪ.ಪಂಗಡದಲ್ಲಿ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿವೇತನಕ್ಕೆ ಮೀಸಲಿಡುವ ವೆಚ್ಚ ಸುಮಾರು ರೂ. 313.79 ಕೋಟಿ ಮತ್ತು ರೂ. 2,462.68 ಕೋಟಿ. ಹಾಗೆಯೇ ದೇಶದ ಒಟ್ಟು ಪ.ಜಾತಿಯ ಫಲಾನುಭವಿ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 41 ಲಕ್ಷ ಮತ್ತು ಪರಿಶಿಷ್ಟ ಪಂಗಡದ ಪಲಾನುಭವಿಗಳ ಸಂಖ್ಯೆ ಸುಮಾರು 33 ಲಕ್ಷ. ಈ ಎಲ್ಲಾ ಮೊತ್ತವನ್ನು ಕ್ರೋಡೀಕರಿಸಿ ನೋಡಿದಾಗ, ವಿದ್ಯಾರ್ಥಿವೇತನಕ್ಕೆ ತಗಲುವ ಒಟ್ಟು ಮೊತ್ತ ಯೂನಿಯನ್ ಬಜೆಟ್ (65 ಲಕ್ಷ ಕೋಟಿ) ನ ಕೇವಲ ಶೇ. 0.018 ಭಾಗ ಅಷ್ಟೇ.
2011ರ ಜನಗಣತಿಯ ಪ್ರಕಾರ ಭಾರತದಲ್ಲಿ ಶೇ. 25.2 ಭಾಗ ಪ.ಜಾ./ಪ.ಪಂ. ಸಮುದಾಯಗಳಿದ್ದರೆ ಅದರಲ್ಲಿ ಕೇವಲ ಶೇ. 2.67ರಷ್ಟು ಪ.ಜಾತಿ ಮತ್ತು ಶೇ. 3.16ರಿಂದ 3.35 ಪ.ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ದೊರೆಯುತ್ತಿದೆ. 2019-21ರ ಬಹುಆಯಾಮದ ಬಡತನದ ಸೂಚ್ಯಂಕದ ವರದಿಯ ಪ್ರಕಾರ ಭಾರತದಲ್ಲಿ ಶೇ. 14.96 ಬಡತನವಿದೆ. ಈ ಸರಾಸರಿ ಬಡತನ ಪ.ಜಾತಿಯಲ್ಲಿ ಶೇ. 50.6 ಮತ್ತು ಪ.ಪಂಗಡದಲ್ಲಿ ಶೇ. 33.3ರಷ್ಟಿದೆ. ಆದರೆ ಇವರು ನೀಡುತ್ತಿರುವ ವಿದ್ಯಾರ್ಥಿವೇತನ ಎಷ್ಟು ಜನ ಬಡ ದಲಿತರಿಗೆ ತಲುಪುತ್ತಿದೆ? ಅದು ಕೇವಲ ಶೇ. 3-4ರಷ್ಟು ಸಂಸಾರಗಳಿಗೆ ಮಾತ್ರ.
ಕಾರ್ಪೊರೇಟ್ ವಲಯದ ವಾರ್ಷಿಕ ಲಕ್ಷಾಂತರ ಕೋಟಿ ರೂ. ಸಾಲ ವಸೂಲಿ ಮಾಡದೆ ಮನ್ನಾ ಮಾಡುವ ಸರಕಾರವು ದಲಿತರ ವಿದ್ಯಾರ್ಥಿವೇತನದ ಆದಾಯ ಮಿತಿಗೆ ಕಡಿವಾಣ ಹಾಕಲು ಮಾತ್ರ ಸದಾ ಮುಂದಿರುತ್ತದೆ. ಇವೆಲ್ಲವೂ ಈ ದೇಶದಲ್ಲಿನ ನಾಯಕರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಪರವಾಗಿ ಇರುವ ಬದ್ಧತೆ ಎಷ್ಟೆಂಬುದನ್ನು ಎತ್ತಿ ತೋರಿಸುತ್ತದೆಯಲ್ಲವೇ?
ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಆದಾಯ ಮಿತಿಗೆ Standing Finance Committee (SFC) & Expenditure Finance Committee (EFC) ಮತ್ತು ಕ್ಯಾಬಿನೆಟ್ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತದೆ ಎನ್ನಲಾಗುತ್ತದೆ. ಆ ಪಾರ್ಲಿಮೆಂಟಿನಲ್ಲಿ ರಾತ್ರೋ ರಾತ್ರಿ ಕಾನೂನುಗಳನ್ನು ಜಾರಿ ಮಾಡುವ ಸರಕಾರಕ್ಕೆ ಶೋಷಿತ ಸಮುದಾಯಗಳ ನೋವಿನ ಅರಿವು ಏಕೆ ಇಲ್ಲ?
ಆದ್ದರಿಂದ, ಕರ್ನಾಟಕದ ಮುಖ್ಯಮಂತ್ರಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರು ಕೂಡಲೇ ಆದಾಯ ಮಿತಿಯನ್ನು ಕನಿಷ್ಠ ರೂ. 10 ಲಕ್ಷಕ್ಕೆ ಏರಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ದೇಶದ ಎಲ್ಲಾ ದಲಿತ ಸಂಸದರು ಒಕ್ಕೊರಲಿನಿಂದ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಜೊತೆಗೆ ದಲಿತ ಸಂಘಟನೆಗಳು ಮತ್ತು ದೇಶದ ಎಲ್ಲಾ ವಿವಿಗಳ ದಲಿತ ವಿದ್ಯಾರ್ಥಿಗಳು ಈ ಹೋರಾಟದ ಭಾಗವಾಗಬೇಕು. ಏಕೆಂದರೆ ವಿದ್ಯೆ ನಮ್ಮ ಸಂವಿಧಾನಬದ್ಧ ಮೂಲಭೂತ ಹಕ್ಕಾಗಿದೆ.