ಹೂಳು ತುಂಬಿದ್ದ ಅಲುಂಬುಡ ಕೆರೆಯ ಕಾಯಕಲ್ಪಕ್ಕೆ ನಿರ್ಧಾರ
75 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಸಮಗ್ರ ಜೀರ್ಣೋದ್ಧಾರ
ಪುತ್ತೂರು: ಪ್ರಾಚೀನ ಕೆರೆಯೆಂದೇ ಪ್ರಚಲಿತವಾಗಿರುವ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಅಲುಂಬುಡ ಎಂಬಲ್ಲಿರುವ ‘ಅಲುಂಬುಡ ಬಾವದ ಕೆರೆ’ ಐತಿಹಾಸಿಕ ಮಹತ್ವ ಪಡೆದಿದ್ದರೂ ಕಳೆದ ಹಲವಾರು ವರ್ಷಳಿಂದ ದುರಸ್ತಿಯಾಗದೆ ಹೂಳು ತುಂಬಿ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲರ್ಕ್ಯಕ್ಕೆ ಸಾಕ್ಷಿಯಾಗಿತ್ತು. ಇದೀಗ ಕೆರೆಗೆ ಕಾಯಕಲ್ಪದ ಯೋಗ ಕೂಡಿ ಬಂದಿದೆ. ಸರಕಾರದ 75 ರೂ. ವೆಚ್ಚದಲ್ಲಿ ಕೆರೆಯ ಹೂಳೆತ್ತುವುದರ ಜೊತೆಗೆ ಇನ್ನಿತರ ಕಾಮಗಾರಿ ನಡೆಯಲಿದೆ.
ಕೆರೆಯ ಅಭಿವೃದ್ಧಿಗಾಗಿ 15ನೇ ಹಣಕಾಸು ನಿಧಿಯಡಿಯಲ್ಲಿ 35 ಲಕ್ಷ ರೂ. ಹಾಗೂ ಮತ್ತು ಮಿಲಿಯನ್ ಪ್ಲಸ್ ಸಿಟೀಸ್ ಯೋಜನೆಯಲ್ಲಿ 40 ಲಕ್ಷ ರೂ. ಮಂಜೂರಾಗಿದ್ದು, ಕೆರೆಯ ದುರಸ್ತಿ ಕಾಮಗಾರಿ ಆರಂಭಗೊಂಡಿದೆ.
ಕೃಷ್ಣಮೂರ್ತಿ ಭಟ್ ಮತ್ತು ಕೆ.ಎಂ.ಹಂಝ ಎಂಬಿಬ್ಬರು ಗುತ್ತಿಗೆದಾರರು ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿದ್ದು, ಕಾಮಗಾರಿ ಆರಂಭಿಸಿದ್ದಾರೆ. ಈ ಕೆರೆಯು 84 ಸೆಂಟ್ಸ್ ವಿಸ್ತೀರ್ಣವನ್ನು ಹೊಂದಿದ್ದು, ಕೆರೆಯು ಅಲುಂಬುಡ ಕೆರೆ ಎಂಬ ಹೆಸರಿನಲ್ಲಿ ಸರಕಾರಿ ಜಾಗದಲ್ಲಿದೆ. ಕಾಮಗಾರಿ ಆರಂಭ ಹಂತದಲ್ಲಿ ಸರ್ವೇ ಅಧಿಕಾರಿಗಳು ಆಗಮಿಸಿ ಕೆರೆಯ ವಿಸ್ತೀರ್ಣದ ಮರು ಸರ್ವೇ ನಡೆಸಿದ್ದಾರೆ.
ಕೆರೆ ಅಭಿವೃದ್ಧಿಗಾಗಿ ಹೋರಾಟ: ಅಲುಂಬುಡ ಬಾವದ ಕೆರೆಯ ಅಭಿವೃದ್ಧಿಗಾಗಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಸ್ಥಳೀಯರು ಅನೇಕ ವರ್ಷಗಳಿಂದ ನಿರಂತರ ಹೋರಾಟ ನಡೆಸಿದ್ದಾರೆ. ಇದರ ಫಲವಾಗಿ 2013ರಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಕೆರೆಯ ಹೂಳೆತ್ತಿ ಒಂದು ಭಾಗಕ್ಕೆ ತಡೆಗೋಡೆ ಕಟ್ಟಲಾಗಿತ್ತು. ಬಳಿಕ ತೀರಾ ನಿರ್ಲಕ್ಷ್ಯಕ್ಕೊಳಗಾದ ಈ ಕೆರೆಯಲ್ಲಿ ಹೂಳು ತುಂಬಿ ಮುಚ್ಚಿ ಹೋಗುವ ಹಂತ ತಲುಪಿತ್ತು. ಇದೀಗ ಮತ್ತೆ ಕೆರೆಗೆ ಕಾಯಕಲ್ಪದ ಸುಯೋಗ ದೊರಕಿದೆ.
ಹೂಳೆತ್ತುವಿಕೆ ಆರಂಭ: ಗುತ್ತಿಗೆದಾರರು ಕೆರೆಯಲ್ಲಿರುವ ನೀರನ್ನು ಸತತ 2 ದಿನಗಳ ಪಂಪ್ ಮೂಲಕ ಹೊರಹಾಕುವ ಕೆಲಸ ಮಾಡಿದ್ದು, ನೀರಿನ್ನು ಖಾಲಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲು ಕೆರೆಯಿಂದಲೇ ಕಾಲುವೆ ತೋಡಿ ನೀರನ್ನು ಪಕ್ಕದ ತೋಡಿಗೆ ಬಿಡಲಾಯಿತು. ಸದ್ಯ ಕೆರೆಯ ಹೂಳೆತ್ತುವ ಕಾರ್ಯ ನಡೆಯುತ್ತಿದೆ. ಮೇಲೆತ್ತಲಾದ ಹೂಳನ್ನು ಕೆರೆಯ ಬದಿಯಲ್ಲಿ ರಾಶಿ ಹಾಕಲಾಗುತ್ತಿದೆ.
ನೀರಿನ ಅಂಶ ಇಳಿದ ಮೇಲೆ ಬನ್ನೂರು ಡಂಪಿಂಗ್ ಯಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ಬಳಿಕ ಕೆರೆಯನ್ನು ಸುಮಾರು 3 ಮೀಟರ್‌ನಷ್ಟು ಅಳಗೊಳಿಸಿ ಸುತ್ತಲೂ ಕಲ್ಲಿನ ತಡೆಗೋಡೆ ನಿರ್ಮಿಸಲಾಗುತ್ತದೆ. ಪೂರ್ವ ದಿಕ್ಕಿನಲ್ಲಿ ಕೆರೆಗೆ ಇಳಿಯಲು ಮೆಟ್ಟಿಲು ನಿರ್ಮಿಸಲಾಗುತ್ತದೆ. ನಾಲ್ಕೂ ದಿಕ್ಕುಗಳಲ್ಲಿ ತಲಾ 5 ಮೀಟರ್ ಪ್ಯಾಸೇಜ್ ಕಲ್ಪಿಸಲು ಎಂಜಿನಿಯರ್ ಸೂಚಿಸಿದ್ದಾರೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.