ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಕಸಿದುಕೊಳ್ಳುವ ಡೀಮ್ಡ್ ವಿಶ್ವವಿದ್ಯಾನಿಲಯಗಳು
ಇಪ್ಪತ್ತು ವರ್ಷಗಳ ಹಿಂದಿನ ಮಾತು. ಕರಾವಳಿಯ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಆಯ್ಕೆಯಾದರು. ಅಧಿಕಾರ ವಹಿಸಿದ ತಕ್ಷಣ ಮೊದಲ ಮಾಧ್ಯಮ ಗೋಷ್ಠಿಯಲ್ಲಿ ಅವರು ಹೇಳಿದ ಒಂದು ಮಾತು ‘‘ಇನ್ನು ಮುಂದೆ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತ ಇತ್ಯಾದಿ ಭಾಷೆಗಳು ಪದವಿ ತರಗತಿಗೆ ಒಂದು ವರ್ಷಕಷ್ಟೇ ಸೀಮಿತವಾಗಿರುತ್ತವೆ. ಪಿಯುಸಿಯ ಹಂತದವರೆಗೆ ಅಂದರೆ ಮಕ್ಕಳು ೧೨ ವರ್ಷ ಕಲಿತದ್ದನ್ನೇ ಮತ್ತೆ ಕಲಿಯುವ ಅಗತ್ಯ ಇಲ್ಲ.’’
ಮರುದಿನ ಪ್ರಗತಿಪರ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಅವರ ಮುಖಂಡತ್ವದಲ್ಲಿ ಕರ್ನಾಟಕದಾದ್ಯಂತ ಪ್ರತಿಭಟನೆಗಳು ಆರಂಭವಾದವು. ಭಾರತದಂತಹ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ಅನೇಕ ಜಾತಿ, ಧರ್ಮ, ಮತ, ಪಂಥ, ಭಾಷೆ, ಸಂಸ್ಕೃತಿ ಇರುವಂತಹ ದೇಶದಲ್ಲಿ ಭಾಷೆಯ ಅಧ್ಯಯನ, ಸಂಸ್ಕೃತಿ-ಕಾವ್ಯ-ಸಾಹಿತ್ಯದ ಓದು ಒಂದು ರೀತಿ ಸಮನ್ವಯದ ಸಂವೇದನೆಯ ಕೂಡುಬಂಧವಾಗಿರುತ್ತದೆ. ಸಾಮರಸ್ಯ, ಸಹಬಾಳ್ವೆ ಸಾಧ್ಯವಾಗುವುದೇ ಈ ರೀತಿಯ ಭಾಷೆ, ಸಾಹಿತ್ಯದ ಓದಿನಿಂದ ಎಂಬ ನೆಲೆಗಟ್ಟಿನಲ್ಲಿ ಈ ಪ್ರತಿಭಟನೆ ಜೋರಾಯಿತು. ಕನ್ನಡ, ಸಮಾಜಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮುಂತಾದ ಮಾನವಿಕ ವಿಷಯಗಳನ್ನು ವಿದ್ಯಾರ್ಥಿಗಳು ಓದುವುದರಿಂದ ಅದು ಅವರಿಗೆ ಬರೆಯುವ ಪರೀಕ್ಷೆ-ಉದ್ಯೋಗಕ್ಕೆ ನೆರವಾಗುವುದಕ್ಕಿಂತ ಹೆಚ್ಚು ಈ ಲೋಕದ ಬದುಕುವ ಪರೀಕ್ಷೆಗೆ ಅವರನ್ನು ಸಜ್ಜುಗೊಳಿಸುತ್ತದೆ ಎನ್ನುವುದು ಆ ಹೋರಾಟದ ಧ್ಯೇಯವಾಗಿತ್ತು. ಈ ವಾರದಲ್ಲಿ ಆ ಉಪಕುಲಪತಿಗಳು ತಮ್ಮ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿ ಭಾಷಾ ತಡೆಯ ನಿಯಮವನ್ನು ಸಡಿಲಿಸಿದರು. ಕುವೆಂಪು, ಬೇಂದ್ರೆ, ತೇಜಸ್ವಿ, ಕಾರಂತ, ವಚನ, ಕೀರ್ತನೆ, ಪಂಪ, ಕುಮಾರವ್ಯಾಸ, ಮುಂತಾದ ಕವಿಗಳ ಅಧ್ಯಯನದಿಂದ ನಮ್ಮ ಒಳಗಡೆಯ ಮಾನಸಿಕ ಕಾರ್ಯಾಗಾರ ಸದಾ ಸಂಪನ್ನಗೊಂಡಿರುತ್ತದೆ, ಭಾಷೆ ಸಾಹಿತ್ಯ ಕಲಿಕೆಯ ಅವಧಿಯಲ್ಲಿ ಭಾವ ಸಮನ್ವಯದ ಸೂಕ್ಷ್ಮ ಸಂವೇದನೆಗಳನ್ನು ನಮ್ಮ ಮಕ್ಕಳು ಹೀರುತ್ತಿರುವುದರಿಂದ ಅದು ಬದುಕಿನ ಭವಿಷ್ಯದ ನಡೆಎಡೆಯಲ್ಲಿ ಪ್ರಯೋಜನಕ್ಕೆ ಬಂದೇ ಬರುತ್ತದೆ.
ಇವತ್ತು ಪ್ರಭುತ್ವ ಮತ್ತು ಯುಜಿಸಿ ಅತ್ಯಂತ ಸುಲಭವಾಗಿ ಪ್ರತಿಷ್ಠಿತ ಕಾಲೇಜುಗಳಿಗೆ ಪ್ರತ್ಯೇಕತೆಯ ಸ್ವಾಯತ್ತತೆಯ ಅಧಿಕಾರವನ್ನು ನೀಡುತ್ತಿದೆ. ಕರ್ನಾಟಕದಲ್ಲಿ ಅನೇಕ ಕಾಲೇಜುಗಳು ಡೀಮ್ಡ್- ಸ್ವಾಯತ್ತ ಕಾಲೇಜುಗಳಾಗಿ ಪ್ರತ್ಯೇಕಗೊಳ್ಳುತ್ತಿವೆ. ಇಂತಹ ಕಾಲೇಜುಗಳು ಪ್ರತ್ಯೇಕವಾಗಿ ಸಿಲಬಸ್ಸನ್ನು ರೂಪಿಸುವಾಗ ತಮ್ಮದೇ ನಿಯಮ ಚೌಕಟ್ಟುಗಳನ್ನು ಪಾಲಿಸುತ್ತಿವೆ.
ಹೀಗೆ ಆ ವಿಶ್ವವಿದ್ಯಾನಿಲಯಗಳು ಇತ್ತೀಚೆಗೆ ಸಿಲಬಸ್-ವಾರ್ಷಿಕ ಶೈಕ್ಷಣಿಕ ಪಠ್ಯ ಪಟ್ಟಿಗಳನ್ನು ವಿನ್ಯಾಸಗೊಳಿಸುವಾಗ ಕನ್ನಡ, ತಮಿಳು, ತೆಲುಗು, ಮಲಯಾಳಂ ಮುಂತಾದ ಪ್ರಾದೇಶಿಕ ಭಾಷೆಯನ್ನು ಮತ್ತು ಕೆಲವೊಂದು ಮಾನವಿಕ ಸಬ್ಜೆಕ್ಟ್‌ಗಳನ್ನು ನಿರ್ಲಕ್ಷಿಸಿ, ಬರೀ ಒಂದು ವರ್ಷಕ್ಕೆ ಸೀಮಿತಗೊಳಿಸುವುದನ್ನು ಕಂಡಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇಂತಹ ಆಯ್ಕೆಗೆ ಅವಕಾಶ ಇದೆ ಎನ್ನುವ ಸಾಬೂಬು ಹೇಳುತ್ತಿವೆ. ಕನ್ನಡ ಏನಿದ್ದರೂ ಒಂದು ವರ್ಷಕ್ಕೆ ಮಾತ್ರ ಎಂಬ ಈ ನಿಲುವು ಮುಂದಿನ ಕೆಲವೇ ವರ್ಷಗಳಲ್ಲಿ ಭಾಷೆಯನ್ನು ಖಾಯಂ ಆಗಿ ಪದವಿಯಲ್ಲಿ ರದ್ದುಗೊಳಿಸುವ ಹುನ್ನಾರವೂ ಆಗಿರಬಹುದು. ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಪದವಿ ಮಟ್ಟದಲ್ಲಿ ನಿರ್ನಾಮ ಮಾಡುವ ಈ ಸಂದರ್ಭದಲ್ಲಿ ರಾಜ್ಯದ ಶಿಕ್ಷಣ ತಜ್ಞರು, ಸಾಹಿತಿಗಳು, ಪ್ರಗತಿಪರರು, ಪ್ರಾಧ್ಯಾಪಕರು, ಕನ್ನಡಪರ ಸಂಘಟನೆಗಳು ಬಲವಾಗಿ ಪ್ರತಿಭಟಿಸಬೇಕಾದ ಅಗತ್ಯವಿದೆ.
ಎಷ್ಟೋ ಬಾರಿ ಬರೀ ವಿದ್ಯಾರ್ಥಿಗಳಲ್ಲ, ಪೋಷಕರ ತಲೆಯಲ್ಲೂ ಪಂಪ, ಬೇಂದ್ರೆ, ಕುವೆಂಪು, ಅಲ್ಲಮ, ಬಸವ, ಗಾಂಧಿ, ಪರಮಹಂಸ ಮೊದಲಾದವರನ್ನು ಓದಿ ಭವಿಷ್ಯಕ್ಕೆ ಏನಾದರೂ ಪ್ರಯೋಜನ ಇದೆಯೇ ಎಂದು ಯೋಚನೆ ಮಾಡುವ ಪೋಷಕರಿದ್ದಾರೆ, ಕಾಲೇಜಿನ ಸಂಚಾಲಕರು, ಪ್ರಾಧ್ಯಾಪಕರು, ಕುಲ ಸಚಿವರು ಮೊದಲಾದವರು ಇದ್ದಾರೆ. ನನಗೆ ಒಂದು ಕಾಲೇಜಿನಲ್ಲಿ ಇತ್ತೀಚೆಗೆ ಆದ ಅನುಭವವನ್ನೇ ಕೇಳಿ. ತೇಜಸ್ವಿ ಅವರನ್ನು ಓದಿ ಎಂದು ನನ್ನ ಖಾಸಗಿ ಗ್ರಂಥಾಲಯದಲ್ಲಿರುವ ಒಂದಷ್ಟು ಪುಸ್ತಕಗಳನ್ನು ಮಕ್ಕಳಿಗೆ ಹಂಚಿದೆ. ತಂದೆಯೊಬ್ಬರು, ‘‘ನೀವು ಮಕ್ಕಳಿಗೆ ಪಾಠವಲ್ಲದ ಬೇರೆ ಪುಸ್ತಕವನ್ನು ಕೊಟ್ಟು ಹಾಳು ಮಾಡುತ್ತಿದ್ದೀರಿ. ಯಾಕೆ ಬೇರೆ ಪುಸ್ತಕವನ್ನು ಓದಿಸುತ್ತಿದ್ದೀರಿ’’ ಎಂದು ಕೇಳಿದರು. ಅಂಕ ಕೇಂದ್ರಿತ, ಉದ್ಯೋಗ ಕೇಂದ್ರಿತ ಪದವಿ ಕಲಿಕೆಯ ದಾರಿಯಲ್ಲಿ ಇಂಥ ಕುದುರೆ ಕನ್ನಡಕಗಳು ಭಾಷೆಯನ್ನು ನಿರ್ಲಕ್ಷಿಸುವುದು ನಿರಂತರ ಕಂಡುಬರುತ್ತಿದೆ. ಇದರ ಲಾಭವನ್ನು ಇಂತಹ ಸ್ವಾಯತ್ತ ವಿಶ್ವವಿದ್ಯಾನಿಲಯಗಳು ಪಡೆಯುತ್ತಿರುವುದು ಅಕ್ಷಮ್ಯ ಅಪರಾಧ.
ಮಕ್ಕಳು ಕಲಿಯುವ ಪ್ರಧಾನ ಐಚ್ಛಿಕ ವಿಷಯಗಳ ನಡುವೆ ವಾರಕ್ಕೆ ಮೂರು, ನಾಲ್ಕು ತರಗತಿಗಳಲ್ಲಿ ಮಾತ್ರ ಬಂದು ಹೋಗುವ ಭಾಷೆಯ ವಿಷಯ ಕೂಡ ಆ ವಿದ್ಯಾರ್ಥಿ ಒಳಗಡೆ ಮಾನವೀಯ ಸಂವೇದನೆಗಳನ್ನು ರೂಪಿಸಬಹುದು ಎನ್ನುವುದನ್ನು ಮೊದಲು ಇಡೀ ಸಮುದಾಯ ಅರ್ಥೈಸಿಕೊಳ್ಳಬೇಕು. ಇದನ್ನು ಅತ್ಯಂತ ಸುಲಭವಾಗಿ ಅರ್ಥೈಸಬೇಕಾದರೆ ಭಾಷಾ ತರಗತಿಯ ಒಳಗಡೆ ಒಮ್ಮೆ ಪ್ರವೇಶಿಸಬೇಕು. ಆ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಇರುವಷ್ಟು ಲವಲವಿಕೆ, ಜೀವಂತಿಕೆ ಬೇರೆ ತರಗತಿಯಲ್ಲಿ ಅವರಿಗೆ ಇರಲಾರದು ಎನ್ನುವುದನ್ನು ಗ್ರಹಿಸಬೇಕು.
ಪ್ರಜಾಪ್ರಭುತ್ವ ದೇಶದಲ್ಲಿ ಬಹುತ್ವ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ, ವ್ಯಕ್ತಿ ಗೌರವ, ಘನತೆ ಇಂತಹ ಮೌಲ್ಯಗಳನ್ನು ಎತ್ತಿ ಹಿಡಿಯುವ ಅತಿ ಮುಖ್ಯ ದಾರಿಗಳು ನಾವು ಓದುವ ಪಠ್ಯ ಮತ್ತು ಸಂವಿಧಾನ. ಇದನ್ನು ಜನಮಾನಸದಲ್ಲಿ ಗಟ್ಟಿ ಮಾಡಬೇಕು. ಮತ್ತೆ ಮತ್ತೆ ತುಂಬಿಸಬೇಕು. ಅದು ಯಾವತ್ತೂ ಬರೀ ಒಂದು, ಎರಡು, ಮೂರು ವರ್ಷದ ಸೀಮಿತ ಪಾಠಗಳಾಗಲೇ ಬಾರದು. ಇದನ್ನೇ ಮುಂದೆ ನಮ್ಮ ಮಕ್ಕಳು ಹೀರಿಕೊಂಡು ವೈಚಾರಿಕತೆಯನ್ನು ಬೆಳೆಸಿಕೊಂಡು ಘನತೆಯಿಂದ ಬಾಳುತ್ತಾರೆ. ಇವತ್ತು ವಿಜ್ಞಾನ, ಲೆಕ್ಕ ಇವೆಲ್ಲವೂ ವಿದ್ಯಾರ್ಥಿಗಳ ಬುದ್ಧಿಗೆ ಸಲ್ಲುತ್ತವೆ. ಆದರೆ ಸಾಹಿತ್ಯ, ಭಾಷೆ, ಸಂಸ್ಕೃತಿ ಮಕ್ಕಳ ಮನಸ್ಸಿಗೆ ಸೇರುತ್ತವೆ. ಬುದ್ಧಿಗೆ ಸೇರುವುದು-ನೆನಪಿಗೆ ಸೇರುವುದು ಯಾವತ್ತೂ ಶಾಶ್ವತವಲ್ಲ. ಮನಸ್ಸಿಗೆ ಸೇರುವುದಷ್ಟೇ ಜೀವನ ಪೂರ್ತಿ ಉಳಿಯುತ್ತವೆ. ಯಾವ ದೇಶ ಇದರ ಬಗ್ಗೆ ಗಂಭೀರವಾಗಿ ಯೋಚನೆ ಮಾಡುತ್ತದೋ ಅಂತಹ ದೇಶ ಮಾತ್ರ ಕಾನೂನು, ಪೊಲೀಸರು ಅವರ ಲಾಠಿ ನಿಯಮಗಳು, ಶಾಸನಗಳ ಆಚೆ ಸುಸಂಗತವಾಗಿ ಉಳಿಯಬಲ್ಲದು. ದೇಶದ ಶಿಕ್ಷಣದ ಶಕ್ತಿ, ವ್ಯಾಪ್ತಿ, ಅದರ ವಿನ್ಯಾಸಗಳು ಬರೀ ಉದ್ಯೋಗಾರ್ತಿಗಳನ್ನಷ್ಟೇ ಸೃಷ್ಟಿಸುವುದು ಅಲ್ಲ. ಒಳ್ಳೆಯ ಮನುಷ್ಯರನ್ನು ಕೂಡ ಎನ್ನುವ ಸದುದ್ದೇಶ ಪ್ರಭುತ್ವಕ್ಕೆ ಇರಬೇಕು ಮತ್ತು ಆಯಾಯ ವಿಶ್ವವಿದ್ಯಾನಿಲಯಕ್ಕೆ ನೇಮಕಗೊಳ್ಳುವ ಉಪಕುಲಪತಿಗಳ ನೈತಿಕತೆಯೂ ಆಗಬೇಕು.
ವಿದ್ಯಾರ್ಥಿಗಳು ಘನತೆಯ ಬದುಕನ್ನು ಬಾಳುವುದು ಬೇರೆ, ಓದಿದ ಪದವಿಯನ್ನು ದಾರಿ ಮಾಡಿಕೊಂಡು ಉದ್ಯೋಗ ದಕ್ಕಿಸಿಕೊಳ್ಳುವುದು ಬೇರೆ. ಉದ್ಯೋಗ ಪಡೆದ ಮೇಲೆ, ತಾನು ತನ್ನ ಕಾಲ ಮೇಲೆ ನಿಂತ ಮೇಲೆ ಪ್ರತೀ ಹೆಜ್ಜೆಯಲ್ಲೂ ಆತ ಸರಿದಾರಿಯಲ್ಲಿ ನಡೆಯಬೇಕಾದರೆ ಸರಿ ತಪ್ಪುಗಳನ್ನು ಅರಿಯುವ ಸೂಕ್ಷ್ಮತೆ ಬೇಕು. ಈ ಸೂಕ್ಷ್ಮತೆಗಳನ್ನು ರೂಪಿಸುವ ಶಕ್ತಿ ನಾವು ಓದುವ ಪಠ್ಯಗಳಿಗಿವೆ.
ಶತಮಾನಗಳಿಂದ ನಮ್ಮ ಪಠ್ಯಗಳು, ಪಾಠಗಳು ಯಾಕೆ ಉಳಿದಿವೆ ಎಂದರೆ ಅವು ಪ್ರತಿಪಾದಿಸುತ್ತಾ ಬಂದ ಮೌಲ್ಯ ವಿಚಾರಗಳಿಗಾಗಿ. ಬಸವ, ಅಕ್ಕ, ದಾಸ, ಶರೀಫ, ಕುಮಾರವ್ಯಾಸ ಇವರೆಲ್ಲರೂ ನಮ್ಮೊಂದಿಗೆ ಪಠ್ಯದಾರಿಯಲ್ಲಿ ಇವತ್ತಿಗೂ ಮಾತನಾಡುತ್ತಾರೆ. ಸಂವಾದ ನಡೆಸುತ್ತಾರೆ. ಸರಿ-ತಪ್ಪುಗಳ ವಿಮರ್ಶೆಗೆ ಇಂಬು ಮಾಡಿಕೊಡುತ್ತಾರೆ.
ಕನ್ನಡದಂತಹ ಪಠ್ಯಗಳು ಪದವಿಯ ಹಂತಕ್ಕೆ ಕೇವಲ ಭಾಷಾ ಕಲಿಕೆಯಾಗಿ ಮಾತ್ರ ಇರುವುದಿಲ್ಲ. ಲೋಕ ಗ್ರಹಿಕೆಯ ಕೆಲಸವನ್ನು ಅವು ಸುಲಭವಾಗಿ ಮಾಡುತ್ತವೆ. ಯಾವುದೇ ಒಂದು ಪಠ್ಯದ ಆತ್ಮ ಜೀವನ ಮೌಲ್ಯವೇ ಆಗಿರಬೇಕು. ಏಕಕಾಲದಲ್ಲಿ ರಾಷ್ಟ್ರೀಯ ಪ್ರಜ್ಞೆ ಮತ್ತು ಸ್ವಯಂಪ್ರಜ್ಞೆ ರೂಪಿತವಾಗುವುದು ಇಂಥ ಮಾನವೀಯಸಾಧ್ಯವಾಗಬೇಕು. ಬಹಳಷ್ಟು ಸಂದರ್ಭದಲ್ಲಿ ನಮ್ಮ ಪಠ್ಯಪುಸ್ತಕಗಳನ್ನು ರೂಪಿಸುವಾಗ ಒಂದು ಎಡವಟ್ಟು ನಡೆಯುತ್ತಿದೆ. ಅದನ್ನು ತಜ್ಞರ ಸಮಿತಿ ರೂಪಿಸುತ್ತದೆ. ಆ ಸಮಿತಿಯಲ್ಲಿ ಒಂದಷ್ಟು ಉಪನ್ಯಾಸಕರು, ಶಿಕ್ಷಣ ತಜ್ಞರು, ವಿಮರ್ಶಕರು, ಲೇಖಕರು ಇರುತ್ತಾರೆಯೇ ಹೊರತು ಅದೇ ಪಠ್ಯವನ್ನು ಓದುವ ವಿದ್ಯಾರ್ಥಿಗಳಾಗಲೀ, ಅವರ ಪೋಷಕರಾಗಲೀ, ಸಮಾಜ ವಿಜ್ಞಾನಿಯಾಗಲೀ ಪದವಿ ಪಡೆದು ಉದ್ಯೋಗ ಸಿಗದ ನಿರುದ್ಯೋಗಿಗಳಾಗಲೀ ಇರುವುದಿಲ್ಲ. ಆ ಸಮಿತಿಯಲ್ಲಿ ಸ್ತ್ರೀವಾದಿಗಳಿದ್ದಾಗ ಸ್ತ್ರೀವಾದಿ ಚಿಂತನೆಗಳು, ಬಂಡಾಯ ಸಾಹಿತಿಗಳಿದ್ದರೆ ಬಂಡಾಯದ್ದೇ ಸಾಹಿತ್ಯ, ಕಥೆಗಾರರಿದ್ದರೆ ಅವರು ಪ್ರೀತಿಸುವ ಒಂದಷ್ಟು ಕಥೆಗಾರರ ಕಥೆಗಳು ಇರುತ್ತದೆ. ಪಠ್ಯ ಸಮಿತಿಯಲ್ಲಿ ಬಲಪಂಥೀಯರಿದ್ದಾಗ ಆ ಪಂಥದ ಸಾಹಿತ್ಯ, ಎಡಪಂಥೀಯರಿದ್ದಾಗ ಎಡಪಂಥೀಯ ಸಾಹಿತ್ಯ ಸೇರಿಕೊಳ್ಳುವುದನ್ನು ನಾವೀಗ ಕಾಣುತ್ತಿದ್ದೇವೆ. ಯಾವುದೇ ಪಂಥಕ್ಕೆ ಸೇರದ ಅಥವಾ ಮಕ್ಕಳ ಮನಸ್ಸಿನಲ್ಲಿ ಈಗಾಗಲೇ ತುಂಬಿಕೊಂಡ ಪಂಥವನ್ನು ಕಲಚುವ ಹಾಗೆ, ಅವರ ಒಳಗಡೆ ಮನುಷ್ಯತ್ವವನ್ನು ಮಾನವ ಪ್ರೀತಿಯನ್ನು ಜೋಡಿಸಬೇಕಾದ ಭಾಷಾ ಪಠ್ಯದ ಒಳಗಡೆ ಕೊರತೆಗಳು ಇಲ್ಲ ಎಂದಲ್ಲ. ಆದರೆ ಅವುಗಳ ಶಕ್ತಿಯನ್ನು ಯಾವುದೇ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ.
ಯಾವುದೇ ಭಾಷೆಯ ಪಠ್ಯವಿರಲಿ ಅದು ಬರೀ ಕವಿತೆ, ಕಥೆ, ಕಾದಂಬರಿ, ವಿಮರ್ಶೆ, ಪ್ರಬಂಧ, ನಾಟಕ ಎಂಬುದರ ಬದಲಾಗಿ ಅದೊಂದು ಸಮಷ್ಟಿ ಜ್ಞಾನ, ಸಂವೇದನಶೀಲ, ಸೃಜನಶೀಲ, ಸೃಷ್ಟಿಶೀಲ ಶಕ್ತಿ ಎಂದಾಗಬೇಕಾಗಿ ಪರಿಗಣಿಸುವುದು ಮುಖ್ಯ. ಆಗ ಮಾತ್ರ ನಮ್ಮ ಕಾಲೇಜುಗಳು ನಿಜವಾದ ಮಾನವ ಸಂಪನ್ಮೂಲ ಕೇಂದ್ರಗಳಾಗುತ್ತವೆ.