ಮಾವು ಬೆಳೆಗಾರರ ಕಂಗೆಡಿಸಿದ ಮಳೆ ವಿಳಂಬ
ತಾಪಮಾನ ಹೆಚ್ಚಳದಿಂದ ಉದುರುತ್ತಿರುವ ಹೂವು
ಮೈಸೂರು: ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಉಂಟಾಗಿರುವ ಅತಿವೃಷ್ಟಿಯಿಂದ ಬೆಳೆಗಳು ಹಾನಿಯಾಗಿ ರೈತರಿಗೆ ಸಿಗಬೇಕಾದ ಫಸಲು ಕೈಗೆಟುಕಿಲ್ಲ, ಈ ಬಾರಿ ಮಳೆಯಿಲ್ಲದೇ ಮಾವು ಬೆಳೆಗಾರರು ಕಂಗೆಟ್ಟಿದ್ದು, ನಿರೀಕ್ಷೆಯ ಫಸಲು ಕೈಗೆ ಸಿಗಲ್ಲ ಎನ್ನುತ್ತಿದ್ದಾರೆ.
ಈ ಬಾರಿ ಮಾವು ಉತ್ತಮ ರೀತಿಯಲ್ಲಿ ಹೂವು ಬಿಟ್ಟಿದ್ದರೂ ಬಿಸಿಲ ಬೇಗೆಗೆ ಹೂವುಗಳು ಉದುರಿ ಹೋಗುತ್ತಿದೆ. ಇದರಿಂದಾಗಿ ಈ ಬಾರಿಯೂ ರೈತರು ಕಷ್ಟಕ್ಕೀಡಾಗಿದ್ದಾರೆ.
ಸದ್ಯ ಮಾವಿನ ತೋಟಗಳಿಗೆ ನೀರಿನ ಕೊರತೆ ಕಾಡುತ್ತಿದ್ದು, ನೀರಾವರಿ ಸೌಲಭ್ಯವುಳ್ಳ ಕೆಲ ರೈತರು ಕೃಷಿ ಪಂಪ್ ಸೆಟ್‌ಗಳ ಮೂಲಕ ವಾರಕ್ಕೊಮ್ಮೆ ಮರಗಳಿಗೆ ನೀರು ಹಾಯಿಸಿ ಬೆಳೆ ರಕ್ಷಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಮಾವಿಗೆ ಕೀಟಬಾಧೆ ಕಾಣಿಸಿಕೊಂಡಿಲ್ಲ. ಬೇಸಿಗೆ ತೀವ್ರವಾಗಿರುವುದರಿಂದ ಮಾವಿನ ತೋಟಗಳಲ್ಲಿ ಜೇನು ನೊಣಗಳ ಹಾರಾಟ ಕಡಿಮೆಯಾಗಿದೆ. ಇದರಿಂದ ಹೂವುಗಳ ನಡುವೆ ಪರಾಗಸ್ಪರ್ಶ ಪ್ರಕ್ರಿಯೆಯೂ ಕಡಿಮೆಯಾಗಿದ್ದು, ಉತ್ಪಾದನೆ ಮೇಲೆಯೂ ಪರಿಣಾಮ ಬೀರತೊಡಗಿದೆ.
ಜಿಲ್ಲೆಯಲ್ಲಿ ಮಾವಿನ ಕೊಯ್ಲು ಆರಂಭವಾಗಲು ಇನ್ನೂ ಕನಿಷ್ಠ ಒಂದು ತಿಂಗಳು ಬೇಕು. ಆದರೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಮಾವು ನಿಧಾನವಾಗಿ ಇಲ್ಲಿನ ಮಾರುಕಟ್ಟೆಗೆ ಕಾಲಿಡುತ್ತಿದೆ. ಹೀಗಾಗಿ ಮಾವಿನ ಬೆಲೆಯೂ ದುಬಾರಿ ಇದೆ. ಕಾರ್ಬೈಡ್ ಬಳಸಿ ಮಾಗಿಸಿದ ಹಣ್ಣು ಮಾರುಕಟ್ಟೆಗೆ ಬಂದಿದ್ದು, ಅಂತಹ ಹಣ್ಣನ್ನು ಖರೀದಿ ಮಾಡದಿರುವುದೇ ಒಳಿತು. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಸಿಗಲು ಇನ್ನೂ ಕೆಲವು ವಾರಗಳು ಬೇಕಾಗಬಹುದು.
ಬೇಸಿಗೆ ತೀವ್ರವಾಗಿರುವುದರಿಂದ ಮಾವಿನ ತೋಟಗಳಲ್ಲಿ ಹೂಗಳ ಉದುರುವಿಕೆ ಆಗುತ್ತಿದೆ. ಇದರಿಂದ ಇಳುವರಿಯಲ್ಲಿ ಕುಂಠಿತವಾಗಲಿದೆ. ಈ ಬಗ್ಗೆ ಸರಕಾರ ರೈತರಿಗೆ ನೆರವಾಗಬೇಕು. ಈಗ ಮಾರುಕಟ್ಟೆಗೆ ಬಂದಿರುವ ಹಣ್ಣುಗಳು ಕಾರ್ಬೈಡ್ ಬಳಸಿ ಮಾಗಿಸಿದವಾಗಿವೆ. ಅಂತಹ ಹಣ್ಣಗಳು ಆರೋಗ್ಯಕ್ಕೆ ಉತ್ತಮವಲ್ಲ.
-ಸೋಮಣ್ಣ, ಮಾವು ಬೆಳೆಗಾರ
ಶೇ.25 ಇಳುವರಿ ಕಡಿಮೆ ಸಾಧ್ಯತೆ
ಜಿಲ್ಲೆಯ ಎಚ್.ಡಿ.ಕೋಟೆ-749, ಹುಣಸೂರು-518, ಕೆ.ಆರ್.ನಗರ-42, ಮೈಸೂರು ಗ್ರಾಮಾಂತರ 1286, ನಂಜನಗೂಡು-302, ಪಿರಿಯಾಪಟ್ಟಣ-13, ಸಾಲಿಗ್ರಾಮ-27, ಸರಗೂರು-27, ತಿ.ನರಸೀಪುರ 102 ಸೇರಿ ಒಟ್ಟು 3,066 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಉತ್ತಮ ಬೆಳೆಯಾದರೆ ಪ್ರತೀ ಹೆಕ್ಟೇರ್‌ಗೆ ಕನಿಷ್ಠ 7ರಿಂದ 10 ಟನ್ ಮಾವಿನ ಕಾಯಿ ಫಸಲು ಸಿಗುತ್ತಿತ್ತು. ಜೊತೆಗೆ ವಾರ್ಷಿಕ 7ರಿಂದ 8 ಸಾವಿರ ಟನ್‌ನಷ್ಟು ಮಾವು ಉತ್ಪಾದನೆಯಾಗುತ್ತಿತ್ತು. ಆದರೆ ಈ ಬಾರಿ ತೀವ್ರ ತಾಪಮಾನ ಮತ್ತು ಮಳೆ ಇಲ್ಲದಿರುವ ಕಾರಣ ಇಳುವರಿ ಕಡಿಮೆ ಯಾಗಿದೆ. ಈ ಬಾರಿ 4ರಿಂದ 5 ಸಾವಿರ ಟನ್ ಉತ್ಪಾದನೆಯಾಗುವುದೇ ದುಸ್ತರವಾಗಿದ್ದು, ಶೇ.25ರಷ್ಟು ಇಳುವರಿ ಕಡಿಮೆಯಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.