ನೇಕಾರರ ಸೀರೆಗಳಿಗೆ ಬೇಡಿಕೆ ಕುಸಿತ
ಉತ್ಪಾದನೆ ಹೆಚ್ಚಿದರೂ ಕೊಳ್ಳುವವರಿಲ್ಲ
ಹೊಸಕೋಟೆ: ಆಷಾಢ ಪರಿಣಾಮದಿಂದ ನೇಕಾರರ ಸೀರೆಗಳ ಬೇಡಿಕೆ ಕುಸಿತವಾಗಿದೆ. ಉತ್ಪಾದನೆ ಹೆಚ್ಚಿದರೂ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದು, ಸೀರೆಗಳ ದರದಲ್ಲಿ ಇಳಿಕೆ ಕಂಡುಬಂದಿದೆ. ಇದರಿಂದಾಗಿ ನೇಕಾರಿಕೆ ಕಾರ್ಮಿಕರ ಕೂಲಿಯಲ್ಲೂ ಕೂಡ ಕೆಲವೆಡೆ ಇಳಿಕೆ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅದರಲ್ಲೂ ನೇಕಾರಿಕೆಗೆ ಪ್ರಸಿದ್ಧಿ ಪಡೆದಿರುವ ದೊಡ್ಡಬಳ್ಳಾಪುರದಲ್ಲಿ 30,000ದವರೆಗೂ ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರತೀ ದಿನ ಸುಮಾರು 50,000 ಸೀರೆಗಳ ಉತ್ಪಾದನೆ ಮಾಡಲಾಗುತ್ತದೆ. ಆದರೆ, ಇದೀಗ ಆಷಾಢಮಾಸ ಆರಂಭವಾಗುತ್ತಿದ್ದು, ಶುಭ ಕಾರ್ಯಗಳಿಲ್ಲದೆ ಸೀರೆಗಳ ಖರೀದಿಯಲ್ಲಿ ಭಾರೀ ಇಳಿಕೆ ಕಂಡುಬರುತ್ತಿದೆ. ಇದರ ಪರಿಣಾಮ ಸೀರೆಗಳ ದರ ಇಳಿಕೆಯಾಗುತ್ತಿದೆ. ಕೆಲ ವರ್ಷಗಳಿಂದ ಆಷಾಢ ಮಾಸದಂತೆಯೇ ಬೇರೆ ತಿಂಗಳಲ್ಲೂ ಕೂಡ ಅಮಾನಿ ದಿನಗಳು ಎದುರಾಗುತ್ತಿದ್ದು, ನೇಕಾರರಿಗೆ ಸಮಸ್ಯೆ ಉಂಟಾಗುತ್ತಿದೆ.
ಇನ್ನೊಂದೆಡೆ ದೊಡ್ಡಬಳ್ಳಾಪುರದಲ್ಲಿ ಸೀರೆ ಬ್ರಾಂಡಿಂಗ್ ಕೂಗು ಅನೇಕ ವರ್ಷಗಳಿಂದ ಇದ್ದರೂ ಕೂಡ, ಈವರೆಗೆ ಅದು ಸಾಧ್ಯವಾಗದೆ, ಮಾರುಕಟ್ಟೆ ಅವಲಂಬನೆ ಮುಂದುವರಿದಿದೆ.
ಬೇಡಿಕೆ ಕುಸಿತ: ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ಶುಭ ಸಮಾರಂಭಗಳಿಲ್ಲದೆ ಸೀರೆಗಳ ಬೇಡಿಕೆ ಕುಸಿಯುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಸೀರೆಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದ್ದರೂ, ಖರೀದಿ ಪ್ರಮಾಣ ಕುಸಿತವಾಗಿದೆ. ಜತೆಗೆ ಸೀರೆ ದರವೂ 1000 ರೂ. ಇದ್ದರೆ ಈಗ ಕೇವಲ 750 ಇಲ್ಲವೇ 800 ರೂ.ಗೆ ಮಾರಾಟವಾಗುತ್ತಿದೆ. ಈ ಹಿಂದೆ ಅಮಾನಿ ತಿಂಗಳಲ್ಲಿ ಮಾತ್ರ ಈ ರೀತಿ ಬೇಡಿಕೆ ಕುಸಿತ ಕಾಣುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ 3-4 ಬಾರಿ ಇದೇ ರೀತಿ ಸಮಸ್ಯೆಗಳು ಎದುರಾಗುತ್ತಿದ್ದು, ಇದರಿಂದ ಆರ್ಥಿಕವಾಗಿ ಸಮಸ್ಯೆಯಾಗುತ್ತಿದೆ ಎಂದು ನೇಕಾರರು ಹೇಳುತ್ತಿದ್ದಾರೆ.
ಕಚ್ಚಾವಸ್ತುಗಳು ದುಬಾರಿ: ಸ್ಥಳೀಯ ರೇಷ್ಮೆ ಸೀರೆಗಳಿಗೆ ಮಹಾರಾಷ್ಟ್ರ, ಆಂಧ್ರ ಸೇರಿದಂತೆ ಹಲವೆಡೆ ಮಾರುಕಟ್ಟೆ ಇದೆ. ಅದೇ ರೀತಿ ಕಚ್ಚಾ ವಸ್ತುಗಳಿಗೂ ಕೂಡ ಅನ್ಯ ರಾಜ್ಯಗಳ ಅವಲಂಬನೆ ಮುಂದುವರಿದಿದೆ. ಇದರ ಜತೆಗೆ ಕಚ್ಚಾವಸ್ತುಗಳ ದರ ಹೆಚ್ಚಾಗಿದೆ. ನೇಕಾರಿಕೆಗೆ ಅಗತ್ಯವಾಗಿರುವ ಕಚ್ಚಾ ವಸ್ತುಗಳಾದ ಕೋನ್, ಜರಿ, ನೂಲು, ಬಣ್ಣದ ದರದಲ್ಲಿ ಏರಿಕೆಯಾಗಿದೆ. ನೂಲು ಪ್ರತೀ ಕೆಜಿಗೆ 30-40 ರೂ. ಹೆಚ್ಚಳವಾಗಿದ್ದರೆ, ಜರಿಯೂ 30-50 ರೂ. ಏರಿಕೆ ಕಂಡಿದೆ. ಇದರಿಂದ ಉತ್ಪಾದನೆ ವೆಚ್ಚ ಕೂಡ ಹೆಚ್ಚಳವಾಗುತ್ತಿದ್ದು, ನೇಕಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಆಷಾಢ ಮಾಸದ ಹಿನ್ನೆಲೆ ನೇಕಾರಿಕೆಯ ಸೀರೆಗಳ ಬೇಡಿಕೆ ಕುಸಿತ ಕಾಣಲು ಆರಂಭಿಸಿದೆ. ಸೀರೆಗಳ ದರದಲ್ಲೂ ಇಳಿಕೆ ಕಾಣುತ್ತಿದೆ.
-ರತ್ನಮ್ಮ -ನೇಕಾರರು, ದೊಡ್ಡಬಳ್ಳಾಪುರ
ನೇಕಾರಿಕೆಗೆ ಬಳಸುವ ಕಚ್ಚಾವಸ್ತುಗಳ ಬೆಲೆ ಏರಿಕೆ ಕಂಡಿದೆ. ದೊಡ್ಡಬಳ್ಳಾಪುರ ಸೀರೆ ಬ್ರಾಂಡಿಂಗ್ ನೀಡಲು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸರಕಾರ ನೇಕಾರರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವ ಕೆಲಸ ಮಾಡಬೇಕಿದೆ.
-ವೆಂಕಟೇಶ್-ಅಧ್ಯಕ್ಷರು, ಕರ್ನಾಟಕ ರಾಜ್ಯ ನೇಕಾರರ ಹಿತ ರಕ್ಷಣಾ ಸಮಿತಿ.
ಕಾರ್ಮಿಕರ ಕೂಲಿ ಕಡಿತ
ಜಿಲ್ಲೆಯಲ್ಲಿ ನೇಕಾರ ಕಾರ್ಮಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದೆ. ಅದರಲ್ಲೂ ಸ್ಥಳೀಯ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ. ಉತ್ತರ ಭಾರತದ ಕಾರ್ಮಿಕರು ಹೆಚ್ಚಾಗಿ ನೇಕಾರಿಕೆ ಕೆಲಸದಲ್ಲಿ ತೊಡಗುತ್ತಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಸೀರೆಗಳ ಬೇಡಿಕೆ ಕುಸಿಯುತ್ತಿರುವ ಜತೆಗೆ ದರದಲ್ಲೂ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಕೂಲಿಯಲ್ಲೂ ಕೆಲವೆಡೆ ಇಳಿಕೆ ಕಂಡುಬಂದಿದೆ. ಪ್ರತಿ ಸೀರೆಗಳಿಗೆ ಅವುಗಳ ಡಿಸೈನ್, ಗುಣ್ಣಮಟ್ಟದ ಮೇಲೆ 250ರಿಂದ 400ರೂ.ವರೆಗೆ ನೀಡಲಾಗುತ್ತಿತ್ತು. ಆದರೆ, ಇದೀಗ ಪ್ರತಿ ಸೀರೆಗಳ ಮೇಲೆ ಕಾರ್ಮಿಕರ ಕೂಲಿಯನ್ನು 30ರಿಂದ 50ರೂ.ವರೆಗೆ ಇಳಿಸಲಾಗಿದೆ. ಬೇಡಿಕೆ ಮತ್ತಷ್ಟು ಕುಸಿದರೆ ಕಾರ್ಮಿಕರಿಗೂ ಸಮಸ್ಯೆಯಾಗುವ ಸಾಧ್ಯತೆಯಿದೆ.