ದ.ಕ. ಜಿಲ್ಲೆಯಲ್ಲಿ ಪಾತಾಳಕ್ಕಿಳಿಯುತ್ತಿರುವ ಅಂತರ್ಜಲ
ಸಂರಕ್ಷಣೆಗೆ ಒತ್ತು ನೀಡದಿದ್ದರೆ ತೀವ್ರ ಬರದ ಅಪಾಯ ತಪ್ಪಿದ್ದಲ್ಲ
ಸಾಂದರ್ಭಿಕ ಚಿತ್ರ
ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲು, ಸುತ್ತಲೂ ಸಮುದ್ರ, ನದಿ, ಕೆರೆಗಳಿಂದ ತುಂಬಿರುವ ದ.ಕ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಸಾಗುತ್ತಿದೆ. ಮಾರ್ಚ್ನಿಂದಲೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿರುವ ಜಿಲ್ಲೆಯಲ್ಲಿ ಅಂತರ್ಜಲ ಸಂರಕ್ಷಣೆಗೆ ಒತ್ತು ನೀಡದಿದ್ದರೆ ಬರದ ಅಪಾಯವನ್ನು ಅಲ್ಲಗಳೆಯುವಂತಿಲ್ಲ.
2020ರಿಂದೀಚೆಗೆ ದ.ಕ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಅಂತರ್ಜಲ ಮಟ್ಟ ಅಡಿಗಳ ಲೆಕ್ಕದಲ್ಲಲ್ಲ. ಬದಲಾಗಿ ಮೀಟರ್ಗಟ್ಟಲೆ ಪಾತಾಳಕ್ಕಿಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ದ.ಕ. ಜಿಲ್ಲಾ ಮಟ್ಟದ ಅಂತರ್ಜಲ ಕಚೇರಿಯ ಮಾಹಿತಿಯ ಪ್ರಕಾರ ಪಶ್ಚಿಮ ಘಟ್ಟಕ್ಕೆ ತಾಗಿಕೊಂಡೇ ಇರುವ ಬೆಳ್ತಂಗಡಿ ತಾಲೂಕಿ ನಲ್ಲಿ 2020ರ ಎಪ್ರಿಲ್ ತಿಂಗಳಲ್ಲಿ 9.48 ಮೀಟರ್ಗೆ ಕುಸಿದಿದ್ದ ಅಂತರ್ಜಲ 2024ರ ಎಪ್ರಿಲ್ಗೆ 10.44ಕ್ಕೆ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶವಾದ ಸುಳ್ಯ ತಾಲೂಕಿನಲ್ಲಿ 2020ರಲ್ಲಿ 8.79 ಮೀಟರ್ ಆಳದಲ್ಲಿದ್ದ ಅಂತರ್ಜಲ 2024ರ ಎಪ್ರಿಲ್ನಲ್ಲಿ 11.09 ಮೀಟರ್ಗೆ ಕುಸಿದಿದೆ.
ಉಳ್ಳಾಲ, ಮೂಡಬಿದಿರೆ ಇನ್ನಷ್ಟು ಕುಸಿತ: 2024 ಎಪ್ರಿಲ್ನಲ್ಲಿ ಮೂಡಬಿದಿರೆಯಲ್ಲಿ ಅಂತರ್ಜಲ 22.4 ಮೀಟರ್ ಆಳಕ್ಕಿಳಿದಿದೆ. ಇನ್ನು ಉಳ್ಳಾಲದಲ್ಲಿ ಅಂತರ್ಜಲ 24.37 ಮೀಟರ್ಗೆ ಇಳಿಕೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಮೂಡುಬಿದಿರೆಯಲ್ಲಿ 2023ರ ಎಪ್ರಿಲ್ನಲ್ಲಿ ಅಂತರ್ಜಲ ಮಟ್ಟ 19.8 ಮೀಟರ್ನಲ್ಲಿತ್ತು. ಉಳ್ಳಾಲದಲ್ಲಿ 19.79 ಮೀಟರ್ ಆಳದಲ್ಲಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಎರಡೂ ತಾಲೂಕುಗಳಲ್ಲಿ ಅಂತರ್ಜಲ ಸರಿ ಸುಮಾರು 3ರಿಂದ ನಾಲ್ಕು ಮೀಟರ್ಗಳಷ್ಟು ಇಳಿಕೆಯಾಗಿದೆ.
ಉಳಿದಂತೆ ಬಂಟ್ವಾಳ ತಾಲೂಕಿನಲ್ಲಿ 2020ರ ಎಪ್ರಿಲ್ನಲ್ಲಿ 8.17 ಮೀಟರ್ ಆಳದಲ್ಲಿದ್ದ ಅಂತರ್ಜಲ 2024ಕ್ಕೆ 9.47 ಮೀಟರ್ಗೆ ಇಳಿಕೆಯಾಗಿದೆ. ಕಡಬದಲ್ಲಿ 7.35 ಮೀಟರ್ನಿಂದ 9.02 ಮೀಟರ್ಗೆ ಕುಸಿದಿದೆ. ಮಂಗಳೂರಿನಲ್ಲಿ ಕಳೆದ ವರ್ಷ 13.49 ಮೀಟರ್ ಆಳದಿಂದ ಈ ಬಾರಿ ಎಪ್ರಿಲ್ಗೆ 14.37ಮೀಟರ್ಗೆ ಕುಸಿದಿದ್ದರೆ, ಮುಲ್ಕಿಯಲ್ಲಿ ಕಳೆದ ವರ್ಷ 9.21 ಮೀಟರ್ನಿಂದ ಈ ವರ್ಷ 10.7 ಮೀಟರ್ಗೆ, ಪುತ್ತೂರಿನಲ್ಲಿ ಕಳೆದ ವರ್ಷ 12.83ರಿಂದ ಈ ವರ್ಷ 16.1 ಮೀಟರ್ಗೆ ಇಳಿದಿದೆ.
ನೀರಿನ ಬಳಕೆ ಹೆಚ್ಚಿದರೂ ಸಂರಕ್ಷಣೆ ಬಗ್ಗೆ ಇಲ್ಲ ಕಾಳಜಿ: ಅಂತರ್ಜಲ ಕುಸಿತದ ಬಗ್ಗೆ ಕಳೆದ ಸುಮಾರು 15 ವರ್ಷಗಳಿಂದೀಚೆಗೆ ಪಶ್ಚಿಮ ಘಟ್ಟ ಸೂಚನೆಯನ್ನು ನೀಡುತ್ತಾ ಬಂದಿದೆ. ಆದರೆ ಈ ಬಗ್ಗೆ ಜನರಾಗಲಿ, ಜನಪ್ರತಿನಿಧಿಗಳಾಗಲಿ ಗಂಭೀರವಾಗಿ ಚಿಂತಿಸಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದೀಚೆಗೆ ಪಶ್ಚಿಮ ಘಟ್ಟದಲ್ಲಿ ಭೂ ಕುಸಿತ, ಜಲಸ್ಫೋಟ ಹೆಚ್ಚುತ್ತಿದೆ. ಇದರಿಂದಾಗಿ ಪಶ್ಚಿಮ ಘಟ್ಟದಲ್ಲಿ ಮಳೆ ನೀರನ್ನು ಇಂಗಿಸುವ ಜಲಾನಯನ ವ್ಯಾಪ್ತಿ ಪ್ರದೇಶಗಳು ಕಡಿಮೆಯಾಗುತ್ತಿವೆ. ಹಾಗಾಗಿ ಕಾಡು ಮರಗಳಿಂದ ತುಂಬಿಕೊಂಡಿರುವ ಪಶ್ಟಿಮ ಘಟ್ಟದಲ್ಲೇ ಬಿಸಿ ವಾತಾವರಣ ಹೆಚ್ಚುತ್ತಿದೆ ಎನ್ನುವುದು ಪರಿಸರ ಪ್ರೇಮಿಗಳ ಅಭಿಪ್ರಾಯ.
ಪಶ್ಚಿಮ ಘಟ್ಟ ಪ್ರದೇಶ ಕಾಡು, ಹುಲ್ಲು ಗಾವಲಿನಿಂದ ಆವೃತ್ತವಾಗಿತ್ತು. ಆದರೆ ಅಭಿವೃದ್ಧಿ, ಮಾನವನ ಅತಿಯಾಸೆಯ ಕಾರಣದಿಂದ ಮರೆ ಯಾಗುತ್ತಾ ಬಂದಿದೆ. ಇದರಿಂದ ಸೂರ್ಯನ ಕಿರಣ ನೇರವಾಗಿ ಕಲ್ಲು ಮಣ್ಣುಗಳ ಮೇಲೆ ಬಿದ್ದು, ಪಶ್ಚಿಮ ಘಟ್ಟದ ನದಿ ಮೂಲಗಳಲ್ಲೇ ನೀರಿನ ಒರತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಸಾಗಿದೆ. ಮಳೆ ಪ್ರಮಾಣ ಹೆಚ್ಚಾದರ ಮಳೆ ನೀರನ್ನು ಸಂಗ್ರಹಿಸುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಾ ಬಂದಿದೆ. ಪಶ್ಚಿಮ ಘಟ್ಟದಲ್ಲೇ ಈ ಪರಿಸ್ಥಿತಿ ಇರುವಾಗ ಕೆಳಗಿನ ಜನವಸತಿ ಪ್ರದೇಶಗಳಿಗಳೂ ಅದರ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎನ್ನುವುದು ಚಾರಣಿಗ, ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರ ಅಭಿಪ್ರಾಯ.
ನದಿ ಮೂಲಗಳಲ್ಲಿ ಮಳೆಗಾಲದಲ್ಲಿ ಸುರಿಯುವ ನೀರು ಶೇಖರಣೆ ಆಗದ ಕಾರಣ ನವೆಂಬರ್ ಡಿಸೆಂಬರ್ನಲ್ಲಿಯೇ ಪಶ್ಚಿಮ ಘಟ್ಟದ ಹುಲ್ಲುಗಾವಲು ಪ್ರದೇಶವೂ ಬರಡಾಗುತ್ತಿದೆ. ಹಿಂದೆ ಮಳೆಗಾಲ ಅಕ್ಟೋಬರ್ಗೆ ಕೊನೆಗೊಂಡರೂ, ಫೆಬ್ರವರಿವರೆಗೂ ನೀರಿನ ಒರತೆ ಪಶ್ಚಿಮ ಘಟ್ಟದಲ್ಲಿ ಕಂಡು ಬರುತ್ತಿತ್ತು. ಆದರೆ ಪರಿಸ್ಥಿತಿ ಬದಲಾಗಿದೆ. ಮುಂದಾಲೋಚನೆ ಇಲ್ಲದೆ, ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯ ನೋಡದೆ, ನಮ್ಮ ಜೀವನದಿಗಳ ಮೇಲಿನ ಬಲಪ್ರಯೋಗ ಮಾಡುವಂತಹ ಅಸಂಬದ್ಧ ಯೋಜನೆಗಳನ್ನು ನಾವು ಜಾರಿಗೊಳಿಸುತ್ತಾ ಸಾಗಿದ್ದೇವೆ. ಅಣೆಕಟ್ಟುಗಳನ್ನು ಕಟ್ಟುತ್ತಾ ಸಾಗಿದ್ದೇವೆಯೇ ಹೊರತು ನದಿ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿಲ್ಲ. ಮುಂದೆ ಇನ್ನಷ್ಟು ಮಾರಣಾಂತಿಕ ದುರಂತವನ್ನು ತಪ್ಪಿಸುವ ನಿಟ್ಟಿನಲ್ಲಿ ಎಚ್ಚರ ವಹಿಸಲೇ ಬೇಕು ಎನ್ನುತ್ತಾರೆ ದಿನೇಶ್ ಹೊಳ್ಳ.
ಜಲಶಕ್ತಿ ಯೋಜನೆಯಡಿ ಅಂತರ್ಜಲ ಮರುಪೂಣದ ಬಗ್ಗೆ ಯೋಜನೆ ಜಾರಿಗೊಳಿಸಲಾಗಿದೆ. ಕೆರೆಗಳ ಹೂಳೆತ್ತುವಿಕೆ, ಕೆರೆ ಕಟ್ಟೆಗಳ ನೀರು ನಿಲ್ಲಿಸುವಿಕೆ, ಬೋರ್ವೆಲ್ಗಳನ್ನು ಮರುಪೂರಣ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಮುಡಾ, ಸ್ಮಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆಯ ವಿವಿಧ ಯೋಜನೆಗಳಡಿ ಪ್ರಮುಖ ಕೆರೆಗಳನ್ನು ಅಂದಗೊಳಿಸಲಾಗಿದೆ. ಕೋಟಿಗಟ್ಟಲೆ ಸುರಿದು ಅಭಿವೃದ್ಧಿಗೊಂಡ ಕೆರೆಗಳಿಗೆ ಸುತ್ತಮುತ್ತಲಿನ ಒಳಚರಂಡಿಯ ಮಲಿನ ನೀರು ಸೇರುವುದನ್ನು ಮಾತ್ರ ತಡೆಯಲು ಸಾಧ್ಯವಾಗಿಲ್ಲ. ಹಾಗಾಗಿ ನಗರದ ಪ್ರಮುಖ ಐತಿಹಾಸಿಕ ಕೆರೆಗಳಾದ ಗುಜ್ಜರಕೆರೆ, ಕಾವೂರು ಕೆರೆ, ಮೊಯ್ಲಿಕೆರೆ ಮೊದಲಾದವುಗಳ ನೀರು ಮಲಿನವಾಗಿಯೇ ಉಳಿಯುವಂತಾಗಿದೆ. ಮನೆ, ಅಪಾರ್ಟ್ಮೆಂಟ್ ನಿರ್ಮಾಣದ ಸಂದರ್ಭ ಇಂಗುಗುಂಡಿ ನಿರ್ಮಾಣ, ಮನೆಯ ಸುತ್ತ ಕನಿಷ್ಠ ಮರಗಳನ್ನು ನೆಡಬೇಕು ಎಂಬ ನಿಯಮಗಳ ಬಗ್ಗೆಯೂ ಗಮನ ಹರಿಸಲಾಗುತ್ತಿಲ್ಲ ಎನ್ನುವುದು ಭೂ ವಿಜ್ಞಾನಿಗಳ ಅಭಿಪ್ರಾಯ.
ನಾವು ಅಣೆಕಟ್ಟುಗಳನ್ನು ಕಟ್ಟುತ್ತಾ ಸಾಗಿದ್ದೇವೆಯೇ ಹೊರತು, ನದಿ ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕಾರ್ಯ ಮಾಡಿಲ್ಲ. ಹಾಗಾಗಿ ಅಂತರ್ಜಲ ಕುಸಿಯುತ್ತಿದೆ. ನಗರ ಪ್ರದೇಶವಾಗಿರಲಿ, ಗ್ರಾಮೀಣವಾಗಿರಲಿ, ಮಳೆ ನೀರನ್ನು ಭೂಮಿಯೊಳಗೆ ಇಂಗಿಸುವ ಪ್ರಕ್ರಿಯೆ ಸಕ್ರಿಯವಾಗಿ ಆಗಬೇಕಾಗಿದೆ. ಮನೆ ಅಂಗಳಕ್ಕೂ ಕಾಂಕ್ರಿಟ್, ಸ್ಮಾರ್ಟ್ ಸಿಟಿ ಹೆಸರಲ್ಲಿ ಎಲ್ಲಾ ರಸ್ತೆ ಗಳಿಗೂ ಕಾಂಕ್ರಿಟ್ ಹಾಕುವ ನಾವು ಮಳೆ ನೀರು ಇಂಗಿಸುವಿಕೆ, ಮಳೆ ಕೊಯ್ಲು ಬಗ್ಗೆ ಹೆಚ್ಚಿನ ಗಮನ ಹರಿಸು ವುದು ಅತೀ ಅಗತ್ಯ. ಮನೆಯ ಸುತ್ತಮುತ್ತ ಕನಿಷ್ಠ ಹಸಿರು ಹೊದಿಗೆ, ಇಂಗು ನಿರ್ಮಿಸುವ ಕಾರ್ಯವನ್ನು ನಾವು ಕಡ್ಡಾಯಗೊಳಿಸಲೇಬೇಕು.
- ದಿನೇಶ್ ಹೊಳ್ಳ, ಚಾರಣಿಗ
ನಗರ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲೂ ಕಾಂಕ್ರಿಟೀಕರಣ ಹೆಚ್ಚುತ್ತಿದೆ. ಇದು ಮಳೆ ನೀರಿಂಗಿ ಸುವ ಪ್ರಕ್ರಿಯೆಗೆ ತೊಡಕಾಗಿದೆ. ನೀರಿನ ಮಿತ ಬಳಕೆ, ಕೆರೆಗಳ ಹೂಳೆತ್ತುವುದು, ಮಳೆ ನೀರು ಕೊಯ್ಲು ಬಗ್ಗೆ ನಗರ ಹಾಗೂ ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲೂ ಮನೆ, ಕಟ್ಟಡ ಗಳ ನಿರ್ಮಾಣದ ಸಂದರ್ಭ ಕಡ್ಡಾಯಗೊಳಿಸುವ ಕ್ರಮಗಳನ್ನು ಜಾರಿಗೊಳಿಸುವುದರಿಂದ ಅಂತರ್ಜಲ ವೃದ್ಧಿಗೆ ಪೂರಕವಾಗಲಿದೆ.
-ಶೇಖ್ ದಾವೂದ್, ಹಿರಿಯ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ಕಚೇರಿ, ದ.ಕ.