ಅಭಿವೃದ್ಧಿ: ದೊಡ್ಡ ಬಂಡವಾಳಶಾಹಿಗಳು, ರಾಜಕಾರಣಿಗಳು ಮತ್ತು ಮಾಧ್ಯಮಗಳ ಜಂಟಿ ಉದ್ಯಮ

ಸಾಂಕ್ರಾಮಿಕದಂತೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆಯು ಅತ್ಯಂತ ಅಮಾನವೀಯ ಮತ್ತು ಅಸಹ್ಯಕರವಾದ ಸ್ಥಿತಿಗೆ ಬಡತನವನ್ನು ಹೆಚ್ಚಿಸಿದೆ. ಇದನ್ನು ಸರಿಪಡಿಸಬೇಕಾದ ನಮ್ಮ ರಾಜಕೀಯ ನಾಯಕರು ಮೊದಲಿಗೆ ಬಡತನದ ಸಾಮಾಜಿಕ ಆಯಾಮಗಳನ್ನು ಅಂದರೆ ಬಡವರ ಸಂಖ್ಯೆಯನ್ನು ನಿಖರವಾಗಿ ಎಣಿಸಬೇಕಾಗುತ್ತದೆ. ಆದರೆ ಇವರು ಸೃಷ್ಟಿಸುವ ಅಭಿವೃದ್ಧಿ ಭ್ರಮೆಗಳು ಬಹುತೇಕ ಸಂದರ್ಭಗಳಲ್ಲಿ ದೊಡ್ಡ ಬಂಡವಾಳಶಾಹಿಗಳ ವ್ಯಾಪಾರಕ್ಕೆ ಬೆಂಬಲವಾಗಿ, ಪ್ರಬಲರ ರಾಜಕೀಯಕ್ಕೆ ಸಹಾಯ ಮಾಡುತ್ತಿವೆ. ಸ್ವಾಭಾವಿಕವಾಗಿ ದೊಡ್ಡ ವ್ಯಾಪಾರಸ್ಥರು ತಮ್ಮ ದೊಡ್ಡ ಮೊತ್ತದ ಬಂಡವಾಳ ಮತ್ತು ಸಂಪತ್ತನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ಮರೆಮಾಚಲು ಮಾಧ್ಯಮಗಳ ಮೇಲೆ ನಿಯಂತ್ರಣ ಹೊಂದಿದ್ದಾರೆ. ಇದಕ್ಕೆ ಅಧಿಕಾರದ ಹಪಾಹಪಿಯಲ್ಲಿರುವ ರಾಜಕೀಯ ನಾಯಕರು ಮತ್ತು ಆಳುವ ವರ್ಗದವರು ಸಹಾಯ ಮಾಡುತ್ತಾರೆ. ದೊಡ್ಡ ವ್ಯಾಪಾರ ಮತ್ತು ರಾಜಕೀಯ ನಾಯಕತ್ವದ ನಡುವೆ ಪರಸ್ಪರ ಲಾಭದಾಯಕ ಹೊಂದಾಣಿಕೆಯು ಇಂದಿನ ಪ್ರಜಾಪ್ರಭುತ್ವದ ವಿಶಿಷ್ಟ ಲಕ್ಷಣವಾಗಿದೆ.
ಇದನ್ನು ನಾವು ಐದು ಸಾವಿರ ಕೋಟಿಗಳವರೆಗೆ ಅಂದಾಜು ಮಾಡಲಾದ ಮದುವೆಯ ವಿಕೃತತೆಯಲ್ಲಿ ಕಾಣಬಹುದು. ಈ ಮದುವೆಯ ನಿಜವಾದ ಉದ್ದೇಶ ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ರಾಜ್ಯ ವ್ಯವಸ್ಥೆಯು ಅದಕ್ಕೆ ಹೇಗೆ ಬೆಂಬಲವಾಗಿ ಕಾರ್ಯಕ್ರಮಗಳನ್ನು ಯೋಜಿಸುತ್ತದೆ ಎನ್ನುವುದನ್ನು ತೋರಿಸುವುದಾಗಿತ್ತು. ಹೀಗಾಗಿ ಇದು ಕೇವಲ ಮದುವೆ ಮಾತ್ರವಲ್ಲ, ಇದು ರಾಜಕೀಯ ಅಧಿಕಾರದ ಶಕ್ತಿ ಪ್ರದರ್ಶನ. ಜಗತ್ತಿನ ಅತಿ ಶ್ರೀಮಂತ ಕುಟುಂಬ ಒಂದು ತನ್ನ ರಾಜಕೀಯ ವರ್ಚಸ್ಸು ಮತ್ತು ಪ್ರಾಬಲ್ಯದ ಬಗ್ಗೆ ಯಾರಿಗೂ ಯಾವುದೇ ಸಂದೇಹ ಇರಬಾರದು ಎನ್ನುವುದನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿದ್ದರ ಪ್ರತೀಕದಂತಿತ್ತು. ಇದನ್ನು ಬಹುತೇಕ ಬಂಡವಾಳಶಾಹಿ ಒಡೆತನದ ಎಲ್ಲಾ ಮಾಧ್ಯಮಗಳು ನಿರಂತರವಾಗಿ ಪ್ರಚಾರ ಮಾಡಿದ್ದವು. ಈ ಪ್ರದರ್ಶನದಲ್ಲಿ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ದಂಡು ಭಾಗವಹಿಸಿದ್ದವು. ಅಂದರೆ, ಪ್ರಾಸಂಗಿಕವಾಗಿ ತನ್ನ ಬಂಡವಾಳದ ಹಿಂದೆ ನಿಜವಾಗಿ ಯಾರೆಲ್ಲ ಇದ್ದಾರೆ ಎಂಬುದನ್ನು ತೋರಿಸುವುದು ಈ ಕುಟುಂಬದ ಇರಾದೆಯಾಗಿದ್ದರೆ, ಇಂತಹ ದೊಡ್ಡ ಶ್ರೀಮಂತರ ಮದುವೆಯಲ್ಲಿ ಭಾಗವಹಿಸಿದೆ ಎಂದು ತೋರಿಸಿಕೊಳ್ಳುವುದು ರಾಜಕೀಯ ನಾಯಕರ ಉದ್ದೇಶವಾಗಿದೆ.
ಈ ವಿಷಯದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದ ಹಾಗೂ ಸೋತ ಪಕ್ಷಗಳಿಗೆ ಯಾವುದೇ ಮಹತ್ವದ ವ್ಯತ್ಯಾಸವಿರುವುದಿಲ್ಲ. ಏಕೆಂದರೆ 18ನೇ ಲೋಕಸಭೆಯಲ್ಲಿ ಭಾರತ ಜನರು 543 ಪ್ರತಿನಿಧಿಗಳ ಪೈಕಿ 504 ಮಂದಿ ಕೋಟ್ಯಧಿಪತಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್)’ ಬಿಡುಗಡೆ ಮಾಡಿದ ದತ್ತಾಂಶ ತಿಳಿಸುತ್ತದೆ. 2024ರ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತೀ ಮೂವರು ಅಭ್ಯರ್ಥಿಗಳಲ್ಲಿ ಒಬ್ಬರು ಕೋಟ್ಯಧಿಪತಿಗಳಿದ್ದರೆ, ಗೆದ್ದವರಲ್ಲಿ ಹತ್ತರಲ್ಲಿ ಒಂಭತ್ತಕ್ಕಿಂತ ಸ್ವಲ್ಪ ಹೆಚ್ಚಿನವರು ಕೋಟ್ಯಧಿಪತಿಗಳಾಗಿದ್ದಾರೆ. ಈ ಪ್ರಮಾಣ 2009ರ ಲೋಕಸಭಾ ಚುನಾವಣೆಯಲ್ಲಿ ಶೇ.58ರಷ್ಟು ಇದ್ದದ್ದು, 2014ರ ಚುನಾವಣೆಗೆ ಶೇ. 82ಕ್ಕೆ, 2019 ಚುನಾವಣೆಗೆ ಶೇ. 88 ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಶೇ. 93ಕ್ಕೆ ಏರಿದೆ. ಅಂದರೆ 18ನೇ ಲೋಕಸಭೆಯ ಶೇ.93ರಷ್ಟು ಸಂಸದರು ಕೋಟ್ಯಧಿಪತಿಗಳು. 15 ವರ್ಷಗಳಲ್ಲಿ ಲೋಕಸಭಾ ಸದಸ್ಯರ ಆಸ್ತಿಯು ಸರಾಸರಿ ಏಳು ಪಟ್ಟು ಹೆಚ್ಚಿದೆ. ಮರು ಚುನಾಯಿತರಾದ ಶೇ. 29ರಷ್ಟು ಸಂಸದರು ತಮ್ಮ ಸಂಪತ್ತನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ. ಸಂಸತ್ತಿನ ಸದಸ್ಯರಲ್ಲಿ ಕೋಟ್ಯಧಿಪತಿಗಳ ಸಂಖ್ಯೆ 128ರಿಂದ 504ಕ್ಕೆ ಏರಿದ್ದು ಆಕಸ್ಮಿಕವಲ್ಲ. ಇದು ಕೆಲವರ ಪ್ರಕಾರ ನಾಯಕತ್ವವು ತಂದಿರುವ ಪ್ರಜಾಸತ್ತಾತ್ಮಕ ಸುಧಾರಣೆಗಳಾಗಿವೆ! ಇದರ ಅರ್ಥ ಸಾಮಾನ್ಯ ಜನರಿಗೆ ರಾಜಕೀಯ ಪ್ರಾತಿನಿಧ್ಯ ಇಲ್ಲವೆನ್ನುವುದು; ಬಂಡವಾಳದ ಪ್ರಾತಿನಿಧ್ಯವೇ ಎಲ್ಲವೂ ಆಗಿರುವುದನ್ನು ನೋಡಬಹುದು.
ಹಾಗೆಯೇ ಮೂರು ದಶಕಗಳಿಂದ ಅಸಮಾನತೆ ತೀವ್ರವಾಗಿ ಏಕೆ ಏರುತ್ತಿದೆ? ಕ್ರೋನಿ ಕ್ಯಾಪಿಟಲಿಸಂ, ಆನುವಂಶಿಕತೆ ಮೂಲಕ ಎಲ್ಲಾ ರಂಗಗಳಲ್ಲಿ ಸೃಷ್ಟಿಸುತ್ತಿರುವ ದೊಡ್ಡ ಶ್ರೀಮಂತರು ಮತ್ತಷ್ಟು ವೇಗವಾಗಿ ಹೆಚ್ಚು ಹೆಚ್ಚು ಶ್ರೀಮಂತರಾಗುತ್ತಿದ್ದಾರೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮೇಲ್ ಪದರದಲ್ಲಿ ಇರುವ ಶೇ. 10ರಷ್ಟು ಜನರು, ಒಟ್ಟು ರಾಷ್ಟ್ರೀಯ ಸಂಪತ್ತಿನಲ್ಲಿ ಶೇ. 77ರಷ್ಟು ಹೊಂದಿದ್ದಾರೆ. 2017ರಲ್ಲಿ ಉತ್ಪತ್ತಿಯಾದ ರಾಷ್ಟ್ರೀಯ ಸಂಪತ್ತಿನ ಶೇ. 73ರಷ್ಟು ಪಾಲು ಕೇವಲ ಶೇ. 1ರಷ್ಟು ಶ್ರೀಮಂತರ ಕೈಗೆ ಹೋಗಿದೆ. ಆದರೆ ಭಾರತದ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು (67 ಕೋಟಿ) ತಮ್ಮ ಸಂಪತ್ತಿನಲ್ಲಿ ಶೇ. 1ರಷ್ಟು ಹೆಚ್ಚಳವನ್ನು ಕಂಡಿದ್ದಾರೆ. ಭಾರತದಲ್ಲಿ 2000ದಲ್ಲಿ ಇದ್ದ ಬಿಲಿಯನೇರ್‌ಗಳ ಸಂಖ್ಯೆ ಕೇವಲ ಒಂಭತ್ತು ಮಾತ್ರ. ಬಿಲಿಯನೇರ್‌ಗಳ ಸಂಖ್ಯೆ 2017ರಲ್ಲಿ 101ಕ್ಕೆ ಏರಿತ್ತು. ಭಾರತವು 2018ರಿಂದ 2022ರ ನಡುವೆ, 70 ಹೊಸ ಮಿಲಿಯನೇರ್‌ಗಳನ್ನು ಉತ್ಪಾದಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, 2024ರಲ್ಲಿ ಭಾರತವು 185 ಬಿಲಿಯನೇರ್‌ಗಳೊಂದಿಗೆ ಜಾಗತಿಕವಾಗಿ ಬಿಲಿಯನೇರ್ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಒಂದು ದಶಕದಲ್ಲಿ ಬಿಲಿಯನೇರ್‌ಗಳ ಸಂಪತ್ತು ಸುಮಾರು 10 ಪಟ್ಟು ಹೆಚ್ಚಾಗಿದೆ. ಇವರ ಒಟ್ಟು ಸಂಪತ್ತು 2018-19ರ ಆರ್ಥಿಕ ವರ್ಷದ ಕೇಂದ್ರ ಸರಕಾರದ ಬಜೆಟ್‌ಗಿಂತಲೂ ಹೆಚ್ಚಾಗಿದೆ. ಹೀಗೆ ದೊಡ್ಡ ಶ್ರೀಮಂತರು ಮತ್ತಷ್ಟು ವೇಗವಾಗಿ ಹೆಚ್ಚು ಹೆಚ್ಚು ಶ್ರೀಮಂತರಾಗಿದ್ದು, ಅವರ ಆಸ್ತಿಯು ಶರವೇಗದಲ್ಲಿ ಏರಿದ್ದು ಆಕಸ್ಮಿಕವಲ್ಲ. ಇದು ಕೆಲವರ ಪ್ರಕಾರ ಅಭಿವೃದ್ಧಿಯಲ್ಲಿ ತಂದಿರುವ ಸುಧಾರಣೆಗಳಾಗಿವೆ!
‘ಇಂಡಿಯನ್ ಇಕಾನಮಿ ಇನ್ ಸ್ವೀಟ್ ಸ್ಪಾಟ್’ ಎನ್ನುವ ತಲೆಬರಹದ ವರದಿಯೊಂದನ್ನು ನವೆಂಬರ್ 15, 2024ರಂದು ಟೈಮ್ಸ್ ಆಫ್ ಇಂಡಿಯಾ, ಬಿಸಿನೆಸ್ ಡೆಸ್ಕ್ ಪ್ರಕಟಿಸಿತ್ತು. ಈ ವರದಿಯು ಭಾರತೀಯ ಆರ್ಥಿಕತೆಯು 2024ರಲ್ಲಿ ಶೇ. 7.2ರಷ್ಟು ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದೆ. ಇದು ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡುತ್ತದೆ. ಆರ್ಥಿಕ ಬೆಳವಣಿಗೆಯ ದರವು 2025 ಮತ್ತು 2026ರಲ್ಲಿ ಕ್ರಮವಾಗಿ ಶೇ. 6.6 ಮತ್ತು ಶೇ. 6.5ರಷ್ಟು ಸಾಧಿಸುವ ಉತ್ತೇಜಕಗಳು ಕಾಣುತ್ತಿವೆ. ಈ ವರದಿಯು ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ಮಧ್ಯಮ ಸ್ಥಿತಿಯು ಇಂಡಿಯಾದ ಆರ್ಥಿಕತೆ ಸಿಹಿಯಾಗಿದೆ ಎಂದು ವಿವರಿಸಿದೆ. ಬ್ಲೂಮ್ ವೆಂಚರ್ಸ್ ಹೊರತಂದಿರುವ ‘ಇಂಡಸ್ ವ್ಯಾಲಿ ರಿಪೋರ್ಟ್-2025’ ಭಾರತದಲ್ಲಿ ಪ್ರತೀ ವರ್ಷ 63 ಕೋಟಿ ಜನರು ತಮ್ಮ ಆರೋಗ್ಯ ವೆಚ್ಚಗಳ ಹೆಚ್ಚಳ ಕಾರಣದಿಂದಾಗಿ ಬಡತನಕ್ಕೆ ತಳ್ಳಲ್ಪಡುತ್ತಾರೆ. ಇದು ಪ್ರತೀ ಸೆಕೆಂಡಿಗೆ ಸುಮಾರು ಎರಡು ಜನರು. ಭಾರತದ ಪ್ರಮುಖ ಕಾರ್ಪೊರೇಟ್ ಕಂಪೆನಿಯಲ್ಲಿ ಉನ್ನತ ವೇತನ ಪಡೆಯುವ ಸಿಇಒಗಳು ಒಂದು ವರ್ಷದಲ್ಲಿ ಗಳಿಸುವ ವೇತನದ ಮೊತ್ತವನ್ನು ಭಾರತದ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ವೇತನದಲ್ಲಿಯೇ ದುಡಿಯುತ್ತಿರುವ ದುಡಿಮೆಗಾರರಿಗೆ ಗಳಿಸಲು ಹಲವು ದಶಕಗಳೇ ಬೇಕಾಗುತ್ತವೆ ಎಂದು ಅಂದಾಜು ಮಾಡಿದೆ.
ಈ ರೀತಿ ಒಂದು ಕಡೆ ದೊಡ್ಡ ಮಟ್ಟದಲ್ಲಿ ಕೆಲವೇ ಕೆಲವರ ಸಂಪತ್ತು ವೇಗವಾಗಿ ಹೆಚ್ಚುತ್ತಿದ್ದರೆ, ಮತ್ತೊಂದು ಕಡೆ ಬಹುಜನರ ಬದುಕು ದುಸ್ಥಿತಿಗೆ ಇಳಿಯುತ್ತಿದೆ. ಅಸಮರ್ಪಕ ಆಹಾರ, ಅಪೌಷ್ಟಿಕತೆ, ಕಲುಷಿತ ನೀರು, ನೈರ್ಮಲ್ಯ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳ ಬಿಕ್ಕಟ್ಟುಗಳು, ತಾಪಮಾನದ ಹೆಚ್ಚಳ ಮತ್ತು ವಿಷಪೂರಿತ ಗಾಳಿ ನಾಗರಿಕರನ್ನು ದುರ್ಬಲಗೊಳಿಸಿ ಸಾಮಾಜಿಕ ಸಾವಿಗೆ ಕಾರಣವಾಗಿವೆ. ಇಂತಹ ಅಭಿವೃದ್ಧಿ ಆರ್ಕೆಸ್ಟ್ರಾಗಳ ನಿರ್ಮಾಪಕರು ಬಂಡವಾಳಶಾಹಿಗಳು. ಇದರ ನಿರ್ದೇಶಕರು, ಆಡಳಿತಶಾಹಿಗಳು ಮತ್ತು ರಾಜಕಾರಣಿಗಳಾಗಿದ್ದರೂ ಈ ಪ್ರಕ್ರಿಯೆಗೆ ಅಭಿಪ್ರಾಯ ತಯಾರು ಮಾಡುವ ಇಮೇಜ್ ಬಿಲ್ಡರ್‌ಗಳಾಗಿ, ಮುದ್ರಣ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ಮಾಡು ತ್ತಿರುವವರು, ಶೈಕ್ಷಣಿಕ ವಲಯಗಳ ಪರಿಣಿತರು ಮತ್ತು ಬುದ್ಧಿಜೀವಿ ಸಾಹಿತಿಗಳು ಎಂದು ಕರೆಯಲ್ಪಡುವವರು ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುತ್ತಿದ್ದಾರೆ. ಒಂದು ತಿಂಗಳಿಗೆ ಆರು ಸಾವಿರದಿಂದ ಏಳು ಸಾವಿರ ಸರಾಸರಿ ಆದಾಯ ಇರುವ ನೂರು ಕೋಟಿ ಜನರು ವಾಸಿಸುತ್ತಿರುವ ಭವ್ಯ ಭಾರತದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಬಿಲಿಯನೇರ್‌ಗಳ ಜೊತೆಗೆ ಪ್ರಭುತ್ವ ಈ ಆರ್ಕೆಸ್ಟ್ರಾವನ್ನು ಪ್ರಾಸಂಗಿಕವಾಗಿ ಮಾತ್ರ ನಡೆಸುತ್ತಿರುವುದನ್ನು ಸ್ಪಷ್ಟಪಡಿಸುತ್ತದೆ.
ಆದರೂ ಭಾರತದ ಆರ್ಥಿಕ ಬೆಳವಣಿಗೆ ಕುರಿತ ಆರ್ಕೆಸ್ಟ್ರಾವು ಜಗತ್ತಿನಾದ್ಯಂತ ಉತ್ತಮ ಪ್ರದರ್ಶನ ಕಂಡಿದೆ. ಈ ಆರ್ಕೆಸ್ಟ್ರಾವನ್ನು ಸ್ವತಂತ್ರ ಗಣರಾಜ್ಯವಾಗಿ ದೇಶದ ಸುಮಾರು ಮುಕ್ಕಾಲು ಶತಮಾನದ ನಂತರವೂ ಅನೇಕ ಗೊಂದಲಮಯ ತಿರುವುಗಳ ಹೊರತಾಗಿಯೂ ಬಹುಜನರು ಸಹಿಸಿಕೊಂಡಿದ್ದಾರೆ. ಜಗತ್ತು ಭಾರತವನ್ನು ಬಹುದೊಡ್ಡ ಪ್ರಜಾಪ್ರಭುತ್ವ ಎಂದು ನೋಡುತ್ತದೆ. ಬಹುಪಾಲು ಭಾರತೀಯರು ತಾವು ಪ್ರಜಾಪ್ರಭುತ್ವ ಮತ್ತು ಅದರ ಸಾಧನೆಗಳಿಂದ ತೃಪ್ತರಾಗಿದ್ದೇವೆ ಎಂದು ಹೇಳುತ್ತಾರೆ. ಆದರೆ, ಈ ಆರ್ಕೆಸ್ಟ್ರಾವು ಬಡವರು ಎದುರಿಸುತ್ತಿರುವ ಸಾಮಾಜಿಕ ಸಂಗತಿಗಳನ್ನು ಭೂಸುಧಾರಣೆಗಳು ಸೇರಿದಂತೆ ಅಭಿವೃದ್ಧಿಯ ಜೊತೆ ಉಲ್ಲೇಖಿಸಲಾಗುವ ಮತ್ತು ಹೆಚ್ಚು ಬಳಸಲಾಗುವ ಪರಿಕಲ್ಪನೆಗಳು ಭೂರಹಿತ ಬಡವರ ಬದುಕಿನಲ್ಲಿ ಮಹತ್ವದ ಬದಲಾವಣೆಗಳು ತಂದಿಲ್ಲ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿಮ್ನ ವರ್ಗಕ್ಕೆ ಸೇರಿದವರು, ಅದರಲ್ಲಿಯೂ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರು ಬದುಕುಳಿಯಲು ಯಾವುದೇ ಕೆಲಸವನ್ನು ಮಾಡಲೇಬೇಕಾದ ದುಸ್ಥಿತಿಗೆ ತಳ್ಳಿದೆ. ಸಣ್ಣ, ಅತಿ ಸಣ್ಣ ರೈತ ಕುಟುಂಬಗಳ ಸದಸ್ಯರು, ಭೂರಹಿತ ಬಡಜನರು ಜೀವವನ್ನು ಉಳಿಸಿಕೊಳ್ಳಲು ನಗರ ಪ್ರದೇಶಗಳಿಗೆ ವಲಸೆ ಬಂದು ದುಡಿಮೆಯನ್ನು ಹುಡುಕುವ ದುಸ್ಥಿತಿಯು ವಿಸ್ತರಣೆಯಾಗುತ್ತಲೇ ಇದೆ. ಭಾರತದಲ್ಲಿ ದುಡಿಯುವ ಬಡವರು ಇನ್ನೂ ಹೇಗೆ ಶೋಷಣೆಯ ಕೆಲಸದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬುದನ್ನು ಬಹಳ ಗಂಭೀರವಾಗಿ ಅಧ್ಯಯನ ಮಾಡಿರುವ ಸಮಾಜಶಾಸ್ತ್ರಜ್ಞ ಜಾನ್ ಬ್ರೆಮನ್, ‘‘ಸರಿಸುಮಾರು 12,000 ವರ್ಷಗಳ ಹಿಂದೆ, ಬೇಟೆಗಾರ-ಸಂಗ್ರಾಹಕ ಸಂಸ್ಕೃತಿಯು ಎಲ್ಲಾ ಮಾನವರ ಜೀವನೋಪಾಯವಾಗಿತ್ತು. ಪ್ರಾಣಿಗಳನ್ನು ಬೇಟೆಯಾಡುವುದು, ಮೀನುಗಾರಿಕೆ, ಗೆಡ್ಡೆ-ಗೆಣಸು ಮತ್ತು ಜೇನುತುಪ್ಪ ಸೇರಿದಂತೆ ಇತರ ಪೋಷಕಾಂಶಗಳನ್ನು ಆಹಾರಕ್ಕಾಗಿ ಕಾಡಿನಿಂದ ಸಂಗ್ರಹಿಸಿ ಬದುಕು ಸಾಗಿಸುತ್ತಿದ್ದರು. ಸಮಕಾಲೀನ ಭಾರತದಲ್ಲಿ ಬಡವರು ಸ್ವಲ್ಪ ಹೆಚ್ಚು ಕಡಿಮೆ ಬದುಕುಳಿಯಲು ಇದೇ ರೀತಿಯಲ್ಲಿ ದುಡಿಮೆಯನ್ನು ಬೇಟೆಯಾಡುತ್ತಿದ್ದಾರೆ’’ ಎನ್ನುತ್ತಾರೆ. ಬಡವರು ದುಡಿಮೆಯನ್ನು ಬೇಟೆಯಾಡಲು ಊರಿಂದ ಊರಿಗೆ ವಲಸೆ ಹೋಗ ತೊಡಗಿದ್ದಾರೆ. ಇದು ನಮಗೆ ಬಹುತೇಕ ಬಸ್ಸು ಮತ್ತು ರೈಲು ನಿಲ್ದಾಣಗಳಲ್ಲಿ ಕಾಣುವ ಸಾಮಾಜಿಕ ಸಂಗತಿಯಾಗಿದೆ.
ಭೂರಹಿತರು ಕಬ್ಬು ಕಟಾವು, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ಇಟ್ಟಿಗೆ ಗೂಡುಗಳು, ಕಲ್ಲಿನ ಕ್ವಾರಿಗಳು, ಕಟ್ಟಡ ಕೆಲಸ, ರೈಲ್ವೆ ಗ್ಯಾಂಗ್‌ಮ್ಯಾನ್‌ಗಳಾಗಿ, ಮನೆ ಕೆಲಸಗಾರರಾಗಿ, ಬಂದರು ಗಳಲ್ಲಿ ಹಮಾಲಿ ಕೆಲಸ, ಯಾಂತ್ರೀಕೃತ ಮೀನುಗಾರಿಕೆಯಲ್ಲಿ ದುಡಿಮೆ, ಮನೆಗೆಲಸ, ವಾಚ್‌ಮನ್ ಇನ್ನೂ ಮುಂತಾದ ಹೆಚ್ಚು ಶ್ರಮ ಆಧಾರಿತ ಕೆಲಸಗಳನ್ನು ಅಸಂಘಟಿತ ವಲಯದಲ್ಲಿ ಮಾಡುತ್ತಿದ್ದಾರೆ. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನಿಮ್ನ ವರ್ಗಕ್ಕೆ ಸೇರಿದವರು ತಮ್ಮ ಬದುಕಿಗಾಗಿ ಯಾವುದೇ ಸ್ವರೂಪದ ಕೆಲಸವನ್ನು ಮಾಡುವ ದುಸ್ಥಿತಿಯಲ್ಲಿದ್ದಾರೆ. ಅನೌಪಚಾರಿಕ ವಲಯದಲ್ಲಿ ಅತ್ಯಂತ ದುಸ್ಥಿತಿಯಲ್ಲಿ ದುಡಿಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದನ್ನು ಇದು ಎತ್ತಿತೋರಿಸುತ್ತದೆ. ಇಲ್ಲಿ ದುಡಿಯುವವರು ಪಡೆಯುವ ಯಾವುದೇ ರೀತಿಯ ಕೂಲಿ ಅತ್ಯಂತ ಕಡಿಮೆ. ದುಡಿಯುವ ಜನರು ಸಂಕಷ್ಟ ಕಾಲದಲ್ಲಿ ಉದ್ಯೋಗ ನೀಡುವವರು ಅಥವಾ ಮಧ್ಯವರ್ತಿ ಮೇಸ್ತ್ರಿಯಿಂದ ಸಾಲವಾಗಿ ಪಡೆಯುವ ಮುಂಗಡ ಹಣದಿಂದ ಅವರ ಶ್ರಮದ ಶೋಷಣೆ ಪ್ರಾರಂಭವಾಗುತ್ತದೆ. ಮುಂಗಡವನ್ನು ತೆಗೆದುಕೊಂಡ ನಂತರ, ಕಾರ್ಮಿಕರು ಉದ್ಯೋಗದಾತನ ಆದೇಶದ ಮೇರೆಗೆ ಅನಿಯಮಿತ ದುಡಿಮೆ ಮಾಡುವ ಅನಿವಾರ್ಯತೆಗೆ ಒಳಪಡುತ್ತಾರೆ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡಲು ಗುತ್ತಿಗೆ ಪಡೆಯುತ್ತಾರೆ. ಇನ್ನೊಂದು ಅರ್ಥದಲ್ಲಿ ಉದ್ಯೋಗದಾತ ದುಡಿಮೆಗಾರನಿಂದ ಯಾವುದೇ ಕೆಲಸವನ್ನು ತೆಗೆದುಕೊಳ್ಳಲು ಮುಕ್ತರಾಗಿರುತ್ತಾರೆ ಎನ್ನುವುದು ಶ್ರಮದ ಶೋಷಣೆಯ ಮತ್ತೊಂದು ಸ್ವರೂಪವಾಗಿದೆ.
ತುಂಡು ಗುತ್ತಿಗೆ, ಪೀಸ್-ವರ್ಕ್, ಕೂಲಿಯ ವಿಳಂಬ ಪಾವತಿ, ಅನಿರೀಕ್ಷಿತ ಸಮಯಗಳಲ್ಲಿ ಅನಿಶ್ಚಿತತೆ ಇನ್ನೂ ಮುಂತಾದ ದುಡಿಮೆಯ ಸ್ವರೂಪಕ್ಕೆ ಶೋಷಿತ ಕೆಲಸಗಾರರು ತಳ್ಳಲ್ಪಟ್ಟಿದ್ದಾರೆ. ಇವರಿಗೆ ತಮ್ಮ ದುಡಿಮೆ ಸ್ಥಗಿತಗೊಂಡಾಗ ಅಥವಾ ಸಿಗದಿದ್ದಾಗ ಮನೆಗೆ ಹಿಂದಿರುಗುವುದನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ. ಏಕೆಂದರೆ ಯಾವುದೇ ಗಳಿಕೆ ಇಲ್ಲದೆ ನಗರದಲ್ಲಿ ಬದುಕುವುದು ಅಸಾಧ್ಯವಾಗುತ್ತಿದೆ. ಇದಕ್ಕೆ ಅಭಿವೃದ್ಧಿ ನೀತಿಗಳ ಒಳಗೆ ಇರುವ ಉತ್ಪಾದನೆ-ಆರ್ಥಿಕ ಬೆಳವಣಿಗೆ-ಉನ್ನತ ತಂತ್ರಜ್ಞಾನ ಕಾರಣವಾಗಿವೆ. ಇದರ ಸ್ವರೂಪ ಎಷ್ಟು ಗಂಭೀರವಾಗಿದೆ ಎಂಬ ವಿಚಾರ ಹೆಚ್ಚು ಬೆಳಕಿಗೆ ಬಂದಿದ್ದು ಕೋವಿಡ್-19 ಲಾಕ್‌ಡೌನ್ ಭಾರತದಲ್ಲಿ. ಆದರೂ ಜನರು ಭ್ರಮೆಗಳನ್ನು ಬಿತ್ತುವವರಿಗೆ ಮತ ಚಲಾಯಿಸುತ್ತಾರೆ. ಏಕೆಂದರೆ ಚುನಾವಣೆಗಳು ಅವರಿಗೆ ತಾತ್ಕಾಲಿಕ ಅಧಿಕಾರದ ಅರ್ಥವನ್ನು ನೀಡುತ್ತವೆ. ಕೆಲವೊಮ್ಮೆ ಅವರು ರಾಜಕೀಯ ನಾಯಕರ ಜನಪ್ರಿಯ ಹಾಗೂ ವಿಸ್ಮಯದ ಮಾತು ಗಳಿಗೂ ಮಾರು ಹೋಗುತ್ತಾರೆ. ಏಕೆಂದರೆ ದುಡಿಯುವ ಜನರಿಗೆ ಮಾತಿನ ಮೇಲೆ ಹೆಚ್ಚು ನಂಬಿಕೆ. ಅಲ್ಲದೇ ಯಾವುದೇ ರೀತಿಯ ದೀರ್ಘಾವಧಿಯ ಪ್ರಯೋಜನಗಳನ್ನು ಮತ್ತು ಪರಿಹಾರಗಳನ್ನು ನಿರೀಕ್ಷಿಸುವುದಿಲ್ಲ. ಅದಕ್ಕೆ ಸಮಯವೆಲ್ಲಿದೆ ಅವರ ಬಳಿ!
ಹೀಗಾಗಿ ಪ್ರಸಕ್ತ ಅಭಿವೃದ್ಧಿ ದೊಡ್ಡ ಬಂಡವಾಳಶಾಹಿಗಳು, ಉದ್ಯಮಿಗಳು, ರಾಜಕಾರಣಿಗಳು, ಮಾಧ್ಯಮಗಳು ಮತ್ತು ಬುದ್ಧಿಜೀವಿಗಳು ಜಂಟಿಯಾಗಿ ರಚಿಸಿಕೊಂಡಿರುವ ಉದ್ಯಮವಾಗಿದೆ. ಅಭಿವೃದ್ಧಿ ಪ್ರಕ್ರಿಯೆಗಳು ಸೃಷ್ಟಿಸಿರುವ ಸಮೃದ್ಧಿ, ಭವ್ಯವಾದ ಭ್ರಮೆಯು ಭವಿಷ್ಯದಲ್ಲಿ ಸುಲಭವಾಗಿ ಕೇವಲ ಕಾರ್ಯತಂತ್ರಗಳ ಮೂಲಕವೇ ನಿರ್ವಹಿಸಲು ಸಾಧ್ಯವಿಲ್ಲ. ಏಕೆಂದರೆ ಬಡವರ-ಅಸಹಾಯಕರ ಜೀವನದ ಅನುಭವಗಳು ಬೇರೆ ರೀತಿಯಲ್ಲಿಯೇ ಇವೆ. ಅವರ ಸಮಸ್ಯೆಗಳಿಗೆ ಭರವಸೆ ನೀಡುವ ಯಾವುದೇ ಪರಿಹಾರಗಳು ಬಹುತೇಕ ಮಟ್ಟಿಗೆ ಟೊಳ್ಳಾಗಿವೆ. ಏಕೆಂದರೆ, ಅಭಿವೃದ್ಧಿಯ ಹೆಸರಿನಲ್ಲಿ ಜನವಸತಿ ನೆಲೆಯಿಂದ, ವಿಧಾನಸಭೆ, ಲೋಕಸಭೆಯವರೆಗೆ ನಡೆಯುತ್ತಿರುವ ಚರ್ಚೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ, ಚುನಾಯಿತ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಮೇಲೆ ಉಂಟುಮಾಡಿರುವ ಹಾನಿಯನ್ನು ನಿಯಂತ್ರಿಸಲು ತೊಡಗಿಕೊಂಡಿರುವುದು ತಿಳಿಯುತ್ತದೆ. ಅದರಲ್ಲಿ ತಮ್ಮ ಬೆಂಬಲಿಗ ಶ್ರೀಮಂತರ ಮತ್ತು ಬಂಡವಾಳಶಾಹಿಗಳಿಗೆ ಹೆಚ್ಚು ಅನುಕೂಲ ಮಾಡುವುದು ಹೇಗೆ ಎಂಬ ಲೆಕ್ಕಾಚಾರವೇ ಹೆಚ್ಚಾಗಿದೆ. ಇದಕ್ಕೆ ರಾಷ್ಟ್ರೀಯ ಸಂಸ್ಕೃತಿಯ ಪುನರ್ ನಿರ್ಮಾಣ, ನವ ಭಾರತದ ಹೆಸರಿನಲ್ಲಿ ಜಾತಿ, ಕೋಮು, ಹಿಂಸಾಚಾರವನ್ನು ಮತ್ತು ಭ್ರಷ್ಟಾಚಾರವನ್ನು ಮುನ್ನೆಲೆಗೆ ತಂದು ಪಾರದರ್ಶಕ ಆಡಳಿತವನ್ನು ಬದಿಗೆ ಸರಿಸಲಾಗಿದೆ.
ಹೀಗಾಗಿ ನಮ್ಮ ಪ್ರಜಾಪ್ರಭುತ್ವದ ಅಭಿವೃದ್ಧಿ ರಾಜಕಾರಣವು ಆಳುವ ವರ್ಗಗಳ ದೃಷ್ಟಿಕೋನದಿಂದ ಬಡ ಬಹುಸಂಖ್ಯಾತರಿಗೆ ಏನಾಗುತ್ತದೆ ಎಂಬುದನ್ನು ಲೆಕ್ಕಿಸದೆ ಅಭಿವೃದ್ಧಿಯ ಲಾಭವನ್ನು ತಾವೇ ಗರಿಷ್ಠಗೊಳಿಸುವುದು ಹೇಗೆ ಎಂಬ ಲೆಕ್ಕಾಚಾರಕ್ಕೆ ಇಳಿದುಬಿಟ್ಟಿದೆ. ಇದು ಒಂದು ರೀತಿಯಲ್ಲಿ ಮಾಡು ಇಲ್ಲವೇ ಮಡಿ ಎನ್ನುವ ಆಟ. ಉಳಿವಿಗಾಗಿ ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರು ಅತ್ಯಂತ ಗಂಭೀರತೆಯಿಂದ ಆಡಬೇಕಾದ ಆಟ. ಇದನ್ನು ಆಳುವ ವರ್ಗದವರು ಸಂಪತ್ತು ಮತ್ತು ಅಧಿಕಾರಕ್ಕಾಗಿ ಆಡುತ್ತಾರೆ. ಏಕೆಂದರೆ ಅವರ ಆಳ್ವಿಕೆಯ ಹಕ್ಕು ಅವರು ಆಡುವ ಆಟದ ಮೇಲೆ ಅವಲಂಬಿತವಾಗಿರುತ್ತದೆ. ಇದು ಜನಸಾಮಾನ್ಯರಿಗೆ ಭೌತಿಕವಾಗಿ ಬದುಕುಳಿಯಲು ಆಡುವ ಆಟವಾಗಿದೆ.