ಪ್ರಿಯಾಂಕಾ ಗಾಂಧಿ ಅವರ ಮಾತುಗಳು ಕಾಂಗ್ರೆಸ್ ಪಾಲಿನ ಮತಗಳಾಗಿ ಬದಲಾದಾವೆ?
ಈ ಮಹಾ ಚುನಾವಣೆಯಲ್ಲೂ ಪ್ರಿಯಾಂಕಾ ಗಾಂಧಿ ಸ್ಪರ್ಧಿಸುತ್ತಿಲ್ಲ. ಅವರು ಸ್ಪರ್ಧಿಸುವ ಕುರಿತ ಎಲ್ಲ ಊಹಾಪೋಹಗಳು ಕೊನೆಗೆ ಊಹಾಪೋಹಗಳಾಗಿಯೇ ಉಳಿಯುತ್ತಿವೆ. ಆದರೆ ಈ ಚುನಾವಣೆಯಲ್ಲಿನ ಪ್ರಿಯಾಂಕಾ ಫ್ಯಾಕ್ಟರ್ ಈಗಿನ ಕುತೂಹಲಕಾರಿ ಸಂಗತಿಯಾಗಿದೆ.
ಕಳೆದೆರಡು ವರ್ಷಗಳಲ್ಲಿ ಸಂಪೂರ್ಣ ಬದಲಾಗಿರುವ ರಾಹುಲ್ ಗಾಂಧಿ ಒಬ್ಬ ಪ್ರಬುದ್ಧ ನಾಯಕನಾಗಿ ದೇಶಾದ್ಯಂತ ಚರ್ಚೆಯಲ್ಲಿದ್ದಾರೆ.
ಬಿಜೆಪಿ, ಸಂಘ ಪರಿವಾರದ ಪಾಲಿನ ದೊಡ್ಡ ತಲೆನೋವಾಗಿ ಅವರು ದೇಶದ ಉದ್ದಗಲಗಳಲ್ಲಿ ಪ್ರಚಾರ ಮಾಡುತ್ತಾ ಇದ್ದಾರೆ. ಆದರೆ ಕಾಂಗ್ರೆಸ್‌ನೊಳಗಿನ ಸೈಲೆಂಟ್ ಶಕ್ತಿಯಾಗಿರುವ ಪ್ರಿಯಾಂಕಾ ಈ ಚುನಾವಣೆಯಲ್ಲಿ ಬೀರುತ್ತಿರುವ ಪ್ರಭಾವ ಏನು? ಓರ್ವ ನಾಯಕಿಯಾಗಿ, ಓರ್ವ ಭಾಷಣಕಾರ್ತಿಯಾಗಿ ಅವರೆಷ್ಟು ಮಾಗಿದ್ದಾರೆ?
ಉತ್ತರ ಪ್ರದೇಶ ಸಹಿತ ಹಿಂದಿ ಹಾರ್ಟ್‌ಲ್ಯಾಂಡ್ ಗಳಲ್ಲಿ ಅವರಿಗೆ ಸಿಗುತ್ತಿರುವ ಅಪಾರ ಜನ ಬೆಂಬಲ, ಭಾರೀ ಪ್ರತಿಕ್ರಿಯೆ ಕಾಂಗ್ರೆಸ್‌ಗೆ ವೋಟಾಗಿ ಪರಿವರ್ತನೆ ಆಗಲಿದೆಯೇ? ಪ್ರಭಾವೀ ನಾಯಕಿಯಾಗಿ ಅವರು ಎಷ್ಟು ಬೆಳೆದಿದ್ದಾರೆ? ಕಾಂಗ್ರೆಸ್‌ಗೆ ಅವರೆಷ್ಟು ಪ್ರಯೋಜನ? ಅಥವಾ ಅವರು ಪಕ್ಷಕ್ಕೆ ಎಷ್ಟು ಹೊರೆ? ಈಗಲೂ ಅವರ ಭಾಷಣದಲ್ಲಿ ಎದ್ದು ಕಾಣುವ ಸಮಸ್ಯೆಗಳೇನು ?
ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ನೋಡುವುದಾದರೆ,
ಪ್ರಿಯಾಂಕಾ ಗಾಂಧಿ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.
ಅವರು ಉಪಚುನಾವಣೆಯಲ್ಲಿ ಸ್ಪರ್ಧಿಸಲೂಬಹುದು ಎಂಬ ಮಾತು ಕೇಳಿಬರುತ್ತಿದೆ. ಸದ್ಯಕ್ಕೆ ಅವರು ಚುನಾವಣಾ ಪ್ರಚಾರಕ್ಕೆ ತಮ್ಮ ಪೂರ್ತಿ ಗಮನವನ್ನು ಮೀಸಲಿಟ್ಟಿದ್ದಾರೆ.
ಪ್ರಿಯಾಂಕಾ ಗಾಂಧಿಯವರ ಮಾತಿನ ಶೈಲಿ ಕೂಡ ಯೋಚಿಸಬೇಕಾದ ಸಂಗತಿ. ಪ್ರಿಯಾಂಕಾ ಅವರ ಭಾಷೆ ಉಪನ್ಯಾಸದ ಭಾಷೆಯಲ್ಲ. ಅವರು ಶಿಕ್ಷಕರ ಹಾಗೆ ಸಂವಾದಕ್ಕೆ ಅವಕಾಶವಾಗುವಂತೆ ಮಾತನಾಡುವುದರಲ್ಲಿ ಪಳಗಿದ್ದಾರೆ.
ಪ್ರಿಯಾಂಕಾ ಕರ್ನಾಟಕದಲ್ಲಿ ಮಾತನಾಡಲಿ, ಗುಜರಾತಿನಲ್ಲಿ ಮಾತನಾಡಲಿ, ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ಮಾತಾಡಲಿ, ಅವರು ಎತ್ತುವ ಪ್ರಶ್ನೆಗಳು, ಜನರಿಗೆ ಅರ್ಥ ಮಾಡಿಸುವ ರೀತಿ ಗಮನ ಸೆಳೆಯುತ್ತಿದೆ.
ಬಿಜೆಪಿಗೆ ಈಗಾಗಲೇ ಒಂದು ಭಯ, ಒಂದು ಬಗೆಯ ತಳಮಳ ಶುರುವಾಗಿರುವಾಗ ಪ್ರಿಯಾಂಕಾ ಅವರ ಮಾತುಗಳು ಜನರಿಗೆ ಬೇಕಾಗಿರುವುದೇನು ಎಂಬುದನ್ನು ಎತ್ತಿಹೇಳುತ್ತವೆ. ಸತ್ಯವೇನು ಎಂಬುದನ್ನು ಜನರು ತಿಳಿಯಬೇಕಾದ ಅಗತ್ಯವನ್ನು ಅವರು ತಮ್ಮ ಮಾತುಗಳಲ್ಲಿ ಪ್ರತಿಪಾದಿಸುತ್ತಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಅಬ್ಬರದಲ್ಲಿ ಇಲ್ಲವಾಗಿರುವ ಕಾಂಗ್ರೆಸ್ ಅಸ್ತಿತ್ವವನ್ನು ಮತ್ತೆ ಮರಳಿಸುವ ಹಾಗೆ ಪ್ರಿಯಾಂಕಾ ಪ್ರಚಾರ ಶೈಲಿ ಗಮನ ಸೆಳೆಯುತ್ತದೆ.
ಮೋದಿ ಸುಳ್ಳು ಮತ್ತು ದ್ವೇಷವನ್ನೇ ಹರಡುತ್ತಿರುವ ಹೊತ್ತಿನಲ್ಲಿ, ನಿರುದ್ಯೋಗ, ಬೆಲೆಯೇರಿಕೆಯಂಥ ಸಮಸ್ಯೆಗಳು ಜನರನ್ನು ಹೈರಾ ಣಾಗಿಸಿರುವ ಹೊತ್ತಿನಲ್ಲಿ, ಮಾಧ್ಯಮಗಳು ಮಾತಾ ಡದೇ ಇರುವ ಹೊತ್ತಿನಲ್ಲಿ, ಪ್ರಿಯಾಂಕಾ ಮಾತುಗಳು ಸತ್ಯವೇನು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವ ರೀತಿಯಲ್ಲಿರುತ್ತವೆ.
‘‘ದೊಡ್ಡ ದೊಡ್ಡ ಹೋರ್ಡಿಂಗ್‌ಗಳು, ಅವರ ಆಕರ್ಷಕ ಭಾಷಣಗಳು, ಟಿವಿಯಲ್ಲಿ ತೋರಿಸಲಾಗುವ ಸಂಗತಿಗಳು ಅದಾವುದೂ ಸತ್ಯವಲ್ಲ, ಸತ್ಯ ಎನ್ನು ವುದು ನಿಮ್ಮ ಜೀವನ’’ ಎನ್ನುತ್ತಾರೆ ಪ್ರಿಯಾಂಕಾ.
‘‘ದೇಶದಲ್ಲಿ ನಿರುದ್ಯೋಗವಿದೆ ಎನ್ನುವುದು ಸತ್ಯ, ಬೆಲೆಯೇರಿಕೆ ಜನರನ್ನು ಕಾಡುತ್ತಿರುವುದು ಸತ್ಯ, ಇವಾವುದರ ಬಗ್ಗೆಯೂ ಸರಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂಬುದೂ ಸತ್ಯ.ಸತ್ಯ ಯಾವುದು ಎಂಬುದನ್ನು ತಿಳಿಯಿರಿ. ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. 10 ವರ್ಷಗಳ ಅಧಿಕಾರದ ನಂತರವೂ ನಿಮಗಾಗಿ ಏನನ್ನೂ ಕೊಡದವರ ಬಗ್ಗೆ ತಿಳಿದುಕೊಳ್ಳಿ’’
ಹೀಗೆ ಪ್ರಿಯಾಂಕಾ ಮಾತು ಸತ್ಯವನ್ನು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಸಾಗುತ್ತದೆ.
‘‘ಶ್ರೀಮಂತರ 16 ಲಕ್ಷ ಕೋಟಿ ಸಾಲವನ್ನು ಮೋದಿ ಸರಕಾರ ಮಾಫಿ ಮಾಡಿದೆ. ಆದರೆ, 10 ಸಾವಿರ ರೂ. ಸಾಲಕ್ಕಾಗಿ ಈ ದೇಶದ ಬಡ ರೈತರು ಬ್ಯಾಂಕುಗಳಿಂದ, ಖಾಸಗಿ ಲೇವಾದೇವಿಗಾರರಿಂದ ಕಿರುಕುಳ ಅನುಭವಿಸಬೇಕಾಗಿದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ’’ ಎಂಬ ಸತ್ಯದ ಕಡೆಗೆ ಪ್ರಿಯಾಂಕಾ ಗಮನ ಸೆಳೆಯುತ್ತಾರೆ.
ಜನರು ತಮ್ಮದೇ ಬ್ಯಾಂಕುಗಳಿಂದ ತಮ್ಮದೇ ದುಡ್ಡನ್ನು ತೆಗೆದುಕೊಳ್ಳುವುದಕ್ಕೂ ತೊಡಕು ತಂದಿಟ್ಟಿರುವುದರ ಬಗ್ಗೆ ಪ್ರಿಯಾಂಕಾ ಹೇಳುತ್ತಾರೆ.
ಪ್ರಧಾನಿ ಮೋದಿ ಏನೇ ಆರೋಪ ಮಾಡಿದರೂ, ಪ್ರಿಯಾಂಕಾ ತಮ್ಮದೇ ಆದ ದೃಷ್ಟಿಯಿಂದ ಆ ಆರೋಪಕ್ಕೆ ಪ್ರತ್ಯುತ್ತರ ಕೊಡಬಲ್ಲರು.
ಮೋದಿ ಸುಳ್ಳು ಮತ್ತು ದ್ವೇಷಗಳನ್ನು ಬಳಸಿಕೊಂಡು ಜನರ ಚಪ್ಪಾಳೆ ಗಿಟ್ಟಿಸುವಾಗ, ಅವರೆ ಡನ್ನೂ ಮಾಡದೆ ಸತ್ಯದ ಮೂಲಕವೇ ಪ್ರಿಯಾಂಕಾ ಜನರನ್ನು ತಲುಪು ತ್ತಿದ್ದಾರೆ.
ಪ್ರಿಯಾಂಕಾ ಈ ಹಿಂದೆ ಮಾಡುತ್ತಿದ್ದ ಭಾಷಣಕ್ಕೂ ಈಗ ಅವರು ಮಾಡು ತ್ತಿರುವ ಭಾಷಣಗಳ ರೀತಿಯಲ್ಲೂ ವ್ಯತ್ಯಾಸ ಎದ್ದು ಕಾಣುತ್ತಿದೆ ಎಂಬುದು ಮತ್ತೊಂದು ಮುಖ್ಯ ಅಂಶ.
ಅವರು ಹೊಸದೇನನ್ನೋ ಹೇಳುತ್ತಿದ್ದಾರೆ, ಹೊಸ ಬಗೆಯಲ್ಲಿ ಜನರನ್ನು ಸೆಳೆಯುವ ಶೈಲಿಯೊಂದನ್ನು ಅವರು ರೂಢಿಸಿಕೊಂಡಿದ್ದಾರೆ.
ಈಚೆಗೆ ಅವರು ಅಮೇಠಿ ಮತ್ತು ರಾಯ್ ಬರೇಲಿಯಲ್ಲಿನ ರ್ಯಾಲಿ ಬಳಿಕ ಫತೇಪುರ್ ಸಿಕ್ರಿಗೆ ಹೋದರು. ಅಲ್ಲಿನ ರೋಡ್ ಶೋನಲ್ಲಿ ಪ್ರಿಯಾಂಕಾ ಪಾಲ್ಗೊಂಡರು. ಅಲ್ಲಿ ಸೇರಿದ್ದ ಜನಸಾಗರ ನೋಡಿದರೆ, ಚುನಾವಣೆಗೆ ನಿಲ್ಲದೆಯೂ ಪ್ರಿಯಾಂಕಾ ಗೆದ್ದಿದ್ದಾರೆ ಎನ್ನುವ ಹಾಗಿತ್ತು.
ರೋಡ್ ಶೋನಲ್ಲಿ ಬರೆದುಕೊಂಡ ಭಾಷಣ ಮಾಡುವ ಸಾಧ್ಯತೆಯಂತೂ ಇಲ್ಲ.
ಮೋದಿ ಕೂಡ ರೋಡ್ ಶೋ ಮಾಡುತ್ತಾರೆ. ಆದರೆ ಅವರು ರೋಡ್ ಶೋನಲ್ಲಿ ಭಾಷಣ ಮಾಡಿದ್ದೇ ಇಲ್ಲ.
ಅಲ್ಲಿ ತಮ್ಮ ಭಾಷಣದಲ್ಲಿ ಪ್ರಿಯಾಂಕಾ, ಮೋದಿಯನ್ನು ‘‘ಕೋಟ್ಯಧಿಪತಿಗಳ ಮಿತ್ರ’’ ಎಂದು ಕರೆದರು. 10 ವರ್ಷಗಳ ಆಡಳಿತದಲ್ಲಿ ಮೋದಿ ಅಹಂಕಾರಿಯಾಗಿರುವುದರ ಬಗ್ಗೆ ಹೇಳಿದರು.
ಭಾಷಣದ ವೇಳೆ ಭಾವುಕತೆಯನ್ನು ತರುವ ಮೋದಿ, ಚುನಾವಣೆ ಬಳಿಕ ಎಲ್ಲವನ್ನೂ ಮರೆಯುತ್ತಾರೆಂಬ ವಿಚಾರವನ್ನು ಪ್ರಿಯಾಂಕಾ ಹೇಳಿದರು. ಪ್ರಿಯಾಂಕಾ ಮಾತಿನ ಶೈಲಿಯಲ್ಲಿ ಗಮನ ಸೆಳೆಯುವುದೇ ಅವರು ಎಲ್ಲವನ್ನೂ ಸರಳವಾಗಿ ಮತ್ತು ಸಹಜವಾಗಿ ಹೇಳುವ ರೀತಿ.
ಮಂಗಲಸೂತ್ರ ವಿಚಾರ ಎತ್ತಿ ಮೋದಿ ಅಪಪ್ರಚಾರ ಮಾಡಿದ್ದಕ್ಕೆ ಪ್ರಿಯಾಂಕಾ ತಮ್ಮ ಪ್ರಚಾರ ಸಭೆಯಲ್ಲಿ ಖಡಕ್ ಉತ್ತರ ಕೊಟ್ಟರು. ‘‘ದೇಶ ಸ್ವತಂತ್ರವಾಗಿ 70 ವರ್ಷವಾಗಿದೆ. 50 ವರ್ಷ ದೇಶವನ್ನಾಳಿದ ಕಾಂಗ್ರೆಸ್ ನಿಮ್ಮ ಚಿನ್ನ, ಮಂಗಲಸೂತ್ರವನ್ನು ಕಸಿದುಕೊಂಡಿದೆಯೇ?’’ಎಂದು ಕೇಳಿದರು.
‘‘ಇಂದಿರಾ ಗಾಂಧಿ ತನ್ನ ಚಿನ್ನವನ್ನೆಲ್ಲ ದೇಶಕ್ಕಾಗಿ ಕೊಟ್ಟರು. ನನ್ನ ತಾಯಿಯ ಮಂಗಲಸೂತ್ರ ಈ ದೇಶಕ್ಕಾಗಿ ಬಲಿಯಾಯಿತು’’ ಎಂದು ಪ್ರಿಯಾಂಕಾ ಹೇಳಿದರು.
ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಗಮನಿಸಿರುವ ಪ್ರಕಾರ, ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರ ಭಾಷಣದ ರೀತಿಯಲ್ಲಿ ಅಂತರವಿದೆ.
ಕಡಿಮೆ ಶಬ್ದಗಳಲ್ಲಿ ಕಡಿಮೆ ನಗುವಿನೊಂದಿಗೆ ರಾಹುಲ್ ಭಾಷಣ ಮಾಡಿದರೆ, ಪ್ರಿಯಾಂಕಾ ಹೆಚ್ಚು ದೀರ್ಘವಾಗಿ ಮತ್ತು ನಗುನಗುತ್ತಲೇ ಮಾತನಾಡುತ್ತಾರೆ.
ಪ್ರಿಯಾಂಕಾ ಜನರ ನಡುವೆ ಜನಸಾಮಾನ್ಯರಂತೆಯೇ ಬೆರೆಯುತ್ತ ಮಾತಾಡುತ್ತಾರೆ.
ಧರ್ಮದ ಹೆಸರೆತ್ತಿ ಮಾತನಾಡಿದರೆ ಮುಗಿಯಿತು ಎಂದುಕೊಂಡವರ ಮನಸ್ಥಿತಿ ಬದಲಿಸುವ ರೀತಿಯಲ್ಲಿ ಜನರು ಮತ ನೀಡಬೇಕಾದ ಅಗತ್ಯವನ್ನು ಪ್ರಿಯಾಂಕಾ ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ಧಾರೆ.
ಜನತೆ ಇವತ್ತು ಜಾಗೃತರಾಗದೇ ಹೋದರೆ, ಅವತ್ತು ದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟಗಳಿಗೆ ಏನು ಅರ್ಥ ಎಂದು ಪ್ರಿಯಾಂಕಾ ಕೇಳುತ್ತಾರೆ.
ಆದರೆ ಪ್ರಿಯಾಂಕಾ ಗಾಂಧಿಯವರ ಭಾಷಣಗಳಲ್ಲಿ ಗಂಭೀರ ದೋಷಗಳೂ ಇವೆ ಎಂದು ವಿಶ್ಲೇಷಕರು ಹೇಳುತ್ತಾರೆ.
ರವೀಶ್ ಅವರು ಹೇಳುವ ಪ್ರಕಾರ, ದೇಶದ ಜನಸಾಮಾಮಾನ್ಯ ರಲ್ಲಿ ಭಯ ತುಂಬುವ ಮೋದಿ ಭಾಷಣದ ಎದುರು, ಪ್ರಿಯಾಂಕಾ ಗಾಂಧಿಯವರ ಸಜ್ಜನಿಕೆ ಮತ್ತು ಸತ್ಯದ ಭಾಷಣ ಪರಿಣಾಮಕಾರಿಯಾಗದು.
ಮೋದಿ ಜನರನ್ನು ಭಯಗೊಳಿಸುವ ರೀತಿಯಲ್ಲಿ ಮಾತನಾಡುತ್ತ, ಅವರ ರಕ್ಷಣೆಗಾಗಿ ತಾನಿರುವುದಾಗಿ ಹೇಳುವಾಗ, ಪ್ರಿಯಾಂಕಾ ಗಾಂಧಿಯವರು ಹೋಗಿ ಅಧಿಕಾರದಲ್ಲಿರುವವರನ್ನು ಬದಲಿಸಿ ಎಂದರೆ ಅದು ಜನರನ್ನು ಮುಟ್ಟಲಾರದು.
ವಿಮರ್ಶೆಗಳು ಏನೇ ಇದ್ದರೂ, ಅಜ್ಜಿ ಇಂದಿರಾ ಅವರನ್ನು ನೆನಪಿಸುವ ಪ್ರಿಯಾಂಕಾ ಗಾಂಧಿ, ಆ ಕುಟುಂಬದ ನಾಯಕತ್ವದ ಚಹರೆಯನ್ನೂ ತಮ್ಮ ವ್ಯಕ್ತಿತ್ವದಲ್ಲಿ ಹೊಂದಿರುವವರು.
ಅವರು ರಾಹುಲ್ ಗಾಂಧಿ ಜನರೊಡನೆ ಬೆರೆಯುವುದಕ್ಕೂ ಮೊದಲಿಂದಲೂ ರಾಜಕೀಯ ಭಾಷಣಗಳ ಮೂಲಕ ಗಮನ ಸೆಳೆದವರು.
ಈ ಸಲದ ಚುನಾವಣೆಯಲ್ಲಿ ಪ್ರಚಾರಕ್ಕೆಂದೇ ಪೂರ್ತಿಯಾಗಿ ತೊಡಗಿಸಿಕೊಂಡಿರುವ ಅವರು, ಕಾಂಗ್ರೆಸ್ ಕಡೆಯಿಂದ ಹೋಗಬೇಕಾದ ಉತ್ತರ, ಕಾಂಗ್ರೆಸ್ ಕಡೆಯಿಂದ ಹೋಗಬೇಕಿರುವ ಸಂದೇಶಗಳನ್ನು ಮುಟ್ಟಿಸುವ ಮಹತ್ವದ ಧ್ವನಿಯಂತೂ ಹೌದು.
ಪ್ರಿಯಾಂಕಾ ವರ್ಷಗಳಿಂದ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. ಅವರು ಹೋದಲ್ಲೆಲ್ಲ ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅವರ ಮಾತುಗಳನ್ನು ಕೇಳುತ್ತಾರೆ.
ಆದರೆ ಕಳೆದ ಹಲವು ಚುನಾವಣೆಗಳಲ್ಲಿ ಅವರ ಮಾತು ಕೇಳಲು ಬಂದ ಜನ ಕಾಂಗ್ರೆಸ್‌ಗೆ ಮತ ಹಾಕಿದ್ದು ಕಡಿಮೆ. ಅವರು ಹೋದಲ್ಲೆಲ್ಲ ಕಾಂಗ್ರೆಸ್‌ಗೆ ಜಯ ಸಿಕ್ಕಿದ್ದು ಇನ್ನೂ ಕಡಿಮೆ.
ಈಗಲೂ ಅವರು ಹೋದಲ್ಲೆಲ್ಲ ಭಾರೀ ಸಂಖ್ಯೆಯಲ್ಲಿ ಜನ ಸೇರುತ್ತಾ ಇದ್ದಾರೆ. ಅವರ ಭಾಷಣ, ಅವರು ಹೇಳುತ್ತಿರುವ ಸತ್ಯಗಳಿಗೆ ಸೇರಿರುವ ಜನಸಾಗರದಿಂದ ದೊಡ್ಡ ಪ್ರತಿಕ್ರಿಯೆಯೂ ಬರುತ್ತಿದೆ.
ಇವೆಲ್ಲವೂ ಕಾಂಗ್ರೆಸ್ ಪಾಲಿನ ಮತಗಳಾಗಿ ಬದಲಾಗುವವೆ? ಇದು ಈಗಿರುವ ಪ್ರಶ್ನೆ ಮತ್ತು ಕಾಂಗ್ರೆಸ್ ಎದುರಿನ ಜರೂರು.