ಡಿ.ಕೆ. ಶಿವಕುಮಾರ್ ಹೈಕಮಾಂಡನ್ನು ಮಣಿಸಲೆಂದೇ ಧಾರ್ಮಿಕ ಪರ್ಯಟನೆಯ ಆಯ್ಕೆಯನ್ನು ಆಯ್ದುಕೊಂಡರೇ?

ಕಾಂಗ್ರೆಸ್ ಒಂದು ಉದಾರವಾದಿ ರಾಜಕೀಯ ಪಕ್ಷವಾಗಿರುವುದರಿಂದ ಆದರ ಯಾವ ನಾಯಕ, ಕಾರ್ಯಕರ್ತ ತನಗೆ ಇಚ್ಛೆ ಬಂದ ಯಾವ ಧಾರ್ಮಿಕ ಆಚರಣೆಗಳನ್ನೂ ಆಚರಿಸಬಹುದು, ಅವುಗಳಲ್ಲಿ ಪಾಲ್ಗೊಳ್ಳಬಹುದು. ನಮ್ಮ ನಾಡಿನ ಉಪಮುಖ್ಯ ಮಂತ್ರಿಗಳು ಅದಕ್ಕೆ ಸಂಪೂರ್ಣ ಸ್ವಂತಂತ್ರರು. ಆದರೆ ಈ ಧಾರ್ಮಿಕ ಪರ್ಯಟನೆಯ ಸ್ಥಳ ಮತ್ತು ಅದನ್ನು ಸಾರ್ವಜನಿಕಗೊಳಿಸುತ್ತಿರುವ ರೀತಿ ಇದು ಕೇವಲ ಧಾರ್ಮಿಕವಷ್ಟೇ ಅಲ್ಲ, ಬದಲಾಗಿ ಅವರು ಹೈಕಮಾಂಡ್‌ಗೆ ಒಂದು ಸಂದೇಶ ಕಳುಹಿಸುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟಗೊಳಿಸುತ್ತಿದೆ.
‘I am a congressman by Birth ಹುಟ್ಟಿನಿಂದಲೇ ನಾನು ಕಾಂಗ್ರೆಸಿಗ’ ಇದು ನಾಡಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಘೋಷಿತ ಹೇಳಿಕೆ. ಈ ಮಾದರಿಯ ದೃಢವಾದ ಹೇಳಿಕೆ ಮತ್ತು ಅದಕ್ಕೆ ಬದ್ಧವಾದ ಪಕ್ಷನಿಷ್ಠೆಯೇ ಅವರನ್ನು ಇಂದಿಗೂ ಸೋನಿಯಾ ಗಾಂಧಿಯವರ ಆಪ್ತವಲಯದಲ್ಲಿ ಗುರುತಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ರಾಜಕೀಯ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಬಂದೊದಗಿದ ಕಾನೂನು ಸಂಕಷ್ಟದ ಪರಿಸ್ಥಿತಿ ಬೇರೆ ಯಾವೊಬ್ಬ ನಾಯಕರಿಗೆ ಬಂದಿದ್ದರೂ ಬಹುತೇಕರು ‘ಹುಟ್ಟಿನಿಂದಲೇ ನಾನು ಕಾಂಗ್ರೆಸಿಗ’ ಎಂಬ ಹೇಳಿಕೆಯಿಂದ ಹಿಂದೆ ಸರಿದು ಪಕ್ಷಾಂತರದ ಹಾದಿ ಹಿಡಿದುಬಿಡುತ್ತಿದ್ದರು ಎಂಬ ಅಂಶವನ್ನು ಸಾಮಾನ್ಯ ಜನರಿಂದ ಹಿಡಿದು ರಾಜಕೀಯ ಚಿಂತಕರ ತನಕ ಒಪ್ಪುತ್ತಾರೆ.
ಗೆದ್ದಾಗ, ಸೋತಾಗ ಮತ್ತು ರಾಜಕೀಯ ಕಾರಣಕ್ಕೆ ಜೈಲುವಾಸಕ್ಕೆ ಹೋದಾಗ, ದೃಶ್ಯ ಮಾಧ್ಯಮಗಳು ಅವರ ವೈಯಕ್ತಿಕ ಬದುಕನ್ನು ಎಳೆದು ತಂದು ಅವರನ್ನು ನೈತಿಕವಾಗಿ ಕುಗ್ಗಿಸಲು ಪ್ರಯತ್ನಿಸಿದಾಗಲೂ ಡಿ.ಕೆ. ಶಿವಕುಮಾರ್ ಹೇಳಿದ್ದು ‘I am a congressman by Birth’ ಎನ್ನುವ ಹೇಳಿಕೆಯನ್ನೇ.
ಈ ಎಲ್ಲಾ ಹೋರಾಟ, ಅಪಮಾನಗಳ ಹಾದಿಯೇ ಅವರನ್ನು 2020ರಲ್ಲಿ ‘ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ’ಯ ಅಧ್ಯಕ್ಷ ಗಾದಿಗೆ ತಂದು ಕೂರಿಸಿತ್ತು ಅನ್ನಿಸುತ್ತದೆ. ಆಮೇಲೆ ನಡೆದದ್ದು ಚರಿತ್ರೆ. ಮೂಲತಃ ಚತುರ ಸಂಘಟನಾಕಾರ, ನಾಯಕತ್ವದ ಗುಣ ಇರುವ ಶಿವಕುಮಾರ್ ಅವರಿಗೆ ಪಕ್ಷ ಕಟ್ಟಬೇಕಿರುವುದು ಬೆಂಗಳೂರಿನಲ್ಲಿ ಕುಳಿತು ಮಾತ್ರವಲ್ಲ ಅದನ್ನು ಕಟ್ಟಬೇಕಿರುವುದು ತಳಮಟ್ಟದಿಂದ ಎಂದು ಅನ್ನಿಸಿತ್ತೋ ಏನೋ...!
ರಾಗ/ದ್ವೇಷಗಳ ಗುಂಪಾಗಿದ್ದ(ಈಗಲೂ ಅದೇ ಆಗಿದೆ)ಕಾಂಗ್ರೆಸ್‌ನ ಎಲ್ಲಾ ನಾಯಕರನ್ನು ಸಿದ್ದರಾಮಯ್ಯನವರ ಜೊತೆಗೊಡಿ ಒಟ್ಟುಗೂಡಿಸಿಕೊಂಡು ಅಭಿಯಾನಗಳ ಮೇಲೆ ಅಭಿಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಅಂದಿನ ಆಡಳಿತ ಪಕ್ಷದ ವಿರುದ್ಧದ ಕಾಂಗ್ರೆಸ್ ಹೋರಾಟ ಮಾಧ್ಯಮಗಳಲ್ಲಿ ಸತತವಾಗಿ ದಾಖಲಾಗುವಂತೆ ಮಾಡಿದ್ದು ಕಾಂಗ್ರೆಸ್ ಪಾಳಯದಲ್ಲಿ ಆದರಲ್ಲೂ ತಳಮಟ್ಟದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತಂದಿತ್ತು.
ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ನ ಅಸ್ತಿತ್ವವೇ ಇಲ್ಲವೇನೋ ಎನ್ನುವಂತಿದ್ದ ಸ್ಥಿತಿಯನ್ನು ಸಂಪೂರ್ಣ ಬದಲಿಸಿದ್ದರ ಹಿಂದೆ ಡಿ.ಕೆ. ಶಿವಕುಮಾರ್ ತಂತ್ರಗಾರಿಕೆ ಖಂಡಿತ ಕೆಲಸ ಮಾಡಿದೆ ಅನ್ನಿಸುತ್ತದೆ. ಆದರಲ್ಲೂ ‘ಶೇ. 40 ಕಮಿಷನ್ ಅಭಿಯಾನ’, ‘ಪೇ ಸಿಎಂ’ ಅಭಿಯಾನಗಳು ಎಷ್ಟು ವೇಗವಾಗಿ ಜನರನ್ನು ತಲುಪಿದವು ಅಂದರೆ ದಿನ ಬೆಳಗಾಗುವುದರೊಳಗೆ ‘40 ಪರ್ಸೆಂಟ್ ಸರಕಾರ’ ಎಂಬ ಅಭಿಯಾನ ಜನರ ನಡುವಿನ ಕೇಂದ್ರ ಚರ್ಚೆಯ ಸಂಗತಿಗಳಾಗಿ ಬದಲಾಗಿ ಕರ್ನಾಟಕದ ಚುನಾವಣೆಯ ದಿಕ್ಕನ್ನೇ ಬದಲಿಸಿಬಿಟ್ಟಿದ್ದವು.
ಈ ಎಲ್ಲಾ ಹೋರಾಟಗಳ ಭಾಗವಾಗಿಯೇ ನಾವು 2023ರಲ್ಲಿ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಗಮನಿಸಬೇಕಿದೆ. ಸ್ವತಃ ಅಮಿತ್ ಶಾ ಅವರು ‘‘ಬರೆದು ಕೊಡುತ್ತೇನೆ ಕರ್ನಾಟಕದಲ್ಲಿ ಬಿಜೆಪಿ ಕನಿಷ್ಠ 128 ಸೀಟು ಬರುತ್ತವೆ, ಗರಿಷ್ಠ ನಿಮ್ಮ ಊಹೆಗೆ ಬಿಟ್ಟಿದ್ದು’’ ಎಂಬ ಅರ್ಥದ ಹೇಳಿಕೆಯನ್ನು ನೀಡಿದ್ದರು..! ಆದರೆ ಕರ್ನಾಟಕದ ಜನ ಬಿಜೆಪಿಯನ್ನು 66ಕ್ಕೆ ನಿಲ್ಲಿಸಿ ಕಾಂಗ್ರೆಸ್ ತೆಕ್ಕೆಗೆ 135 ಸೀಟುಗಳನ್ನು ನೀಡಿಬಿಟ್ಟಿದ್ದರು. ಒಂದು ಅರ್ಥದಲ್ಲಿ ಕರ್ನಾಟಕದ ಜನತೆ ಕೋಮುವಾದದ ವಿರುದ್ಧ ನಾವು ಎಂಬ ಸಂದೇಶ ದಾಖಲಿಸಿದ್ದರು.
ಯಾರು ಏನೇ ವಿಶ್ಲೇಷಣೆ ಮಾಡಿದರೂ 2021ರಿಂದ 2023ರ ತನಕ ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನನ್ನು ತಾನು ಪುನರುಜ್ಜೀವನಗೊಳಿಸಿಕೊಳ್ಳುವಲ್ಲಿ ಡಿ.ಕೆ. ಶಿವಕುಮಾರ್‌ಅವರ ಬೆವರು ಮತ್ತು ಕಣ್ಣೀರು ಎರಡನ್ನೂ ಯಥೇಚ್ಛವಾಗಿ ಬಳಸಿಕೊಂಡಿದೆ. ವರ್ತಮಾನದ ಯುವ ತಲೆಮಾರು ನಿರೀಕ್ಷೆ ಮಾಡುವ ಅಗ್ರೆಸಿವ್ ನಾಯಕತ್ವವನ್ನು ಡಿ.ಕೆ. ಶಿವಕುಮಾರ್‌ಪ್ರದರ್ಶಿಸಿದ್ದು ಕರ್ನಾಟಕ ಕಾಂಗ್ರೆಸ್ ಬೆಳವಣಿಗೆಯ ಮೇಲೆ ಸಾಕಷ್ಟು ಸಕಾರಾತ್ಮಕ ಫಲಿತಾಂಶ ಬೀರಿತ್ತು. ಇದರ ಅರ್ಥ ಬೇರೆ ನಾಯಕರ ಪಾತ್ರ ಇಲ್ಲ ಅಂತ ಅಲ್ಲ; ಬದಲಾಗಿ ಡಿ.ಕೆ. ಶಿವಕುಮಾರ್ ಅವರ ಪಾತ್ರವನ್ನು ಮರೆತು ಅಥವಾ ಕಡೆಗಣಿಸಿ ಇಂದಿನ ಕಾಂಗ್ರೆಸ್ ಯಶಸ್ಸಿನ ಕುರಿತು ಮಾತನಾಡಲು ಆಗುವುದಿಲ್ಲ ಎಂಬುದು ವಾದ.
ಇಷ್ಟೆಲ್ಲಾ ಹೋರಾಟಮಾಡಿದ ಮೇಲೆ ಸಿಗಬೇಕಾದ ಪ್ರತಿಫಲ ದಕ್ಕಬೇಕಾದ ಪ್ರಮಾಣದಲ್ಲಿ ತನಗೆ ದಕ್ಕಿದೆಯೇ? ಎಂಬ ಪ್ರಶ್ನೆ ಸರಕಾರ ರಚನೆಯಾದ 2.5 ವರ್ಷಗಳ ನಂತರ ಸ್ವತಃ ಡಿ.ಕೆ. ಶಿವಕುಮಾರ್ ಅವರಿಗೆ ಬಂದಂತಿದೆ. ಆದರೆ ಪ್ರತಿಪಕ್ಷಗಳ ವಿರುದ್ಧ ನಡೆಸುವ ಚುನಾವಣಾ ತಂತ್ರಗಾರಿಕೆಗೂ, ಸ್ವಪಕ್ಷೀಯರ ಜೊತೆ ನಡೆಸುವ ಅಧಿಕಾರಕ್ಕಾಗಿನ ತಂತ್ರಗಾರಿಕೆಗೂ ಇರುವ ಅಂತರವನ್ನು ಅರಿತುಕೊಳ್ಳುವುದರಲ್ಲಿ ಅವರು ತುಸು ಎಡವಿದ್ದಾರೆಯೇ..? ಎನ್ನುವ ಪ್ರಶ್ನೆಯನ್ನು ಅವರ ಇತ್ತೀಚಿನ ಸಾರ್ವಜನಿಕ ವರ್ತನೆಗಳು ರಾಜಕೀಯ ವಲಯದಲ್ಲಿ ಹುಟ್ಟಿಹಾಕಿವೆ.
ಹಾಗೆ ನೋಡುವುದಾದರೆ ಅವರ ಎದುರು ಇರುವುದು ಒಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ಬಲಿಷ್ಠ ಅಹಿಂದ ನಾಯಕ ಮತ್ತು ಅವರ ಬೆಂಬಲಿಗರು, ಮತ್ತೊಂದು ಕಡೆ ಸತೀಶ್ ಜಾರಕಿಹೊಳಿ ಮತ್ತು ಅವರ ಬೆಂಬಲಿಗರು. ಈ ಎರಡೂ ಸ್ವಪಕ್ಷೀಯ ಅಧಿಕಾರ ಕೇಂದ್ರವನ್ನು ದಾಟಲು ಅವರು ಸಾಕಷ್ಟು ಬೆವರು ಹರಿಸುತ್ತಿದ್ದಾರೆ ಎನ್ನುವ ವಿಶ್ಲೇಷಣೆ ರಾಜಕೀಯ ಮೊಗಸಾಲೆಯಲ್ಲಿ ನಡೆಯುತ್ತಿದ್ದವು. ಆದರೆ ಈ ಹಾದಿ ಅವರನ್ನು ಕುಂಭಮೇಳ, ಜಗ್ಗಿ ವಾಸುದೇವ ಅವರ ಶಿವಸ್ಮರಣಾ ಕಾರ್ಯಕ್ರಮಗಳ ತನಕ ಕರೆದುಕೊಂಡು ಹೋಗಿ ಅಮಿತ್ ಶಾ ಅವರ ಜೊತೆ ವೇದಿಕೆ ಹಂಚಿಕೊಳ್ಳುವಂತೆ ಮಾಡುತ್ತದೆ ಅನ್ನುವ ಅಂದಾಜು ರಾಜಕೀಯ ವಿಶ್ಲೇಷಕರಿಗೆ ಇರಲಿಲ್ಲ.
ಹಾಗಂತ ಅವರು ಆ ಕಾರ್ಯಕ್ರಮಗಳಿಗೆ ಹೋಗಬಾರದು ಅಂತ ಅಲ್ಲ. ಬದಲಾಗಿ ಅದನ್ನು ಅಷ್ಟು ಸಾರ್ವಜನಿಕಗೊಳಿಸುವ ‘ಈ ಹೊತ್ತಿನ ಅಗತ್ಯ’ ಏನು ಎನ್ನುವುದು ಮುಖ್ಯವಾಗಿ ಚರ್ಚೆಗೆ ಒಳಗಾಗುತ್ತಿರುವ ಸಂಗತಿಯಾಗಿದೆ.
ಹಾಗೆ ನೋಡುವುದಾದರೆ ಯಾವುದೇ ಉದಾರವಾದಿ ರಾಜಕೀಯ ಸಿದ್ಧಾಂತ ಒಪ್ಪುವ ಪಕ್ಷ ಧರ್ಮವಿರೋಧಿಯಲ್ಲ, ಆಗಿರಲೂ ಸಾಧ್ಯವಿಲ್ಲ. ಉದಾರವಾದಿ ತತ್ವ ‘ಧಾರ್ಮಿಕ ಆಚರಣೆ ಗಳು ವೈಯಕ್ತಿಕ ಸಂಗತಿಗಳು ಅವುಗಳನ್ನು ಸಾರ್ಜಜನಿಕ ಚರ್ಚೆಯ ವಿಷಯವಾಗಿಸಬಾರದು. ಆದರಲ್ಲೂ ರಾಜಕೀಯದೊಂದಿಗೆ ಧರ್ಮವನ್ನು ಬೆರೆಸಬಾರದು ಅನ್ನುವ ನಿಲುವನ್ನು ಬೆಂಬಲಿಸುತ್ತದೆ. ಆ ಕಾರಣಕ್ಕೆ ಜಾತ್ಯತೀತ ತತ್ವ ಉದಾರವಾದಿ ರಾಜಕೀಯ ವಿವೇಕದ ಮೂಲ ಗುಣಗಳಲ್ಲಿ ಒಂದಾಗಿರುವುದು.
ಕಾಂಗ್ರೆಸ್ ಒಂದು ಉದಾರವಾದಿ ರಾಜಕೀಯ ಪಕ್ಷವಾಗಿರುವುದರಿಂದ ಆದರ ಯಾವ ನಾಯಕ, ಕಾರ್ಯಕರ್ತ ತನಗೆ ಇಚ್ಛೆ ಬಂದ ಯಾವ ಧಾರ್ಮಿಕ ಆಚರಣೆಗಳನ್ನೂ ಆಚರಿಸಬಹುದು, ಅವುಗಳಲ್ಲಿ ಪಾಲ್ಗೊಳ್ಳಬಹುದು. ನಮ್ಮ ನಾಡಿನ ಉಪಮುಖ್ಯ ಮಂತ್ರಿಗಳು ಅದಕ್ಕೆ ಸಂಪೂರ್ಣ ಸ್ವಂತಂತ್ರರು. ಆದರೆ ಈ ಧಾರ್ಮಿಕ ಪರ್ಯಟನೆಯ ಸ್ಥಳ ಮತ್ತು ಅದನ್ನು ಸಾರ್ವಜನಿಕ ಗೊಳಿಸುತ್ತಿರುವ ರೀತಿ ಇದು ಕೇವಲ ಧಾರ್ಮಿಕವಷ್ಟೇ ಅಲ್ಲ, ಬದಲಾಗಿ ಅವರು ಹೈಕಮಾಂಡ್‌ಗೆ ಒಂದು ಸಂದೇಶ ಕಳುಹಿಸುತ್ತಿದ್ದಾರೆ ಎನ್ನುವುದನ್ನು ಸ್ಪಷ್ಟಗೊಳಿಸುತ್ತಿದೆ.
ಸರಳವಾಗಿ ಹೇಳಬೇಕು ಅಂದರೆ ಕೇರಳದಲ್ಲಿ ಸಂಸದ ಶಶಿ ತರೂರ್ ‘‘ನನಗೆ ಹಲವು ಆಯ್ಕೆಗಳಿವೆ’’ ಎನ್ನುವ ಹೇಳಿಕೆ ನೀಡಿದ್ದರೆ, ಇಲ್ಲಿ ಡಿ.ಕೆ. ಶಿವಕುಮಾರ್. ಆ ಸಂಭಾವ್ಯ ಆಯ್ಕೆ ಮತ್ತು ಗುಂಪು ಯಾವುದು ಎನ್ನುವುದನ್ನು ತಮ್ಮ ಕೃತಿಗಳ ಮೂಲಕ ನಿರ್ವಹಿಸುತ್ತಿದ್ದಾರೆ ಅನ್ನಿಸುತ್ತಿದೆ.
ಡಿ.ಕೆ. ಶಿವಕುಮಾರ್ ಒಬ್ಬರು ಅತ್ಯಂತ ಕ್ರಿಯಾಶೀಲ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ, ಆದರೆ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಮುತ್ಸದ್ದಿತನದ ಮುಂದೆ ತುಸು ಹಿನ್ನೆಲೆಗೆ ಸರಿದುಬಿಡುತ್ತಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರ ಬೌದ್ಧಿಕ ತಯಾರಿ. ಕರ್ನಾಟಕದ ರಾಜಕಾರಣದಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಅಲ್ಲದ ಹಿಂದುಳಿದ ವರ್ಗಕ್ಕೆ ಸೇರಿದ ರಾಜಕಾರಣಿ ಇಷ್ಟು ಗಟ್ಟಿಯಾಗಿ ಅಧಿಕಾರದಲ್ಲಿ ಇರುವುದರ ಯಶಸ್ಸಿನ ಹಿಂದೆ ಇರುವುದು ಅವರ ಓದು, ನಾಡಿನ ರಾಜಕೀಯ ಚರಿತ್ರೆಯ ಸ್ಪಷ್ಟ ಅರಿವು, ಜನರೊಂದಿಗೆ ಅದನ್ನು ಸಂವಾದಿಸುವ ಕೌಶಲ್ಯ ಎನ್ನುವುದನ್ನು ಯಾರೂ ಮರೆಯಬಾರದು ಅನ್ನಿಸುತ್ತದೆ.
ಬಹುಶಃ ಈ ಹಾದಿಯಲ್ಲಿ ಸಿದ್ದರಾಮಯ್ಯ ಅವರನ್ನು ಎದುರುಗೊಳ್ಳುವ ಕಷ್ಟದ ಅರಿವಿರುವ ಡಿ.ಕೆ. ಶಿವಕುಮಾರ್‌ಅವರು ಹೈಕಮಾಂಡನ್ನು ಮಣಿಸಲು ಧಾರ್ಮಿಕ ಪರ್ಯಟನೆಯ ಆಯ್ಕೆಯನ್ನು ಆಯ್ದುಕೊಂಡರೇ? ಒಟ್ಟಾರೆ ಕರ್ನಾಟಕದ ಹಿಂದುಳಿದ ವರ್ಗಗಗಳ ಅದರಲ್ಲೂ ಒಕ್ಕಲಿಗ ರಾಜಕೀಯ ನಾಯಕತ್ವ ನಿಧಾನವಾಗಿ ತನ್ನ ಮಗ್ಗಲು ಬದಲಿಸುತ್ತಿರುವ ಸೂಚನೆಗಳು ಕಾಣಿಸುತ್ತಿರುವ ಈ ಹೊತ್ತಿನಲ್ಲಿ ಡಿ.ಕೆ. ಶಿವಕುಮಾರ್‌ರವರ ಧಾರ್ಮಿಕ ಪರ್ಯಟನೆ ಒಂದು ಮುಖ್ಯ ಚರ್ಚೆಯಾಗುವುದರಲ್ಲಿ ಅನುಮಾನವಿಲ್ಲ.
ಈ ಎಲ್ಲಾ ಸಂಗತಿಗಳನ್ನು ಅಲ್ಲಗಳೆದು ಸ್ವತಃ ಡಿ.ಕೆ. ಶಿವಕುಮಾರ್ ‘‘ಇಲ್ಲ ಇಲ್ಲ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ವಿರೋಧ ಪಕ್ಷಗಳು ಹಬ್ಬುವ ‘ಕಾಂಗ್ರೆಸ್ ಧರ್ಮವಿರೋಧಿ’ ಎಂಬ ನಿರೂಪಣೆ ಅಳಿಸಲು ಪ್ರಯತ್ನಿಸುತ್ತಿದ್ದೇನೆ. ಇಂದಿಗೂ ಮತ್ತು ಎಂದಿಗೂ ಹುಟ್ಟಿನಿಂದಲೇ ನಾನು ಕಾಂಗ್ರೆಸಿಗ’ ಎಂಬ ತಮ್ಮ ಹೇಳಿಕೆಯನ್ನೇ ನೀಡುತ್ತಾರೆಯೇ? ಈ ಪ್ರಶ್ನೆಗೆ
ಉತ್ತರವನ್ನು ಸ್ವತಃ ಡಿ.ಕೆ. ಶಿವಕುಮಾರ್ ಅಥವಾ ಕಾಲವೇ ಉತ್ತರಿಸಬೇಕಿದೆ.