ಇವರಾರು ಬಲ್ಲಿರಾ?
ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಕೈಗೊಳ್ಳಬೇಕೆಂದು 1970ರ ಆರಂಭದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಂಸದೀಯ ಸಮಿತಿಯು ಕರ್ನಾಟಕ ಸರಕಾರಕ್ಕೆ ಸಲಹೆಯನ್ನು ನೀಡಿತು. ಸಲಹೆಯನ್ನು ಸ್ವೀಕರಿಸಿದ ಕರ್ನಾಟಕ ಸರಕಾರವು ಭಾರತ ದೇಶದ ಮೊದಲ ದಲಿತ ಸಮಾಜಶಾಸ್ತ್ರಜ್ಞೆ ಎಂಬುದಾಗಿ ಪ್ರಸಿದ್ಧಿ ಪಡೆದಿರುವ ಪ್ರೊಫೆಸರ್ ಸಿ. ಪಾರ್ವತಮ್ಮನವರನ್ನು ಸಂಪರ್ಕಿಸಿ ಸಮೀಕ್ಷೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವಂತೆ ಕೋರಿಕೊಂಡಿತು. ಪ್ರೊ. ಪಾರ್ವತಮ್ಮನವರ ಮಾರ್ಗದರ್ಶನದಲ್ಲಿ ಸಮೀಕ್ಷೆಯು ಅತ್ಯುತ್ತಮವಾಗಿ ಪೂರ್ಣಗೊಂಡು ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು ಆಗಿನ ಕಾಲಘಟ್ಟದಲ್ಲಿ ಹೇಗಿದ್ದವು ಎನ್ನುವುದನ್ನು ವಸ್ತುನಿಷ್ಠ ವರದಿಯ ಮೂಲಕ ಸರಕಾರದ ಗಮನಕ್ಕೆ ತಂದಿತು. ಈ ಸಮೀಕ್ಷೆಯು ಹತ್ತಾರು ವಿಷಯಗಳ ಮೇಲೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನರಿಂದ ಮಾಹಿತಿ ಸಂಗ್ರಹಿಸಿದೆ. ಈ ಹತ್ತಾರು ವಿಷಯಗಳಲ್ಲಿ ನನ್ನ ಕುತೂಹಲವನ್ನು ಬಹಳವಾಗಿ ಕೆರಳಿಸಿದ ವಿಷಯವೆಂದರೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ರಾಷ್ಟ್ರೀಯ ನಾಯಕರು ಯಾರು ಎಂಬುದನ್ನು ಕಂಡು ಹಿಡಿಯಲು ಪ್ರೊ. ಪಾರ್ವತಮ್ಮನವರು ಮಾಡಿದ ಸೃಜನಶೀಲ ಪ್ರಯತ್ನ. ಇತ್ತೀಚಿನ ವರ್ಷಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ರವರ ಹೆಸರನ್ನು ಕೇಳದವರು ಬಹುತೇಕ ಸಿಗಲಿಕ್ಕಿಲ್ಲ. ಆದರೆ ಎಪ್ಪತ್ತರ ದಶಕದ ಆರಂಭದಲ್ಲಿ ಡಾ. ಅಂಬೇಡ್ಕರ್ರವರ ಹೆಸರು ಮತ್ತು ಚಿಂತನೆಗಳು ಸವರ್ಣೀಯ ಸಮಾಜದ ಮಾತು ಒಂದು ಕಡೆ ಇರಲಿ, ದಲಿತ ಸಮುದಾಯದಲ್ಲಿಯೇ ವ್ಯಾಪಕವಾಗಿ ಹರಡಿರಲಿಲ್ಲ ಎನ್ನುವ ವಾಸ್ತವ ಪಾರ್ವತಮ್ಮನವರು 1974-75ರ ಅವಧಿಯಲ್ಲಿ ಕೈಗೊಂಡ ಸಮೀಕ್ಷೆಯ ಮೂಲಕ ಕಂಡು ಬರುತ್ತದೆ.
ದಲಿತರ ಏಳಿಗೆಗಾಗಿ ಶ್ರಮಿಸುತ್ತಿರುವ ನಾಯಕರುಗಳೆಂದು ದೇಶದ ಉದ್ದಗಲಕ್ಕೂ ಅಂದಿನ ದಿನಗಳಲ್ಲಿ ಹೆಸರಾದವರು ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ರವರು. ಈ ಇಬ್ಬರು ರಾಷ್ಟ್ರೀಯ ನಾಯಕರ ಬಗ್ಗೆ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಜನತೆಗೆ ಎಷ್ಟರ ಮಟ್ಟಿಗೆ ತಿಳಿದಿದೆ ಎನ್ನುವ ಉದ್ದೇಶದಿಂದ ಪ್ರಶ್ನಾವಳಿಯಲ್ಲಿ ಒಂದು ಪ್ರಶ್ನೆಯನ್ನು ಸೇರಿಸಲಾಯಿತು. ಪಾರ್ವತಮ್ಮನವರು ಕೇಳಿದ ಪ್ರಶ್ನೆ ಮತ್ತು ಆ ಪ್ರಶ್ನೆಗೆ ಬಂದಂತಹ ಶೇಕಡಾವಾರು ಪ್ರತಿಕ್ರಿಯೆಗಳು ಈ ಕೆಳಕಂಡಂತಿವೆ;
ಇವರ ಬಗ್ಗೆ ಕೇಳಿದ್ದೀರಾ?
1. ಮಹಾತ್ಮಾ ಗಾಂಧಿ -ಶೇ.30.42
2. ಡಾ. ಬಿ.ಆರ್. ಅಂಬೇಡ್ಕರ್ -ಶೇ.1.14
3. ಗಾಂಧಿ ಮತ್ತು ಅಂಬೇಡ್ಕರ್ -ಶೇ.36.22
4. ಅನ್ವಯಿಸುವುದಿಲ್ಲ /ಕೇಳಿಲ್ಲ - ಶೇ.31.59
5. ಪ್ರತಿಕ್ರಿಯೆ ಇಲ್ಲ -ಶೇ.00.63
ಸಮೀಕ್ಷೆಯಲ್ಲಿ ಬಂದಂತಹ ಪ್ರತಿಕ್ರಿಯೆಗಳನ್ನು ವಿಶ್ಲೇಷಣೆ ಮಾಡಿದ ಪಾರ್ವತಮ್ಮನವರು ಈ ಕೆಳಕಂಡ ಅಭಿಪ್ರಾಯಕ್ಕೆ ಬರುತ್ತಾರೆ;
1. ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 31.59ರಷ್ಟು ಜನರು ಗಾಂಧಿಯವರ ಅಥವಾ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರನ್ನು ಕೇಳಿಲ್ಲ.
2. ಕರ್ನಾಟಕ ರಾಜ್ಯದಲ್ಲಿ ಡಾ.ಅಂಬೇಡ್ಕರ್ರವರಿಗಿಂತ ಗಾಂಧೀಜಿಯವರ ಹೆಸರು ಹೆಚ್ಚು ಜನಪ್ರಿಯ ಎಂಬುದಾಗಿ ಕಂಡು ಬಂದಿದೆ.
3. ಯಾರಿಗೆ ಡಾ.ಅಂಬೇಡ್ಕರ್ರವರ ಬಗ್ಗೆ ತಿಳಿದಿತ್ತೋ ಅವರಿಗೆ ಗಾಂಧಿಯವರ ಬಗ್ಗೆ ಸಹ ತಿಳಿದಿತ್ತು. ಶೇ. 36.22
4. ಗಾಂಧಿಯವರ ಹೆಸರು ಮಾತ್ರ ಕೇಳಿದ್ದವರಿಗೆ ಡಾ.ಅಂಬೇಡ್ಕರ್ರವರ ಹೆಸರಿನ ಬಗ್ಗೆ ತಿಳಿದಿರಲಿಲ್ಲ. ಶೇ. 30.42
5. ಡಾ. ಅಂಬೇಡ್ಕರ್ ರವರ ಬಗ್ಗೆ ಮಾತ್ರ ಗೊತ್ತು ಎಂದು ಹೇಳಿದ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಶೇ. 1.14 ಜನರೆಲ್ಲಾ ಕೋಲಾರ ಜಿಲ್ಲೆಯ ಕೆಜಿಎಫ್ ಭಾಗದವರು.
6. ಡಾ.ಅಂಬೇಡ್ಕರ್ರವರು ಸ್ಥಾಪಿಸಿದ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಾಧ್ಯಕ್ಷರಾದ ಶ್ರೀಯುತ ಸಿ.ಎಂ. ಆರ್ಮುಗಂರವರು ಕೆಜಿಎಫ್ ಕಡೆಯವರು ಎನ್ನುವುದು ಗಮನ ಸೆಳೆಯುವಂತಹ ವಿಚಾರ.
ಈ ಸಮೀಕ್ಷೆಯು ಹೊರಗೆಡಹಿದ ವಾಸ್ತವಾಂಶಗಳು ದಲಿತ ಲೋಕದ ಚಿಂತನಾಶೀಲ ವ್ಯಕ್ತಿಗಳಿಗೆ ಬಾಬಾ ಸಾಹೇಬ್ ಅಂಬೇಡ್ಕರ್ರವರ ವಿಚಾರಗಳನ್ನು ವ್ಯಾಪಕವಾಗಿ ಹರಡಲು, ಅದರಲ್ಲೂ ದಲಿತ ಲೋಕದ ಪ್ರತೀ ಮನೆ ಮತ್ತು ಮನಸ್ಸುಗಳಿಗೆ ತಲುಪಿಸಲು ಪ್ರೇರಣೆಯಾಯಿತು ಎನ್ನುವುದು ನನ್ನ ಅನಿಸಿಕೆ. ಬಾಬಾ ಸಾಹೇಬರ ವಿಚಾರಗಳನ್ನು ಜನಸಮುದಾಯಗಳ ಮಧ್ಯೆ ವ್ಯಾಪಕವಾಗಿ ಹರಡಲು ಡಾ.ಅಂಬೇಡ್ಕರ್ ರವರೇ ರಚಿಸಿದಂತಹ ಸಾಹಿತ್ಯ ಜನಸಾಮಾನ್ಯರ ಕೈಗೆ ತಲುಪಬೇಕಾದದ್ದು ಅನಿವಾರ್ಯವಾಗಿತ್ತು. 1975ಕ್ಕಿಂತ ಮೊದಲು ಬಾಬಾ ಸಾಹೇಬ್ ಅಂಬೇಡ್ಕರ್ರವರು ಬರೆದಂತಹ ಪುಸ್ತಕಗಳು ಪ್ರಾದೇಶಿಕ ಭಾಷೆಗಳಿಗೆ ತರ್ಜುಮೆ ಆಗುವುದು ಒಂದೆಡೆ ಇರಲಿ, ಮೂಲ ಇಂಗ್ಲಿಷ್ ಕೃತಿಗಳೂ ಸಹ ವ್ಯಾಪಕವಾಗಿ ಸಿಗುತ್ತಿರಲಿಲ್ಲ. ಬಾಬಾ ಸಾಹೇಬರ ಜೀವಿತಾವಧಿಯಲ್ಲಿ ಪ್ರಕಟಣೆಗೊಂಡ ಅವರ ಬಹಳಷ್ಟು ಕೃತಿಗಳು ಎಲ್ಲಾ ಮಾರಾಟವಾಗಿ ಮರು ಮುದ್ರಣಗೊಂಡಿರಲಿಲ್ಲ.
ಇಷ್ಟೇ ಅಲ್ಲದೆ, ಅಪಾರ ಪ್ರಮಾಣದಲ್ಲಿದ್ದ ಬಾಬಾಸಾಹೇಬರ ಅಪ್ರಕಟಿತ ಬರಹಗಳು ಮಹಾರಾಷ್ಟ್ರ ಸರಕಾರದ ಸುಪರ್ದಿಯಲ್ಲಿದ್ದವು. ಬಾಬಾಸಾಹೇಬರ ಪ್ರಕಟಿತ ಮತ್ತು ಅಪ್ರಕಟಿತ ಬರಹಗಳೆಲ್ಲವನ್ನೂ ಮುದ್ರಿಸಿ ಸಾರ್ವಜನಿಕರಿಗೆ ತಲುಪಿಸಬೇಕೆಂದು ದಲಿತ ಸಂಘಟನೆಗಳು ಮಹಾರಾಷ್ಟ್ರ ಸರಕಾರದ ಮೇಲೆ ಒತ್ತಡ ತಂದವು. ಒತ್ತಡಕ್ಕೆ ಮಣಿದ ಮಹಾರಾಷ್ಟ್ರ ಸರಕಾರ ಡಾ. ವಸಂತ್ ಮೂನ್ರವರ ಸಂಪಾದಕತ್ವದಲ್ಲಿ ಬಾಬಾಸಾಹೇಬರ ಬರಹ ಮತ್ತು ಭಾಷಣಗಳ ಸಂಪುಟಗಳನ್ನು 1979ರಿಂದ ಪ್ರಕಟಿಸಲು ಪ್ರಾರಂಭಿಸಿತು. ಮಹಾರಾಷ್ಟ್ರ ಸರಕಾರದ ನಂತರ ಇತರ ರಾಜ್ಯಗಳು ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಬಾಬಾಸಾಹೇಬರ ಬರಹ ಮತ್ತು ಭಾಷಣಗಳನ್ನು ಪ್ರಕಟಿಸಲು ಆರಂಭಿಸಿದವು.
ಬಾಬಾ ಸಾಹೇಬರ ಬರಹ ಮತ್ತು ಭಾಷಣಗಳನ್ನು ಮಹಾರಾಷ್ಟ್ರ ಸರಕಾರವು 1979ರಿಂದ ಪ್ರಕಟಿಸಲು ಪ್ರಾರಂಭ ಮಾಡುವುದಕ್ಕಿಂತ ಮೊದಲು ಬಾಬಾ ಸಾಹೇಬರ ಅಭಿಮಾನಿಗಳು ಅಂಬೇಡ್ಕರ್ ಸಾಹಿತ್ಯವನ್ನು ಪಡೆಯಲು ಬಾಬಾ ಸಾಹೇಬರ ನಿಕಟವರ್ತಿಯಾಗಿದ್ದ ಭಗವಾನ್ ದಾಸ್ರವರನ್ನು ಸಂಪರ್ಕಿಸುತ್ತಿದ್ದರು. ಭಗವಾನ್ ದಾಸ್ರವರು ಪಂಜಾಬ್ ರಾಜ್ಯದ ಜಲಂಧರ್ನಲ್ಲಿರುವ ಭೀಮ್ ಪತ್ರಿಕಾ ಪ್ರಕಾಶನದಲ್ಲಿ ಬಾಬಾ ಸಾಹೇಬರ ಭಾಷಣಗಳನ್ನು ಪ್ರಕಟಿಸುತ್ತಿದ್ದರು. 1963ರಿಂದಲೇ ಬಾಬಾಸಾಹೇಬರ ಚಿಂತನೆಗಳನ್ನು ‘ದಸ್ ಸ್ಪೋಕ್ ಅಂಬೇಡ್ಕರ್’ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲು ಪ್ರಾರಂಭಿಸಿದರು. 1963ರಿಂದ 1980ರ ಅವಧಿಯಲ್ಲಿ ಒಟ್ಟು ನಾಲ್ಕು ಸಂಪುಟಗಳನ್ನು ಪ್ರಕಟಿಸಿದರು. ‘ದಸ್ ಸ್ಪೋಕ್ ಅಂಬೇಡ್ಕರ್’ ಶೀರ್ಷಿಕೆಯ ನಾಲ್ಕೂ ಸಂಪುಟಗಳನ್ನು ಪ್ರೊ. ಪಾರ್ವತಮ್ಮನವರ ಖಾಸಗಿ ಲೈಬ್ರರಿಯಲ್ಲಿ ನಾನು ಗಮನಿಸಿದ್ದೇನೆ.
ಈ ತನಕ 21 ಸಂಪುಟಗಳನ್ನು ಪ್ರಕಟಿಸಿರುವ ಮಹಾರಾಷ್ಟ್ರ ಸರಕಾರವು ಡಾ. ಅಂಬೇಡ್ಕರ್ರವರ ಬರಹ ಮತ್ತು ಭಾಷಣಗಳ ಸಮಗ್ರ ಸಂಪುಟಗಳನ್ನು ಪ್ರಕಟಿಸಲು ಪ್ರಾರಂಭಿಸಿದ್ದು 1979ರ ನಂತರದಲ್ಲಿ ಎಂಬುದನ್ನು ಗಮನಿಸಿದರೆ ಪ್ರೊ. ಪಾರ್ವತಮ್ಮನವರ ಸಮೀಕ್ಷೆಯ ವರದಿಯ ಪ್ರಭಾವ ಯಾವ ಯಾವ ಮಟ್ಟದಲ್ಲಿ ಯಾವ ಯಾವ ರೀತಿ ಆಗಿರಬಹುದು ಎಂಬುದನ್ನು ಸೂಕ್ಷ್ಮ ಮನಸ್ಸುಗಳು ಗಮನಿಸಬಹುದು. ಈ ದಿನ ದಲಿತ ಲೋಕದಲ್ಲಿ ಪ್ರತೀ ಮನೆ ಮತ್ತು ಮನಸ್ಸುಗಳಿಗೆ ಬಾಬಾ ಸಾಹೇಬರ ಚಿಂತನೆಗಳು ತಲುಪಿದ್ದು, ಸಾವಿರಾರು ಯುವಕ ಮತ್ತು ಯುವತಿಯರು ಬಾಬಾ ಸಾಹೇಬರ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ವಿಚಾರಗಳ ಕುರಿತು ನಿರರ್ಗಳವಾಗಿ ಮಾತನಾಡುವ ಪ್ರೌಢಿಮೆ ಮತ್ತು ವಿದ್ವತ್ತನ್ನು ಗಳಿಸಿಕೊಂಡಿದ್ದಾರೆಂದು ಧೈರ್ಯದಿಂದ ಹೇಳಬಹುದು.
ಸಮೀಕ್ಷೆಯ ಸಂದರ್ಭದಲ್ಲಿ ಕೇಳಲಾದ ಒಂದು ಸರಳ ಮತ್ತು ಅರ್ಥಪೂರ್ಣ ಪ್ರಶ್ನೆ ಹಾಗೂ ಅದಕ್ಕೆ ಬಂದ ಪ್ರತಿಕ್ರಿಯೆಯ ಪರಿಣಾಮ ಈ ದಿನ ಅಪಾರ ಪ್ರಮಾಣದ ಅಂಬೇಡ್ಕರ್ ವಾದಿ ಸಾಹಿತ್ಯದ ಸೃಷ್ಟಿಗೆ ಪ್ರತ್ಯಕ್ಷವಾಗಿಯೋ ಅಥವಾ ಅಪ್ರತ್ಯಕ್ಷವಾಗಿಯೋ ಕಾರಣವಾಗಿದೆ ಎಂದು ಹೇಳಿದರೆ ಅತಿಶಯೋಕ್ತಿಯಾಗದು.