ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಮಸ್ಯೆ
ಶೀಘ್ರ ಖಾಯಂ ವೈದ್ಯರ ನೇಮಕಕ್ಕೆ ಒತ್ತಾಯ
ಮಡಿಕೇರಿ,ಜ.17: ಕುಶಾಲನಗರ ತಾಲೂಕಿನ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್ ಮೊರೆ ಹೋಗುವಂತಾಗಿದೆ.
ಕುಶಾಲನಗರ ತಾಲೂಕಿನ ಕೂಡಿಗೆ, ನಂಜರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸುತ್ತಿರುವ ವೈದ್ಯರೊಬ್ಬರು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಾರದಲ್ಲಿ ಎರಡು ದಿನ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಬಾಕಿ ಉಳಿದ ಐದು ದಿನ ವೈದ್ಯರಿಲ್ಲದೆ ಚೆಟ್ಟಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಪರದಾಡುವಂತಾಗಿದೆ. ಎರಡು ವರ್ಷಗಳ ಕಾಲ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸಿದ್ದ ಎಂಬಿಬಿಎಸ್ ವೈದ್ಯರೊಬ್ಬರು ತಮ್ಮ ಸ್ವಗ್ರಾಮ ಚಾಮರಾಜನಗರದ ಕೊಳ್ಳೆಗಾಲಕ್ಕೆ ವರ್ಗಾವಣೆ ಪಡೆದು ತೆರಳಿದ್ದಾರೆ.
ಡಿಸೆಂಬರ್ 22ರಿಂದ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ವೈದ್ಯರಿಲ್ಲದೆ, ದಾದಿಯರೇ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬಡವರಿಗೆ ಆಸರೆಯಾಗಿದ್ದ ಆಸ್ಪತ್ರೆ
ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವು ಬಡವರಿಗೆ ಆಸರೆ ಯಾಗಿತ್ತು. ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಸ್ಪತ್ರೆ ಇದೀಗ ವೈದ್ಯರಿಲ್ಲದೆ, ಬಡ ರೋಗಿಗಳು ಖಾಸಗಿ ಆಸ್ಪತ್ರೆ ಮೊರೆ ಹೋಗುತ್ತಿದ್ದಾರೆ.
ಸಿದ್ದಾಪುರ, ನೆಲ್ಲಿಹುದಿಕೇರಿ, ಅಭ್ಯತ್ ಮಂಗಲ, ವಾಲ್ನೂರು- ತ್ಯಾಗತ್ತೂರು, ಕೂಡ್ಲೂರು ಚೆಟ್ಟಳ್ಳಿ, ಕಂಡಕರೆ, ಪೊನ್ನತ್ಮೊಟ್ಟೆ, ಭೂತನ ಕಾಡು, ಮತ್ತಿಕಾಡು, ಚೆಟ್ಟಳ್ಳಿ, ಈರಳವಳಮುಡಿ ಗ್ರಾಮದ ಜನರು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ಅವಲಂಬಿಸಿದ್ದರು. ಇದೀಗ ವೈದ್ಯರಿಲ್ಲದೆ ಬಡರೋಗಿಗಳು ಸಿದ್ದಾಪುರ, ಮಡಿಕೇರಿ ನಗರದ ಖಾಸಗಿ ಆಸ್ಪತ್ರೆಯನ್ನೇ ಅವಲಂಬಿಸುವ ಪರಿಸ್ಥಿತಿ ಎದುರಾಗಿದೆ.
ಐದು ವರ್ಷಗಳಲ್ಲಿ ನಾಲ್ವರು ವೈದ್ಯರು ವರ್ಗಾವಣೆ!
ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಐದು ವರ್ಷಗಳಲ್ಲಿ ನಾಲ್ವರು ವೈದ್ಯರು ವರ್ಗಾವಣೆ ಪಡೆದು ತೆರಳಿದ್ದಾರೆ. 6 ವರ್ಷಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಡಾ. ಗಿರೀಶ್ ಅವರ ವರ್ಗಾವಣೆ ನಂತರ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗಿರೀಶ್ ಅವರ ವರ್ಗಾವಣೆಯ ನಂತರ ನೇಮಕಗೊಂಡ ವೈದ್ಯರು ಕೇವಲ ಒಂದೇ ವರ್ಷದಲ್ಲಿ ವರ್ಗಾವಣೆಯನ್ನು ಪಡೆದಿದ್ದರು. ನಂತರ ಸರಕಾರ ಆಯುಷ್ ವೈದ್ಯರನ್ನು ನೇಮಕ ಮಾಡಿತ್ತು. ಆದರೆ ಅವರ ವಿರುದ್ಧ ಹಲವು ದೂರುಗಳಿದ್ದವು ಎನ್ನಲಾಗಿದೆ.
ಆಯುಷ್ ವೈದ್ಯರು ಹೆರಿಗೆ ಪ್ರಕರಣಗಳಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ ಎಂಬ ಗಂಭೀರ ಆರೋಪ ಕೇಳಿಬರುತ್ತಿತ್ತು. ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಬೇಕೆಂಬ ಒತ್ತಾಯಕ್ಕೆ ಮಣಿದು ಸರಕಾರ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿತ್ತು.ಕಳೆದ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ವೈದ್ಯರು ಇದೀಗ ಕಳೆದು ತಿಂಗಳು ವರ್ಗಾವಣೆ ಪಡೆದು ತೆರಳಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವೈದ್ಯರಿಲ್ಲದೆ ರೋಗಿಗಳು ವಾಪಸ್..
ಚೆಟ್ಟಳ್ಳಿ ಸುತ್ತಮುತ್ತ ಅತೀ ಹೆಚ್ಚು ಕೂಲಿ ಕಾರ್ಮಿಕರೇ ಜೀವನ ನಡೆಸುತ್ತಿದ್ದಾರೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಬಡ ರೋಗಿಗಳು ವೈದ್ಯರಿಲ್ಲದೆ ಹಿಂತಿರುಗಿ, ಖಾಸಗಿ ಕ್ಲಿನಿಕ್ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ.
ವೈದ್ಯರಿಲ್ಲದ ಮಾಹಿತಿ ಇಲ್ಲದೆ, ಚಿಕಿತ್ಸೆ ಪಡೆಯಲು ಬರುತ್ತಿರುವ ರೋಗಿಗಳು, ದಾದಿಯರಿಂದ ಮಾತ್ರೆಗಳನ್ನು ಪಡೆದು ಹಿಂತಿರುಗುತ್ತಿದ್ದಾರೆ. ತುರ್ತು ಸಂದರ್ಭ ಹಾಗೂ ಹೆರಿಗೆ ಪ್ರಕರಣಗಳಿಗೆ ಚೆಟ್ಟಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಇದೀಗ ಮಡಿಕೇರಿ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗಿದೆ.
ಆದಷ್ಟು ಬೇಗ ಜಿಲ್ಲಾ ಆರೋಗ್ಯ ಇಲಾಖೆ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಕಮಾಡಿ, ರೋಗಿಗಳ ಚಿಕಿತ್ಸೆಗೆ ನೆರವಾಗಬೇಕಿದೆ ಎಂದು ಗ್ರಾಮಸ್ಥರ ಒತ್ತಾಯವಾಗಿದೆ.
ವೈದ್ಯರಿಲ್ಲದೆ ರೋಗಿಗಳು ಪ್ರತಿನಿತ್ಯ ಚಿಕಿತ್ಸೆ ಸಿಗದೆ ವಾಪಸ್ ತೆರಳುತ್ತಿದ್ದಾರೆ. ಅಪಘಾತ ಹಾಗೂ ಹೆರಿಗೆಯಂತಹ ತುರ್ತು ಚಿಕಿತ್ಸೆಗೆ ಚೆಟ್ಟಳ್ಳಿ ಭಾಗದ ಗ್ರಾಮಸ್ಥರು ಮಡಿಕೇರಿ ಆಸ್ಪತ್ರೆಯನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡರೋಗಿಗಳು ಚೆಟ್ಟಳ್ಳಿ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಸರಕಾರ ಆದಷ್ಟು ಬೇಗ ಖಾಯಂ ವೈದ್ಯರನ್ನು ನೇಮಕ ಮಾಡಬೇಕಾಗಿದೆ. ಇದರ ಬಗ್ಗೆ ಮಡಿಕೇರಿ ಕ್ಷೇತ್ರದ ಶಾಸಕರು ಮುತುವರ್ಜಿ ವಹಿಸಬೇಕಾಗಿದೆ.
-ಸುಹೈಲ್ ಒ.ಎಸ್., ಹಿರಿಯ ಉಪಾಧ್ಯಕ್ಷ ಗಾಂಧಿ ಯುವಕ ಸಂಘ ಕಂಡಕರೆ.
ಚೆಟ್ಟಳ್ಳಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು, ಕಳೆದು ತಿಂಗಳು ವರ್ಗಾವಣೆ ಪಡೆದು ತೆರಳಿದ್ದಾರೆ.ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಂದೇ ತಿಂಗಳಲ್ಲಿ ಏಳು ವೈದ್ಯರು ವರ್ಗಾವಣೆ ಪಡೆದು ಬೇರೆ ಜಿಲ್ಲೆಗಳಿಗೆ ತೆರಳಿದ್ದಾರೆ. ಇದರಿಂದ ಸಮಸ್ಯೆಯುಂಟಾಗಿದೆ. ವೈದ್ಯರು ಬಂದ ತಕ್ಷಣ ನಾವು ನೇಮಕ ಮಾಡುತ್ತೇವೆ. ಅದುವರೆಗೆ ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬದಲಿ ವ್ಯವಸ್ಥೆ ಮಾಡುತ್ತಿದ್ದೇವೆ. ಕೊಡಗು ಜಿಲ್ಲೆಯಲ್ಲಿ ವೈದ್ಯರ ಸಮಸ್ಯೆ ಇದೆ.
-ಡಾ. ಕೆ.ಎಂ. ಸತೀಶ್ ಕುಮಾರ್,
ಡಿಎಚ್‌ಒ ಕೊಡಗು
ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಸಮಸ್ಯೆ ಬಗ್ಗೆ ಈಗಾಗಲೇ ಮಡಿಕೇರಿ ಕ್ಷೇತ್ರದ ಶಾಸಕರ ಗಮನಕ್ಕೆ ತಂದಿದ್ದೇವೆ. ವೈದ್ಯರಿಲ್ಲದೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದ ಬಗ್ಗೆ ಗಮನಕ್ಕೆ ಬಂದಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸದ್ಯದಲ್ಲೇ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಎಂಬಿಬಿಎಸ್ ವೈದ್ಯರು ನೇಮಕವಾಗಲಿದ್ದಾರೆ.
-ಸಿ.ಇ. ತೀರ್ಥಕುಮಾರ್(ಮೂಡಳ್ಳಿ ರವಿ),
ಚೆಟ್ಟಳ್ಳಿ ಗ್ರಾಪಂ ಸದಸ್ಯ.