ದಿಲ್ಲಿಯಲ್ಲಿ ಬಿಜೆಪಿಗೆ ಮುಖ್ಯಮಂತ್ರಿ ಮುಖಗಳೇ ಇಲ್ಲವೇ?

ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೆ ಸ್ಪರ್ಧಿಸಲು ಬಿಜೆಪಿ ಸಜ್ಜಾಗಿರುವ ಹಾಗಿದೆ.
ಎಎಪಿ ಇದೇ ವಿಷಯವನ್ನೆತ್ತಿಕೊಂಡು ಬಿಜೆಪಿಯನ್ನು ಕೆಣಕುತ್ತಲೇ ಇದೆ. ಬಿಜೆಪಿಯ ಈ ಸ್ಥಿತಿಯನ್ನು ಅದು ‘‘ವರನಿಲ್ಲದ ದಿಬ್ಬಣ’’ ಎಂದು ಲೇವಡಿ ಮಾಡುತ್ತಿದೆ.
ಎಎಪಿ ಸಂಚಾಲಕ ಮತ್ತು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಬಿಜೆಪಿ ತನ್ನ ಮುಖ್ಯಮಂತ್ರಿ ಮುಖವೆಂದು ರಮೇಶ್ ಬಿಧೂರಿಯಂಥವರನ್ನು ಅವಲಂಬಿಸಬೇಕಿರುವ ಬಗ್ಗೆ ಟೀಕಿಸಿದ್ದಾರೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಬಿಧೂರಿ ಸ್ತ್ರೀದ್ವೇಷದ ಹೇಳಿಕೆಗಳನ್ನೂ ನೀಡುವ ರಾಜಕಾರಣಿ. ಇತ್ತೀಚೆಗೆ ಸಿಎಂ ಆತಿಶಿ ಸಿಂಗ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬಗ್ಗೆ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.
ಎಎಪಿ ದಾಳಿಯ ಹೊರತಾಗಿಯೂ, ಬಿಜೆಪಿ ಮುಖ್ಯಮಂತ್ರಿ ಮುಖವನ್ನು ಬಿಂಬಿಸುವುದರ ಕಡೆ ಗಮನ ಕೊಟ್ಟಿಲ್ಲ. ಅದು ಬಿಜೆಪಿಯ ಒಂದು ಪಕ್ಕಾ ತಂತ್ರವೇ ಆಗಿರಲೂ ಬಹುದು.
ಹಾಗಾದರೆ ಏಕೆ ಬಿಜೆಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿಲ್ಲ?
ಮೊದಲನೆಯದಾಗಿ, ಇಡೀ ದಿಲ್ಲಿಯಾದ್ಯಂತ ಜನಪ್ರಿಯತೆ ಹೊಂದಿರುವ ನಾಯಕ ಬಿಜೆಪಿಯಲ್ಲಿ ಇಲ್ಲ
ವಾಸ್ತವವಾಗಿ, 25 ವರ್ಷಗಳ ಹಿಂದೆ ಮದನ್ ಲಾಲ್ ಖುರಾನಾ ಅವರನ್ನು ಬದಿಗೆ ಸರಿಸಿದ ಬಳಿಕ ಅದಕ್ಕೆ ದಿಲ್ಲಿಯಲ್ಲಿ ಅಂಥ ನಾಯಕತ್ವದ ಕೊರತೆಯಿದೆ.
ಖುರಾನಾ ನಂತರ ಬಿಜೆಪಿ ದಿಲ್ಲಿಯಲ್ಲಿ ಸಾಹಿಬ್ ಸಿಂಗ್ ವರ್ಮಾ, ಸುಷ್ಮಾ ಸ್ವರಾಜ್, ವಿಜಯ್ ಕುಮಾರ್ ಮಲ್ಹೋತ್ರಾ, ಡಾ. ಹರ್ಷವರ್ಧನ್, ಕಿರಣ್ ಬೇಡಿ ಮತ್ತು ಮನೋಜ್ ತಿವಾರಿ ಅವರಂಥ ಹಲವಾರು ಮುಖಗಳನ್ನು ಬಿಂಬಿಸಿದೆ. ಆದರೆ ಅವರಲ್ಲಿ ಯಾರಿಗೂ ದಿಲ್ಲಿಯ ರಾಜಕೀಯದಲ್ಲಿ ಪ್ರಾಬಲ್ಯ ತೋರಿದ ಶೀಲಾ ದೀಕ್ಷಿತ್ ಮತ್ತು ಕೇಜ್ರಿವಾಲ್ ಅವರನ್ನು ಸರಿಗಟ್ಟುವ ಸಾಮರ್ಥ್ಯವಿರಲಿಲ್ಲ.
1998ರಿಂದ 2013ರವರೆಗೆ ಶೀಲಾ ದೀಕ್ಷಿತ್ ಮತ್ತು 2013ರಿಂದ ಇಲ್ಲಿಯವರೆಗೆ ಕೇಜ್ರಿವಾಲ್ ಅವರನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ.
ಎರಡನೆಯದಾಗಿ, ಮುಖ್ಯಮಂತ್ರಿ ಮುಖವನ್ನು ಬಿಂಬಿಸುವುದರಿಂದ ವ್ಯಕ್ತಿತ್ವಗಳ ನಡುವಿನ ಪೈಪೋಟಿಯಾಗುವ ಆತಂಕ ಅದ್ಕಕಿದೆ.
ದಿಲ್ಲಿ ಬಿಜೆಪಿಯ ಕೆಲವು ನಾಯಕರಲ್ಲಿ ವಿಜೇಂದರ್ ಗುಪ್ತಾ 2015 ಮತ್ತು 2020ರಲ್ಲಿ ಎಎಪಿಯ ಭರ್ಜರಿ ಗೆಲುವಿನ ನಡುವೆಯೂ ರೋಹಿಣಿ ಕ್ಷೇತ್ರವನ್ನು ಗೆದ್ದವರು.
ನಂತರ ಮೀನಾಕ್ಷಿ ಲೇಖಿ ಮತ್ತು ಪರ್ವೇಶ್ ವರ್ಮಾ ಅವರಂತಹ ಮಾಜಿ ಸಂಸದರು ಸ್ವಲ್ಪ ಮಟ್ಟಿಗೆ ಪ್ರಭಾವ ಉಳಿಸಿಕೊಂಡಿದ್ದಾರೆ.
ಆದರೂ, ಯಾರನ್ನಾದರೂ ಸಿಎಂ ಅಭ್ಯರ್ಥಿಯೆಂದು ಬಿಂಬಿಸುವುದರಿಂದ ಕೇಜ್ರಿವಾಲ್ ಜೊತೆ ವ್ಯಕ್ತಿತ್ವದ ಸ್ಪರ್ಧೆಗೆ ಅವಕಾಶವಾದೀತು ಎಂಬುದು ಬಿಜೆಪಿಯ ಆತಂಕವಿರಬಹುದು. ಹಿಂದೆ ಅದರಿಂದ ತೊಂದರೆಯಾದ ಉದಾಹರಣೆಗಳನ್ನು ಬಿಜೆಪಿ ಮರೆತಿಲ್ಲ.
2015ರಲ್ಲಿ ಅದು ಕೇಜ್ರಿವಾಲ್ ಅವರ ಅಣ್ಣಾ ಹಝಾರೆ ಚಳವಳಿಯ ಒಡನಾಡಿ ಕಿರಣ್ ಬೇಡಿ ಅವರನ್ನು ಬಿಜೆಪಿ ಸಿಎಂ ಅಭ್ಯರ್ಥಿಯೆಂದು ಬಿಂಬಿಸಿತ್ತು.
ಆದರೆ ಅದು ಬಿಜೆಪಿಗೆ ಭಾರೀ ವಿಪತ್ತಾಗಿ ಪರಿಣಮಿಸಿತು. ಪಕ್ಷ ಕೇವಲ 3 ಸ್ಥಾನಗಳಿಗೆ ಕುಸಿದಿತ್ತು. ಸ್ವತಃ ಕಿರಣ್ ಬೇಡಿ ಕೃಷ್ಣ ನಗರದಲ್ಲಿ ಸೋತಿದ್ದರು. ಬಿಜೆಪಿ ಪಾಲಿನ ಸುರಕ್ಷಿತ ಸ್ಥಾನಗಳಲ್ಲಿ ಒಂದೆಂದು ಪರಿಗಣಿತವಾಗಿದ್ದ ಕ್ಷೇತ್ರದಲ್ಲೇ ಸೋಲಾಗಿತ್ತು.
2020ರಲ್ಲಿ ಯಾರನ್ನೂ ಅಧಿಕೃತವಾಗಿ ಬಿಂಬಿಸದಿದ್ದರೂ, ಆಗಿನ ರಾಜ್ಯ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಅವರನ್ನು ಆ ಸ್ಥಾನಕ್ಕೆ ಪರಿಗಣಿಸಲಾಗಿತ್ತು. ಆದರೆ ಆಗಲೂ ಪಕ್ಷಕ್ಕೆ ಅನುಕೂಲವಾಗಿರಲಿಲ್ಲ.
ಕೇಜ್ರಿವಾಲ್ ಜೊತೆಗಿನ ಯಾವುದೇ ನೇರ ಮುಖಾಮುಖಿ ಪಕ್ಷಕ್ಕೆ ಹಾನಿ ತರಬಹುದೆಂಬುದು ಬಿಜೆಪಿ ನಾಯಕರ ಭಯ. ಯಾಕೆಂದರೆ ಜನಪ್ರಿಯತೆಯ ವಿಷಯದಲ್ಲಿ ಕೇಜ್ರಿವಾಲ್ ಅವರನ್ನು ಸರಿಗಟ್ಟುವುದು ಹಾಗಿರಲಿ, ಅವರ ಹತ್ತಿರಕ್ಕೂ ಬರುವ ಯಾವುದೇ ನಾಯಕ ದಿಲ್ಲಿ ಬಿಜೆಪಿಯಲ್ಲಿ ಇಲ್ಲ.
2020ರ ಚುನಾವಣೆಯಲ್ಲಿ, ದಿಲ್ಲಿಯಲ್ಲಿ ಸಿಎಸ್‌ಡಿಎಸ್ ನಡೆಸಿದ ಸಮೀಕ್ಷೆಯಲ್ಲಿ ಸುಮಾರು ಶೇ.50 ಮಂದಿ ಕೇಜ್ರಿವಾಲ್ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರು. ಆದರೆ ಮನೋಜ್ ತಿವಾರಿ ಹೆಸರು ಹೇಳಿದ್ದವರು ಸುಮಾರು ಶೇ.6ರಷ್ಟು ಜನ ಮಾತ್ರ.
ಬಿಜೆಪಿ ನಂಬುವ ಇನ್ನೂ ಒಂದು ಅಂಶವೆಂದರೆ, ಸಿಎಂ ಅಭ್ಯರ್ಥಿಯನ್ನು ಬಿಂಬಿಸಿ ಕೇಜ್ರಿವಾಲ್ ಎದುರು ತರುತ್ತಿದ್ದಂತೆ, ಚುನಾವಣೆಯಲ್ಲಿ ತಾನು ಎತ್ತಲು ಬಯಸುವ ವಿಷಯಗಳು ಬದಿಗೆ ಸರಿಯುತ್ತವೆ, ಗಮನ ಬೇರೆಡೆ ಹೋಗುತ್ತದೆ ಎಂಬುದು.
ಮೂರನೆಯದಾಗಿ, ಆಡಳಿತ ವಿರೋಧಿ ಅಲೆಯನ್ನೇ ಬಿಜೆಪಿ ಮುಖ್ಯ ನಿರೂಪಣೆಯಾಗಿಸಿದೆ.
ಬಿಜೆಪಿಯ ಪ್ರಚಾರದ ಮುಖ್ಯ ನಿರೂಪಣೆ 10 ವರ್ಷಗಳ ಎಎಪಿ ಆಡಳಿತದ ವೈಫಲ್ಯಗಳನ್ನು ಜನರೆದುರು ಇಡುವುದಾಗಿದೆ.
ರಸ್ತೆಗಳು, ಮಾಲಿನ್ಯ, ತ್ಯಾಜ್ಯ ನಿರ್ವಹಣೆ, ವಿದ್ಯುತ್ ಸರಬರಾಜು ಮುಂತಾದ ಹಲವಾರು ಆಡಳಿತ ಸಂಬಂಧಿತ ವಿಷಯಗಳಲ್ಲಿ ಅದು ಎಎಪಿಯನ್ನು ಟಾರ್ಗೆಟ್ ಮಾಡಿದೆ.
ಎರಡು ವಿಷಯಗಳು ಬಿಜೆಪಿಯ ಈ ನಿರೂಪಣೆಗೆ ಸಹಾಯ ಮಾಡುತ್ತಿವೆ.
ಮೊದಲನೆಯದಾಗಿ, ಎಎಪಿ ಮತ್ತು ಕೇಜ್ರಿವಾಲ್ ಈಗ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವುದರಿಂದ ರಾಜಕೀಯದಲ್ಲಿ ಹೊರಗಿನವರೆಂಬ ನೆಪ ಮುಂದೆ ಮಾಡಲು ಅವಕಾಶವಿಲ್ಲವಾಗಿದೆ.
ಎರಡನೆಯದಾಗಿ, ಇದೇ ಮೊದಲ ಸಲ ಎಎಪಿ ಈಗ ದಿಲ್ಲಿ ಸರಕಾರ ಮತ್ತು ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಎರಡನ್ನೂ ಮುನ್ನಡೆಸುತ್ತಿದೆ. ಈ ಹಿಂದೆ, ತ್ಯಾಜ್ಯ ನಿರ್ವಹಣೆಯಂತಹ ವಿಷಯಗಳ ಬಗ್ಗೆ ಆರೋಪ ಹೊರಿಸಿದರೆ ಎಎಪಿ ತಪ್ಪಿಸಿಕೊಳ್ಳುತ್ತಿತ್ತು. ಏಕೆಂದರೆ ಆಗ ದಿಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಬಿಜೆಪಿ ಹಿಡಿತದಲ್ಲಿತ್ತು.
ನಾಲ್ಕನೆಯದಾಗಿ, ವಿಭಿನ್ನ ನಾಯಕರು, ವಿಭಿನ್ನ ಸಮುದಾಯಗಳು ಎಂಬುದೇ ಅದಕ್ಕೆ ಒಂದು ಸವಾಲಾಗಿದೆ.
ದಿಲ್ಲಿಯಲ್ಲಿ ಬಿಜೆಪಿಯ ಪ್ರಮುಖ ಸಮಸ್ಯೆ ಎಂದರೆ ಅದು ದಲಿತರು, ಸಿಖ್ಖರು ಮತ್ತು ಪೂರ್ವಾಂಚಲಿಗಳಂತಹ ಹಲವಾರು ಪ್ರಮುಖ ಸಮುದಾಯಗಳನ್ನು ದೂರವಿಟ್ಟಿದೆ.
ಹಲವಾರು ಪ್ರಮುಖ ನಾಯಕರನ್ನು ಕಣಕ್ಕಿಳಿಸುವ ಮೂಲಕ, ಎಲ್ಲ ಸಮುದಾಯಗಳನ್ನು ಸೆಳೆಯುವ ಯತ್ನಕ್ಕೂ ಇಳಿದಿದೆ.
ಈ ನಾಯಕರಲ್ಲಿ ವಿಜೇಂದರ್ ಗುಪ್ತಾ (ಬನಿಯಾ), ದುಷ್ಯಂತ್ ಕುಮಾರ್ ಗೌತಮ್ (ದಲಿತ), ಪರ್ವೇಶ್ ವರ್ಮಾ (ಜಾಟ್), ರಮೇಶ್ ಬಿಧೂರಿ (ಗುಜ್ಜರ್), ಕಪಿಲ್ ಮಿಶ್ರಾ (ಬ್ರಾಹ್ಮಣ, ಇವರನ್ನು ಪೂರ್ವಾಂಚಲಿಗಳ ಓಲೈಕೆಗಾಗಿ ಬಳಸಲಾಗುತ್ತಿದೆ), ಮೋಹನ್ ಸಿಂಗ್ ಬಿಶ್ತ್ (ಪಹಾರಿ), ಹರೀಶ್ ಖುರಾನಾ (ಪಂಜಾಬಿ ಹಿಂದೂ), ಮಂಜಿಂದರ್ ಸಿರ್ಸಾ ಮತ್ತು ಅರವಿಂದರ್ ಸಿಂಗ್ ಲವ್ಲಿ (ಸಿಖ್) ಸೇರಿದ್ದಾರೆ.
ಐದನೆಯದಾಗಿ, ಮೋದಿ ಮುಖ ಮುನ್ನೆಲೆಯಲ್ಲಿರುವುದು.
ಪ್ರಧಾನಿ ಮೋದಿ ದಿಲ್ಲಿಯಲ್ಲಿ ಗಣನೀಯ ಜನಪ್ರಿಯತೆ ಹೊಂದಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ.
ಬಿಜೆಪಿ ಈಗ ದಿಲ್ಲಿಯ ಏಳು ಲೋಕಸಭಾ ಸ್ಥಾನಗಳನ್ನು ಸತತ ಮೂರು ಬಾರಿ ಗೆದ್ದಿದೆ. ಬಿಜೆಪಿಗೆ ಸಮಸ್ಯೆಯೆಂದರೆ, ಮೋದಿ ಜನಪ್ರಿಯತೆ ವಿಧಾನಸಭಾ ಮಟ್ಟದಲ್ಲಿ ಮತದಾನದ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ. ಅದೇನಿದ್ದರೂ ಕೇಜ್ರಿವಾಲ್ ವ್ಯಕ್ತಿತ್ವದ ಸುತ್ತ ಕೇಂದ್ರೀಕೃತವಾಗಿದೆ. ಈ ಚುನಾವಣೆಯಲ್ಲಿ, 10 ವರ್ಷಗಳ ಆಡಳಿತ ವಿರೋಧಿ ಅಲೆ ಕೇಜ್ರಿವಾಲ್ ಅವರನ್ನು ಕಾಡಬಹುದು ಹಾಗೂ ಸ್ಥಿರತೆ ಮತ್ತು ಡಬಲ್ ಇಂಜಿನ್ ಲಾಭಕ್ಕಾಗಿ ಮತದಾರರು ತನಗೆ ಬೆಂಬಲ ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.
ಆದರೆ ಅದರ ಈ ನಿರೂಪಣೆ ಎಷ್ಟರ ಮಟ್ಟಿಗೆ ಕೆಲಸ ಮಾಡೀತು ಎಂಬುದು ಗೊತ್ತಾಗಬೇಕಿದೆ.
ಬಡ ಮತ್ತು ಕೆಳ ಮಧ್ಯಮ ವರ್ಗದ ಮತದಾರರನ್ನು ಎಎಪಿಯಿಂದ ದೂರವಿಡುವಲ್ಲಿ ಬಿಜೆಪಿ ಎಷ್ಟು ಯಶಸ್ವಿಯಾಗುತ್ತದೆ ಎಂಬುದರ ಮೇಲೆಯೇ ಎಲ್ಲವೂ ನಿರ್ಣಯವಾಗಲಿದೆ.