ಹೆಣ್ಣೆಂದು ಹೀಗಳೆಯದಿರಿ
ಇಂದು ರಾಷ್ಟ್ರೀಯ ಹೆಣ್ಣುಮಗುವಿನ ದಿನ

ಪ್ರಕೃತಿಯು ಸಮತೋಲನ ಕಾಯ್ದುಕೊಳ್ಳಲು ಗಂಡು ಸಂತತಿಗಿಂತ ಹೆಣ್ಣು ಸಂತತಿಯ ಪ್ರಮಾಣವನ್ನು ಹೆಚ್ಚು ಸೃಷ್ಟಿಸಿರುತ್ತದೆ. ಏಕೆಂದರೆ ವಂಶಾಭಿವೃದ್ಧಿಯ ಹೊಣೆ ಹೆಣ್ಣು ಜೀವದ ಮೇಲಿರುತ್ತದೆ. ಇದು ಎಲ್ಲ ಪ್ರಾಣಿ ಸಂತತಿಗೂ ಅನ್ವಯವಾಗುತ್ತದೆ. ಆದರೆ ಮನುಷ್ಯರಾದ ನಮಗೆ ಪ್ರಕೃತಿಯ ಈ ನೀತಿ ಅರ್ಥವಾಗುತ್ತಿಲ್ಲ.
ನಮ್ಮ ದೇಶದಲ್ಲಿ ಆರು ವರ್ಷದೊಳಗಿನ ಹೆಣ್ಣು ಮಕ್ಕಳ ಪ್ರಮಾಣ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿದ್ದು, ಕಳೆದ ಮೂರು ದಶಕಗಳ ಅವಧಿಯಲ್ಲಿ ಲೆಕ್ಕಕ್ಕೆ ಸಿಗದಷ್ಟು ಹೆಣ್ಣುಮಕ್ಕಳ ಬದುಕನ್ನು ಹುಟ್ಟುವ ಮೊದಲೇ ಕಿತ್ತುಕೊಳ್ಳಲಾಗಿದೆ.
ಗರ್ಭಜಲ ಪರೀಕ್ಷೆ, ಕೋರಿಯಾನಿಕ್ ವಿಲ್ಲಸ್ ಬಯಾಪ್ಸಿ, ಅಲ್ಟ್ರಾ ಸೋನೊಗ್ರಫಿಯಂಥ ವಿಧಾನಗಳಿಂದ ಮಗುವಿನ ಭ್ರೂಣಾವಸ್ಥೆಯಲ್ಲೇ ಸುಮಾರು 70 ರೋಗಗಳನ್ನು ಪತ್ತೆ ಹಚ್ಚುವುದು ಸಾಧ್ಯವಾಗಿದೆ. ಈ ರೋಗಗಳಲ್ಲಿ ಕೆಲವು ಗಂಡು ಅಥವಾ ಹೆಣ್ಣು ಮಗುವಿಗಷ್ಟೇ ಸೀಮಿತವಾಗಿದ್ದರಿಂದ ಭ್ರೂಣಗಳ ಲಿಂಗಪತ್ತೆಯು ಅವಶ್ಯವಾಯಿತು. ಹೀಗೆ ಒಂದು ವೈಜ್ಞಾನಿಕ ಪರೀಕ್ಷೆಯ ಅಂಗವಾಗಿ ಆರಂಭವಾದ ಲಿಂಗ ಪತ್ತೆಯ ವಿಧಾನ ಕಾಲಕ್ರಮೇಣ ಮೂಲೋದ್ದೇಶದಿಂದ ದೂರ ಬಹುದೂರ ಸಾಗಿ ಗರ್ಭದಲ್ಲೇ ಹೆಣ್ಣು ಭ್ರೂಣಗಳ ಕರುಳಿನ ಬಳ್ಳಿಯನ್ನು ಕತ್ತರಿಸುವ ಕತ್ತರಿ ಆಯಿತು. ಈ ವಿಧಾನಗಳಿಂದು ಅಪಾರವಾಗಿ ಅಪಬಳಕೆಗಳಾಗಿ ಹೆಣ್ಣು ಜೀವ ಕಣ್ಣು ಬಿಡುವ ಮೊದಲೇ ಮಣ್ಣುಗೂಡುವಂತೆ ಮಾಡುತ್ತಿವೆ. ಹೆಣ್ಣು ಸಂತಾನದ ಸಂಖ್ಯೆ ಗಮನಾರ್ಹವಾಗಿ ಕುಗ್ಗಿಸುವ ಮೂಲಕ ಹೆಣ್ಣು ಗಂಡಿನ ಅಸಮತೋಲನಕ್ಕೆ ನಾಂದಿ ಹಾಡಿದೆ.
ಲಿಂಗ ಅಸಮಾನತೆ:
ಜಾಗತಿಕ ಆರ್ಥಿಕ ವೇದಿಕೆಯು ಇತ್ತೀಚೆಗೆ ಪ್ರಕಟಿಸಿರುವ ಲಿಂಗ ಸಂಬಂಧಿ ಅಸಮಾನತೆಯ ವರದಿಯಲ್ಲಿ ಭಾರತದ ಮಹಿಳೆಯರು ಅನುಭವಿಸುತ್ತಿರುವ ಬವಣೆಯ ಸ್ವರೂಪವನ್ನು ಚೆನ್ನಾಗಿ ಹಿಡಿದಿಡಲಾಗಿದೆ. ವಿಶ್ವದ 128 ದೇಶಗಳ ಪೈಕಿ ಲಿಂಗ ಸಂಬಂಧಿ ಅಸಮಾನತೆಯಲ್ಲಿ ಭಾರತದ ಸ್ಥಾನ 114ನೆಯದಾಗಿದೆ. ಇದು ಗೌರವ ತರುವ ಸಂಗತಿಯೇನಲ್ಲ.
ಕರ್ನಾಟಕದಲ್ಲಿ 2001ರ ಜನಗಣತಿ ಪ್ರಕಾರ ಜನಸಂಖ್ಯೆ ಪ್ರತೀ ಸಾವಿರ ಪುರುಷರಿಗೆ ಮಹಿಳೆಯರ ಸಂಖ್ಯೆ 963 ಇತ್ತು. 2011ರಲ್ಲಿ 943ಕ್ಕೆ ಇಳಿದಿದೆ.
ಹೆಣ್ಣು ಮಕ್ಕಳ ಮೇಲಿನ ಎಲ್ಲ ರೀತಿಯ ಲೈಂಗಿಕ ದೌರ್ಜನ್ಯ ಹೆಚ್ಚಳಕ್ಕೆ ಹೆಣ್ಣು ಭ್ರೂಣ ಹತ್ಯೆಯೂ ಒಂದು ಮುಖ್ಯ ಕಾರಣ ಎಂದು ಸಮಾಜ ವಿಜ್ಞಾನಿಗಳು ಗುರುತಿಸಿದ್ದಾರೆ. ನಮ್ಮ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳು ಹೆಣ್ಣು ಭ್ರೂಣ ಹತ್ಯೆಯ ಹೆಚ್ಚಳ ಮತ್ತು ಅಸಮಾನ ಲಿಂಗಾನುಪಾತದ ಕುರಿತು ಮತ್ತೆ ಮತ್ತೆ ಕಟುವಾಗಿ ಎಚ್ಚರಿಸುತ್ತಲೇ ಇವೆ. ಹೆಣ್ಣು ಭ್ರೂಣ ಹತ್ಯೆ ಮಾನವ ಜನಾಂಗದ ಅತಿ ಕೆಟ್ಟ ಪದ್ಧತಿ ಎಂದು ಖಾರವಾಗಿ ಪ್ರತಿಕ್ರಿಯಿಸಿವೆ. ಕಾನೂನು ರಚನೆಯಾಗಿದ್ದರೂ ಅದರ ಪರಿಣಾಮಕಾರಿ ಅನುಷ್ಠಾನ ಯಾಕೆ ಆಗಿಲ್ಲ ಎಂದೂ ಪ್ರಶ್ನಿಸುತ್ತಿವೆ.
ಕಣ್ಮರೆಗೆ ಕಾರಣಗಳು :
ಅಂದಿನವರು ಹೆಣ್ಣನ್ನು ಹೆಜ್ಜೆ ಹೆಜ್ಜೆಗೂ ಹೀಗಳೆದು, ಬೀಳುಗಳೆದರೆ ಅಷ್ಟೆಲ್ಲ ತಾಪತ್ರಯವೇ ಬೇಡವೆಂದು ಆಕೆಯನ್ನೇ ಇಲ್ಲವಾಗಿಸಿ ಬಿಡುತ್ತಿದ್ದಾರೆ ಇಂದಿನವರು. ಇವರು ಅದೃಶ್ಯರಾಗಲು ಅವರ ಸ್ವಂತ ಅಪ್ಪ-ಅಮ್ಮ, ಅತ್ತೆ-ಮಾವ ಅಥವಾ ಅಜ್ಜ-ಅಜ್ಜಿ ಕಾರಣಕರ್ತರಾಗಬಹುದು. ಇತರ ಕಾರಣಗಳು- ಪುರುಷ ಶ್ರೇಷ್ಠತೆಯ ಮೌಲ್ಯ, ಗಂಡು ಬೇಕೆಂಬ ಹುಚ್ಚು, ಚಿಕ್ಕ ಚೊಕ್ಕ ಕುಟುಂಬದತ್ತ ಹೆಚ್ಚುತ್ತಿರುವ ಒಲವು, ಹೆಣ್ಣು ಹೊರೆ, ಗರ್ಭಪಾತವೇನೂ ಶಾಪವಲ್ಲ ಎಂಬ ಮನೋಭಾವ, ಕಟ್ಟುನಿಟ್ಟಿನ ಅನುಷ್ಠಾನ ಕಾಣದ ಕಾನೂನು, ಸಾಮಾಜಿಕ ಜವಾಬ್ದಾರಿ ಅರಿಯದ ವೈದ್ಯ, ವೈದ್ಯಕೀಯ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಕೇವಲ ದುಡ್ಡಿನ ಆಸೆಗಾಗಿ ತಂತ್ರಜ್ಞಾನದ ದುರುಪಯೋಗ...ಇತ್ಯಾದಿ.
ಪರಿಹಾರ:
ಹೆಣ್ಣು ಮಗುವಿನ ಉಳಿವಿಗಾಗಿ, ಅಭಿವೃದ್ಧಿಗಾಗಿ ಸರಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಭಾಗ್ಯ ಲಕ್ಷ್ಮಿ ಬಾಂಡ್, ಬೇಟಿ ಬಚಾವೊ, ಬೇಟಿ ಪಡಾವೊ ಪ್ರಾರಂಭಿಸಿದೆ. ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕುವ (ನಿರ್ಬಂಧ ಮತ್ತು ದುರ್ಬಳಕೆ) ಕಾನೂನು 1994ನ್ನು 1.1.1996 ರಿಂದ ಜಾರಿಗೆ ತಂದಿದೆ. ವಿಶ್ವ ಸಂಸ್ಥೆ 1975-76ರಿಂದ ಈವರೆಗೆ ಪ್ರತೀ ವರ್ಷ ಹೆಣ್ಣು ಮಕ್ಕಳ ವರ್ಷವನ್ನು ಆಚರಿಸುತ್ತ ಬಂದಿದೆಯಲ್ಲದೆ, ಸಾರ್ಕ್ ದೇಶಗಳೂ ಹೆಣ್ಣು ಮಗುವಿನ ವರ್ಷವನ್ನು 1990ರಿಂದ ಆಚರಿಸುತ್ತ ಬಂದಿವೆ. ನಂತರ ಹೆಣ್ಣು ಮಗುವಿನ ದಶಕ ಎಂದು ಘೋಷಿಸಿ, ಹೆಣ್ಣಿನ ಸರ್ವಾಂಗೀಣ ಬದಲಾವಣೆಗಾಗಿ ಕಾರ್ಯಕಲಾಪಗಳನ್ನು ಹಾಕಿಕೊಂಡು ಕ್ರಾಂತಿಯ ಕಹಳೆ ಊದಿದೆ. ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ, ಲಾಲನೆ-ಪಾಲನೆ, ವೃತ್ತಿ ತರಬೇತಿ ಹಲವು ಹತ್ತು ಸಮಸ್ಯೆಗಳ ಬಗ್ಗೆ ದಿಲ್ಲಿಯಲ್ಲಿ ಹಮ್ಮಿಕೊಂಡ ‘ಹೆಣ್ಣು ಮಗು ಕಮ್ಮಟದಲ್ಲಿ’ ವಿವರವಾಗಿ ಚರ್ಚಿಸಿದೆ.
ಹೆಣ್ಣು ಭ್ರೂಣ ಹತ್ಯೆಯೂ ಸೇರಿದಂತೆ ಹೆಣ್ಣಿನ ಎಲ್ಲ ತರದ ಶೋಷಣೆಗೂ ಕೇವಲ ಸರಕಾರದ ಕಾನೂನೊಂದರಿಂದಲೇ ಪರಿಹಾರವಾಗಲಾರದು. ಸಮಾಜ, ಸಂಘ ಸಂಸ್ಥೆಗಳೂ ಇದರಲ್ಲಿ ಭಾಗವಹಿಸಬೇಕು. ಜನಜಾಗೃತಿಯನ್ನು ಮೂಡಿಸಬೇಕು. ಸಾಮಾಜಿಕ ಸಹಾಯ ಸಿಕ್ಕಾಗ ಸಮಸ್ಯೆ ಪರಿಹರಿಸುವುದು ಸುಲಭ. ಕಾಯ್ದೆ ಇಡೀ ಹೋರಾಟದ ಒಂದು ಭಾಗ ಮಾತ್ರ. ಇಡೀ ಸಂಸ್ಕೃತಿಯೇ ಈ ರೂಢಿಯ ತಳಪಾಯವಾಗಿದ್ದರೆ ಕೇವಲ ಕಾನೂನಿನಿಂದ ಅದನ್ನು ಹೋಗಲಾಡಿಸುವುದು ಅಸಾಧ್ಯ.
ಮುಗಿಸುವ ಮುನ್ನ :
ಲಭ್ಯವಿರುವ ಎಲ್ಲಾ ಮಾಧ್ಯಮಗಳ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿ ಹೆಣ್ಣು ಮಗುವಿನ ಉಳಿವಿಗಾಗಿ ಬಲವಾದ ಜನಾಭಿಪ್ರಾಯಗಳನ್ನು ನಿರ್ಮಿಸಿ ಒಂದು ವ್ಯಾಪಕ ಚಳವಳಿಯನ್ನೇ ತಯಾರು ಮಾಡಬೇಕು. ಸ್ತ್ರೀಯರ ಶೋಷಣೆಯ ವಿರುದ್ಧ, ವಿಜ್ಞಾನದ ದುರುಪಯೋಗದ ವಿರುದ್ಧ, ವೈದ್ಯಕೀಯ ವೃತ್ತಿಯ ವ್ಯಾಪಾರೀಕರಣದ ವಿರುದ್ಧ...ಹೀಗೆ ನಮ್ಮ ಹೋರಾಟ ಹಲವು ಮಟ್ಟದಲ್ಲಿ, ಹಲವು ವಿಧಗಳಲ್ಲಿ ನಡೆದಾಗ ಮಾತ್ರ ಹೆಣ್ಣು ಮಗು ಉಳಿದೀತು!