ತೋಟ ಸಂರಕ್ಷಣೆಗೆ ನೀರಿನ ಮೂಲಗಳ ಬಳಕೆಯಿಂದ ಕುಡಿಯುವ ನೀರಿಗೆ ಆಪತ್ತು
ಕಾಫಿನಾಡಿನಲ್ಲಿ ದುಪ್ಪಟ್ಟಾಗುತ್ತಿರುವ ಅಡಿಕೆ ಬೆಳೆಯುವ ಪ್ರದೇಶ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬೆಳೆಯುವ ಕಾಫಿ, ಅಡಿಕೆ ಬೆಳೆಗಳಿಗೆ ಉತ್ತಮ ಧಾರಣೆ ಇರುವ ಕಾರಣಕ್ಕೆ ಸದ್ಯ ಮಲೆನಾಡಿನ ಕೃಷಿ ಭೂಮಿಗಳನ್ನು ಈ ವಾಣಿಜ್ಯ ಬೆಳೆಗಳೇ ಆವರಿಸಿಕೊಂಡಿದ್ದು, ಭತ್ತದ ಬೆಳೆಯ ಜಾಗವನ್ನು ಕಾಫಿ, ಅಡಿಕೆ ಬೆಳೆಗಳು ನುಂಗುತ್ತಿರುವುದರೊಂದಿಗೆ ಜಿಲ್ಲೆಯಲ್ಲಿ ಸದ್ಯ ಹಾಹಾಕಾರಕ್ಕೆ ಕಾರಣವಾಗಿರುವ ಕುಡಿಯುವ ನೀರಿಗೂ ಈ ಬೆಳೆಗಳು ಸಂಚಕಾರ ತಂದಿರುವುದು ಆತಂಕಕ್ಕೆ ಕಾರಣವಾಗಿದೆ.
ಕಾಫಿನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಈ ಹಿಂದೆ ಕಾಫಿ, ಕಾಳುಮೆಣಸು, ಏಲಕ್ಕಿ, ಭತ್ತ, ಅಡಿಕೆ ಬೆಳೆಗಳಿಗೆ ಹೆಸರಾಗಿತ್ತು. ಜಿಲ್ಲೆಯ ಬಯಲು ಭಾಗದ ತಾಲೂಕುಗಳು ತರಕಾರಿ, ರಾಗಿ, ಜೋಳದಂತಹ ಬೆಳೆಗಳಿಗೆ ಹೆಸರಾಗಿತ್ತು. ಕಾಫಿಯ ಕಾರಣಕ್ಕೆ ಚಿಕ್ಕಮಗಳೂರು ಜಿಲ್ಲೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯಲು ಸಾಧ್ಯವಾಗಿದ್ದರೂ ಕಾಫಿಯೊಂದಿಗೆ ಭತ್ತ ಹಾಗೂ ಅಡಿಕೆ ಇಲ್ಲಿನ ಸಾಂಪ್ರದಾಯಿಕ ಬೆಳೆಯಾಗಿತ್ತು.
ಭತ್ತದ ಬೆಳೆ ಮಲೆನಾಡನ್ನು ಆವರಿಸಿಕೊಂಡಿದ್ದ ವೇಳೆ ಮಲೆನಾಡಿನಲ್ಲಿ ಎಲ್ಲಿ ನೋಡಿದರಲ್ಲಿ ನೀರಿನ ಹರಿವು ಕಂಡು ಬರುತ್ತಿತ್ತು. ಭತ್ತದ ಗದ್ದೆಗಳ ಕಾರಣಕ್ಕೆ ಮಲೆನಾಡಿನಲ್ಲಿ ಅಂತರ್ಜಲದ ಮಟ್ಟವೂ ಹೆಚ್ಚಾಗಿತ್ತು. ಆದರೆ ಕಾಫಿಗೆ ಚಿನ್ನದ ಬೆಲೆ ಬರುತ್ತಿದ್ದಂತೆ ಭತ್ತದ ಗದ್ದೆಗಳೂ ಹಂತ ಹಂತವಾಗಿ ಕಾಫಿ ತೋಟಗಳಾಗಿ ಪರಿವರ್ತನೆಯಾಗುತ್ತ ಬಂದಿದ್ದವು. ಈ ಮಧ್ಯೆ ಮಲೆನಾಡಿನ ಮತ್ತೊಂದು ಸಾಂಪ್ರದಾಯಿಕ ಬೆಳೆಯಾಗಿದ್ದ ಅಡಿಕೆ ಬೆಳೆ ನೀರಾವರಿ ಪ್ರದೇಶಗಳಲ್ಲಿ ಮಾತ್ರ ಕಂಡು ಬರುತ್ತಿತ್ತು. ಕಾಫಿ, ಭತ್ತದ ಬೆಳೆಗಳೊಂದಿಗೆ ಅಡಿಕೆ ಬೆಳೆಗೆ ಮಲೆನಾಡಿನಲ್ಲಿ ವಿಶೇಷ ಗೌರವವನ್ನೂ ಪಡೆದುಕೊಂಡಿತ್ತು. ಆದರೆ ಭತ್ತದ ಕೃಷಿಗೆ ತಗಲುತ್ತಿದ್ದ ವೆಚ್ಚ ಮತ್ತು ಮಾರುಕಟ್ಟೆಯಲ್ಲಿ ಭತ್ತಕ್ಕಿದ್ದ ಕಡಿಮೆ ಧಾರಣೆ ಕಾರಣದಿಂದಾಗಿ ಮಲೆನಾಡಿನ ಭತ್ತದ ಗದ್ದೆಗಳು ಕಾಫಿಯೊಂದಿಗೆ ಅಡಿಕೆ ತೋಟಗಳಾಗಿಯೂ ಮಾರ್ಪಾಡು ಹೊಂದಲಾರಂಭಿಸಿದ್ದವು.
ಅಡಿಕೆ ಬೆಳೆಯನ್ನು ಎಲ್ಲಿ ಬೇಕಾದರೂ, ಯಾವುದೇ ವಾತಾವರಣದಲ್ಲೂ ಬೆಳೆಯಬಹುದಾದ ಕಾರಣದಿಂದಾಗಿ ಸದ್ಯ ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಕೆಲವೇ ಹೆಕ್ಟೇರ್ ಪ್ರದೇಶದಲ್ಲಿದ್ದು, ಉಳಿದ ಭತ್ತದ ಗದ್ದೆಗಳನ್ನು ಅಡಿಕೆ ಬೆಳೆ ಆವರಿಸಿಕೊಂಡಿದೆ. ಕಾಫಿಯಂತೆ ಅಡಿಕೆಗೂ ಮಾರುಕಟ್ಟೆಯಲ್ಲಿ ಕೆಲ ದಶಕಗಳಿಂದ ಸ್ಥಿರ ಬೆಲೆ ಇದ್ದು, ರೈತರು ಸದ್ಯ ಅಡಿಕೆ ಬೆಳೆಯತ್ತ ಆಕರ್ಷಿತರಾಗುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆ ಅತೀ ಹೆಚ್ಚು ಹೆಕ್ಟೇರ್ ಪ್ರದೇಶವನ್ನು ಆವರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೇ, ಅಡಿಕೆ ಬೆಳೆ ಎರಡನೇ ಸ್ಥಾನದಲ್ಲಿರುವ ಬೆಳೆಯಾಗಿದ್ದು, ಜಿಲ್ಲೆಯ ಮಲೆನಾಡು ಭಾಗಕ್ಕೆ ಮಾತ್ರ ಸೀಮಿತವಾಗಿದ್ದ ಈ ಬೆಳೆ ಸದ್ಯ ಜಿಲ್ಲೆಯ ಬಯಲು ಭಾಗದ ಜಮೀನುಗಳನ್ನೂ ಆವರಿಸಿಕೊಂಡಿದ್ದು, ಅಡಿಕೆ ಕೃಷಿ ಇಂದಿಗೂ ಹೆಚ್ಚುತ್ತಲೇ ಹೋಗುತ್ತಿದೆ.
ಸದ್ಯ ಅಡಿಕೆ ಬೆಳೆಯತ್ತ ಬಹುತೇಕ ರೈತರು ಮುಖ ಮಾಡಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಒಂದು ದಶಕದ ಹಿಂದೆ ಅಡಿಕೆ ಬೆಳೆಯುವ ಪ್ರದೇಶ ಸದ್ಯ 3-4 ಪಟ್ಟು ಹೆಚ್ಚಾಗಿದ್ದು, ಈ ಬೆಳೆ ಸಂರಕ್ಷಣೆ ಹಾಗೂ ಕೃಷಿಗಾಗಿ ಭಾರೀ ಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದ್ದು, ಅಡಿಕೆ ಬೆಳೆಗಾರರು ನದಿ, ಹಳ್ಳ, ಕೆರೆ, ಕೊಳವೆ ಬಾವಿ, ಝರಿ ಜಲಪಾತಗಳ ನೀರನ್ನು ಬೇಸಿಗೆಯಲ್ಲಿ ಯಥೇಚ್ಛವಾಗಿ ಬಳಸುತ್ತಿರುವುದು ಜಿಲ್ಲಾಡಳಿತಕ್ಕೂ ತಲೆನೋವು ತಂದಿಟ್ಟಿದೆ. ಸದ್ಯ ಜಿಲ್ಲೆಯ ಮಲೆನಾಡು ಹಾಗೂ ಬಯಲು ಭಾಗದ 9 ತಾಲೂಕುಗಳ ಪೈಕಿ 8 ತಾಲೂಕುಗಳನ್ನು ಬರಪೀಡಿತ ತಾಲೂಕೆಂದು ಸರಕಾರ ಘೋಷಣೆ ಮಾಡಿದೆ. ಈ 8 ತಾಲೂಕುಗಳ ವ್ಯಾಪ್ತಿಯಲ್ಲಿ ಅಡಿಕೆ ತೋಟಗಳು ಎಲ್ಲೆಂದರಲ್ಲಿ ತಲೆ ಎತ್ತಿ ನಿಂತಿದ್ದು, ಅಡಿಕೆ ಬೆಳೆ, ತೋಟ ಸಂರಕ್ಷಣೆಗಾಗಿ ರೈತರು ಬರದ ಪರಿಸ್ಥಿತಿಯಲ್ಲೂ ಕೆರೆ, ಹಳ್ಳ, ನದಿ, ಝರಿ, ಜಲಪಾತಗಳ ನೀರನ್ನು ತೋಟಗಳಿಗೆ ಹಾಯಿಸುತ್ತಿದ್ದಾರೆ.
ನೀರಿನ ಮೂಲ ಇಲ್ಲದವರು ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಸಿ ಅಂತರ್ಜಲವನ್ನು ತೋಟಗಳ ಸಂರಕ್ಷಣೆಗೆ ಬಳಸುತ್ತಿದ್ದಾರೆ. ಇದು ಜಿಲ್ಲಾಡಳಿತಕ್ಕೆ ತಲೆನೋವು ತಂದಿಟ್ಟಿದ್ದು, ತೀವ್ರ ಬರ ಆವರಿಸಿರುವ ಸಂದರ್ಭದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರೂ ಸಿಗದಂತಹ ಪರಿಸ್ಥಿತಿಯಲ್ಲಿ ಕೃಷಿಕರು ಅಡಿಕೆ ಕೃಷಿಗೆ ಮೊರೆ ಹೋಗುತ್ತಿರುವುದು ಮತ್ತು ಅಡಿಕೆ ತೋಟಗಳ ಸಂರಕ್ಷಣೆಗೆ ಲಭ್ಯ ಇರುವ ನೀರಿನ ಮೂಲಗಳನ್ನು ಬಳಸುತ್ತಿರುವುದು ಚಿಂತೆಗೀಡು ಮಾಡಿದೆ. ಬಯಲು ಭಾಗದ ರೈತರೂ ಅಡಿಕೆ ಕೃಷಿಯತ್ತ ಮುಖಮಾಡಿ ತೋಟಗಳಿಗೆ ನೀರು ಪೂರೈಕೆ ಮಾಡಲು 4-5 ಕೊಳವೆ ಬಾವಿ ಕೊರೆಯುತ್ತಿದ್ದು, ಇದು ಅಂತರ್ಜಲದ ಮಟ್ಟ ಕಡಿಮೆಯಾಗಲು ಕಾರಣವಾಗುತ್ತಿದೆ.
ಬರದ ಹಿನ್ನೆಲೆಯಲ್ಲಿ ನದಿ, ಕೆರೆ, ಹಳ್ಳ, ಝರಿ, ಜಲಪಾತದಂತಹ ನೀರಿನ ಮೂಲಗಳನ್ನು ಕೃಷಿಗೆ ಬಳಸದಂತೆ ಜಿಲ್ಲಾಡಳಿತ, ಸರಕಾರ ಆದೇಶ ಹೊರಡಿಸಿದರೂ ಕದ್ದುಮುಚ್ಚಿ ಈ ನೀರಿನ ಮೂಲಗಳಿಂದ ತೋಟಗಳ ಸಂರಕ್ಷಣೆಗೆ ನೀರನ್ನು ಬಳಸಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಜನ, ಜಾನುವಾರುಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಕಾರಣವಾಗಲಿದೆ ಎಂದು ಸ್ವತಃ ಜಿಲ್ಲಾಡಳಿತವೇ ಆತಂಕ ವ್ಯಕ್ತಪಡಿಸಿದ್ದು, ಅಡಿಕೆ ಕೃಷಿ ಮಿತಿ ಮೀರಿರುವುದು ನೀರಿನ ಅಭಾವಕ್ಕೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರೂ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಕಾಫಿನಾಡಿನ ಗೌರವಕ್ಕೆ ಕಾರಣವಾಗಿದ್ದ ಅಡಿಕೆ ಬೆಳೆ ಬರಗಾಲದ ಪರಿಸ್ಥಿತಿಯಲ್ಲಿ ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಅಡಿಕೆ ಬೆಳೆಯ ಕೃಷಿಗೆ ಮಿತಿ ಹೇರದಿದ್ದಲ್ಲಿ ಮಲೆನಾಡಿನಲ್ಲಿ ಮುಂದೊಂದು ದಿನ ನೈಸರ್ಗಿಕ ನೀರಿನ ಮೂಲಗಳೆಲ್ಲವೂ ಅಡಿಕೆ ಬೆಳೆಯ ಪಾಲಾಗಲಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಡಿಕೆ ಬೆಳೆ ಬೆಳೆಯುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿಂದೆ ಇದ್ದ ಅಡಿಕೆ ಬೆಳೆಯುವ ಪ್ರದೇಶ ಸದ್ಯ 3-4ಪಟ್ಟು ಹೆಚ್ಚಾಗಿದೆ. ಬೇಸಿಗೆಯಲ್ಲಿ ಅಡಿಕೆ ಬೆಳೆ, ತೋಟ ಸಂರಕ್ಷಣೆಗೆ ಹೆಚ್ಚು ನೀರು ಬೇಕು, ಕನಿಷ್ಠ 4ತಿಂಗಳುಗಳ ಕಾಲ ಬೇಸಿಗೆಯಲ್ಲಿ ಅಡಿಕೆ ತೋಟಗಳಿಗೆ ನೀರು ಹಾಯಿಸಬೇಕು. ಇದರಿಂದ ಕೊಳವೆ ಬಾವಿಗಳ ಸಂಖ್ಯೆ ಹೆಚ್ಚುತ್ತಿದೆ. ನದಿ, ಹಳ್ಳ, ಕೆರೆಗಳ ನೀರು ಅಡಿಕೆ ತೋಟಗಳ ಪಾಲಾಗುತ್ತಿದೆ.
ಮೀನಾ ನಾಗರಾಜ್, ಜಿಲ್ಲಾಧಿಕಾರಿ