ಡಾ. ಗಂಗೂಬಾಯಿ ಹಾನಗಲ್ ‘ಗುರುಕುಲ ಗಲಾಟೆ’
ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಕೆಲವೇ ಪಟ್ಟಭದ್ರರ ಗಂಜಿ ಕೇಂದ್ರವಾಗಿತ್ತು. ಅದನ್ನು ಉಳಿಸಲು ಬಿಜೆಪಿಯವರು ಸದ್ದು ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮನಸ್ಸು ಮಾಡಿದ್ದರೆ ಗುರುಕುಲ ಟ್ರಸ್ಟನ್ನು ಕೇಂದ್ರ ಸಂಸ್ಕೃತಿ ಸಚಿವಾಲಯದ ವ್ಯಾಪ್ತಿಗೆ ಸೇರಿಸಬಹುದಿತ್ತು. ಶಾಸಕ ಮಹೇಶ್ ಟೆಂಗಿನಕಾಯಿಯವರಿಗೆ ಡಾ. ಗಂಗೂಬಾಯಿ ಹಾನಗಲ್ ಅವರ ಬಗ್ಗೆ ನಿಜವಾದ ಗೌರವ ಇದ್ದಿದ್ದರೆ ಅವರ ಹೆಸರಿನ ವಿಶ್ವವಿದ್ಯಾಲಯ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ಹೋರಾಟ ಮಾಡಲಿ. ಗುರುಕುಲ ಅತ್ಯುತ್ತಮವಾದುದನ್ನು ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಡಾ. ಗಂಗೂಬಾಯಿ ಹಾನಗಲ್ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಮಹಾನ್ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಶ್ರೇಷ್ಠ ಕಲಾವಿದರು. ಅವರ ತಾಯಿ ಅಂಬಾಬಾಯಿ ಕರ್ನಾಟಕ ಸಂಗೀತದ ಅಪರೂಪದ ಗಾಯಕಿಯಾಗಿದ್ದರು. ಕಿರಾಣಾ ಘರಾಣಾ ಪರಂಪರೆಯ ಕಿರೀಟದಂತಿದ್ದ ಗಂಗೂಬಾಯಿ ಹಾನಗಲ್ ಅವರು ಬಾಲ್ಯದಿಂದಲೇ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದತ್ತ ಆಕರ್ಷಿತರಾಗಿದ್ದರು. ಆರಂಭದಲ್ಲಿ ದತ್ತೋಪಂತ ದೇಸಾಯಿಯವರಲ್ಲಿ ಸಂಗೀತ ಕಲಿಕೆ ಶುರು ಮಾಡಿದ ಅವರು ಆನಂತರ ಕಿರಾಣಾ ಘರಾಣೆಯ ಶ್ರೇಷ್ಠ ಗುರು ಕುಂದಗೋಳದ ಸವಾಯಿ ಗಂಧರ್ವರಲ್ಲಿ ಸಂಗೀತಾಭ್ಯಾಸ ಮಾಡಿ ಸಾಧನೆಯ ಶಿಖರ ತಲುಪಿದವರು. ಮೂಲತಃ ರಂಗಭೂಮಿಯ ಪ್ರತಿಭೆಯಾಗಿದ್ದ ಸವಾಯಿ ಗಂಧರ್ವರು, ಕಿರಾಣಾ ಘರಾಣೆಯ ಸ್ಥಾಪಕರಾದ ಉಸ್ತಾದ್ ಅಬ್ದುಲ್ಕರೀಂಖಾನರು ಗುರುವಾಗಿ ದೊರಕಿದ್ದರಿಂದ ಸಂಗೀತವೂ ಅವರ ಬದುಕಾಯಿತು. ಉಸ್ತಾದ್ ಅಬ್ದುಲ್ ಕರೀಂಖಾನರು ಉತ್ತರ ಪ್ರದೇಶದ ಕಿರಾಣಾ ಊರಿನವರು. ಅವರು ಆಗಾಗ ಮೈಸೂರು ಸಂಸ್ಥಾನಕ್ಕೆ ಸಂಗೀತ ಕಚೇರಿ ನೀಡಲು ಆಗಮಿಸುತ್ತಿದ್ದರು. ವಾಪಸ್ ಹೋಗುವಾಗ ಧಾರವಾಡದ ಸಂಗೀತಗಾರರ ಮನೆಗಳಲ್ಲಿ ತಂಗುತ್ತಿದ್ದರು. ಕುಂದಗೋಳದ ನಾಡಿಗೇರ ವಾಡೆಗೂ ಹೋಗುತ್ತಿದ್ದರು. ಅಲ್ಲಿ ಸವಾಯಿ ಗಂಧರ್ವರಿಗೆ ಸಂಗೀತಭ್ಯಾಸ ಮಾಡಿಸುತ್ತಿದ್ದರು. ಮುಂದೆ ಸವಾಯಿ ಗಂಧರ್ವರು; ವಿದುಷಿ ಗಂಗೂಬಾಯಿ ಹಾನಗಲ್ ಮತ್ತು ಭಾರತ ರತ್ನ ಪಂ. ಭೀಮಸೇನ್ ಜೋಶಿ ಅಂಥ ಶ್ರೇಷ್ಠ ಸಂಗೀತಗಾರರನ್ನು ತಯಾರು ಮಾಡಿ ಹಿಂದೂಸ್ತಾನಿ ಸಂಗೀತ ಶಾಸ್ತ್ರೀಯ ಸಂಗೀತ ಲೋಕಕ್ಕೆ ನೀಡಿದರು. ಉಸ್ತಾದ್ ಅಬ್ದುಲ್ ಕರೀಂಖಾನರು ಗೋವಾ ಮೂಲದ ಕೇಸರ ಬಾಯಿ ಕೇಳ್ಕರ್ ಅವರಿಗೂ ಕೆಲಕಾಲ ಸಂಗೀತದ ಪಾಠ ಹೇಳಿ ಕೊಟ್ಟಿದ್ದರು .
ಉಸ್ತಾದ್ ಅಬ್ದುಲ್ ಕರೀಂಖಾನರು, ಸವಾಯಿ ಗಂಧರ್ವರು, ವಿದುಷಿ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿಯವರು ಗುರುಶಿಷ್ಯ ಪರಂಪರೆಯ ಮೇರು ಮಾದರಿಗಳು. ಅಷ್ಟು ಮಾತ್ರವಲ್ಲ ಗುರುಕುಲ ಪದ್ಧತಿಯ ಸಂಗೀತ ಶಿಕ್ಷಣದ ಶ್ರೇಷ್ಠ ಮಾದರಿಯೂ ಹೌದು. ರಾಜಸತ್ತೆ, ಪಾಳೆಗಾರಿಕೆ ವ್ಯವಸ್ಥೆಯಲ್ಲಿ ಅಪರೂಪಕ್ಕೆ ಗುರುಕುಲ ಪದ್ಧತಿಯ ಬೆರಳಣಿಕೆಯ ಶ್ರೇಷ್ಠ ಮಾದರಿಗಳು ದೊರೆಯುತ್ತವೆಯಾದರೂ ಅದು ಅರ್ಧ ಸತ್ಯ ಮಾತ್ರ. ದ್ರೋಣಾಚಾರ್ಯರಂತಹ ಗುರುಗಳು ಅಸಂಖ್ಯಾತ ಏಕಲವ್ಯರ ಪ್ರತಿಭೆಯನ್ನು ಆರಂಭದಿಂದಲೇ ಚಿವುಟಿ ಹಾಕಿರುವ ನಿದರ್ಶನಗಳಿವೆ. ಏಕಲವ್ಯ ಗುರುಕಾರುಣ್ಯವಿಲ್ಲದೆ ವಿದ್ಯೆ ಕಲಿತ ಮೇಲೂ ದ್ರೋಣಾಚಾರ್ಯರು ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳುತ್ತಾರೆಂದರೆ; ಆಧುನಿಕ ದ್ರೋಣಾಚಾರ್ಯರು ವಿದ್ಯೆ ನಿರಾಕರಿಸುವುದರಲ್ಲಿ ಆಶ್ಚರ್ಯವಿಲ್ಲ. ಪ. ಮಲ್ಲಿಕಾರ್ಜುನ ಮನ್ಸೂರ್ ಅವರಿಗೆ ಪ್ರತಿಭಾವಂತ ಗುರುವೊಬ್ಬರು ಸಂಗೀತ ಕಲಿಸಲು ನಿರಾಕರಿಸುತ್ತಾರೆ. ಛಲ ಬಿಡದ ಮನ್ಸೂರ ಅವರು ಗುರುವನ್ನು ಅರಸಿ ಕೊಲ್ಲಾಪುರದ ಉಸ್ತಾದ್ ಅಲ್ಲಾದಿಯಾಖಾನ್ ಸಾಹೇಬರಲ್ಲಿ ಹೋಗುತ್ತಾರೆ. ಜೈಪುರ ಅತ್ರೌಲಿ ಘರಾಣೆಯ ಸ್ಥಾಪಕರಾದ ಉಸ್ತಾದ್ ಅಲ್ಲಾದಿಯಾಖಾನ್ ಸಾಹೇಬರು ಸಂಗೀತ ಕಲಿಸಲು ಒಪ್ಪುತ್ತಾರೆ. ತಮಗೆ ಅನಾರೋಗ್ಯ ಇರುವುದರಿಂದ ಮಕ್ಕಳಾದ ಉಸ್ತಾದ್ ಮಂಜಿ ಖಾನ್ ಮತ್ತು ಉಸ್ತಾದ್ ಭುರ್ಜಿಖಾನ್ರಿಂದ ಮಲ್ಲಿಕಾರ್ಜುನ ಮನ್ಸೂರ ಅವರಿಗೆ ಸಂಗೀತದ ತಾಲೀಮು ಮಾಡಿಸುತ್ತಾರೆ. ಗುರುಕುಲ ಮಾದರಿಯ ಶಿಕ್ಷಣ ಪದ್ಧತಿ ಆಧುನಿಕ ಕಾಲಕ್ಕೆ ಒಗ್ಗುವುದಿಲ್ಲವೆಂದು ಮನಗಂಡ ಬ್ರಿಟಿಷರು ಶಿಕ್ಷಣವನ್ನು ಸಾರ್ವತ್ರಿಕ ಗೊಳಿಸಲು ಯತ್ನಿಸಿದರು. ಆಯುರ್ವೇದ, ಸಂಗೀತ ಸೇರಿದಂತೆ ಹಲವು ಜ್ಞಾನ ಶಾಖೆಗಳು ಗುರುಕುಲ ಶಿಕ್ಷಣ ಪದ್ಧತಿಯ ಭಾಗವಾಗಿದ್ದವು. ಅವುಗಳನ್ನು ಮುಕ್ತಗೊಳಿಸಿದರು.
ಭಾರತದಲ್ಲಿ ಸಂಗೀತ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಿದ ಕೀರ್ತಿ ಪಂ. ವಿಷ್ಣುದಿಗಂಬರ್ ಅವರಿಗೆ ಸಲ್ಲಬೇಕು. ಅವರು 1901ರಲ್ಲೇ ಲಾಹೋರ್ನಲ್ಲಿ ಸಂಗೀತಕ್ಕೆ ಮೀಸಲಾದ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಅದು ಈಗ ನವಿ ಮುಂಬೈಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರ ಆಡಳಿತ ಕಚೇರಿ ಮೀರಜ್ನಲ್ಲಿದೆ. ಭಾರತೀಯ ಶಾಸ್ತ್ರೀಯ ಸಂಗೀತ ಕಲಿಕೆಗೆ ಭದ್ರ ಬುನಾದಿ ಒದಗಿಸಿದೆ. ಭಾರತದಾದ್ಯಂತ 1,200 ಅಪಿಲೇಟೆಡ್ ಸಂಸ್ಥೆಗಳನ್ನು ಹೊಂದಿದೆ. ಸುಮಾರು 800 ಪರೀಕ್ಷಾ ಕೇಂದ್ರಗಳಿವೆ. ಕಾಲದ ಅಗತ್ಯಕ್ಕನುಗುಣವಾಗಿ ಆನ್ಲೈನ್ ಕೋರ್ಸ್ಗಳನ್ನು ಆರಂಭಿಸಿದ್ದಾರೆ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದ ಪ್ರಮಾಣ ಪತ್ರಗಳು, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳಿಗೆ ಎಲ್ಲೆಡೆ ಶೈಕ್ಷಣಿಕ ಮಾನ್ಯತೆ ಇದೆ. ಕೇಂದ್ರ ಸರಕಾರದ ನವೋದಯ ಶಾಲೆಗಳ ಸಂಗೀತ ಶಿಕ್ಷಕರ ಹುದ್ದೆಗೆ ಇಲ್ಲಿನ ಪದವಿಗಳನ್ನು ಮಾನ್ಯ ಮಾಡಲಾಗುತ್ತದೆ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದವರು ಅತ್ಯಂತ ವೈಜ್ಞಾನಿಕ ಪಠ್ಯಕ್ರಮ ರೂಪಿಸಿದ್ದಾರೆ. ಈ ಮಹಾವಿದ್ಯಾಲಯದ ಪರೀಕ್ಷೆ ಪಾಸು ಮಾಡಿ ಪ್ರಮಾಣಪತ್ರ ಪಡೆದರೆ ಅವುಗಳಿಗೆ ಸಮಾನಾಂತರ ಮೌಲ್ಯ ಕಲ್ಪಿಸಿದ್ದಾರೆ. ಈ ಮಹಾವಿದ್ಯಾಲಯದ ಪ್ರಾರಂಭಿಕ ಕೋರ್ಸ್ ಪೂರೈಸಿ ಪ್ರಮಾಣ ಪತ್ರ ಪಡೆದರೆ ಅಲ್ಲಿನ ಪ್ರವೇಶಿಕ ಪ್ರಥಮ ಕೋರ್ಸ್ ಸೇರಲು ಅರ್ಹತೆ ದೊರೆಯುತ್ತದೆ. ಪ್ರವೇಶಿಕ ಪ್ರಥಮ, ಪ್ರವೇಶಿಕ ಪೂರ್ಣ ಪಾಸಾದರೆ ಅದು ಮೆಟ್ರಿಕ್ಯುಲೇಷನ್ಗೆ ಸಮಾನಾಂತರ ಎನಿಸಿಕೊಳ್ಳುತ್ತದೆ. ಮಧ್ಯಮ ಪೂರ್ಣ ಪರೀಕ್ಷೆ ಪಾಸಾದರೆ ಅದು ಪಿಯುಸಿ ಅಥವಾ ಡಿಪ್ಲೊಮಾಗೆ ಸಮಾನಾಂತರ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವಿಷಯದಲ್ಲಿ ಪದವಿ ಪೂರೈಸಿ ಗಂಧರ್ವ ಮಹಾವಿದ್ಯಾಲಯದ ವಿಶಾರದಾ ಪ್ರಥಮ, ವಿಶಾರದಾ ಪೂರ್ಣ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಸಂಗೀತ ವಿಭಾಗದ ಸ್ನಾತಕೋತ್ತರ ಪದವಿ ತರಗತಿಗಳಿಗೆ ಪ್ರವೇಶ ಪಡೆಯುವ ಅರ್ಹತೆ ದೊರೆಯುತ್ತದೆ. ಇಲ್ಲಿನ ಅಲಂಕಾರ ಪ್ರಥಮ, ಅಲಂಕಾರ ಪೂರ್ಣ ಪರೀಕ್ಷೆಗಳನ್ನು ತೇರ್ಗಡೆಯಾದರೆ ಅದನ್ನು ಸಂಗೀತ ವಿಭಾಗದ ಸ್ನಾತಕೋತ್ತರ ಪದವಿಗೆ ಸಮಾನಾಂತರ ಎಂದು ಪರಿಗಣಿಸಲಾಗುತ್ತದೆ. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲದ ಸಂಗೀತಾಚಾರ್ಯ ಪದವಿ ಪಿಎಚ್.ಡಿ.ಗೆ ಸಮಾನಾಂತರವಾಗಿದೆ. ಸಂಗೀತ ಶಿಕ್ಷಣ ಇಲ್ಲಿ ಎಲ್ಲರಿಗೂ ಲಭ್ಯ. ತಮಗೆ ಬೇಕಾದ ಗುರುಗಳಲ್ಲಿ ಸಂಗೀತ ಶಿಕ್ಷಣ ಕಲಿತು ಅವರ ಪರೀಕ್ಷೆಗಳನ್ನು ತೇರ್ಗಡೆಯಾಗಬೇಕಷ್ಟೆ.
ಧಾರವಾಡ ಸಂಗೀತ ದಿಗ್ಗಜರ ತವರೂರು. ಆದರೆ 1976ರ ವರೆಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ವಿಭಾಗವೇ ಇರಲಿಲ್ಲ. ಹಾಗೆ ನೋಡಿದರೆ ಕರ್ನಾಟಕ ವಿಶ್ವವಿದ್ಯಾನಿಲಯ 1949ರಲ್ಲೇ ಸ್ಥಾಪನೆಯಾಗಿತ್ತು. ಪದವಿ ಮತ್ತು ಸ್ನಾತಕೋತ್ತರ ಪದವಿ ಕಲಿಸುವುದರ ಬಗ್ಗೆ ಗುರುಕುಲ ಪದ್ಧತಿಯಲ್ಲಿ ಸಂಗೀತ ಕಲಿತವರಿಗೆ ತಕರಾರು ಇರುತ್ತವೆ. ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಶ್ರೇಷ್ಠ ಸಂಗೀತಗಾರರನ್ನು ಸೃಷ್ಟಿಸಲಾಗದು ಎಂಬ ವಾದವನ್ನು ಗುರುಕುಲ ಶಿಕ್ಷಣ ಪದ್ಧತಿಯ ಸಮರ್ಥಕರು ಪ್ರತಿಪಾದಿಸುತ್ತಿದ್ದಾರೆ. 1975ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕಗೊಂಡ ಡಾ. ಆರ್.ಸಿ. ಹಿರೇಮಠರು ಸಂಗೀತ ವಿಭಾಗ ಸ್ಥಾಪನೆಗೆ ಒಲವು ತೋರಿ ಡಾ. ಗಂಗೂಬಾಯಿ ಹಾನಗಲ್ ಸೇರಿದಂತೆ ಎಲ್ಲಾ ಸಂಗೀತ ದಿಗ್ಗಜರನ್ನು ಸಂಪರ್ಕಿಸುತ್ತಾರೆ. ಗುರುಕುಲ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ಪಡೆದಿದ್ದ ಆ ಎಲ್ಲಾ ದಿಗ್ಗಜರು ಆಧುನಿಕ ಶಿಕ್ಷಣ ಪದ್ಧತಿಯಲ್ಲೇ ಸಂಗೀತ ಶಿಕ್ಷಣ ನೀಡುವಂತಾಗಬೇಕೆಂದು ಒತ್ತಾಯಿಸುತ್ತಾರೆ. ಮಾತ್ರವಲ್ಲ, ಕರ್ನಾಟಕ ವಿಶ್ವವಿದ್ಯಾನಿಲಯದ ಸಂಗೀತ ವಿಭಾಗವನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. 1976-77ರ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕ ವಿ.ವಿ.ಯಲ್ಲಿ ಸಂಗೀತ ಮತ್ತು ಲಲಿತಕಲಾ ವಿಭಾಗ ಆರಂಭಿಸುತ್ತಾರೆ. ಡಾ. ಮಲ್ಲಿಕಾರ್ಜುನ ಮನ್ಸೂರ ಅವರೇ ಈ ವಿಭಾಗದ ನೇತೃತ್ವ ವಹಿಸುತ್ತಾರೆ. ಅವರನ್ನು ಸಂಗೀತ ಮತ್ತು ಲಲಿತಕಲಾ ವಿಭಾಗದ ಮೊದಲ ಗೌರವ ನಿರ್ದೇಶಕರನ್ನಾಗಿ ನೇಮಿಸುತ್ತಾರೆ. ಗುರುಕುಲ ಪದ್ಧತಿಯಲ್ಲಿ ಸಂಗೀತ ಶಿಕ್ಷಣ ಕಲಿತಿದ್ದ ಡಾ. ಗಂಗೂಬಾಯಿ ಹಾನಗಲ್, ಪಂ. ಬಸವರಾಜ ರಾಜಗುರು, ಪ್ರೊ. ರಾಜೀವ್ ಪುರಂದರೆ, ಶ್ರೀಮತಿ ಜಾನಕಿ ಅಯ್ಯರ್ ಆರಂಭದ ದಿನಗಳಲ್ಲಿ ಗೌರವ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಾರೆ. ಸಂಗೀತ ವಿಭಾಗ ಬೆಳೆದಂತೆ ಪಂಚಾಕ್ಷರಿ ಸ್ವಾಮಿ ಮತ್ತಿಘಟ್ಟಿ, ಆರ್.ಪಿ. ಹೂಗಾರ, ಪಂ. ಸಂಗಮೇಶ ಗುರವ್, ಪಂ. ಬಸವರಾಜ ಬೆಂಡಿಗೇರಿ, ಎ.ಯು. ಪಾಟೀಲ್, ಬ.ಡಿ. ಪಾಠಕ್ ಮುಂತಾದವರು ಕಲಿಸುವ ಹೊಣೆ ಹೊರುತ್ತಾರೆ. ಅವರು ಹೊರರಾಜ್ಯ ಮತ್ತು ಸ್ಥಳೀಯ ಪ್ರತಿಭಾವಂತರನ್ನು ಸಂದರ್ಶಕ ಪ್ರಾಧ್ಯಾಪಕರನ್ನಾಗಿ ಆಹ್ವಾನಿಸುತ್ತಿದ್ದರು. ಅವರಲ್ಲಿ ಎಂ. ಡಿ. ಸ್ಯಾಡೊಲಿಕರ್, ಪದ್ಮಾವತಿ ಸಾಲಿಗ್ರಾಮ, ಪ್ರೊ. ರಮೇಶ್ ನಾಡಕರ್ಣಿ, ಪಂ. ಸುಧಾಕರ ದಿಗರಾಜಕರ್, ಪ್ರೊ. ಪದ್ಮಾಕರ ಬುರ್ವೆ, ಪಂ. ಭೀಮಶಂಕರ್, ಪಂ. ನಾರಾಯಣರಾವ್ ಮಜುಮ್ದಾರ್, ಡಾ. ಭಾರತಿ ವೈಶಂಪಾಯನ, ಪಂ. ಪನಶೀಕರ್, ಪಂ. ಉತ್ತರ್ಕರ್ ಬುವಾ, ಪಂ. ವಿ.ಆರ್. ಅಟೋಲೆ, ಪಂ. ಅಪ್ಪಾ ಸಾಹೇಬ ದೇಶಪಾಂಡೆ, ಪಂ. ಚಂದ್ರಶೇಖರ್ ಪುರಾಣಿಕಮಠ, ಪಂ. ಶೇಷಗಿರಿ ದಂಡಾಪುರ, ಪಂ. ಅರವಿಂದ ಮುಳಗಾಂವ್ಕರ್, ಉಸ್ತಾದ್ ಭಾಲೇಖಾನ್, ಪಂ. ಸಂಜಯ ದೇಶಪಾಂಡೆ ಮುಂತಾದವರು.
ಗುರುಕುಲ ಪದ್ಧತಿಯಲ್ಲೇ ಸಂಗೀತ ಶಿಕ್ಷಣ ಪಡೆದ ಡಾ. ಮಲ್ಲಿಕಾರ್ಜುನ ಮನ್ಸೂರ ಅವರು 25 ವರ್ಷಗಳ ಕಾಲ ಸಂಗೀತ ವಿಭಾಗವನ್ನು ಮುನ್ನಡೆಸಿದರು. ಅಲ್ಲಿ ಸಂಗೀತ ಮಹಾವಿದ್ಯಾಲಯವು ಇದೆ. ಹಮೀದ್ ಖಾನ್, ಪಂ. ವೆಂಕಟೇಶ್ ಕುಮಾರ್ ಅವರಂತಹ ಪ್ರತಿಭಾವಂತ ಸಂಗೀತಗಾರರು ಆಧುನಿಕ ಶಿಕ್ಷಣ ಪದ್ಧತಿಯಲ್ಲೇ ಸಂಗೀತ ಶಿಕ್ಷಣವನ್ನು ಧಾರೆ ಎರೆದಿದ್ದಾರೆ. ಕಾಲೇಜು ಮತ್ತು ವಿಶ್ವವಿದ್ಯಾನಿಲಯದ ಸಂಗೀತ ವಿಭಾಗದಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳು ಪದವಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ. ಪಡೆದುಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅತ್ಯುತ್ತಮ ಗಾಯಕರು, ವಾದಕರು ರೂಪುಗೊಂಡಿದ್ದಾರೆ.
ಧಾರವಾಡದ ಸಂಗೀತ ಲೋಕ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕಲಿಕೆಗೆ ಒಗ್ಗಿ ಹೋಗಿದ್ದಾಗ 2006-07ರ ಹೊತ್ತಿಗೆ ಪ್ರಜಾತಂತ್ರದ ಆಶ್ರಯಕ್ಕೆ ವಿರುದ್ಧವಾದ ಗುರುಕುಲ ಮಾದರಿಯಲ್ಲಿ ಸಂಗೀತ ಕಲಿಸುವ ಟ್ರಸ್ಟ್ ಸ್ಥಾಪನೆಗೆ ಚಾಲನೆ ದೊರೆಯುತ್ತದೆ. ಆಗ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರ ಆಡಳಿತ ನಡೆಸುತ್ತಿರುತ್ತದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ, ಯಡಿಯೂರಪ್ಪ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ. ಸಂಗೀತದ ಗಂಧಗಾಳಿ ಇಲ್ಲದ ಯಡಿಯೂರಪ್ಪನವರು ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸುತ್ತಾರೆ. ಉಪಮುಖ್ಯಮಂತ್ರಿಯೇ ಹೆಚ್ಚು ಆಸಕ್ತಿ ತೋರಿದ ಮೇಲೆ ಅಧಿಕಾರಿಗಳು ಇಲ್ಲ ಎನ್ನಲು ಆಗುವುದಿಲ್ಲ. ತರಾತುರಿಯಲ್ಲಿ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಅಸ್ತಿತ್ವಕ್ಕೆ ಬರುತ್ತದೆ. ಅದಕ್ಕಾಗಿ ಹುಬ್ಬಳ್ಳಿಯಲ್ಲಿ ಜಮೀನು ಮಂಜೂರು ಮಾಡುತ್ತಾರೆ. 2006ರಿಂದ 2008ರ ವರೆಗೆ ಉಪಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರೇ 2011ರವರೆಗೆ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಹಾಗಾಗಿ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಪೂರ್ಣ ಪ್ರಮಾಣದಲ್ಲಿ ಅತ್ಯುತ್ತಮ ಕಟ್ಟಡಗಳೊಂದಿಗೆ ಅಭಿವೃದ್ಧಿ ಹೊಂದುತ್ತದೆ. ಆದರೆ ಟ್ರಸ್ಟ್ ನ ಸ್ವರೂಪದಲ್ಲಿ ಅದರಲ್ಲೂ ಕಲಿಕಾ ಮತ್ತು ಪದವಿ ಪ್ರಮಾಣ ಪತ್ರ ನೀಡುವುದರ ಕುರಿತು ಸ್ಪಷ್ಟತೆ ಇಲ್ಲ. ಒಂದು ಸಂಸ್ಥೆ ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕಾದರೆ ವಿದ್ಯಾರ್ಥಿಗಳ ಪ್ರವೇಶಕ್ಕಿರುವ ವಿದ್ಯಾರ್ಹತೆ, ಕೋರ್ಸ್ನ ಅವಧಿ ಮತ್ತು ಆ ಕೋರ್ಸ್ ಯಾವುದಕ್ಕೆ ತತ್ಸಮಾನ ಎಂಬುದು ಸ್ಪಷ್ಟವಾಗಿರಬೇಕು. ಗುರುಗಳ ಆಯ್ಕೆಗೂ ಮಾನದಂಡ ಇರಬೇಕಾಗುತ್ತದೆ.
ಎಲ್ಲಕ್ಕೂ ಮಿಗಿಲಾಗಿ ಆ ಸಂಸ್ಥೆಯನ್ನು ಮುನ್ನಡೆಸಲು ಒಬ್ಬ ಅರ್ಹ ವ್ಯಕ್ತಿಯನ್ನು ನೇಮಿಸಬೇಕಾಗುತ್ತದೆ. ಉನ್ನತ ಶಿಕ್ಷಣ ಇಲಾಖೆ ಆಧುನಿಕ ಶಿಕ್ಷಣ ಪದ್ಧತಿಯನ್ನು ಕ್ರಮಬದ್ಧದಲ್ಲಿ ಉತ್ತೇಜಿಸುವ ವಿಭಾಗ. ಆದರೆ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಜಿಲ್ಲಾಧಿಕಾರಿಯ ಉಸ್ತುವಾರಿಯಲ್ಲಿ ಕಾರ್ಯ ನಿರ್ವಹಿಸುವ ಸಂಸ್ಥೆ. ಜಿಲ್ಲಾಧಿಕಾರಿಗೆ ಸಮಯಾವಕಾಶ ಇರುವುದಿಲ್ಲ. ಹಿರಿಯ ಸಂಗೀತ ಕಲಾವಿದರು ಹೇಳಿದ ಹಾಗೆ ಜಿಲ್ಲಾಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆ. ಮಹಾ ಗುರುಗಳಿಗೆ ರೂ. 50,000 ಗೌರವಧನ, ರೂ. 5,000 ಊಟದ ಭತ್ತೆ ಮತ್ತು ಗುರುಕುಲದಲ್ಲೇ ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ಸಾಥಿದಾರರಿಗೆ ವೇತನ ಮತ್ತು ಭತ್ತ್ತೆ ಹಾಗೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ. ಅವರಿಗೂ ವಸತಿ ವ್ಯವಸ್ಥೆ. ವಾರ್ಷಿಕ ಅಂದಾಜು ಎರಡು ಕೋಟಿಯಂತೆ ಇಲ್ಲಿಯವರೆಗೆ ರೂ. 24 ಕೋಟಿಯಷ್ಟು ಖರ್ಚು ಮಾಡಿದ್ದಾರೆ. ಗುರುಗಳ ಆಯ್ಕೆಯಲ್ಲಿ ಕರ್ನಾಟಕದವರಿಗೆ ಆದ್ಯತೆ ನೀಡಿಲ್ಲ. ಕರ್ನಾಟಕದ ಪಂ. ಗಣಪತಿ ಭಟ್ ಹಾಸಣಗಿ ಮತ್ತು ಕೈವಲ್ಯ ಕುಮಾರ್ ಗುರವ್ ಆರಂಭದಲ್ಲಿದ್ದ ಗುರುಗಳು. ಕೆಲಕಾಲ ಗುರುಗಳಾಗಿ ಶ್ರೇಷ್ಠ ಸಂಗೀತಗಾರ್ತಿ ಪ್ರಭಾ ಅತ್ರೆಯವರು ಕಾರ್ಯನಿರ್ವಹಿಸಿದ್ದರು. ಉಳಿದಂತೆ ಮಹಾರಾಷ್ಟ್ರದ ವಿಜಯಾ ಘಾಟಲಿವಾರ, ಮಣಿ ಪ್ರಸಾದ್, ಎನ್. ರಾಜಮ್ಮ, ವಿದುಷಿ ವಿಜಯಾ ಜಾದವ್, ಪಂ. ಕೇದಾರ ನಾರಾಯಣ ಗುರುಗಳಾಗಿ ಕಾರ್ಯನಿರ್ವಹಿಸಿದ್ದಾರೆ.
ಹೊರರಾಜ್ಯದವರಷ್ಟೇ ಶ್ರೇಷ್ಠ ಸಂಗೀತಗಾರರು ಕರ್ನಾಟಕದಲ್ಲಿದ್ದಾರೆ. ಎಲ್ಲಾ ಸಾಮಾಜಿಕ ವಲಯಕ್ಕೆ ಸೇರಿದವರಾಗಿದ್ದಾರೆ. ಪದ್ಮಶ್ರೀ ಪಂ. ವೆಂಕಟೇಶ ಕುಮಾರ್, ಪಂ. ಕುಮಾರದಾಸ, ಪಂ. ಸೋಮನಾಥ ಮರಡೂರ, ಪಂ. ವಿನಾಯಕ ತೊರವಿ, ಪಂ. ನಾಗರಾಜ ಹವಾಲ್ದಾರ್, ವಿದುಷಿ ಜಯಶ್ರೀ ಪಾಟ್ನೇಕರ್, ಪಂ. ರಾಜಶೇಖರ ಮನ್ಸೂರ ಪಂ. ಭಾಲೇಖಾನ್, ಪಂ. ಛೋಟೇ ರಹಮತ್ಖಾನ್, ಪಂ. ಫಕೀರೇಶ ಕಣವಿಯವರ ಸಂಗೀತ ಪ್ರತಿಭೆಯನ್ನು ಬಳಸಿಕೊಳ್ಳಲೇ ಇಲ್ಲ.
ವಿದ್ಯಾರ್ಥಿಗಳ ಆಯ್ಕೆಯಲ್ಲೂ ಕನ್ನಡಿಗರಿಗೆ ಅನ್ಯಾಯ ಮಾಡಿ ಹೊರರಾಜ್ಯದವರಿಗೆ ಮಣೆ ಹಾಕಿದ್ದಾರೆ. ಎಸೆಸೆಲ್ಸಿ ಪಾಸಾದವರು ಅಲ್ಲಿ ವಿದ್ಯಾರ್ಥಿಗಳಾಗಬಹುದು. ಆದರೆ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳಿಲ್ಲ. ಉದಾಹರಣೆಗೆ ಗಮನಿಸಿ; 2011ರಿಂದ 15ರವರೆಗಿನ ಬ್ಯಾಚ್ಗೆ 25 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ 14 ವಿದ್ಯಾರ್ಥಿಗಳು ಮಾತ್ರ ಕರ್ನಾಟಕದವರು. ಅದೇ ಪ್ರವೃತ್ತಿ ಮುಂದುವರಿದಿದೆ. 2012 -16ರ ಬ್ಯಾಚ್ಗೆ ಆರು ವಿದ್ಯಾರ್ಥಿಗಳು, 2013-17 ಬ್ಯಾಚ್ಗೆ ನಾಲ್ಕು ವಿದ್ಯಾರ್ಥಿಗಳು, 2015-19ರ ಬ್ಯಾಚ್ಗೆ 15 ವಿದ್ಯಾರ್ಥಿಗಳು, 2016- 20ರ ಬ್ಯಾಚ್ಗೆ ಆರು, 2017-21ರ ಬ್ಯಾಚ್ಗೆ ಆರು, 2019-23ರ ಬ್ಯಾಚ್ಗೆ 18, 2022-26 ಬ್ಯಾಚ್ಗೆ 11, 2023-27 ಬ್ಯಾಚ್ಗೆ ಒಂಭತ್ತು ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ನಾಲ್ಕು ವರ್ಷ ಕಲಿಯುವ ವಿದ್ಯಾರ್ಥಿಗೆ ಸಂಸ್ಥೆ ನೀಡುವ ಪ್ರಮಾಣ ಪತ್ರಕ್ಕೆ ತತ್ಸಮಾನ ಮೌಲ್ಯವಿಲ್ಲ. ಸಂಸ್ಥೆಗೆ ಹಣ ಹರಿದು ಬರುವುದು ಕಡಿಮೆಯಾದಂತೆ ಹೊರ ರಾಜ್ಯದ ಗುರುಗಳ ಸೇವೆ ನಿಂತಿದೆ. ಸದ್ಯ ಪಂ. ಗಣಪತಿ ಭಟ್ ಹಾಸಣಗಿ, ಪಂ. ಕೈವಲ್ಯ ಕುಮಾರ್ ಗುರವ್ ಜೊತೆಗೆ ಫಯಾಝ್ ಖಾನ್, ಅಕ್ಕಮಹಾದೇವಿ ಹಿರೇಮಠ ಉಳಿದುಕೊಂಡಿದ್ದಾರೆ. ಆರ್ಥಿಕ ಇಲಾಖೆಯ ವರದಿ ಆಧರಿಸಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಇಲಾಖೆ ದಿ. 28-02-24ರಂದು ಆದೇಶ ಹೊರಡಿಸಿ ಡಾ. ಗಂಗೂಬಾಯಿ ಹಾನಗಲ್ ಟ್ರಸ್ಟನ್ನು (ಗುರುಕುಲ) ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ವಿಲೀನಗೊಳಿಸಿದೆ.
ಸರಕಾರದ ಈ ಕ್ರಮವನ್ನು ವಿರೋಧಿಸಿ ಹುಬ್ಬಳ್ಳಿ ಶಾಸಕ ಮಹೇಶ್ ಟೆೆಂಗಿನಕಾಯಿ ಮತ್ತವರ ಪಕ್ಷದವರು ಹೋರಾಟ ನಡೆಸುತ್ತಿದ್ದಾರೆ. ಅವರ ಜೊತೆ ಶಾಸಕ ಅರವಿಂದ್ ಬೆಲ್ಲದ ಕೈಜೋಡಿಸಿದ್ದಾರೆ. ಮಂತ್ರಿ ಎಚ್.ಕೆ. ಪಾಟೀಲರು ಅಯ್ಯೋ ಪಾಪ ಎಂದು ಧನಿಗೂಡಿಸಿದ್ದಾರೆ. ಎಚ್.ಕೆ. ಪಾಟೀಲರು ಗದುಗಿನವರು. ಒಮ್ಮೆ ಪಂ. ಪಂಚಾಕ್ಷರಿ ಗವಾಯಿಗಳು ಸ್ಥಾಪಿಸಿದ, ಪುಟ್ಟರಾಜ ಗವಾಯಿಗಳು ಮುನ್ನಡೆಸಿದ ಗುರುಕುಲಕ್ಕೆ ಭೇಟಿ ನೀಡಲಿ. ಹತ್ತಾರು ವರ್ಷಗಳಿಂದ ಎಲ್ಲಾ ಜಾತಿ-ಧರ್ಮದವರಿಗೆ ಸಂಗೀತ ಶಿಕ್ಷಣ ನೀಡುತ್ತಿರುವ ವೀರೇಶ್ವರ ಪುಣ್ಯಾಶ್ರಮ ನಿಜವಾದ ಅರ್ಥದ ಗುರುಕುಲ. ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಕೆಲವೇ ಪಟ್ಟಭದ್ರರ ಗಂಜಿ ಕೇಂದ್ರವಾಗಿತ್ತು. ಅದನ್ನು ಉಳಿಸಲು ಬಿಜೆಪಿಯವರು ಸದ್ದು ಮಾಡುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಮನಸ್ಸು ಮಾಡಿದ್ದರೆ ಗುರುಕುಲ ಟ್ರಸ್ಟನ್ನು ಕೇಂದ್ರ ಸಂಸ್ಕೃತಿ ಸಚಿವಾಲಯದ ವ್ಯಾಪ್ತಿಗೆ ಸೇರಿಸಬಹುದಿತ್ತು. ಶಾಸಕ ಮಹೇಶ್ ಟೆಂಗಿನಕಾಯಿಯವರಿಗೆ ಡಾ. ಗಂಗೂಬಾಯಿ ಹಾನಗಲ್ ಅವರ ಬಗ್ಗೆ ನಿಜವಾದ ಗೌರವ ಇದ್ದಿದ್ದರೆ ಅವರ ಹೆಸರಿನ ವಿಶ್ವವಿದ್ಯಾಲಯ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲು ಹೋರಾಟ ಮಾಡಲಿ. ಗುರುಕುಲ ಅತ್ಯುತ್ತಮವಾದುದನ್ನು ಸೃಷ್ಟಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿನ ವಿಶ್ವವಿದ್ಯಾಲಯ ಸ್ಥಾಪನೆಯ ಘೋಷಣೆ 2008ರಲ್ಲೇ ಆಗಿದೆ. 2009ರ ವಿಶ್ವವಿದ್ಯಾಲಯ ಕಾಯ್ದೆಯ ಮೇರೆಗೆ ಕಾರ್ಯಾರಂಭ ಮಾಡಿದೆ. 2010ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಂಸ್ಕೃತ ವಿ.ವಿ., ರಾಣಿ ಚೆನ್ನಮ್ಮ ವಿ.ವಿ., ವಿಜಯನಗರ ಶ್ರೀಕೃಷ್ಣದೇವರಾಯ ವಿ.ವಿ. ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಗೊಂಡಿವೆ. 2011ರಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ಜನಪದ ವಿ.ವಿ.ಯೂ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ಹೊಂದಿದೆ. ಆದರೆ ಖ್ಯಾತ ಸಂಗೀತಗಾರ್ತಿಯ ಹೆಸರಿನ ವಿಶ್ವವಿದ್ಯಾಲಯ ನಿಂತಲ್ಲೇ ನಿಂತಿದೆ. ಎಚ್.ಕೆ. ಪಾಟೀಲರು ಸೇರಿದಂತೆ ಸರಕಾರ ವಿ.ವಿ. ಅಭಿವೃದ್ಧಿಗೆ ಕಾಳಜಿ ವಹಿಸಬೇಕು. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ರಾಜಶಾಹಿ ಮತ್ತು ಫ್ಯೂಡಲ್ ವ್ಯವಸ್ಥೆಯ ಸಂಕೇತ ಎಂಬುದು ಮನಗಾಣಬೇಕು.