ಆರ್‌ಟಿಇ ಗುರಿಮುಟ್ಟಲು ಸೋತ ಶಿಕ್ಷಣ ವ್ಯವಸ್ಥೆ-ಸಿಎಜಿ ವರದಿ
ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣದ ಕಾರ್ಯವೈಖರಿ ಕುರಿತಂತೆ ಭಾರತದ ನಿಯಂತ್ರಕ ಮತ್ತು ಮಹಾ ಲೆಕ್ಕಪರಿಶೋಧಕರು (ಸಿಎಜಿ) ಸಂವಿಧಾನದ ಪರಿಚ್ಛೇದ 151 (2)ರ ಅಡಿಯಲ್ಲಿ ರಾಜ್ಯಪಾಲರ ಮೂಲಕ ಸಲ್ಲಿಸಿ ಶಾಸಕಾಂಗ ಸಭೆಯಲ್ಲಿ ಚರ್ಚಿಸಲು ಅವಕಾಶ ಕಲ್ಪಿಸುವ ವರದಿಯೊಂದನ್ನು ಸಿದ್ಧಪಡಿಸಿದೆ. ರಾಜ್ಯಪಾಲರು ಈ ವರದಿಯನ್ನು ಶಾಸನ ಸಭೆಯಲ್ಲಿ ಮಂಡಿಸಲೇಬೇಕಿದೆ. ಈ ವರದಿಯು ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣ ಒದಗಿಸುವ ಕಾರ್ಯನಿರ್ವಹಣೆ ಕುರಿತಂತೆ ಗಮನಾರ್ಹ ಅಂಶಗಳನ್ನು ಒಳಗೊಂಡಿದೆ. ಸಿಎಜಿಯ ಈ ವರದಿಯು ಭಾರತದ ನಿಯಂತ್ರಕ ಮತ್ತು ಮಹಾ ಲೆಕ್ಕಪರಿಶೋಧಕರು ಲೆಕ್ಕಪರಿಶೋಧನೆಗೆ ನೀಡುವ ಮಾನದಂಡಗಳಿಗೆ ಅನುಗುಣವಾಗಿ ನಡೆದಿದೆ. ಈ ಲೇಖನ ವರದಿಯ ಕೆಲವು ಮುಖ್ಯಾಂಶಗಳನ್ನು ಚರ್ಚಿಸಿ ಶಿಫಾರಸುಗಳನ್ನು ಜನತೆಗೆ ತಿಳಿಸುವ ಆಶಯ ಹೊಂದಿದೆ.
ಮಹಾಲೆಕ್ಕ ಪರಿಶೋಧಕರ ಈ ಪರಿಶೋಧನೆಯ ಮೂಲ ಉದ್ದೇಶವೆಂದರೆ, ಭಾರತದ ಸಂವಿಧಾನ ಪರಿಚ್ಛೇದ 21ಎ ಹಾಗೂ ಅದನ್ನು ಜಾರಿಗೊಳಿಸಲು ರೂಪಿಸಲಾಗಿರುವ ಶಿಕ್ಷಣದ ಹಕ್ಕು ಕಾಯ್ದೆ(2009) ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ(2015) 4ರ ಅನ್ವಯ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಗುಣಾತ್ಮಕ ಪ್ರಾಥಮಿಕ ಶಿಕ್ಷಣ ಒದಗಿಸಲು ರಾಜ್ಯ ಸರಕಾರ ಸಮರ್ಥವಾಗಿತ್ತೇ ಎಂಬುದನ್ನು ಪರಿಶೋಧಿಸುವುದಾಗಿತ್ತು. ಜೊತೆಗೆ, ರಾಜ್ಯ ಸರಕಾರ ಹಿಂದುಳಿದ ವರ್ಗಗಳ ಮಕ್ಕಳ ಕಲಿಕೆಗೆ ಅವಕಾಶಗಳನ್ನು ಒದಗಿಸುವ ಮೂಲಕ ಕಲಿಕೆಯಲ್ಲಿ ಸಮಾನತೆಯನ್ನು ಖಚಿತಪಡಿಸಿತ್ತೇ? ಮತ್ತು ಅಂತಹ ಮಧ್ಯಸ್ಥಿಕೆಗಳು ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದವೇ? ಎಂಬುದನ್ನು ಕಂಡುಕೊಳ್ಳುವುದಾಗಿತ್ತು.
ಕಾರ್ಯಾಧಾರಿತ ಲೆಕ್ಕ ಪರಿಶೋಧನಾ ವರದಿಯು ಪ್ರಸ್ತಾಪಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಗಳ ಗುಣಮಟ್ಟದ ಸೂಚಕಗಳನ್ನು ಒಮ್ಮೆ ಸ್ಮರಿಸುವುದಾದರೆ, 2030ರ ವೇಳೆಗೆ ಎಲ್ಲಾ ಮಕ್ಕಳಿಗೆ ಉಚಿತ, ಸಮಾನ ಮತ್ತು ಗುಣಮಟ್ಟದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ; ಎಲ್ಲಾ ಮಕ್ಕಳಿಗೆ ಗುಣಮಟ್ಟದ ಆರಂಭಿಕ ಬಾಲ್ಯದ ಅಭಿವೃದ್ಧಿ, ಆರೈಕೆ, ರಕ್ಷಣೆ ಮತ್ತು ಪೂರ್ವ- ಪ್ರಾಥಮಿಕ ಶಿಕ್ಷಣಕ್ಕೆ ಪ್ರವೇಶ ಮತ್ತು ಪ್ರಾಥಮಿಕ ಶಿಕ್ಷಣಕ್ಕೆ ಸಿದ್ಧತೆ; ಲಿಂಗ ಅಸಮಾನತೆಗಳನ್ನು ತೊಡೆದುಹಾಕಿ ಎಲ್ಲಾ ಹಂತದ ಶಿಕ್ಷಣದಲ್ಲಿ ವಿಕಲಾಂಗ, ದುರ್ಬಲ ಮತ್ತು ಸ್ಥಳೀಯ ಮಕ್ಕಳಿಗೆ ಸಮಾನ ಪ್ರವೇಶ; ಜಾಗತಿಕ ಶಿಕ್ಷಣದ ಮೂಲಕ ಸುಸ್ಥಿರ ಅಭಿವೃದ್ಧಿ, ಸುಸ್ಥಿರ ಜೀವನಶೈಲಿ, ಮಾನವ ಹಕ್ಕುಗಳು, ಲಿಂಗ ಸಮಾನತೆ, ಶಾಂತಿ ಮತ್ತು ಅಹಿಂಸೆಯ ಸಂಸ್ಕೃತಿಯ ಮೂಲಕ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅಂತರ್‌ರಾಷ್ಟ್ರೀಯ ಸಹಕಾರದ ಮೂಲಕ, ಅಭಿವೃದ್ಧಿ ಹೊಂದುತ್ತಿರುವ ಮತ್ತು ತೀರಾ ಹಿಂದುಳಿದ ಸಣ್ಣ ದ್ವೀಪಗಳ ದೇಶಗಳಲ್ಲಿನ ಶಿಕ್ಷಕರಿಗೆ ತರಬೇತಿ ಒದಗಿಸಿ ಅರ್ಹ ಶಿಕ್ಷಕರ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸುವ ಗುರಿಯನ್ನು ಗುಣಮಟ್ಟದ ಸೂಚಕಗಳು ಹೊಂದಿವೆ.
ಈ ಕಾರ್ಯಾಧಾರಿತ ಲೆಕ್ಕ ಪರಿಶೋಧನೆಯಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ರಾಜ್ಯವು, ಪ್ರಾಥಮಿಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಯ ಜೊತೆಗೆ ಸುಸ್ಥಿರ ಅಭಿವೃದ್ಧಿ ಗುರಿ 4ನ್ನು ಸಾಧಿಸುವಲ್ಲಿ ಮುಂಚೂಣಿಯಲ್ಲಿರುವುದನ್ನು ವರದಿ ಉಲ್ಲೇಖಿಸಿದೆ. ಆದರೆ, ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವ ಹಾಗೂ ಅವರನ್ನು ಭವಿಷ್ಯಕ್ಕೆ ಸಿದ್ಧಪಡಿಸುವಲ್ಲಿ ಸಾಧನೆಗೈದ ಪ್ರಮಾಣವನ್ನು ನಿಯತಕಾಲಿಕವಾಗಿ ಮೌಲ್ಯಮಾಪನ ಮಾಡದ ಕಾರಣ ಸುಸ್ಥಿರ ಅಭಿವೃದ್ಧಿ ಗುರಿಗಳ ಗುಣಮಟ್ಟದ ಸೂಚಕಗಳನ್ನು ಸಾಧಿಸುವ ಸನ್ನದ್ಧತೆಯನ್ನು ಮತ್ತು ಅಂತಹ ಶಿಕ್ಷಣ ಸೂಚ್ಯಂಕಗಳ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಬಹುದಾದ ಅಗತ್ಯ ವಿಶ್ವಾಸಾರ್ಹ ಮಕ್ಕಳ ಜನಸಂಖ್ಯೆಯ ದತ್ತಾಂಶವನ್ನು ರಾಜ್ಯ ಶಿಕ್ಷಣ ಇಲಾಖೆ ಹೊಂದಿಲ್ಲವೆಂಬ ಅಂಶವನ್ನು ವರದಿ ಬಹಿರಂಗಗೊಳಿಸಿದೆ.
ಕಾರ್ಯಾಧಾರಿತ ಲೆಕ್ಕ ಪರಿಶೋಧನಾ ವರದಿಯು ಬಹಿರಂಗ ಗೊಳಿಸಿದ ಮತ್ತೊಂದು ಸತ್ಯವೆಂದರೆ, ಶಿಕ್ಷಣ ಇಲಾಖೆಯು 2017-18ರಿಂದ 2021-22ರವರೆಗೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಒದಗಿಸಲು ಒಂದು ಮುನ್ನೋಟ ಯೋಜನೆಯನ್ನೇ ತಯಾರಿಸಿರಲಿಲ್ಲವೆಂಬ ಅಂಶ. ಜೊತೆಗೆ, ವಾರ್ಷಿಕ ಕಾರ್ಯ ಯೋಜನೆಗಳನ್ನು ತಯಾರಿಸುವ ಕೆಲಸವೂ ಸಹ ಪ್ರತೀ ವರ್ಷ ವಿಳಂಬವಾಗಿರುವ ಬಗ್ಗೆ ವರದಿ ಅಸಮಾಧಾನ ವ್ಯಕ್ತಪಡಿಸಿದೆ. ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ, ಶಾಲಾ ಸೌಲಭ್ಯಗಳನ್ನು ಹೊಂದಿರದ ವಾಸಸ್ಥಳಗಳನ್ನು ರಾಜ್ಯವೂ ಇನ್ನೂ ವ್ಯವಸ್ಥಿತವಾಗಿ ಗುರುತಿಸಿ ಅಧಿಸೂಚಿಸದ ಕಾರಣ, ದತ್ತಾಂಶದ ಕೊರತೆಯಿಂದ ಶಾಲಾ ಪ್ರವೇಶದ ಸಾರಿಗೆ ಭತ್ತೆಗೆ ಅರ್ಹರಾದ ಮಕ್ಕಳ ಸಂಖ್ಯೆಯನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ ಎಂಬ ಅಂಶವನ್ನು ವರದಿ ತಿಳಿಸಿದೆ. ಇದರಿಂದ ಮಕ್ಕಳ ಸಾರಿಗೆ ಭತ್ತೆಯ ಹಕ್ಕನ್ನು ನಿರಾಕರಿಸುವಂತಾಯಿತು ಎಂದು ವರದಿ ವಿಷಾದಿಸಿದೆ.
ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದ ಭೂ ಪ್ರಾದೇಶಿಕ ವಿಶ್ಲೇಷಣೆಯು ರಾಜ್ಯದಲ್ಲಿ 4,87,929 ಜನವಸತಿ ಪ್ರದೇಶಗಳಿದ್ದು ಅದರಲ್ಲಿ 1,32,924 ಜನವಸತಿ ಪ್ರದೇಶಗಳು ಒಂದು ಕಿಲೋಮೀಟರ್‌ವ್ಯಾಪ್ತಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಗಳನ್ನು ಮತ್ತು 10,278 ಜನವಸತಿ ಪ್ರದೇಶಗಳು ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಹೊಂದಿಲ್ಲವೆಂಬುದನ್ನು ವರದಿ ಬಹಿರಂಗಗೊಳಿಸಿದೆ. ಇದು ಶಿಕ್ಷಣ ಹಕ್ಕು ಕಾಯ್ದೆಯ ಘೋರ ಉಲ್ಲಂಘನೆಯಾಗಿದೆ.
ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕುರಿತಂತೆ, ಶಿಥಿಲಗೊಂಡ ತರಗತಿ ಕೊಠಡಿಗಳು ಮತ್ತು ಕಳಪೆ ನಿರ್ವಹಣೆಯ ಶೌಚಾಲಯಗಳಿದ್ದ ಬಗ್ಗೆ ವರದಿ ಪ್ರಸ್ತಾವಿಸಿದೆ. ಜೊತೆಗೆ, ಶಾಲೆಯಿಂದ ಹೊರಗುಳಿದ, ವಲಸೆ ಕುಟುಂಬಗಳ ಮತ್ತು ವಿಶೇಷ ಅಗತ್ಯ ಬೇಕಿರುವ ಮಕ್ಕಳನ್ನು ಗುರುತಿಸಿ ಬೆಂಬಲಿಸುವ ಪ್ರಯತ್ನಗಳು ಅಸಮರ್ಪಕವಾಗಿದ್ದವು ಎಂದು ವರದಿ ತಿಳಿಸಿದೆ. ಇನ್ನು ಶಿಕ್ಷಕರ ಲಭ್ಯತೆ ಮತ್ತು ವಿದ್ಯಾರ್ಥಿ-ಶಿಕ್ಷಕರ ಅನುಪಾತ ಕುರಿತಂತೆ ಪ್ರಸ್ತಾಪಿಸಿರುವ ವರದಿಯು, ರಾಜ್ಯದಲ್ಲಿ ಒಟ್ಟಾರೆ ವಿದ್ಯಾರ್ಥಿ-ಶಿಕ್ಷಕರ ಅನುಪಾತ ಉತ್ತಮವಾಗಿದ್ದರೂ, ಸಾಕಷ್ಟು ಸಂಖ್ಯೆಯಲ್ಲಿ ವಿಷಯ ನಿರ್ದಿಷ್ಟ ಹಾಗೂ ಮಾಧ್ಯಮವಾರು ಶಿಕ್ಷಕರನ್ನು ಒದಗಿಸಲು ಇಲಾಖೆ ಸೋತಿರುವುದನ್ನು ದಾಖಲಿಸಿದೆ. ಶೈಕ್ಷಣಿಕ ಬ್ಲಾಕ್ ಮತ್ತು ಜಿಲ್ಲೆಗಳಲ್ಲಿ ಶಿಕ್ಷಕರ ನಿಯೋಜನೆಯಲ್ಲಿ ಅಸಮತೋಲನವಿದ್ದು, ಹೆಚ್ಚುವರಿ ಶಿಕ್ಷಕರಿರುವ ಶಾಲೆಗಳಿಂದ ಶಿಕ್ಷಕರ ಕೊರತೆಯಿರುವ ಶಾಲೆಗಳಿಗೆ ಮರುನಿಯೋಜನೆ ಮಾಡಲು ಶಿಕ್ಷಣ ಇಲಾಖೆ ಸಾಧ್ಯವಾಗದಿರುವುದನ್ನು ವರದಿ ದಾಖಲಿಸಿದೆ.
ಈ ಎಲ್ಲಾ ಅಂಶಗಳನ್ನು, ಕೂಲಂಕಷವಾಗಿ ದತ್ತಾಂಶಗಳ ಆಧಾರದಲ್ಲಿ ವಿಶ್ಲೇಷಿಸಿರುವ ಮಹಾ ಲೆಕ್ಕಪರಿಶೋಧಕರ ವರದಿಯು ಅಂತಿಮವಾಗಿ ಹಲವು ಶಿಫಾರಸುಗಳನ್ನು ಮಾಡಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.
1. ರಾಜ್ಯದಲ್ಲಿ ಸಾರ್ವತ್ರಿಕ ದಾಖಲಾತಿ ಗುರಿಯನ್ನು ಸಾಧಿಸಲು, ನಿವ್ವಳ ದಾಖಲಾತಿ ಅನುಪಾತದಲ್ಲಿ ಭೌಗೋಳಿಕ ಹಾಗೂ ವಿವಿಧ ವರ್ಗಗಳ ಅಸಮಾನತೆಯನ್ನು ಆಧರಿಸಿ ಸೂಕ್ತವಾದ ಮತ್ತು ನಿರ್ದಿಷ್ಟವಾದ ಮಧ್ಯಪ್ರವೇಶಿಕೆಗಳನ್ನು ಕೂಡಲೇ ಜಾರಿಗೊಳಿಸಬೇಕು.
2. ಮಕ್ಕಳ ಹಾಜರಾತಿ ಮೇಲ್ವಿಚಾರಣೆಯನ್ನು ಬಲಪಡಿಸುವ ಮೂಲಕ ಅದೇ ಶೈಕ್ಷಣಿಕ ವರ್ಷದಲ್ಲಿ ಮಕ್ಕಳು ಮುಂದಿನ ತರಗತಿಗೆ ಪ್ರಗತಿ ಸಾಧಿಸುವುದನ್ನು ಹಾಗೂ ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ ಮೂಲಕ ಮಕ್ಕಳ ಪ್ರಗತಿಯನ್ನು ಪತ್ತೆ ಹಚ್ಚಿ ಪ್ರಾಥಮಿಕ ಶಿಕ್ಷಣ ಪೂರ್ಣಗೊಳ್ಳುವವರೆಗೆ ನಿರಂತರ ಅನುಪಾಲನೆಯಾಗಬೇಕು.
3. ರಾಜ್ಯ ಸರಕಾರವು ಶೈಕ್ಷಣಿಕ ಯೋಜನೆಗಳನ್ನು ರೂಪಿಸು ವಾಗ ಕೆಳಗಿನಿಂದ-ಮೇಲೆ ಮತ್ತು ಸಹಭಾಗಿತ್ವದ ವಿಧಾನವನ್ನು ಅನುಸರಿಸಬೇಕು.
4. ಶಾಲೆಯಿಂದ ಹೊರಗುಳಿದಿರುವ ಮಕ್ಕಳನ್ನು ಗುರುತಿಸಿ ಶಾಲೆಗೆ ದಾಖಲಿಸಿ ಅವರ ಸಾಧನೆಯನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆಯ ಮೂಲಕ ತಿಳಿದು ಮಕ್ಕಳು ಶಿಕ್ಷಣವನ್ನು ಪೂರ್ಣಗೊಳಿಸುವುದನ್ನು ಖಾತರಿಪಡಿಸಿಕೊಳ್ಳಬೇಕು.
5. ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಗುರುತಿಸಿ ದಾಖಲಾತಿ ಮಾಡಿಕೊಳ್ಳುವ ಮೂಲಕ ಅವರ ಶಿಕ್ಷಣಕ್ಕೆ ಅಗತ್ಯವಾದ ಎಲ್ಲಾ ಮೂಲಸೌಕರ್ಯಗಳನ್ನು ರಾಜ್ಯ ಸರಕಾರ ಒದಗಿಸುವ ಮೂಲಕ ಅವರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರಾರಂಭಿಸಬೇಕು.
6. ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸುರಕ್ಷತಾ ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಂಡು ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಬೇಕು.
ಸಿಎಜಿ ವರದಿಯು ವಿಶ್ಲೇಷಣೆ, ಪ್ರಸ್ತಾಪಿಸಿರುವ ಅಂಶಗಳು, ಕಂಡುಕೊಂಡ ಸತ್ಯ ಮತ್ತು ಶಿಫಾರಸುಗಳನ್ನು ಗಮನಿಸಿದರೆ, ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆಗಳಿರುವುದು ಮತ್ತೊಮ್ಮೆ ಸಾಬೀತಾಗಿದೆ. ಈ ವರದಿಯ ಆಧಾರದಲ್ಲಿ ಸರಕಾರ ಈ ಕೆಳಗಿನ ಅಂಶಗಳಿಗೆ ಆದ್ಯತೆ ನೀಡಿ ಈ ಲೋಪಗಳನ್ನು ಸರಿಪಡಿಸುವತ್ತ ಕಾರ್ಯೋನ್ಮುಖವಾಗಬೇಕಿದೆ.
1. ಶಿಕ್ಷಣ ಹಕ್ಕು ಕಾಯ್ದೆಯನ್ನು ಸಮಗ್ರವಾಗಿ ಜಾರಿಗೊಳಿಸಲು ತುರ್ತಾಗಿ ಒಂದು ನೀಲಿ ನಕಾಶೆಯನ್ನು (ರೋಡ್‌ಮ್ಯಾಪ್)ರೂಪಿಸಿ ಅದನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒಂದು ಉನ್ನತ ಮಟ್ಟದ ಸಮಿತಿ ರಚಿಸುವುದು.
2. ರಾಜ್ಯದಲ್ಲಿ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಮುಂಬರುವ ಆಯವ್ಯಯದಲ್ಲಿ ‘ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ’ವನ್ನು ಬಿಡುಗಡೆ ಮಾಡಬೇಕು.
3. ಕರ್ನಾಟಕ ಅಭಿವೃದ್ಧಿ ಮಾದರಿಯ ಭಾಗವಾಗಿ ಮತ್ತು ಸಾಮಾಜಿಕ ನ್ಯಾಯದ ಆಶಯವನ್ನು ವಿಸ್ತರಿಸಲು ‘ಉಚಿತ ಮತ್ತು ಕಡ್ಡಾಯ ಶಿಕ್ಷಣ’ವನ್ನು ಪೂರ್ವ ಪ್ರಾಥಮಿಕದಿಂದ 12ನೇ ತರಗತಿಯವರೆಗೆ ವಿಸ್ತರಿಸಲು ಶಿಕ್ಷಣ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡುವುದು.
4. ಸರಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಲು ‘ಸರಕಾರಿ ಶಾಲೆಗಳ ಸಬಲೀಕರಣ ವರದಿಯನ್ನು 2017’ನ್ನು ಸದನದಲ್ಲಿ ಅಂಗೀಕರಿಸಿ ಜಾರಿಗೊಳಿಸಲು ಕ್ರಮ ವಹಿಸುವುದು.
5. ಪ್ರಾಥಮಿಕ ಶಿಕ್ಷಣದ ನಂತರ ಹೆಣ್ಣು ಮಕ್ಕಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗದೆ ಪ್ರೌಢ ಹಂತದ ಶಿಕ್ಷಣ ಮುಂದುವರಿಸಲು ಸಹಾಯವಾಗುವಂತೆ ಹಿಂದಿದ್ದ ಉಚಿತ ಬೈಸಿಕಲ್ ವಿತರಣೆಯನ್ನು ಪುನರಾರಂಭಿಸುವುದು.
ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಮೂಲಕ ಬಡವರ ಹಾಗೂ ದಮನಿತರ ಪರವಾಗಿ ಕೆಲಸ ನಿರ್ವಹಿಸುವ ಭರವಸೆಯನ್ನು ಹೊಂದಿರುವ ಕರ್ನಾಟಕ ಸರಕಾರ ಬಡ ಜನರ ಮೂಲ ಆಶಯವಾಗಿರುವ ಗುಣಾತ್ಮಕ ಶಿಕ್ಷಣವನ್ನು ಒದಗಿಸುವ ಭಾಗವಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿ ಅದನ್ನು ಗಟ್ಟಿಗೊಳಿಸಲು ಕೂಡಲೇ ಕ್ರಮವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ.