ಮೀಸಲಾತಿಯ ಮೇಲೆ ಎಲ್‌ಪಿಜಿ ಪರಿಣಾಮ

ಜಾಗತೀಕರಣವು ಒಂದೆಡೆ ಸ್ಥಳೀಯ ಸಮುದಾಯಗಳನ್ನು ಸ್ಥಾನಪಲ್ಲಟಗೊಳಿಸಿ ಅವುಗಳನ್ನು ಏಕರೂಪದ ಕಡೆಗೆ ದೂಡಿ, ಸಾಮಾಜಿಕ ಅಭದ್ರತೆ ಉಂಟು ಮಾಡಿ ಸಾಂಪ್ರದಾಯಿಕ ಬಂಧನ ಹಾಳು ಮಾಡುತ್ತದೆ. ಈ ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರ ದೊಡ್ಡ ಪ್ರಮಾಣವೇ ಇದ್ದು, ಈ ಹೊಸ ಅನುಕರಣೀಯ ಪ್ರವೃತ್ತಿಗಳು ಅವರ ಖರ್ಚು-ವೆಚ್ಚಗಳ ಅಂದಾಜಿನ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮ ಬೀರುತ್ತವೆ.
ಕಡು ಬಡವರು ಮತ್ತು ಹಿಂದುಳಿದ ಸಮುದಾಯದ ಜನರು, ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು, ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ(ಎಲ್‌ಪಿಜಿ)ದ ಪರಿಣಾಮಗಳಿಂದ ಹೆಚ್ಚು ಬಳಲುತ್ತಿದ್ದಾರೆ. ಈ ಸಮುದಾಯಗಳ ಮೇಲೆ ಎಲ್‌ಪಿಜಿ ಪ್ರಭಾವ ಬಹು ಆಯಾಮಗಳಿಂದ ಕೂಡಿದೆ.
ಎಲ್‌ಪಿಜಿಯಿಂದಾಗಿ, ಸರಕಾರವು ಆರ್ಥಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳನ್ನು ಹಲವು ಕ್ಷೇತ್ರಗಳಲ್ಲಿ ಕಡಿಮೆ ಮಾಡಲು ಕಾರಣವಾಯಿತು.ಇದು ಸರಕಾರಿ ಉದ್ಯೋಗಗಳನ್ನು ಕಡಿತಗೊಳಿಸುತ್ತದೆ, ಅಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನಿಗದಿ ಪಡಿಸಿದ ಮಾನದಂಡಗಳ ಪ್ರಕಾರ ಜಾರಿಗೆ ತರಲಾಗುತ್ತದೆ. ಎಲ್‌ಪಿಜಿ ಕಾರಣದಿಂದಾಗಿ ಸರಕಾರದ ಉದ್ಯೋಗಗಳು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದರಿಂದ, ಸರಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ವ್ಯಾಪ್ತಿಯನ್ನು ನಿರ್ಬಂಧಿಸಲಾಗುತ್ತದೆ. ಸಂವಿಧಾನವು ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಮೂಲಕ ಈ ಸಮುದಾಯಗಳ ಉನ್ನತಿಗಾಗಿ ಉದಾತ್ತ ಗುರಿಯನ್ನು ಹೊಂದಿತ್ತು, ಮೀಸಲಾತಿ ಅನುಷ್ಠಾನವು ಕ್ರಾಂತಿಕಾರಿ ಫಲಿತಾಂಶವನ್ನು ಹೊಂದಿದೆ. ಆದರೆ ಈ ನಿರ್ದಿಷ್ಟ ಕಾರ್ಯಾಚರಣೆ ಇನ್ನೂ ಅರ್ಧ ದಾರಿಯಲ್ಲಿದೆ. ಅದನ್ನು ಸಂಪೂರ್ಣವಾಗಿ ಸಾಧಿಸದ ಹೊರತು, ಈ ಶಕ್ತಿಯುತ ಕಾರ್ಯವಿಧಾನದ ಮೂಲಕ ಏನನ್ನೂ ಸಾಧಿಸಿದರೂ ಅದು ವ್ಯರ್ಥವಾಗುತ್ತದೆ. ಕಡೆಗಾದರೂ ರಾಷ್ಟ್ರದ ಕನಸು ಅಸಮಾನತೆ ಮತ್ತು ತಾರತಮ್ಯ ಮುಕ್ತ ಸಾಮರಸ್ಯ ಸಮಾಜವನ್ನು ಸೃಷ್ಟಿಸುತ್ತದೆ.
ಸ್ವಾತಂತ್ರ್ಯಾನಂತರ ಆರ್ಥಿಕ ಚಟುವಟಿಕೆಗಳನ್ನು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪ್ರಮುಖ ಸರಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಪರಿಚಯಿಸಲು ಪ್ರಾರಂಭಿಸಲಾಯಿತು. ಇದು ಸಾರ್ವಜನಿಕ ವಲಯದ ಉದ್ಯಮಗಳ ಸ್ಥಾಪನೆ, ಖಾಸಗಿ ಕೈಗಾರಿಕೆ ಉದ್ಯಮಿಗಳಿಗೆ ವಿವಿಧ ಪ್ರೋತ್ಸಾಹ, ಕೃಷಿ ಸಹಾಯಧನಗಳು ಮುಂತಾದವುಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸರಕಾರದ ಪರಿಚಯ ನೀತಿಗಳು ಸರಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ತೆರೆಯಿತು. ಮೀಸಲಾತಿ ನೀತಿಯ ಪರಿಚಯದೊಂದಿಗೆ ವಿದ್ಯಾವಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಯುವಕರು ಈ ಕಾರಣದಿಂದಾಗಿ ಸರಕಾರಿ ಉದ್ಯೋಗಗಳಿಗೆ ದೊಡ್ಡ ಪ್ರಮಾಣದ ಅವಕಾಶಗಳನ್ನು ಪಡೆದರು. ಇದು ಭಿನ್ನವಾದ ಒಂದು ಮಗ್ಗಲು ಮಾತ್ರ; ಶಾಸನಬದ್ಧ ನಿಬಂಧನೆಗಳು ಅವರಿಗೆ ಅಪಾರ ಅವಕಾಶಗಳನ್ನು ತೆರೆದಿವೆ. ಅವರು ಕನಿಷ್ಠ ಶೈಕ್ಷಣಿಕ ಅಗತ್ಯದ ಕೊರತೆಯಿಂದ ಅದನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೂ, ಸರಕಾರದ ಈ ಪ್ರಮುಖ ಆರಂಭದ ನೀತಿಯು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಜನರ ಹಿತ ದೃಷ್ಟಿಯಿಂದ ಕೂಡಿತ್ತು.
ಈಗ ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣದ ಹೆಸರಿನಲ್ಲಿ ಹೊಸ ಆರ್ಥಿಕ ಸುಧಾರಣೆಗಳೊಂದಿಗೆ ದೇಶದ ಆರ್ಥಿಕ ನೀತಿಯಲ್ಲಿ ‘ಯು’ ತಿರುವು ಸಿಕ್ಕಿತು. ಹೊಸ ಆರ್ಥಿಕ ಸುಧಾರಣೆಗಳ ಅಡಿಯಲ್ಲಿ ಸರಕಾರವು ಹೂಡಿಕೆ ಹಿಂದೆಗೆತದ ಮೂಲಕ, ಸಾರ್ವಜನಿಕ ವಲಯಗಳಿಂದ ತನ್ನ ಪಾಲನ್ನು ಕ್ರಮೇಣ ಹಿಂದೆಗೆದುಕೊಳ್ಳಲು ಪ್ರಾರಂಭಿಸಿತು. ಇದರ ಆರಂಭಿಕ ಪ್ರಯೋಗ ಸರಕಾರಗಳು ನಿರ್ವಹಿಸುತ್ತಿದ್ದ ವಿದ್ಯುತ್, ದೂರವಾಣಿ ಸಂವಹನ ಇತ್ಯಾದಿ ಕೆಲವು ಅಗತ್ಯ ಸೇವೆಗಳ ನಿರ್ವಹಣೆಯಲ್ಲಾಯಿತು. ಇಂತಹ ಕಡೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಉತ್ತಮ ಸಂಖ್ಯೆಯ ಉದ್ಯೋಗಗಳು ಸಿಗುತ್ತಿದ್ದು, ಮೀಸಲಾತಿ ನಿಬಂಧನೆಗಳ ಅಡಿಯಲ್ಲಿ ಉದ್ಯೋಗಗಳನ್ನು ಪಡೆದಿದ್ದರು. ಈ ಇಲಾಖೆಗಳನ್ನು ಕಾನೂನುಗಳ ಅಡಿಯಲ್ಲಿ ಖಾಸಗಿ ಕಂಪೆನಿಗಳಾಗಿ ಪರಿವರ್ತಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಜನರ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಈ ಪರಿವರ್ತಿತ ಕಂಪೆನಿಗಳಲ್ಲಿ ಶಾಸನಬದ್ಧ ಮೀಸಲಾತಿ ನಿಬಂಧನೆಗಳು ಮುಂದುವರಿದಿದ್ದರೂ ಭವಿಷ್ಯದಲ್ಲಿ ಇದು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಈಗ ಈ ವಲಯದಲ್ಲಿ ತೀವ್ರ ಸ್ಪರ್ಧೆಯ ಹೊರ ಹೊಮ್ಮುವಿಕೆಯೊಂದಿಗೆ ಸರಕಾರಿ ಕಂಪೆನಿಗಳ ಅಭಿವೃದ್ಧಿಯ ವೇಗವು ಸೀಮಿತವಾಗಿರುತ್ತದೆ. ಇದು ಈ ವರ್ಗಗಳ ಹೊಸ ಉದ್ಯೋಗಾಕಾಂಕ್ಷಿಗಳ ಪ್ರವೇಶವನ್ನು ಸೀಮಿತಗೊಳಿಸುತ್ತದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಈಗಿನಿಂದ ವ್ಯವಹಾರದ ಬೆಳವಣಿಗೆಯು ಸರಕಾರಿ ಸ್ವಾಮ್ಯದ ಕಾರ್ಪೊರೇಟ್‌ಗಳ / ಸಾರ್ವಜನಿಕ ಸಂಸ್ಥೆಗಳಲ್ಲಿ ತಕ್ಕುದಾದ ಉದ್ಯೋಗ ಬೆಳವಣಿಗೆಗೆ ಕಾರಣವಾಗುವುದಿಲ್ಲ. ಇಲ್ಲಿ ತೀವ್ರ ಸ್ಪರ್ಧೆ, ಹಿಂಭಡ್ತಿ, ಹೂಡಿಕೆ ಹಿಂದೆಗೆತ, ಹೊರಗುತ್ತಿಗೆ, ಯಾಂತ್ರೀಕರಣ ಇತ್ಯಾದಿಗಳ ದೃಷ್ಟಿಯಿಂದ ಮೀಸಲಾತಿ ಮಾನದಂಡಗಳು ಅನ್ವಯವಾಗುತ್ತವೆ. ಇದು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ದೊಡ್ಡ ನಷ್ಟವಾಗಲಿದೆ. ಏಕೆಂದರೆ ಅವರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ಖಾಸಗೀಕರಣ ನೀತಿಯ ಪರಿಚಯದೊಂದಿಗೆ ಕೆಲವು ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ದಕ್ಷತೆ ನೆಪದಲ್ಲಿ ಮುಚ್ಚಲಾಗುತ್ತದೆ ಅಥವಾ ಹೂಡಿಕೆ ಹಿಂದೆಗೆತದ ತಂತ್ರವಾಗಿ ಮಾರಾಟ ಮಾಡಲಾಗುತ್ತದೆ. ಸಾರ್ವಜನಿಕ ವಲಯದ ಉದ್ಯೋಗದಲ್ಲಿ ಇಲ್ಲಿಯವರೆಗೆ ಮೀಸಲು ವರ್ಗಗಳಿಂದ ಗಣನೀಯ ಜನರನ್ನು ನೇಮಿಸಿಕೊಂಡಿದ್ದ ಮಾನವ ಶಕ್ತಿಯು ಕ್ರಮೇಣ ಹಿಮ್ಮೆಟ್ಟುವಿಕೆ ಅಥವಾ ಸ್ವಯಂ ಪ್ರೇರಿತ ನಿವೃತ್ತಿ ಪ್ರಕ್ರಿಯೆಯ ಮೂಲಕ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದೆ.
ಅಂತೆಯೇ, ಶಿಕ್ಷಣ ರಂಗದಲ್ಲಿ ಜಾರಿಗೆ ತಂದ ಖಾಸಗೀಕರಣ ನೀತಿಯು ಖಾಸಗಿ ಸ್ವ-ಹಣಕಾಸು ಶಿಕ್ಷಣ ಸಂಸ್ಥೆಗಳಿಗೆ ಒಂದು ಜಲಪ್ರಳಯದ ಹೊರಬಾಗಿಲನ್ನೇ ತೆರೆದಂತಾಗಿದೆ. ದೀರ್ಘ ಕಾನೂನು ಹೋರಾಟದ ನಂತರ ಸಂಸತ್ತಿನಲ್ಲಿ ಈ ಸಂಸ್ಥೆಗಳಿಗೆ ಮೀಸಲಾತಿಯನ್ನು ವಿಸ್ತರಿಸಲಾಗಿದ್ದರೂ ಅದರ ಅನುಷ್ಠಾನವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಹಲವಾರು ಸಮಸ್ಯೆಗಳಿವೆ. ಸರಕಾರದ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯಲ್ಲಿನ ಕಡಿತವು ಈ ಸಮುದಾಯಗಳಿಗೆ ಶೈಕ್ಷಣಿಕ ಅವಕಾಶಗಳ ವ್ಯಾಪ್ತಿಯನ್ನು ಕಡಿಮೆ ಮಾಡುತ್ತವೆ. ಬಹುಶಃ ಶಿಕ್ಷಣವೇ ಈ ಜನರು ಅವರ ಈಗಿನ ಉತ್ತಮ ಸ್ಥಿತಿಗೆ ಬರಲು ಕಾರಣವಾಗಿದೆ. ಶಿಕ್ಷಣ ಅಪಾಯಕ್ಕೆ ಸಿಲುಕಿದರೆ ಈ ಬಡಜನರನ್ನು ಎಲ್ಲಿಯೂ ಇರಿಸಲಾಗುವುದಿಲ್ಲ. ಈ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಬಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಕೈಗೆಟಕಲು ಸಾಧ್ಯವಾಗದ ಶುಲ್ಕ ವ್ಯವಸ್ಥೆಯು ಎಲ್‌ಪಿಜಿ ಕಾರಣದಿಂದ ಶಾಪವಾಗಿ ಪರಿಣಮಿಸುವುದು.
ಎಲ್‌ಪಿಜಿಯಿಂದ ಹೆಚ್ಚು ಬಳಲುತ್ತಿರುವವರು ಸಾಂಪ್ರದಾಯಿಕ ಪರಿಶಿಷ್ಟ ಪಂಗಡದ ಜನರು. ವಿಶೇಷವಾಗಿ ಒಡಿಶಾದಂತಹ ಬುಡಕಟ್ಟು ಪ್ರಾಬಲ್ಯದ ರಾಜ್ಯಗಳಲ್ಲಿ ಕಾಡುಗಳಿಂದ ಸಂಸ್ಕರಿಸದ ಕಚ್ಚಾವಸ್ತುಗಳನ್ನು ಸ್ವಾರ್ಥಕ್ಕಾಗಿ ಅತಿಯಾಗಿ ಬಳಸುವುದು ಹೆಚ್ಚಾಗುತ್ತಿರುವುದು, ಈ ಬಡ ಜನರ ಜೀವನೋಪಾಯ ಮತ್ತು ಬದುಕಲು ದೊಡ್ಡ ಅಪಾಯವನ್ನುಂಟು ಮಾಡಿದೆ. ಅದೇ ರೀತಿ ಬುಡಕಟ್ಟು ಪ್ರದೇಶಗಳ ಒಳಭಾಗಗಳಲ್ಲಿ ಹೆಚ್ಚು ಹೆಚ್ಚು ಬಹುರಾಷ್ಟ್ರೀಯ ಕಾರ್ಪೊರೇಟ್‌ಗಳ ಪ್ರವೇಶವು ಈ ಸಮುದಾಯಗಳನ್ನು ಅವರ ವಾಸಸ್ಥಳಗಳಿಂದ, ಇಚ್ಛೆಗೆ ವಿರುದ್ಧವಾದ ಮತ್ತು ಬಲವಂತದ ಸ್ಥಳಾಂತರಕ್ಕೆ ಕಾರಣವಾಗಿದೆ.
ಗುತ್ತಿಗೆ ಕಾರ್ಮಿಕ ವ್ಯವಸ್ಥೆಯಲ್ಲಿ ಶೋಷಣೆ
ಏಕಕಾಲದಲ್ಲಿ ಈ ಎಲ್‌ಪಿಜಿ ಚಂಡಮಾರುತದ ಜೊತೆಗೆ ದೇಶದಲ್ಲಿ ದಶಕಗಳಷ್ಟು ಹಳೆಯದಾದ ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳನ್ನು ಪರಿಶೀಲಿಸಿ ತಿದ್ದುಪಡಿ ಮಾಡಲಾಗಿದೆ. ಅಂದಿನ ಸಂದರ್ಭದಲ್ಲಿ ಅವುಗಳ ವಸ್ತುನಿಷ್ಠತೆ, ಸೂಕ್ಷ್ಮತೆ ಮತ್ತು ಏಕಕಾಲದಲ್ಲಿ ಜಾರಿಗೊಳಿಸುವಿಕೆಯನ್ನು ಖಚಿತ ಪಡಿಸಿಕೊಳ್ಳಲು ಹಳೆಯ ಕಾನೂನಿನ ಪರಿಶೀಲನೆ ಯಾವಾಗಲೂ ಅಪೇಕ್ಷಣೀಯ ವಾಗಿದೆ. ಹೊಸ ಆರ್ಥಿಕ ಸುಧಾರಣೆಗಳು ಕಾರ್ಮಿಕ ಮತ್ತು ಕೈಗಾರಿಕೆಗಳಲ್ಲಿನ ಪರಿಷ್ಕರಣೆ/ಪರಿಶೀಲನೆಯ ಮೂಲಕ ದೀನ-ದಲಿತರ ಸಾಮಾಜಿಕ ಬಾಧ್ಯತೆಗೆ ಕೊಡುಗೆ ನೀಡುವ ರೀತಿಯಲ್ಲಿ ಮರುಜೋಡಣೆಗೊಳ್ಳಬೇಕು. ಇದನ್ನು ಗುತ್ತಿಗೆ ಕಾರ್ಮಿಕ ವ್ಯವಸ್ಥೆಯಲ್ಲಿ ಸಂಭಾವ್ಯ ಶೋಷಣೆಗಳು ಹುಟ್ಟಿಕೊಳ್ಳುವುದನ್ನು ಪ್ರತಿ ಬಂಧಿಸಲು ಮತ್ತು ಅತಿ ಮುಖ್ಯವಾಗಿ ಅಂತಹ ಕಾರ್ಮಿಕ ಒಪ್ಪಂದಗಳ ಹಂಚಿಕೆಗಳನ್ನು ಅದರ ಸಕಾರಾತ್ಮಕ ಲಕ್ಷಣಗಳು ಹಿಂದುಳಿದ ವರ್ಗಗಳ ಪ್ರಯೋಜನಕ್ಕಾಗಿ ನೇರವಾಗಿ ತಲುಪುವ ರೀತಿಯಲ್ಲಿರಬೇಕು.
ಕೃಷಿ ವಲಯ
ಎಲ್‌ಪಿಜಿ ಮೂಲತಃ ದೊಡ್ಡ ಪ್ರಮಾಣದ ಆರ್ಥಿಕತೆ ಮತ್ತು ದೊಡ್ಡ ಗಾತ್ರದ ವ್ಯವಹಾರ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ತ್ವರಿತಗೊಳಿಸುವ ಗುರಿಯನ್ನು ಹೊಂದಿದೆ. ತಿಳಿದಿರುವಂತೆ ನಮ್ಮದು ಕೃಷಿ ಪ್ರಧಾನ ಆರ್ಥಿಕತೆಯಾಗಿದ್ದು ಈ ದೇಶದ ವಿಶಾಲ ಜನಸಂಖ್ಯೆಯ ಮುಕ್ಕಾಲು ಭಾಗ ಜನರನ್ನು ಇದು ಹೊಂದಿದೆ. ಅವರಲ್ಲಿ ಅರ್ಧದಷ್ಟು ಜನರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗದವರಾಗಿದ್ದಾರೆ. ಎಲ್‌ಪಿಜಿ ನೀತಿಗಳು ಕೃಷಿ ಪರ ಮತ್ತು ಗ್ರಾಮೀಣ ಸ್ನೇಹಿಯಲ್ಲ.
ನಿಕೋಲಾಸ್ ಬಿ.ಡರ್ಕ್ಸ್, ಭಾರತ ಭೇಟಿ ಸಮಯದಲ್ಲಿ ಹೀಗೆ ಹೇಳಿದ್ದಾರೆ: ‘‘...ಭಾರತದ ಸಮಕಾಲೀನ ರಾಜಕೀಯವನ್ನು ನೋಡುವ ಯಾರಿಗಾದರೂ ಸ್ಪಷ್ಟವಾಗುತ್ತದೆ, ಯಾವುದೇ ಉದಾರೀಕರಣವು ಪರಿಸ್ಥಿತಿಯನ್ನು ಬದಲಾಯಿಸುವುದಿಲ್ಲ. ಸಕಾರಾತ್ಮಕ ಕ್ರಮಗಳು ಸಹ ಏನನ್ನೂ ಬದಲಾಯಿಸುತ್ತಿಲ್ಲ’’. ಅವರು ಮುಂದುವರಿದು ಹೇಳುತ್ತಾರೆ, ‘‘ಆರ್ಥಿಕತೆಯಲ್ಲಿ ಇಷ್ಟು ದೊಡ್ಡ ಬೆಳವಣಿಗೆ ಇದ್ದಾಗ ಜನರು ಅದರತ್ತ ಗಮನ ಹರಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಕೃಷಿ ಕ್ಷೇತ್ರವು ಬೆಳೆಯುತ್ತಿಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ; ನಗರದ ಜನಸಂಖ್ಯೆಯು ಇನ್ನೂ ಅಗ್ಗದ ದರದಲ್ಲಿ ದೊರೆಯುವ ಕಾರ್ಮಿಕರನ್ನು ಅವಲಂಬಿಸಿದೆ. ಮತ್ತು ಜಾತಿಯ ಸಾಮಾಜಿಕ ಸಂಬಂಧಗಳು ಭಾರತದ ಆರ್ಥಿಕತೆಯ ಜಾಗತಿಕ ಯಶಸ್ಸಿನಲ್ಲಿಯೂ ಸಹ ಹುದುಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ.
ಭಾರತವನ್ನು ತಮ್ಮ ಉತ್ಪನ್ನಗಳಿಗೆ ಅತಿ ದೊಡ್ಡ ಗ್ರಾಹಕ ಮಾರುಕಟ್ಟೆ ಎಂದು ಜಗತ್ತು ಗ್ರಹಿಸಿದೆ. ದೇಶದೊಳಗಿನ ಜಾಗತೀಕರಣದ ಗಾಳಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ವಿಶೇಷವಾದದ್ದನ್ನು ತರಬಹುದೇ? ಅದು ಮಾತ್ರ ಭಾರತೀಯ ಮೀಸಲಾತಿ ನಿಬಂಧನೆಗಳ ಅನುಷ್ಠಾನದ ಮೂಲಕ ಆಗಬಾರದು. ಆದರೆ ಈ ಬಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಸಕಾರಾತ್ಮಕ ಕ್ರಮಗಳಿಗೆ ಅನುಗುಣವಾಗಿ ಮರು ಆವಿಷ್ಕರಿಸಬಹುದೇ? ಅದು ಅಮೆರಿಕ ದೇಶದಂತಹ ಅಭಿವೃದ್ಧಿ ಹೊಂದಿದ ದೇಶದಲ್ಲಿ ಮಾತ್ರ ಯಶಸ್ವಿಯಾಗಿದೆ.’’
(ವಿವಿಧ ಮೂಲಗಳಿಂದ)