ಬಡ ಆಶಾ ಕಾರ್ಯಕರ್ತೆಯರ ಸಂಕಟ ಕೊನೆಗೊಳಿಸಿ...
ಮೊನ್ನೆಯಷ್ಟೇ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತದಿಂದ ಗುಲಾಬಿ ನದಿಯಂತೆ ರಾಜಧಾನಿಗೆ ಹರಿದು ಬಂದಿದ್ದರು. ಎರಡು ದಿನಗಳ ಕಾಲ ತಮ್ಮ ಸಂಕಟದ ವಿವಿಧ ಮುಖಗಳನ್ನು ಮತ್ತೊಮ್ಮೆ ಪರಿಪರಿಯಾಗಿ ಸಚಿವರು, ಅಧಿಕಾರಿಗಳು, ಮಾಧ್ಯಮದವರ ಮುಂದೆ ತೋಡಿಕೊಂಡು, ಮುಖ್ಯಮಂತ್ರಿಗಳಿಂದ ಸದ್ಯದಲ್ಲೇ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ಸಿಕ್ಕ ನಂತರ, ಕುದಿವೆದೆಯನ್ನು ಹೊತ್ತು ನಿಟ್ಟುಸಿರಿಡುತ್ತಲೇ ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ. ಕಷ್ಟಪಟ್ಟು ದುಡಿದೂ, ಅದಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಾಗದೇ ಹೋಗುತ್ತಿರುವ ಸಂಕಷ್ಟದ ಕಾರಣದಿಂದಲೇ ಹೀಗೆ ಮತ್ತೆ ಮತ್ತೆ ರಾಜಧಾನಿಗೆ ಬಂದು ತಮ್ಮ ಹೊಟ್ಟೆಯ ಉರಿಯನ್ನು ಜನಪ್ರತಿನಿಧಿಗಳಿಗೆ, ಆಡಳಿತಶಾಹಿಗೆ, ಮಾಧ್ಯಮದ ಮೂಲಕ ಜನರಿಗೆ ತಲುಪಿಸಲು ಪ್ರಯತ್ನಿಸುತ್ತಲೇ ಇದ್ದಾರೆ...
ನಮ್ಮ ರಾಜ್ಯದಲ್ಲಿ 42,000ದಷ್ಟು ಆಶಾ ಕಾರ್ಯಕರ್ತೆಯರು ಕಳೆದ 15 ವರ್ಷಗಳಿಂದ ಅವಿರತವಾಗಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ನಗರದ ಕೊಳಚೆ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯಡಿ ಬಡಜನತೆಯ ಕೊಂಡಿಯಾಗಿ ವಿಕೇಂದ್ರಿತ ನೆಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ರೀತಿಯಿಂದಾಗಿ ಜನಸಮುದಾಯಕ್ಕೆ ಅಪರಿಮಿತ ಅನುಕೂಲವಾಗಿದೆ, ಮೆಚ್ಚುಗೆಯಾಗಿದೆ. ದೇಶದ ಗ್ರಾಮೀಣ ಭಾಗದಲ್ಲಿ ಶಿಶುಮರಣ, ತಾಯಿ ಮರಣ ಅಧಿಕವಾಗಿದ್ದಂತಹ ಕಾಲಘಟ್ಟದಿಂದ ಅಹರ್ನಿಶಿ ಸೇವೆ ಸಲ್ಲಿಸಿ ಇಂದು ಅಂತಹ ಮರಣಗಳ ಸಂಖ್ಯೆ ಕಡಿಮೆಯಾಗಿರುವುದಕ್ಕೆ ಕಾರಣಕರ್ತೆ ಆಶಾ!. 2005ಕ್ಕೆ ಹೋಲಿಸಿದರೆ ಶೇ. 65ರಷ್ಟು ಶಿಶು ಮರಣ ಹಾಗೂ ತಾಯಿ ಮರಣ ಈಗ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಈ ಮರಣ ಪ್ರಮಾಣ 1,000ಕ್ಕೆ 14 ಆಗಿ ಇಳಿಸಲಾಗಿದೆ. ಭಾರತದ ತಾಯಿ ಮರಣ ಪ್ರಮಾಣ ಒಂದು ಲಕ್ಷಕ್ಕೆ 212 ಇದ್ದಿದ್ದು, ಆಶಾ ಕಾರ್ಯಕರ್ತೆಯರ ನೇಮಕದ ನಂತರ ಅದರ ಪ್ರಮಾಣ 69ಕ್ಕೆ ಇಳಿದಿದೆ. ಆಶಾ ಕಾರ್ಯಕರ್ತೆಯರ ಶ್ರಮದ ಫಲವಾಗಿ ಸಾಂಸ್ಥಿಕ (ಆಸ್ಪತ್ರೆ) ಹೆರಿಗೆ ಪ್ರಮಾಣ ಶೇ. 96ರಷ್ಟು ಅಭಿವೃದ್ಧಿ ಕಂಡಿದೆ. ಇದನ್ನೆಲ್ಲಾ ಆರೋಗ್ಯ ಇಲಾಖೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ಆದರೆ... ಇದಕ್ಕಾಗಿ ಅಹರ್ನಿಶಿ ಶ್ರಮಿಸಿದವರಿಗೆ ತಕ್ಕ ಪ್ರತಿಫಲವಿಲ್ಲ!
ದಿನದ ಯಾವುದೇ ಸಮಯದಲ್ಲಿ ಆರೋಗ್ಯ ಸಂಬಂಧಿತ ಸೇವೆಗೆ, ಗರ್ಭಿಣಿ, ಬಾಣಂತಿ, ಶಿಶು ಆರೈಕೆಗಾಗಿ ಸದಾ ಟೊಂಕ ಕಟ್ಟಿ ನಿಂತಿದ್ದಾರೆ ಆಶಾಗಳು. ಕಳೆದ 15 ವರ್ಷಗಳ ಸೇವಾವಧಿಯಲ್ಲಿ ಕಾಲಕಾಲಕ್ಕೆ ಅಗತ್ಯವಿರುವ ಆರೋಗ್ಯ ಸಂಬಂಧಿ ವಿಷಯಗಳ ಕುರಿತು, ತಾಯಿ ಮಗು ಸುರಕ್ಷತೆಯ ವಿವಿಧ ಆಯಾಮದ ಬಗ್ಗೆ, ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆ... ಹೀಗೆ ಹತ್ತು ಹಲವು ವಿವಿಧ ತರಬೇತಿಗಳ ಜೊತೆಗೇ ಕ್ಷೇತ್ರದಲ್ಲಿ ಅನುಭವವನ್ನೂ ಪಡೆದು ಮುನ್ನಡೆಯುತ್ತಿರುವ ಇವರ ಅಪ್ರತಿಮ ಸೇವೆಯಿಂದಲೇ ಆರೋಗ್ಯ ಇಲಾಖೆ ಗುಣಾತ್ಮಕವಾಗಿ ಕಾರ್ಯ ನಿರ್ವಹಿಸಲು, ಹೆಸರು ಗಳಿಸಲು ಸಾಧ್ಯವಾಗಿದೆ.
ಮಹಾ ಸಾಂಕ್ರಾಮಿಕ ಕಾಯಿಲೆಯಾದ ಕೋವಿಡ್-19ರ ಸಂದರ್ಭದಲ್ಲಿ ನಿಜಕ್ಕೂ ಫ್ರಂಟ್‌ಲೈನ್ ವಾರಿಯರ್ಸ್ ಆಗಿ ಆಶಾ ಕಾರ್ಯಕರ್ತೆಯರು ಅಕ್ಷರಶಃ ಜೀವ ಪಣಕಿಟ್ಟು, ಇಡೀ ಗ್ರಾಮದ ಜನತೆ ತನ್ನ ಕುಟುಂಬ ಎನ್ನುವಂತೆ ಆರೋಗ್ಯ ರಕ್ಷಣೆಗೆ ಸಿದ್ಧರಾಗಿ ಅನುಪಮ ಸೇವೆ ಸಲ್ಲಿಸಿರುವುದನ್ನಂತೂ ಮರೆಯುವಂತಿಲ್ಲ. ಈ ಸಂದರ್ಭದಲ್ಲಿ ಜನರೆಲ್ಲಾ ಮನೆ ಒಳಗಿದ್ದು ಸುರಕ್ಷಿತವಾಗಿರಲಿ ಎಂದು, ಇವರು ಬೀದಿ ಬೀದಿ ಅಲೆದು ಕೆಲ ಜನರಿಂದ ತಿರಸ್ಕಾರ, ತೆಗಳಿಕೆಗೊಳಗಾದರೂ ಎದೆಗುಂದದೆ ಕೆಲಸ ನಿರ್ವಹಿಸಿದ್ದಾರೆ. ಇವರ ಸೇವೆಯನ್ನು ಮೆಚ್ಚಿ ವಿಶ್ವ ಆರೋಗ್ಯ ಸಂಸ್ಥೆಯೇ ಹಾಡಿ ಹೊಗಳಿ ‘ಸಾಮೂಹಿಕ ಆರೋಗ್ಯ ನಾಯಕರು’ ಎನ್ನುವ ಬಿರುದು ನೀಡಿರುವುದು ಹೆಗ್ಗಳಿಕೆ. ಆದರೆ ಹೆಚ್ಚಾಗಿ ತಳ ಜಾತಿ/ವರ್ಗಗಳಿಗೇ ಸೇರಿದ, ಕುಟುಂಬದಿಂದ ಪರಿತ್ಯಕ್ತ, ಅಸಹಾಯಕ ರಾದ ಈ ಬಡ ಆಶಾಗಳ ಮತ್ತು ಕುಟುಂಬದ ಹೊಟ್ಟೆ, ಹೊಗಳಿಕೆಯಿಂದ ತುಂಬುವುದಿಲ್ಲವಲ್ಲಾ? ಅವರ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆ ಆಗದೆ, ಮಕ್ಕಳನ್ನು ಸಾಕಲು, ಸಂತೃಪ್ತಿಯಿಂದ ಕೆಲಸ ಮಾಡಲಾದರೂ ಹೇಗೆ ಸಾಧ್ಯ?
ಇತರ ಕೆಲಸಗಳು ನಿರ್ದಿಷ್ಟ ಸ್ಥಳದಲ್ಲಿ, ನೆರಳಿನಲ್ಲಿದ್ದು, ತಕ್ಕಷ್ಟು ಅನುಕೂಲಕರ ಪರಿಸರದಲ್ಲಿ ಮಾಡುವಂತಹದ್ದಾಗಿರುತ್ತದೆ. ಆದರೆ ಪ್ರತಿಯೊಬ್ಬ ಆಶಾಗಳು ಸಾವಿರ ಜನರ ಆರೋಗ್ಯದ ಜವಾಬ್ದಾರಿಯನ್ನು ಹೊತ್ತಿದ್ದು, ವ್ಯತಿರಿಕ್ತ ಸಂದರ್ಭದಲ್ಲೂ ಪ್ರತಿದಿನ ಮನೆ ಮನೆಗೆ ಹೋಗಿ ಜನರ ಅನಾರೋಗ್ಯದ ಬಗ್ಗೆ ಕೇಳಿ, ಅಗತ್ಯ ಆರೋಗ್ಯ ಸೇವೆ ಒದಗಿಸಬೇಕು. ಎಷ್ಟೋ ಬಾರಿ ಜನರು ಹೆಸರು ಹೇಳಲೂ ಮೂಗುಮುರಿಯುವಂತಹ- ಮನುಷ್ಯರ ವಿವಿಧ ವಿಸರ್ಜನೆಗಳನ್ನೂ ಪರೀಕ್ಷೆಗಾಗಿ ಸಂಗ್ರಹಿಸಿ ಕೊಂಡೊಯ್ಯಬೇಕು. ವರ್ಷದ ಎಲ್ಲಾ ಕಾಲಗಳಲ್ಲಿ ಬರುವ ಆರೋಗ್ಯ ಸಮಸ್ಯೆಗಳಿಗೆ ಜನರಿಗೆ ಅವಶ್ಯಕ ಆರೋಗ್ಯದ ಅರಿವನ್ನು, ಮುನ್ನೆಚ್ಚರಿಕೆಯನ್ನು ನೀಡಬೇಕು. ಹಗಲು-ರಾತ್ರಿ, ಬಿಸಿಲು-ಮಳೆ-ಚಳಿ ಯಾವುದಕ್ಕೂ ಕುಗ್ಗದೆ, ಗುಡ್ಡ, ಬೆಟ್ಟ, ಕಾಡು, ನದಿಯೆಂದು ಧೃತಿಗೆಡದೆ, ದೂರದೂರದಲ್ಲಿರುವ ಮನೆಗಳಿಗೆ ಭೇಟಿ ನೀಡಬೇಕಾದ ಸಂದರ್ಭದಲ್ಲೂ ಭಯವನ್ನು ಲೆಕ್ಕಿಸದೆ ಅವರು ಸೇವೆ ಮಾಡುತ್ತಿದ್ದಾರೆ. ಇದರ ಜೊತೆೆಗೆ ತಾವು ಮಾಡುವ ಕೆಲಸದಲ್ಲಿ ಎಷ್ಟೋ ಬಾರಿ ಜನರಿಂದ ಅಡ್ಡಿ ಆತಂಕಗಳು, ರೋಗದ ಕುರಿತು ಅಜ್ಞಾನ, ಭಯ, ಅಭದ್ರತೆ ಮುಂತಾದ ಕಾರಣಗಳಿಂದಾಗಿ ಹಲ್ಲೆಗಳೂ ಸೇರಿ, ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಎಸಿ ರೂಮುಗಳಲ್ಲಿ ಕುಳಿತು ಸಭೆ ನಡೆಸುವ, ಎಸಿ ಕಾರಿನಲ್ಲಿ ಸಂಚರಿಸುವ ನಮ್ಮ ಜನಪ್ರತಿನಿಧಿಗಳಿಗೆ, ಉನ್ನತಾಧಿಕಾರಿಗಳಿಗೆ ಇವೆಲ್ಲಾ ಅರಿವಾಗುತ್ತದೆಯೇ? ಆಶಾಗಳಿಗೆ ತಾವು ಸಮರ್ಪಕವಾದ ಅನುಕೂಲ ಒದಗಿಸುತ್ತಿಲ್ಲವೆಂದು ಈಗಲಾದರೂ ಇವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಇಷ್ಟೆಲ್ಲಾ ನಿಗದಿತ ಕೆಲಸಗಳಿಗೆ ಇವರಿಗೆ ವೇತನ ನಿಗದಿಗೊಳಿಸಲಾಗಿಲ್ಲ! ಇವರ ಮಾಸಿಕ ಪ್ರತಿಯೊಂದು ಕೆಲಸಕ್ಕೆ, ಕೆಲಸದ ಮಾದರಿಯನ್ನು ಆಧರಿಸಿ ನೂರು, ಇನ್ನೂರು, ಮುನ್ನೂರೆಂದು ಕಾಂಪೊನೆಂಟ್ ಘಟಕಾಧಾರಿತ ವ್ಯವಸ್ಥೆ ಜಾರಿಯಲ್ಲಿದೆ. ಇದೊಂದು ಅತ್ಯಂತ ಅವೈಜ್ಞಾನಿಕ ಕಟ್‌ಪೀಸ್ ಮಾದರಿಯ ವೇತನ ವಿತರಣಾ ಕ್ರಮವಾಗಿದ್ದು, ಬೇರೆ ಯಾವ ಇಲಾಖೆಯಲ್ಲೂ ಇಷ್ಟೊಂದು ಕ್ಲಿಷ್ಟ ಮತ್ತು ಸಂಕೀರ್ಣ ವ್ಯವಸ್ಥೆ ಜಾರಿಯಲ್ಲಿಲ್ಲ. ಇದರಿಂದಲೇ ಪ್ರತಿಯೊಬ್ಬ ಆಶಾಗಳಿಗೆ ದುಡಿದಷ್ಟು ಹಣವನ್ನು ಲೆಕ್ಕ ಹಾಕುವುದು, ಸಮರ್ಪಕವಾಗಿ ಅವರಿಗೆ ವಿತರಿಸುವ ವಿಧಾನದಲ್ಲಿಯೇ ವ್ಯವಸ್ಥೆ ಸೋತು ಸುಣ್ಣವಾಗುತ್ತಿದೆ. ಆಶಾಗಳೂ ಪ್ರತಿ ತಿಂಗಳೂ ಸಮರ್ಪಕ ಗೌರವಧನದಿಂದ ವಂಚಿತರಾಗುತ್ತಿದ್ದಾರೆ.
ಇಷ್ಟೂ ವರ್ಷಗಳಲ್ಲಿ ನಿರಂತರವಾಗಿ ವಿಧ ವಿಧ ಸರ್ವೇಗಳನ್ನು ಆರೋಗ್ಯ ಇಲಾಖೆಗೆ ಮಾಡಿಕೊಟ್ಟಿದ್ದಾರೆ. ಮನೆಯೊಂದರ ಸರ್ವೇ ಮಾಡಲು ಕನಿಷ್ಠ 30-50 ನಿಮಿಷಗಳನ್ನು ವ್ಯಯಿಸಬೇಕಿರುತ್ತದೆ. ಅಂದಾಜು 200ರಿಂದ 300 ಮನೆಗಳ ಸರ್ವೇಗೆ, ಕೆಲವು ಸರ್ವೇಗಳಿಗೆ ಕೇವಲ 100 ರೂಪಾಯಿಗಳ ಗೌರವಧನ ನಿಗದಿಗೊಳಿಸಲಾಗಿದೆ. ಒಂದು ಮನೆಗೆ ಎಷ್ಟು ಪೈಸೆ ದೊರೆಯುತ್ತಿದೆ ನೀವೇ ಲೆಕ್ಕ ಹಾಕಿ! ಭಿಕ್ಷುಕರು ಕೂಡ ಈ ಕಾಲದಲ್ಲಿ 5 ರೂಪಾಯಿ ಭಿಕ್ಷೆ ಕೊಟ್ಟರೂ ತಿರಸ್ಕಾರದಿಂದ ನೋಡುತ್ತಾರೆ. ಅಂತಹದ್ದರಲ್ಲಿ ಸರಕಾರ ಇವರಿಗೆ ಗೌರವಧನದ ಹೆಸರಿನಲ್ಲಿ ನೀಡುತ್ತಿರುವುದಾದರೂ ಏನು? ಅಗೌರವವನ್ನೇ ಅಲ್ಲವೇ?
ಇತ್ತೀಚಿನ ಕೆಲ ವರ್ಷಗಳಿಂದ ರಾಜ್ಯ ಸರಕಾರದಿಂದ ಪ್ರತಿ ತಿಂಗಳೂ ಆಶಾಗಳಿಗೆ 5,000 ರೂ.ಗಳ ಗೌರವಧನವನ್ನು ಇಡಿಯಾಗಿ ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತಿರುವುದಷ್ಟೇ ಗ್ಯಾರಂಟಿ! ಆದರೆ ಕೇಂದ್ರ ಸರಕಾರ ನಿಗದಿಗೊಳಿಸಿರುವ ಸುಮಾರು 40 ಸೇವೆಗಳಿಗೆ ಪ್ರತಿ ಆಶಾಗೆ ಮಾಸಿಕ ರೂ. 7,000ದಷ್ಟು ಗೌರವಧನ ಸಿಗಬೇಕಿದ್ದರೂ, ಆ ಹಣ ರಾಜ್ಯ ಸರಕಾರಗಳಿಗೆ ಸಂದಾಯವಾಗುತ್ತಿದ್ದರೂ, ದುಡಿಮೆಗೆ ತಕ್ಕ ಪ್ರತಿಫಲ ಮಾತ್ರ ದೊರಕದೆ ಆಶಾ ಕಾರ್ಯಕರ್ತೆಯರು ಪ್ರತೀ ತಿಂಗಳೂ ಸಾವಿರಾರು ರೂ.ಗಳ ನಷ್ಟ ಅನುಭವಿಸುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ರಾಜ್ಯ ಸರಕಾರವು 8 ವರ್ಷಗಳ ಹಿಂದೆ, ಆರ್.ಸಿ.ಎಚ್. ಪೋರ್ಟಲ್‌ಗೆ ಲಿಂಕ್ ಮಾಡಿ ಗೌರವಧನ ನೀಡುವ ಮಾದರಿಯನ್ನು ಜಾರಿಗೊಳಿಸಿದಾಗಿನಿಂದಲಂತೂ, ತಾಂತ್ರಿಕ ಸಮಸ್ಯೆಗಳೂ ಸೇರಿ, ಹಲವು ಕಾರಣಗಳಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಈ ಗೌರವಧನ ಸರಿಯಾಗಿ ವಿತರಣೆಯಾಗದಿರುವುದು ಅಕ್ಷಮ್ಯ.
ದೇಶದ ಯಾವ ರಾಜ್ಯಗಳಲ್ಲಿಯೂ ಇಲ್ಲದ ಈ ಕೊಂಕಣ ಸುತ್ತಿ ಮೈಲಾರ ಸೇರುವ ವೇತನ ಮಾದರಿಯನ್ನು ನಮ್ಮ ರಾಜ್ಯದಲ್ಲಿ ಅಳವಡಿಸಿ, ಬಡ ಆಶಾಗಳ ದುಡಿತಕ್ಕೆ ಕನ್ನ ಹಾಕುತ್ತಿರುವುದು ಪರಮ ವಂಚನೆಯಾಗಿದೆ. ಆರೋಗ್ಯ ಇಲಾಖೆ ಇನ್ನಾದರೂ ಈ ಪೋರ್ಟಲ್‌ಗೆ ಲಿಂಕ್ ಮಾಡಿ ಕಾಂಪೊನೆಂಟ್ ಮಾದರಿಯಲ್ಲಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ತಕ್ಷಣವೇ ನಿಲ್ಲಿಸಬೇಕು. ಪ್ರತೀ ತಿಂಗಳು ನೇರವಾಗಿ ರಾಜ್ಯದ ನಿಗದಿತ ರೂ. 5,000 ಗೌರವಧನ ಹಾಗೂ ಕೇಂದ್ರದ ರೂ. 7,000 ಗೌರವಧನವನ್ನು ಒಟ್ಟಿಗೆ ಸೇರಿಸಿ ನಿಗದಿತ 12,000 ರೂ.ಗಳನ್ನು ಪ್ರತೀ ಆಶಾಗಳ ಬ್ಯಾಂಕ್ ಖಾತೆಗೆ ಹಾಕುವ ಪದ್ಧತಿ ಜಾರಿಗೊಳಿಸಬೇಕು. ತಮ್ಮ ಸರಕಾರದಿಂದ ಆಶಾ ಕಾರ್ಯಕರ್ತೆಯರಿಗೆ 3,000 ರೂ.ಗಳಷ್ಟು ಗೌರವಧನವನ್ನು ಹೆಚ್ಚಿಸುವುದಾಗಿ ಪ್ರಸಕ್ತ ಸರಕಾರ ಘೋಷಿಸಿದೆ. ನಿಗದಿತ ಕೆಲಸಗಳನ್ನು ಮೀರಿ ಆಶಾಗಳು ಮಾಡುವ ಘಟಕಾಧಾರಿತವಾದ ಕೆಲಸಗಳಿಗೆ ಈ ಹಣದಿಂದ ಗೌರವಧನವನ್ನು ನೀಡಲು ಬಳಸಿಕೊಳ್ಳಲಿ. ಇದು ಎಲ್ಲ ರೀತಿಯಲ್ಲೂ ನ್ಯಾಯಯುತವಾದ ಹಂಚಿಕೆಯಾಗಿದೆ. ಆಶಾಗಳ ಮೇಲೆ ಮೇಲ್ವಿಚಾರಣೆ ಮಾಡಿ ಕೆಲಸ ತೆಗೆಯುವ ದೊಡ್ಡ ಪಡೆಯೇ ಆರೋಗ್ಯ ಇಲಾಖೆಯಲ್ಲಿದೆ! ಹೀಗಾಗಿ ಆಶಾಗಳು ಕೆಲಸ ಕದಿಯಲು ಸಾಧ್ಯವೇ ಇಲ್ಲ. ಸರಕಾರವೂ ಅವರ ದುಡಿಮೆಗೆ ಸಮರ್ಪಕ ಪ್ರತಿಫಲ ನೀಡಲು ಹಿಂಜರಿಯಬಾರದೆಂಬುದೇ ನಮ್ಮ ಹಕ್ಕೊತ್ತಾಯ.
ಈ ಎಲ್ಲ ಅನ್ಯಾಯದ ಕುರಿತು ಆಶಾ ಸಂಘಟನೆಯಿಂದ ಹಲವಾರು ಹೋರಾಟಗಳು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಸತತವಾಗಿ ನಡೆದಿವೆ. ಈಗಲೂ ನಡೆಯುತ್ತಿವೆ... ಈ ಆನ್‌ಲೈನ್ ಪೋರ್ಟಲ್‌ಗೆ ಲಿಂಕ್ ಮಾಡಿರುವ ವೇತನ ಮಾದರಿ ಸುಧಾರಿಸಲು ಸತತ ಪ್ರಯತ್ನಗಳನ್ನು ಆರೋಗ್ಯ ಇಲಾಖೆಯೂ ಮಾಡಿದೆ. ಆದರೆ ಸಮಸ್ಯೆ ಪರಿಹರಿಸಲು ಮಾತ್ರ ಸಾಧ್ಯವಾಗಿಲ್ಲ. ಈಗಾಗಲೇ ಎಂಟು ವರ್ಷಗಳಲ್ಲಿ ಆಶಾಗಳು ದುಡಿದ ಕೋಟ್ಯಂತರ ರೂಪಾಯಿಗಳ ಪ್ರೋತ್ಸಾಹಧನ ನಷ್ಟವಾಗಿದ್ದು, ಇಲಾಖೆ ಬಾಕಿ ಉಳಿಸಿಕೊಂಡಿರುವ ಈ ಹಣವನ್ನೂ ತೀರಿಸಬೇಕಿದೆ. ಈ ಸಮಸ್ಯೆಗಳಿಂದ ಬಿಡುಗಡೆ ಹೊಂದಿದರೆ ಮಾತ್ರ ಆಶಾಗಳೂ ನೆಮ್ಮದಿಯಾಗಿ ನಗುತ್ತಾ, ಹಳ್ಳಿಗಾಡಿನ ಜನರ ಆರೋಗ್ಯ ಸೇವೆಗೆ ತಮ್ಮನ್ನು ಮುಡಿಪಾಗಿರಿಸಲು ಸಾಧ್ಯ. ಹಲವು ಗ್ಯಾರಂಟಿಗಳ ಮೂಲಕ ಮಹಿಳೆಯರ ಪರವಾಗಿರುವ ಈ ಸರಕಾರದಿಂದಲಾದರೂ, ಸರಕಾರದ ಒಳಿತಿಗಾಗಿ ದುಡಿಯುತ್ತಿರುವ ಆಶಾಗಳ ಈ ಜ್ವಲಂತ ಸಮಸ್ಯೆಗಳು ಬಗೆ ಹರಿಯುವಂತಾಗುವ ಗ್ಯಾರಂಟಿ ಈಗಲಾದರೂ ದೊರೆಯಲೇಬೇಕಿದೆ.