ಸಮಾನತೆ ಇಂದಿಗೂ ಒಂದು ಕನಸು!
ನವೆಂಬರ್ 16, 1992, ಬಿ.ಪಿ. ಮಂಡಲ್ ವರದಿ ಆಧರಿಸಿ, ಇತರ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರಕಾರದ ನೌಕರಿ ಮತ್ತು ಹುದ್ದೆಗಳಿಗಾಗಿ ಮೀಸಲಾತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮನವಿಗಳ ಮೇಲೆ ಸರ್ವೋಚ್ಚ ನ್ಯಾಯಾಲಯದ 9 ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ ದಿನ. ಇದು ಅಂತಿಂಥ ತೀರ್ಪಲ್ಲ. ದೇಶದ ಶೇ. 52ರಷ್ಟಿರುವ ಹಿಂದುಳಿದ ವರ್ಗಗಳ ಪಾಲಿಗೆ ಅಮೃತ ಸವಿದಷ್ಟೇ ಸಂತಸ ತಂದಿರುವುದು. ಸ್ವಾತಂತ್ರ್ಯಗಳಿಸಿದ ನಂತರ 45 ವರ್ಷಗಳ ಕಾಲ ಚಾತಕ ಪಕ್ಷಿಯಂತೆ ಕಾಯ್ದು ಸಾಂವಿಧಾನಿಕ ಸವಲತ್ತು-ಸೌಲಭ್ಯಗಳನ್ನು ದಕ್ಕಿಸಿಕೊಂಡ, ಹಿಂದುಳಿದ ವರ್ಗಗಳ ಬಾಳಿನ ಭಾಗ್ಯದ ಬಾಗಿಲು ತೆರೆದ ದಿನವದು. ಅದಷ್ಟೇ ಅಲ್ಲ, ಸರ್ವೋಚ್ಚ ನ್ಯಾಯಾಲಯದ ತೀರ್ಪು ಒಂದು ಮೈಲುಗಲ್ಲಾಗಿ ಐತಿಹ್ಯ ದಾಖಲೆಯಾಗಿಯೂ ಉಳಿದಿದೆ.
ಒಂಭತ್ತು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠ 6:3ರ ಅನುಪಾತದಡಿಯಲ್ಲಿ ಮೀಸಲಾತಿಯನ್ನು ಎತ್ತಿ ಹಿಡಿದು ಹಿಂದುಳಿದ ವರ್ಗಗಳ ಮೀಸಲಾತಿಯ ವಿರೋಧಿಗಳಿಗೆ ಬಲವಾದ ಹೊಡೆತ ಕೊಟ್ಟಿದೆ. ಸಕಾರಾತ್ಮಕ ತೀರ್ಪು (ಇಂದ್ರಾ ಸಹಾನಿ v/s ಒಕ್ಕೂಟ ಸರಕಾರ)ನೀಡಿರುವ ಆರು ಮಂದಿ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾ.ಸಹಾಯಿ ಅವರು ಅಗೌರವ, ಅನಾದರಗಳಿಗೆ ಗುರಿಯಾಗಿರುವ ಶೋಷಿತ ವರ್ಗಗಳ ಬದುಕಿನ ಸ್ಥಿತಿಗತಿಗಳನ್ನು ನ್ಯಾಯೋಚಿತ ಮತ್ತು ಸೂಕ್ತವಾಗಿ ವಿವರಿಸಿದ್ದಾರೆ- ‘‘ದುರ್ಬಲರು ಮತ್ತು ಬಡವರು ಯಾವುದೇ ಸಂಪತ್ತು ಅಥವಾ ಪ್ರಭಾವವನ್ನು ಹೊಂದಿರುವುದಿಲ್ಲ. ಯಾವುದೇ ಶಿಕ್ಷಣ ಗಳಿಸದ ಅಥವಾ ಕಡಿಮೆ ಶಿಕ್ಷಣ ಗಳಿಸಿರುವ ಅವರು ಸಾಮಾಜಿಕವಾಗಿ ದಮನ ಮತ್ತು ದಬ್ಬಾಳಿಕೆಗೆ ಒಳಗಾಗಿ ಬಳಲುವವರು’’. ನ್ಯಾಯಾಧೀಶರ ಈ ಹೇಳಿಕೆಯಿಂದ ಬಡತನದಲ್ಲಿ ಬದುಕುತ್ತಿರುವ ದುರ್ಬಲ ವರ್ಗದ ಸ್ಥಿತಿಗತಿಯನ್ನು ಗಮನಿಸಬಹುದು.
ಅತ್ಯಂತ ತಳಮಟ್ಟದಲ್ಲಿ ಬದುಕುತ್ತಿರುವ ಹಾಗೂ ಸಮಾಜದ ತುಳಿತಕ್ಕೊಳಗಾದ ವರ್ಗಕ್ಕೆ ಸಮಾನ ಅವಕಾಶಗಳನ್ನು ಒದಗಿಸುವ ಅಗತ್ಯವನ್ನು ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ. ಜಾತಿ, ಮತ, ಧರ್ಮ ಅಥವಾ ಇನ್ಯಾವುದೇ ನೆಲೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿದ ನಂತರ, ಭಾರತೀಯ ಸಂವಿಧಾನವು ಅಂಥವರನ್ನು ಈಗಾಗಲೇ ಸ್ಪರ್ಧಾತ್ಮಕ ಮಟ್ಟದಲ್ಲಿರುವ ಇತರರ ಜೊತೆಗೆ ತರಲು ವಿಶೇಷ ನಿಬಂಧನೆಗಳನ್ನು ನಿಗದಿಪಡಿಸಿದೆ. ಅದು ಹೇಗೆ ಸಾಧ್ಯ?
ಅಸ್ತಿತ್ವದಲ್ಲಿರುವ ಸಾಮರ್ಥ್ಯದ ಮಟ್ಟವನ್ನು ಪರಿಶೀಲಿಸದೆ, ಎಲ್ಲಾ ಸಮಾನರು ಮತ್ತು ಅಸಮಾನರನ್ನು ಒಂದೇ ನೆಲೆಯಲ್ಲಿ ಇರಗೊಳಿಸುವುದು ಯಾವ ಉದ್ದೇಶವನ್ನೂ ಈಡೇರಿಸಿದಂತಾಗುವುದಿಲ್ಲ ಮತ್ತು ಈಗಾಗಲೇ ಶತಮಾನಗಳಿಂದ ಅಸ್ತಿತ್ವದಲ್ಲಿರುವ ಅಸಮಾನತೆಯ ಪರಿಸ್ಥಿತಿಯನ್ನು ನೆಲೆಗೊಳಿಸಲು ಕಾರಣವಾಗುತ್ತದೆ. ಯಾವುದೇ ರಾಷ್ಟ್ರದ ಆರ್ಥಿಕ ಪ್ರಗತಿಯ ಸ್ಥಿತಿಯನ್ನು ಎತ್ತಿ ತೋರಿಸುವ ಜಿಡಿಪಿ, ಜಿಎನ್‌ಪಿ ಮುಂತಾದ ಸಾರ್ವತ್ರಿಕವಾಗಿ ಅಂಗೀಕರಿಸಿರುವ ಆರ್ಥಿಕ ಅಳತೆಗೋಲುಗಳು ನಮ್ಮ ದೇಶದಲ್ಲಿ ಬೆಳೆದಿಲ್ಲವೆಂದು ತಿಳಿಯಬೇಕಾಗಿಲ್ಲ. ಅಂತೆಯೇ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳು ದೇಶದಲ್ಲಿ ಮೇಲ್ಮುಖ ಬೆಳವಣಿಗೆಯನ್ನು ದಾಖಲಿಸಿವೆ. ಇದು ನಾನಾ ರೂಪಗಳನ್ನು ತಾಳಿದೆ. ಆದರೆ ದುರದೃಷ್ಟವಶಾತ್ ಅದರ ಅಸಮಾನ ಮತ್ತು ಅನ್ಯಾಯದ ವಿತರಣೆಯ ಮಾರ್ಗವು ಜನಸಂಖ್ಯೆಯ ಒಂದು ಭಾಗವನ್ನು ನಿಷ್ಕಾರುಣ್ಯವಾಗಿ ನಿರ್ಲಕ್ಷಿಸಿದೆ. ಶೋಷಣೆ, ದಬ್ಬಾಳಿಕೆ, ಅನ್ಯಾಯ, ಅಸಮಾನತೆ, ಹಸಿವು ಮತ್ತು ಅನಾರೋಗ್ಯದ ದಾರುಣ ಸ್ಥಿತಿಯ ಮಧ್ಯೆ ಅವರನ್ನು ಇರಿಸಿದೆ. ಯಾವುದೇ ಸುಸಂಸ್ಕೃತ ಸಮಾಜದ ಅಂತಿಮ ಗುರಿ ಸಾಮಾಜಿಕ ನ್ಯಾಯ. ಅಂದರೆ ಅದರ ಎಲ್ಲಾ ನಾಗರಿಕರನ್ನು ಸಮರ್ಥ ಮತ್ತು ದಕ್ಷರನ್ನಾಗಿ ಮಾಡುವುದಲ್ಲದೆ ಅರ್ಹತೆ ಮತ್ತು ದಕ್ಷತೆಯ ಮಟ್ಟವನ್ನು ಹೆಚ್ಚಿಸುವುದು. ಕೆಲವು ಐತಿಹಾಸಿಕ ಕಾರಣಗಳಿಂದಾಗಿ ಸಮಾಜದ ಒಂದು ಸಣ್ಣ ವರ್ಗವು ಅರ್ಹತೆ ಮತ್ತು ದಕ್ಷತೆಯ ಸಾಮಾನ್ಯ ಗುಣಮಟ್ಟವನ್ನು ಹೊಂದಿಲ್ಲದಿದ್ದರೆ, ಸಮಾಜದ ಇವರಿಗೆ ಅರ್ಹತೆ ಮತ್ತು ದಕ್ಷತೆಯ ಮಟ್ಟವನ್ನು ಹೆಚ್ಚಿಸಲು ಸೂಕ್ತವಾದ ವಾತಾವರಣ ಮತ್ತು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಬೇಕು.
ದೇಶದ ಎಲ್ಲ ವರ್ಗಗಳನ್ನು ಸಮಾನತೆಗೆ ಒಳಪಡಿಸಬೇಕೆಂದರೆ ಅರ್ಹತೆ ಮತ್ತು ದಕ್ಷತೆಯ ಮಟ್ಟವನ್ನು ಹೆಚ್ಚಿಸಲು ಪೂರಕವಾದ ವಾತಾವರಣ ನಿರ್ಮಿಸಬೇಕು. ಆದರೆ ವಾಸ್ತವವಾಗಿ ಹಾಗೆ ಆಗುತ್ತಿಲ್ಲ ಎಂಬುದೇ ಸಮಾನತೆಯ ಕನಸಿಗೆ ಇರುವ ತೊಡಕು. ಸಮಾನತೆಯ ಕನಸು ಕಾಣಬೇಕಾದರೆ ಸಾಮಾಜಿಕವಾಗಿ ಅಂಚಿನಲ್ಲಿರುವವರನ್ನು ಸಾಮಾಜಿಕ ಶೋಷಣೆಯಿಂದ ಮುಕ್ತಗೊಳಿಸಬೇಕು. ಶಿಕ್ಷಣದಲ್ಲಿ ತಾರತಮ್ಯವಿರಬಾರದು. ಸಂಪತ್ತು ಸಾಧ್ಯವಾದಷ್ಟು ಮಟ್ಟಿಗೆ ಸಮಾನವಾಗಿ ಹಂಚಿಕೆಯಾಗಬೇಕು. ಅದಲ್ಲದೆ ರಾಜಕೀಯವಾಗಿ ಪ್ರಾತಿನಿಧ್ಯ ಸಿಗುವ ಅವಕಾಶಗಳನ್ನು ಕಲ್ಪಿಸಿ ಕೊಡಬೇಕು. ಈ ದಿಸೆಯಲ್ಲಿ ನ್ಯಾಯಮೂರ್ತಿ ಸವಾಯಿಯವರು ಮುಂದುವರಿದು ಹೇಳಿರುವ ಅಭಿಪ್ರಾಯಗಳ ಸಾರಾಂಶವೆಂದರೆ, ಬಡತನ ರೇಖೆಗಿಂತ ಕೆಳಗಿರುವ ಮತ್ತು ಸಾಮಾಜಿಕ ಬಹಿಷ್ಕಾರದಿಂದ ಬಳಲುತ್ತಿರುವ ಘನತೆ-ಗೌರವವಿಲ್ಲದ ಸಾಮಾಜಿಕ ಸ್ಥಾನಮಾನ ಮತ್ತು ಮನುಷ್ಯ ಜಾತಿಗಿಂತ ಕೆಳಗಣ ಜೀವನ, ಭೀತಿಗೊಳ್ಳುವಂಥ ಪರಿಸ್ಥಿತಿ ಮತ್ತು ಕರುಣಾಜನಕ ಸ್ಥಿತಿ, ತಳಸಮುದಾಯಗಳಲ್ಲಿ ಅವರ ಹುಟ್ಟು, ಅವರ ಅವಮಾನಕರ ಉದ್ಯೋಗ, ಅವರ ಅವನತಿ ಮತ್ತು ಹಾನಿ, ಹಿಂದಿದ್ದ ಮತ್ತು ಈಗಲೂ ಮುಂದುವರಿದಿರುವ ತಾರತಮ್ಯ, ಶೋಷಣೆಗೆ ಕಾರಣವಾಗಿದೆ. ನಿರ್ಲಕ್ಷ್ಯ, ಬಡತನ, ರೋಗ, ಪ್ರತ್ಯೇಕತೆ, ಗುಲಾಮಗಿರಿ ಮತ್ತು ಅವಮಾನಗಳ ಬೇರುಗಳು ಸಮಾಜದ ಅತ್ಯಂತ ಕೆಳಮಟ್ಟದಲ್ಲಿವೆ. ಸಾಂಪ್ರದಾಯಿಕವಾಗಿ ಅವಮಾನಕರವಾದ ಕಸುಬುಗಳು ಮತ್ತು ಇತರ ಮೇಲ್ಜಾತಿ-ವರ್ಗದವರಿಂದ ತಪ್ಪಿಸಿಕೊಳ್ಳಲಾಗದ ಒತ್ತಾಯ ಪೂರ್ವಕ ಪ್ರತ್ಯೇಕತೆ ಮತ್ತು ಅವರ ಸಾಮಾಜಿಕ ಶೈಕ್ಷಣಿಕ ಕೊರತೆ ಮತ್ತು ಅಸಹಾಯಕತೆ, ಕಡುಬಡತನದಿಂದಾಗಿ ಅವನತಿ ಹೊಂದುತ್ತಿರುವ ಹಿಂದುಳಿದಿರುವಿಕೆಯ ಕಾರಣ. ಅಂತಹ ನಾಗರಿಕ ವರ್ಗಗಳು ತಮಗೆ ತಾವೇ ಮೇಲ್ಮುಖ ಚಲನಶೀಲತೆಯ ಮುಖ್ಯವಾಹಿನಿಗೆ ಸೇರಲು ಅಸಮರ್ಥವಾಗಿವೆ.
ನ್ಯಾಯಮೂರ್ತಿ ಸಹಾಯಿ ಅವರು ನೀಡಿರುವ ವಿವರಣೆ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರಿದ ಈ ಜನಸಾಮಾನ್ಯರಿಗೆ ಸಂಬಂಧಿಸಿದಂತೆ ಕಂಡು ಬರುವ ಈ ನೆಲದ ವಾಸ್ತವವಾಗಿದೆ. ಅವರಿಗೆ ಸಮಾನತೆ ಎಂಬುದು ಕನಸು.
ನಮ್ಮ ಸಂವಿಧಾನದ ಭಾಗ -4ರಲ್ಲಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಬಗ್ಗೆ ಹೇಳಲಾಗಿದೆ. ವಿಧಿ 39(ಬಿ) ಪ್ರಕಾರ ಸಮುದಾಯದ ಭೌತಿಕ ಸಾಧನ ಸಂಪತ್ತುಗಳ ಒಡೆತನವು ಮತ್ತು ನಿಯಂತ್ರಣವು ಸಕಲರ ಹಿತ ಸಾಧನೆಗೆ ಅತ್ಯುತ್ತಮ ರೀತಿಯಲ್ಲಿ ಸಹಾಯಕವಾಗುವಂತೆ ಹಂಚಿಕೆಯಾಗಬೇಕು. ಹಾಗೆಯೇ, ವಿಧಿ 39(ಸಿ) ಅನ್ವಯ ಆರ್ಥಿಕ ನೀತಿಗಳು ಸಂಪತ್ತು ಒಂದು ಕಡೆ ಕೇಂದ್ರೀಕರಣವಾಗದಂತೆ ರೂಪಿಸ ಬೇಕು. ಆದರೆ ಸಂವಿಧಾನದ ಈ ಆಶಯಗಳ ಅನ್ವಯ, ಯಾವುದೇ ಸರಕಾರ ಕಾರ್ಯನಿರ್ವಹಿಸುವ ದೆಸೆಯಲ್ಲಿ ಇಲ್ಲ. ಅದಕ್ಕೆ ಕಾರಣ, ಇವುಗಳನ್ನು ನ್ಯಾಯಾಲಯದಲ್ಲಿ ಮೂಲಭೂತ ಹಕ್ಕಿನ ರೀತಿಯಲ್ಲಿ ಪ್ರಶ್ನಿಸಲು ಆಗುವುದಿಲ್ಲ. ಬಾಬಾಸಾಹೇಬರು ಸಾಮಾಜಿಕ ಪ್ರಜಾತಂತ್ರ ಹಾಗೂ ಆರ್ಥಿಕ ಪ್ರಜಾತಂತ್ರವಿಲ್ಲದೆ ರಾಜಕೀಯ ಪ್ರಜಾತಂತ್ರದಿಂದ ತಳ ಸಮುದಾಯಗಳಿಗೆ ಯಾವ ಪ್ರಯೋಜನವೂ ಇಲ್ಲ. ಹೀಗಾಗಿ ಆರ್ಥಿಕ ಸಮಾನತೆಯನ್ನು ಮೂಲಭೂತ ಹಕ್ಕುಗಳಾಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂಬುದನ್ನು ನಾವು ನೆನಪಿಡಬೇಕು.
ಸಾಂವಿಧಾನಿಕವಾಗಿ ಕಾನೂನಿನ ಕಣ್ಣಿನಲ್ಲಿ ಸರ್ವ ನಾಗರಿಕರು ಸಮಾನರು ಎಂಬುದು ನಿಜ. ಆದರೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಕಾರಣ ಸಾಮಾಜಿಕವಾಗಿ ಮೇಲು-ಕೀಳು ಎಂಬುದು ಅಳಿಸಲಾಗದ ಪದ್ಧತಿಯಾಗಿ ಉಳಿದು ಹೋಗಿದೆ. ಕಾನೂನು ಕಟ್ಟಳೆಗಳೂ ಕೂಡ ಸಾಮಾಜಿಕವಾಗಿ ಎಲ್ಲರನ್ನೂ ಒಂದುಗೂಡಿಸಲು ಅಸಹಾಯಕವಾಗಿವೆ ಎಂಬುದನ್ನು ಒಪ್ಪಲೇಬೇಕು. ಆದರೆ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸುಧಾರಣೆಯತ್ತ ಸಾಗಿ ಸಮಾನತೆ ತರುವ ಸಾಧ್ಯತೆ ಇದೆ. ಇದಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಸೂತ್ರ ಹಿಡಿದವರು ಈ ಕುರಿತು ಆಲೋಚಿಸಿ ಕಾರ್ಯರೂಪಕ್ಕೆ ತರಬೇಕಾದ ಉತ್ತರದಾಯಿತ್ವ ಅವರಿಗಿದೆ. ಆದರೆ ಅವು ಕೇವಲ ತಿಳಿವಳಿಕೆ ಕೊಡುವ ನಿರ್ದೇಶನ ತತ್ವಗಳು.
ಸಮಾನತೆ ಎಂಬ ಕನಸು ನನಸಾಗುವ ಪರಿಸ್ಥಿತಿ ಪ್ರಕೃತ ಕಂಡು ಬರುತ್ತಿದೆಯೇ? ಉತ್ತರ ಮಾತ್ರ ಇಲ್ಲ; ಆದರೆ, ಅದು ದೂರದ ಕನಸಾಗಿ, ಅಸಮಾನತೆ ಎಂಬ ಅನಿಷ್ಟ ಮುಂದುವರಿಯುವ ಎಲ್ಲಾ ಲಕ್ಷಣಗಳು, ಆಡಳಿತ ನಡೆಸುವವರ ಕಾರ್ಯ ವೈಖರಿಯನ್ನು, ಗಮನಿಸಿದರೆ ಸಾಕು, ಅವೆಲ್ಲಾ ಕಂಡು ಬರುವವು. ಸಮಾನತೆ ಎಂಬ ಕನಸು ನನಸಾಗುವ ಪರಿಸ್ಥಿತಿ ಪ್ರಕೃತ ಕಂಡು ಬರುತ್ತಿದೆಯೇ? ಉತ್ತರ ಮಾತ್ರ ಇಲ್ಲ; ಆದರೆ, ಅದು ದೂರದ ಕನಸಾಗಿ, ಅಸಮಾನತೆ ಎಂಬ ಅನಿಷ್ಟ ಮುಂದುವರಿಯುವ ಎಲ್ಲಾ ಲಕ್ಷಣಗಳು, ಆಡಳಿತ ನಡೆಸುವವರ ಕಾರ್ಯ ವೈಖರಿಯನ್ನು, ಗಮನಿಸಿದರೆ ಸಾಕು, ಅವೆಲ್ಲಾ ಕಂಡು ಬರುವವು.