ಕುಲಪತಿ, ಕುಲಸಚಿವರ ನೇಮಕಾತಿಗಾಗಿಯೇ ಹೊಸ ವಿವಿಗಳ ಸ್ಥಾಪನೆ!?

ನಿಜವಾಗಿಯೂ, ಭಾರತದ ಶಿಕ್ಷಣ ತಜ್ಞರು ರಾಜಕಾರಣಿಗಳು ಮತ್ತು ಪ್ರಾಧ್ಯಾಪಕರು ವಿಶ್ವವಿದ್ಯಾನಿಲಯಗಳ ಅಸ್ತಿತ್ವದ ಮಹತ್ವವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ. ವಿಶ್ವವಿದ್ಯಾನಿಲಯಗಳನ್ನು ಸ್ವಾಯತ್ತ ಶಿಕ್ಷಣ ಸಂಸ್ಥೆಗಳಾಗಿ ನೋಡಲು ಬಯಸದ ನಮ್ಮನ್ನು ಆಳುವವರು ರಾಜಕೀಯ ಪ್ರಭಾವ ತೋರಿಸುವ ಸಾಧನಗಳಾಗಿ ಬಹಳ ವರ್ಷಗಳಿಂದ ಬಳಸಿಕೊಳ್ಳುತ್ತಿದ್ದಾರೆ. ಇದರ ಪರಿಣಾಮವಾಗಿ ವಿಶ್ವವಿದ್ಯಾನಿಲಯ ಎಂಬ ಕಲ್ಪನೆಯೇ ನೆಗೆಪಾಟಲಿಗೀಡಾಗಿದೆ. ಅಂಗನವಾಡಿಗಳಿಗಿಂತಲೂ ವಿವಿಗಳ ಸಂಖ್ಯೆ ಇಂದು ಹೆಚ್ಚಾಗಿದೆ. ವಿಶ್ವವಿದ್ಯಾನಿಲಯಗಳ ಸ್ವಾಯತ್ತತೆ ಕುಸಿಯುತ್ತಿದೆ. ಕುಲಪತಿ, ಪ್ರಾಧ್ಯಾಪಕರು ಹಾಗೂ ಆಡಳಿತ ಅಧಿಕಾರಿಗಳನ್ನು ಮೌಲ್ಯಾಧಾರಿತ ಆಯ್ಕೆ ಪ್ರಕ್ರಿಯೆಯ ಮೂಲಕ ನೇಮಕ ಮಾಡುವುದನ್ನು ಬಿಟ್ಟು ಹಣ ಮತ್ತು ರಾಜಕೀಯ ಪ್ರಭಾವಳಿಯ ಆಧಾರದ ಮೇಲೆ ಮಾಡುವ ಸಂಪ್ರದಾಯ ಹೆಚ್ಚಾಗಿದೆ. ಇನ್ನೊಂದೆಡೆ ವಿಶ್ವವಿದ್ಯಾನಿಲಯಗಳ ನಿರ್ವಹಣಾ ಮಂಡಳಿಗಳು (ಸಿಂಡಿಕೇಟ್, ಸೆನೆಟ್) ರಾಜಕೀಯ ನೇಮಕಾತಿಗಳಿಂದ ತುಂಬಿ ಹೋಗಿರುವುದರಿಂದ ಉನ್ನತ ಶಿಕ್ಷಣಕ್ಕೆ ದೀರ್ಘಕಾಲೀನ ಹಾನಿ ಉಂಟಾಗುತ್ತಿದೆ. ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ವಿವಿಗಳು ಸ್ಥಾನಪಡೆಯುತ್ತಿಲ್ಲವೆಂಬ ಮೊಸಳೆ ಕಣ್ಣೀರು ಆಗಾಗ ಬರುತ್ತಿರುವುದು ವಿಪರ್ಯಾಸವಷ್ಟೆ. ಇದರ ಮಧ್ಯೆ ಸಂಶೋಧನೆ ಮತ್ತು ಬೋಧನೆ ಬಗ್ಗೆ ಚಿಂತಿಸಲು ಯಾರಿಗೂ ಸಮಯವೇ ಇಲ್ಲ.
ಕಳೆದ ಹಲವಾರು ವರ್ಷಗಳಿಂದ ಬಜೆಟ್‌ನಲ್ಲಿ ಅನೇಕ ಸರಕಾರಿ ವಿಶ್ವವಿದ್ಯಾನಿಲಯಗಳಿಗೆ ಅಗತ್ಯ ಅನುದಾನ ಸಿಗುವುದೇ ದುಸ್ತರವಾಗಿದೆ. ಸಿಕ್ಕರೂ ಅದು ಅರೆಕಾಸಿನ ಮಜ್ಜಿಗೆ. ಉದಾಹರಣೆಗೆ ಯಾವ ಪೂರ್ವ ತಯಾರಿ ಇಲ್ಲದೆ ಸ್ಥಾಪಿಸಿದ ಹೊಸ ಒಂಭತ್ತು ವಿವಿಗಳಿಗೆ ತಲಾ ರೂ. ಎರಡು ಕೋಟಿಯಂತೆ ಅನುದಾನ ನಿಗದಿಪಡಿಸಿದ್ದರೂ ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲವೆಂದರೆ, ನಮ್ಮ ವ್ಯವಸ್ಥೆಯ ಬಗ್ಗೆ ಅಸಹ್ಯ ಹುಟ್ಟುವುದಿಲ್ಲವೆ? ಉನ್ನತ ಶಿಕ್ಷಣ ಇಲಾಖೆಯ ಕಚೇರಿಗೆ ಕುಲಪತಿಗಳು ಭೇಟಿ ನೀಡಿದರೆ ಅವರಿಗೆ ಸಿಗುವ ಮರ್ಯಾದೆ ಕುರಿತು ಇತ್ತೀಚೆಗೆ ಓರ್ವ ಕುಲಪತಿ ಸಭೆಯಲ್ಲಿ ಕಣ್ಣೀರು ಹಾಕಿದ್ದರು. ಇಂದು ಬಜೆಟ್‌ನಲ್ಲಿ ಅನುದಾನ ದೊರಕಲು ಕುಲಪತಿಗಳು ರಾಜಕೀಯ ಒತ್ತಡ ಅಥವಾ ಜಾತಿ ಅಸ್ತ್ರವನ್ನು ಝಳಪಿಸುವ ಸ್ಥಿತಿ ಮೂಡಿದೆ. ಕುಲಪತಿಗಳು ಸಂಬಂಧಪಟ್ಟ ಮಂತ್ರಿಗಳ ಕೈ-ಕಾಲು ಹಿಡಿಯಬೇಕಾದ ಸ್ಥಿತಿ ಇದೆ. ಹಂಪಿ ವಿವಿಗೆ ವಿದ್ಯುತ್ ಬಿಲ್ ಪಾವತಿಸಲು ಹಣವಿಲ್ಲ. ಜನಪದ ವಿವಿಗೆ ವೇತನಕ್ಕೆ ಹಣವಿಲ್ಲ. ತುಮಕೂರು ವಿವಿಯಲ್ಲಿ ಪ್ರಾಧ್ಯಾಪಕರಿಗೆ ಕುರ್ಚಿ-ಮೇಜುಗಳೇ ಇಲ್ಲ. ಕೃಷ್ಣದೇವರಾಯ ವಿವಿ ಗಣಿ ಧೂಳಿನಿಂದ ಯಾರಿಗೂ ಕಾಣುತ್ತಿಲ್ಲ. ಇನ್ನೂ ರಾಜ್ಯದ ವಿವಿಗಳಲ್ಲಿ ನೇಮಕಾತಿ ನಡೆದು ದಶಕಗಳೇ ಕಳೆದವು. ಪ್ರಾಧ್ಯಾಪಕರ ಹುದ್ದೆ ಕೋಟಿಗಳಲ್ಲಿ ಮಾರಾಟವಾಗುತ್ತಿದೆ ಎನ್ನುವ ಆರೋಪವೂ ಇದೆ. ಈ ಎಲ್ಲಾ ಕಾರಣಗಳಿಂದ ಸರಕಾರಿ ವಿವಿಗಳು ಇಂದು ಬಿಳಿಯಾನೆಯಾದವೇ ಎನ್ನುವ ಸಂಶಯ ಮೂಡದೆ ಇರುತ್ತದೆಯೇ? ಅದಕ್ಕಿಂತ ಬಹುದೊಡ್ಡ ವಿಷಯವೆಂದರೆ ವಿಷಯಕ್ಕೊಂದು ವಿವಿಗಳನ್ನು ರಚಿಸಿ ವಿವಿಗಳು ಎನ್ನುವ ಪದದ ಅರ್ಥವನ್ನೇ ದೇಶದಲ್ಲಿ ಬದಲಾಯಿಸಲಾಗಿದೆ. ಒಂದೇ ವಿವಿಯ ಅಂಗಳದಲ್ಲಿ ನಡೆಯಬೇಕಾದ ಶೈಕ್ಷಣಿಕ ಚಟುವಟಿಕೆ ಹರಿದು ಹಂಚಲಾಗಿದೆ.
ಇನ್ನು ಉನ್ನತ ಶಿಕ್ಷಣದ ಪಠ್ಯಪುಸ್ತಕ ವಿಚಾರಕ್ಕೆ ಬಂದರೆ ಕೆಲವು ವಿಷಯಗಳನ್ನು ಕತ್ತರಿಸಿ ಹಾಕುವುದು, ಇತಿಹಾಸವನ್ನು ಹೊಸ ರೀತಿಯಲ್ಲಿ ಬದಲಾಯಿಸುವುದು ಅಥವಾ ನಿರ್ದಿಷ್ಟ ಸಿದ್ಧಾಂತಗಳನ್ನು ಬಲವಂತವಾಗಿ ಹೇರುವ ಸಂಪ್ರದಾಯ ರೂಢಿಯಾಗುತ್ತಿರುವುದರಿದ ಶೈಕ್ಷಣಿಕ ಸ್ವಾತಂತ್ರ್ಯಕ್ಕೆ ಸರಿಪಡಿಸಲಾಗದ ಹಾನಿ ಉಂಟಾಗುತ್ತಿದೆ. ವಿವಿಗಳ ಅಂಗಳ ರಾಜಕಾರಣಿಗಳ ಪ್ರಯೋಗಶಾಲೆಯಾಗಿದೆ. ಮತ್ತೊಂದೆಡೆ ಉತ್ತಮ ಸಂಶೋಧನೆ ನಡೆಸಲು ಸಾಕಷ್ಟು ಹಣಕಾಸು ಬೆಂಬಲವಿಲ್ಲದೆ ಭಾರತೀಯ ವಿಶ್ವವಿದ್ಯಾನಿಲಯಗಳು ಎಲ್ಲಾ ವಿಚಾರದಲ್ಲೂ ಹಿನ್ನಡೆಯಲ್ಲಿವೆ ಎಂದು ಇತ್ತೀಚಿನ ಅಂತರ್‌ರಾಷ್ಟ್ರೀಯ ಸರ್ವೇ ವರದಿ ಹೇಳುತ್ತಿದೆ. ಸರಕಾರಿ ವಿವಿಗಳಿಗೆ ಸ್ವಾಯತ್ತ ಸಂಶೋಧನೆಗೆ ಅನೇಕ ಅನುಮತಿ ಪ್ರಕ್ರಿಯೆಗಳು ಅವಶ್ಯವಾಗಿದ್ದು ಅದರಲ್ಲೂ ವ್ಯಾಪಕ ಭ್ರಷ್ಟಾಚಾರ ಮನೆ ಮಾಡಿದೆ. ಅದಕ್ಕೆ ಇತ್ತೀಚಿನ ತೆಲಂಗಾಣ ವಿವಿ ಒಂದಕ್ಕೆ ನ್ಯಾಕ್ ಮಾನ್ಯತೆಯ ಭ್ರಷ್ಟಾಚಾರದ ಘಟನೆಯೇ ಸಾಕ್ಷಿ. ನ್ಯಾಕ್ ವ್ಯವಸ್ಥೆಯೇ ಇಂದು ಹಾಸ್ಯಾಸ್ಪದವಾಗಿದೆ. ಅಲ್ಲದೆ, ಭಿನ್ನ ಅಭಿಪ್ರಾಯವನ್ನು, ಸಿದ್ಧಾಂತಗಳನ್ನು ಹೊಂದಿರುವ ವಿದ್ಯಾರ್ಥಿಗಳು ಅಥವಾ ಪ್ರಾಧ್ಯಾಪಕರನ್ನು ರಾಜಕೀಯ ಒತ್ತಡದ ಮೂಲಕ ನಿಯಂತ್ರಿಸಲು ಸರಕಾರಗಳು ಯತ್ನಿಸುತ್ತಿವೆ. ವಿದ್ಯಾರ್ಥಿ ಸಂಘಟನೆಗಳನ್ನು ಪಕ್ಷಪಾತದಿಂದ ಮೂಲೆಗುಂಪು ಮಾಡಲಾಗುತ್ತಿದೆ.
ಇತಿಹಾಸ, ರಾಜಕೀಯ ವಿಜ್ಞಾನ ಮತ್ತು ಸಾಮಾಜಿಕ ಶಾಸ್ತ್ರದಂತಹ ವಿಷಯಗಳಲ್ಲಿ ರಾಜಕೀಯ ಆಲೋಚನೆಗಳು ಪ್ರಭಾವ ಬೀರುವುದರಿಂದ ಭಾರತೀಯ ವಿವಿಗಳಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಕಡಿಮೆಯಾಗುತ್ತಿದೆ. ಸರಕಾರಿ ವಿಶ್ವವಿದ್ಯಾನಿಲಯಗಳು ಹಳೆಯ ಕ್ಲಾಸ್ ರೂಮ್‌ಗಳು, ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳಿಂದ ತುಂಬಿದೆ. ಸಮಕಾಲೀನ ತಂತ್ರಜ್ಞಾನ ಮತ್ತು ಸಂಶೋಧನಾ ಸೌಲಭ್ಯಗಳು ಸಂಪೂರ್ಣ ಕಡಿಮೆಯಾಗಿವೆ. ಅಂತರ್‌ಶಿಸ್ತೀಯ ಸಂಶೋಧನೆಗೆ ವಿದಾಯ ಹೇಳಿ ಹಲವಾರು ದಶಕಗಳೇ ಕಳೆದಿವೆ. ಹಾಗೆಂದರೆ ಏನು ಎನ್ನುವುದು ಈ ತಲೆಮಾರಿನ ಅಧ್ಯಾಪಕರಿಗೆ ಸರಿಯಾಗಿ ಅರ್ಥವಾದಂತೆ ಕಾಣುತ್ತಿಲ್ಲ. ಮುಖ್ಯವಾಗಿ ಇಂದಿನ ವಿವಿಗಳ ಪ್ರಾಧ್ಯಾಪಕರಲ್ಲಿ ಸಂಶೋಧನೆಯ ಮನೋಭಾವನೆಯೇ ಇಲ್ಲ. ಅವರು ಕೇವಲ ಬೋಧನೆಗೆ ಮಾತ್ರ ಸೀಮಿತಗೊಂಡಿದ್ದಾರೆ. ಅದಕ್ಕೆ ತಕ್ಕಂತೆ ಸಂಶೋಧನಾ ಚಟುವಟಿಕೆಗೆ ಸರಿಯಾದ ಆರ್ಥಿಕ ಬೆಂಬಲವೂ ಇಲ್ಲ. ಇದು ಭಾರತದ ವಿಶ್ವವಿದ್ಯಾನಿಲಯಗಳಿಗೆ ವಿಶ್ವದ ವಿವಿಗಳೊಂದಿಗೆ ಸೆಣೆಸಲು ಅಡ್ಡಿಯಾಗುತ್ತಿದೆ. ಸರಿಯಾದ ಅನುಭವ ಮತ್ತು ಅರ್ಹತೆ ಹೊಂದಿದ ಪ್ರಾಧ್ಯಾಪಕರ ಕೊರತೆ ದೇಶಾದ್ಯಂತ ಒಂದು ದೊಡ್ಡ ಸಮಸ್ಯೆ. ರಾಜ್ಯದ ಅತೀ ದೊಡ್ಡ ಮೈಸೂರು ವಿವಿಯಲ್ಲಿ 900 ಅತಿಥಿ ಉಪನ್ಯಾಸಕರಿದ್ದಾರೆ ಎಂದರೆ ನಾವು ನಂಬಲೇಬೇಕು. ಅನೇಕ ವಿವಿಗಳು ತಾತ್ಕಾಲಿಕ ಅಥವಾ ಅರೆಕಾಲಿಕ ಶಿಕ್ಷಕರನ್ನು ಅವಲಂಬಿಸಿವೆ. ಭಾರತೀಯ ವಿವಿಗಳ ಪ್ರಾಧ್ಯಾಪಕರಿಗೆ ವಿವಿಧ ದೇಶಗಳಲ್ಲಿ ಇಲ್ಲದಷ್ಟು ಉತ್ತಮ ಸಂಬಳ ಇದೆ. ಅವರು ಕನಿಷ್ಠ ದಿನಕ್ಕೆ ಆರು ಘಂಟೆ ವಿವಿಯಲ್ಲಿ ಇರಬೇಕು ಎನ್ನುವ ಯುಜಿಸಿಯ ನಿಯಮವಿದೆ. ಆದರೆ ಹೆಚ್ಚಿನವರು ವಿವಿಗಳಲ್ಲಿ ಸಮಯವನ್ನು ಕಳೆಯುವುದಿಲ್ಲ. ಇದರಿಂದ ವಿವಿಗಳು ಬೌದ್ಧಿಕವಾಗಿ ಬೆಳೆಯಲು ಸಾಧ್ಯವೇ? ಸಂಶೋಧನೆಗಳೇ ಉಸಿರಾಗಿರುವ ವಿವಿಗಳು ಉಳಿಯಲು ಸಾಧ್ಯವೇ?
ಭಾರತೀಯ ವಿಶ್ವವಿದ್ಯಾನಿಲಯಗಳು ಅಪಾರವಾಗಿ ನೆನಪಿನ ಆಧಾರಿತ ಕಲಿಕೆಗೆ ಒತ್ತು ನೀಡುತ್ತವೆ. ವಿದ್ಯಾರ್ಥಿಗಳು ಪಠ್ಯವನ್ನು ನೆನಪಿಗೆ ತುಂಬಿಕೊಂಡು ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ. ಅವರ ವಿಶ್ಲೇಷಣಾ ಮತ್ತು ಆವಿಷ್ಕಾರ ಚಿಂತನೆಗಳಿಗೆ ಬೆಲೆಯಿಲ್ಲ. ವಿದ್ಯಾರ್ಥಿಗಳಲ್ಲಿ ನವೀನತೆ, ಸಮಸ್ಯೆ ಪರಿಹಾರ ಸಾಮರ್ಥ್ಯಗಳನ್ನು ಉತ್ತೇಜಿಸುವುದಕ್ಕೆ ಕಡಿಮೆ ಗಮನ ನೀಡಲಾಗುತ್ತದೆ. ಬಹುತೇಕ ವಿಶ್ವವಿದ್ಯಾನಿಲಯಗಳು ಕೈಗಾರಿಕೆಗೆ ಸರಿಯಾದ ಸಂಪರ್ಕವನ್ನು ಹೊಂದಿಲ್ಲ. ಇಂದು ವಿದ್ಯಾರ್ಥಿಗಳಿಗೆ ತರಬೇತಿ ಕೆಲಸದ ಅವಕಾಶಗಳು ಹಾಗೂ ವಾಸ್ತವಿಕ ಜ್ಞಾನವನ್ನು ಅಭ್ಯಾಸ ಮಾಡಲು ಅವಕಾಶ ಸಿಗುತ್ತಿಲ್ಲ. ಇದರಿಂದ ಮುಂದೆ ವಿದ್ಯಾರ್ಥಿಗಳು ಬಹುಶಃ ಉದ್ಯೋಗಕ್ಕೆ ಹೊಂದಿಕೊಳ್ಳಲು ಅವಕಾಶಗಳನ್ನು ಹುಡುಕಲು ಕಷ್ಟಪಡುತ್ತಾರೆ. ಏಕೆಂದರೆ ಅವರ ತರಗತಿಯಲ್ಲಿನ ಶಿಕ್ಷಣ ಪ್ರಸಕ್ತ ಕೈಗಾರಿಕಾ ಅಗತ್ಯಗಳೊಂದಿಗೆ ಯಾವ ಕಾರಣಕ್ಕೂ ಹೊಂದಾಣಿಕೆಯಾಗುತ್ತಿಲ್ಲ. ಇದರಿಂದಾಗಿ ವಿವಿಗಳಿಗೆ ಕೈಗಾರಿಕೆಗಳಿಂದ ಯಾವುದೇ ಪ್ರೋತ್ಸಾಹ ಮತ್ತು ಉತ್ತೇಜನ ಸಿಗುತ್ತಿಲ್ಲ.
ದೇಶಾದ್ಯಾಂತ ವಿವಿಗಳ ಗುಣಮಟ್ಟದ ಶಿಕ್ಷಣದಲ್ಲಿ ಅಭಿಪ್ರಾಯ ಭೇದವಿದೆ. ಹಿಂದುಳಿದ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ವಿವಿಗಳಲ್ಲಿ ಜಾತಿಯಾಧಾರಿತ ತಾರತಮ್ಯ ಹೆಚ್ಚಾಗುತ್ತಿದೆ. ಕೆಳವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಅವಕಾಶಗಳು ಕಡಿಮೆಯಾಗಿವೆ. ಆಧುನಿಕ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ-ಆರ್ಥಿಕ ಅಡಚಣೆಗಳಿಂದ ಹಿಂದುಳಿದ ಮತ್ತು ಹೊರಗುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಕುರಿತು ಸಾಕಷ್ಟು ಗಮನ ನೀಡಲಾಗುತ್ತಿಲ್ಲ. ಅಕಾಡಮಿಕ್ ಒತ್ತಡ ಮತ್ತು ಮಾನಸಿಕ ಒತ್ತಡ ಮುಂದೆ ವಿದ್ಯಾರ್ಥಿಗಳಿಗೆ ಬಹು ದೊಡ್ಡ ಸಮಸ್ಯೆಗಳಾಗಿ ಪರಿಣಮಿಸುತ್ತಿದೆ. ಜಾತಿ ಮತ್ತಿತರ ಕಾರಣಗಳಿಂದ ವಿದ್ಯಾರ್ಥಿಗಳು ಪ್ರಾಧ್ಯಾಪಕರೊಂದಿಗೆ ಉತ್ತಮ ಸಂಬಂಧವನ್ನು ಹೊಂದಲು ಸಾಧ್ಯವಾಗುತ್ತಿಲ್ಲವೆನ್ನುವ ಸಂಶೋಧನಾ ವರದಿಗಳಿವೆ. ದೇಶದ ಐಐಟಿಗಳಲ್ಲಿ ಇದು ಸಾಮಾನ್ಯವಾಗಿದೆ. ಇದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಮತ್ತು ವೈಯಕ್ತಿಕ ಬೆಳವಣಿಗೆಗೆ ದುಷ್ಪರಿಣಾಮ ಬೀರುತ್ತಿದೆ. ಇಂದು ದೇಶದ ಹೆಚ್ಚಿನ ವಿವಿಗಳ ಮೇಲೆ ಹಣಕಾಸಿನ ಅಕ್ರಮ ಮತ್ತು ನೇಮಕಾತಿ ಅಕ್ರಮಗಳ ತೂಗುಗತ್ತಿ ನೇತಾಡುತ್ತಿದೆ. ಪ್ರಸಕ್ತ ದೇಶದಲ್ಲಿ ರಾಜ್ಯ ವಿವಿಗಳು, ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಡೀಮ್ಡ್ ವಿಶ್ವವಿದ್ಯಾನಿಲಯಗಳು, ಖಾಸಗಿ ವಿಶ್ವವಿದ್ಯಾನಿಲಯಗಳು ಇದ್ದು ಇವುಗಳಿಗೆ ಪ್ರತ್ಯೇಕ ನಿಯಮಗಳು ಜಾರಿಯಲ್ಲಿದೆ. ಇನ್ನು ಮುಂದೆ ದೇಶದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ಏಕೀಕೃತ ಕಮಾಂಡ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಲಾಗಿದೆ.
ಇಂದು ಭಾರತದ ವಿಶ್ವವಿದ್ಯಾನಿಲಯಗಳು ಹಲವು ಸಾಂಸ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಮುಖ್ಯವಾಗಿ ವಿವಿಗಳು ಜಾತಿ ಕೂಪಗಳಾಗಿವೆ. ಅಲ್ಲದೆ, ಸರಕಾರಿ ವಿಶ್ವವಿದ್ಯಾನಿಲಯಗಳು ನಿರ್ವಹಣಾ ವೈಫಲ್ಯಗಳು, ಅವ್ಯವಸ್ಥೆ ಮತ್ತು ನಿರ್ಲಕ್ಷ್ಯದಿಂದ ಪೀಡಿತವಾಗಿವೆ. ಆಡಳಿತ ವ್ಯವಸ್ಥೆಯಲ್ಲಿ ಕಡಿಮೆ ಸ್ಪಷ್ಟತೆ, ಅವ್ಯವಸ್ಥೆ ಮತ್ತು ಜವಾಬ್ದಾರಿಯ ಕೊರತೆ ವಿಶ್ವವಿದ್ಯಾನಿಲಯಗಳ ಕಾರ್ಯಕ್ಷಮತೆಯನ್ನು ಹಾಳು ಮಾಡುತ್ತಿದೆ. ಅಧ್ಯಯನ, ಸಂಶೋಧನೆ ಮತ್ತು ಆಡಳಿತ ವ್ಯವಸ್ಥೆಗಳಲ್ಲಿ ತಂತ್ರಜ್ಞಾನವನ್ನು ಸ್ವೀಕರಿಸುವಿಕೆ ನಿಧಾನವಾಗಿದೆ. ಇದರಿಂದ ವಿವಿಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತಿದೆ. ಸರಕಾರಿ ವಿವಿಗಳಲ್ಲಿ ತಾಂತ್ರಿಕ ನಿಯಮಗಳನ್ನು ಅನುಸರಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಗಳು ನಿಧಾನವಾಗುತ್ತಿವೆ. ಸರಕಾರದ ಅತಿಯಾದ ನಿಯಂತ್ರಣಗಳ ಹಿನ್ನೆಲೆ, ವಿಶ್ವವಿದ್ಯಾನಿಲಯಗಳಿಗೆ ತಮ್ಮ ಶೈಕ್ಷಣಿಕ ಮತ್ತು ಆಡಳಿತ ವಿಧಾನಗಳನ್ನು ಸರಿಯಾಗಿ ರೂಪಿಸಲು ಸಾಕಷ್ಟು ಸ್ವಾಯತ್ತತೆ ಇಲ್ಲ. ಜರ್ಮನಿ, ಅಮೆರಿಕ ಮತ್ತು ಯುಕೆಯಂತಹ ದೇಶಗಳು ತಮ್ಮ ವಿಶ್ವವಿದ್ಯಾನಿಲಯಗಳಿಗೆ ಅಗತ್ಯ ಸ್ವಾಯತ್ತತೆ, ಸಂಶೋಧನಾ ಪ್ರೋತ್ಸಾಹ ಮತ್ತು ಶೈಕ್ಷಣಿಕ ಸ್ವಾತಂತ್ರ್ಯ ಒದಗಿಸಿ, ಶಿಕ್ಷಣದ ಗುಣಮಟ್ಟವನ್ನು ತಲುಪಿಸುವಂತೆ ನೋಡಿಕೊಳ್ಳುತ್ತವೆ. ಇಲ್ಲಿ ಯಾವ ಕಾರಣಕ್ಕೂ ಸರಕಾರಗಳು ವಿವಿಗಳ ವಿಚಾರದಲ್ಲಿ ತಲೆಹಾಕುವುದಿಲ್ಲ. ವಿವಿಗಳು ಸಹ ಹಣಕ್ಕಾಗಿ ಸರಕಾರವನ್ನು ಹೆಚ್ಚಾಗಿ ಅವಲಂಬಿಸಿಲ್ಲ. ನಮ್ಮ ವಿವಿಗಳು ಪ್ರತೀ ಪೈಸೆಗೂ ಸರಕಾರದೆಡೆ ಮುಖ ಮಾಡುತ್ತಿವೆ. ಭಾರತದಲ್ಲಿ ಕೂಡಾ ವಿಶ್ವವಿದ್ಯಾನಿಲಯಗಳು ಸರಕಾರದ ಮತ್ತು ರಾಜಕೀಯ ನಿಯಂತ್ರಣದಿಂದ ಸಂಪೂರ್ಣ ಮುಕ್ತವಾಗಿರಬೇಕು. ವಿವಿಗಳ ಅಭಿವೃದ್ಧಿ, ಗುಣಮಟ್ಟ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಸರಕಾರ, ಸಮುದಾಯ ಮತ್ತು ಪ್ರಾಧ್ಯಾಪಕರು ತಮ್ಮ ಜವಾಬ್ದಾರಿಗಳನ್ನು ನೆನಪು ಮಾಡಿಕೊಳ್ಳಬೇಕು.