ಮಸೀದಿಗಳ ಉತ್ಖನನ: ಅರಾಜಕತೆಯತ್ತ ಭಾರತ
ಹಿನ್ನೆಲೆಆಗಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಶರದ್ ಬೋಬ್ಡೆ (ನಂತರದ ಮುಖ್ಯ ನ್ಯಾಯಮೂರ್ತಿಗಳ ಪಟ್ಟಿಯಲ್ಲಿದ್ದರು), ಡಿ.ವೈ. ಚಂದ್ರಚೂಡ್ (ಈಗಿನ ನ್ಯಾಯ ಮೂರ್ತಿಗಳು), ಅಶೋಕ್ ಭೂಷಣ್, ಅಬ್ದುಲ್ ನಝೀರ್‌ರನ್ನು ಒಳಗೊಂಡ ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು 9, ನವೆಂಬರ್ 2019ರಂದು ಸಿದ್ದಿಕಿ ವರ್ಸಸ್ ಮಹಂತ್ ಸುರೇಶ್ ದಾಸ್ ಪ್ರಕರಣದ ವಿಚಾರಣೆಯ ತೀರ್ಪು ನೀಡುವವರಿದ್ದರು. ಆದರೆ ಅಂದು ಶನಿವಾರವಾಗಿತ್ತು ಮತ್ತು ನ್ಯಾಯಾಂಗದ ರಜಾ ದಿನವಾಗಿತ್ತು, ಆದರೂ ಅಂತಹ ತುರ್ತು ಏನಿತ್ತು ಎನ್ನುವ ಕುತೂಹಲ, ಆಶ್ಚರ್ಯ ಎಲ್ಲರಿಗೂ ಕಾಡಿದ್ದು ನಿಜ. ಈ ಪೀಠವು ಸರ್ವಾನುಮತದಿಂದ ರಾಮ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ವಿವಾದಿತ ಭೂಮಿಯನ್ನು ಕೇಂದ್ರ ಸರಕಾರದ ಮೇಲ್ವಿಚಾರಣೆಯ ಟ್ರಸ್ಟ್‌ಗೆ ಹಸ್ತಾಂತರಿಸಬೇಕು ಅಲ್ಲಿ ರಾಮ ಮಂದಿರ ಕಟ್ಟಬೇಕು ಎಂದು ತೀರ್ಪು ನೀಡಿತು. ನವೆಂಬರ್ 17ರಂದು ರಂಜನ್ ಗೊಗೊಯಿ ನಿವೃತ್ತರಾಗುತ್ತಾರೆ, ಹಾಗಿದ್ದರೆ ಇಂತಹ ಮಹತ್ವದ ಪ್ರಕರಣದಲ್ಲಿ ಈ ತರಾತುರಿ ಅಗತ್ಯವಿತ್ತೇ ಎನ್ನುವ ಪ್ರಶ್ನೆ ಹಾಗೆಯೇ ಉಳಿದುಕೊಂಡಿತು. ಆದರೆ ನಿವೃತ್ತಿಯ ನಂತರ ಗೊಗೊಯಿಯವರು ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡರು. ಇದು ಅನೇಕ ಸತ್ಯಗಳನ್ನು ಹೇಳುತ್ತದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಸಂವಿಧಾನ ಪೀಠವು ಬಾಬರಿ ಮಸೀದಿ ಧ್ವಂಸವು ಕಾನೂನು ಉಲ್ಲಂಘನೆ, ಮಸೀದಿ ಅಡಿಯಲ್ಲಿ ರಾಮ ಮಂದಿರವಿತ್ತು ಎನ್ನುವುದಕ್ಕೆ ಸಾಕ್ಷಿಗಳಿಲ್ಲ ಎಂದು ಅಭಿಪ್ರಾಯಪಡುತ್ತಲೇ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ಕಟ್ಟಬೇಕು ಅಂತ ತೀರ್ಪು ಕೊಟ್ಟಿದ್ದು ಮಾತ್ರ ದೊಡ್ಡ ವೈರುಧ್ಯಗಳಲ್ಲಿ ಒಂದು.
ಈ ತೀರ್ಪಿನ ವಿರೋಧಾಭಾಸಗಳನ್ನು ಅರ್ಥ ಮಾಡಿಕೊಂಡರೆ ಕಳೆದ ಮೂವತ್ತು ವರ್ಷಗಳ ರಾಮ ಜನ್ಮಭೂಮಿ ವಿವಾದ ಕುರಿತಾದ ಎಲ್ಲಾ ಮೇಲಾಟಗಳು ಅರ್ಥವಾಗುತ್ತದೆ. 2014ರ ನಂತರ ಬದಲಾದ ರಾಜಕೀಯ ಚಿತ್ರಣಗಳ ಅರಿವಿದ್ದವರಿಗೆ ಈ ತೀರ್ಪನ್ನು ವಿರೋಧ ಪಕ್ಷಗಳು ಕೂಡಾ ಸ್ವಾಗತಿಸಿರುವುದು ಅಚ್ಚರಿಯಾಗುವುದಿಲ್ಲ. ಅದೇ ರೀತಿ ಕೆಲವರನ್ನು ಹೊರತುಪಡಿಸಿ ಅನೇಕ ನ್ಯಾಯವಾದಿಗಳು ಈ ತೀರ್ಪನ್ನು ಸ್ವಾಗತಿಸಿದರು. ನ್ಯಾಯಾಂಗದ ನೀತಿಗಳಿಗಿಂತ ಬಹುಸಂಖ್ಯಾತ ಧರ್ಮೀಯರ ನಂಬಿಕೆಯನ್ನು ಆಧರಿಸಿ ಕೊಟ್ಟ, ಸೆಕ್ಯುಲರಿಸಂ ಕುರಿತು ಮರು ವ್ಯಾಖ್ಯಾನ ಮಾಡಿದ ತೀರ್ಪನ್ನು ಬಹುತೇಕ ಜನರು ಸಹ ಸ್ವಾಗತಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಪ್ರಶ್ನಿಸುವಂತಹ, ಸೆಕ್ಯುಲರಿಸಂ ನಂಬಿಕೆಯನ್ನು ಅಲ್ಲಾಡಿಸುವಂತಹ ಈ ತೀರ್ಪಿನ ಮೂಲಕ ಬೇರೆ ಮತಧರ್ಮಕ್ಕಿಂತ ಹಿಂದೂ ಧರ್ಮದವರು ಹೆಚ್ಚು ಸಮಾನರು ಎನ್ನುವ ಸಂದೇಶವನ್ನು ಸಹ ಸಾರಿದರು. ಸಾರ್ವಜನಿಕವಾಗಿ ‘ಗಾಯಗೊಂಡ ಬಹುಸಂಖ್ಯಾತರಿಗೆ ಸಂದ ನ್ಯಾಯ’ ಎನ್ನುವ ಅಭಿಪ್ರಾಯವೂ ಕೇಳಿಬಂತು. ನಾಲ್ಕು ವರ್ಷಗಳ ಹಿಂದಿನ ಈ ತೀರ್ಪು ಮುಂದೆ ಬರುವಂತಹ ಬಹುಸಂಖ್ಯಾತವಾದ ಪ್ರತಿಪಾದನೆಯ ಘಟನೆಗಳಿಗೆ ಕಾರಣ ಆಗುತ್ತದೆ ಅನ್ನುವುದನ್ನು ಬಹುತೇಕರು ಆಗ ಅರ್ಥ ಮಾಡಿಕೊಳ್ಳಲಿಲ್ಲ, ಈಗಲೂ ಸಹ ಅರ್ಥ ಮಾಡಿಕೊಳ್ಳುತ್ತಿಲ್ಲ ಎನ್ನುವ ಸಂಗತಿ ಖೇದಕರ.
ವರ್ತಮಾನದ ತಲ್ಲಣಗಳು
15, ಅಕ್ಟೋಬರ್ 1991ರಂದು ಸ್ವಯಂಭು ಜ್ಯೋತಿರ್ಲಿಂಗ ವಿಶ್ವೇಶ್ವರ ಮತ್ತು ಇತರ ಐವರು ವಾರಣಾಸಿ ಸಿವಿಲ್ ನ್ಯಾಯಮೂರ್ತಿಗಳ ಮುಂದೆ ಜ್ಞಾನವಾಪಿ ಮಸೀದಿಯನ್ನು ಪಕ್ಕದ ವಿಶ್ವನಾಥ ದೇವಸ್ಥಾನದೊಂದಿಗೆ ವಿಲೀನಗೊಳಿಸಬೇಕು, ಅಲ್ಲಿಂದ ಮುಸ್ಲಿಮರನ್ನು ಸ್ಥಳಾಂತರಿಸಬೇಕು ಮತ್ತು ಮಸೀದಿಯನ್ನು ಕೆಡವಬೇಕು ಎಂದು ಅರ್ಜಿ ಸಲ್ಲಿಸಿದರು. ಏಳು ವರ್ಷಗಳ ಕಾಲ ವಿಚಾರಣೆ ನಡೆಸಿದ ನಂತರ 28, ಸೆಪ್ಟಂಬರ್ 1998ರಲ್ಲಿ ಹೊಸದಾಗಿ ವಿಚಾರಣೆ ಶುರು ಮಾಡಬೇಕೆಂದು ಏಕ ಸದಸ್ಯ ಪೀಠ ಆದೇಶ ನೀಡಿದರು. ಆದರೆ 13, ಅಕ್ಟೊಬರ್ 1998ರಲ್ಲಿ ಈ ಆದೇಶಕ್ಕೆ ಹೈಕೋರ್ಟ್ ಸ್ಟೇ ಆದೇಶ ನೀಡಿತು. ಜನವರಿ 2020ರಲ್ಲಿ ಹಿಂದೂ ಸಂಘಟನೆಗಳು ಈ ಸ್ಟೇ ಆದೇಶದ ತೆರವಿಗೆ ಮರಳಿ ಮನವಿ ಸಲ್ಲಿಸುತ್ತಾರೆ. ಅಂದರೆ 2019ರಲ್ಲಿ ರಾಮ ಮಂದಿರದ ಪರವಾದ ತೀರ್ಪು ಬಂದ ನಂತರ ಹಿಂದೂ ಧಾರ್ಮಿಕ ಮುಖಂಡರಲ್ಲಿ ಹೊಸ ಹುಮ್ಮಸ್ಸು ಮೂಡುತ್ತದೆ. ಜ್ಞಾನವಾಪಿ ವಿವಾದಕ್ಕೆ 22 ವರ್ಷಗಳ ನಂತರ ಮರು ಜೀವ ಕೊಡಲಾಗುತ್ತದೆ. ಅದೇ ರೀತಿ ಇನ್ನೂ ಅನೇಕ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ. ವಿವಿಧ ಅವಧಿಯಲ್ಲಿ ವಿಚಾರಣೆ ನಡೆಸಲಾಗುತ್ತದೆ. ಅಂತಿಮವಾಗಿ 16, ಮಾರ್ಚ್ 2023ರಂದು ನಾಲ್ವರು ಸ್ವಾಮಿಗಳು ಜ್ಞಾನವಾಪಿ ಮಸೀದಿ ಕೆಳಗಡೆಗೆ ದೇವಸ್ಥಾನ ಇದೆ. ಅದನ್ನು ಪುರಾತತ್ವ ಇಲಾಖೆಯಿಂದ ಸಮೀಕ್ಷೆ ಮಾಡುವುದಕ್ಕೆ ಅನುಮತಿ ಕೊಡಬೇಕು ಎಂದು ಜಿಲ್ಲಾ ನ್ಯಾಯಾಧೀಶರ ಹತ್ತಿರ ಅರ್ಜಿ ಸಲ್ಲಿಸುತ್ತಾರೆ. ಜುಲೈ 21ರಂದು ಮಸೀದಿಯ ಸಮೀಕ್ಷೆ ನಡೆಸಬೇಕೆಂದು ನ್ಯಾಯಮೂರ್ತಿ ಆದೇಶಿಸುತ್ತಾರೆ. ಜುಲೈ 23ರಲ್ಲಿ ಮುಸ್ಲಿಮ್ ಆಡಳಿತ ಮಂಡಳಿ ಈ ಸಮೀಕ್ಷೆಗೆ ಸ್ಟೇ ಕೊಡಬೇಕೆಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ಹಿಂದೂ ಸ್ವಾಮಿಗಳ ಅರ್ಜಿಯನ್ನು ಪುರಸ್ಕರಿಸಿ ಸಮೀಕ್ಷೆ ಮಾಡುವುದಕ್ಕೆ ಪುರಾತತ್ವ ಇಲಾಖೆಗೆ ಅಲಹಾಬಾದ್ ಕೋರ್ಟ್ ಅನುಮತಿ ಕೊಡುತ್ತದೆ. ಕಡೆಗೂ ಸಮೀಕ್ಷೆ ನಡೆದು ಪುರಾತತ್ವ ಇಲಾಖೆ ಅದರ ವರದಿಯನ್ನು ಸಲ್ಲಿಸಿದ ತಕ್ಷಣ ಇತ್ತೀಚೆಗೆ ಉತ್ತರ ಪ್ರದೇಶದ ಮಥುರಾದಲ್ಲಿರುವ, ಶಾಹೀ ದರ್ಗಾ ಮಸೀದಿಯಲ್ಲಿ ಸಮೀಕ್ಷೆ ಮಾಡಬೇಕು ಎಂದು ಕೆಲವು ಹಿಂದೂ ಪರ ಸಂಘಟನೆಗಳು ಅರ್ಜಿ ಸಲ್ಲಿಸುತ್ತವೆ. ಅದಕ್ಕೆ ಅಲಹಾಬಾದ್ ಹೈಕೋರ್ಟ್ ಒಪ್ಪಿಗೆ ಕೊಡುತ್ತದೆ. ಇದನ್ನು ಪ್ರಶ್ನಿಸಿ ತಡೆಯಾಜ್ಞೆಗಾಗಿ ಸುಪ್ರೀಂಕೋರ್ಟ್‌ನಲ್ಲಿ ಮಸೀದಿ ಆಡಳಿತ ಮಂಡಳಿಯವರು ಅರ್ಜಿ ಸಲ್ಲಿಸುತ್ತಾರೆ. ಆದರೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಲು ನಿರಾಕರಣೆ ಮಾಡುತ್ತದೆ. ಈ ಎಲ್ಲಾ ಪ್ರಹಸನಗಳಿಗೂ 2019ರ ರಾಮ ಮಂದಿರ ಪರವಾದ ತೀರ್ಪಿಗೂ ನೇರವಾದ ಸಂಬಂಧಗಳಿವೆ. ಅಂಬೇಡ್ಕರ್ ಹೇಳಿದ ಇತಿಹಾಸವನ್ನು ಅರಿಯದವರು ಇತಿಹಾಸದಿಂದ ಪಾಠ ಕಲಿಯಲು ಸಾಧ್ಯವಿಲ್ಲ ಎನ್ನುವ ಮಾತು ನಿಜವಾಗುತ್ತಿದೆ
ನಮ್ಮ ಮುಂದೆ ಇರುವಂತಹ ಪ್ರಶ್ನೆ. ಯಾಕೆ ಸುಪ್ರೀಂಕೋರ್ಟ್ ಅಲಹಾಬಾದ್ ಹೈಕೋರ್ಟ್ ನೀಡಿರುವ ಅನುಮತಿಗೆ ತಡೆಯಾಜ್ಞೆ ನೀಡಲು ನಿರಾಕರಣೆ ಮಾಡುತ್ತಿದೆ? ಈ ತಡೆಯಾಜ್ಞೆ ಕೋರಿ ಮಸೀದಿ ಆಡಳಿತ ಮಂಡಳಿಗಳು 1991ರ ಪೂಜಾ ಸ್ಥಳಗಳ (ವಿಶೇಷ ಪ್ರಾವಿಜನ್) ಕಾಯ್ದೆಯನ್ನು ಮಾನದಂಡವಾಗಿ ಬಳಸಿಕೊಂಡು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುತ್ತವೆ, ಅಲಹಾಬಾದ್ ಹೈಕೋರ್ಟ್‌ಗೆ ತಕರಾರು ಸಲ್ಲಿಸುತ್ತವೆೆ. ಈ 1991ರ ಪೂಜಾ ಸ್ಥಳಗಳ (ವಿಶೇಷ ಪ್ರಾವಿಜನ್) ಕಾಯ್ದೆಯು 15 ಆಗಸ್ಟ್ 1947, ಮಧ್ಯರಾತ್ರಿ 12 ಗಂಟೆ ಮುಂಚೆ ಭಾರತದಲ್ಲಿ ಯಾವ ಸ್ಟೇಟಸ್ ಇತ್ತೋ ಅದನ್ನು ಕಾಯ್ದುಕೊಳ್ಳಬೇಕು ಎಂದು ವಿವರಿಸುತ್ತದೆ. ಈ ಕಾಯ್ದೆಯ ಅನುಸಾರ 15 ಆಗಸ್ಟ್ 1947 ಮಧ್ಯರಾತ್ರಿ 12 ಗಂಟೆವರೆಗೆ ಅಲ್ಲಿ ದೇವಸ್ಥಾನ ಇದ್ದರೆ ದೇವಸ್ಥಾನ, ಮಸೀದಿ ಇದ್ದರೆ ಮಸೀದಿ ಅಥವಾ ದರ್ಗಾ ಇದ್ದರೆ ದರ್ಗಾ, ಚರ್ಚ್ ಇದ್ದರೆ ಚರ್ಚ್, ಗುರುದ್ವಾರ ಇದ್ದರೆ ಗುರುದ್ವಾರ, ಬೌದ್ಧ ಮಂದಿರ ಇದ್ದರೆ ಬೌದ್ಧ ಮಂದಿರವನ್ನೇ ಉಳಿಸಿಕೊಳ್ಳಬೇಕು, ರಕ್ಷಿಸಬೇಕು, ಅವುಗಳ ಸ್ಟೇಟಸ್ ಕೋ ಬದಲಾಯಿಸುವಂತಿಲ್ಲ. ಈ ಕಾಯ್ದೆಯ ರೆಫರೆನ್ಸ್‌ನಲ್ಲಿ ಮಸೀದಿ ಆಡಳಿತ ಮಂಡಳಿಗಳು ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡುತ್ತವೆ. ಕಾಯ್ದೆಯ ಪ್ರಕಾರ 15 ಆಗಸ್ಟ್ 1947ರಲ್ಲಿ ಇವೆಲ್ಲವೂ ಮಸೀದಿ ಆಗಿರುವುದರಿಂದ ನೀವು ಸಮೀಕ್ಷೆ ನಡೆಸುವುದು ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡುತ್ತವೆ. ಆದರೆ ಅಲಹಾಬಾದ್ ಹೈಕೋರ್ಟ್ ಆ ಪ್ರಶ್ನೆಯನ್ನು ತಳ್ಳಿಹಾಕಿ ಪುರಾತತ್ವ ಇಲಾಖೆಗೆ ಸಮೀಕ್ಷೆಗಾಗಿ ಅನುಮತಿ ಕೊಡುತ್ತದೆ. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಹೋದಾಗ, ಸುಪ್ರೀಂ ಕೋರ್ಟ್ ಈ ಮೇಲಿನಂತೆ ಶಾಹೀ ಮಸೀದಿ ಸಮೀಕ್ಷೆಗೂ ತಡೆಯಾಜ್ಞೆ ಕೊಡುವುದಕ್ಕೆ ನಿರಾಕರಿಸುತ್ತದೆ ಮತ್ತು ಗ್ಯಾನವಾಪಿ ಮಸೀದಿಗೂ ತಡೆಯಾಜ್ಞೆ ಕೊಡುವುದಕ್ಕೆ ನಿರಾಕರಿಸತ್ತದೆ.
ಆದರೆ ಸುಪ್ರೀಂಕೋರ್ಟ್ ಏತಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲಿಕ್ಕೆ ನಿರಾಕರಿಸುತ್ತಾ ಇದೆ? ಇದರ ಕಾರಣವೂ ಕುತೂಹಲವಾಗಿದೆ. 2020ರಲ್ಲಿ ಬಿಜೆಪಿ ಮತ್ತು ಅಶ್ವಿನಿ ಕುಮಾರ್ ಉಪಾಧ್ಯಾಯರವರು ಈ 1991 ಪೂಜಾ ಸ್ಥಳಗಳ (ವಿಶೇಷ ಪ್ರಾವಿಜನ್) ಕಾಯ್ದೆಯ ಅರ್ಹತೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ತಕಾರರು ಅರ್ಜಿ ಸಲ್ಲಿಸುತ್ತಾರೆ. ಆದರೆ 2020ರಿಂದ ಇಲ್ಲಿಯವರೆಗೂ ಇವರ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ತ್ವರಿತಗತಿಯ ವಿಚಾರಣೆ ನಡೆಸಲಿಲ್ಲ. ಇದುವರೆಗೂ ಪ್ರಗತಿ ಕಂಡುಬರುತ್ತಿಲ್ಲ. ಸುಪ್ರೀಂ ಕೋರ್ಟ್ ಈ ಅರ್ಜಿಗಳಿಗೆ ಪ್ರತಿಕ್ರಿಯೆ ಕೊಡಬೇಕು ಎಂದು ಕೇಂದ್ರ ಸರಕಾರಕ್ಕೆ ಕೇಳಿದೆ, ಇದುವರೆಗೂ ಕೇಂದ್ರ ಸರಕಾರ ಪ್ರತಿಕ್ರಿಯೆ ಸಲ್ಲಿಸಿಲ್ಲ. ಈ ಅರ್ಜಿಯು 2020ರಲ್ಲಿ ವಿಚಾರಣೆಗೆ ಬಂದರೆ, ನಂತರ 15 ಮಾರ್ಚ್ 2021ರಲ್ಲಿ ಒಮ್ಮೆ ವಿಚಾರಣೆ ನಡೆಯುತ್ತದೆ, ವಿಚಾರಣೆ ಪ್ರಾರಂಭಿಸಿ ಒಂದು ವರ್ಷದ ನಂತರ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನೋಟೀಸ್ ಕಳಿಸುತ್ತದೆ. ಕೇಂದ್ರ ಸರಕಾರ ಪ್ರತಿಕ್ರಿಯೆ ಕೊಡುವುದಿಲ್ಲ. ಸೆಪ್ಟಂಬರ್ 2022ರಲ್ಲಿ ಮತ್ತೊಮ್ಮೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಎರಡು ವಾರಗಳ ಗಡುವು ಕೊಡುತ್ತದೆ. ನಂತರವೂ ಕೇಂದ್ರ ಸರಕಾರ ತನ್ನ ಪ್ರತಿಕ್ರಿಯೆ ಕಳಿಸುವುದಿಲ್ಲ, 31 ನವೆಂಬರ್ 2023ರಲ್ಲಿ ಕೊನೆ ವಿಚಾರಣೆ ಆಗುತ್ತದೆ. 17 ಜನವರಿ 2024ಕ್ಕೆ ಮುಂದಿನ ವಿಚಾರಣೆ ನಿಗದಿಯಾಗುತ್ತದೆ. ಸುಪ್ರೀಂ ಕೋರ್ಟ್ ತ್ವರಿತಗತಿಯಲ್ಲಿ ಈ 1991 ಕಾಯ್ದೆಯನ್ನು ಆಧರಿಸಿದ ಅರ್ಜಿಗಳ ವಿಚಾರಣೆ ಮಾಡಬೇಕಿತ್ತು, ಆದರೆ ಮಾಡುತ್ತಿಲ್ಲ. ಈ 1991 ಪೂಜಾ ಸ್ಥಳಗಳ (ವಿಶೇಷ ಪ್ರಾವಿಜನ್) ಕಾಯ್ದೆಯನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಕಾರಣದಿಂದ ಮೇಲಿನ ಕಾಯ್ದೆ ಆಧರಿಸಿ ಮಸೀದಿಗಳ ಸಮೀಕ್ಷೆಗೆ ತಡೆಯಾಜ್ಞೆ ಕೊಡಬೇಕೆಂದು ಮಸೀದಿ ಆಡಳಿತ ಮಂಡಳಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ಎಂಥ ವೈರುಧ್ಯಗಳ ಜಗತ್ತಿನಲ್ಲಿದ್ದೇವೆ? ಈ ನೆಪವನ್ನು ಮುಂದಿಟ್ಟುಕೊಂಡು ಅಲಹಾಬಾದ್ ಹೈಕೋರ್ಟ್ ಮಸೀದಿಗಳಲ್ಲಿ ಸಮೀಕ್ಷೆ ಮಾಡಲು ಪುರಾತತ್ವ ಇಲಾಖೆಗೆ ಪರವಾನಿಗೆ ಕೊಟ್ಟಿದೆ.
ಇದನ್ನೇ ನವೆಂಬರ್ 26, 1949ರಂದು ಸಂವಿಧಾನ ಸಮರ್ಪಣಾ ಸಭೆಯಲ್ಲಿ ಮಾತನಾಡಿದ ಅಂಬೇಡ್ಕರ್ ‘‘ಭಾರತ ವೈರುಧ್ಯಗಳ ಕಾಲಕ್ಕೆ ಹೆಜ್ಜೆ ಇಡುತ್ತಿದೆ’’ ಎಂದು ವಿವರಿಸಿದ್ದರು. ಸುಪ್ರೀಂ ಕೋರ್ಟೇ ತ್ವರಿತಗತಿಯಲ್ಲಿ ವಿಚಾರಣೆ ಮಾಡುತ್ತಿಲ್ಲ, ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರಣೆ ಇದೆಯೆಂದು ಹೇಳಿ 1991 ಕಾಯ್ದೆ ಪ್ರಕಾರ ಅಲಹಾಬಾದ್ ಹೈಕೋರ್ಟ್ ಸಮೀಕ್ಷೆಯನ್ನು ನಿಲ್ಲಿಸುತ್ತಿಲ್ಲ. ಅಂದರೆ ಮತ್ತೊಂದು ರಾಮ ಜನ್ಮ ಭೂಮಿಯ ಚಳವಳಿಗೆ ಭಾರತ ಸಜ್ಜಾಗುತ್ತಿದೆ.
30 ವರ್ಷಗಳ ಆ ಚಳವಳಿಯಿಂದ ನಡೆದ ಹಿಂಸೆ, ಹತ್ಯೆಗಳು, ಸೆಕ್ಯುಲರಿಸಂಗೆ ಕೊಟ್ಟ ಹೊಡೆತಗಳ ಫಲಿತಾಂಶದಂತೆ ಜನವರಿ 22ರಂದು ರಾಮ ಮಂದಿರ ಉದ್ಘಾಟನೆ ನಡೆಯುತ್ತಿದೆ, ಧರ್ಮ ನಿರಪೇಕ್ಷತೆಯ ತತ್ವವನ್ನು ಗಾಳಿಗೆ ತೂರಿ, ಹಿಂದುತ್ವದ ಮುಖವಾಡ ತೊಟ್ಟು ಬ್ರಾಹ್ಮಣೀಕರಣದ ಆಧಾರದಲ್ಲಿ ಪೂಜೆಗಳು ನಡೆಯುತ್ತದೆ. ಸಂವಿಧಾನದ ಮೂಲಭೂತ ತತ್ವಗಳಿಗೆ ಧಕ್ಕೆ ಆಗುತ್ತಿದೆ. ಇದಕ್ಕೆ 2019ರ ಸುಪ್ರೀಂ ಕೋರ್ಟ್ ತೀರ್ಪು ರಕ್ಷಾ ಕವಚದಂತೆ ಬಳಕೆಯಾಗುತ್ತಿದೆ.
ಈಗ ಇದರ ಮುಂದುವರಿಕೆಯಾಗಿ ಉತ್ತರ ಪ್ರದೇಶದ ಮಥುರಾದ ಶಾಹೀ ಮಸೀದಿ, ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ಮಾಡುವುದಕ್ಕೆ ಅನುಮತಿ ಕೊಡಲಾಗುತ್ತಿದೆ, ಈ ಎಲ್ಲಾ ಹಿನ್ನೆಲೆಯಲ್ಲಿ ಈ ಸಮೀಕ್ಷೆಗಳ ಕುರಿತು ಯಾವ ರೀತಿಯಲ್ಲಿ ತೀರ್ಪು ಬರಬಹುದು? ಆಸಕ್ತಿಯ ವಿಚಾರವೆಂದರೆ 2019ರಲ್ಲಿ ರಾಮ ಮಂದಿರ ಪರವಾಗಿ ತೀರ್ಪು ಕೊಟ್ಟಂತ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠದಲ್ಲಿನ ಐವರು ನ್ಯಾಯಮೂರ್ತಿಗಳಲ್ಲಿ ಈಗಿನ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಸಹ ಒಬ್ಬರಾ ಗಿದ್ದರು. ಮುಖ್ಯವಾಗಿ ಆ ತೀರ್ಪು ಕೆಲವು ವ್ಯಾಖ್ಯಾನಗಳನ್ನು ಮಾಡಿದೆ. ತೀರ್ಪು ಪ್ರಕಟಿಸಿದ ಸಂವಿಧಾನ ಪೀಠವು ಪೂಜಾ ಸ್ಥಳಗಳ (ವಿಶೇಷ ಪ್ರಾವಿಸನ್) ಕಾಯ್ದೆ 1991 ಸೆಕ್ಯುಲರ್ ತತ್ವಗಳನ್ನು ಆಧರಿಸಿದೆ. ಇದನ್ನು ರಕ್ಷಿಸುತ್ತದೆ ಎಂದು ಹೇಳುತ್ತಾ 1994ರ ಇಸ್ಮಾಯಿಲ್ ಫಾರೂಕಿ ಇತರರು ವರ್ಸಸ್ ಕೇಂದ್ರ ಸರಕಾರ ಮತ್ತು ಇತರರು ಪ್ರಕರಣದ ವಿಚಾರಣೆಯನ್ನು ಉದಾಹರಿಸುತ್ತಾ ಇತಿಹಾಸ ಮತ್ತು ಅದರ ತಪ್ಪುಗಳನ್ನು ಬಳಸಿಕೊಂಡು ವರ್ತಮಾನ ಮತ್ತು ಭವಿಷ್ಯವನ್ನು ಶೋಷಣೆ ಮಾಡುವಂತಿಲ್ಲ, ಮೊಗಲರ ಕಾಲದ ದಾಳಿಗಳನ್ನು ಈಗ ಸರಿಪಡಿಸುವಂತಹ ಕೆಲಸಗಳಿಗೆ ಪುರಸ್ಕರಿಸಬಾರದು ಎಂದು ಹೇಳುತ್ತಾರೆ. ಆ ತೀರ್ಪಿನಲ್ಲಿ ಸಹಿ ಮಾಡಿರುವವರಲ್ಲಿ ಈಗಿನ ನ್ಯಾಯಮೂರ್ತಿ ಚಂದ್ರಚೂಡ್ ಸಹ ಇರುತ್ತಾರೆ. ಆದರೆ ಈಗ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು 1991ರ ಕಾಯ್ದೆಗೆ ತಕರಾರು ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಮಾತನಾಡುತ್ತ ‘‘13, ಅಕ್ಟೋಬರ್ 2021ರಂದು ಆ ಕಾಯ್ದೆಯು ಯಥಾಸ್ಥಿತಿ ಕಾಪಾಡಬೇಕು, ಪೂಜಾ ಸ್ಥಳಗಳನ್ನು ಬದಲಿಸಬಾರದು ಎಂದಿರುವುದು ನಿಜ. ಆದರೆ ಈ ಸ್ಥಳಗಳನ್ನು ಸಮೀಕ್ಷೆ ಮಾಡಬಾರದು ಎಂದು ಅರ್ಥವಲ್ಲ’’ ಎಂದು ಹೇಳುತ್ತಾರೆ. ಏನಿದರರ್ಥ?
ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಕಡೆಗಳಲ್ಲಿ ಇರುವಂತಹ ಮಸೀದಿಗಳ ಅಡಿಯಲ್ಲಿ ದೇವಸ್ಥಾನ ಇದೆ ಅಂತ ತಕರಾರು ಅರ್ಜಿ ಸಲ್ಲಿಸಿದರೆ ಯಥಾಸ್ಥಿತಿ ಅರಿಯಲು ಪುರಾತತ್ವ ಇಲಾಖೆಗೆ ಪರವಾನಿಗೆ ಕೊಡುವುದು ತಪ್ಪಾಗುವುದಿಲ್ಲ. ಮುಂದೆ ಅವುಗಳನ್ನು ಧ್ವಂಸ ಮಾಡುವುದೂ ಮಾನ್ಯವಾಗುತ್ತದೆ. ಇದೇ ರೀತಿಯ ವಾದವನ್ನು ಮುಂದಿಟ್ಟುಕೊಂಡು ಉತ್ತರ ಭಾರತದ ಅನೇಕ ದೇವಸ್ಥಾನಗಳು ಬೌದ್ಧ ಧಾರ್ಮಿಕ ಕೇಂದ್ರಗಳಾಗಿದ್ದವು, ಬೌದ್ಧರ ಪೂಜಾ ಸ್ಥಳಗಳಾಗಿದ್ದವು ಎನ್ನುವ ಇತಿಹಾಸವನ್ನು ನೆಪ ಮಾಡಬಹುದಲ್ಲವೇ? ಇದನ್ನು ಆಧರಿಸಿ ದೇವಸ್ಥಾನಗಳನ್ನು ಕೆಡವಲು ಸಾಧ್ಯವೇ? ಇದು ವಿಭಿನ್ನ ಧರ್ಮಗಳ ನಡುವೆ ಹಗೆತನಕ್ಕೆ ಕಾರಣವಾಗುವುದಿಲ್ಲವೇ?, ಅರಾಜಕತೆಗೆ ಕಾರಣವಾಗುತ್ತದೆಯಲ್ಲವೇ? ಪೂಜಾ ಸ್ಥಳಗಳ (ವಿಶೇಷ ಪ್ರಾವಿಸನ್) 1991 ಕಾಯ್ದೆಯ ಮಹತ್ವವೇನು, ಅದನ್ನು ಅಪ್ರಸ್ತುತ ಗೊಳಿಸಲಾಗುತ್ತಿದೆಯೇ? ಎನ್ನುವ ಪ್ರಶ್ನೆಗಳಿಗೆ ಉತ್ತರ ಕೊಡಬೇಕಿರುವುದು ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ. ಅದರೆ ಈ ಆಧಾರಸ್ತಂಭಗಳು ಪ್ರಜಾಪ್ರಭುತ್ವದ ತಳಹದಿಯನ್ನು ಶಿಥಿಲಗೊಳಿಸುತ್ತಿವೆ ಎನ್ನುವುದು ಅಘಾತಕರ ಸಂಗತಿ.
ಪ್ರಜೆಗಳೇನು ಮಾಡಬೇಕು? ಈ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ.