ಕಟಪಾಡಿ ಮಟ್ಟುಗದ್ದೆಯಲ್ಲಿ ಹಳದಿ ಬಣ್ಣದ ಕಲ್ಲಂಗಡಿಯ ಪ್ರಯೋಗ !
ಕೃಷಿ ಪ್ರಯೋಗದಲ್ಲಿ ಯಶಸ್ವಿಯಾದ ಫುಟ್ಬಾಲ್ ಆಟಗಾರ ಯಶೋಧರ

ಉಡುಪಿ: ಮುಂಬೈಯಲ್ಲಿ ಫುಟ್ಬಾಲ್ ಆಟಗಾರನಾಗಿ ಮಿಂಚಿದ್ದ ಯುವಕ ಇದೀಗ ತನ್ನ ತಾಯ್ನೆಲದಲ್ಲಿ ಪ್ರಯೋಗ ಶೀಲ ಕೃಷಿಕರಾಗಿ ಯಶಸ್ವಿ ಸಾಧಿಸಿದ್ದಾರೆ. ಆ ಮೂಲಕ ಇಚ್ಛಾಶಕ್ತಿ ಇದ್ದರೆ ಯಾವುದೇ ಸಾಧನೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇದು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಮಟ್ಟು ಅಂಬಾಡಿಯ ಯಶೋಧರ ಕೋಟ್ಯಾನ್‌ರ ಸಾಧನೆಯ ಕಥೆ. ಇವರು ಮಟ್ಟು ನೆಲದಲ್ಲಿ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಬೆಳೆಯುವ ಮೂಲಕ ಪ್ರಯೋಗಶೀಲ ಕೃಷಿಕರಾಗಿ ಯಶಸ್ಸು ಸಾಧಿಸಿದ್ದಾರೆ.
ಫುಟ್ಬಾಲ್ ಆಟಗಾರ: ಯಶೋಧರ ಕೋಟ್ಯಾನ್ ಮಟ್ಟು ಬಾಲ್ಯದಲ್ಲಿ ಮುಂಬೈಯಲ್ಲಿ ಶಿಕ್ಷಣ ಪಡೆದು ಅಲ್ಲೇ ಉದ್ಯೋಗ ಮಾಡುತ್ತಿದ್ದರು. ಫುಟ್ಬಾಲ್ ದಂತಕತೆಯಾಗಿದ್ದ ಮರಡೋನಾ ಆಟಕ್ಕೆ ಮರುಳಾಗಿ ಫುಟ್ಬಾಲ್ ಸಾಧಕನಾಗುವ ಕನಸು ಹೊತ್ತ ಇವರು, ಕ್ರೀಡೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದರು.
ಮಹಾರಾಷ್ಟ್ರದ ಬಾಂಬೆ ಪೋರ್ಟ್ ಫುಟ್ಬಾಲ್ ಜೂನಿಯರ್ ತಂಡವನ್ನು ಪ್ರತಿನಿಧಿಸಿದ್ದ ಇವರು ಫಾರ್ವರ್ಡ್ ಆಟಗಾರನಾಗಿ ಮಿಂಚಿದ್ದರು. ಮುಂದೆ ಅನಿವಾರ್ಯ ಕಾರಣಕ್ಕೆ ತಾಯ್ನಾಡಿಗೆ ಮರಳಿದ ಯಶೋಧರ, ಜೀವನಕ್ಕಾಗಿ ಕೃಷಿಯನ್ನೇ ನೆಚ್ಚಿಕೊಂಡರು. ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದ ಮಟ್ಟು ಪ್ರದೇಶದಲ್ಲಿ ಇವರು ಕೃಷಿಯಲ್ಲಿ ಮಾಡಿರುವ ಸಾಧನೆ ಗಮನಾರ್ಹ.
ಸ್ವಾವಲಂಬಿ ಬದುಕು: ಕೃಷಿಯಲ್ಲಿ ತೊಡಗಿಸಿಕೊಂಡ ಯಶೋಧರ ಕೋಟ್ಯಾನ್, ಸ್ವಾವ ಲಂಬಿ ಬದುಕು ಕಟ್ಟಿಕೊಳ್ಳಲು ಕೃಷಿ ಕ್ಷೇತ್ರವನ್ನು ಬಳಸಿಕೊಂಡರು. ಅವರು ಈ ಬಾರಿ 35 ಸೆಂಟ್ಸ್ ಗದ್ದೆಯಲ್ಲಿ ಆರೋಹಿ ಎಫ್-1 ಹೈಬ್ರಿಡ್ ತಳಿಯ ಒಳಭಾಗದಲ್ಲಿ ಹಳದಿ ಬಣ್ಣ ಇರುವ ಕಲ್ಲಂಗಡಿ ಹಣ್ಣು ಗಳನ್ನು ಬೆಳೆದಿದ್ದಾರೆ.
ಈ ಬಾರಿಯ ಬೇಸಿಗೆಯ ಬಿಸಿಲ ಬೇಗೆಯನ್ನು ತೀರಿಸಲು ಇವರು ಬೆಳೆದ ಹಳದಿ ಬಣ್ಣದ ಕಲ್ಲಂಗಡಿ ಹಣ್ಣು ಮಾರುಕಟ್ಟೆ ಪ್ರವೇಶಿಸುತ್ತಿದೆ. 100 ಗ್ರಾಂ. ಬಿತ್ತನೆ ಬೀಜಕ್ಕೆ 12,500 ರೂ. ಮೌಲ್ಯ ಇರುವ ಆರೋಹಿ ಎಫ್ 1 ಹೈಬ್ರಿಡ್ ತಳಿಯ ಕಲ್ಲಂಗಡಿ ಹಣ್ಣಿನ ಬೀಜವನ್ನು ಇವರು ಆನ್‌ಲೈನ್ ಮೂಲಕ ಖರೀದಿಸಿದರು.
ಇವರು ಸುಮಾರು 15 ಸಾವಿರ ರೂ. ವೆಚ್ಚದಲ್ಲಿ ಗದ್ದೆಯನ್ನು ಸಿದ್ಧಪಡಿಸಿದ್ದು, ಸಾಕಷ್ಟು ಆರೈಕೆಯ ಮೂಲಕ ಸುಮಾರು 1.5ರಿಂದ 2 ಟನ್ ಆರೋಹಿ ಎಫ್-1 ಹೈಬ್ರಿಡ್ ತಳಿಯ ಕಲ್ಲಂಗಡಿ ಯನ್ನು ಪಡೆಯುವ ನಿರೀಕ್ಷೆಯನ್ನು ಹೊಂದಿದ್ದಾರೆ. 75 ದಿನಗಳಲ್ಲಿ ಹಣ್ಣಾಗಿದ್ದು, ಮಾಮೂಲಿ ಕಲ್ಲಂಗಡಿ ಹಣ್ಣಿಗಿಂತ ಹೆಚ್ಚು ಸ್ವಾದಭರಿತವಾಗಿದೆ.
ಈ ಹಣ್ಣಿಗೆ ಮಟ್ಟು, ಕಟಪಾಡಿ, ಉಡುಪಿ ಸಹಿತ ಸ್ಥಳೀಯವಾಗಿಯೇ ಹೆಚ್ಚು ಬೇಡಿಕೆ ಇದ್ದು, ಕೆ.ಜಿ. ಒಂದಕ್ಕೆ ಸುಮಾರು 50ರಿಂದ 55 ರೂ.ನಂತೆ ಮಾರಾಟ ಮಾಡುವ ವಿಶ್ವಾಸವನ್ನು ಯಶೋಧರ ಕೋಟ್ಯಾನ್ ವ್ಯಕ್ತಪಡಿಸಿದ್ದಾರೆ. ಮೊದಲ ಪ್ರಯೋಗದಲ್ಲೇ ಯಶಸ್ಸು ಸಾಧಿಸಿದ್ದು, ಇವರು ಬೆಳೆದ ಒಂದು ಕಲ್ಲಂಗಡಿ ಹಣ್ಣು ಸುಮಾರು 4ರಿಂದ 5 ಕೆಜಿ ತೂಗುತ್ತದೆ.
ಸಮಗ್ರ ಕೃಷಿಕ: ಕಳೆದ ಸುಮಾರು 17 ವರ್ಷಗಳಿಂದ ಪ್ರಯೋಗಶೀಲ ಕೃಷಿಗೆ ಮುನ್ನುಡಿ ಬರೆಯುತ್ತ ಕೃಷಿ ಚಟುವಟಿಕೆ ನಿರತನಾಗಿದ್ದ ಯಶೋಧರ ಕೋಟ್ಯಾನ್ ಮೂರು ಎಕರೆ ಜಮೀನಿನಲ್ಲಿ ಭತ್ತದ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಸ್ವಂತ ಜಮೀನನ್ನು ಹೊಂದಿಲ್ಲ. ಕೃಷಿ ಯಲ್ಲಿನ ಇವರ ಆಸಕ್ತಿ ಕಂಡ ಸುತ್ತ ಮುತ್ತಲು ಹಡಿಲು ಬಿಟ್ಟಿದ್ದ ಗದ್ದೆಗಳ ಮಾಲಕರು ತಮ್ಮ ಗದ್ದೆಗಳನ್ನು ಹೆಚ್ಚಿನ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕೃಷಿ ಚಟುವಟಿಕೆ ನಡೆಸಲು ಯಶೋಧರರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅದೇ ರೀತಿ ಕುಟುಂಬದವರ ಗದ್ದೆಯಲ್ಲೂ ಇವರು ಕೃಷಿ ಮಾಡುತ್ತಿದ್ದಾರೆ.
ಇವರು ಕಲ್ಲಂಗಡಿಯ ಜೊತೆಗೆ ಸುಮೋ ತಳಿಯ ಕಲ್ಲಂಗಡಿ ಬೆಳೆ, ಮಟ್ಟುಗುಳ್ಳ, ಸೌತೆಕಾಯಿ, ಮೂಲಂಗಿ, ಹಾಲು ಬೆಂಡೆಕಾಯಿ ಸಹಿತ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೆ ಮೆಣಸು, ಟೊಮೆಟೋ, ಗೆಣಸು, ಹರಿವೆ ಮತ್ತು ನೆಲ ಕಡಲೆ ಬೆಳೆಯೂ ಕಂಡು ಬರುತ್ತಿದೆ. ಇವರು ಒಂದು ಎಕರೆ ಪ್ರದೇಶದಲ್ಲಿ ಮಟ್ಟುಗುಳ್ಳವನ್ನು ಬೆಳೆದು ಸಮಗ್ರ ಕೃಷಿಕನಾಗಿ ಮೂಡಿಬಂದಿದ್ದಾರೆ.
ಈ ಬಾರಿಯ ಕಲ್ಲಂಗಡಿ ಬೆಳೆಗೆ ಗೊಬ್ಬರ, ಮಲ್ಚಿಂಗ್ ಶೀಟ್, ಕೃಷಿ ಕಾರ್ಮಿಕರ ಬಳಕೆ ಸಹಿತ ಸುಮಾರು 20 ಸಾವಿರ ರೂ.ನಷ್ಟು ಹಣವನ್ನು ಎರವಲು ಕೃಷಿ ಗದ್ದೆಯಲ್ಲಿ ತೊಡಗಿಸಿ ಬೆಳೆದಿದ್ದೇನೆ. ಹೊಸ ಪ್ರಯೋಗದಿಂದ ಈ ಬಾರಿ ಉತ್ತಮ ಇಳುವರಿ ಪಡೆದಿದ್ದೇನೆ. ಈ ಕೃಷಿ ನನಗೆ ಲಾಭದಾಯಕವೂ ಆಗಲಿದೆ. ಮುಂದಿನ ವರ್ಷದಲ್ಲಿ ಇತರ ಗದ್ದೆಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಇರಾದೆಯನ್ನು ಹೊಂದಿದ್ದೇನೆ
-ಯಶೋಧರ ಕೋಟ್ಯಾನ್ ಮಟ್ಟು, ಕೃಷಿಕ
ಕಾಡುಪ್ರಾಣಿಗಳ ಹಾವಳಿ, ಮಳೆ ಹಾನಿ
ಕಾಡುಪ್ರಾಣಿ ಹಾಗೂ ಪಕ್ಷಿಗಳ ಹಾವಳಿಯಿಂದ ಕೃಷಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಮುಳ್ಳುಹಂದಿಗಳು ಗದ್ದೆಯಲ್ಲಿನ ಬೆಳೆಯನ್ನು ಹಾಳು ಮಾಡುತ್ತಿವೆ. ನವಿಲಿನ ಉಪಟಳವೂ ಹೆಚ್ಚಿದೆ ಎಂದು ಯಶೋಧರ ಕೋಟ್ಯಾನ್ ಮಟ್ಟು ಕೃಷಿಗೆ ಆಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಎರಡು ದಿನಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ಎಲ್ಲಾ ತಳಿಯ ತರಕಾರಿಗಳು ಸ್ವಲ್ಪ ಮಟ್ಟಿನ ಹಾನಿಗೀಡಾಗಿವೆ. ಫಸಲು ಬಿಡುವ ಸಂದರ್ಭ ಸಣ್ಣ ಕಾಯಿಯಲ್ಲೇ ಮಿಡಿ ಉದುರಲು ಶುರುವಾಗಿತ್ತು ಕೆಲ ಗಿಡಗಳು ಬಾಡಿ ಹೋಗಿದ್ದವು ಎನ್ನುತ್ತಾರೆ ಯಶೋಧರ್ ಕೋಟ್ಯಾನ್.