ಮಧ್ಯಮ ವ್ಯಾಯೋಗ, ವಿಷಾದ ಯೋಗ ಹಾಗೂ ನಮ್ಮ ಮಾಧ್ಯಮದ ಮಂದಿಯ ವಿಪರೀತ ಪ್ರಸಂಗಗಳು
ಇಷ್ಟು ದಿನ ನಿರ್ಭೀತ ಪತ್ರಿಕೋದ್ಯಮ ನಡೆಸಿದ ‘ವಾರ್ತಾ ಭಾರತಿ’ ಬಳಗಕ್ಕೆ ಅಭಿನಂದನೆಗಳು. ಈ ನಿಷ್ಪಕ್ಷ ಸೇವೆ ಅನಂತ ಕಾಲಕ್ಕೂ ಮುಂದುವರಿಯಲಿ ಎಂದು ಹಾರೈಸುತ್ತೇನೆ.
ಕೆಲವು ವರ್ಷಗಳ ಹಿಂದೆ, ಕೋವಿಡ್ ಮಹಾಮಾರಿಯಿಂದಾಗಿ ನಾವೆಲ್ಲ ನಮ್ಮ ಸ್ಕ್ರೀನ್‌ಗಳಿಗೆ ಗಂಟು ಬಿದ್ದಾಗ, ಪತ್ರಿಕೋದ್ಯಮ ವಿದ್ಯಾರ್ಥಿಗಳ ಕೌಶಲ್ಯ ವರ್ಧನೆ ಕಾರ್ಯಾಗಾರ ಒಂದರಲ್ಲಿ ನಾನು ಮಾತಾಡಿದೆ.
‘ಪತ್ರಕರ್ತರಿಗೆ ಆತ್ಮ ನಿರೀಕ್ಷಣೆ ಅಗತ್ಯ’ ಎನ್ನುವುದರ ಸುತ್ತ ಮಾತಾಡಿದ ನಾನು, ‘‘ಈ ಕಾಲದಲ್ಲಿ ನಾವೆಲ್ಲ ಮಾಧ್ಯಮದವರು ಜನರಲ್ಲಿ ಧೈರ್ಯ ತುಂಬುವುದನ್ನು ಬಿಟ್ಟು, ಅಂಜಿಕೆಯಿಂದ ಸಾಯುವಂತೆ ಮಾಡುತ್ತಿದ್ದೇವೆ. ‘ಜರಿ ಕಂಡರೆ ಹೆದರುವವರ ಮೈ ಮೇಲೆ ಹಾವು ಬಿಟ್ಟ ಹಾಗೆ’ ಆ ರೋಗದ ಭೀತಿಯನ್ನು ಮುಗ್ಧರ ಮನದಲ್ಲಿ ಬಿತ್ತುತ್ತಾ ಇದ್ದೇವೆ. ಆ ರೋಗ ಇರುವುದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ ಎನ್ನುವಂತೆ ಬಿಂಬಿಸಿದ್ದೇವೆ. ನಮ್ಮ ಬಾಳ ಬಟ್ಟೆಯನ್ನು ಅರಿವಿನಿಂದ ಬೆಳಗುವುದನ್ನು ಬಿಟ್ಟು, ಇರುವ ದೀಪಗಳನ್ನೆಲ್ಲ ಆರಿಸುತ್ತಾ ಇದ್ದೇವೆ. ಜಮೀನಿನಲ್ಲಿ ಹಲ್ಲಿಲ್ಲದ ಹಾವು ಕಚ್ಚಿದರೂ ಹೆದರಿಕೆಯಿಂದ ಸಾಯುವ ರೈತರು-ರೈತ ಕಾರ್ಮಿಕರಂತೆ, ‘ನಿಮಗೆ ಪಾಸಿಟಿವ್ ಬಂದಿದೆ’ ಅಂತ ಆಸ್ಪತ್ರೆಯಿಂದ ಫೋನ್ ಬಂದರೆ ಸಾಕು, ಜೀವ ಬಿಟ್ಟವರೂ ಇದ್ದಾರೆ. ಇದಕ್ಕೆಲ್ಲ ಕಾರಣ ಬೇಜವಾಬ್ದಾರಿ ಪತ್ರಿಕೋದ್ಯಮ. ನಾವೆಲ್ಲ ನಮ್ಮ ಸಾಮಾಜಿಕ ಜವಾಬ್ದಾರಿ ಮರೆತದ್ದಕ್ಕೆ ಈ ಸ್ಥಿತಿ ಬಂದಿದೆ. ನಾವು ಯಾರ ಪರವಾಗಿಯೂ ಇರಬಾರದು. ತಟಸ್ಥವಾಗಿ ಇರಬೇಕು’’ ಮುಂತಾದ ಮಾತಾಡಿದೆ.
ನಂತರ ಒಬ್ಬ ವಿದ್ಯಾರ್ಥಿನಿ ನನಗೆ ಪ್ರಶ್ನೆ ಕೇಳಿದಳು: ‘‘ಪತ್ರಕರ್ತರು ತಟಸ್ಥ ರಾಗಿರಬೇಕು ಅಂತ ನೀವು ಹೇಳಿದಿರಿ. ಅಂದರೆ ಅವರು ‘ನಿರಪೇಕ್ಷವಾಗಿ - ನಿಷ್ಪಕ್ಷವಾಗಿ ಇರಬೇಕು’ ಎಂದು ಇದರ ಅರ್ಥವೇ? ಹಾಗಿದ್ದರೆ ಅವರು ಬಡವರ-ನೊಂದವರ ಪರವಾಗಿ ಇರಬೇಡವೇ? ಅವರು ತಟಸ್ಥರಾಗಿ ಇದ್ದರೆ ವ್ಯವಸ್ಥೆಯ ಬಲಿಪಶು ಆದ, ಕ್ರೌರ್ಯಕ್ಕೆ ತುತ್ತಾದವರ ಪರವಾಗಿ ಇರುವುದು ಹೇಗೆ ಸಾಧ್ಯ?’’. ‘‘ನನಗಂತೂ ಹಿರಿಯರು ತಟಸ್ಥತನದ ಬಗ್ಗೆ ಹೇಳುವ ಪಾಠಗಳು ಸಂದೇಹ ಹುಟ್ಟಿಸುತ್ತವೆ’’ ಅಂತ ಕೂಡ ಅಂದಳು.
ಆ ಸಕಾರಣ ಸಂದೇಹಕ್ಕೆ ಉತ್ತರವಾಗಿ ನಾನು ‘‘ನಾವು ಕಾರ್ಯಕರ್ತರಲ್ಲ. ಪತ್ರಕರ್ತರು. ನಾವು ಹೊರಗಿನಿಂದ ನಿಂತು ನೋಡುವವರಾಗಬೇಕೇ ಹೊರತು, ಹುದುಗಿಸಿದ ವರದಿಗಾರ (ಎಂಬೆಡೆಡ್ ರಿಪೋರ್ಟರ್) ಆಗಬಾರದು’’ ಎನ್ನುವ ಪತ್ರಿಕೋದ್ಯಮದ ಮೂಲ ಪಾಠ ಆರಂಭಿಸಿ, ನ್ಯೂಯಾರ್ಕ್‌ನ ನಿರುದ್ಯೋಗಿ ಪದವೀಧರನ ಸುದ್ದಿಯ ಕತೆಯೊಂದಿಗೆ ಮುಗಿಸಿದೆ.
ಅದು ಟಿವಿ ಸುದ್ದಿಯ ಶಕೆ ಆರಂಭವಾದಾಗಿನ ಮಾತು. ಆಗ ತಾನೇ ಕೆಲಸ ಕಳೆದುಕೊಂಡ ಯುವಕನೊಬ್ಬ ನ್ಯೂಯಾರ್ಕ್ ಶಹರದ ಪೇಟೆಯ ಮಧ್ಯದಲ್ಲಿ ಬೆಂಕಿ ಹಚ್ಚಿಕೊಂಡು ಜೀವ ಕಳೆದುಕೊಳ್ಳುತ್ತಾನೆ. ಅವನನ್ನು ನೋಡಿದ ಟಿವಿ ಚಾನೆಲ್ ವರದಿಗಾರನೊಬ್ಬ ಆ ಘಟನೆಯ ಚಿತ್ರೀಕರಣ ಮಾಡುತ್ತಾನೆ. ಇದು ದೊಡ್ಡ ಸುದ್ದಿಯಾಯಿತು. ಆ ವರದಿಗಾರ ಅದಕ್ಕಿಂತ ದೊಡ್ಡ ಸುದ್ದಿಗೆ ವಸ್ತುವಾದ. ‘ಆ ವರದಿಗಾರ ತನ್ನ ಕೆಲಸ ಮಾಡಬೇಕಿತ್ತೋ? ಅಥವಾ ಆ ನತದೃಷ್ಟನ ಜೀವ ಉಳಿಸಬೇಕಾಗಿತ್ತೋ’ ಎನ್ನುವುದು ದೊಡ್ಡ ಚರ್ಚೆಗೆ ಕಾರಣವಾಯಿತು. ‘ಸಾಯುತ್ತಿರುವವರನ್ನು ಉಳಿಸುವುದನ್ನು ಬಿಟ್ಟು ಸುದ್ದಿ ಮಾಡುವುದು ಅದೆಂಥ ವೃತ್ತಿ? ಅವನಿಗೆ ಮಾನವೀಯತೆ ಇಲ್ಲವೇ?’ ಎಂದು ಕೆಲವರು ಬೈದರೆ, ‘ಅದೆಲ್ಲಾ ಅವನ ಕೆಲಸ ಅಲ್ಲ. ಅವನನ್ನು ಉಳಿಸಿದ್ದರೆ ಒಬ್ಬ ಉಳಿಯುತ್ತಿದ್ದ. ಸುದ್ದಿ ಮಾಡಿದ್ದಕ್ಕೆ ಇಡೀ ಜಗತ್ತಿನ ತುಂಬ ನಿರುದ್ಯೋಗದ ಸಮಸ್ಯೆ ಚರ್ಚೆಗೆ ಬಂತು. ಅದಕ್ಕೆ ಸರಕಾರಗಳು ಪರಿಹಾರ ಕಂಡುಕೊಳ್ಳುವಂತೆ ಆಯಿತು’ ಎಂದು ಇನ್ನೂ ಕೆಲವರು ವಾದ ಮಾಡಿದರು. ಆ ಪರ-ವಿರೋಧ ವಾದ ಇನ್ನೂ ನಡೆಯುತ್ತಿದೆ, ಅದು ಬೇರೆ ವಿಷಯ.
ಆದರೆ ಆ ವಿದ್ಯಾರ್ಥಿಯ ಮಾತು ಕೇಳಿದಾಗ ನನಗೆ ಮಹಾಭಾರತದಲ್ಲಿನ ಒಂದು ಪ್ರಸಂಗ ನೆನಪಾಯಿತು. ಪಾಂಡವರ ಪರವಾಗಿ ಭೂಮಿ ಕೇಳಲು ಹೋದ ಕೃಷ್ಣನನ್ನು ದುರ್ಯೋಧನ ‘ಪಾಂಡವ ಪಕ್ಷಪಾತಿ’ ಎಂದು ಟೀಕಿಸುತ್ತಾನೆ. ಆದರೆ ಆ ಆರೋಪವನ್ನು ಕೃಷ್ಣ ತಳ್ಳಿ ಹಾಕುವುದಿಲ್ಲ. ‘‘ಹೌದು ನಾನು ಪಾಂಡವ ಪಕ್ಷಪಾತಿ. ಆದರೆ ಅದಕ್ಕೆ ಸಕಾರಣ ಇದೆ. ಅದು ಅವರು ನನ್ನ ಸೋದರತ್ತೆಯ ಮಕ್ಕಳು ಅಂತ ಅಲ್ಲ. ಆದರೆ ಅವರು ಎಲ್ಲ ಕಾಲದಲ್ಲೂ ಧರ್ಮ ಪಾಲನೆ ಮಾಡಿದ್ದಾರೆ, ಅವರಿಗೆ ಅನ್ಯಾಯ ಆದಾಗ ಸಹಿತ ಅವರು ಸತ್ಯವಂತರಾಗಿ ನಡೆದು ಕೊಂಡಿದ್ದಾರೆ, ಅದಕ್ಕೆ’’ ಅಂತ ಕೃಷ್ಣ ಹೇಳುತ್ತಾನೆ.
ಈ ರೀತಿಯ ಸುಧರ್ಮರ ಪಕ್ಷಪಾತದ ಪ್ರಸಂಗ ಏನಾದರೂ ರಾಮಾಯಣ ದಲ್ಲಿ ಬರುತ್ತದೋ ಅಂತ ನಾನು ನೋಡಿದೆ. ಅಂತಹದೇನೂ ನನಗೆ ಕಾಣಲಿಲ್ಲ. ಮಹಾನ್ ಲೌಕಿಕ ಪ್ರಜ್ಞೆ ಹೊಂದಿದ ಸಾಮಾನ್ಯ ಜ್ಞಾನಿ ಶ್ರೀ ಕೃಷ್ಣ ಬಳಸಿದ ಯುದ್ಧ ತಂತ್ರವನ್ನು ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಯಾಕೆ ಬಳಸಲಿಲ್ಲ? ಎಂದು ವಿಚಾರ ಮಾಡಲಿಕ್ಕೆ ಶುರು ಮಾಡಿದೆ.
ಈ ದುರಿತ ಕಾಲದಲ್ಲಿ ನಮ್ಮಲ್ಲಿ ಅನೇಕರು, ಕುರ್ಚಿ ಮೇಲೆ ಕುಳಿತವರ ಪಕ್ಕದಲ್ಲಿ ನಿಂತು ಚಪ್ಪಾಳೆ ಹೊಡೆಯುತ್ತಿದ್ದಾರೆ. ತಮ್ಮ ಕಣ್ಣು ಕಟ್ಟಿಕೊಂಡು ಅವರು ಮಾಡುವ ಕುಯುಕ್ತಿ- ಕಣ್ಕಟ್ಟು ಗಳಿಗೆ ಭಳಿರೆ, ಪರಾಕು ಹೇಳುತ್ತಿದ್ದಾರೆ. ಮಾಧ್ಯಮಗಳಲ್ಲಿ ಅತಿ ಹೆಚ್ಚಿನವರು ಆಡಳಿತಾರೂಢರ ಆಸ್ಥಾನ ವಿದ್ವಾಂಸರಾಗಿ ಬದಲಾಗಿ ಬಿಟ್ಟಿದ್ದಾರೆ. ಅವರೇ ಅರಗಿಸಿಕೊಳ್ಳಲಿಕ್ಕೆ ಆಗದಷ್ಟು ಅವರನ್ನು ಹೊಗಳುತ್ತಿದ್ದಾರೆ.
ಇಂಥವರನ್ನು ಉರ್ದು ಕವಿ ಹಬೀಬ್ ಜಾಲಿಬ್ ತನ್ನ ‘ಮುಷಿರ್’ ಕವನದಲ್ಲಿ ಝಾಡಿಸಿದ್ದಾನೆ. ಸರ್ವಾಧಿಕಾರಿಗಳನ್ನು ‘ಖುದಾ ಕೆ ನೂರ್, ಬಾಷೂರ್ (ದೈವ ಪ್ರಭೆಗಳು, ಪ್ರಮಾಣಿಕರು) ಎಂದು ಬಣ್ಣಿಸುತ್ತೀರಲ್ಲಾ, ಯಾಕೆ? ಅಂತಹವರು ಅಧಿಕಾರದಲ್ಲಿ ಮುಂದುವರಿದರೆ ನೀವೂ ಅವರ ಸಲಹೆಗಾರರಾಗಿ, ಹಿತೈಷಿಗಳಾಗಿ, ಸದಾ ಅಧಿಕಾರದಲ್ಲಿ ಇರಬಹುದು ಎಂತಲೋ?’ ಎಂದು ವ್ಯಂಗ್ಯ ವಾಡುತ್ತಾನೆ.
ಇಂದಿನ ಪತ್ರಿಕೋದ್ಯಮದಲ್ಲಿ ಅಧಿಕಾರಸ್ಥರ ಟೀಕೆ ಟಿಪ್ಪಣಿ ಮಾಡುವುದು, ಅವರ ತಪ್ಪನ್ನು ಎತ್ತಿ ತೋರಿಸುವುದು, ಅತಿ ಅಪರೂಪವಾಗಿ ಹೋಗಿದೆ. ತುಳಿತಕ್ಕೆ ಒಳಗಾದವರ, ಸಂತ್ರಸ್ತರ, ಪತಿತರ, ಬಡವರ-ಅವಕಾಶ ವಂಚಿತರ ಪರ ನಿಲ್ಲುವವರು ಯಾರೂ ಇಲ್ಲವೇ ಎಂದು ಅನ್ನಿಸುತ್ತಿದೆ. ‘ಹೀಗಾದರೆ ಹೇಗೆ? ವರದಿಗಾರರು, ಸಂಪಾದಕರು, ತಾವಾಗಿಯೇ ವಿಶೇಷ ಆಸಕ್ತಿ ವಹಿಸಿ ದೌರ್ಜನ್ಯಕ್ಕೆ ಬಲಿಯಾದವರ ಪರವಾಗಿ ನಿಲ್ಲಬೇಕು. ಇದಕ್ಕೆ ನಾವೆಲ್ಲ ಪಕ್ಷಪಾತಿಗಳಾಗಿರ ಬೇಕು. ಪತ್ರಕರ್ತರು ತಟಸ್ಥರಾದರೆ ಸಾಲದು’ ಎನ್ನುವ ವಾದ ಮೇಲೆ ಬಂದಿದೆ.
ಯಾವಾಗ ವರದಿಗಾರಿಕೆಯ ತಾಟಸ್ಥ್ಯದ ಬಗ್ಗೆಯೇ ಸಂಶಯ ಶುರು ಆಗುತ್ತದೋ, ಅದು ಬಹುಶಃ ಮಾಧ್ಯಮದವರ ಮಂದ್ರಸ್ಥಾಯಿಯ ಮಟ್ಟ. ಅದು ಮತ್ತೆ ಯಾವಾಗಲೂ ಅದಕ್ಕಿಂತ ಕೆಳಗೆ ಹೋಗಲಿಕ್ಕಿಲ್ಲ ಅಂತ ಅನ್ನಿಸುತ್ತದೆ.
ಮಹಾಭಾರತದ ನನ್ನ ಮೆಚ್ಚಿನ ಎರಡು ಕತೆಗಳನ್ನು ಈಗ ಇಲ್ಲಿ ನೋಡೋಣ. ಮಹಾಭಾರತದ ಉಪಕತೆ ಆಧರಿಸಿ ಮಹಾ ಕವಿ ಭಾಸ ಬರೆದ ನಾಟಕ ‘ಮಧ್ಯಮ ವ್ಯಾಯೋಗ’. ಇದರಲ್ಲಿ ಮಾನವ ಮಾಂಸದ ಊಟ ಹುಡುಕುತ್ತಾ ನಡೆದ ಘಟೋತ್ಕಚನ ಕೈಯಲ್ಲಿ ಕುಮಾರ ದಾಸ ಎನ್ನುವ ಬಡ ಬ್ರಾಹ್ಮಣನ ಐದು ಜನರ ಕುಟುಂಬ ಸಿಕ್ಕಿ ಬೀಳುತ್ತದೆ. ‘‘ನಮ್ಮವ್ವ ಹಿಡಿಂಬೆ ಹಸಿದಿದ್ದಾಳೆ. ಅವಳಿಗೆ ಆಹಾರ ಹುಡುಕಲು ನಾನು ಬಂದೆ. ನಿಮ್ಮಲ್ಲಿ ಒಬ್ಬರಾದರೂ ನನ್ನ ಜೊತೆಗೆ ಬಂದರೆ ನಾನು ಉಳಿದ ನಾಲ್ವರನ್ನು ಬಿಟ್ಟು ಬಿಡುತ್ತೇನೆ’’ ಎಂದು ಅಸುರ ಹೇಳುತ್ತಾನೆ.
‘ಯಾರನ್ನು ಕಳಿಸುವುದು ಸೂಕ್ತ ?’ಎಂದು ಚರ್ಚೆ ಮಾಡುವ ಆ ಕುಟುಂಬ ಕೊನೆಗೆ ‘ಹಿರಿಯವನು ಮನೆ ನಡೆಸಲು ಬೇಕು, ಕೊನೆಯವನು ತಾಯಿಯ ಪ್ರೀತಿಯ ಮಗ’ ಎಂದುಕೊಂಡು ನಡುವಿನ ಮಗನನ್ನು ಕಳಿಸಲು ನಿರ್ಧಾರ ಮಾಡುತ್ತದೆ. ಆ ಮಗನನ್ನು ಹೆಸರು ಹಿಡಿದು ಕೂಗಲು ತಂದೆಗೆ ಸಂಕಟ ವಾಗುತ್ತದೆ. ಅವನು ಅವನನ್ನು ‘ಮಧ್ಯಮ’ ಅಂತ ಅಷ್ಟೇ ಕರೆಯುತ್ತಾನೆ. ಇದನ್ನು ಕೇಳಿಸಿಕೊಂಡ ಮಧ್ಯಮ ಪಾಂಡವ ಭೀಮ ‘ತನ್ನನ್ನೇ ಯಾರೋ ಕರೆಯುತ್ತಿದ್ದಾರೆ’ ಎಂದುಕೊಂಡು ಕುಮಾರ ದಾಸನ ಬಳಿ ಬರುತ್ತಾನೆ. ಅವರ ಪಡಿಪಾಟಲು ತಿಳಿದ ಮೇಲೆ, ಅವರನ್ನು ಅಲ್ಲಿಂದ ಪಾರು ಮಾಡಿ ತಾನು ಆ ಅಸುರ ಭೋಜನಕ್ಕೆ ಎಡೆಯಾಗಲು ತಯಾರಾಗುತ್ತಾನೆ. ತನ್ನದೇ ಮಗನಾದ ಘಟೋತ್ಕಚನನ್ನು ಮಲ್ಲ ಯುದ್ಧದಲ್ಲಿ ಸೋಲಿಸಿ ತನ್ನ ಮಡದಿ ಹಿಡಿಂಬೆಯ ಭೇಟಿ ಮಾಡುತ್ತಾನೆ. ನಾಟಕ ನಿರಾತಂಕವಾಗಿ ಮುಗಿಯುತ್ತದೆ.
ಇನ್ನು ಭಗವದ್ ಗೀತೆಯ ವಿಷಾದ ಯೋಗದಲ್ಲಿ ಅರ್ಜುನನಿಗೆ ಅತೀವ ಬೇಸರ ಆಗುತ್ತದೆ. ಶಸ್ತ್ರತ್ಯಾಗ ಮಾಡಿ ದುಃಖಿಸುತ್ತಾನೆ.
‘ನಮ್ಮ ಎದುರಿಗೆ ಇರುವವರೆಲ್ಲ ನಮ್ಮ ಅಣ್ಣ-ತಮ್ಮಂದಿರು, ದೊಡ್ಡಪ್ಪ- ಚಿಕ್ಕಪ್ಪ -ಗುರು-ಹಿರಿಯರು. ಇವರನ್ನು ಕೊಂದರೆ ನಮಗೆ ಪಾಪ ತಟ್ಟದೆ ಇರುತ್ತದೆಯೇ?’ ‘ಅವರ ತಪ್ಪು ಇದ್ದರೂ, ಅವರು ನಮ್ಮ ಮೇಲೆ ದಾಳಿ ಮಾಡಿದರೂ ಕೂಡ ನಾನು ಅವರ ಜೊತೆ ಯುದ್ಧ ಮಾಡಲಾರೆ. ಅವರನ್ನು ಕೊಂದು ಗಳಿಸಿದ ರಾಜ್ಯವನ್ನು ಆಳಿ ಸುಖ ಪಡುವುದು ಎಂತು?’ ಎಂದು ಜಗನ್ ನಿಯಾಮಕ ಸಾರಥಿ ಕೃಷ್ಣನಲ್ಲಿ ಬೇಡಿಕೊಳ್ಳುತ್ತಾನೆ. ಆನಂತರ ಭಗವಂತ ಅರ್ಜುನನಿಗೆ ನಿತ್ಯ ನ್ಯಾಯದ ಪಾಠ ಹೇಳುತ್ತಾನೆ, ‘ಸ್ವಾರ್ಥಕ್ಕಾಗಿ ಹೋರಾಟ’ ಮತ್ತು ‘ಧರ್ಮ ಯುದ್ಧ’ದ ವ್ಯತ್ಯಾಸ ತಿಳಿಸುತ್ತಾನೆ. ಆತ್ಮದ ನಿರಂತರತೆಯ ಬಗ್ಗೆ ತಿಳಿಸುತ್ತಾನೆ, ಕ್ಷಾತ್ರ ಧರ್ಮದ ಕರ್ತವ್ಯದ ಬಗ್ಗೆ ಎಚ್ಚರಿಸುತ್ತಾನೆ.
ಕ್ರೂರಾತಿ ಕ್ರೂರ ಕ್ರಮಗಳಿಂದ ತಮ್ಮ ಪಟ್ಟಭದ್ರ ಹಿತಾಸಕ್ತಿ ಕಾಯ್ದು ಕೊಳ್ಳುತ್ತಿರುವ ಕ್ಷುಲ್ಲಕ ಮನಸ್ಸಿನ ಶಕ್ತಿಗಳು ನಮ್ಮ ಮಹಾನ್ ಭಾರತವನ್ನು ಆಳುತ್ತಿರುವ ಈ ಕಾಲದಲ್ಲಿ ಇವೆರಡೂ ಕತೆಗಳು ನನಗೆ ಮತ್ತೆ ಮತ್ತೆ ನೆನಪಾಗುತ್ತವೆ.
ಆದರೆ ನನ್ನ ದೂರುಗಳು ಆಳುವವರ ಮೇಲೆ ಅಷ್ಟೊಂದು ಇಲ್ಲ. ನನ್ನೆಲ್ಲ ಗಂಭೀರ ಆಕ್ಷೇಪಣೆ-ಆರೋಪಗಳೆಲ್ಲ ಇರುವುದು ಮಾಧ್ಯಮದವರ ಮೇಲೆಯೇ.
ಭಾರತೀಯ ನಾಟ್ಯ ಪರಂಪರೆಯಲ್ಲಿ ವಿಪರೀತ ಪ್ರಸಂಗ ಅಂತ ಒಂದು ಶೈಲಿ ಬರುತ್ತದೆ. ಅದರಲ್ಲಿ ಕತೆ- ವಿನ್ಯಾಸ-ಪಾತ್ರಗಳು- ಘಟನೆಗಳು ಎಲ್ಲವೂ ಉಲ್ಟಾ-ಪಲ್ಟಾ ಆಗಿ ಬಿಡುತ್ತವೆ. ಮೇಲೆ ನೋಡಿದ ಮಹಾಭಾರತದ ಎರಡು ಪ್ರಸಂಗಗಳು ನಮ್ಮ ದೇಶದ ಮಾಧ್ಯಮದವರ ಮಟ್ಟಿಗೆ ವಿಪರೀತ ಪ್ರಸಂಗ ಗಳಾಗಿ ಬಿಟ್ಟಿವೆ ಅಂತ ನನಗೆ ಅನ್ನಿಸುತ್ತದೆ. ಅಸಹಾಯಕ - ಅಶಕ್ತರನ್ನು ಇವರೇ ಹಿಡಿದು ಘಟೋತ್ಕಚನ ಕೈಯಲ್ಲಿ ಕೊಡುವ ಪ್ರಥೆ ಇಲ್ಲಿ ಸಹಜವಾಗಿ ಬಿಟ್ಟಿದೆ.
ಅಶಕ್ತ-ಅಸಹಾಯಕ ಕುಟುಂಬದವರು ತನಗೆ ಅಪರಿಚಿತರಾಗಿದ್ದರೂ ಅವರನ್ನು ಉಳಿಸಲು ತನ್ನ ಜೀವವನ್ನೇ ಕೊಡಲು ಮುಂದಾದ ಭೀಮನ ಕತೆ ಇಲ್ಲಿ ಉಲ್ಟಾ ಆಗಿ ಹೋಗಿದೆ. ದೀನ ದರಿದ್ರರು, ಜನಾಂಗೀಯ ಹಿಂಸೆಗೆ ತುತ್ತಾದವರನ್ನು ಉಳಿಸುವುದು ಹೋಗಲಿ, ಅವರನ್ನು ಇನ್ನಷ್ಟು ಕಷ್ಟಕ್ಕೆ ಸಿಲುಕಿಸುವಂತೆ ಮಾಡುತ್ತಾ, ತಾವು ಬಚಾವು ಆಗುವ, ಅದರಿಂದ ಪರಿಸ್ಥಿತಿಯ ಲಾಭ ಪಡೆದು ದೊಡ್ಡವರಾಗುವ ಲೆಕ್ಕದಲ್ಲಿ ಮಾಧ್ಯಮದವರು ಅನೇಕರು ಇದ್ದಾರೆ.
ಅಂತೆಯೇ, ಇವರ ವಿಷಾದ ಯೋಗ ಸಹಿತ ವಿಪರೀತ ಪ್ರಸಂಗವಾಗಿದೆ. ‘ನನ್ನ ಸಹವಾಸಿಗಳು, ಈ ದೇಶದ ನಾಗರಿಕರು ನನ್ನ ಅಣ್ಣ ತಮ್ಮಂದಿರು’ ಅನ್ನುವ ಪಾರ್ಥ ದೃಷ್ಟಿ ಕಣ್ಮರೆಯಾಗಿದೆ. ಅವರು ಏನೂ ತಪ್ಪು ಮಾಡದೇ ಇದ್ದರೂ, ಅವರ ಮೇಲೆ ಗಂಭೀರ ಆರೋಪ ಹೊರಿಸುವುದು ಸರಳವಾಗಿ ಹೋಗಿದೆ.
ಅವಕಾಶ ಸಿಕ್ಕಾಗಲೆಲ್ಲಾ, ಮಹೋಪನಿಷತ್ತಿನ ಒಂದು ಮಾತನ್ನು ನಾವು ಪುನರಾವರ್ತಿಸುತ್ತೇವೆ.
‘ಅಯಂ ನಿಜಹ, ಪರೋ ವೇತಿ ಗಣನಾಂ ಲಘು ಚೇತಸಾಂ, ಉದಾರ ಚರಿತಾ ನಾಂತು, ವಸುಧಾ ಏವ ಕುಟುಂಬ ಕಂ’ (‘ಇವರು ನಮ್ಮವರು, ಅವರು ಇತರರು ಎನ್ನುವವರು ಸಣ್ಣ ಮನಸ್ಸಿನವರು. ಇಡೀ ಜಗತ್ತು ಒಂದೇ ಕುಟುಂಬ ಎಂದು ಭಾವಿಸುವವರು ಉದಾರ ಮನಸ್ಸಿನವರು’), ಈ ಮಾತನ್ನು ಹೇಳಿಕೊಂಡು ತಿರುಗುವ ನಮ್ಮಂಥವರ ದೇಶದಲ್ಲಿ, ಸಾವಿರಾರು ವರ್ಷಗಳಿಂದ ಸೌಹಾರ್ದಮಯ ಜೀವನ ನಡೆಸಿದ ಈ ಸಮಾಜದಲ್ಲಿ, ಈಗೀಗ ನಾವು -ಅವರು ಎನ್ನುವ ಭಾವ ತೀವ್ರವಾಗಿದೆ.
ಈ ಅವರೀಕರಣದ ಪ್ರಕ್ರಿಯೆಯಲ್ಲಿ, ಅವರು ಎನ್ನಿಸಿಕೊಂಡವರು ತಮ್ಮಷ್ಟಕ್ಕೆ ತಾವು ಸುಮ್ಮನೆ ಇದ್ದರೂ ಮಾಧ್ಯಮದವರು ಸುಮ್ಮನೆ ಇರುವುದಿಲ್ಲ. ಕಾಲು ಕೆರೆದು ಜಗಳ ಮಾಡಿ, ‘ಅವರು ನಮ್ಮ ಮೇಲೆ ಯುದ್ಧಕ್ಕೆ ಬರುತ್ತಿದ್ದಾರೆ, ಇವರಿಂದ ನಮ್ಮ ಶಾಂತಿಗೆ ಭಂಗ. ಇವರನ್ನು ಸುಮ್ಮನೆ ಬಿಡಬಾರದು, ಇವರ ಮೇಲೆ ದಾಳಿ ಮಾಡಬೇಕು’ ಎಂದು ಕದನ ವಿಭ್ರಾಂತಿ ಹಬ್ಬಿಸುವ ಕೆಲಸವನ್ನು ಅನೇಕ ಪತ್ರಕರ್ತರು ಮಾಡುತ್ತಿದ್ದಾರೆ.
ಇಂಥವರೂ ಸೇರಿದಂತೆ ನಮಗೆಲ್ಲ ಭಗವಂತನ ವಿಶ್ವರೂಪ ದರ್ಶನವಾಗಲಿ. ಇಂಗ್ಲಿಷ್ ಕವಿ ವಿಲಿಯಮ್ ಬಟ್ಲರ್ ಯೇಟ್ಸ್ ಆಶಿಸಿದಂತೆ ‘ಪರಮಾತ್ಮನ ಪುನರ್ ಅವತಾರ’ವಾಗಲಿ. ಇನ್ನೊಮ್ಮೆ, ಮತ್ತೊಮ್ಮೆ, ನಾವು ಸರಿಯಾಗಿ ಕಲಿಯುವವರೆಗೂ, ನಮ್ಮೆಲ್ಲರಿಗೆ ಗೀತೋಪದೇಶವಾಗಲಿ. ಧರ್ಮ ಯುದ್ಧದ ಅಗತ್ಯದ ಬಗ್ಗೆ ಅವನು ನಮಗೆ ತಿಳಿ ಹೇಳಲಿ.
ಕೆಡುಕಿಗೆ ಕಾರಣವಾಗುವ ಯುದ್ಧಕ್ಕೂ, ಕೆಡುಕಿನ ವಿರುದ್ಧದ ಧರ್ಮ ಯುದ್ಧಕ್ಕೂ ವ್ಯತ್ಯಾಸ ನಮಗೆ ತಿಳಿಯಲಿ.
ನಮ್ಮ ಭವ್ಯ ಭಾರತದ ಪರಂಪರೆಯಲ್ಲಿ ನಾರದನೇ ಮೊದಲ ವರದಿಗಾರ ಎಂದು ಕೆಲವರು ನಂಬುತ್ತಾರೆ, ನಂಬುವ ಇತರರನ್ನು ನಂಬಿಸುತ್ತಾರೆ. ನಾರದ ಜಯಂತಿಯನ್ನು ಭಾರತೀಯ ಮಾಧ್ಯಮ ದಿನಾಚರಣೆ ಎಂದು ಆಚರಿಸುತ್ತಾರೆ. ಆಯ್ದ ಕೆಲ ಪತ್ರಕರ್ತರಿಗೆ ನಾರದ ಪ್ರಶಸ್ತಿ ಕೊಡುತ್ತಾರೆ.
ಆದರೆ ನನಗೆ ಅನ್ನಿಸುವುದೇ ಬೇರೆ. ಪತ್ರಕರ್ತರಿಗೆ ಆದರ್ಶವಾಗಿ ಇರಬೇಕಾದವನು ನಾರದ ಅಲ್ಲ, ನಚಿಕೇತ. ಸಾವಿನ ಮನೆಯನ್ನು ಹೊಕ್ಕು ಸಾಕ್ಷಾತ್ ಯಮನಿಗೆ ಮುಜುಗರವಾಗುವಂತಹ ಪ್ರಶ್ನೆ ಕೇಳಿದ ಬಾಲಕ ನಚಿಕೇತ. ಅವನು ನಮಗೆ ಸದಾ ಆದರ್ಶವಾಗಿರಬೇಕು ಎಂದು ನನಗೆ ಯಾವಾಗಲೂ ಅನ್ನಿಸುತ್ತದೆ. ನಮ್ಮೆಲ್ಲರ ದಾರಿಯ ಕತ್ತಲೆಯನ್ನು ನಚಿಕೇತನ ವ್ಯಕ್ತಿತ್ವದ ಬೆಳಕು ಬೆಳಗಲಿ. ಬಾಲ್ಯದಲ್ಲಿ ಮಹತ್ತನ್ನು ಸಾಧಿಸಿದ ಅವನ ಜೀವನ ನಮಗೆ ಸ್ಫೂರ್ತಿಯಾಗಲಿ. ಯಾವ ಮುಲಾಜು ಇಲ್ಲದೆಯೇ, ಅಧಿಕಾರಕ್ಕೆ ತಲೆ ಬಾಗದೆ, ಯಮನನ್ನೂ ಬಿಡದೇ ಪ್ರಶ್ನೆ ಮಾಡಿದ ನಚಿಕೇತನ ಸಾಹಸ, ಧೈರ್ಯ, ಸಾವಿನ ಬಗೆಗೆ ನಿರ್ಲಿಪ್ತತೆ, ಹೊಸ ವಿಷಯ ತಿಳಿಯುವ ಉತ್ಸುಕತೆ, ಚೈತನ್ಯ, ಓಜಸ್ಸು ಮುಂತಾದ ಗುಣಗಳನ್ನು ಆ ಸರ್ವಶಕ್ತನು ನಮ್ಮೆಲ್ಲರಿಗೆ ಕರುಣಿಸಲಿ ಎಂದು ಆಶಿಸುತ್ತೇನೆ.