ಮರೆಯಾದ 'ಸ್ವರ್ಣ ಜಯಂತಿ ಎಕ್ಸ್ ಪ್ರೆಸ್
ಸಂಪೂರ್ಣ ಹಾಳಾಗುವ ಸ್ಥಿತಿಗೆ ತಲುಪಿದ ಪುಟಾಣಿ ರೈಲು
ಕಾರವಾರ: ಎರಡು ದಶಕಗಳ ಹಿಂದೆ ಕೋಟ್ಯಂತರ ರೂ. ವೆಚ್ಚದಲ್ಲಿ ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಯುದ್ಧ ನೌಕೆ ಉದ್ಯಾನವನದ ಬಳಿ ಇರುವ ಶೆಡ್‌ನಲ್ಲಿ ನಿರ್ಮಿಸಲಾಗಿದ್ದ ‘ಸ್ವರ್ಣ ಜಯಂತಿ ಎಕ್ಸ್ಸ್‌ಪ್ರೆಸ್’ ಎನ್ನುವ ಪುಟಾಣಿ ರೈಲು ಸಂಪೂರ್ಣವಾಗಿ ಹಾಳಾಗುವ ಸ್ಥಿತಿಗೆ ತಲುಪಿದೆ.
ಪುಟಾಣಿ ರೈಲು ಮಾರ್ಗ ನಿರ್ಮಿಸಲು ಬಳಸಲಾಗಿದ್ದ ಕೋಟ್ಯಂತರ ರೂ. ವೆಚ್ಚದ ಕಬ್ಬಿಣದ ಹಳಿಗಳು ಇದ್ದಲ್ಲೇ ನಾಪತ್ತೆಯಾಗಿವೆ. ಕಾರವಾರ ನಗರಕ್ಕೆ ಬರುವ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ನಗರದ ಕಡಲ ತೀರದಲ್ಲಿ ಪುಟಾಣಿ ರೈಲ್ವೆ ಆರಂಭಿಸಲಾಗಿತ್ತು. ಪ್ರಾರಂಭದ ಅವಧಿಯಲ್ಲಿ ಸ್ಥಳೀಯರು ಹಾಗೂ ಹೆಚ್ಚಿನ ಪ್ರವಾಸಿಗರು ಆಕರ್ಷಿತರಾಗಿದ್ದರು. ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೂ ಇವುಗಳನ್ನು ಬಳಸಿ ಹರ್ಷ ವ್ಯಕ್ತಪಡಿಸುತ್ತಿದ್ದರು.
ನಗರದ ಟಾಗೋರ್ ಕಡಲತೀರದಲ್ಲಿ ಓಡಾಡುತ್ತಿದ್ದ ಪುಟಾಣಿ ರೈಲು ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಗಾಗಿ ಕೈಗೊಳ್ಳಲಾಗಿದ್ದ ಕ್ರಮವಾಗಿತ್ತು. ಕಾರವಾರದ ಕಡಲ ತೀರಕ್ಕೆ ಆಕರ್ಷಣೆಯನ್ನೂ ಹೆಚ್ಚಿಸಿತ್ತು. ಕೊಂಕಣ ರೈಲ್ವೆ ಪ್ರಾರಂಭಗೊಂಡ ಅವಧಿಯಲ್ಲೇ ನಗರದ ಕಡಲ ತೀರದಲ್ಲಿ ಪ್ರಾರಂಭಗೊಂಡಿದ್ದ ಪುಟಾಣಿ ರೈಲ್ವೆ ಪ್ರವಾಸಿ ತಾಣಕ್ಕೆ ಹೊಸ ನೋಟವನ್ನು ನೀಡಿತ್ತು. ಆದರೀಗ ಪುಟಾಣಿ ರೈಲು ಬರೀ ನೆನಪಾಗಿಯೇ ಉಳಿದಿದೆ. ಸಂಗೀತದ ಕಾರಂಜಿಗೆ ಹೋಲಿಸಿದರೆ ಈ ಪುಟಾಣಿ ರೈಲು ದೀರ್ಘಕಾಲದವರೆಗೆ ಕಾರ್ಯ ನಿರ್ವಹಿಸಿತ್ತು.
ಇಲ್ಲಿನ ಮಯೂರವರ್ಮ ವೇದಿಕೆಯ ಬಳಿ ಇರುವ ನಿಲ್ದಾಣದಿಂದ ಹೊರಟು ಅರಬ್ಬೀ ಸಮುದ್ರದ ದರ್ಶನ ಮಾಡಿಸುತ್ತ ಮುಂದೆ ಸಾಗುತ್ತಿದ್ದ ರೈಲು, ತಿರುಗಿ ರಾಷ್ಟ್ರೀಯ ಹೆದ್ದಾರಿ ಬದಿಯಿಂದ ವಾಪಸ್ ನಿಲ್ದಾಣಕ್ಕೆ ಒಟ್ಟು 3 ಕಿಮೀ ಪ್ರಯಾಣದಲ್ಲಿ ಪ್ರವಾಸಿಗರು ಆನಂದಿಸುತ್ತಿದ್ದರು. ಪುಟಾಣಿ ರೈಲು ಎಂದು ಕರೆಯಲಾಗುತ್ತಿದ್ದರೂ ಇದರಲ್ಲಿ ಪ್ರಯಾಣಿಸಲು ಮಕ್ಕಳಷ್ಟೇ ಅಲ್ಲದೆ ಪಾಲಕರು, ಯುವಕರು ಸೇರಿದಂತೆ ಯಾರು ಬೇಕಾದರೂ ಪ್ರಯಾಣಿಸಲು ಅವಕಾಶವಿತ್ತು.
ಸುಮಾರು 10 ವರ್ಷಗಳ ಹಿಂದೆ ಕೊಂಕಣ ರೈಲ್ವೆ ಕಾರ್ಪೊರೇಶನಿನ ಇಂಜಿನಿಯರ್‌ಗಳು ಈ ಪುಟಾಣಿ ರೈಲುಗಳ ಲೈನ್ ಮತ್ತು ಸ್ಲೀಪ್ಪರ್‌ಗಳನ್ನು ನಿರ್ಮಿಸಿದ್ದರು. ಆದರೆ ಆಗಾಗ ಉಂಟಾಗುವ ಸಮುದ್ರದ ಸವೆತದಿಂದಾಗಿ ಹಾಗೂ ಮಳೆಗಾಲದ ಅವಧಿಯಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ಕಡಲ ತೀರದ ಬದಿಯಿದ್ದ ಪುಟಾಣಿ ರೈಲ್ವೆ ಟ್ರ್ಯಾಕ್‌ಗೆ ಹಾನಿಯಾಗಿದ್ದರಿಂದ ಸಂಚಾರ ಸ್ಥಗಿತ ಮಾಡಲಾಗಿತ್ತು.
ಅಲೆಗಳ ರಭಸಕ್ಕೆ ಹಳಿಗಳಿಗೆ ಹಾನಿಯಾಗಿದ್ದರಿಂದ ತಾಂತ್ರಿಕ ಸಮಸ್ಯೆಯಿಂದ ಪುಟಾಣಿ ರೈಲು ಹಳಿಗಳನ್ನು ಕಡಲತೀರದಿಂದ ತೆರವು ಮಾಡಲಾಗಿತ್ತು. ಇವುಗಳ ಯೋಜನೆಯ ನಿರ್ವಹಣಾ ವೆಚ್ಚವನ್ನು ಬಾಲಭವನದಿಂದ ನೋಡಿಕೊಳ್ಳಲಾಗುತ್ತಿತ್ತು. ಈ ರೈಲನ್ನು ಪುನಃ ಪ್ರಾರಂಭಿಸಲು ಯೋಜನೆ ರೂಪಿಸಲಾಗಿತ್ತಾದರೂ ಇದರ ವೆಚ್ಚ ಲಾಭಕ್ಕಿಂತಲೂ ಅಧಿಕವಾಗಿರುವುದರಿಂದ ಯೋಜನೆ ಈ ಹಿಂದೆಯೇ ಕೈ ಬಿಡಲಾಗಿದೆ. ಹಳಿಗಳ ಮೇಲೆ ಸಂಚಾರ ಮಾಡುತ್ತಿದ್ದ ‘ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್’ ಪುಟಾಣಿ ರೈಲು ಮಾತ್ರ ಶೆಡ್‌ಗೆ ಸೇರಿ ಹಳೇ ನೆನಪುಗಳನ್ನು ಮೆಲುಕು ಹಾಕುವಂತಿದೆ.