ಜನಸಂಖ್ಯೆ ಇತ್ಯಾದಿ ಸುಳ್ಳು ನೆಪ ಬಳಸಿ ಸಮಾಜವನ್ನು ಹೆದರಿಸುವ ಪ್ರಚಾರಪ್ರಿಯರ ಪೊಳ್ಳು ಪಿಐಎಲ್‌ಗಳು
ಮುಸ್ಲಿಮ್ ಜನಸಂಖ್ಯೆ ಮತ್ತು ಪ್ರಧಾನಿಯವರ ಹತಾಶ ಸುಳ್ಳು
ಭಾಗ- 5
ಯಾವುದೇ ಸಮಾಜದ ಹಿತೈಷಿಗಳು ಆ ಸಮಾಜದಲ್ಲಿ ಧೈರ್ಯ, ಆತ್ಮವಿಶ್ವಾಸ ಮತ್ತು ಆಶಾವಾದವನ್ನು ಬೆಳೆಸಲು ಶ್ರಮಿಸುತ್ತಾರೆ. ಇದರ ಬದಲು ಒಂದು ಸಮಾಜವನ್ನು ಹೆದರಿಸುವವರು ಮತ್ತು ನಿರಾಶೆ ಮೂಡಿಸುವವರು ಆ ಸಮಾಜದ ನೈಜ ಶತ್ರುಗಳಾಗಿರುತ್ತಾರೆ. ಈ ದೃಷ್ಟಿಯಿಂದ, ಅಶ್ವಿನಿ ಉಪಾಧ್ಯಾಯ ಎಂಬ ಅಸ್ವಸ್ಥ ವಕೀಲರೊಬ್ಬರ ಬಹುಚರ್ಚಿತ ಚಟುವಟಿಕೆಗಳನ್ನು ಗಮನಿಸಿದವರಿಗೆ ಅವರು ಯಾರ ಶತ್ರು ಎಂಬ ಕುರಿತು ಯಾವುದೇ ಸಂಶಯ ಉಳಿಯುವುದಿಲ್ಲ. ಒಂದು ಕಾಲದಲ್ಲಿ ಅಣ್ಣಾ ಹಝಾರೆ ಆಂದೋಲನ ಎಂಬ ಬೀದಿ ನಾಟಕದಲ್ಲಿ ಸಕ್ರಿಯರಾಗಿದ್ದು, ಆಬಳಿಕ ಆಪ್ ಪಾರ್ಟಿ ಸೇರಿಕೊಂಡು ಅಲ್ಲಿಂದ ಉಚ್ಚಾಟಿತರಾಗಿ ಬಿಜೆಪಿ ದಿಲ್ಲಿ ಘಟಕದ ವಕ್ತಾರರಾಗಿದ್ದ ಎಡ್ವೊಕೇಟ್ ಅಶ್ವಿನಿ ಉಪಾಧ್ಯಾಯ ಅವರು ಸ್ವತಃ ತಾನೇ ತನ್ನೊಳಗೆ ತುಂಬಿಕೊಂಡ ವಿಷದಿಂದ ಅಸ್ವಸ್ಥರಾಗಿ, ಕಳೆದ ಹಲವು ವರ್ಷಗಳಿಂದ ಸಾರ್ವಜನಿಕವಾಗಿ ವಿಲಕ್ಷಣ ರೀತಿಯಲ್ಲಿ ವರ್ತಿಸುತ್ತಾ ಬಂದಿದ್ದಾರೆ.
2022ರಲ್ಲಿ ಒಂದು ಟಿವಿ ಚಾನೆಲ್‌ನಲ್ಲಿ ಮಾತನಾಡುತ್ತಾ ಉಪಾಧ್ಯಾಯರು ಹೀಗೆ ಹೇಳಿದ್ದರು:
‘‘ಸುಪ್ರೀಂ ಕೋರ್ಟ್‌ನಲ್ಲಿ ನಾನೊಂದು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಹಾಕಿದ್ದೇನೆ. ಅದರಲ್ಲಿ ನಾನು ನನ್ನದೇ ಆದ ಅಂಕೆ ಸಂಖ್ಯೆಗಳನ್ನು ಮುಂದಿಟ್ಟಿದ್ದೇನೆ. ಲಡಾಖ್‌ನಲ್ಲಿ ಇಂದು ಕೇವಲ ಶೇ. 1 ಹಿಂದೂಗಳು ಉಳಿದಿದ್ದಾರೆ. ಮಿಜೋರಾಂನಲ್ಲಿ ಕೇವಲ ಶೇ. 2 ಹಿಂದೂಗಳು ಉಳಿದಿದ್ದಾರೆ. ಲಕ್ಷದ್ವೀಪದಲ್ಲಿ ಕೇವಲ ಶೇ. 2 ಹಿಂದೂಗಳು ಉಳಿದಿದ್ದಾರೆ. ಕಾಶ್ಮೀರದಲ್ಲಿ ಕೇವಲ ಶೇ. 2 ಹಿಂದೂಗಳು ಉಳಿದಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಕೇವಲ ಶೇ. 2 ಹಿಂದೂಗಳು ಉಳಿದಿದ್ದಾರೆ. ಮೇಘಾಲಯದಲ್ಲಿ ಕೇವಲ ಶೇ. 11 ಹಿಂದೂಗಳು ಉಳಿದಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಕೇವಲ ಶೇ. 28 ಹಿಂದೂಗಳು ಉಳಿದಿದ್ದಾರೆ. ಈ ರೀತಿ ದೇಶದ 9 ರಾಜ್ಯಗಳಲ್ಲಿ ಹಿಂದೂಗಳು ನಿರ್ನಾಮವಾಗಿದ್ದಾರೆ. ಜಿಲ್ಲಾವಾರು ನೋಡಿದರೆ ದೇಶದ 200 ಜಿಲ್ಲೆಗಳಲ್ಲಿ ಹಿಂದೂಗಳು ನಿರ್ನಾಮವಾಗಿ ಬಿಟ್ಟಿದ್ದಾರೆ.’’
‘‘ಭಾರತ ವಿಭಜನೆಯತ್ತ ಚಲಿಸುತ್ತಿದೆಯೇ?’’ ಎಂಬ ಭಯಾನಕ ಶೀರ್ಷಿಕೆಯೊಂದಿಗೆ ಟಿವಿಯಲ್ಲಿ ಅವರ ಆ ಹೇಳಿಕೆ ಪ್ರಸಾರವಾದೊಡನೆ ಸುಳ್ಳರ ಸಂಘದವರು ತಮ್ಮ ಸಾಮಾಜಿಕ ಮಾಧ್ಯಮ ಜಾಲಗಳ ಮೂಲಕ ಅದನ್ನು ದೇಶದೆಲ್ಲೆಡೆ ತಲುಪಿಸಿ ಜನರ ಭಯವನ್ನು ಸಂಭ್ರಮಿಸ ತೊಡಗಿದರು. ಅದೇವೇಳೆ ಹಲವು ಸತ್ಯಪ್ರಿಯ, ನ್ಯಾಯಪ್ರಿಯ ನಾಗರಿಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರು ಜನರನ್ನು ಈ ಭಯ ಮತ್ತು ದ್ವೇಷದ ಸೋಂಕಿನಿಂದ ರಕ್ಷಿಸಲಿಕ್ಕಾಗಿ ಅಧಿಕೃತ ಮತ್ತು ವಿಶ್ವಸನೀಯ ಸತ್ಯಗಳನ್ನು ಜನರ ಮುಂದಿಟ್ಟು, ಕುಣಿತವೇ ಗಣಿತವೆಂದುಕೊಂಡಿದ್ದ ಉಪಾಧ್ಯಾಯ ಮತ್ತವರ ಪಾಳಯದವರ ಸುಳ್ಳಿನ ಗೆದ್ದಲು ಸೌಧವನ್ನು ಕೆಡವಿ ಹಾಕಿದರು.
ದ್ವೇಷಗ್ರಸ್ತ ಉಪಾಧ್ಯಾಯರ ಪ್ರಸ್ತುತ ಹೇಳಿಕೆ ಪ್ರಕಟವಾದ ಬೆನ್ನಿಗೆ, ದೇಶದ ಪ್ರಮುಖ ಹಿಂದಿ ದೈನಿಕ ‘ದೈನಿಕ್ ಭಾಸ್ಕರ್’, ಹಲವು ಮಹತ್ವದ ಮಾಹಿತಿಗಳನ್ನು ಪ್ರಕಟಿಸಿತು:
2011ರ ಜನಗಣತಿಯ ಪ್ರಕಾರ ಭಾರತದಲ್ಲಿ 640 ಜಿಲ್ಲೆಗಳಿವೆ. (ನಿಜವಾಗಿ ದೇಶದಲ್ಲಿ ದೊಡ್ಡ ಜಿಲ್ಲೆಗಳನ್ನು ಪುನರ‌್ರಚಿಸಿ ಹೊಸ ಜಿಲ್ಲೆಗಳನ್ನು ರಚಿಸುವ ಕಾರ್ಯ ಕ್ಷಿಪ್ರಗತಿಯಲ್ಲಿ ನಡೆಯುತ್ತಿದ್ದು 2024 ಮಾರ್ಚ್ ತಿಂಗಳ ಮಾಹಿತಿಯಂತೆ ಜಿಲ್ಲೆಗಳ ಸಂಖ್ಯೆ ಈಗಾಗಲೇ 806ರಷ್ಟಿದೆ.) ಆ ಪೈಕಿ 102 ಜಿಲ್ಲೆಗಳಲ್ಲಿ ಮಾತ್ರ ಹಿಂದೂ ಗಳು ಅಲ್ಪಸಂಖ್ಯಾತರಾಗಿದ್ದಾರೆ ಮತ್ತು ಆ ಜಿಲ್ಲೆಗಳು 18 ವಿಭಿನ್ನ ರಾಜ್ಯಗಳಲ್ಲಿವೆ. 15 ರಾಜ್ಯಗಳಲ್ಲಿ ಎಲ್ಲ ಜಿಲ್ಲೆಗಳಲ್ಲೂ ಹಿಂದೂಗಳೇ ಬಹುಸಂಖ್ಯಾತರಾಗಿದ್ದಾರೆ. ಈ ರಾಜ್ಯಗಳ ಯಾವ ಜಿಲ್ಲೆಯಲ್ಲೂ ಹಿಂದೂಗಳು ಅಲ್ಪಸಂಖ್ಯಾತರಾಗಿಲ್ಲ. ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಕೆಲವು ಜಿಲ್ಲೆಗಳು ಕಂಡು ಬಂದಿರುವ ಪ್ರಸ್ತುತ 18 ರಾಜ್ಯಗಳ ಹೆಸರು ಮತ್ತು ಆ ರಾಜ್ಯಗಳಲ್ಲಿ ಹಿಂದೂಗಳು ಕಡಿಮೆ ಸಂಖ್ಯೆಯಲ್ಲಿರುವ ಜಿಲ್ಲೆಗಳ ಸಂಖ್ಯೆ (ಕಂಸಗಳಲ್ಲಿ) ಹೀಗಿದೆ:
ಜಮ್ಮು ಮತ್ತು ಕಾಶ್ಮೀರ (17), ಪಂಜಾಬ್ (16), ಉತ್ತರ ಪ್ರದೇಶ (10), ಜಾರ್ಖಂಡ್ (5), ಪಶ್ಚಿಮ ಬಂಗಾಳ (3), ಹರ್ಯಾಣ (1), ಲಕ್ಷದ್ವೀಪ (1), ಕೇರಳ (1), ಬಿಹಾರ (1), ಅಂಡಮಾನ್-ನಿಕೋಬಾರ್ ದ್ವೀಪ (1), ಅರುಣಾಚಲ ಪ್ರದೇಶ (13), ಅಸ್ಸಾಂ (9), ಹಿಮಾಚಲ ಪ್ರದೇಶ (1), ಮಣಿಪುರ (5), ಮೇಘಾಲಯ (7), ಮಿಜೋರಾಂ (8), ನಾಗಾಲ್ಯಾಂಡ್ (11), ಸಿಕ್ಕಿಂ (1)
ಹೀಗೆ 18 ರಾಜ್ಯಗಳಲ್ಲಿರುವ ಪ್ರಸ್ತುತ 102 ಜಿಲ್ಲೆಗಳ ಪೈಕಿ 37 ಜಿಲ್ಲೆಗಳಲ್ಲಿ ಕ್ರೈಸ್ತರು ಬಹುಸಂಖ್ಯಾತರಾಗಿದ್ದಾರೆ, 34 ಜಿಲ್ಲೆಗಳಲ್ಲಿ ಮುಸ್ಲಿಮರು, 10 ಜಿಲ್ಲೆಗಳಲ್ಲಿ ಸಿಖ್ಖರು ಮತ್ತು 6 ಜಿಲ್ಲೆಗಳಲ್ಲಿ ಬೌದ್ಧರು ಬಹುಸಂಖ್ಯಾತರಾಗಿದ್ದಾರೆ.
ಮೇಲೆ ಪ್ರಸ್ತಾಪಿಸಿದ ಪಟ್ಟಿಯಲ್ಲಿ ಕೊನೆಯಲ್ಲಿ ಹೆಸರಿಸಲಾಗಿರುವ ಹೆಚ್ಚಿನ ರಾಜ್ಯಗಳು ಈಶಾನ್ಯ ಭಾರತಕ್ಕೆ ಸೇರಿವೆ. ಈಶಾನ್ಯ ಭಾರತದಲ್ಲೂ ತ್ರಿಪುರಾ ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ ಹಿಂದೂಗಳ ಜನಸಂಖ್ಯೆ ಶೇ. 83.40ರಷ್ಟಿತ್ತು.
ವಿವಿಧ ದೇಶಗಳ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಕುರಿತು ತಾನು ಮಾಡಿರುವ ಸೂಕ್ಷ್ಮ ಹಾಗೂ ಸವಿಸ್ತಾರ ಸಂಶೋಧನೆ ಮತ್ತು ಅಧ್ಯಯನಗಳಿಗಾಗಿ ಪ್ರಸಿದ್ಧಿ ಪಡೆದಿರುವ ವಾಶಿಂಗ್ಟನ್ ಮೂಲದ PಇW ಸಂಸ್ಥೆಯವರು ಪ್ರಕಟಿಸಿರುವ ಮಾಹಿತಿ ಪ್ರಕಾರ ಭಾರತದ 35 ರಾಜ್ಯಗಳ ಪೈಕಿ 28 ರಾಜ್ಯಗಳಲ್ಲಿ ಹಿಂದೂಗಳು ಬಹುಸಂಖ್ಯಾತರಾಗಿದ್ದಾರೆ. ಮುಸ್ಲಿಮರು ಬಹುಸಂಖ್ಯಾತರಾಗಿರುವುದು ಜಮ್ಮು-ಕಾಶ್ಮೀರ ಮತ್ತು ಲಕ್ಷದ್ವೀಪವೆಂಬ ತೀರಾ ಸೀಮಿತ ಜನಸಂಖ್ಯೆ ಇರುವ ಎರಡು ಪ್ರದೇಶಗಳಲ್ಲಿ ಮಾತ್ರ. ಇವೆರಡೂ ಕೇಂದ್ರಾಡಳಿತ ಪ್ರದೇಶಗಳು. 2011ರ ಜನಗಣತಿ ಪ್ರಕಾರ ಜಮ್ಮು-ಕಾಶ್ಮೀರದ ಒಟ್ಟು ಜನಸಂಖ್ಯೆ 1.25 ಕೋಟಿ ಮತ್ತು ಅಧಿಕೃತ ಸರಕಾರೀ ಪೋರ್ಟಲ್ ಪ್ರಕಾರ ಲಕ್ಷದ್ವೀಪದ ಒಟ್ಟು ಜನಸಂಖ್ಯೆ ಕೇವಲ 64 ಸಾವಿರ. ಅಂದರೆ ಉತ್ತರಪ್ರದೇಶ ಎಂಬ ಭಾರತದ ಒಂದೇ ರಾಜ್ಯದ ಜನಸಂಖ್ಯೆ (2011ರಲ್ಲಿ 19.98 ಕೋಟಿ)ಗೆ ಹೋಲಿಸಿದರೆ, ಮುಸ್ಲಿಮ್ ಬಾಹುಳ್ಯದ ಜಮ್ಮು-ಕಾಶ್ಮೀರ ಮತ್ತು ಲಕ್ಷದ್ವೀಪದ ಒಟ್ಟು ಜನಸಂಖ್ಯೆ ಶೇ. 7ಕ್ಕಿಂತಲೂ ಕಡಿಮೆ. ಭಾರತದಲ್ಲಿರುವ ಒಟ್ಟು ಮುಸ್ಲಿಮ್ ಜನಸಂಖ್ಯೆಯ ಶೇ. 5 ಸದಸ್ಯರು ಮಾತ್ರ ಈ ಎರಡು ಪ್ರದೇಶಗಳಲ್ಲಿ ನೆಲೆಸಿದ್ದಾರೆ. ಉಳಿದ ಶೇ. 95 ಭಾರತೀಯ ಮುಸ್ಲಿಮರು, ಹಿಂದೂ ಅಥವಾ ಇತರ ಧರ್ಮೀಯರು ಬಹುಸಂಖ್ಯಾತರಾಗಿರುವ ಪ್ರದೇಶಗಳಲ್ಲಿ ಅಲ್ಪಸಂಖ್ಯಾತರಾಗಿ ಬದುಕುತ್ತಿದ್ದಾರೆ.
ಸರಕಾರೀ ಸಂಸ್ಥೆ ‘ಸೆನ್ಸಸ್ ಆರ್ಗನೈಝೇಶನ್ ಆಫ್ ಇಂಡಿಯಾ’ ತನ್ನ ಪೋರ್ಟಲ್‌ನಲ್ಲಿ, ಭಾರತದ ವಿವಿಧ ರಾಜ್ಯಗಳಲ್ಲಿ ಮುಸ್ಲಿಮರ ಜನಸಂಖ್ಯೆ ಎಷ್ಟು ಮತ್ತು ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಶೇಕಡಾವಾರು ಪ್ರಮಾಣ ಎಷ್ಟೆಂಬುದನ್ನು ತಿಳಿಸುವ ಸವಿಸ್ತಾರ ಕೋಷ್ಟಕವೊಂದನ್ನು ಪ್ರಕಟಿಸಿದೆ. ಅದರ ಪ್ರಕಾರ ದೇಶದ 4 ರಾಜ್ಯಗಳಲ್ಲಿ ಮುಸ್ಲಿಮ್ ಜನಸಂಖ್ಯೆ ಶೇ. 2ಕ್ಕಿಂತ ಕಡಿಮೆ ಇದೆ. 7 ರಾಜ್ಯಗಳಲ್ಲಿ ಮುಸ್ಲಿಮ್ ಜನಸಂಖ್ಯೆ ಶೇ. 2 ರಿಂದ ಶೇ.5ರಷ್ಟಿದೆ. 12 ರಾಜ್ಯಗಳಲ್ಲಿ ಅವರ ಜನಸಂಖ್ಯೆ ಶೇ. 5ರಿಂದ ಶೇ. 10ರಷ್ಟಿದೆ. 5 ರಾಜ್ಯಗಳಲ್ಲಿ ಅವರ ಸಂಖ್ಯೆ ಶೇ. 11ರಿಂದ ಶೇ. 15ರಷ್ಟಿದೆ. 2 ರಾಜ್ಯಗಳಲ್ಲಿ ಅವರು ಶೇ. 16ರಿಂದ ಶೇ. 20ರಷ್ಟಿದ್ದಾರೆ. 3 ರಾಜ್ಯಗಳಲ್ಲಿ ಅವರ ಸಂಖ್ಯೆ ಶೇ. 26ರಿಂದ ಶೇ. 35ರಷ್ಟಿದೆ. 2 ರಾಜ್ಯಗಳಲ್ಲಿ ಮಾತ್ರ ಮುಸ್ಲಿಮ್ ಜನಸಂಖ್ಯೆ ಶೇ. 60ಕ್ಕಿಂತ ಅಧಿಕವಿದೆ.
ಇದೇ ಕೋಷ್ಟಕವನ್ನು ಇನ್ನೊಂದು ರೀತಿಯಲ್ಲಿ ವಿಶ್ಲೇಷಿಸುವುದಾದರೆ, ಇಂದು ಭಾರತದ 35 ರಾಜ್ಯಗಳ ಪೈಕಿ 33 ರಾಜ್ಯಗಳಲ್ಲಿ ಮುಸ್ಲಿಮ್ ಜನಸಂಖ್ಯೆ ಶೇ. 35ಕ್ಕಿಂತ ಕಡಿಮೆ ಇದೆ. ಆ ಪೈಕಿ 30 ರಾಜ್ಯಗಳಲ್ಲಿ ಅವರ ಸಂಖ್ಯೆ ಶೇ. 20ಕ್ಕಿಂತ ಕಡಿಮೆ, 28 ರಾಜ್ಯಗಳಲ್ಲಿ ಶೇ. 15ಕ್ಕಿಂತ ಕಡಿಮೆ ಮತ್ತು 23 ರಾಜ್ಯಗಳಲ್ಲಿ ಶೇ. 10ಕ್ಕಿಂತ ಕಡಿಮೆ ಇದೆ. ಇಷ್ಟೊಂದು ಸೀಮಿತ ಸಂಖ್ಯೆಯಲ್ಲಿರುವವರನ್ನು ಕಂಡು ಅಥವಾ ಅವರನ್ನು ತೋರಿಸಿ ಅವರು ಬಹುಸಂಖ್ಯಾತರಾಗಿ ಬಿಡುತ್ತಾರೆಂದು ಹೆದರುವ ಮತ್ತು ಹೆದರಿಸುವ ಮಂದಿ ನಿಜಕ್ಕೂ ಕಳವಳಕಾರಿ ಮಟ್ಟದ ಅಸ್ವಾಸ್ಥ್ಯದಿಂದ ನರಳುತ್ತಿದ್ದಾರೆಂಬುದನ್ನು ಯಾರೇ ಆದರೂ ಒಪ್ಪಲೇಬೇಕಾಗುತ್ತದೆ.
‘ಸಿಟಿಝನ್ಸ್ ಫಾರ್ ಜಸ್ಟಿಸ್ ಆ್ಯಂಡ್ ಪೀಸ್’ (CJP) ಸಂಸ್ಥೆಯವರು ಅಸ್ವಸ್ಥ ಉಪಾಧ್ಯಾಯರ ಜಾತಕ ಜಾಲಾಡಿದ್ದಾರೆ. ಅವರು ವಿವಿಧ ನಂಬಲರ್ಹ ಮಾಧ್ಯಮ ಮೂಲಗಳಿಂದ ಸಂಗ್ರಹಿಸಿದ ಕೆಲವು ಮಾಹಿತಿಗಳು ಇಲ್ಲಿವೆ:
ಅಸ್ವಸ್ಥ ಉಪಾಧ್ಯಾಯರು ಸಮಾಜವನ್ನು ಕೋಮು ಆಧಾರದಲ್ಲಿ ಧ್ರುವೀಕರಿಸುವುದನ್ನೇ ತನ್ನ ಕಾಯಕವಾಗಿಸಿಕೊಂಡವರು. 2021 ಆಗಸ್ಟ್‌ನಲ್ಲಿ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಮಾಡಿದ ದ್ವೇಷಭಾಷಣಕ್ಕಾಗಿ ಅವರನ್ನು ಬಂಧಿಸಿ ನ್ಯಾಯಾಂಗ ಕಸ್ಟಡಿಗೊಪ್ಪಿಸಲಾಗಿತ್ತು. ಕೊನೆಗೆ ಅವರು ಜಾಮೀನು ಪಡೆದು ಹೊರಬಂದಿದ್ದರು. 2018ರ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯೊಂದರ ಪ್ರಕಾರ ಅವರು ಕೇವಲ 5 ವರ್ಷಗಳಲ್ಲಿ ತಾನು 50 ಪಿಐಎಲ್‌ಗಳನ್ನು ದಾಖಲಿಸಿದ್ದೇನೆಂದು ಬೊಗಳೆ ಬಿಡುತ್ತಾರೆ. ಅವರ ಹೆಚ್ಚಿನೆಲ್ಲಾ ಪಿಐಎಲ್‌ಗಳ ಉದ್ದೇಶ ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಮೂಲಕ ಸಂಘ ಪರಿವಾರದ ಪೌರೋಹಿತ್ಯವಾದಿ ಅಜೆಂಡಾವನ್ನು ಬಲಪಡಿಸುವುದಾಗಿರುತ್ತದೆ. ಅವರ ಹೆಚ್ಚಿನೆಲ್ಲ ಪಿಐಎಲ್‌ಗಳನ್ನು ನ್ಯಾಯಾಲಯಗಳು ಮೊದಲ ಹಂತದಲ್ಲೇ ತಿರಸ್ಕರಿಸಿ ಕ.ಬು.ಗೆ ಎಸೆದಿವೆ. ಹಲವು ಪ್ರಕರಣಗಳಲ್ಲಿ ನ್ಯಾಯಾಧೀಶರುಗಳು ಅವರ ಅರ್ಜಿಗಳನ್ನು ತಿರಸ್ಕರಿಸುವ ಜೊತೆ ಅವರಿಗೆ ಛೀಮಾರಿಯನ್ನೂ ಹಾಕಿದ್ದಿದೆ ಮತ್ತು ಎಚ್ಚರಿಕೆಯನ್ನೂ ನೀಡಿದ್ದಿದೆ. ಅವರ ಪಿಐಎಲ್‌ಗಳನ್ನು ಜನರು ‘ಪಾರ್ಟಿ ಇಂಟರೆಸ್ಟ್ ಲಿಟಿಗೇಷನ್’, ‘ಪಾಲಿಟಿಕಲ್ ಇಂಟರೆಸ್ಟ್ ಲಿಟಿಗೇಷನ್’ ಎಂದೆಲ್ಲಾ ಲೇವಡಿ ಮಾಡಿದ್ದೂ ಇದೆ.
200 ಜಿಲ್ಲೆಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆಂಬ ಅಪ್ಪಟ ಸುಳ್ಳು ಮಾಹಿತಿಗಳ ಕಂತೆಯಾಗಿದ್ದ ತನ್ನ ಪಿಐಎಲ್‌ನಲ್ಲಿ ಅವರು, ಸರಕಾರವು ಅಂತಹ ಎಲ್ಲ ಜಿಲ್ಲೆಗಳನ್ನು ಗುರುತಿಸಿ ಹಿಂದೂಗಳು ಕಡಿಮೆ ಇರುವ ಜಿಲ್ಲೆಗಳಲ್ಲಿ ಅವರಿಗೆ ಅಧಿಕೃತ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಬೇಕೆಂದು ಆಗ್ರಹಿಸಿದ್ದರು. ಅವರ ಈ ಅರ್ಜಿ ತಿರಸ್ಕೃತವಾಯಿತು. 2015ರಲ್ಲಿ ಅವರು ಸಮಾನ ಸಿವಿಲ್ ಕೋಡ್ ಜಾರಿಗೊಳಿಸಬೇಕೆಂದು ಆಗ್ರಹಿಸುವ ಪಿಐಎಲ್ ಒಂದನ್ನು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿದ್ದರು. ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಟಿ.ಎಸ್. ಠಾಕೂರ್ ಅವರು ಪ್ರಸ್ತುತ ಅರ್ಜಿಯನ್ನು ತಿರಸ್ಕರಿಸುತ್ತಾ, ‘‘ಯಾವುದು ಸಂಸತ್ತಿನ ಕೆಲಸ ಯಾವುದು ನ್ಯಾಯಾಲಯದ ಕೆಲಸ ಎಂಬ ಪರಿಜ್ಞಾನ ನಿಮಗಿರಬೇಕು, ಇಂತಹ ಅರ್ಥವಿಲ್ಲದ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಲಯದ ಸಮಯ ಪೋಲು ಮಾಡಬೇಡಿ’’ ಎಂಬ ಎಚ್ಚರಿಕೆಯನ್ನೂ ವಿಕೃತಾನಂದ ಉಪಾಧ್ಯಾಯರಿಗೆ ನೀಡಿದ್ದರು.
2021ರಲ್ಲಿ ಮತಾಂತರದ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿ ಉಪಾಧ್ಯಾಯರು ಸಲ್ಲಿಸಿದ್ದ ಪಿಐಎಲ್ ಕುರಿತು ಜಸ್ಟಿಸ್ ಫಾಲಿಮಾನ್ ನಾರಿಮನ್ ನೇತೃತ್ವದ ನ್ಯಾಯಪೀಠವು, ಈ ಪಿಐಎಲ್ ‘ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್’ನ ಬದಲಿಗೆ ‘ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಷನ್’ನ ಸ್ವರೂಪದಲ್ಲಿದೆ, ಮುಂದೆ ಈ ಬಗೆಯ ಅಧಿಕ ಪ್ರಸಂಗಗಳು ನಡೆದರೆ ದುಬಾರಿ ದಂಡವನ್ನು ಹೇರಲಾಗುವುದು ಎಂದು ಎಚ್ಚರಿಸಿದ್ದರು.
2022ರಲ್ಲಿ ಅಸ್ವಸ್ಥ ಮಹಾಶಯರು 1995ರ ವಕ್ಫ್ ಆ್ಯಕ್ಟ್ ಅನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಪಿಐಎಲ್ ಸಲ್ಲಿಸಿದ್ದರು. ಸರ್ವೋಚ್ಚ ನ್ಯಾಯಾಲವು ಅದನ್ನು ತಿರಸ್ಕರಿಸಿತ್ತು. ಮತ್ತೆ ಅದೇ ವರ್ಷ ಅವರು ಸುಪ್ರೀಂ ಕೋರ್ಟ್ ನಲ್ಲಿ ‘ಜನಮನ ಗಣ’ ಹಾಡಿಗೆ ನೀಡಲಾಗುವ ಎಲ್ಲ ಮಾನ್ಯತೆಗಳನ್ನು ‘ವಂದೇ ಮಾತರಂ’ ಹಾಡಿಗೆ ನೀಡಬೇಕೆಂದು ಆಗ್ರಹಿಸುವ ಪಿಐಎಲ್ ಸಲ್ಲಿಸಿ ಆ ಕುರಿತು ವಿವಿಧ ಕೇಸರಿ ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಪಡೆದಿದ್ದರು. ಈ ರೀತಿ ಪಿಐಎಲ್ ಅನ್ನು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸುವುದಕ್ಕೆ ಬಳಸುವ ಅವರ ದುರಭ್ಯಾಸದ ಕುರಿತು ನ್ಯಾಯಾಲಯವು ತನ್ನ ತೀವ್ರ ಅಸಾಮಾಧಾನವನ್ನು ಪ್ರಕಟಿಸಿತ್ತು.
2022ರಲ್ಲಿ ‘ಸಾಮೂಹಿಕ ಮತಾಂತರ’ಗಳನ್ನು ತಡೆಯಲು ಆಗ್ರಹಿಸಿ ಉಪಾಧ್ಯಾಯರು ಸಲ್ಲಿಸಿದ್ದ ಅರ್ಜಿಯಲ್ಲಿದ್ದ ಹಲವು ನಿರಾಧಾರ ಆರೋಪಗಳು, ನಿರ್ದಿಷ್ಟ ಸಮುದಾಯಗಳ ದೂಷಣೆ ಮತ್ತು ಪ್ರಚೋದನಾತ್ಮಕ ಅಂಶಗಳನ್ನು ಗುರುತಿಸಿದ ನ್ಯಾಯಾಲಯವು, ನ್ಯಾಯಾಲಯಕ್ಕೆ ಸಲ್ಲಿಸಲಾಗುವ ಯಾವುದೇ ಅರ್ಜಿ ಅಥವಾ ದಾಖಲೆಯಲ್ಲಿ ಆ ಬಗೆಯ ಭಾಷೆಯನ್ನು ಬಳಸಬಾರದು ಎಂದು ಎಚ್ಚರಿಕೆ ನೀಡಿತ್ತು. ಕಳೆದ ವರ್ಷ (2023) ಜನವರಿಯಲ್ಲಿ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರು ಉಪಾಧ್ಯಾಯರು ಮತ್ತು ಅವರ ಪರವಾಗಿ ಇತರರು ಸರ್ವೋಚ್ಚ ನ್ಯಾಯಾಲಯದ ವಿವಿಧ ಪೀಠಗಳ ಮುಂದೆ ಸಲ್ಲಿಸಿದ ಹಾಗೂ ಆ ಬಳಿಕ ಹಿಂದೆಗೆದುಕೊಂಡ ಹಲವಾರು ಅರ್ಜಿಗಳ ಬಗ್ಗೆ ವಿಮರ್ಶಿಸುತ್ತಾ, ಅರ್ಜಿದಾರರಿಗೆ ಅರ್ಜಿಗಳನ್ನು ಸಲ್ಲಿಸುವ ವಿಷಯದಲ್ಲಿ ಪಾಲಿಸಲೇಬೇಕಾದ ನಿಯಮಗಳ ಬಗ್ಗೆ ತಿಳುವಳಿಕೆ ಇಲ್ಲವೆಂದು ತೋರುತ್ತಿದೆ.... ಈ ರೀತಿ ನೀವು ಪದೇ ಪದೇ ಅರ್ಜಿ ಸಲ್ಲಿಸುತ್ತಾ ಹಿಂದೆಗೆದುಕೊಳ್ಳುತ್ತಾ ಇರುವುದಕ್ಕೆ ಅವಕಾಶ ಇಲ್ಲ ಎಂದು ಜರೆದಿದ್ದರು. ಕಳೆದ ವರ್ಷ ಫೆಬ್ರವರಿಯಲ್ಲಿ ಇದೇ ಉಪಾಧ್ಯಾಯರು ಹಲವಾರು ನಗರಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ‘ವಿದೇಶಿ ಆಕ್ರಮಣಕಾರರು’ ಇಟ್ಟಿದ್ದ ಹೆಸರುಗಳನ್ನೆಲ್ಲ ರದ್ದುಗೊಳಿಸಿ ಹೊಸ ಹೆಸರುಗಳನ್ನಿಡಬೇಕು ಎಂದು ಆಗ್ರಹಿಸುವ ಪಿಐಎಲ್ ಅನ್ನು ತಿರಸ್ಕರಿಸಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠವು, ನೀವೇನು ದೇಶವು ಸದಾ ಉದ್ವಿಗ್ನ ಸ್ಥಿತಿಯಲ್ಲಿರಬೇಕೆಂದು ಬಯಸುತ್ತೀರಾ? ಎಂದು ಅವರನ್ನು ಪ್ರಶ್ನಿಸಿತ್ತು.