ವಕ್ಫ್ ಹೆಸರಲ್ಲಿ ಮಡಿಲ ಮಾಧ್ಯಮಗಳು ಚೆಲ್ಲಿದ ಮಿಥ್ಯಾನ್ನ ಭೋಜನ

1. ಭಾರತದಲ್ಲಿ ರಕ್ಷಣಾ ಇಲಾಖೆ ಮತ್ತು ರೈಲ್ವೇಸ್ ಬಳಿಕ ಅತ್ಯಧಿಕ ಜಮೀನು ಇರುವುದು ವಕ್ಫ್ ಬೋರ್ಡ್ ಮಾಲಕತ್ವದಲ್ಲಿ!!!
ಇದು ಕೆಲವೇ ತಿಂಗಳ ಹಿಂದೆ ನಮ್ಮ ಕೆಲವು ಮಡಿಲ ಮಾಧ್ಯಮಗಳಲ್ಲಿ ಪದೇ ಪದೇ, ಕಿರುಚಿ ಕಿರುಚಿ ಆವರ್ತಿಸಲಾದ ಒಂದು ದೊಡ್ಡ ಸುಳ್ಳು. ಎಷ್ಟೋ ಟೀವಿ ವಿದೂಷಕರು ತಮ್ಮ ಸ್ಟುಡಿಯೊಗಳ ಒಳಗೆ ಮೈಕು ಹಿಡಿದು ಬಿರುಸಾಗಿ ಅತ್ತಿಂದಿತ್ತ ಓಡಾಡುತ್ತಾ, ಓಲಾಡುತ್ತಾ ತಮ್ಮ ಕುಚೋದ್ಯಗಳ ಮುಂದೆ ತಾವೇ ಆಗಾಗ ಬೆಚ್ಚಿ ಬೀಳುತ್ತಾ, ತಮ್ಮ ವೇಷದ ಕೋಟನ್ನು ಜಾಡಿಸುತ್ತಾ ಈ ಸುಳ್ಳನ್ನು ಜನತೆಗೆ ಬಡಿಸುತ್ತಿದ್ದರು. ಈ ಮೂಲಕ ಅವರು ಸಮಾಜದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮುಸಲ್ಮಾನರ ವಿರುದ್ಧ ಸಂಶಯ, ಅಸೂಯೆ, ಅತೃಪ್ತಿಗಳನ್ನು ಬಿತ್ತಿ ಬಿಟ್ಟರು.
ಸತ್ಯ ಮಾತ್ರ ಹೀಗಿತ್ತು:
►ವಕ್ಫ್ ಅಂದರೆ ಯಾವುದಾದರೂ ಸರಕಾರವು ಮುಸ್ಲಿಮರಿಗೆ ದಾನ ಮಾಡಿದ ಸೊತ್ತಲ್ಲ. ಅದು ಸ್ವತಃ ಮುಸಲ್ಮಾನರೇ ತಮ್ಮ ಧರ್ಮದ ಹಾಗೂ ಸಮುದಾಯದವರ ಸೇವೆಗೆಂದು, ವಕ್ಫ್ (ಅರ್ಪಿತ) ಎಂಬ ಸಾಮುದಾಯಿಕ ಸಂಸ್ಥೆಗೆ ದಾನ ಮಾಡಿದ ಸೊತ್ತು.
►ವಕ್ಫ್ ಬೋರ್ಡ್ ಮಾಲಕತ್ವದಲ್ಲಿ 8.7 ಲಕ್ಷ ಸೊತ್ತುಗಳಿವೆ. ಈ ಸೊತ್ತುಗಳು ಭಾರತದ ಎಲ್ಲ ಭಾಗಗಳಲ್ಲಿ ಹಬ್ಬಿರುವ ಒಟ್ಟು 9.4 ಲಕ್ಷ ಎಕರೆ ಜಮೀನಿನಲ್ಲಿವೆ. ಈ ಎಲ್ಲ ಸಂಪತ್ತಿನ ವರ್ತಮಾನ ಮಾರುಕಟ್ಟೆ ಮೌಲ್ಯ ಸುಮಾರು 1.2 ಲಕ್ಷ ಕೋಟಿ ರೂಪಾಯಿಗಳು. ಆದರೆ ಕೇವಲ ಈ ಕಾರಣಕ್ಕಾಗಿ ಡಿಫೆನ್ಸ್ ಮತ್ತು ರೈಲ್ವೇ ಬಳಿಕ ಭಾರತದಲ್ಲಿ ಅತ್ಯಧಿಕ ಸಂಪತ್ತು ವಕ್ಫ್ ಮಾಲಕತ್ವದಲ್ಲಿದೆ ಎನ್ನುವುದಕ್ಕೆ ಯಾವ ಆಧಾರವೂ ಇಲ್ಲ. ಅದು ಅಪ್ಪಟ ಸುಳ್ಳು.
►ಭಾರತದ ಉದ್ದಗಲಕ್ಕೂ ಕಂಡುಬರುವ, ಲಕ್ಷಗಟ್ಟಲೆ ಸಂಖ್ಯೆಯಲ್ಲಿರುವ ವಿವಿಧ ಹಿಂದೂ ಮಂದಿರಗಳ ಮಾಲಕತ್ವದಲ್ಲಿರುವ ಒಟ್ಟು ಆಸ್ತಿ ನೋಡಿದರೆ ಅದು ಖಂಡಿತವಾಗಿಯೂ ವಕ್ಫ್ ಆಸ್ತಿಗಿಂತ ಹಲವಾರು ಪಟ್ಟು ಅಧಿಕವಿದೆ.
►ಕೇವಲ ತಮಿಳುನಾಡು ಎಂಬ ಒಂದೇ ರಾಜ್ಯದಲ್ಲಿ ಅಲ್ಲಿಯ ಹಿಂದೂ ಮಂದಿರಗಳ ಮಾಲಕತ್ವದಲ್ಲಿ 4.78 ಲಕ್ಷ ಎಕರೆ ಜಮೀನಿದೆ ಮತ್ತು ಆಂಧ್ರಪ್ರದೇಶದ ಹಿಂದೂ ಮಂದಿರಗಳ ಮಾಲಕತ್ವದಲ್ಲಿ 4.09 ಲಕ್ಷ ಎಕರೆ ಜಮೀನಿದೆ ಎಂಬುದು ನಿಚ್ಚಳವಾಗಿದೆ. ಹಾಗೆಯೇ, ತೆಲಂಗಾಣ ರಾಜ್ಯದಲ್ಲಿನ ಹಿಂದೂ ಮಂದಿರಗಳ ಮಾಲಕತ್ವದಲ್ಲಿ ಸುಮಾರು 92 ಸಾವಿರ ಎಕರೆ ಜಮೀನು ಇರುವುದು ಸಾಬೀತಾಗಿದೆ. ಒಡಿಶಾ ರಾಜ್ಯದಲ್ಲಿ ಕೇವಲ ಪುರಿ ಜಗನ್ನಾಥ ಎಂಬ ಒಂದೇ ದೇವಸ್ಥಾನದ ಮಾಲಕತ್ವದಲ್ಲಿ 61 ಸಾವಿರ ಎಕರೆಯಷ್ಟು ಜಮೀನು ಇದೆ. ಹೀಗೆ ಕೇವಲ ನಾಲ್ಕು ರಾಜ್ಯಗಳಲ್ಲಿನ ಹಿಂದೂ ಮಂದಿರಗಳ ಮಾಲಕತ್ವದಲ್ಲಿರುವ ಜಮೀನು 10.4 ಲಕ್ಷ ಎಕರೆಯಷ್ಟಾಗುತ್ತದೆ. ಅಂದರೆ ಅದು ವಕ್ಫ್ ಬೋರ್ಡ್ ಮಾಲಕತ್ವದಲ್ಲಿರುವ ಒಟ್ಟು ಆಸ್ತಿಗಿಂತ ಜಾಸ್ತಿ ಇದೆ. ಕೇವಲ ನಾಲ್ಕು ರಾಜ್ಯಗಳ ಹಿಂದೂ ಮಂದಿರಗಳು ಇಷ್ಟು ಸಂಪನ್ನವಿರುವಾಗ ದೇಶದಲ್ಲಿರುವ ಸುಮಾರು 6.5 ಲಕ್ಷದಷ್ಟಿರುವ ದೊಡ್ಡ ಮಂದಿರಗಳ ಮಾಲಕತ್ವದಲ್ಲಿ ಎಷ್ಟು ಜಮೀನಿರಬಹುದು? ಅವುಗಳ ಮೌಲ್ಯ ಎಷ್ಟಿರಬಹುದು? ಗಲ್ಲಿಗಲ್ಲಿಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿರುವ ಸಣ್ಣಪುಟ್ಟ ಮಂದಿರಗಳ ಬಳಿ ಎಷ್ಟು ಸಂಪತ್ತಿರಬಹುದು,? ಅವುಗಳ ಮಾಲಕತ್ವದಲ್ಲಿ ಎಷ್ಟು ಹೊಲ, ತೋಟ, ಜಮೀನುಗಳು ಇರಬಹುದು?
2. ಭಾರತದ ವಕ್ಫ್ ಬೋರ್ಡ್ ಮಾಲಕತ್ವದಲ್ಲಿ 9.40 ಲಕ್ಷ ಚದರ ಕಿಲೋ ಮೀಟರ್ ಜಮೀನು, ಗಾತ್ರದಲ್ಲಿ ಪಾಕಿಸ್ತಾನದ ಒಟ್ಟು ವಿಸ್ತೀರ್ಣಕ್ಕಿಂತ ದೊಡ್ಡದು !!!
ಸಂಘಭಕ್ತ, ಅಸತ್ಯ ಭಕ್ಷಕ, ಪಾಕಪ್ರವೀಣರ ಪಾಕ್ ವ್ಯಾಮೋಹ ಎಷ್ಟೊಂದು ಗಾಢವಾಗಿರುತ್ತದೆಂದರೆ ಪಾಕಿಸ್ತಾನ ಎಂಬ ಒಗ್ಗರಣೆ ಇಲ್ಲದೆ ಅವರ ಯಾವ ವಾದವೂ, ಯಾವ ತತ್ವ ಸಿದ್ಧಾಂತವೂ, ಸಭೆ ಸಮಾರಂಭವೂ, ಯಾವ ಚಟ್ನಿಯೂ, ಯಾವ ಸಾಂಬಾರೂ ಪೂರ್ತಿ ಆಗುವುದೇ ಇಲ್ಲ. ಇಂತಹ ಕೊಳಕು ಒಗ್ಗರಣೆ ಏಕೆ ಎಂದು ಅಪ್ಪಿತಪ್ಪಿ ಯಾರಾದರೂ ಪ್ರಶ್ನಿಸಿ ಬಿಟ್ಟರೆ ಸಾಕು, ಈ ಮಂದಿ ಆ ಬಡಪಾಯಿಯನ್ನು ಹೆಡೆಮುರಿ ಕಟ್ಟಿ ಗಡಿಯಾಚೆಯ ತಮ್ಮ ನೆಚ್ಚಿನ ನಾಡಿಗೆ ಬಿಟ್ಟುಬರಲು ಸಿದ್ಧರಾಗುತ್ತಾರೆ. ಈಕಡೆ ಇರುವವರನ್ನು ಆಕಡೆಗೆ ಕಳಿಸುವ ವಿಷಯದಲ್ಲಿ ಅವರು ತೋರುವ ಅಮಿತೋತ್ಸಾಹ ನೋಡಿದವರಿಗಂತೂ ಇವರು ಆ ನೆರೆಯವರ ನಿಷ್ಠಾವಂತ ಏಜಂಟರೆಂಬ ಬಗ್ಗೆ ಯಾವುದೇ ಸಂದೇಹ ಉಳಿಯುವುದಿಲ್ಲ. ಭಾರತೀಯ ವಕ್ಫ್ ಬೋರ್ಡ್ ಎಂಬುದು ಅಂತಿಮವಾಗಿ ಹಾಗೂ ಸಂಪೂರ್ಣವಾಗಿ ನಮ್ಮ ಭಾರತ ದೇಶಕ್ಕೇ ಸೇರಿದ ಒಂದು ಸಂಸ್ಥೆ. ಅದರ ಅಧೀನವಿರುವ ಇಂಚಿಂಚು ಆಸ್ತಿಯೂ ಈ ದೇಶದ ಆಸ್ತಿ. ಅಂತಹ ಸಂಸ್ಥೆಯ ವಿರುದ್ಧವೂ ಜನಾಭಿಪ್ರಾಯ ರೂಪಿಸುವ ಕುರುಡು ಆವೇಶದಲ್ಲಿ ಈ ಮಂದಿ, ಭಾರತದ ವಕ್ಫ್ ಬೋರ್ಡ್ ಮಾಲಕತ್ವದಲ್ಲಿರುವ ಜಮೀನು ಗಾತ್ರದಲ್ಲಿ, ಪಾಕಿಸ್ತಾನವೆಂಬ ನಮ್ಮ ನೆರೆಯ ದೇಶದ ಒಟ್ಟು ವಿಸ್ತೀರ್ಣಕ್ಕಿಂತ ದೊಡ್ಡದು ಎಂಬ ಘೋರ ಸುಳ್ಳನ್ನು ಸೃಷ್ಟಿಸಿ, ಹಲವು ರೂಪಗಳಲ್ಲಿ ಪ್ರಸಾರ ಮಾಡಲಾರಂಭಿಸಿದರು.
ಪಾಕಿಸ್ತಾನ ದೇಶದ ಒಟ್ಟು ವಿಸ್ತೀರ್ಣ 8.82 ಲಕ್ಷ ಚದರ ಕಿಲೋ ಮೀಟರ್. ಇದಕ್ಕೆಹೋಲಿಸಿದರೆ, ಭಾರತದ ವಕ್ಫ್ ಬೋರ್ಡ್ ಮಾಲಕತ್ವದಲ್ಲಿರುವ ಜಮೀನು 9.40 ಲಕ್ಷ ಚದರ ಕಿಲೋ ಮೀಟರ್ ಎಂಬ ಈ ವಿದೂಷಕರ ವಾದ ಕೇಳಿ ಹಲವಾರು ಬೆಚ್ಚಿಬಿದ್ದರು. ನಿಜಕ್ಕೂ ಭಾರತದ ವಕ್ಫ್ ಬೋರ್ಡ್ ಮಾಲಕತ್ವದಲ್ಲಿರುವ ಜಮೀನಿನ ವಿಸ್ತೀರ್ಣವು ಪಾಕಿಸ್ತಾನ ಎಂಬ ದೇಶದ ಒಟ್ಟು ವಿಸ್ತೀರ್ಣಕ್ಕಿಂತಲೂ ದೊಡ್ಡದೇ? ಎಂದು ಊಹಿಸಿಯೇ ಹಲವರು ಮೂರ್ಛೆ ಹೋದರು. ಸಾಲದ್ದಕ್ಕೆ 1947ರಲ್ಲಿ ಭಾರತದ ಹೊರಗೆ ಪಾಕಿಸ್ತಾನವನ್ನು ನಿರ್ಮಿಸಿದವರು ವಕ್ಫ್ ಎಂಬ ಹೆಸರಲ್ಲಿ ಭಾರತದ ಒಳಗೆ ಅದಕ್ಕಿಂತಲೂ ದೊಡ್ಡ ಪಾಕಿಸ್ಥಾನವೊಂದನ್ನು ನಿರ್ಮಿಸಿಕೊಂಡಿದ್ದಾರೆ ಎನ್ನುವ ಮೂಲಕ ರಾಷ್ಟ್ರೀಯ ಸುಳ್ಳರ ಸಂಘದವರು ತಮ್ಮ ಸುಳ್ಳಿಗೆ ಇನ್ನಷ್ಟು ಬಣ್ಣ ತುಂಬಿದರು.
ನಿಜವಾಗಿ, ವಕ್ಫ್ ಬೋರ್ಡ್ ಬಗ್ಗೆ ಸುಳ್ಳು ಹೇಳುವವರು ತಮ್ಮ ಸುಳ್ಳನ್ನು ಬಹಳ ಜಾಣವಾಗಿ ಹೇಳಿದ್ದಾರೆ. ‘ಚದರ ಎಕರೆ’ ಅನ್ನಬೇಕಾದಲ್ಲಿ ‘ಚದರ ಕಿಲೋಮೀಟರ್’ ಅಂದು ಬಿಟ್ಟಿದ್ದಾರೆ. ಮೇಲ್ನೋಟಕ್ಕೆ ಅದು ಪುಟ್ಟ ವ್ಯತ್ಯಾಸ. ಆದರೆ ವಾಸ್ತವದಲ್ಲಿ ಪಾಕಿಸ್ತಾನದ ಬಳಿ ಇರುವ ಒಟ್ಟು ನೆಲ (8.82 ಲಕ್ಷ ಚದರ ಕಿ.ಮೀ.) ವನ್ನು ವಿಂಗಡಿಸಿದರೆ ಅದರ ಕೇವಲ 1ಶೇ. ಭಾಗ ಕೂಡಾ 882 ಕೋಟಿ ಚದರ ಮೀಟರ್ ಗಳಷ್ಟಾಗುತ್ತದೆ. ನೂರಾರು ಕೋಟಿ ಚದರ ಮೀಟರ್ ಗಳಲ್ಲಿರುವ ಈ 1ಶೇ. ಗೆ ಹೋಲಿಸಿದರೂ ಭಾರತದ ವಕ್ಫ್ ಬೋರ್ಡ್ ಬಳಿ ಇರುವ ಕೆಲವೇ ಲಕ್ಷ ಎಕರೆ ಜಮೀನು ಎಷ್ಟು ಜುಜುಬಿ ಎಂಬುದನ್ನು ಯಾರಾದರೂ ಸುಲಭವಾಗಿ ಊಹಿಸಬಹುದು. ಒಟ್ಟಿನಲ್ಲಿ, ಈ ಘೋರ ಸುಳ್ಳು ವ್ಯಾಪಕ ಚರ್ಚೆಗೆ ಬಂದಾಗ ‘ಇಂಡಿಯಾ ಟುಡೇ’ ಥರದ ಕೆಲವು ಪ್ರಧಾನಧಾರೆಯ ಮಾಧ್ಯಮಗಳು ಕೂಡಾ ಆ ಸುಳ್ಳನ್ನು ಜೋರಾಗಿ ಅಲ್ಲಗಳೆದವು. ಭಾರತದ ವಕ್ಫ್ ಮಾಲಕತ್ವದಲ್ಲಿರುವ ಜಾಮೀನು ಯಾವ ವಿಧದಲ್ಲೂ ಪಾಕಿಸ್ತಾನದ ಒಟ್ಟು ವಿಸ್ತೀರ್ಣಕ್ಕೆ ಸಾಟಿಯಲ್ಲ. ಪಾಕ್ ಜಮೀನು ಭಾರತದ ವಕ್ಫ್ ಜಮೀನಿಗೆ ಹೋಲಿಸಿದರೆ, ಒಂದೆರಡಲ್ಲ, ಹತ್ತಿಪ್ಪತ್ತಲ್ಲ, 231 ಪಟ್ಟು ಹೆಚ್ಚು ದೊಡ್ಡದು ಎಂಬುದನ್ನು ‘ಇಂಡಿಯಾ ಟುಡೇ’ ಪುರಾವೆ ಸಹಿತ ಸ್ಪಷ್ಟಪಡಿಸಿತು.
3. ಅಂಬಾನಿಯವರ ಸಂಪತ್ತಿಗೆ ಹೋಲಿಸಿದರೆ ಭಾರತದ ಒಟ್ಟು ವಕ್ಫ್ ಬೋರ್ಡ್ ಆಸ್ತಿ ಎಷ್ಟು ದೊಡ್ಡದು?
2024 ಡಿಸೆಂಬರ್ ತಿಂಗಳ ಮಾಹಿತಿ ಪ್ರಕಾರ ಮುಕೇಶ್ ಅಂಬಾನಿಯ ನೆಟ್ ವರ್ತ್ ಸುಮಾರು 95 ಬಿಲಿಯನ್ ಡಾಲರ್. ಅಂದರೆ ಸುಮಾರು 84 ಲಕ್ಷ ಕೋಟಿ ರೂಪಾಯಿಗಳು. ಇದಕ್ಕೆ ಹೋಲಿಸಿದರೆ ಭಾರತದ ವಕ್ಫ್ ಬೋರ್ಡ್ ಗಳ ಮಾಲಕತ್ವದಲ್ಲಿರುವ 9.40 ಲಕ್ಷ ಎಕರೆ ಜಮೀನಿನ ಮೌಲ್ಯ ಸರಕಾರಿ ಲೆಕ್ಕಾಚಾರ ಪ್ರಕಾರ 1.2 ಲಕ್ಷ ಕೋಟಿ ರೂಪಾಯಿಗಳು. ಅಂದರೆ ಅಂಬಾನಿ ಎಂಬ ಕೇವಲ ಒಬ್ಬ ಕುಬೇರನ ಸಂಪತ್ತಿಗೆ ಹೋಲಿಸಿದರೂ ಅದರ ಮುಂದೆ, ಭಾರತದ ವಕ್ಫ್ ಎಂಬ ಸಾರ್ವಜನಿಕ ಸಂಸ್ಥೆಯ ಮಾಲಕತ್ವದಲ್ಲಿರುವ ಸಂಪತ್ತಿನ ಒಟ್ಟು ಮೌಲ್ಯ 2ಶೇ. ಕ್ಕಿಂತಲೂ ಕಡಿಮೆ! ಈದೃಷ್ಟಿಯಿಂದ ಅಸೂಯೆ, ಹೊಟ್ಟೆಕಿಚ್ಚು, ರೋಷ, ಆಕ್ರೋಶ ಇತ್ಯಾದಿಗಳೆಲ್ಲಾ ಯಾರ ವಿರುದ್ಧ ಪ್ರಕಟವಾಗಬೇಕಿತ್ತು? ‘ಲ್ಯಾಂಡ್ ಜಿಹಾದ್’ ಮೂಲಕ ಭಾರತವನ್ನೇ ಕಬಳಿಸಲು ಹೊರಟಿರುವುದು ಕೇವಲ 1.2 ಲಕ್ಷ ಕೋಟಿ ರೂಪಾಯಿಮೌಲ್ಯದ ಸಂಪತ್ತಿರುವ ವಕ್ಫ್ ಬೋರ್ಡ್ ನವರೇ? ಅಥವಾ ವಕ್ಫ್ ನವರಿಗಿಂತ ಹತ್ತಾರು ಪಟ್ಟು ಅಧಿಕ ಸಂಪತ್ತಿನ ಮಾಲಕರಾಗಿರುವ ಅಂಬಾನಿ, ಅದಾಣಿ ಮುಂತಾದ ಖಾಸಗಿ ಕಂಪೆನಿಯವರೆ?
ಅಥವಾ ಈ ವಕ್ಫ್ ವಿರೋಧಿ ಆಂದೋಲನ ಆರಂಭವಾಗಿದ್ದೇ, ಕೆಲವೇ ಮಂದಿ ಮಹಾಕುಬೇರರ ಹಿತರಕ್ಷಣೆಗಾಗಿಯೇ? ಜನರು ಆರಿಸಿದ ಸರಕಾರವನ್ನು ತಮ್ಮ ಕೈಗೊಂಬೆಯಾಗಿಸಿಕೊಂಡಿರುವ ಈ ಕುಬೇರರು, ಎಲ್ಲ ಬಗೆಯ ಜನವಿರೋಧಿ ಕಾನೂನು ಮತ್ತು ಧೋರಣೆಗಳನ್ನು ಸರಕಾರದಿಂದ ಮಂಜೂರು ಮಾಡಿಸಿ ಜನಹಿತಕ್ಕೆ ದ್ರೋಹ ಬಗೆಹಯುತ್ತಿರುವುದನ್ನು ಮರೆಮಾಚಲು ಈ ತರದ ಅಸಂಗತ ವಿಷಯಗಳನ್ನು ಚರ್ಚೆಗೆ ಎಳೆದು ತರಲಾಗುತ್ತಿದೆಯೇ? ಇವು ಖಂಡಿತ ಗಮನಾರ್ಹ ಪ್ರಶ್ನೆಗಳು.
4. ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನವು ತನಗೆ ಸೇರಿದ್ದೆಂದು ವಕ್ಫ್ ಬೋರ್ಡ್ ವಾದಿಸಿತ್ತೇ?
ಕಳೆದ ವರ್ಷ ನವೆಂಬರ್‌ನಲ್ಲಿ ಮೊದಲು ಮುಂಬೈಯಲ್ಲಿ ಮತ್ತು ಆ ಬಳಿಕ ಶೀಘ್ರದಲ್ಲೇ ಸಂಪೂರ್ಣ ಮಹಾರಾಷ್ಟ್ರದಲ್ಲಿ ಒಂದು ವದಂತಿ ಹಬ್ಬಿತು. ಮುಂಬೈಯ ಪ್ರಭಾದೇವಿ ಪ್ರದೇಶದಲ್ಲಿರುವ ಖ್ಯಾತ ಶ್ರೀ ಸಿದ್ಧಿ ವಿನಾಯಕ ಗಣಪತಿ ದೇವಸ್ಥಾನವು ವಕ್ಫ್ ಬೋರ್ಡ್ ಜಮೀನಿನಲ್ಲಿದೆ ಮತ್ತು ಅದನ್ನು ತನಗೆ ಮರಳಿಸಬೇಕೆಂದು ಮಹಾರಾಷ್ಟ್ರದ ವಕ್ಫ್ ಬೋರ್ಡ್, ದೇವಸ್ಥಾನಕ್ಕೆ ನೋಟಿಸ್ ನೀಡಿದೆ ಎಂಬುದೇ ಆ ವದಂತಿ.
ಮೊದಲು ಕೆಲವು ಅಜ್ಞಾತ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಈ ವದಂತಿ, ಕ್ರಮೇಣ ಪ್ರಧಾನ ಧಾರೆಯ ಸುದ್ದಿ ಚ್ಯಾನೆಲ್ ಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಹಾಗೂ ಅವುಗಳ ವೆಬ್ ಸೈಟ್ ಗಳಲ್ಲಿ ರಾರಾಜಿಸತೊಡಗಿತು. ದೇವಸ್ಥಾನದ ಚಿತ್ರ, ಅದರೊಳಗಿನ ಗರ್ಭಗುಡಿಯ ಚಿತ್ರ, ಗಣಪತಿಯ ಮೂರ್ತಿಯ ಚಿತ್ರ ಹೀಗೆ ಎಲ್ಲ ಕಡೆ ಒಂದೇ ಬಗೆಯ ಚಿತ್ರಗಳು, ಅಲ್ಪ ಸ್ವಲ್ಪ ತಿದ್ದುಪಡಿ ಅಥವಾ ವಿಕೃತಿಯೊಂದಿಗೆ ವಿಜೃಂಭಿಸಿದವು. ಜೊತೆಗೆ ಮುಸಲ್ಮಾನರನ್ನು ಟೀಕಿಸುವ, ನಿಂದಿಸುವ, ಬೆದರಿಸುವ, ಹೇಳಿಕೆಗಳ ಮಳೆ ಸುರಿಯತೊಡಗಿತು. ವಕ್ಫ್ ಬೋರ್ಡ್ ಅನ್ನು ಅಶ್ಲೀಲವಾಗಿ ಬಯ್ಯುವ ಅಭಿಯಾನ ಆರಂಭವಾಯಿತು. ಸಹಜವಾಗಿಯೇ ಇದರಿಂದ ಆರೆಸ್ಸೆಸ್, ಬಿಜೆಪಿಯವರು ಬಯಸುವಂತಹ ಉದ್ವಿಗ್ನ ವಾತಾವರಣ ನಿರ್ಮಾಣವಾಗತೊಡಗಿತು.
ಮಹಾರಾಷ್ಟ್ರ ವಕ್ಫ್ ಬೋರ್ಡ್ ಮತ್ತು ಸಿದ್ಧಿವಿನಾಯಕ ಮಂದಿರದ ಆಡಳಿತ ಮಂಡಳಿಯವರು ಸಕಾಲದಲ್ಲಿ ಈ ಅಶ್ಲೀಲ ವದಂತಿಯನ್ನು ಅಲ್ಲಗಳೆಯುವ ಹೇಳಿಕೆಗಳನ್ನು ನೀಡಿದರು. ತಾನು ಯಾರಿಗೂ ಯಾವುದೇ ನೋಟಿಸ್ ನೀಡಿಲ್ಲ ಎಂದು ವಕ್ಫ್ ಬೋರ್ಡ್ ಸ್ಪಷ್ಟೀಕರಿಸಿದರೆ, ತಮಗೆ ಎಲ್ಲಿಂದಲೂ ಯಾವುದೇ ನೋಟಿಸ್ ಬಂದಿಲ್ಲ ಎಂದು ಮಂದಿರದ ಆಡಳಿತ ಸಮಿತಿಯವರು ಸ್ಪಷ್ಟೀಕರಣ ನೀಡಿದರು. ಈ ಒಟ್ಟು ನಾಟಕದ ಹಿಂದಿನ ಘೋರ ಸಂಚುಗಳನ್ನು ಗುರುತಿಸಿದವರು ಅದನ್ನು ಖಂಡಿಸಿದರು. ಉದಾ: ಶಿವಸೇನಾ ನಾಯಕ ಆದಿತ್ಯ ಠಾಕ್ರೆಯವರು ಬಿಜೆಪಿಯವರ ಮಾನಸಿಕತೆ ನಿಜಕ್ಕೂ ಜಿಗುಪ್ಸೆ ಹುಟ್ಟಿಸುವಂತಿದೆ. ವಿಭಜಿಸಿ ಆಳಬೇಕು, ಸುಳ್ಳು ಹೇಳಿ ಗೆಲ್ಲಬೇಕು ಎಂಬುದೇ ಅವರ ಧ್ಯೇಯ. ಈರೀತಿ ಜನರ ನಡುವೆ ದ್ವೇಷ ಬಿತ್ತುವ ಶಕ್ತಿಗಳ ವಿರುದ್ಧ ಮತ್ತು ಇಂತಹ ಮಹಾರಾಷ್ಟ ವಿರೋಧಿ ಶಕ್ತಿಗಳ ವಿರುದ್ಧ ಚುನಾವಣಾ ಆಯೋಗ ಮತ್ತು ಮುಂಬೈ ಪೊಲೀಸರು ಏನಾದರೂ ಕ್ರಮ ಕೈಗೊಳ್ಳುವರೇ? ಈರೀತಿ ನಿಮ್ಮ ಓಟಿನ ಸ್ವಾರ್ಥಕ್ಕಾಗಿ ನೀವು ನಮ್ಮ ಮಹಾರಾಷ್ಟ್ರದಲ್ಲಿ ನಮ್ಮ ಭಾವನೆಗಳೊಂದಿಗೆ ಚೆಲ್ಲಾಟವಾಡಬೇಡಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಸ್ಪಷ್ಟ ಎಚ್ಚರಿಕೆ ನೀಡಿದರು.
5. ಆಂಧ್ರ ಸರಕಾರ ವಕ್ಫ್ ಬೋರ್ಡನ್ನೇ ರದ್ದುಗೊಳಿಸಿ ಬಿಟ್ಟಿತೇ?
ಕಳೆದ ವರ್ಷ ಡಿಸೆಂಬರ್‌ನಲ್ಲಿ, ವಕ್ಫ್ ಮಸೂದೆಯ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯುತ್ತಿದ್ದಾಗಲೇ ಎರಡು ಬಗೆಯ ವದಂತಿಗಳು ತಲೆ ಎತ್ತಿದವು. ಕೇಂದ್ರದಲ್ಲಿ ಆಳುತ್ತಿರುವ ಎನ್. ಡಿ.ಎ. ಒಕ್ಕೂಟದ ಭಾಗವಾಗಿರುವ ಆಂಧ್ರದ ಟಿಡಿಪಿ ಪಕ್ಷವು ಮಸೂದೆಯನ್ನು ವಿರೋಧಿಸಲು ತೀರ್ಮಾನಿಸಿದೆ ಎಂಬುದು ಒಂದು ವದಂತಿಯಾದರೆ, ಆಂಧ್ರ ಸರಕಾರವು ತನ್ನ ರಾಜ್ಯದಲ್ಲಿ ವಕ್ಫ್ ಮಂಡಳಿಯನ್ನೇ ಸಂಪೂರ್ಣ ರದ್ದುಗೊಳಿಸಿಬಿಟ್ಟಿದೆ ಎಂಬುದು ಇನ್ನೊಂದು ವದಂತಿಯಾಗಿತ್ತು. ಈ ಎರಡನೆಯ ವದಂತಿಗೆ ವ್ಯಾಪಕ ಪ್ರಚಾರ ಸಿಕ್ಕಿತು. ಹಲವು ಪತ್ರಿಕೆಗಳು ಮತ್ತು ಚಾನೆಲ್ ಗಳು ಪ್ರಸ್ತುತ ಸುಳ್ಳನ್ನು ಎಲ್ಲೆಡೆಗೆ ತಲುಪಿಸುವ ಸೇವೆ ಸಲ್ಲಿಸಿದವು. ಎಲ್ಲೆಂದರಲ್ಲಿ ಆ ಕುರಿತು ಚರ್ಚೆ, ಸಂವಾದ ಏರ್ಪಟ್ಟಿತು. ಚಂದ್ರಬಾಬು ನಾಯ್ಡು ಅವರು ಈ ಮೂಲಕ ‘ಸರ್ಜಿಕಲ್ ಸ್ಟ್ರೈಕ್’ ಮಾಡಿದ್ದಾರೆ! ಎಂತಹ ಅದ್ಭುತ ಕ್ರಮ! ಬೇರೆ ರಾಜ್ಯ ಸರಕಾರಗಳು ಕೂಡಾ ಇಂತಹದೇ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬೇಡಿಕೆಗಳು ಕೇಳಿ ಬರತೊಡಗಿದವು.
ಆ ಬಳಿಕ ಸ್ಪಷ್ಟವಾದ ಪ್ರಕಾರ, ಆಂಧ್ರ ಪ್ರದೇಶದಲ್ಲಿ ಅಂತಹದೇನೂ ನಡೆದೇ ಇರಲಿಲ್ಲ. ಅಲ್ಲಿ ವಕ್ಫ್ ಬೋರ್ಡ್ ಗೆ ಒಂದು ಆಡಳಿತ ಮಂಡಳಿ ಇತ್ತು. ಅದು ಬಹುಕಾಲದಿಂದ ನಿಷ್ಕ್ರಿಯವಾಗಿತ್ತು. ರಾಜ್ಯ ಸರಕಾರವು ಆ ಹಳೆಯ ಆಡಳಿತ ಮಂಡಳಿಯನ್ನು ವಿಸರ್ಜಿಸಿ ಹೊಸ ಮಂಡಳಿಯನ್ನು ರಚಿಸುವುದಾಗಿ ಘೋಷಿಸಿತ್ತು.
ಮುಂದಿನ ದಿನಗಳಲ್ಲಿ, ಮುಸ್ಲಿಮರಿಗೆ ಸಂಬಂಧಿಸಿದ ಬೇರೊಂದು ದೊಡ್ಡ ವಿವಾದದ ವಿಷಯವು ಕೈಗೆ ಸಿಗುವ ತನಕ, ವಕ್ಫ್ ಮಸೂದೆಯೇ ದೇಶದೆಲ್ಲೆಡೆ ಚರ್ಚೆ, ವಾಗ್ಯುದ್ಧ ಮತ್ತು ಬೀದಿ ಜಗಳದ ವಿಷಯವಾಗಿ ಉಳಿಯಲಿದೆ. ಎಷ್ಟೋ ಪ್ರಮುಖ ವಿಷಯಗಳ ಬಗ್ಗೆ ಚರ್ಚೆಯನ್ನು ತಪ್ಪಿಸಲಿಕ್ಕಾಗಿಅವರು ಇಂತಹ ಹುಸಿ ವಿಷಯಗಳನ್ನು ಚರ್ಚೆಯಲ್ಲಿಡುತ್ತಾರೆ. ಅವರ ಬಳಿ ಸುಳ್ಳು ಬಿಟ್ಟರೆ ಬೇರಾವ ಬಂಡವಾಳವೂ ಇಲ್ಲವಾದ್ದರಿಂದ ಅವರು ಪದೇ ಪದೇ ಹಲವು ಬಗೆಯ ಸುಳ್ಳುಗಳನ್ನು ಹಲವು ವಿಧಗಳಲ್ಲಿ ಸಮಾಜಕ್ಕೆ ಬಡಿಸುತ್ತಲೇ ಇರುವ ಸಾಧ್ಯತೆ ಇದೆ. ಸಮಾಜ ಸನ್ನದ್ಧವಾಗಿರುವುದೊಳ್ಳೆಯದು.