ಜಾನುವಾರುಗಳಿಗೆ ಮೇವಿಲ್ಲದೆ ಕಂಗಾಲಾದ ರೈತರು
ಪಾವಗಡ, ಮಾ.21: ಮಳೆ ಕೈಕೊಟ್ಟು ಬರ ಕರಾಳತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಾಲೂಕಿನ ನಾಗಲಾಪುರ ಗ್ರಾಮ ಸೇರಿದಂತೆ ತಾಲೂಕಿನ ಇನ್ನಿತರ ಗ್ರಾಮಗಳಲ್ಲಿ ಜಾನುವಾರುಗಳಿಗೆ ನೀರು, ಮೇವು ಇಲ್ಲದಂತಾಗಿ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.
ವೈಎನ್ ಹೊಸಕೋಟೆ ಹೋಬಳಿಯ ನಾಗಲಾಪುರ ಗ್ರಾಮದಲ್ಲಿ ಸುಮಾರು 2,000ಕ್ಕೂ ಹೆಚ್ಚು ಜಾನುವಾರುಗಳು ಇದ್ದು. ಜಾನುವಾರುಗಳಿಗೆ ಮೇವು ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು. ಸಂಬಂಧಪಟ್ಟ ಅಧಿಕಾರಿಗಳು ಗೋಶಾಲೆ ತೆರೆದು ಮೇವುನ್ನು ವಿತರಿಸಿ ಗೋವುಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮದ ಗೋ ಪಾಲಕರ ಮನವಿಯಾಗಿದೆ.
ಸಾಕಿದ ಮಾಲಕರು ಜಾನುವಾರುಗಳನ್ನು ಮೇವಿಲ್ಲದೆ ಮನೆಯಿಂದ ಹೊರ ಬಿಡುವುದರಿಂದ ಕಿಲೋ ಮೀಟರ್‌ಗಳವರೆಗೆ ದೂರ ಹೋದರೂ ಮೇವು ಸಿಗದ ಕಾರಣ ಕಂಗಾಲಾಗಿವೆ. ಎಲ್ಲಿಯಾದರೂ ನೀರು-ನೆರಳು ಕಂಡರೆ ಸಾಕು ಪಕ್ಕನೆ ನಿಂತುಕೊಳ್ಳುತ್ತಿವೆ. ಬರದ ಭೀಕರತೆ ಹೆಚ್ಚುತ್ತಿರುವುದರಿಂದ ಜನರಿಗೆ ಕುಡಿಯಲು ನೀರು ಇಲ್ಲದಂತಾದ ಕಾರಣ, ತಮ್ಮ ಜಾನುವಾರುಗಳಿಗೆ ಎಲ್ಲಿಂದ ನೀರು ತರಬೇಕು ಎಂದು ಮನೆಯಲ್ಲಿರುವ ತಮ್ಮ ರಾಸುಗಳನ್ನು ಹೊರ ಹಾಕುತ್ತಿರುವ ಘಟನೆ ಈ ಗ್ರಾಮಗಳ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ.
ನಮ್ಮ ಸ್ಥಿತಿಯನ್ನು ಅರಿಯಬೇಕಾದರೆ ಗ್ರಾಮಗಳಿಗೆ ಬಂದು ನೋಡಲಿ ನೈಜ ಪರಿಸ್ಥಿತಿ ಅರ್ಥವಾಗುತ್ತದೆ ಎಂದು ನಾಗಲಾಪುರ ಹಾಗೂ ಇನ್ನಿತರ ಗ್ರಾಮಗಳ ರೈತರು ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಲೆ ಕಟ್ಟಲಾಗದ ತಮ್ಮ ಜಾನುವಾರಗಳ ಬಗ್ಗೆ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಇಲ್ಲಿನ ಸ್ಥಳೀಯರ ಮಾತಾಗಿದೆ.
ಬೆಟ್ಟದಲ್ಲಿಯೂ ಮೇವಿಲ್ಲ
ತಾಲೂಕು ಸೇರಿದಂತೆ ನಾಗಲಾಪುರ ಗ್ರಾಮ ಗುಡ್ಡಗಾಡುಗಳಿಂದ ತುಂಬಿದೆ. ಇತರೆಡೆ ಮೇವು ಇಲ್ಲದಿದ್ದರೂ ಬೆಟ್ಟ ಗುಡ್ಡಗಳಲ್ಲಿ ಕುರಿ ಮೇಕೆ ದನ ಕರುಗಳಿಗೆ ಮೇವು ಸಿಗುತ್ತಿತ್ತು. ಆದರೆ ಮಳೆ ಇಲ್ಲದ ಕಾರಣ ಅಲ್ಲಿಯೂ ಮೇವು ಸಿಗುತ್ತಿಲ್ಲ ಬೆಟ್ಟಕ್ಕೆ ಬೆಂಕಿ ಇಡುವವರ ಹಾವಳಿ ಹೆಚ್ಚಾಗಿರುವುದರಿಂದ ಇರುವ ಅಲ್ಪ ಸ್ವಲ್ಪ ಮೇವು ಸಂಪೂರ್ಣ ಸುಟ್ಟು ಹೋಗಿದೆ.
ನಾಗಲಾಪುರ ಹೆಚ್ಚು ಜಾನುವಾರುಗಳು ಮತ್ತು ಕುರಿ ಮೇಕೆಗಳು ಇರುವ ಗ್ರಾಮವಾಗಿದ್ದು ಇಲ್ಲಿ ಗೋಶಾಲೆ ಅತ್ಯವಶ್ಯಕವಾಗಿದೆ. ಮಳೆ ಅಭಾವದಿಂದ ಎಲ್ಲಿಯೂ ಮೇವು ಸಿಗುತ್ತಿಲ್ಲ. ಮೇವು ಕೊಂಡುಕೊಳ್ಳಲು ನಮ್ಮ ಹತ್ತಿರ ಹಣ ಇಲ್ಲ. ದಿಕ್ಕು ತೋಚದ ಪರಿಸ್ಥಿತಿಯಲ್ಲಿ ನಾವಿದ್ದೇವೆ.
-ವೆಂಕಟೇಶಪ್ಪ, ಗ್ರಾಮಸ್ಥ