ದುಬಾರಿಯಾದರೂ ಕೊಟ್ಟಿಗೆ ಗೊಬ್ಬರದತ್ತ ರೈತರ ಚಿತ್ತ
ರಸಗೊಬ್ಬರ ಬದಲಿಗೆ ಕಾಂಪೋಸ್ಟ್ ಗೊಬ್ಬರಕ್ಕೆ ಹೆಚ್ಚು ಬೇಡಿಕೆ
ಹೊಸಕೋಟೆ: ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದ್ದು, ಜಿಲ್ಲೆಯಲ್ಲಿ ಕೊಟ್ಟಿಗೆ ಗೊಬ್ಬರ ಬಳಕೆಯತ್ತ ರೈತರು ಹೆಚ್ಚಿನ ಒಲವು ತೋರುತ್ತಿದ್ದಾರೆ.
ರೈತರು ಹೆಚ್ಚಾಗಿ ಡಿಎಪಿ ಮತ್ತಿತರ ರಸಗೊಬ್ಬರವನ್ನು ಉತ್ತಮ ಇಳುವರಿಗಾಗಿ ಬಳಸುತ್ತಿದ್ದರು. ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಕೆಯಿಂದ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗುತ್ತವೆ. ಜತೆಗೆ ಹೆಚ್ಚು ರಸಗೊಬ್ಬರ ಬಳಕೆಯಿಂದ ಕ್ರಮೇಣ ಭೂಮಿ ತನ್ನ ಸಾರವನ್ನು ಕಳೆದುಕೊಂಡು ಈ ಪ್ರದೇಶದಲ್ಲಿ ಯಾವುದೇ ಬೆಳೆ ಉತ್ತಮವಾಗಿ ಬೆಳೆಯುವುದಿಲ್ಲ. ಆಹಾರ ಪದಾರ್ಥಗಳ ಬಳಕೆಯಿಂದ ನಾನಾ ರೋಗಗಳು ಕಾಣಿಸಿಕೊಳ್ಳ ಲಾರಂಭಿಸಿದ್ದು, ಸರಕಾರ ಮತ್ತೆ ಸಾವಯವ ಕೃಷಿಗೆ ಹೆಚ್ಚು ಪ್ರೋತ್ಸಾಹ ನೀಡಿದ್ದು, ರೈತರು ಸಾವಯವ ಕೃಷಿಗೆ ಮುಂದಾಗಿದ್ದಾರೆ. ಪ್ರಸಕ್ತ ಮಾರು ಕಟ್ಟೆಯಲ್ಲಿ ಸಾವಯವ ಕೃಷಿಯಿಂದ ಬೆಳೆದ ಆಹಾರ ಪದಾರ್ಥಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ (ರಾಸಾಯನಿಕ ಗೊಬ್ಬರ ರಹಿತ) ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಿ ಪ್ರಮಾಣದಲ್ಲಿ ಬಳಸುತ್ತಿದ್ದಾರೆ.
ಬೇಡಿಕೆ ಹೆಚ್ಚಿಸಿಕೊಂಡ ಕೊಟ್ಟಿಗೆ ಗೊಬ್ಬರ: ಕೊಟ್ಟಿಗೆ ಗೊಬ್ಬರಕ್ಕೆ ಟ್ರ್ಯಾಕ್ಟರ್, ಲಾರಿ ಮತ್ತು ಎತ್ತಿನಗಾಡಿಗೆ ಇಂತಿಷ್ಟು ಬೆಲೆ ನಿಗದಿಯಾಗಿದೆ. ರೈತರು ಬೆಲೆ ಹೆಚ್ಚಿದ್ದರೂ ಲೋಡ್ ಗಟ್ಟಲೆ ಗೊಬ್ಬರ ಖರೀದಿಸುತ್ತಿದ್ದು, ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಸಿಲಿಕಾನ್ ಸಿಟಿಗೆ ಹತ್ತಿರವಿದ್ದರೂ ಇಲ್ಲಿನ ರೈತರು ಕೃಷಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ಭೂಮಿಯ ಫಲವತ್ತತೆ ಹೆಚ್ಚಿಸಬೇಕಾದರೆ ಕೊಟ್ಟಿಗೆ ಗೊಬ್ಬರ ಬಳಸಿ ಸಾವಯುವ ಕೃಷಿ ಮಾಡಬೇಕು ಎಂದು ಸರಕಾರ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ.
ರೈತರ ಮಧ್ಯೆ ಹೆಚ್ಚಿದ ಬಾಂಧವ್ಯ: ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ನಡೆಸುವ ರೈತರಿಗೆ ರಾಗಿ ಹುಲ್ಲು, ಮೇವು ಬೇಕೆ ಬೇಕು. ಕೃಷಿ ಭೂಮಿ ಹೊಂದಿರುವ ರೈತರಿಗೆ ಗೊಬ್ಬರದ ಅವಶ್ಯಕತೆ ಇರುತ್ತದೆ. ಹೈನುಗಾರಿಕೆ ಮತ್ತು ಕೃಷಿ ಮಾಡುವ ರೈತರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ರಾಸುಗಳನ್ನು ಸಾಕುವುದರಿಂದ ಕೊಟ್ಟಿಗೆ ಗೊಬ್ಬರ ಹೆಚ್ಚು ಉತ್ಪತ್ತಿಯಾಗುತ್ತದೆ. ಈ ಗೊಬ್ಬರವನ್ನು ಭೂಮಿಗೆ ಹಾಕುವುದರಿಂದ ಭೂಮಿ ಹೆಚ್ಚು ಫಲವತ್ತಾಗಿ ರೋಗರಹಿತ ಉತ್ತಮ ಇಳುವರಿ ಸಿಗುತ್ತದೆ.
ದುಬಾರಿ ರಸಗೊಬ್ಬರದ ಲೆಕ್ಕಾಚಾರ: ಸರಕಾರ ರಸಗೊಬ್ಬರಗಳ ಬೆಲೆ ಏರಿಕೆ ಮಾಡಿರುವುದರಿಂದ ದುಬಾರಿ ಹಣ ನೀಡಿ ಗೊಬ್ಬರ ಖರೀದಿಸಲು ಸಾಧ್ಯವಾಗದ ಸಣ್ಣ ರೈತರು ಕೊಟ್ಟಿಗೆ ಗೊಬ್ಬರವನ್ನೇ ಬಳಸಲು ಮುಂದಾಗಿದ್ದು, ಈ ಕೊಟ್ಟಿಗೆ ಗೊಬ್ಬರ ಬಳಕೆಯಿಂದ ಇಳುವರಿ ಹೆಚ್ಚು ಬರುತ್ತದೆ ಜತೆಗೆ ನೀರಿನ ನಿರ್ವಹಣೆಯೂ ಸುಲಭವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಕೋಳಿ ಗೊಬ್ಬರಕ್ಕೂ ಬೇಡಿಕೆ: ಭೂಮಿಗೆ ರಸಗೊಬ್ಬರವನ್ನು ಹೇರಳವಾಗಿ ಹಾಕಿ ಬೆಳೆಯುತ್ತಿದ್ದ ರೈತರು ಸಾವಯವ ಕೃಷಿಗೆ ಕಡೆ ಮುಖ ಮಾಡಿದ್ದಾರೆ. ಕೊಟ್ಟಿಗೆ ಗೊಬ್ಬರ ಹಾಕಲು ಲಭ್ಯವಿಲ್ಲದ ಕಾರಣ ಕೋಳಿಗೊಬ್ಬರಕ್ಕೆ ಮೊರೆಹೋಗಿದ್ದಾರೆ. ಇದರಿಂದ ಕೋಳಿಫಾರಂ ಮಾಲಕರಿಗೂ ಲಾಭವಾಗುತ್ತಿದೆ.
ಒಂದು ಟ್ರ್ಯಾಕ್ಟರ್ ಕೊಟ್ಟಿಗೆ ಗೊಬ್ಬರಕ್ಕೆ 5 ಸಾವಿರ ರೂ. ಇದೆ. ಇತ್ತೀಚೆಗೆ ಡಿಎಪಿ ಪೂರೈಕೆ ಕಡಿಮೆ ಇದೆ. ನಮ್ಮ ಹಿರಿಯರು ಅನುಸರಿಸುತ್ತಿದ್ದ ಕೊಟ್ಟಿಗೆ ಗೊಬ್ಬರ ಬಳಕೆಯ ವಿಧಾನದಿಂದ ಹೆಚ್ಚಿನ ಇಳುವರಿ ಪಡೆಯಬಹುದು.
-ನಂದೀಶ್ , ರೈತ, ಚಿಕ್ಕಕೋಲಿಗ
ಇತ್ತೀಚೆಗೆ ಕೊಟ್ಟಿಗೆ ಗೊಬ್ಬರಕ್ಕೆ ಬೇಡಿಗೆ ಹೆಚ್ಚಾಗಿದೆ. ಕೊಟ್ಟಿಗೆ ಗೊಬ್ಬರವನ್ನು ಖರೀದಿಸಿ ವ್ಯಾಪಾರ ವಹಿವಾಟು ಮಾಡುತ್ತಿದ್ದು, ಮಳೆ ಬಂದಿರುವುದರಿಂದ ಕೊಟ್ಟಿಗೆ ಗೊಬ್ಬರವನ್ನು ಕೃಷಿ ಭೂಮಿಯಲ್ಲಿ ಹೆಚ್ಚಾಗಿ ರೈತರು ಬಳಸಲು ಮುಂದಾಗಿದ್ದಾರೆ.
-ಅಂಜಿನಪ್ಪ, ಕೊಟ್ಟಿಗೆ ಗೊಬ್ಬರ ವ್ಯಾಪಾರಿ