ನಾಟಿಕೋಳಿ, ಪಶುಸಂಗೋಪನೆಯಿಂದ ಆರ್ಥಿಕ ಸ್ವಾವಲಂಬನೆ
ಮಂಡ್ಯ: ಹಲವು ದಶಕಗಳಿಂದ ಭತ್ತ, ರಾಗಿ, ಕಬ್ಬು ಬೆಳೆಯನ್ನೇ ಅವಲಂಬಿಸಿದ್ದ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದ ರೈತ ಧನಂಜಯ, ಎರಡು ವರ್ಷದಿಂದ ಕೃಷಿ ಜತೆಗೆ ನಾಟಿಕೋಳಿ ಮತ್ತು ಪಶುಸಂಗೋಪನೆ ಮಾಡುತ್ತಾ ಕೃಷಿಯಲ್ಲೂ ಆರ್ಥಿಕವಾಗಿ ಸ್ವಾವಲಂಬಿಯಾಗಬಹದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಇತ್ತೀಚೆಗೆ ನಾಟಿಕೋಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಬ್ರಾಯ್ಲರ್(ಮಾಂಸದ) ಕೋಳಿಗೆ ಔಷಧಿ ಮತ್ತು ರಾಸಾಯನಿಕ ಮಿಶ್ರಿತ ಫೀಡ್ಸ್ ನೀಡುವುದರಿಂದ ಅದರ ಮಾಂಸ ಆರೋಗ್ಯಕ್ಕೆ ಹಾನಿಕರ ಎಂಬ ಭಾವನೆ ಇತ್ತೀಚಿನ ದಿನಗಳಲ್ಲಿ ಜನರಿಗೆ ಬರುತ್ತಿದೆ. ಹಾಗಾಗಿ ದುಬಾರಿಯಾದರೂ ನಾಟಿಕೋಳಿ ಮಾಂಸಕ್ಕೆ ಬೇಡಿಕೆ
ಹೆಚ್ಚಾಗುತ್ತಿದೆ. ಇದನ್ನು ಅರಿತ ಧನಂಜಯ ತನ್ನ ಜಮೀನಿನಲ್ಲೇ ಸಣ್ಣದಾದ ಶೆಡ್ ನಿರ್ಮಿಸಿ ಎರಡು ವರ್ಷದಿಂದ ನಾಟಿಕೋಳಿ ಸಾಕಣೆ ಮಾಡುತ್ತಿದ್ದಾರೆ. ನಾಟಿಕೋಳಿಗಳಿಗೆ ಇವರು ಯಾವುದೇ ಬ್ರಾಂಡ್‌ನ ಫೀಡ್ಸ್ ಬಳಸುವುದಿಲ್ಲ. ರಾಗಿ, ಜೋಳದ ನುಚ್ಚು, ಸೊಪ್ಪು, ಇತರ ಕಾಳುಗಳನ್ನು ನೀಡುತ್ತಾರೆ. ಈಗಾಗಲೇ ಎರಡು ಬಾರಿ ಮಾರಾಟದಿಂದ ಲಾಭ ಬಂದಿದೆ.
ಜತೆಗೆ ಐದು ಮಿಶ್ರತಳಿ ಹಸುಗಳಿದ್ದು, ಈ ಪೈಕಿ ಮೂರು ಹಸುಗಳು ಪ್ರಸ್ತುತ ಹಾಲು ನೀಡುತ್ತಿವೆ. ದಿನಕ್ಕೆ 20 ಲೀಟರ್‌ವರೆಗೂ ಹಾಲು ಸಿಗುತ್ತಿದ್ದು, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸರಬರಾಜು ಮಾಡುತ್ತಿದ್ದಾರೆ. ಬೀಟಲ್ ತಳಿಯ ಎರಡು ಮೇಕೆ ಮತ್ತು ಸ್ಥಳೀಯ ಜಾತಿಯ ಐದು ಕುರಿಗಳನ್ನೂ ಸಾಕಿದ್ದಾರೆ. ಹಸುಗಳ ಸಗಣಿ ಮತ್ತು ಕೋಳಿಯ ಪಿಕ್ಕೆ ಬೆಳೆಗಳಿಗೆ ಸಮೃದ್ಧ ಗೊಬ್ಬರವಾಗಿದ್ದು, ರಾಸಾಯನಿಕ ಗೊಬ್ಬರದ ಮೇಲಿನ ಅವಲಂಬನೆಯನ್ನು ತಗ್ಗಿಸಿದೆ.
ಕೆಲಸದವರನ್ನು ಅವಲಂಬಿಸದೆ ತಮ್ಮ ಮಗ ಮತ್ತು ಪತ್ನಿಯ ಜೊತೆಗೂಡಿ ಧನಂಜಯ ಅವರು ಕೋಳಿ ಸಾಕಣಿಕೆ, ಪಶುಪಾಲನೆ ಮತ್ತು ಕೃಷಿಯಿಂದ ಆದಾಯ ಪಡೆದು ಸ್ವಾವಲಂಬನೆಯ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ರೈತರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಕೃಷಿ ಇಲಾಖೆ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರಶ್ಮಿ ಹೇಳುತ್ತಾರೆ.
ಭತ್ತ, ರಾಗಿ ಮಾತ್ರ ಬೆಳೆಯುತ್ತಿದ್ದೆ. ಆದರೆ, ಸರಿಯಾದ ಬೆಲೆ ಸಿಗದೇ ನಷ್ಟವಾಗುತ್ತಿತ್ತು. ನಾಟಿಕೋಳಿಗೆ ಬೇಡಿಕೆ ಹೆಚ್ಚುತ್ತಿರುವುದನ್ನು ಗಮನಿಸಿ ಎರಡು ವರ್ಷಗಳಿಂದ ಕೋಳಿ ಸಾಕಲು ಪ್ರಾರಂಭಿಸಿದೆ. ಜತೆಗೆ ಹಸುಗಳನ್ನೂ ಸಾಕಲು ಪ್ರಾರಂಭಿಸಿದೆ. ನಾಟಿಕೋಳಿಗೆ ಉತ್ತಮ ಬೆಲೆ ಇದೆ. ಕೋಳಿ ಮತ್ತು ಹಸುಗಳಿಂದ ವರ್ಷಕ್ಕೆ ಕನಿಷ್ಠ ಎರಡು ಲಕ್ಷ ರೂ. ಸಿಗುತ್ತಿದೆ.
-ಧನಂಜಯ, ಪ್ರಗತಿಪರ ರೈತ