ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಹಾಗೂ ಮಾಧ್ಯಮಗಳು
ಚುನಾವಣೆಗಳು ಪ್ರಜಾಸತ್ತಾತ್ಮಕವಾಗಿ ನಡೆಯಬೇಕಾದರೆ ಮಾಧ್ಯಮಗಳು ಅತ್ಯಗತ್ಯ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಎಂದರೆ ಸರಿಯಾದ ಪರಿಸ್ಥಿತಿಯಲ್ಲಿ ಮತ ಚಲಾಯಿಸುವುದು ಮಾತ್ರವಲ್ಲದೆ, ರಾಜಕೀಯ ಪಕ್ಷಗಳ ನೀತಿಗಳು, ಅಭ್ಯರ್ಥಿಗಳು ಮತ್ತು ಚುನಾವಣಾ ಪ್ರಕ್ರಿಯೆಯ ಬಗ್ಗೆ ನಿಷ್ಪಕ್ಷಪಾತ ಮಾಹಿತಿಯನ್ನು ಜನರು ತಿಳಿದುಕೊಳ್ಳಬೇಕಾದುದು. ಸಾರ್ವಜನಿಕರಿಗೆ ಈ ಮಾಹಿತಿಗಳನ್ನು ಒದಗಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದರಿಂದ ಮತದಾರರಲ್ಲಿ ಜಾಗೃತಿ ಉಂಟಾಗಿ ತಿಳುವಳಿಕೆಯುಳ್ಳ ಅಭ್ಯರ್ಥಿಯ ಆಯ್ಕೆಯನ್ನು ಮಾಡಲು ಅನೂಕೂಲವಾಗುತ್ತದೆ. ಆದರೆ ಮಾಧ್ಯಮದ ಬಹುತ್ವ ಮತ್ತು ವಿಭಿನ್ನ ವೃತ್ತಿಪರ ಮಾನದಂಡಗಳು, ಚುನಾವಣೆಗಳಲ್ಲಿ ಮಾಧ್ಯಮ ಪ್ರಸಾರದ ಸ್ವರೂಪ ಮತ್ತು ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಭಾರತದಲ್ಲಿ ಇಂದಿಗೂ ಚರ್ಚಾಸ್ಪದ ವಿಷಯವಾಗಿಯೇ ಉಳಿದಿದೆ.
ಮಾಧ್ಯಮಗಳು ಚುನಾವಣಾ ಪ್ರಚಾರದ ಬೆಳವಣಿಗೆಯ ಬಗ್ಗೆ ವರದಿ ಮಾಡುವ ಮೂಲಕ ಮತದಾರರಿಗೆ ತಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಹೇಗೆ ಚಲಾಯಿಸಬೇಕು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ರಾಜಕೀಯ ಪಕ್ಷಗಳು ತಮ್ಮ ಸಂದೇಶವನ್ನು ಮತದಾರರಿಗೆ ತಿಳಿಸಲು ವೇದಿಕೆಯನ್ನು ಒದಗಿಸುವ ಮೂಲಕ ರಾಜಕೀಯ ಪಕ್ಷಗಳು ಮತ್ತು ಅದರ ಅಭ್ಯರ್ಥಿಗಳು ಪರಸ್ಪರ ಸಾರ್ವಜನಿಕ ಚರ್ಚೆಗೆ ಅವಕಾಶ ನೀಡಬೇಕು. ಇದು ಅವುಗಳ ಕರ್ತವ್ಯ ಕೂಡ ಆಗಿದೆ.
ಹಾಗೆ ನೋಡಿದರೆ ಮಾಧ್ಯಮಗಳು ಮತದಾರರಿಗೆ ಮಾಹಿತಿಯನ್ನು ಒದಗಿಸುವ ಏಕೈಕ ಮೂಲವೆಂದು ಪರಿಗಣಿಸಲಾಗದು. ಆದರೆ ಸಮೂಹ ಸಂವಹನಗಳು ಪ್ರಾಬಲ್ಯ ಹೊಂದಿರುವ ಭಾರತದಂತಹ ದೇಶದಲ್ಲಿ ರಾಜಕೀಯ ಕಾರ್ಯಸೂಚಿಯನ್ನು ಮಾಧ್ಯಮಗಳು ನಿರ್ಧರಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಉದಾಹರಣೆಗೆ, ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತವೆಯೇ? ಎಂದು ನಿರ್ಣಯಿಸುವ ಮಾನದಂಡವಾಗಿ ಮಾಧ್ಯಮಗಳು ಕಾರ್ಯನಿರ್ವಹಿಸುತ್ತವೆ. ಪ್ರಜಾಪ್ರಭುತ್ವದಲ್ಲಿ, ಸಮೂಹ ಮಾಧ್ಯಮಗಳು ಮತದಾರರಿಗೆ ಸಮಸ್ಯೆಗಳು ಮತ್ತು ಅಭ್ಯರ್ಥಿಗಳ ಬಗ್ಗೆ ಮಾಹಿತಿ ನೀಡುವುದಲ್ಲದೆ, ಹೇಗೆ ಮತ ಚಲಾಯಿಸಬೇಕು ಮತ್ತು ಮತದಾನದ ಮಹತ್ವದ ಕುರಿತು ಮೂಲಭೂತ ಮಾಹಿತಿಯನ್ನು ನೀಡುತ್ತವೆ. ಆ ಮೂಲಕ ಚುನಾವಣೆಗಳಲ್ಲಿ ಮಾಧ್ಯಮಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ.
ಆಧುನಿಕ ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳ ಉದಯಕ್ಕೂ ಮೊದಲು, ರಾಜಕೀಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮುದ್ರಣ ಮಾಧ್ಯಮ ಮತ್ತು ನೇರ ವೈಯಕ್ತಿಕ ಸಂಪರ್ಕ, ಹೀಗೆ ಎರಡು ವಿಧಾನಗಳ ಮೂಲಕ ಜನರು ತಿಳಿದುಕೊಳ್ಳುತ್ತಿದ್ದರು. ಮುದ್ರಣ ಮಾಧ್ಯಮವು ಮಾಲಕತ್ವ ಮತ್ತು ವಿಷಯ ಎರಡರಲ್ಲೂ ಉಳಿದೆಲ್ಲ ಮಾಧ್ಯಮಗಳಿಗಿಂತ ಹೆಚ್ಚಿನ ವೈವಿಧ್ಯತೆಯನ್ನು ಒಳಗೊಂಡಿದೆ. ದಿನಪತ್ರಿಕೆಗಳಿಂದ ಹಿಡಿದು ವಾರಪತ್ರಿಕೆಗಳವರೆಗೆ, ಸುದ್ದಿ ನಿಯತಕಾಲಿಕೆಗಳಿಂದ ಹಿಡಿದು ವಿಶೇಷ ಆಸಕ್ತಿಯ ಪ್ರಕಟಣೆಗಳವರೆಗೆ ಈ ವೈವಿಧ್ಯತೆ ಆವರಿಸಿಕೊಂಡಿರುವುದನ್ನು ನಾವು ಗಮನಿಸಬಹುದು. ಅದೇ ರೀತಿ ನಿಖರತೆ ಮತ್ತು ವಿಶ್ವಾಸದಲ್ಲಿಯೂ ಕೂಡ ಮುದ್ರಣ ಮಾಧ್ಯಮ ಉಳಿದೆಲ್ಲ ಮಾಧ್ಯಮಗಳಿಗಿಂತ ಮುಂದಿದೆ. ಆದರೂ ಓದುಗ ಯಾವುದೇ ಒಂದು ಪತ್ರಿಕೆಯನ್ನು ಓದಿದ ಕೂಡಲೇ ಈ ಪತ್ರಿಕೆ ಇಂತಹವರ ಪರವಾಗಿದೆ ಎಂದು ನಿರ್ಧರಿಸಬಹುದಾದ ಮಟ್ಟಿಗೆ ಪತ್ರಿಕೋದ್ಯಮ ಇಂದು ಬಂದು ನಿಂತಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಇದು ಪತ್ರಿಕೆಗಳಿಗೆ ಮಾತ್ರ ಸೀಮಿತವಲ್ಲ ಬದಲಾಗಿ ಇತರ ಮಾಧ್ಯಮಗಳಿಗೂ ಅನ್ವಯಿಸುತ್ತದೆ.
ಮುದ್ರಣ ಮಾಧ್ಯಮ, ಇಲೆಕ್ಟ್ರಾನಿಕ್ ಮಾಧ್ಯಮ, ಡಿಜಿಟಲ್ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮಗಳು ಕೂಡ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಪೊರೇಟ್‌ಗಳ ಕೈಯಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಜನರಿಗೆ ನಿಷ್ಪಕ್ಷವಾದ ಮಾಹಿತಿಯನ್ನು ನೀಡಬೇಕಾದರೆ ಪತ್ರಿಕೋದ್ಯಮದ ತತ್ವಗಳನ್ನು ಎಲ್ಲಾ ಮಾಧ್ಯಮಗಳು ಅಳವಡಿಸಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಪತ್ರಿಕೋದ್ಯಮ ತತ್ವಗಳ ಜೊತೆಗೆ ಸ್ವಯಂ ನಿಯಂತ್ರಣವನ್ನೂ ಕೂಡ ಮಾಧ್ಯಮಗಳು ಹೇರಿಕೊಳ್ಳಬೇಕಾಗುತ್ತದೆ. ಉಳಿದ ಮಾಧ್ಯಮಗಳಿಗೆ ಹೋಲಿಸಿದರೆ ಭಾರತದಲ್ಲಿ ಪತ್ರಿಕಾ ಮಾಧ್ಯಮ ಸ್ವಯಂ ನಿಯಂತ್ರಣವನ್ನು ಅಳವಡಿಸಿಕೊಂಡಿದೆ ಎಂದು ಹೇಳಬಹುದು. ಸ್ವಯಂ ನಿಯಂತ್ರಣವನ್ನು ಅಳವಡಿಸಿಕೊಳ್ಳದಿದ್ದರೆ ಪತ್ರಿಕಾ ಧರ್ಮವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಿಲ್ಲ. ನಾವು ಇದುವರೆಗೂ ಕರೆಯುತ್ತಿದ್ದ ಪತ್ರಿಕಾ ಧರ್ಮವೇ ಎಲ್ಲಾ ಮಾಧ್ಯಮಗಳಿಗೂ ಅನ್ವಯವಾಗುತ್ತದೆ, ಅದೇ ಮಾಧ್ಯಮ ಧರ್ಮ ಕೂಡ ಹೌದು.
ಮಾಧ್ಯಮಗಳು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕಾವಲು ನಾಯಿಯ ಕಾರ್ಯವನ್ನು ನಿರ್ವಹಿಸುತ್ತವೆ. ಆದ್ದರಿಂದಲೇ ಮಾಧ್ಯಮಗಳನ್ನು ಭಾರತದಲ್ಲಿ ನಾಲ್ಕನೆಯ ಅಂಗ ಎಂದು ಕರೆಯಲಾಗುತ್ತದೆ. ಆದರೆ ಚುನಾವಣೆಯ ಸಂದರ್ಭಗಳಲ್ಲಿ ಇದು ಹಿಂದುಮುಂದಾಗುತ್ತದೆ. ಚುನಾವಣೆಗಳ ಸಂದರ್ಭದಲ್ಲಿ ಚುನಾವಣಾ ಆಯೋಗ ಮಾಧ್ಯಮಗಳ ಮೇಲೆ ಹದ್ದಿನ ಕಣ್ಣಿಡುತ್ತದೆ. ಮಾಧ್ಯಮಗಳ ಮೇಲೆ ಬೇರೊಂದು ಸಂಸ್ಥೆ ಕಣ್ಣಿಡುತ್ತದೆ ಅಂದರೆ ಮಾಧ್ಯಮಗಳು ಎಲ್ಲೋ ದಾರಿ ತಪ್ಪುತ್ತಿವೆಯೇನೋ ಎಂಬ ಭಾವನೆ ಬರದೇ ಇರದು.
ಅಂತರ್ಜಾಲ ತಂತ್ರಜ್ಞಾನದಲ್ಲಾದ ಪ್ರಗತಿ ಮತ್ತು ಸುಲಭ ಹಾಗೂ ಕಡಿಮೆ ದರದಲ್ಲಿ ದೊರೆಯುತ್ತಿರುವ ಡೇಟಾ ಸೌಲಭ್ಯದಿಂದಾಗಿ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಾಂತಿ ಉಂಟಾಗಿದೆ. ಯಾವುದೇ ಮಾಹಿತಿ ಕ್ಷಣಾರ್ಧದಲ್ಲಿ ಜಗತ್ತಿನಾದ್ಯಂತ ಪಸರಿಸಿಬಿಡುತ್ತದೆ. ಸತ್ಯದಷ್ಟೇ ಪ್ರಭಾವಶಾಲಿಯಾಗಿ ಸುಳ್ಳು ಸುದ್ದಿಗಳೂ ಇಲ್ಲಿ ಹರಿದಾಡಲು ವಿಪುಲ ಅವಕಾಶಗಳಿವೆ. ಆದ್ದರಿಂದ ಚುನಾವಣೆಗಳ ಸಮಯದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂದೇಶಗಳನ್ನು ಅಥವಾ ಮಾಹಿತಿಯನ್ನು ಹಂಚಿಕೊಳ್ಳುವವರು ಹೊಣೆಗಾರಿಕೆಯಿಂದ ವರ್ತಿಸಬೇಕಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಸಾಮಾಜಿಕ ಮಾಧ್ಯಮಗಳ ಮೂಲಕ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಪರವಾಗಿ ಪರೋಕ್ಷವಾಗಿ ಪ್ರಚಾರ ಮಾಡುವುದರ ಮೇಲೆ ಚುನಾವಣಾ ಆಯೋಗ ವಿಶೇಷವಾಗಿ ಕಣ್ಣಿಟ್ಟಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ವಿಷಯಗಳು ಮತ್ತು ಚಟುವಟಿಕೆಗಳ ಕುರಿತು ಮೇಲ್ವಿಚಾರಣೆ ಮಾಡುವುದು ಮತ್ತು ನಿಯಂತ್ರಿಸುವುದು ಸಂಕೀರ್ಣ ಮತ್ತು ಸವಾಲಿನ ಕೆಲಸವಾಗಿದೆ. ಏಕೆಂದರೆ ಸಂಪೂರ್ಣ ಪ್ರಮಾಣದ ವಿಷಯ, ನಿಜವಾದ ಅಭಿಪ್ರಾಯಗಳು ಮತ್ತು ಪಾವತಿಸಿದ ಪ್ರಚಾರದ ವಿಷಯಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸುವುದು ಕಷ್ಟಸಾಧ್ಯವಾದ ಕೆಲಸವೇ ಸರಿ. ಮಾದರಿ ನೀತಿ ಸಂಹಿತೆಯ ನಿಬಂಧನೆಗಳು ಅಂತರ್ಜಾಲ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡುವ ಪ್ರಚಾರಕ್ಕೂ ಅನ್ವಯಿಸುತ್ತವೆ ಎಂದು ಚುನಾವಣಾ ಆಯೋಗ ಪ್ರತಿಪಾದಿಸಿರುವ ಜೊತೆಗೆ ಭಾರತೀಯ ದಂಡ ಸಹಿತೆಯ ಸೆಕ್ಷನ್ 171ರ ಅಡಿಯಲ್ಲಿ ಕ್ರಮವನ್ನು ಜರುಗಿಸಲಾಗುವುದು ಎಂದು ತಿಳಿಸಿದೆ.
ಕಳೆದ ದಶಕದಿಂದೀಚೆಗೆ ಭಾರತದ ಮಾಧ್ಯಮಗಳಲ್ಲಿ ಪಾವತಿಸಿದ ಸುದ್ದಿ ಹೆಚ್ಚು ಸದ್ದು ಮಾಡುತ್ತಿವೆ. ಮಾಧ್ಯಮಗಳ ಪಾಲಿಗೆ ಪಾವತಿಸಿದ ಸುದ್ದಿಯು ಲಾಭದಾಯಕವಾಗಿದ್ದರೂ ಭಾರತದಂತಹ ಪ್ರಜಾಪ್ರಭುತ್ವದ ರಾಷ್ಟ್ರಗಳಲ್ಲಿ ಋಣಾತ್ಮಕ ಪ್ರಕ್ರಿಯೆಗಳನ್ನು ಅದು ಉಂಟು ಮಾಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಪತ್ರಿಕಾ ನೀತಿ ಸಂಹಿತೆಗೆ ವಿರುದ್ಧವಾದ ಚಟುವಟಿಕೆಯಾಗಿದೆ. ಚುನಾವಣಾ ಸಮಯಲ್ಲಿ ಪಾವತಿಸಿದ ಸುದ್ದಿಯು ಅಭ್ಯರ್ಥಿಯ ಪರವಾಗಿ ಅಥವಾ ವಿರುದ್ಧವಾಗಿ ಮತ ಚಲಾಯಿಸಲು ನಿರ್ಧರಿಸಿದ ಅಭ್ಯರ್ಥಿಯ ವ್ಯಕ್ತಿತ್ವ ಅಥವಾ ಕಾರ್ಯಕ್ಷಮತೆಯ ಕುರಿತು ಸರಿಯಾದ ಚಿತ್ರಣವನ್ನು ಓದುಗರು ಅಥವಾ ವೀಕ್ಷಕರಿಗೆ ನೀಡುವುದಿಲ್ಲ. ಹೀಗಾಗಿ ಇದು ಪ್ರಜಾಪ್ರಭುತ್ವದ ಸತ್ವವನ್ನೇ ನಾಶಪಡಿಸುತ್ತದೆ. ಸ್ಪರ್ಧಿಸುವ ಅಭ್ಯರ್ಥಿಗಳು ಬಹುಶಃ ಚುನಾವಣಾ ವೆಚ್ಚದ ಲೆಕ್ಕದಲ್ಲಿ ಪಾವತಿಸಿದ ಸುದ್ದಿಗಾಗಿ ಖರ್ಚು ಮಾಡಿದ ಹಣದ ವಿವರಗಳನ್ನು ಮರೆಮಾಚುತ್ತಿದ್ದಾರೆ. ಇದು 1961ರ ಚುನಾವಣಾ ನೀತಿ ನಿಯಮಗಳನ್ನು ಉಲ್ಲಂಘಿಸುತ್ತದೆ.
2009ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಪೇಯ್ಡ್ ನ್ಯೂಸ್ ಅಥವಾ ಪಾವತಿಸಿದ ಸುದ್ದಿಯನ್ನು ವಿಶೇಷವಾಗಿ ಗಮನಿಸಲಾಯಿತು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ 2009ರಲ್ಲಿ ಪ್ರಕಟವಾದ ಪಾವತಿಸಿದ ಸುದ್ದಿಯ ಕುರಿತಾದ ತನ್ನ ವರದಿಯಲ್ಲಿ, ಹಣಕ್ಕಾಗಿ ಮುದ್ರಣ ಅಥವಾ ಇಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವ ಯಾವುದೇ ಸುದ್ದಿ ಅಥವಾ ವಿಶ್ಲೇಷಣೆಯೇ ಎಂದು ಪೇಯ್ಡ್ ನ್ಯೂಸ್ ಕುರಿತು ವ್ಯಾಖ್ಯಾನಿಸಿದೆ.
ಮಾಧ್ಯಮಗಳು ಜನರ ಮತ್ತು ಪ್ರಜಾಪ್ರಭುತ್ವದ ಇತರ ಆಧಾರ ಸ್ತಂಭಗಳ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಅಂದರೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ತೆಗೆದುಕೊಳ್ಳುವ ಕ್ರಮಗಳು ಮತ್ತು ನಿಷ್ಕ್ರಿಯತೆಗಳಿಗೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಇದು ಸಹಾಯ ಮಾಡುತ್ತದೆ. ಸುದ್ದಿ ಅಥವಾ ಮಾಹಿತಿ ವಸ್ತುನಿಷ್ಠ, ನ್ಯಾಯೋಚಿತ ಮತ್ತು ತಟಸ್ಥವಾಗಿರಬೇಕು ಮತ್ತು ಯಾವುದೇ ವಿಷಯದ ಬಗ್ಗೆ ಜನರು ಅಭಿಪ್ರಾಯಗಳನ್ನು ರೂಪಿಸಲು ಸಾಕಷ್ಟು ಅವಕಾಶವನ್ನು ಮಾಡಿಕೊಡಬೇಕು. ಹೀಗಾಗಿ, ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕಾ ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ. ಆದರೂ, ರಾಜಕೀಯ ಕ್ಷೇತ್ರದಲ್ಲಿ ಪೇಯ್ಡ್ ನ್ಯೂಸ್ ಘಟನೆಗಳು ಮರುಕಳಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಪಾಯವನ್ನು ತಂದೊಡ್ಡಿದೆ. ಈ ಅನಿಷ್ಟವು ಪತ್ರಕರ್ತರು ಮತ್ತು ಮಾಧ್ಯಮ ಕಂಪೆನಿಗಳನ್ನು ಮೀರಿ ಸಾಗುತ್ತಿದೆ ಮತ್ತು ಸಂಘಟಿತ ರೂಪವಾಗಿ ಅವತರಿಸುತ್ತಿದೆ. ಇದು ಓದುಗರನ್ನು ಅಥವಾ ಪ್ರೇಕ್ಷಕರನ್ನು ನಕಾರಾತ್ಮಕವಾಗಿ ಓಲೈಸುವ ಜೊತೆಗೆ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸುವ ಜೊತೆಗೆ ಚುನಾವಣೆಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ.
ಭಾರತೀಯ ಸಂವಿಧಾನದ 19ನೇ ವಿಧಿಯು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ. ಮಾಧ್ಯಮಗಳಿಗೆ ಪ್ರತ್ಯೇಕ ಅಭಿವ್ಯಕ್ತಿ ಸ್ವಾತಂತ್ರ್ಯವೇನೂ ಇಲ್ಲ. ಎಲ್ಲಾ ಭಾರತೀಯ ಪ್ರಜೆಗಳಿಗೆ ಇರುವಂತೆಯೇ ಪತ್ರಿಕೆಗಳಿಗೂ ಈ ವಿಧಿಯು ವಾಕ್ ಸ್ವಾತಂತ್ರ್ಯವನ್ನು ಒದಗಿಸಿದೆ. ವಾಣಿಜ್ಯ ಭಾಷಣವೂ ಸಹ ಕಾನೂನಿನ ಚೌಕಟ್ಟಿನ ಅನ್ವಯ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿಯೇ ಬರುತ್ತದೆ. ಹೀಗಾಗಿ, ಪಾವತಿಸಿದ ಸುದ್ದಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಆಶ್ರಯ ಅಥವಾ ರಕ್ಷಣೆಯನ್ನು ಪಡೆಯಬಹುದು. ಆದರೆ ಪತ್ರಿಕಾ ಸ್ವಾತಂತ್ರ್ಯದ ಹಕ್ಕಿನ ಜೊತೆಗೆ ಜನರ ಮಾಹಿತಿಯನ್ನು ಸ್ವೀಕರಿಸುವ ಹಕ್ಕನ್ನು ಗಮನಿಸಬೇಕು ಹಾಗೂ ಗೌರವಿಸಬೇಕು. ಯಾಕೆಂದರೆ ಜನರ ಹಕ್ಕನ್ನು ಕಿತ್ತುಕೊಳ್ಳಲು ಯಾರಿಗೂ ಹಕ್ಕಿಲ್ಲ. ಇದರ ಜೊತೆಗೆ ಮಾಧ್ಯಮಗಳಿಗಿರುವ ಸಾಮಾಜಿಕ ಜವಾಬ್ದಾರಿಯನ್ನೂ ಕೂಡ ಮಾಧ್ಯಮಗಳು ಮತ್ತು ಮಾಧ್ಯಮಗಳ ಮಾಲಕರು ಎತ್ತಿ ಹಿಡಿಯಬೇಕಾಗುತ್ತದೆ. ಆದ್ದರಿಂದ ಮಾಧ್ಯಮಗಳಲ್ಲಿ ಪ್ರಕಟವಾಗುವ ಅಥವಾ ಪ್ರಸಾರವಾಗುವ ಮಾಹಿತಿಯು ಸತ್ಯ ಮತ್ತು ನಿಷ್ಪಕ್ಷತೆಯಿಂದ ಕೂಡಿರುವುದು ಅತ್ಯವಶ್ಯಕ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಲು ನ್ಯಾಯಯುತ ಮಾಹಿತಿಯನ್ನು ಪಡೆಯುವುದು ಸಾರ್ವಜನಿಕರ ಹಕ್ಕು ಎಂಬುದನ್ನು ಮಾಧ್ಯಮಗಳು ಸದಾ ಗಮನದಲ್ಲಿಟ್ಟುಕೊಳ್ಳ ಬೇಕಾಗುತ್ತದೆ. ಇಲ್ಲದಿದ್ದರೆ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಯಾವುದೇ ಅರ್ಥ ಇರುವುದಿಲ್ಲ.