ಸರಕಾರದ ಉಚಿತ ಯೋಜನೆಗಳು ನ್ಯಾಯೋಚಿತವಲ್ಲವೇ?

ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಬರುವ ತನಕ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಅಗತ್ಯವಾಗಿ ಬೇಕು. ಅದರಲ್ಲೂ ಖಾಲಿ ಹೊಟ್ಟೆಗೆ ಊಟ, ತಲೆ ಮೇಲೆ ಸೂರು, ದುಡಿಯುವ ಕೈಗಳಿಗೆ ಕೆಲಸ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸುವುದು ಸರಕಾರದ ಹೊಣೆಗಾರಿಕೆ. ಆದರೆ ಇದಕ್ಕಾಗಿ ನಿಖರವಾದ ಅಧ್ಯಯನ, ಸಮೀಕ್ಷೆಗಳನ್ನು ಮಾಡಿ ದತ್ತಾಂಶಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸುವುದು ಅಗತ್ಯ. ಜೊತೆಗೆ ಇದು ಅರ್ಹರಿಗೆ ಮಾತ್ರ ದೊರಕುವಂತೆ ಎಚ್ಚರ ವಹಿಸುವುದೂ ಮುಖ್ಯ.
‘‘ಸರಕಾರದ ಉಚಿತ ಯೋಜನೆಗಳ ಮೂಲಕ ನಾವು ಪರಾವಲಂಬಿ ವರ್ಗವೊಂದನ್ನು ಸೃಷ್ಟಿಸುತ್ತಿಲ್ಲವೇ?’’ ಎಂಬ ಗಂಭೀರ ಪ್ರಶ್ನೆಯನ್ನು ದೇಶದ ಸರ್ವೋಚ್ಚ ನ್ಯಾಯಾಲಯವು ಎತ್ತಿದೆ. ನಗರ ಪ್ರದೇಶಗಳಲ್ಲಿ ಮನೆ ಇಲ್ಲದವರಿಗೆ ಸೂರಿನ ಹಕ್ಕು ಕುರಿತ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೋರ್ಟಿನ ವಿಭಾಗೀಯ ಪೀಠದಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ. ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳಿಂದ ಜನರು ಕೆಲಸ ಮಾಡುವ ಮನಸ್ಥಿತಿಯಿಂದಲೇ ದೂರ ಸರಿಯುತ್ತಿದ್ದಾರೆ ಎಂಬ ಬೇಸರವೂ ಅಲ್ಲಿ ವ್ಯಕ್ತವಾಗಿದೆ.
ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಉಚಿತ ಕೊಡುಗೆಗಳನ್ನು ಘೋಷಿಸುತ್ತಾ ಹೋಗುತ್ತಿರುವ ಬಗ್ಗೆ ನ್ಯಾಯಾಲಯಕ್ಕೆ ತೀವ್ರ ಅಸಮಾಧಾನವಿದ್ದಂತಿದೆ. ಈ ಉಚಿತ ಕೊಡುಗೆಗಳು ಕೆಲವರಲ್ಲಿ ಅಸಮಾಧಾನ, ಜಿಗುಪ್ಸೆಗಳನ್ನು ಹುಟ್ಟಿಸಿರುವುದು ನಿಜ. ಹೀಗಾಗಿ ದೇಶದ ಸರ್ವೋಚ್ಚ ನ್ಯಾಯಾಲಯವು ಎತ್ತಿದಂತಹ ಆಕ್ಷೇಪವನ್ನು ರಾಜಕೀಯ ಪಕ್ಷಗಳು ವಿವೇಚನೆಯಿಂದ ಅರ್ಥಮಾಡಿ ಕೊಳ್ಳಬೇಕಾಗಿದೆ. ಜನರ ತೆರಿಗೆ ಹಣವನ್ನು ಬಳಸುವಾಗ ಸರಿಯಾಗಿ ಆಲೋಚಿಸಿ ಎಚ್ಚರದಿಂದ ವೆಚ್ಚ ಮಾಡುವಂತಹ ಹೊಣೆಗಾರಿಕೆ ಸರಕಾರಗಳಿಗಿವೆ. ಇಲ್ಲಿ ವ್ಯರ್ಥ ಪೋಲಾಗುವುವಿಕೆ, ದುಂದು ವೆಚ್ಚ ಇತ್ಯಾದಿಗಳೆಲ್ಲ ಸಲ್ಲದು. ಹಾಗಂತ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವುದನ್ನು ನಿಲ್ಲಿಸ ಬೇಕಾಗಿಲ್ಲ. ಅದು ಸರ್ವೋಚ್ಚ ನ್ಯಾಯಾಲಯದ ಆಕ್ಷೇಪದ ಇಂಗಿತವೂ ಆಗಿರಲಿಕ್ಕಿಲ್ಲ.
ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ತಪ್ಪಾಗಿ ಗ್ರಹಿಸಿದರೆ ಯಾವುದೇ ಉಚಿತ ಯೋಜನೆಗಳಿಗೆ ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂಬಂತೆ ಅರ್ಥ ಮಾಡಿಕೊಳ್ಳುವ ಸಾಧ್ಯತೆಗಳಿವೆ. ನಮ್ಮ ಸಂವಿಧಾನದ ಆತ್ಮದಂತಿರುವ ಪೀಠಿಕೆಯಲ್ಲಿಯೇ ನಾಗರಿಕರಿಗೆಲ್ಲರಿಗೂ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವಗಳನ್ನು ಖಾತರಿ ಗೊಳಿಸಬೇಕೆಂದಿದೆ. ಈ ಪೀಠಿಕೆಯೇ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಅವಕಾಶವನ್ನು ಕಲ್ಪಿಸುತ್ತದೆ. ಮುಂದುವರಿದು ಸಂವಿಧಾನದ ವಿಧಿ 38ರಲ್ಲಿ ಸರಕಾರವು ಸಾಮಾಜಿಕ ವ್ಯವಸ್ಥೆಯನ್ನು ಸಾಧಿಸಲು ಜನರ ಶ್ರೇಯೋಭಿವೃದ್ಧಿಗಾಗಿ ಕೆಲವೊಂದು ನೀತಿಯನ್ನು ರೂಪಿಲು ಸ್ಪಷ್ಟ ನಿರ್ದೇಶನವಿದೆ. ಅಸಮಾನತೆ, ಅನ್ಯಾಯ ನಿವಾರಿಸುವುದರೊಂದಿಗೆ ಜನರ ಸುಗಮ ಜೀವನೋಪಾಯದ ಹಕ್ಕನ್ನು ಕಾಪಾಡುವಂತೆ ತಿಳಿಸಲಾಗಿದೆ. ಹೀಗಾಗಿ ಸರಕಾರಗಳು ಸಮಾಜದ ದುರ್ಬಲ ವರ್ಗಕ್ಕೆ ನೆರವಾಗುವುದಕ್ಕೆ ಇಂತಹ ಕಾರ್ಯಕ್ರಮಗಳನ್ನು ರೂಪಿಸ ಬೇಕಾಗಿದೆ. ಈ ಸಮಾಜ ಕಲ್ಯಾಣ ಕಾರ್ಯಕ್ರಮಗಳ ಭಾಗವಾಗಿ ಕೆಲವೊಂದು ಉಚಿತ ಯೋಜನೆಗಳೂ ಬೇಕಾಗಬಹುದು. ಆದರೆ ಇದಕ್ಕೆ ಸರಕಾರ ಅನುಸರಿಸಬೇಕಾದ ವಿಧಿ-ವಿಧಾನಗಳು ಅಷ್ಟೇ ಮಹತ್ವದ್ದಾಗುತ್ತದೆ. ಇಂತಹ ಕ್ರಮಗಳನ್ನು ಪಾಲಿಸಿಕೊಂಡು ಮುಂದುವರಿದರೆ ಯಾವುದೇ ಆಕ್ಷೇಪ, ಅಸಮಾಧಾನಗಳಿಗೆ ಆಸ್ಪದವಿರದು.
ರಾಜಕೀಯ ಪಕ್ಷಗಳು ಕೇವಲ ಚುನಾವಣಾ ದೃಷ್ಟಿಯಿಂದ ಉಚಿತ ಕೊಡುಗೆಗಳನ್ನು ಘೋಷಿಸುವುದು ಯಾವುದೇ ಕಾರಣದಿಂದ ಒಪ್ಪಲು ಸಾಧ್ಯವಿಲ್ಲ. ಯಾವುದೇ ಅಧ್ಯಯನವಿಲ್ಲದೆ ಏಕಪಕ್ಷೀಯವಾಗಿ ಎಲ್ಲರಿಗೂ ಅಥವಾ ಒಂದು ಬಹು ದೊಡ್ಡ ವರ್ಗಕ್ಕೆ ಉಚಿತ ಕೊಡುಗೆಗಳನ್ನು ಪ್ರಕಟಿಸುವುದನ್ನು ಜವಾಬ್ದಾರಿಯುತ ನಡೆ ಎನ್ನಲಾಗದು. ಒಂದು ಯೋಜನೆಯನ್ನು ಪ್ರಕಟಿಸುವಾಗ ಸಾಕಷ್ಟು ಪೂರ್ವ ತಯಾರಿ ಅಗತ್ಯ. ಯೋಜನೆಗಳ ಅವಶ್ಯಕತೆ, ತಗಲುವ ವೆಚ್ಚ, ಅದರ ಫಲದಾಯಕತ್ವ, ಪ್ರತಿಕೂಲಕಾತ್ಮಕ ಅಂಶಗಳು ಮುಂತಾದವುಗಳಿಗೆ ಸಂಬಂಧಿಸಿದ ಅಂಕಿ-ಅಂಶ, ಮಾಹಿತಿಗಳನ್ನು ಇಟ್ಟು ಕೊಂಡು ಸರಕಾರ ಮುಂದಡಿಯಿಟ್ಟರೆ ಅದನ್ನು ಒಪ್ಪಿಕೊಳ್ಳಬಹುದು. ನಾವು ನಮ್ಮ ಗೃಹ ಸಂಬಂಧಿ ಖರ್ಚುವೆಚ್ಚಗಳನ್ನು ಮಾಡುವ ಮುನ್ನ ಎಷ್ಟು ಆಲೋಚಿಸುತ್ತೇವೆ ಎಂಬುದನ್ನು ಅರ್ಥ ಮಾಡಿ ಕೊಂಡರೆ ಇಂತಹ ವಿಚಾರವನ್ನು ತಿಳಿದು ಕೊಳ್ಳುವುದು ಸುಲಭ. ಸರ್ವೋಚ್ಚ ನ್ಯಾಯಾಲಯದ ಅಭಿಪ್ರಾಯವನ್ನು ಈ ಹಿನ್ನೆಲೆಯಿಂದ ಅರ್ಥ ಮಾಡಿ ಕೊಳ್ಳಬೇಕೆಂದೆನಿಸುತ್ತದೆ.
ಆಮ್‌ಆದ್ಮಿ ಪಕ್ಷವು ದಿಲ್ಲಿ ಆಸೆಂಬ್ಲಿ ಚುನಾವಣೆಯಲ್ಲಿ ಉಚಿತ ಕೊಡುಗೆಗಳನ್ನು ನೀಡುವ ಮೂಲಕ ಮೊದಲ ಬಾರಿಗೆ ಇಂತಹ ಪರಿಪಾಠಕ್ಕೆ ಅಡಿಯಿಟ್ಟಿತು. ಅದರಲ್ಲಿ ಇತ್ತೀಚಿನವರೆಗೆ ಯಶಸ್ವಿಯೂ ಆಯಿತು. ಆದರೆ ಈ ಉಚಿತ ಕೊಡುಗೆಗಳ ಮೂಲವನ್ನು ಶೋಧಿಸುತ್ತಾ ಹೋದಂತೆ ಅದು ಬಿಜೆಪಿಯ ಹಿಂದುತ್ವ ರಾಜಕಾರಣಕ್ಕೆ ಬಂದು ನಿಲ್ಲುತ್ತದೆ. ಅದಕ್ಕೂ ಹಿಂದಕ್ಕೆ ಹೋದರೆ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿ ಪಕ್ಷ ಕಂಡ ವಿಫಲತೆಯೂ ಮುನ್ನೆಲೆಗೆ ಬರುತ್ತದೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಹೆಸರಲ್ಲಿ ಯಾರು ಚುನಾವಣೆಗೆ ಸ್ಪರ್ಧಿಸಿದರೂ ಗೆದ್ದು ಬರುವಂತಹ ಸ್ಥಿತಿ ಇತ್ತು. ಬಿಜೆಪಿ ಹಿಂದಿನಿಂದಲೂ ಒಂದು ಮಾದರಿಯ ಹಿಂದುತ್ವವನ್ನು ಪ್ರತಿಪಾದಿಸುತ್ತಾ ರಾಜಕಾರಣ ಮಾಡಿ ಕೊಂಡು ಬಂದಿದ್ದರೂ ತೊಂಭತ್ತರ ದಶಕದ ಬಳಿಕ ತೀವ್ರತರದ ಹಿಂದುತ್ವಕ್ಕೆ ಮುಂದಾಯಿತು. ರಾಮ ಜನ್ಮ ಭೂಮಿ ಚಳವಳಿಯನ್ನು ಈ ನಿಟ್ಟಿನಲ್ಲಿ ನೆನಪಿಸಿಕೊಳ್ಳಬಹುದು. ಆ ಬಳಿಕ ಇಂತಹ ತಂತ್ರಗಾರಿಕೆ ಬಿಜೆಪಿ ಚುನಾವಣೆ ಗೆಲ್ಲುವ ಅಜೆಂಡಾದ ಭಾಗವಾಗಿ ಹೋಯಿತು. ಇದು ಕಾಂಗ್ರೆಸ್ ಸಹಿತ ಉಳಿದ ವಿರೋಧ ಪಕ್ಷಗಳಿಗೆ ಬಗೆಹರಿಸಲಾರದ ತೊಡಕಾಗಿ ಕಾಡುತ್ತಾ ಹೋಗಿರುವುದು ಕಣ್ಣೆದುರಿಗಿನ ವಾಸ್ತವ. ದಿಲ್ಲಿಯಲ್ಲಿ ಗಟ್ಟಿ ನೆಲೆ ಹೊಂದಿದ್ದ ಬಿಜೆಪಿಯನ್ನು ಮಣಿಸಲು ಆಮ್‌ಆದ್ಮಿ ಪಕ್ಷ ಮೊದಲ ಬಾರಿಗೆ ಉಚಿತ ಕೊಡುಗೆಗಳ ತಂತ್ರಗಾರಿಕೆಯನ್ನು ಬಳಸಿರುವುದಕ್ಕೆ ಬಹುಶಃ ಇದೇ ಕಾರಣವಿರಬಹುದು. ದಿಲ್ಲಿವಾಸಿಗಳಿಗೆಲ್ಲರಿಗೂ ನೀಡಿದಂತಹ ಉಚಿತ ವಿದ್ಯುತ್, ಉಚಿತ ನೀರು, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಮುಂತಾದವುಗಳು ಜನಪ್ರಿಯವಾಯಿತು.
ಇದರಿಂದ ದಿಲ್ಲಿಯ ಮಟ್ಟಿಗೆ ಬಿಜೆಪಿಗೆ ದಾರಿ ಕಾಣದಂತಾದರೆ, ಕಾಂಗ್ರೆಸ್ ಸಹಿತ ಉಳಿದ ಪ್ರತಿಪಕ್ಷಗಳಿಗೆ ಇದು ಹೊಸ ದಾರಿ ತೋರಿಸಿತು. ಕಾಂಗ್ರೆಸ್ ಕರ್ನಾಟಕದಲ್ಲಿ 2023ರ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ನಿಚ್ಚಳ ಬಹುಮತ ಸಾಧಿಸಿ ಯಶಸ್ವಿಯಾಯಿತು. ಆಗ ಆಡಳಿತ ವಿರೋಧಿ ಅಲೆಯಿದ್ದರೂ ಉಚಿತ ಕೊಡುಗೆಗಳೇ ಕಾಂಗ್ರೆಸ್ ಗೆಲ್ಲಲು ಬಹು ದೊಡ್ಡ ಕೊಡುಗೆ ನೀಡಿದೆಯೆಂದು ನಂಬುವವರ ಸಂಖ್ಯೆ ದೊಡ್ಡದಿದೆ. ನಂತರ ತೆಲಂಗಾಣ, ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿಯೂ ಈ ಉಚಿತ ಕೊಡುಗೆಗಳು ಸುದ್ದಿ ಮಾಡಿರುವುದು ಹಳೆಯ ಕತೆ. ವಿಶೇಷವೆಂದರೆ ಉಚಿತ ಕೊಡುಗೆಗಳನ್ನು ವಿರೋಧಿಸುತ್ತಾ ಬಂದಿದ್ದ ಬಿಜೆಪಿ ಪಕ್ಷವೂ ಚುನಾವಣೆ ಗೆಲ್ಲಲು ಕೊನೆಗೆ ಅದಕ್ಕೇನೇ ಶರಣಾಗಿರುವುದು. ಭಾವನಾತ್ಮಕ ತಂತ್ರಗಾರಿಕೆಗೆ ಆರ್ಥಿಕ ತಂತ್ರಗಾರಿಕೆ ತಿರುಗೇಟು ನೀಡುತ್ತದೆ ಎಂಬುದೇ ಇಲ್ಲಿಯ ಪಾಠ ಮತ್ತು ವಾಸ್ತವ. ಆದರೆ ಪ್ರಜಾತಂತ್ರ ದೇಶಕ್ಕೆ ಇವೆರಡೂ ತಂತ್ರಗಾರಿಕೆಗಳು ತುಂಬಾ ದುಬಾರಿಯಾಗುತ್ತದೆ ಎಂಬುದನ್ನು ನಾವು ಅವಶ್ಯವಾಗಿ ನೆನಪಿಡ ಬೇಕು.
ನಾವು ದೇಶದ ಜಿಡಿಪಿ, ವಿಶ್ವದ ದೊಡ್ಡ ಆರ್ಥಿಕತೆ, ಪ್ರಗತಿ ಮುಂತಾದವುಗಳನ್ನು ಇಟ್ಟುಕೊಂಡು ಮಾತನಾಡಿದರೂ ನಾಡಿನ ಅಸಮಾನತೆ, ಬಡತನ, ನಿರುದ್ಯೋಗ, ನಿರಕ್ಷರತೆ ಮುಂತಾದ ಗಂಭೀರ ಸಮಸ್ಯೆಗಳಿಗೆ ಕುರುಡಾಗುವುದು ಆತ್ಮವಂಚನೆಯಾಗುತ್ತದೆ. ಇಲ್ಲಿ ಅನ್ನ, ಸೂರು, ಶುದ್ಧ ನೀರು ಮುಂತಾದ ಮೂಲಭೂತ ಅವಶ್ಯಕತೆಗಳಿಗೆ ಪರದಾಡುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ನಿರುದ್ಯೋಗ ಸಮಸ್ಯೆ ವಿದ್ಯಾವಂತ ಯುವಜನರನ್ನು ಹೈರಾಣ ಗೊಳಿಸುತ್ತಿದೆ. ಉಚಿತ ಯೋಜನೆಗಳ ಕುರಿತು ಅಸಮಾಧಾನ ವ್ಯಕ್ತ ಪಡಿಸುತ್ತಾ ಮಾನ್ಯ ನ್ಯಾಯಾಧೀಶರು, ಜನರು ಕೆಲಸ ಮಾಡುವ ಮನಸ್ಥಿತಿಯಿಂದಲೇ ದೂರ ಸರಿಯುತ್ತಿದ್ದಾರೆ ಎಂದಾಗ ಅರ್ಜಿದಾರರ ವಕೀಲರಾದ ಪ್ರಶಾಂತ್ ಭೂಷಣ್, ‘‘ಕೆಲಸವಿದೆಯೆಂದಾದರೆ ಕೆಲಸ ಮಾಡಲು ಮನಸ್ಸು ಇಲ್ಲದವರ ಸಂಖ್ಯೆ ಈ ದೇಶದಲ್ಲಿ ಕಡಿಮೆ’’ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದು ಗಮನ ಸೆಳೆಯುತ್ತದೆ. ನಿಜ, ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಅಪಾಯಕಾರಿಯಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ ಯುವಜನರು ಅವರ ಅರ್ಹತೆಗೆ ತಕ್ಕ ಉದ್ಯೋಗ ಸಿಗದೆ ಭ್ರಮ ನಿರಸನಕ್ಕೆ ಒಳಗಾಗುತ್ತಿದ್ದಾರೆ. ವಾಸ್ತವದಲ್ಲಿ ಸರಕಾರ ನೀಡುತ್ತಿರುವ ಉಚಿತ ಕೊಡುಗೆಯನ್ನು ನೆಚ್ಚಿಕೊಂಡು ದಿನದೂಡುವಂತಹ ದುರಭ್ಯಾಸಗಳ ದಾಸರು, ಮೈಗಳ್ಳರು ಒಂದಷ್ಟು ಮಂದಿ ಇರ ಬಹುದು. ಆದರೆ ದೇಶದಲ್ಲಿ ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳದೆ ಉತ್ತಮ ಭವಿಷ್ಯದ ಕನಸು ಕಾಣುತ್ತಾ ಅದಕ್ಕಾಗಿ ಕಷ್ಟ ಪಟ್ಟು ಏಗುತ್ತಿರುವವರದ್ದೇ ಅತ್ಯಂತ ದೊಡ್ಡ ಸಂಖ್ಯೆಯಿದೆ.
ಸಮಾಜದಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ ಬರುವ ತನಕ ಸಮಾಜ ಕಲ್ಯಾಣ ಕಾರ್ಯಕ್ರಮಗಳು ಅಗತ್ಯವಾಗಿ ಬೇಕು. ಅದರಲ್ಲೂ ಖಾಲಿ ಹೊಟ್ಟೆಗೆ ಊಟ, ತಲೆ ಮೇಲೆ ಸೂರು, ದುಡಿಯುವ ಕೈಗಳಿಗೆ ಕೆಲಸ ಮುಂತಾದ ಮೂಲಭೂತ ಅವಶ್ಯಕತೆಗಳನ್ನು ಕಲ್ಪಿಸುವುದು ಸರಕಾರದ ಹೊಣೆಗಾರಿಕೆ. ಆದರೆ ಇದಕ್ಕಾಗಿ ನಿಖರವಾದ ಅಧ್ಯಯನ, ಸಮೀಕ್ಷೆಗಳನ್ನು ಮಾಡಿ ದತ್ತಾಂಶಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸುವುದು ಅಗತ್ಯ. ಜೊತೆಗೆ ಇದು ಅರ್ಹರಿಗೆ ಮಾತ್ರ ದೊರಕುವಂತೆ ಎಚ್ಚರ ವಹಿಸುವುದೂ ಮುಖ್ಯ. ಒಂದು ರಾಜ್ಯದ ಎಲ್ಲರಿಗೂ ಅನ್ವಯವಾಗುವಂತೆ ಉಚಿತ ಕೊಡುಗೆಗಳನ್ನು ನೀಡುತ್ತಾ ಹೋಗುವುದು ಸಮರ್ಥಿಸಲು ಸಾಧ್ಯವಾಗದು. ಇಂತಹದ್ದೆಲ್ಲ ನಾವು ಬಹುಶಃ ಅಭಿವೃದ್ಧಿ ಹೊಂದಿದ ರಾಷ್ಟ್ರವಾದಾಗ ಪರಿಗಣಿಸ ಬಹುದೇನೋ? ತೀರಾ ಅನಿವಾರ್ಯವೆನಿಸಿದಾಗ ಅರ್ಹರಿಗೆ ಉಚಿತ ಕೊಡುಗೆಗಳನ್ನು ನೀಡಿದರೆ ತಪ್ಪಾಗದು. ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯನ್ನು ಈ ದೃಷ್ಟಿಯಿಂದ ಸಮರ್ಥಿಸಬಹುದೆನಿಸುತ್ತದೆ. ಸೂಕ್ತ ದತ್ತಾಂಶಗಳ ಆಧಾರದಲ್ಲಿ ಯಾವುದೇ ಯೋಜನೆಗಳನ್ನು ಕಾರ್ಯಗತ ಗೊಳಿಸಿದರೆ ಕೋರ್ಟುಗಳು ಅದಕ್ಕೆ ಮಧ್ಯ ಪ್ರವೇಶ ಮಾಡಲಾರದು.
ಜನರ ನೈತಿಕ ಮಟ್ಟ ಇಳಿಮುಖವಾಗುತ್ತಿರುವುದರಿಂದ ನಮ್ಮಲ್ಲಿ ನಕಲಿ, ಬೋಗಸ್ ಪ್ರಕರಣಗಳು ಹೆಚ್ಚಾಗುವಂತೆ ಮಾಡಿದೆ. ಸರಕಾರದ ಯೋಜನೆಗಳು ದುರುಪಯೋಗವಾಗುತ್ತಿದೆ ಎಂಬುದನ್ನು ತಿಳಿದು ಕೊಳ್ಳಲು ಬಿಪಿಎಲ್ ಕಾರ್ಡುಗಳ ಉದಾಹರಣೆಯೊಂದೇ ಸಾಕು. ನೀತಿ ಆಯೋಗದ ಪ್ರಕಾರ ರಾಜ್ಯದಲ್ಲಿ ಬಡವರ ಸಂಖ್ಯೆ ಇಳಿಮುಖವಾಗಿದ್ದರೂ ಬಿಪಿಎಲ್ ಕಾರ್ಡುದಾರರ ಸಂಖ್ಯೆ ಕಡಿಮೆಯಾಗಿಲ್ಲ. ಇದನ್ನು ತಿಳಿಯಲು ಯಾವ ವರದಿ, ಸಮೀಕ್ಷೆಯೂ ಬೇಕಾಗಿಲ್ಲ. ಇದಕ್ಕೆ ಅರ್ಹರಲ್ಲದಂತಹ ಸಕಲ ಸವಲತ್ತು ಹೊಂದಿದ ಮೇಲ್‌ಮಧ್ಯಮ ವರ್ಗದವರು, ಶ್ರೀಮಂತರೂ ಈ ಕಾರ್ಡುದಾರರಲ್ಲಿ ಸೇರಿರುವುದನ್ನು ಜನರು ಬಹಿರಂಗವಾಗಿಯೇ ಆಡಿ ಕೊಳ್ಳುತ್ತಿದ್ದಾರೆ. ಆದರೆ ರಾಜಕೀಯ ಕಾರಣಗಳಿಂದ ಸರಕಾರ ಕಠಿಣ ಕ್ರಮ ಕೈಗೊಳ್ಳದೆ ಜಡವಾಗಿದೆ.
ದೇಶದ ಸರ್ವೋಚ್ಚ ನ್ಯಾಯಾಲಯ ವ್ಯಕ್ತ ಪಡಿಸಿದಂತಹ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರಕಾರಗಳ ಹೊಣೆಗಾರಿಕೆ ಹೆಚ್ಚಾಗಿದೆ. ಚುನಾವಣಿಗಳನ್ನು ಗೆಲ್ಲುವುದಕ್ಕೋಸ್ಕರ ಉಚಿತ ಕೊಡುಗೆಗಳ ಘೋಷಣೆಯಾಗುವುದು ಮತ್ತು ಅವುಗಳ ಅನುಷ್ಠಾನ ಖಂಡಿತಾ ಅಗತ್ಯವಿಲ್ಲ. ಇವುಗಳಿಂದ ದೇಶ, ರಾಜ್ಯಗಳ ಹಿತ ಸಾಧ್ಯವಾಗದು. ಯೋಜನೆಗಳು, ಕೊಡುಗೆಗಳು ಸರಿಯಾದ ದತ್ತಾಂಶ, ಮಾಹಿತಿಯ ಆಧಾರದಲ್ಲಿ ದೂರದೃಷ್ಟಿಯನ್ನಿಟ್ಟು ರೂಪುಗೊಳ್ಳಲಿ. ಇಂತಹ ನಡೆಗಳನ್ನು ನಮ್ಮ ರಾಜಕೀಯ ಪಕ್ಷಗಳಿಂದ ನಿರೀಕ್ಷಿಸ ಬಹುದೇ?