ಪಡುಕುಡೂರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಅಧಿಕಾರಿ ಪುತ್ಥಳಿ ಪ್ರತಿಷ್ಠಾಪನೆ
ಆಗಸ್ಟ್ 15 ರಂದು ಲೋಕಾರ್ಪಣೆ
ಹೆಬ್ರಿ: ಸ್ವಾತಂತ್ರ್ಯ ಹೋರಾಟಗಾರರಾಗಿ ಪಡುಕುಡೂರಿನ ಕೀರ್ತಿಯನ್ನು ಜಗದಗಲ ಪಸರಿಸಿದ ಪಡುಕುಡೂರು ಬೀಡು ಎಂ.ಡಿ.ಅಧಿಕಾರಿಯವರ ಪುತ್ಥಳಿಯೊಂದು ಆ.15ರಂದು ಪಡು ಕುಡೂರು ಶಾಲೆಯ ಬಳಿ ವಿಶೇಷ ಪೀಠದಲ್ಲಿ ಪ್ರತಿಷ್ಠಾಪನೆಗೊಂಡು ಲೋಕಾರ್ಪಣೆಗೊಳ್ಳಲಿದೆ.
ಊರಿನ ಹಮ್ಮೆಯ ಪುತ್ರನಾಗಿ ಈಗಲೂ ಜನಮನದಲ್ಲಿ ನೆಲೆಸಿರುವ ಎಂ.ಡಿ.ಅಧಿಕಾರಿಯ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ಯೋಜನೆ ರೂಪಿಸಿದವರು ಪಡಕುಪರ್ಕಳ ಶಂಕರ ಶೆಟ್ಟಿ. ಪಡುಕುಡೂರು ಪಟೇಲರ ಮನೆ ಜಗದೀಶ ಹೆಗ್ಡೆ ನೇತೃತ್ವದಲ್ಲಿ ಪುತ್ಥಳಿ ಪ್ರತಿಷ್ಠಾಪನಾ ಸಮಿತಿ ಕಳೆದೊಂದು ವರ್ಷದಿಂದ ಕಾರ್ಯತತ್ವರವಾಗಿತ್ತು. ಇದೀಗ ಸಮಿತಿಯ ಕನಸು ನನಸಾಗುವ ಸಮಯ ಬಂದಿದೆ. ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಈ ಪುತ್ಥಳಿಯನ್ನು ನಿರ್ಮಿಸಿದ್ದಾರೆ.
ಲೋಕಾರ್ಪಣೆ: ಆ.15ರಂದು ಹಲವು ಕ್ಷೇತ್ರಗಳ ಸಾಧಕರಿಗೆ ಸನ್ಮಾನದ ಜೊತೆಗೆ ಪುತ್ಥಳಿಯ ಲೋಕಾರ್ಪಣೆಯ ಸಂಭ್ರಮ ಸಂಪನ್ನಗೊಳ್ಳಲಿದೆ. ಹೊಂಬುಜ ಜೈನ ಮಠದ ಜಗದ್ಗುರು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಪುತ್ಥಳಿ ಲೋಕಾರ್ಪಣೆ ಮಾಡುವರು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸುವರು.
ಎಂ.ಡಿ.ಅಧಿಕಾರಿಯ ಪುತ್ರಿ ಅಭಯಲಕ್ಷ್ಮೀ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಗಣ್ಯರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಪ್ರಮೋದ್ ಮಧ್ವರಾಜ್, ಅಭಯಚಂದ್ರ ಜೈನ್, ವಕೀಲರಾದ ಎಂ.ಕೆ.ವಿಜಯಕುಮಾರ್, ಡಾ.ಜಿ.ರಾಮಕೃಷ್ಣ ಆಚಾರ್, ಡಾ.ಎಂ.ಎಸ್.ರಾವ್ ಮುದ್ರಾಡಿ, ಡಾ.ಜಯರಾಮ ಹೆಗ್ಡೆ ಪಡುಕುಡೂರು ಹಾಗೂ ಪಡುಕುಡೂರಿನ ಗಣ್ಯರು ಸಂಭ್ರಮಕ್ಕೆ ಸಾಕ್ಷಿಯಾಗುವರು.
ಪರಿಚಯ: ಕಾರ್ಕಳ ತಾಲೂಕಿನ ಪಡುಕುಡೂರು ಬೀಡು ಧರ್ಮರಾಜ ಅಧಿಕಾರಿ (ಎಂ.ಡಿ.ಅಧಿಕಾರಿ) ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರಾವಳಿ ಕರ್ನಾಟಕದಲ್ಲಿ ಮುಂಚೂಣಿಯಲ್ಲಿದ್ದವರು. ಆಗ ಕರಾವಳಿಯ ಹೋರಾಟದ ನಿರ್ಣಾಯಕ ಹೊಣೆಯನ್ನು ಹೊತ್ತದ್ದು ಮಾತ್ರವಲ್ಲದೇ, ಅದನ್ನು ಮುನ್ನಡೆಸಿದವರು.
1942ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರ ಕರೆಯಂತೆ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಪ್ರತಿಭಟನಾ ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದು, ಬಿಸಿರಕ್ತದ 27ರ ತರುಣ ದೇಶಕ್ಕಾಗಿ ಆವೇಶದಿಂದ ಭಾಷಣ ಮಾಡುತ್ತಿದ್ದರು. ಆಗ ಹಠಾತ್ತನೆ ಪೊಲೀಸರು ಲಾಠಿಯೊಂದಿಗೆ ಮೈದಾನಕ್ಕೆ ನುಗ್ಗಿ ಸೇರಿದವರನ್ನು ಥಳಿಸಲಾರಂಭಿಸಿದರು. ಆದರೇ ತರುಣ ಮಾತ್ರ ತನ್ನ ಅಬ್ಬರದ ಮಾತು ಮುಂದುವರಿಸಿದ್ದ..
ವೇದಿಕೆ ಏರಿದ ಪೊಲೀಸರು ಆ ತರುಣನ ಮೇಲೆ ಲಾಠಿ ಬೀಸಿದರು. ರಕ್ತ ಚಿಮ್ಮಿತು. ಕೆಳಗೆ ಬಿದ್ದರೂ ತರುಣನ ಬಾಯಲ್ಲಿ ವಂದೇ ಮಾತರಂ ಘೋಷಣೆ ಮುಂದುವರಿದಿತ್ತ. ಪೊಲೀಸರ ಬಲವಾದ ಹೊಡೆತದಿಂದ ಪ್ರಜ್ಞೆ ತಪ್ಪಿದ್ದರು. ಕೆಲವವರು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದರು. ಹಲವು ಗಂಟೆಗಳ ಬಳಿಕ ಪ್ರಜ್ಞೆ ಮರಳಿತು. ಅಲ್ಲೇ ಕಾಯುತ್ತಿದ್ದ ಪೊಲೀಸರು ಆತನನ್ನು ಎಳೆದುಕೊಂಡು ಹೋಗಿ ಸೆರೆಮನೆಗೆ ಹಾಕಿದರು. ಆ ತರುಣನೇ ಪಡುಕುಡೂರಿನ ಕೀರ್ತಿಯನ್ನು ವಿಶ್ವಕ್ಕೆ ಪಸರಿಸಿದ ಪಡುಕುಡೂರುಬೀಡು ಎಂ.ಡಿ.ಅಧಿಕಾರಿ. ಅವರು ಕಾರ್ಕಳ ತಾಲೂಕಿನ ವರಂಗದ ಜೈನ ಕೃಷಿ ಕುಟುಂಬದ ಪುತ್ರ. ಅವರ ಹಿರಿಯರು ವರಂಗದ ಬಸದಿಯನ್ನು ಅಭಿವೃದ್ಧಿಪಡಿಸಿ ಧರ್ಮ ಕಾರ್ಯ ಮಾಡಿದವರು.
ಬ್ರಿಟಿಷರ ಆಡಳಿತದಲ್ಲಿ 1937ರಲ್ಲಿ ಪ್ರಾಂತೀಯ ಅಸೆಂಬ್ಲಿ ಚುನಾವಣೆ ವೇಳೆ ಎಂ.ಡಿ.ಅಧಿಕಾರಿ ಕಾಂಗ್ರೆಸ್ ಕಾರ್ಯಕರ್ತನಾಗಿ ಪ್ರಚಾರಕ್ಕೆ ಧುಮುಕಿದರು. 1938ರಲ್ಲಿ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷರಾದರು. 1940ರಲ್ಲಿ ಅವಿಭಜಿತ ಮಂಗಳೂರು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರ ಸ್ಥಾನಕ್ಕೆ ಏರಿದರು. 1942ರಲ್ಲಿ ಅಂದಿನ ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶ್ರೀನಿವಾಸ ಮಲ್ಯರು ಸೆರೆಮನೆಗೆ ಹೋದಾಗ ಧರ್ಮರಾಜ ಅಧಿಕಾರಿ ಮಂಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಳ್ಳಿಹಳ್ಳಿಯಲ್ಲಿ ಸಂಘಟನೆಯನ್ನು ಗಟ್ಟಿಗೊಳಿಸಿದರು.
ಮಂಗಳೂರಿನ ಕ್ವಿಟ್ ಇಂಡಿಯಾ ಚಳವಳಿಯ ವೇಳೆ ಬಳ್ಳಾರಿ ಸೆರೆಮನೆಯಲ್ಲಿ ಎಂ.ಡಿ.ಅಧಿಕಾರಿ 6 ತಿಂಗಳು, 8 ತಿಂಗಳು, 1 ವರ್ಷ ಹೀಗೆ 3 ಸಲ ಜೈಲು ವಾಸ ಅನುಭವಿಸಿದರು. ಒಂದು ವರ್ಷದಲ್ಲಿ ಕಠಿಣವಾದ ಜೈಲುವಾಸ ಅನುಭವಿಸಿದರು. ಅಲ್ಲಿ ಅವರಿಗೆ ಶ್ರೀನಿವಾಸ ಮಲ್ಯ, ಕೆ.ಕೆ.ಶೆಟ್ಟಿ, ಎಚ್.ಕೆ.ತಿಂಗಳಾಯ ಮುಂತಾದ ಹೋರಾಟಗಾರರ ಒಡನಾಟ ಸಿಕ್ಕಿತು.
ಎಂ.ಡಿ.ಅಧಿಕಾರಿಯ ಹೋರಾಟದಲ್ಲಿ ಅವರ ಪತ್ನಿ ಕಮಲಾವತಿ ಅಧಿಕಾರಿ ಸಹ ಜೊತೆ ನೀಡಿದರು. ಗಂಡನಿಂದ ಪ್ರೇರಣೆಗೊಂಡು ಅವರು ಸಹ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ್ದರು. ದಂಪತಿ ಜೈಲುವಾಸ ಅನುಭವಿಸಿದರು. ಸ್ವಾತಂತ್ರ್ಯ ದೊರೆತಾಗ ಹೆಮ್ಮೆಯಿಂದ ಸಂಭ್ರಮಿಸಿದರು. ಯಾವುದೇ ಹುದ್ದೆ, ಅಧಿಕಾರವನ್ನು ಅವರು ಬಯಸಲಿಲ್ಲ ಕೃಷಿಕರಾಗಿ ಉಳಿದುಬಿಟ್ಟರು.
ಕರಾವಳಿ ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಇವರು, ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿ ಮತ್ತು ಕಸ್ತೂರ್ಬಾ ಹೆಸರಿನಲ್ಲಿ ನಿಧಿಯನ್ನು ಸ್ಥಾಪಿಸಿದರು. ಈ ದಂಪತಿ ಭಾರತ ಸರಕಾರ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಮಾಸಾಶನವನ್ನು ನಿರಾಕರಿಸಿ ಕೊನೆಯ ಕ್ಷಣದವರೆಗೂ ದೇಶಕ್ಕಾಗಿ ಬದುಕಿದರು. ಭೂಮಸೂದೆ ಕಾನೂನು ಜಾರಿಯಾದಾಗ ಧನಿ ಒಕ್ಕಲು ಸಂಬಂಧವನ್ನು ಚೆನ್ನಾಗಿ ನೋಡಿಕೊಂಡು ಸರ್ವರ ಪ್ರೀತಿಗೆ ಪಾತ್ರರಾದರು. ಸಹಕಾರಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ವರಂಗ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹೀಗೆ ನಿಸ್ವಾರ್ಥವಾಗಿ ಸ್ವಾತಂತ್ರ್ಯ ಹೋರಾಟ, ಜನಸೇವೆ ದೇಶ ಸೇವೆ ಮಾಡಿದ ಆದರ್ಶ ದಂಪತಿ ನಿತ್ಯ ಸ್ಮರಣೀಯರು.