ಒಬಿಸಿಯಿಂದ ಇಡಬ್ಲ್ಯುಎಸ್‌ವರೆಗೆ....

ಹಿಂದುಳಿದ ವರ್ಗಗಳನ್ನು ಗುರುತಿಸುವ ಕಾರ್ಯಕ್ಕೆ ಕೈಗೊಳ್ಳುವ ಸಾಂವಿಧಾನಿಕ ಕ್ರಮವನ್ನು ಮಾತ್ರ ‘ಆರ್ಥಿಕ ದುರ್ಬಲ ವರ್ಗ’ದವರಿಗೆ ಮೀಸಲಾತಿಗೆ ಒಳಪಡಿಸುವಾಗ ಮಾತ್ರ ಅನುಸರಿಸಲಿಲ್ಲ ಎಂಬುದು ಮಾತ್ರ ಅತ್ಯಂತ ಸೋಜಿಗದ ವಿಷಯ. ಏಕೆಂದರೆ ಅದರ ಫಲಾನುಭವಿಗಳೆಲ್ಲ ಮೇಲ್ಜಾತಿ-ವರ್ಗದವರೇ ಆಗಿರುವುದರಿಂದ, ಮಿಂಚಿನೋಪಾದಿಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅದು ಅಂಗೀಕರಿಸಲ್ಪಡುತ್ತದೆ.
2019ರಲ್ಲಿ ಸಂಸತ್ತು ಸಂವಿಧಾನದ 103ನೇ ತಿದ್ದುಪಡಿಯನ್ನು ಅಂಗೀಕರಿಸಿತು. ಇದು ಸರಕಾರಿ ಉದ್ಯೋಗಗಳು ಮತ್ತು ಉನ್ನತ ಶಿಕ್ಷಣ ಮತ್ತು ಸಂಸ್ಥೆಗಳಲ್ಲಿ ‘ಆರ್ಥಿಕ ದುರ್ಬಲ ವರ್ಗದ ನಾಗರಿಕರಿಗೆ’ ಅಥವಾ ಇಡಬ್ಲ್ಯುಎಸ್ ವರ್ಗದವರಿಗೆ ಮೀಸಲಾತಿಯನ್ನು ಪರಿಚಯಿಸಿತು. ಈ ತಿದ್ದುಪಡಿಯು ಶೇ. 50ರ ಗರಿಷ್ಠ ಕೋಟಾ ಮಿತಿಯನ್ನು ಉಲ್ಲಂಘಿಸಿದೆ ಮತ್ತು ಸರಕಾರವು ಇಡಬ್ಲ್ಯುಎಸ್‌ಗೆ ಶೇ. ಹತ್ತರವರೆಗೆ ಮೀಸಲಾತಿಯನ್ನು ಒದಗಿಸಲು ಅನುವು ಮಾಡಿ ಕೊಟ್ಟಿದೆ. ಸರಕಾರವು ಇಡಬ್ಲ್ಯುಎಸ್ ಸಮುದಾಯ ಅಥವಾ ವರ್ಗವನ್ನು ‘ಕುಟುಂಬದ ಆದಾಯ ಮತ್ತು ಇತರ ಸೂಚಕಗಳ’ ಆಧಾರದ ಮೇಲೆ ಗುರುತಿಸಬೇಕು, ಅಂದರೆ ಕೆನೆಪದರವನ್ನು ಹೊರಗಿಡಬೇಕು ಎಂದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸೇರದ ಮತ್ತು ಅವರ ಕುಟುಂಬ (ಅಂದರೆ, ಪೋಷಕರು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಡಹುಟ್ಟಿದವರು, ಪತಿ ಅಥವಾ ಪತ್ನಿ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು); (1) ಒಟ್ಟು ವಾರ್ಷಿಕ ಆದಾಯ ರೂ. 8 ಲಕ್ಷಕ್ಕಿಂತ ಕಡಿಮೆ (ಇದು ಹಿಂದುಳಿದ ವರ್ಗಗಳಿಗೂ ಕೆನೆಪದರ ಸ್ಥಿತಿಯನ್ನು ನಿರ್ಧರಿಸಲು ಆದಾಯ ಮಿತಿಯಾಗಿದೆ); ಮತ್ತು (2) ನಿರ್ದಿಷ್ಟ ಪರಿಮಾಣದ ಸ್ಥಿರಾಸ್ತಿಯನ್ನು ಹೊಂದಿರುವುದಿಲ್ಲ (ಉದಾ; 5 ಎಕರೆ ಕೃಷಿ ಭೂಮಿ, 1,000 ಚದರ ಅಡಿಗಳ ವಸತಿ ಫ್ಲ್ಯಾಟ್ ಇತ್ಯಾದಿ) ತಿದ್ದುಪಡಿಯ ಉದ್ದೇಶಕ್ಕಾಗಿ ಇಡಬ್ಲ್ಯುಎಸ್ ಸಮುದಾಯಗಳಾಗಿರುತ್ತವೆ ಎಂದು ಸರಕಾರ ಹೇಳಿದೆ. ಶೇ.80ರಷ್ಟು ಭಾರತೀಯ ಕುಟುಂಬಗಳು ಇ ಡಬ್ಲ್ಯುಎಸ್ ಸಮುದಾಯಗಳ ವಿವರಣೆಯೊಳಗೆ ಬರುತ್ತವೆ ಎಂದು ಅಂದಾಜಿಸಲಾಗಿದೆ.
ಪ್ರಧಾನಿ ಮೋದಿ ಅವರ ಭಾಜಪ ಸರಕಾರವು ತನ್ನ ಮೊದಲ ಅವಧಿಯ ಕೊನೆಯ ದಿನಗಳಲ್ಲಿ ಜಾರಿಗೆ ತಂದ ಈ ತಿದ್ದುಪಡಿ ಕನಿಷ್ಠ ಮೂರು ಕಾರಣಗಳಿಗಾಗಿ ಮಹತ್ವದ್ದಾಗಿದೆ. ಮೊದಲನೆಯದಾಗಿ, ಈ ತನಕ ಸಾಮಾಜಿಕ ಹಿಂದುಳಿದಿರುವಿಕೆಯು ಮೀಸಲಾತಿಗೆ ಅನಿವಾರ್ಯವಾಗಿತ್ತು. ಸಾರ್ವಜನಿಕ ಉದ್ಯೋಗದಲ್ಲಿ ಮೀಸಲಾತಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಅಗತ್ಯವಿತ್ತು. ಒಂದು ಸಮುದಾಯದ ಹಿಂದುಳಿದಿರುವಿಕೆಯನ್ನು ಗುರುತಿಸಲು ಆರ್ಥಿಕ ಮಾನದಂಡಗಳನ್ನು ಮಂಡಲ್ ಆಯೋಗವು ಬಳಸಿದ್ದರೂ, ಅವು ಒಂದು ಸಮುದಾಯವನ್ನು ಮೀಸಲಾತಿ ಪಡೆಯಲು ಅರ್ಹತೆಗೆ ಒಳಪಡಿಸಲು ಸಾಕಾಗುವುದಿಲ್ಲ. ಈಗ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಒಂದು ಸಮುದಾಯಕ್ಕೆ ಮೀಸಲಾತಿ ಕೋಟಾ ಪಡೆಯಲು ಆರ್ಥಿಕ ಮಾನದಂಡಗಳು ಮಾತ್ರ ಸಾಂವಿಧಾನಾತ್ಮಕವಾಗಿವೆ. ಅಲ್ಲದೆ ಸರಕಾರವು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳನ್ನು ಇಡಬ್ಲ್ಯುಎಸ್ ಮೀಸಲಾತಿಯಿಂದ ಹೊರಗಿಟ್ಟಿದೆ. ಇದು ಮೂಲಭೂತವಾಗಿ ಮೇಲ್ಜಾತಿಗಳಿಗಷ್ಟೇ ಮೀಸಲಾತಿಯನ್ನು ಸೂಚಿಸುತ್ತದೆ. ತಿದ್ದುಪಡಿಯಲ್ಲಿ ‘ದುರ್ಬಲ ವರ್ಗಗಳು’ ಎಂಬ ಪದವನ್ನು ಸಂವಿಧಾನದ 46ನೇ ವಿಧಿಯಿಂದ ಎರವಲು ಪಡೆಯಲಾಗಿದೆ- ಇದು ದುರ್ಬಲ ವರ್ಗಗಳ ‘ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು’ ಉತ್ತೇಜಿಸಲು ಸರಕಾರಕ್ಕೆ ಸೂಚಿಸುವ ರಾಜ್ಯ ನೀತಿಯ ನಿರ್ದೇಶಕ ತತ್ವವಾಗಿದೆ.
ಎರಡನೆಯದಾಗಿ, ತಿದ್ದುಪಡಿಯು ಮೀಸಲಾತಿಯ ಮಿತಿಯನ್ನು ಶೇ. 10ರಷ್ಟು ಹೆಚ್ಚಿಸಿ ಬಾಲಾಜಿ ಪ್ರಕರಣದಲ್ಲಿ ನಿಗದಿಪಡಿಸಿದ್ದ ಶೇ. 50ರಷ್ಟು ನಿಯಮವನ್ನು ಉಲ್ಲಂಘಿಸಿದೆ. ಆದರೆ ಇಂದ್ರಾ ಸಹಾನಿ ಪ್ರಕರಣದ ನಂತರ ನಿಯಮ ಸ್ಥಿರೀಕರಿಸಲಾಯಿತು. ಸಂಸತ್ತಿನಲ್ಲಿ ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಮೀಸಲಾತಿಗೆ ಬಹಳ ಹಿಂದಿನಿಂದಲೂ ಬೇಡಿಕೆ ಏನೋ ಇತ್ತು.
ಮೂರನೆಯದಾಗಿ ಒಬ್ಬ ವಿದ್ವಾಂಸರು ಗಮನಿಸಿದಂತೆ ಸರಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗಿಂತ ಇಡಬ್ಲ್ಯುಎಸ್‌ಗೆ ಮೀಸಲಾತಿ ನೀಡುವುದು ಸರಕಾರಕ್ಕೆ ಈಗ ಸುಲಭ ಸಾಧ್ಯವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಈ ಸಮುದಾಯಗಳು ಸೇವೆಗಳಲ್ಲಿ ಅಸಮರ್ಪಕ ಪ್ರಾತಿನಿಧ್ಯವನ್ನು ಹೊಂದಿವೆ ಎಂಬ ‘ಪರಿಹಾರಾತ್ಮಕ ದತ್ತಾಂಶವನ್ನು’ ಸರಕಾರ ಹೊಂದಿರಬೇಕು. ಹಾಗಿದ್ದರೂ ಇಡಬ್ಲ್ಯುಎಸ್ ಗುಂಪಿಗೆ ಮೀಸಲಾತಿ ನೀಡುವ ಮೊದಲು ಅಂತಹ ಯಾವುದೇ ವಿಧಾನವನ್ನು ಪರಿಗಣಿಸಲಿಲ್ಲ. ಆದರೂ ಇಡಬ್ಲ್ಯುಎಸ್ ಗುಂಪು ಶೇ.10ರಷ್ಟು ಕೋಟಾ ಪಡೆಯುತ್ತದೆ. ಇದು ಎರಡು ಕಾರಣಗಳಿಗಾಗಿ ವಿಶೇಷವಾಗಿ ಪ್ರಸ್ತುತವಾಗಿದೆ: 1. ಲಭ್ಯವಿರುವ ದತ್ತಾಂಶದಂತೆ ಭಾರತದಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಪಂಕ್ತಿಯ ಚೌಕಟ್ಟಿನಿಂದ ಶ್ರೇಣೀಕರಿಸಲ್ಪಟ್ಟ 445 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಡಬ್ಲ್ಯುಎಸ್ ಸಮುದಾಯಗಳು ಈಗಾಗಲೇ ಸುಮಾರು ಶೇ. 28ರಷ್ಟು ಪಾಲನ್ನು ಹೊಂದಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಇಡಬ್ಲ್ಯುಎಸ್ ಸಮುದಾಯಗಳು ಈಗಾಗಲೇ ಕಾಲೇಜುಗಳಲ್ಲಿ ‘ಅನುಪಾತ’, ‘ಪ್ರಾತಿನಿಧ್ಯ’ವನ್ನು ಹೊಂದಿವೆ. (2) ಹಿಂದುಳಿದ ವರ್ಗಗಳು ಉಳಿದ ಜನಸಂಖ್ಯೆಗಿಂತ ಹೆಚ್ಚಿನ ದರದಲ್ಲಿ ಬಡತನ ರೇಖೆಗಿಂತ ಕೆಳಗಿವೆ.
ಜನಹಿತ ಅಭಿಯಾನ vs ಭಾರತ ಒಕ್ಕೂಟ (2022) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ 103ನೇ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ. (ಮೂಲ:These seats are reserved- Abhinav Chandrachud).
ವಿಭಿನ್ನ ದೃಷ್ಟಿಕೋನ
ಭಾರತದ ಜನತೆಯಾದ ನಾವು, ನಮ್ಮ ಸಂವಿಧಾನ ಸಭೆಯಲ್ಲಿ 1949ನೆಯ ಇಸವಿಯ ನವೆಂಬರ್ ತಿಂಗಳ 26ನೆಯ ದಿನದಂದು ಈ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ, ಶಾಸನವಾಗಿ ವಿಧಿಸಿಕೊಂಡಿದ್ದೇವೆ. ಅದು ಅನುಷ್ಠಾನಗೊಂಡಿದ್ದು ಮಾತ್ರ ಜನವರಿ 26,1950. ‘ಯಾವುದು ಅಗತ್ಯ ಮತ್ತು ಯಾವುದು ಅಗತ್ಯವಿಲ್ಲ’ ಎಂಬ ಅಂಶಗಳೆಲ್ಲವನ್ನೂ ಅಧ್ಯಯನ ಮಾಡಿ ಸಾರೋದ್ಧಾರವಾಗಿ ರೂಪಿಸಿಕೊಂಡದ್ದು ನಮ್ಮ ಸಂವಿಧಾನ. ಆದರೆ ಚುನಾಯಿತ ಪ್ರತಿನಿಧಿಗಳು, ಸಂವಿಧಾನದ ಆಶಯಗಳನ್ನು ಚಾಚು ತಪ್ಪದೆ ಜಾರಿಗೊಳಿಸಿದ್ದಾರೆಯೇ ಎಂಬುದೂ ಅಷ್ಟೇ ಮುಖ್ಯ.
ದೇಶದ ಅಸಮಾನ ಸಾಮಾಜಿಕ ವ್ಯವಸ್ಥೆಯ ಕಾರಣ, ಆದ್ಯತಾ ಉಪಚಾರದ ಅಡಿಯಲ್ಲಿ, ಹಿಂದುಳಿದ ವರ್ಗಗಳನ್ನು ಗುರುತಿಸಿ, ಅವುಗಳಿಗೆ ಮೀಸಲಾತಿ ಕೋಟಾ ನೀಡಲು, ಸಂವಿಧಾನ ಜಾರಿಗೊಂಡ ಸುಮಾರು 42 ವರ್ಷಗಳ ನಂತರವಷ್ಟೇ ಸಾಧ್ಯವಾಯಿತು. ಸ್ಪಷ್ಟವಾಗಿ ಸಂವಿಧಾನದಲ್ಲಿ ಈ ವಿಷಯ ಉಲ್ಲೇಖವಾಗಿದ್ದರೂ ಸರಕಾರ- ಸಂಸದರ ಉದಾಸೀನವೋ, ಉದ್ದೇಶಪೂರ್ವಕವೋ, ಮತ್ಸರವೋ, ಮತ್ತೆಂಥದೋ ಕಾರಣದಿಂದ ಕ್ಲಪ್ತ ಕಾಲದಲ್ಲಿ ಕೈಗೂಡಲಿಲ್ಲ. ಕಾಂಗ್ರೆಸ್ ಸರಕಾರ ಪತನವಾಗಿ ಜನತಾ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ನಂತರ, ಹಿಂದುಳಿದವರನ್ನು ಗುರುತಿಸುವ ಸಲುವಾಗಿ ಬಿ.ಪಿ. ಮಂಡಲ್ ಅವರ ಅಧ್ಯಕ್ಷತೆಯಲ್ಲಿ ಎರಡನೇ ಹಿಂದುಳಿದ ವರ್ಗಗಳ ಆಯೋಗವನ್ನು ಸಂವಿಧಾನದ ವಿಧಿ 340ರ ಅನ್ವಯ 1978ರಲ್ಲಿ ರಚಿಸಲಾಯಿತು. ದೇಶದ 3,743 ಜಾತಿ- ಉಪಜಾತಿಗಳನ್ನು ಹಿಂದುಳಿದ ವರ್ಗಗಳೆಂದು ಗುರುತಿಸಿ 1980ರಲ್ಲಿ ಆಯೋಗ ವರದಿ ಸಲ್ಲಿಸಿತು. ಆಯೋಗ ವಿಧಿ 15 (4)ರಂತೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ, ವಿಧಿ 16(4)ರ ಅನ್ವಯ, ಹಾಗೆ ಹಿಂದುಳಿದ ವರ್ಗಗಳೆಂದು ಗುರುತಿಸಲ್ಪಟ್ಟ ಜಾತಿಗಳು, ಸರಕಾರ ಮತ್ತು ಸರಕಾರದ ಅಂಗ ಸಂಸ್ಥೆಗಳಲ್ಲಿ ‘ಸಾಕಷ್ಟು ಪ್ರಾತಿನಿಧ್ಯ’ ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿತ್ತು. ಇದು ಸಾಂವಿಧಾನಿಕವಾಗಿ ಅನುಸರಿಸಬೇಕಾದ ಕ್ರಮ.
ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳು ಸೇರಿದಂತೆ ಶೇ. 77ರಷ್ಟು ಸಮುದಾಯಗಳು ಮೀಸಲಾತಿಯನ್ನು ಪಡೆಯುತ್ತಿವೆ. ಕೆಲವೊಂದು ರಾಜ್ಯದಲ್ಲಿ ಶೇ. 96ರಷ್ಟು ಜಾತಿ-ಉಪಜಾತಿಗಳು ಮೀಸಲಾತಿಗೆ ಒಳಪಟ್ಟಿವೆ. ಇದು ಕಳೆದು ಹೋದ ಕಥೆ. ಅದು ಹಾಗಿರಲಿ, ಆದರೆ, ಹಿಂದುಳಿದ ವರ್ಗಗಳನ್ನು ಗುರುತಿಸುವ ಕಾರ್ಯಕ್ಕೆ ಕೈಗೊಳ್ಳುವ ಸಾಂವಿಧಾನಿಕ ಕ್ರಮವನ್ನು ಮಾತ್ರ ‘ಆರ್ಥಿಕ ದುರ್ಬಲ ವರ್ಗ’ದವರಿಗೆ ಮೀಸಲಾತಿಗೆ ಒಳಪಡಿಸುವಾಗ ಮಾತ್ರ ಅನುಸರಿಸಲಿಲ್ಲ ಎಂಬುದು ಮಾತ್ರ ಅತ್ಯಂತ ಸೋಜಿಗದ ವಿಷಯ. ಏಕೆಂದರೆ ಅದರ ಫಲಾನುಭವಿಗಳೆಲ್ಲ ಮೇಲ್ಜಾತಿ-ವರ್ಗದವರೇ ಆಗಿರುವುದರಿಂದ, ಮಿಂಚಿನೋಪಾದಿಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅದು ಅಂಗೀಕರಿಸಲ್ಪಡುತ್ತದೆ. ಇಲ್ಲಿ ಜಟಿಲ ಪ್ರಶ್ನೆಯೊಂದು ಉದ್ಭವಿಸುತ್ತದೆ. ಯಾವುದೇ ಆಯೋಗವನ್ನು ರಚಿಸದೆ, ಮೀಸಲಾತಿಗೆ ಒಳಪಡದ ಜಾತಿಗಳು ಸಾರ್ವಜನಿಕ ಹುದ್ದೆ ಮತ್ತು ನೇಮಕಾತಿಯಲ್ಲಿ ‘ಸಾಕಷ್ಟು ಪ್ರಾತಿನಿಧ್ಯ’ ಪಡೆದುಕೊಂಡಿವೆಯೇ ಅಥವಾ ಇಲ್ಲವೇ ಎಂಬ ಸಾಂವಿಧಾನಿಕ ಕ್ರಮವನ್ನು ಅನುಸರಿಸುತ್ತದೆ ಎಂಬುದಕ್ಕೆ ಮಾತ್ರ ಉತ್ತರ ‘ಇಲ್ಲ’ ಎಂಬುದೇ ಆಗಿದೆ.
‘ಆರ್ಥಿಕ ದುರ್ಬಲರು’ ಎಂದು ಹೇಳಿ, ವಿಧಿ 46ರಲ್ಲಿ ಉಲ್ಲೇಖಿಸಿರುವ ಅಂಶಗಳ ಪ್ರಯೋಜನ ಪಡೆದು ಆ ‘ದುರ್ಬಲ’ ರಿಗೆ ಶೇ.10ರಷ್ಟನ್ನು ಅಥವಾ ಶೇ.10ರಷ್ಟರ ವರೆಗೆ ಮೀಸಲಾತಿ ನೀಡಲಾಗಿದೆ. ವಿಧಿ 46ರ ಪಠ್ಯ ಹೀಗಿದೆ:
‘‘ಅನುಸೂಚಿತ ಜಾತಿಗಳ ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ಸಂವರ್ಧನೆ-ರಾಜ್ಯವು ದುರ್ಬಲ ವರ್ಗಗಳ ವಿಶೇಷವಾಗಿ ಅನುಸೂಚಿತ ಜಾತಿಗಳ ಮತ್ತು ಬುಡಕಟ್ಟುಗಳ ಜನತೆಯ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಜಾಗರೂಕತೆಯಿಂದ ಸಂವರ್ಧಿಸತಕ್ಕದ್ದು ಮತ್ತು ಅವರನ್ನು ಸಾಮಾಜಿಕ ಅನ್ಯಾಯದಿಂದ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಸಂರಕ್ಷಿಸತಕ್ಕದ್ದು’’. ಈ ಪಠ್ಯದಲ್ಲಿ ಉಲ್ಲೇಖಿಸಿರುವ ಹಾಗೂ ಸರಕಾರ ವ್ಯಾಖ್ಯಾನಿಸಿರುವ ‘ದುರ್ಬಲ ವರ್ಗ’ ಎಂಬ ನುಡಿಗಟ್ಟು ಮೇಲ್ಜಾತಿ- ವರ್ಗದ ಆರ್ಥಿಕ ದುರ್ಬಲರಿಗೆ ಅನ್ವಯಿಸುತ್ತದೆಯೇ ಎಂಬುದನ್ನು ಸಂವಿಧಾನ ಪಂಡಿತರೇ ವಿಶ್ಲೇಷಿಸ ಬೇಕು.
ಆರ್ಥಿಕ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿಯನ್ನು ಕೊಡಮಾಡಿರುವುದನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ತುಸು ಹೆಚ್ಚೇ ಎನ್ನಬಹುದಾದ ರಿಟ್ ಅರ್ಜಿಗಳು ದಾಖಲಾದವು. ಸರ್ವೋಚ್ಚ ನ್ಯಾಯಾಲಯವು ಅರ್ಜಿಗಳ ವಿಚಾರಣೆಗೆ ಪಂಚ ನ್ಯಾಯಾಧೀಶರ ಸಾಂವಿಧಾನಿಕ ಪೀಠವನ್ನು ರಚಿಸಿತು. ಪೀಠದ ಮೂವರು ನ್ಯಾಯಾಧೀಶರು, ಆರ್ಥಿಕ ದುರ್ಬಲರಿಗೆ ಮೀಸಲಾತಿ ನೀಡಿರುವುದನ್ನು ಎತ್ತಿ ಹಿಡಿದರು. ಮತ್ತೆ ಇಬ್ಬರು ನ್ಯಾಯಾಧೀಶರು ಮಾತ್ರ ಸಂವಿಧಾನ ತಿದ್ದುಪಡಿ (103) ಅಸಾಂವಿಧಾನಿಕ ಎಂದು ತೀರ್ಪಿತ್ತರು. ಹೀಗಾಗಿ ಬಹುಮತದ ತೀರ್ಮಾನದಿಂದ, ತಿದ್ದುಪಡಿ ಊರ್ಜಿತಗೊಂಡಿತು.
ಪ್ರಸಕ್ತ ದೇಶದಲ್ಲಿ, ಶೇ. ನೂರರಷ್ಟು ನಾಗರಿಕರು (ಕೆನೆಪದರಕ್ಕೆ ಒಳಪಡುವವರನ್ನು ಹೊರತುಪಡಿಸಿ) ಮೀಸಲಾತಿಗೆ ಒಳಪಟ್ಟಿದ್ದಾರೆ. ಮೀಸಲಾತಿ ನೀಡಿಕೆ ಅರ್ಹತೆಗೋ ಅಥವಾ ರಾಜಕೀಯ ನಿರ್ಧಾರಕ್ಕೋ ಎಂಬುದರ ವಿಶ್ಲೇಷಣೆ ಇಂದಿನ ದಿನಮಾನಗಳಲ್ಲಿ ಅತ್ಯವಶ್ಯವಾಗಿದೆ.