ರಥಯಾತ್ರೆಯಿಂದ ಭಾರತ ರತ್ನದವರೆಗೆ: ಹಿಂಸೆ, ಧ್ರುವೀಕರಣದ ಅಡ್ವಾಣಿ ರಾಜಕಾರಣ
ಭಾರತ ರತ್ನ ಬಂದ ನಂತರವೂ 96 ವರ್ಷದ ಅಡ್ವಾಣಿಯವರು ಮೋದಿಯವರ ರಾಜಕೀಯ ಚದುರಂಗದಾಟದಲ್ಲಿ ಬರೀ ಒಂದು ದಾಳ ಮಾತ್ರವಾಗಿರುತ್ತಾರೆ, ಅಷ್ಟೆ.
ಮಾರ್ಗದರ್ಶಕ ಮಂಡಲ ಎಂಬ ದೊಡ್ಡ ಹೆಸರುಳ್ಳ ಪಕ್ಷದ ನಿವೃತ್ತರ ಸಾಲಿನ ನೆರಳಿಗೆ ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿ ಯಾವತ್ತೋ ಸರಿದು ಹೋಗಿಯಾಗಿದೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಈಗ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ನೀಡುವ ಮೂಲಕ ಮತ್ತೆ ಗುರುತಿಸಿದ ಹೆಗ್ಗಳಿಕೆ ಪಡೆಯಲು ಮುಂದಾಗಿದ್ದಾರೆ.
1989ರಲ್ಲಿ ಪಕ್ಷದ ಅಧ್ಯಕ್ಷರಾಗಿದ್ದ ಅಡ್ವಾಣಿ, ಪಾಲಂಪುರ್ ರಾಷ್ಟ್ರೀಯ ಕಾರ್ಯಕಾರಿ ನಿರ್ಣಯದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಪಕ್ಷದ ಅಜೆಂಡಾಗಳಲ್ಲಿ ಒಂದೆಂದು ಮೊದಲ ಬಾರಿಗೆ ಸೇರಿಸಿದ್ದವರು. ಆದರೆ ಅದೇ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಅವರನ್ನು ಆಹ್ವಾನಿಸದಿರಲು ಮೊದಲು ನಿರ್ಧರಿಸಿ, ಆನಂತರ ಆಹ್ವಾನಿಸಿದಂತೆ ಮಾಡಲಾಯಿತು. ಕಡೆಗೂ ಅವರು ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿಲ್ಲ.
ಅನಿಶ್ಚಿತತೆ, ಭಯ ಮತ್ತು ಅಭದ್ರತೆಯ ವ್ಯಾಪಕ ಭಾವನೆಗಳನ್ನು ಒಳಗೊಂಡಿರುವ ಹೊಸ ಭಾರತದಲ್ಲಿ ಅದೆಲ್ಲದಕ್ಕೂ ಅಡಿಗಲ್ಲು ಹಾಕಿದಂತಹವರು ಅಡ್ವಾಣಿಯವರು. ಅಂಥ ಹಿಂದುತ್ವ ಸಿದ್ಧಾಂತವಾದಿ ಭಾರತ ರತ್ನವನ್ನು ಸ್ವೀಕರಿಸಲು ಕಾರಣವಾಗುವ ಸಮಯವಂತೂ ಇರಲಿಲ್ಲ.
ಅವರ ಏಕೈಕ ಮಹತ್ವದ ರಾಜಕೀಯ ಗುರಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವುದಷ್ಟೇ ಆಗಿತ್ತು. ತನ್ನ 96ನೇ ವಯಸ್ಸಿನಲ್ಲಿ ಅವರೀಗ ದೇಶವನ್ನು ತೀಕ್ಷ್ಣವಾದ ಧಾರ್ಮಿಕ ಧ್ರುವೀಕರಣದತ್ತ ಕೊಂಡೊಯ್ಯುವಲ್ಲಿನ ತನ್ನ ಪಾತ್ರವನ್ನು ನೆನಪಿಸಿಕೊಳ್ಳುತ್ತಿರಬಹುದೇನೊ. ಏಕೆಂದರೆ ಅವರ ಧ್ರುವೀಕರಣ ರಾಜಕಾರಣವನ್ನು ಅಂತಿಮವಾಗಿ ಅವರ ಉತ್ತರಾಧಿಕಾರಿ ನರೇಂದ್ರ ಮೋದಿ ಒಪ್ಪಿಕೊಂಡಿದ್ದಾರೆ.
ಕಳೆದ ಕೆಲವು ದಶಕಗಳಲ್ಲಿ, ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ರಾಜಕೀಯ ಸಂದೇಶ ಕೊಡುವುದಕ್ಕೆ ಬಳಸುವ ಮಟ್ಟಕ್ಕೆ ಇಳಿಸಲಾಗಿದೆ. ವಿಜ್ಞಾನಿಗಳು, ಸಂಗೀತಗಾರರು, ಕ್ರೀಡಾಪಟುಗಳು ಮತ್ತು ಸಮಾಜ ಸುಧಾರಕರು ಕಾಲಕಾಲಕ್ಕೆ ಗೌರವವನ್ನು ಪಡೆದರೆ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಹೆಚ್ಚಾಗಿ ತಮ್ಮ ಪಕ್ಷಗಳ ಸಿದ್ಧಾಂತಗಳ ಪ್ರತಿಪಾದಕರಿಗೆ ಪ್ರಶಸ್ತಿಯನ್ನು ಕೊಡುವುದಕ್ಕೆ ತೊಡಗಿವೆ.
ಆದರೆ ಅಡ್ವಾಣಿಯಷ್ಟು ಧ್ರುವೀಕರಣ ರಾಜಕಾರಣ ಮಾಡಿದವರು ಮತ್ತೊಬ್ಬರಿಲ್ಲ. ಏಕೆಂದರೆ ಅವರು ತಮ್ಮದೇ ದೇಶದಲ್ಲಿ ವಿಭಜಕ ರಾಜಕಾರಣಿ ಎಂದು ಪರಿಗಣಿತವಾಗಿದ್ದಾರೆ. ಜನಸಂಘದಲ್ಲಿದ್ದ ದಿನಗಳಿಂದಲೂ ಕೇಸರಿ ಪಕ್ಷಕ್ಕೆ ಸ್ಪಷ್ಟ ಮತ್ತು ತೀಕ್ಷ್ಣವಾದ ಸೈದ್ಧಾಂತಿಕ ಸ್ವರೂಪವನ್ನು ನೀಡಿದ ಬಿಜೆಪಿಯ ಸಂಸ್ಥಾಪಕರಲ್ಲಿ ಅವರು ಒಬ್ಬರು. ಅವರ ಪಕ್ಷವು ಹೆಚ್ಚಾಗಿ ಕಾಂಗ್ರೆಸ್ ವಿರೋಧಿ ಮೈತ್ರಿಗಳ ಮೇಲೆಯೇ ಅವಲಂಬಿತವಾಗಿದೆ. ಅವರು ಬಹುಶಃ ಕೇಸರಿ ಪಕ್ಷವನ್ನು ಸಾಮೂಹಿಕ ಸಂಘಟನೆಯಾಗಿ ಪರಿವರ್ತಿಸುವಲ್ಲಿ ದೊಡ್ಡ ಸಾಂಸ್ಥಿಕ ಪಾತ್ರವನ್ನು ವಹಿಸಿದ್ದಾರೆ. ಅದರಿಂದ ಬಲಿಯಾಗಿರುವುದು ಮಾತ್ರ ದೇಶದ ಕೋಮು ಸೌಹಾರ್ದ.
ಪಾಲಂಪುರ್‌ನಲ್ಲಿ ರಾಮಮಂದಿರ ನಿರ್ಮಾಣ ನಿರ್ಣಯವನ್ನು ಅಂಗೀಕರಿಸುವುದರಿಂದ ಹಿಡಿದು ದೇಶದಾದ್ಯಂತ ರಥಯಾತ್ರೆಯ ಮೂಲಕ ದೇಶದಲ್ಲಿ ಬಹುಸಂಖ್ಯಾತರ ರಾಜಕಾರಣವನ್ನು ಮುನ್ನೆಲೆಗೆ ತರುವವರೆಗೆ ಅಡ್ವಾಣಿ ಪಾತ್ರವಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಪಕ್ಷ ಕಟ್ಟುವಲ್ಲಿ ಕೆಲಸ ಮಾಡಿದ್ದ ಅವರು, ಒಂದು ಹಂತದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಬದಿಗೆ ಸರಿಸಲ್ಪಟ್ಟಿದ್ದರು.
1986-91ರ ನಡುವೆ ಮೊದಲ ಬಾರಿಗೆ, ನಂತರ 1993-98ರ ನಡುವೆ ಮತ್ತು ಅಂತಿಮವಾಗಿ 2004-05ರಲ್ಲಿ ಒಂದು ವರ್ಷದ ಅವಧಿಯಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿದ್ದ ಅವರು ಬಿಜೆಪಿಯ ಈವರೆಗಿನ ಸುದೀರ್ಘ ಅವಧಿಯ ಅಧ್ಯಕ್ಷರು. ಮುಹಮ್ಮದ್ ಅಲಿ ಜಿನ್ನಾರನ್ನು ಜಾತ್ಯತೀತ ನಾಯಕ ಎಂದು ಬಣ್ಣಿಸುವ ಮೂಲಕ ವಿವಾದಕ್ಕೊಳಗಾದ ಅವರು, ಆರೆಸ್ಸೆಸ್ ಸೂಚನೆಯಂತೆ ರಾಜೀನಾಮೆ ನೀಡಬೇಕಾಯಿತು. ಆನಂತರ ಪಕ್ಷದ ಹಿರಿಯ ನಾಯಕನ ಕುರಿತ ತನ್ನ ಕಠಿಣ ಧೋರಣೆ ಬದಲಿಸಿದ್ದ ಆರೆಸ್ಸೆಸ್, ಅವರನ್ನು ಉಪ ಪ್ರಧಾನಿಯಾಗಿ ನೇಮಿಸುವಂತೆ ವಾಜಪೇಯಿ ಅವರ ಮೇಲೆ ಒತ್ತಡ ಹೇರಿತ್ತು.
30 ವರ್ಷಗಳಿಂದ ಬಿಜೆಪಿ ವಿದ್ಯಮಾನಗಳನ್ನು ವರದಿ ಮಾಡುತ್ತಿರುವ ಹಿರಿಯ ಪತ್ರಕರ್ತೆ ನೀನಾ ವ್ಯಾಸ್ ಹೇಳುವ ಪ್ರಕಾರ, 2005ರಲ್ಲಿ ಅಡ್ವಾಣಿ ರಾಜೀನಾಮೆಯೊಂದಿಗೆ ಅವರ ರಾಜಕೀಯ ಜೀವನದ ಅಂತ್ಯ ಶುರುವಾಗಿತ್ತು. 2013ರಲ್ಲಿ ಅವರನ್ನು ದೂರವಿಡಲಾಯಿತಾದರೂ, 2009ರ ಲೋಕಸಭೆ ಚುನಾವಣೆಯಲ್ಲಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿ ಬಿಜೆಪಿ ಸೋಲುವುದರೊಂದಿಗೆ, ಸಂಘ ಪರಿವಾರದಲ್ಲಿ ಅವರ ವರ್ಚಸ್ಸು ಕುಂದಿತ್ತು.
ಅವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಯಾರ ರಕ್ಷಣೆಗೆ ನಿಂತಿದ್ದರೋ ಅದೇ ಮೋದಿ ಕಡೆಗೆ ಅವರನ್ನು ಮಾರ್ಗದರ್ಶಕ ಮಂಡಲಕ್ಕೆ ತಳ್ಳಿದ್ದರು. ಹೀಗೆ ಅವರೇನು ಬಿತ್ತಿದ್ದರೋ ಅದರ ಫಲವೇ ಸಿಕ್ಕಂತಾಗಿತ್ತು ಎನ್ನಬಹುದು.
2004ರಲ್ಲಿ ಪಕ್ಷದ ರಾಂಚಿ ಸಮಾವೇಶದಲ್ಲಿ, ಅಡ್ವಾಣಿಯವರು, ಬಿಜೆಪಿಯನ್ನು, ಭಾರತವನ್ನು ಆಳಲು ದೇವರೇ ಆರಿಸಿರುವುದಾಗಿ ಬಣ್ಣಿಸಿದ್ದರು. ಆ ಹೇಳಿಕೆ, ಪಕ್ಷವು ಮೈತ್ರಿ ರಾಜಕೀಯದ ನಡುವೆ ಸಿಲುಕಿದ್ದ ಸಮಯದಲ್ಲಿ ತೀವ್ರ ಹಿಂದುತ್ವವನ್ನು ಅಳವಡಿಸಿಕೊಳ್ಳುವ ತಕ್ಷಣದ ಪ್ರಯತ್ನವಾಗಿತ್ತು. ಆದರೆ ದೀರ್ಘಾವಧಿಯಲ್ಲಿ, ಇಸ್ರೇಲ್‌ನಂತಹ ದೇಶವು ತನ್ನನ್ನು ತಾನು ವ್ಯಾಖ್ಯಾನಿಸಿಕೊಳ್ಳುವ ರೀತಿಯಲ್ಲಿ ಭಾರತವನ್ನು ಕಲ್ಪಿಸಿಕೊಳ್ಳುವ ಬಗೆ ಅದಾಗಿತ್ತು.
ಪಕ್ಷದ ಅಧ್ಯಕ್ಷರಾಗಿ ಅಡ್ವಾಣಿಯವರ ಹೇಳಿಕೆಯು ವಾಜಪೇಯಿ ಅವರನ್ನು ಹಿಂದಕ್ಕೆ ಸರಿಸಿತ್ತು. ಆ ಹೊತ್ತಿಗಾಗಲೇ ಅವರು ಪಕ್ಷದಲ್ಲಿ ವಾಜಪೇಯಿಯವರ ಪರಮ ಪ್ರತಿಸ್ಪರ್ಧಿ ಎಂದೇ ಬಿಂಬಿತರಾಗಿಬಿಟ್ಟಿದ್ದರು. ಅಡ್ವಾಣಿ ಅವರು ವಾಜಪೇಯಿ ಅವರನ್ನು ಹಲವು ಬಾರಿ ಪೈಪೋಟಿಯಲ್ಲಿ ಹಿಂದಿಕ್ಕಿದ್ದರು. ವಾಜಪೇಯಿ ಅವರು ಕರೆದಿದ್ದ 2001ರ ಆಗ್ರಾ ಶಾಂತಿ ಶೃಂಗಸಭೆಯನ್ನು ವಿಫಲಗೊಳಿಸುವ ಮೂಲಕ ಹೇಗೆ ಅಡ್ವಾಣಿಯವರು ವಾಜಪೇಯಿ ಅವರ ವಿರುದ್ಧ ಆಟವಾಡಿದ್ದರು ಎಂಬುದನ್ನು ವ್ಯಾಸ್ ನೆನಪಿಸಿಕೊಳ್ಳುತ್ತಾರೆ.
ಲಾಹೋರ್ ಬಸ್ ಯಾತ್ರೆಯ ಹೊರತಾಗಿಯೂ, ಪಾಕಿಸ್ತಾನವು ಕಾರ್ಗಿಲ್ ಯುದ್ಧವನ್ನು ಪ್ರಾರಂಭಿಸಿತ್ತು. ಆದರೂ, ಪರ್ವೇಜ್ ಮುಷರಫ್ ಅವರನ್ನು ಮಾತುಕತೆಗೆ ಆಗ್ರಾಕ್ಕೆ ಆಹ್ವಾನಿಸುವ ಮೂಲಕ ಭಾರತ-ಪಾಕಿಸ್ತಾನದ ಸ್ನೇಹಕ್ಕೆ ಅವಕಾಶ ನೀಡಲು ವಾಜಪೇಯಿ ಬಯಸಿದ್ದರು. ಜಂಟಿ ಹೇಳಿಕೆಯು ಪ್ರಾಯೋಗಿಕವಾಗಿ ಸಿದ್ಧವಾಗಿತ್ತು. ಆದರೆ ಕೊನೆಯಲ್ಲಿ ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರು ಅದನ್ನು ರದ್ದುಗೊಳಿಸಿದ್ದರು. ಅದು ಮಾತುಕತೆಯ ವಿಫಲತೆಗೆ ಕಾರಣವಾಯಿತು ಎಂದು ವ್ಯಾಸ್ ಹೇಳುತ್ತಾರೆ.
ಮಾತುಕತೆಯ ಮೊದಲು, ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಯೋತ್ಪಾದಕರನ್ನು ಮಟ್ಟಹಾಕುವ ನೀತಿಯನ್ನು ಘೋಷಿಸುವ ಮೂಲಕ ಅಡ್ವಾಣಿಯವರು ವಾಜಪೇಯಿ ನಡೆಯ ಮಹತ್ವ ತಗ್ಗಿಸಲು ಪ್ರಯತ್ನಿಸಿದ್ದರು. ಅಷ್ಟು ಮಾತ್ರವಲ್ಲ, ಪ್ರಧಾನಿ ವಾಜಪೇಯಿ ಅವರ ಪ್ರಧಾನ ಕಾರ್ಯದರ್ಶಿ ಮತ್ತು ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರಾ ಅವರನ್ನು ಹೊರಹಾಕುವುದಕ್ಕೂ ಅಡ್ವಾಣಿ ಅನೇಕ ಬಾರಿ ವಿಫಲ ಯತ್ನ ನಡೆಸಿದ್ದರು. 2009ರ ಲೋಕಸಭಾ ಚುನಾವಣೆಯು ಪ್ರಧಾನಿಯಾಗುವ ತನ್ನ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳಲು ಅಡ್ವಾಣಿಯವರಿಗೆ ಕೊನೆಯ ಅವಕಾಶವಾಗಿತ್ತು. ಆದರೆ ಆ ಹೊತ್ತಿಗೆ ಅವರು ಪಕ್ಷದಲ್ಲಿ ಸ್ನೇಹಿತರಿಗಿಂತ ಹೆಚ್ಚು ಶತ್ರುಗಳನ್ನು ಬೆಳೆಸಿಕೊಂಡಿದ್ದರು. ಯಶವಂತ್ ಸಿನ್ಹಾ ಮತ್ತು ಸುಷ್ಮಾ ಸ್ವರಾಜ್ ಅವರಂತಹ ಆಪ್ತರು ಸಹ ಅಡ್ವಾಣಿಯವರ ಜಿನ್ನಾ ಕುರಿತ ಹೇಳಿಕೆ ಮತ್ತು ಪಾಕಿಸ್ತಾನ ಭೇಟಿಯನ್ನು ವಿರೋಧಿಸಿದ್ದರು.
ವಾಜಪೇಯಿ ಅವರನ್ನು ಕೆಳಗಿಳಿಸುವ ಬಯಕೆಯಿಂದ, ಅಡ್ವಾಣಿ ಅವರು ಎಪ್ರಿಲ್ 2002ರಲ್ಲಿ ಪ್ರಸಿದ್ಧ ಗೋವಾ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಬಹುತೇಕ ದಂಗೆಯನ್ನೇ ನಡೆಸಿದ್ದರು. 2002ರ ಗುಜರಾತ್ ಗಲಭೆಯ ಆನಂತರ ವಾಜಪೇಯಿ ಅವರು ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರ ರಾಜೀನಾಮೆ ಕೇಳಲು ಬಹುತೇಕ ನಿರ್ಧರಿಸಿದ್ದರು. ಆದರೆ, ಅಡ್ವಾಣಿ ಅದನ್ನು ತಡೆದು ಮೋದಿಯನ್ನು ರಕ್ಷಿಸಿದ್ದರು ಎಂದು ವ್ಯಾಸ್ ಹೇಳುತ್ತಾರೆ. ಅದು ಕೂಡ ವ್ಯವಸ್ಥಿತವಾಗಿ ನಡೆದಿತ್ತು. ಅರುಣ್ ಜೇಟ್ಲಿಯವರನ್ನು ಅಡ್ವಾಣಿ ಗಾಂಧಿನಗರಕ್ಕೆ ಕಳಿಸಿದ್ದರು. ವಾಜಪೇಯಿ ಅವರು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮೋದಿಯವರ ರಾಜೀನಾಮೆಯ ವಿಚಾರವನ್ನು ಪ್ರಸ್ತಾಪಿಸುವ ಮೊದಲೇ, ಮೋದಿ ಸ್ವತಃ ರಾಜೀನಾಮೆ ನೀಡಲು ಮುಂದಾಗುವಂತೆ ಯೋಜಿಸಲಾಗಿತ್ತು. ಯೋಜಿಸಿದಂತೆ, ಅಡ್ವಾಣಿ ನೇತೃತ್ವದ ಕೆಲವು ಕಾರ್ಯಕಾರಿ ಸದಸ್ಯರು ಮೋದಿಯ ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದರು. ವಾಜಪೇಯಿ ಒಟ್ಟಾರೆ ಸನ್ನಿವೇಶವನ್ನು ಗ್ರಹಿಸಿದರು ಮತ್ತು ಮೋದಿಯನ್ನು ಬೆಂಬಲಿಸಿದರು ಎಂದು ಅವತ್ತಿನ ವಿದ್ಯಮಾನದ ಬಗ್ಗೆ ವ್ಯಾಸ್ ಹೇಳುತ್ತಾರೆ. ಅಡ್ವಾಣಿ ಅವರು ದೀರ್ಘಕಾಲದವರೆಗೆ ಬಿಜೆಪಿಯ ಪ್ರೀತಿಪಾತ್ರ ನಾಯಕನಾಗಿದ್ದರು. ಆದರೆ ಅಂತಿಮವಾಗಿ 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಮೋದಿಯವರಿಂದಲೇ ನೇಪಥ್ಯಕ್ಕೆ ಸರಿಸಲ್ಪಟ್ಟರು. ಅದನ್ನು ಕೆಲವು ರೀತಿಯಲ್ಲಿ ದೈವಿಕ ನ್ಯಾಯ ಎಂದು ಸೂಕ್ತವಾಗಿ ವಿವರಿಸಬಹುದು.
2010ರ ಹೊತ್ತಿಗೆ ಅಡ್ವಾಣಿ ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲವನ್ನು ತಲುಪಿದ್ದರು. 2009ರಲ್ಲಿ ಸೋಲನ್ನು ಎದುರಿಸಿದ್ದರು. ಅದಕ್ಕೂ ಮೊದಲು ಸಂದರ್ಶನವೊಂದರಲ್ಲಿ ಅವರು ರಾಮ ಜನ್ಮಭೂಮಿ ರಥಯಾತ್ರೆಯ ಹೊಣೆಗಾರಿಕೆಯನ್ನೂ ನಿರಾಕರಿಸಿದ್ದರು. ಆ ಸಮಯದಲ್ಲಿ ಅವರು ತಮ್ಮ ಆತ್ಮಕಥನವನ್ನು ಬರೆದಿದ್ದರು. ಅದರಲ್ಲಿ ಬಾಬರಿ ಮಸೀದಿ ಧ್ವಂಸವನ್ನು ಖಂಡಿಸಿದ್ದರು. ಆದರೆ ಅದು ತನ್ನ ವಿರುದ್ಧದ ಕಾನೂನು ಕ್ರಮಗಳನ್ನು ತಪ್ಪಿಸಿಕೊಳ್ಳುವ ಒಂದು ಚಾಣಾಕ್ಷ ತಂತ್ರವಾಗಿತ್ತು ಎಂದೇ ಹಲವರು ಭಾವಿಸಿದ್ದಿದೆ.
ಇದು ಹೇಗೆ ಕೊನೆಗೊಳ್ಳುತ್ತದೆ ಎಂದು ನನಗೆ ತಿಳಿದಿದ್ದರೆ, ನಾನು ಎಂದಿಗೂ ಅಯೋಧ್ಯೆಗೆ ಹೋಗುತ್ತಿರಲಿಲ್ಲ. ಬದಲಾಗಿ ನಾನು ಮತ್ತೂ ಪಾಕಿಸ್ತಾನಕ್ಕೇ ಹೋಗುತ್ತಿದ್ದೆ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದರು. ಆ ಯಾತ್ರೆಯು ಕೆಲವರನ್ನು ಮೆಚ್ಚಿಸಿರಬಹುದು. ನನ್ನ ಬೆಂಬಲಿಗರನ್ನು ಗೆಲ್ಲಿಸಿ ನನ್ನ ವಿರೋಧಿಗಳನ್ನು ಕೆರಳಿಸಿರಬಹುದು. ಆದರೆ ನನಗೆ ಅದು ಪ್ರಮುಖ ಪಾಠದ ಸಮಯ ಎಂದು ನಾನು ನೆನಪಿಸಿಕೊಳ್ಳುತ್ತೇನೆ ಎಂದಿದ್ದ ಅಡ್ವಾಣಿ, ತಮ್ಮ ಕುಟುಂಬದ ಧಾರ್ಮಿಕ ಸಂಪ್ರದಾಯ ಸಿಖ್ ಆಚರಣೆಗಳಾಗಿವೆ ಎಂದು ಹೇಳಿದ್ದರಲ್ಲದೆ, ತಮ್ಮ ಮನೆಯಲ್ಲಿರುವ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ಆಗಿದೆ ಎಂದೆಲ್ಲ ಹೇಳಿದ್ದರು.
ಜಿನ್ನಾ ಕುರಿತ ಅವರ ಹೇಳಿಕೆ ಪಕ್ಷದಲ್ಲಿನ ಅವರ ದೊಡ್ಡ ವರ್ಗದ ಸ್ನೇಹಿತರ ಅಸಮಾಧಾನಕ್ಕೆ ಆಗಲೇ ಕಾರಣವಾಗಿತ್ತು. ಅವರ ಆ ಹೇಳಿಕೆಗಳನ್ನು, ವಿಭಜಕ ನಾಯಕನಾಗಿ ಅಲ್ಲ, ಎಲ್ಲರ ನಾಯಕನಾಗಿ ಕಾಣುವ ಹತಾಶೆ ಎಂದು ವ್ಯಾಖ್ಯಾನಿಸಲಾಗಿತ್ತು.
ಹಿರಿಯ ಪತ್ರಕರ್ತ ಕುಲದೀಪ್ ಕುಮಾರ್ ಪ್ರಕಾರ, ಅಡ್ವಾಣಿ ಅವರು ಜಿನ್ನಾ ಅವರನ್ನು ಜಾತ್ಯತೀತ ನಾಯಕ ಎಂದಿದ್ದರಲ್ಲಿ ಅಚ್ಚರಿಯೇನಿರಲಿಲ್ಲ. ಜಿನ್ನಾ ಮತ್ತು ಅಡ್ವಾಣಿ ಪರಸ್ಪರ ಹತ್ತಿರವಾಗಿದ್ದರು. ಜಿನ್ನಾ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಧಾರ್ಮಿಕ ಮಾರ್ಗಗಳಲ್ಲಿ ಪ್ರಸ್ತಾಪಿಸಿದ್ದರು. ಅವರು ಮುಸ್ಲಿಮ್ ರಾಷ್ಟ್ರವನ್ನು ಬಯಸಿದ್ದರು. ಅಡ್ವಾಣಿ ಮತ್ತು ಸಂಘ ಪರಿವಾರದವರು ಹಿಂದೂ ರಾಷ್ಟ್ರವನ್ನು ಬಯಸಿದ್ದರು. ಇಬ್ಬರೂ ಒಂದೇ ರೀತಿಯ ನಂಬಿಕೆಗಳಿಂದ ಸ್ಫೂರ್ತಿ ಪಡೆದವರಾಗಿದ್ದರು ಮತ್ತು ಧಾರ್ಮಿಕ ಮಾರ್ಗಗಳಲ್ಲಿ ಮಾತ್ರವೇ ದೇಶಗಳನ್ನು ರೂಪಿಸಲು ಮುಂದಾಗಿದ್ದರು.
ಅದೇನೇ ಇದ್ದರೂ, ಅಡ್ವಾಣಿಯವರೊಂದಿಗೆ ನಿಕಟವಾಗಿ ಒಡನಾಟದಲ್ಲಿದ್ದ ಪತ್ರಕರ್ತರು ಅಡ್ವಾಣಿಯವರನ್ನು ಅತ್ಯಂತ ಸಭ್ಯ ಮತ್ತು ಆತ್ಮೀಯ ವ್ಯಕ್ತಿ ಎಂದು ಒಪ್ಪುತ್ತಾರೆ. ಅವರು ಪ್ರಶ್ನೆಗಳನ್ನು ಎಂದಿಗೂ ತಪ್ಪಿಸಿಕೊಂಡಿರಲಿಲ್ಲ ಎಂಬುದನ್ನೂ ಉಲ್ಲೇಖಿಸುತ್ತಾರೆ. ಅಡ್ವಾಣಿ ತಮ್ಮ ಟೀಕಾಕಾರರಿಗೂ ಉತ್ತರಿಸಬಲ್ಲರು. ಇದು ಈಗ ಬಿಜೆಪಿಯಲ್ಲಿರುವ ನಾಯಕರಿಗಿಂತ ಭಿನ್ನ ಎಂದು ವ್ಯಾಸ್ ಹೇಳುತ್ತಾರೆ. ಬಿಜೆಪಿಯಲ್ಲಿ ಅಡ್ವಾಣಿಯವರಷ್ಟು ಸ್ಪಷ್ಟವಾಗಿ ಬಿಜೆಪಿಯ ಸೈದ್ಧಾಂತಿಕ ಮಾರ್ಗವನ್ನು ಯಾರೂ ಹೇಳಿಲ್ಲ. ಅವರು ತಮ್ಮ ಭಾಷಣದಲ್ಲಿ ಎಂದಿಗೂ ಕಹಿಯನ್ನು ವ್ಯಕ್ತಪಡಿಸಿದ್ದಿಲ್ಲ. ಪತ್ರಕರ್ತರೊಂದಿಗೆ ಆರೋಗ್ಯಕರ, ವೃತ್ತಿಪರ ಸಂಬಂಧವನ್ನು ಉಳಿಸಿಕೊಂಡರು. ಕಠಿಣ ಪ್ರಶ್ನೆಗಳಿಗೆ ಉತ್ತರಿಸಲು ಅವರು ಎಂದಿಗೂ ನಿರಾಕರಿಸಲಿಲ್ಲ ಎಂದು ಕುಮಾರ್ ಹೇಳುತ್ತಾರೆ. ಆದಾಗ್ಯೂ, ಅವರು ನೆನಪಾಗುವುದು ತಮ್ಮ ಧ್ರುವೀಕರಣ ರಥಯಾತ್ರೆಯ ಮೂಲಕ ಎಂದೂ ಕುಮಾರ್ ಹೇಳುತ್ತಾರೆ. ಇಂದು ಭಾರತದಲ್ಲಿ ಕಾಣುವ ವಿಭಜನೆಗಳನ್ನು ಅತ್ಯಂತ ಸಾಮಾನ್ಯ ವಿದ್ಯಮಾನ ಎನ್ನಿಸುವಂತೆ ಮಾಡಿಬಿಟ್ಟವರು ಅಡ್ವಾಣಿ ಎಂದು ಕುಮಾರ್ ಹೇಳುತ್ತಾರೆ.
ದೇಶ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಸಮಯದಲ್ಲಿ ಅಡ್ವಾಣಿಗೆ ಭಾರತ ರತ್ನ ಬಂದಿದೆ. ಇದೆಲ್ಲದರ ಹಿಂದೆ ಮೋದಿ ಮಿಂಚುತ್ತಿದ್ದಾರೆ. ತಾವೇ ನಿರ್ದಯವಾಗಿ ಬದಿಗೊತ್ತಿದ ತನ್ನ ಗುರುವಿಗೆ ಅತ್ಯುನ್ನತ ಗೌರವ ನೀಡುವ ಮೂಲಕ ಮೋದಿ ಮತ್ತೊಮ್ಮೆ ಗಮನ ಸೆಳೆದಿದ್ದಾರೆ ಮತ್ತು ತನ್ನ ಏಕವ್ಯಕ್ತಿ ಪ್ರದರ್ಶನವಾಗಬೇಕಿದ್ದ ರಾಮಮಂದಿರ ಶಂಕುಸ್ಥಾಪನೆ ಸಮಾರಂಭದಲ್ಲಿ ಅಡ್ವಾಣಿ ಗೈರುಹಾಜರಿಯಿಂದ ಬೇಸರಗೊಂಡಿದ್ದ ಹಿಂದುತ್ವವಾದಿ ಪಾಳಯದವರನ್ನು ಕೂಡ ಇದೇ ವೇಳೆ ಮೋದಿ ಒಮ್ಮೆಲೇ ಸಮಾಧಾನಪಡಿಸಿದ್ದಾರೆ. ಅಡ್ವಾಣಿಯವರನ್ನು ಮತ್ತೆ ಗುರುತಿಸಿದ ಹೆಗ್ಗಳಿಕೆಗೂ ಇದರೊಂದಿಗೆ ಅವರು ಪಾತ್ರರಾಗುತ್ತಿದ್ದಾರೆ.
ಪ್ರಧಾನಿ ಈಗ ತಮ್ಮ ಎಲ್ಲಾ ಕಾರ್ಡ್‌ಗಳನ್ನು ಮುಂದಿಟ್ಟಿದ್ದಾರೆ. ಅಡ್ವಾಣಿ ಮತ್ತು ಸಮಾಜವಾದಿ ಐಕಾನ್ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಘೋಷಿಸುವುದರೊಂದಿಗೆ, ಅವರು ರಾಮ ಜನ್ಮಭೂಮಿ ಚಾಲಿತ ಹಿಂದುತ್ವ ಮತ್ತು ಒಬಿಸಿ ರಾಜಕೀಯ ಎರಡನ್ನೂ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಅಸ್ತ್ರವಾಗಿಸಲು ಅಖಾಡ ಸಜ್ಜಾಗಿಸಿದ್ದಾರೆ.
ಆದರೆ, ಭಾರತ ರತ್ನ ಬಂದ ನಂತರವೂ 96 ವರ್ಷದ ಅಡ್ವಾಣಿಯವರು ಮೋದಿಯವರ ರಾಜಕೀಯ ಚದುರಂಗದಾಟದಲ್ಲಿ ಬರೀ ಒಂದು ದಾಳ ಮಾತ್ರವಾಗಿರುತ್ತಾರೆ, ಅಷ್ಟೆ.
(ಕೃಪೆ: thewire)