ಗಂಟಿಚೋರ್ ಸಮುದಾಯದ ವಿಶಿಷ್ಟ ಕುಲಪಂಚಾಯಿತಿ
ಸ್ವಾತಂತ್ರ್ಯ ಬಂದು 77 ವರ್ಷವಾದರೂ ಕೆಲವು ಚಿಕ್ಕಪುಟ್ಟ ಸಮುದಾಯಗಳ ಸಮಗ್ರ ಮಾಹಿತಿ ಅಲಭ್ಯವಾಗಿದೆ. ಹೀಗೆ ಸಮುದಾಯಗಳ ಸರಿಯಾದ ಮಾಹಿತಿಗಳೇ ಅಲಭ್ಯವಾದಾಗ ಸರಕಾರ ಅಥವಾ ಪ್ರಭುತ್ವಗಳು ಕೈಗೊಳ್ಳುವ ಜನಕಲ್ಯಾಣದ ಯೋಜನೆಗಳು ದಿಕ್ಕು ತಪ್ಪುವ ಸಾಧ್ಯತೆ ಇರುತ್ತದೆ. ಇಂದು ಬದಲಾದ ಕಾಲಘಟ್ಟದ ಸೆಳೆತಕ್ಕೆ ಸಿಕ್ಕಿ ಅಲ್ಪಸಂಖ್ಯಾತ ಸಮುದಾಯಗಳು ತಬ್ಬಲಿತನವನ್ನು ಅನುಭವಿಸುತ್ತಾ ಅನಾಥ ಪ್ರಜ್ಞೆಯಲ್ಲಿ ಬದುಕುತ್ತಿವೆ. ಇಂತಹ ಸಂದರ್ಭದಲ್ಲಿ ಸಮುದಾಯಗಳು ಪ್ರಜಾಪ್ರಭುತ್ವದ ಬಗೆಗೆ ಭರವಸೆ ಇಲ್ಲದೆ ತಮ್ಮ ಪಾಡಿನ ಬದುಕೇ ನಿಜವೇನೋ ಎನ್ನುವ ಸ್ಥಿತಿಗೂ ಬಂದಿವೆ. ಹಾಗಾಗಿ ಸಮುದಾಯಗಳ ಅಧ್ಯಯನ ಪರೋಕ್ಷವಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗೆ ಜನರಲ್ಲಿ ಹೊಸ ಭರವಸೆ ಮೂಡಿಸುವ ಭಾಗವೂ ಆಗಿದೆ.
ಈ ಹಿನ್ನೆಲೆಯಲ್ಲಿ ಇಂತಹ ತಬ್ಬಲಿ ಸಮುದಾಯಗಳ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರಲ್ಲಿ ಹೊಸ ಚೈತನ್ಯವನ್ನು ತುಂಬುವಂತೆ ಸಮುದಾಯ ಅಧ್ಯಯನಗಳು ನಡೆಯಬೇಕಾಗಿದೆ. ಅಂತೆಯೇ ನಾವು ಸಮುದಾಯಗಳನ್ನು ಎದುರಾಗುವಾಗ ಹುಟ್ಟುವ ಪ್ರಶ್ನೆಗಳೂ ಬದಲಾಗಿದೆ. ಆಧುನಿಕ ಶ್ರೇಣೀಕರಣದ ತರತಮದ ವ್ಯವಸ್ಥೆಗಳಿಗೆ ಪೂರಕವಾಗಿ ಸಮುದಾಯಗಳಲ್ಲೂ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ಹಲಬಗೆಯ ಏರಿಳಿತಗಳು ಸಂಭವಿಸಿದೆ. ಹಾಗಾಗಿ ಇಂದು ಸಮುದಾಯಗಳನ್ನು ಅಧ್ಯಯನ ಮಾಡುವವರು ಅವನ್ನು ಏಕರೂಪಿ ಆಕೃತಿಯನ್ನಾಗಿ ನೋಡುವಂತಿಲ್ಲ. ಯಾವೊಂದು ಸಂಗತಿಯನ್ನೂ ಇಡೀ ಸಮುದಾಯಕ್ಕೆ ಅನ್ವಯಿಸಿ ದುಂಡಾಗಿ ಗ್ರಹಿಸುವಂತಿಲ್ಲ.
ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಉಚಲ್ಯಾ, ಭಾಮ್ಟಾ, ಠಕಾರಿ ಭಾಮ್ಟಾ, ಠಕಾರಿ, ಗುನ್ಹೆಗಾರ, ವಡ್ಡರ್, ಗಿರಣಿ ವಡ್ಡರ್, ಕಿಸೆ ಕತ್ರಾಸ್, ಕಳ್ಳವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಹೀಗೆ ಬಹುರೂಪದಲ್ಲಿ ಸಮಾನಾಂತರ ಹೆಸರುಗಳೊಂದಿಗೆ ಈ ಸಮುದಾಯ ನೆಲೆಸಿದೆ. ಈ ಎಲ್ಲಾ ಹೆಸರುಗಳ ಒಳಗಿರುವ ಎಳೆ ‘ತುಡುಗು’ ಅಥವಾ ‘ಕಳ್ಳತನ’, ‘ಲೂಟಿ’ಯಾಗಿದೆ. ಇದು ಸಂಪತ್ತಿನ ಅಸಮಾನ ಹಂಚಿಕೆಯ ಕೊರತೆಯ ಬಿಂದುವಿನಲ್ಲಿ ಸಮುದಾಯಗಳ ಒಳಗಿಂದ ಹುಟ್ಟಿದ ‘ಪ್ರತಿರೋಧ’ದ ಒಂದು ಮಾದರಿ. ಇಂದು ಈ ಸಮುದಾಯ ಬೇರೆ ಬೇರೆ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ.
ಬ್ರಿಟಿಷ್ ಆಡಳಿತದಿಂದಾಗಿ ಸ್ಥಳೀಯ ಸಂಸ್ಥಾನಿಕ ರಾಜರುಗಳ ಸೈನ್ಯದಿಂದ ವಿಸರ್ಜಿತಗೊಂಡ ಸೈನಿಕ ಸಮುದಾಯಗಳು ಬದುಕಲು ಹಲವು ಮಾರ್ಗಗಳನ್ನು ಅನುಸರಿಸಿದವು. ಹಾಗಾಗಿ ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ ‘ತುಡುಗು’, ‘ಕಳ್ಳತನ’, ‘ಲೂಟಿ’ಯಾಗಿ ಬದಲಾಯಿತು. ಇವರು ಉತ್ತರಭಾರತದಲ್ಲಿ ಹಲವು ಹೆಸರುಗಳುಳ್ಳ ಠಕ್ಕರಾದರೆ, ದಕ್ಷಿಣ ಭಾರತದಲ್ಲಿ ಭಾಮ್ಟಾ, ಠಕಾರಿ ಭಾಮ್ಟಾ, ಉಚಲ್ಯಾ, ಗಂಟಿಚೋರ್ ಆಗಿ ಗುರುತಿಸಿಕೊಂಡರು. ಈ ಎಲ್ಲರನ್ನೂ ದೇಶವ್ಯಾಪಿ ಬೆಸೆಯುವ ಎಳೆಯೆಂದರೆ ಇವರೆಲ್ಲಾ ‘ಶಾಕ್ತಪಂಥ’ದ ಆರಾಧಕರಾಗಿದ್ದು ‘ಶಾಕ್ತೇಯ’ ಸಮುದಾಯವಾಗಿರುವುದು.
ಭಾರತದ ಚರಿತ್ರೆಯಲ್ಲಿ 18ನೇ ಶತಮಾನ ಠಕ್ಕರ ಲೂಟಿ, ಕೊಲೆ, ಸುಲಿಗೆ ಮುಂತಾದವುಗಳ ಭಯಭೀತ ಅಧ್ಯಾಯವಾಗಿದೆ. ಆದರೆ ಗಂಟಿಚೋರ ಸಮುದಾಯಕ್ಕೂ ಠಕ್ಕರಿಗೂ ಸಂಬಂಧವಿಲ್ಲ. ತುಡುಗು ವೃತ್ತಿಯ ಸಾಮ್ಯತೆ ಇದ್ದರೂ ಇವರ ಹೆಸರಲ್ಲೇ ‘ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರು ಎಂದೂ ಕರೆಯುತ್ತಿದ್ದರು. ಉತ್ತರಭಾರತದ ಠಕ್ಕರದು ಬೃಹತ್ ಜಾಲವಾದರೆ, ಇವರದು ಸಣ್ಣಪುಟ್ಟ ಕಳ್ಳತನದಲ್ಲಿ ತೊಡಗಿಕೊಂಡ ಹೊಟ್ಟೆಪಾಡಿನ ಕಳ್ಳತನವಾಗಿತ್ತು. ಸಂತಕವಿ ಕನಕರು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವಂತೆ ಗಂಟಿಚೋರರು ಕಳ್ಳತನ ಮಾಡಿ ಹೊಟ್ಟೆತುಂಬಿಸಿಕೊಂಡವರು. ಚಾರಿತ್ರಿಕವಾಗಿ ಗಂಟಿಚೋರರು ಸೈನಿಕ ಸಮುದಾಯವಾಗಿದ್ದರು ಎನ್ನುವ ಬಗ್ಗೆ ಪುರಾವೆಗಳಿವೆ.
ಗಂಟಿಚೋರ್ ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಹೆಸರು. ಈ ಹೆಸರಿನಿಂದ ಗುರುತಿಸಲ್ಪಟ್ಟ ಸಮುದಾಯವೊಂದು (ಮುಂಬೈಕರ್ನಾಟಕ ಪ್ರದೇಶದಲ್ಲಿ) ಉತ್ತರಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿದೆ. ಅಂತೆಯೇ ಈ ಸಮುದಾಯದಲ್ಲಿನ ‘ಪಾಪನೋರು’ ಎನ್ನುವ ಕುಲದ ಹಿನ್ನೆಲೆಯ ಬೆನ್ನತ್ತಿದರೆ, ಈ ಭೌಗೋಳಿಕ ಪರಿಸರದಲ್ಲಿ ಕನಿಷ್ಠ 9-10ನೇ ಶತಮಾನದಿಂದಲೂ ಈ ಸಮುದಾಯದ ‘ಪಾಪನೋರು’ ಕುಲದವರು ನೆಲೆಸಿರಬೇಕು ಅನ್ನಿಸುತ್ತದೆ. ಇದಕ್ಕೆ ವಡ್ಡಾರಾಧನೆ, ಧರ್ಮಾಮೃತ ಕೃತಿಗಳಲ್ಲಿ ಬರುವ ಕಳ್ಳರ ಕಥೆಗಳು ಸಾಕ್ಷಿಯಂತಿವೆ. ಈ ಸಮುದಾಯದ ಸಂಶೋಧನೆಯಲ್ಲಿ ನಾನು ಸಮುದಾಯದ ಶೇ. 90ರಷ್ಟು ಮನೆಗಣತಿ ಮಾಡಿ ಖಚಿತ ಅಂಕೆಸಂಖ್ಯೆಗಳನ್ನು ದಾಖಲಿಸಿರುವೆ. ಸದ್ಯಕ್ಕೆ ಕರ್ನಾಟಕದ 7 ಜಿಲ್ಲೆಯ 19 ತಾಲೂಕಿನ 36 ನೆಲೆಗಳಲ್ಲಿ ನೆಲೆಸಿದ ಗಂಟಿಚೋರ್ಸ್ ಸಮುದಾಯದ ಒಟ್ಟು ಜನಸಂಖ್ಯೆ 5,826 (ಗಂ-2,892, ಹೆಂ-2,934)ರಷ್ಟಿದೆ. ಗಂಟಿಚೋರರ ಗಂಡಸರಿಗಿಂತ 42 ಮಹಿಳೆಯರು ಹೆಚ್ಚಿರುವುದು ವಿಶೇಷವಾಗಿದೆ.
ಕುಲಪಂಚಾಯಿತಿ ವ್ಯವಸ್ಥೆ
ಜನರ ಚರಿತ್ರೆಯಲ್ಲಿ ಪ್ರತೀ ಬುಡಕಟ್ಟುಗಳೂ ಅವರದ್ದೇ ಪ್ರತ್ಯೇಕ ಕುಲ ಪಂಚಾಯಿತಿ ವ್ಯವಸ್ಥೆ ಹೊಂದಿದ್ದವು. ಹಾಗೆಯೇ ಗಂಟಿಚೋರ್ ಸಮುದಾಯದಲ್ಲಿಯೂ ಒಂದು ಆಂತರಿಕ ಕುಲಪಂಚಾಯಿತಿ ವ್ಯವಸ್ಥೆ ಇತ್ತು. ಅದು ಬಹಳ ವಿಶಿಷ್ಟವಾಗಿತ್ತು. ಇದೀಗ ಆಧುನಿಕ ಸರಕಾರದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಯಿಂದಾಗಿ ಅಳಿವಿನಂಚಿನಲ್ಲಿದೆ. ಇದು ಆಧುನಿಕ ಸಂಘಟನೆಗಳ ರೂಪದಲ್ಲಿಯೂ ಹೊಸ ಆಯಾಮವನ್ನು ಪಡೆದುಕೊಂಡಂತಿದೆ. ಹಿಂದೆ ಇದ್ದ ಕುಲಪಂಚಾಯಿತಿ ವ್ಯವಸ್ಥೆಯ ಕೆಲವು ಮುಖ್ಯ ಸಂಗತಿಗಳು ಈ ಸಮುದಾಯದ ಕೆಲವು ಅನನ್ಯತೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ಸಮುದಾಯದಲ್ಲಿ ಹಿರಿಯರಾದ ಮತ್ತು ಸಮುದಾಯದ ಗೌರವಕ್ಕೆ ಪಾತ್ರರಾದ ಐದು ಜನರನ್ನು ಪಂಚರು ಎಂದು ನೇಮಿಸುತ್ತಿದ್ದರು. ಈ ಪಂಚರು ಇಡೀ ಕುಲಪಂಚಾಯಿತಿ ವ್ಯವಸ್ಥೆಯ ಕೇಂದ್ರ ಬಿಂದುವಾಗಿದ್ದರು.
ಸಮುದಾಯದ ಯಾವುದೇ ಇಕ್ಕಟ್ಟುಗಳು, ಸಂದಿಗ್ಧತೆಗಳು, ಸಂಕಷ್ಟಗಳು ತಲೆದೋರಿದಾಗ ಈ ಪಂಚರ ಮುಂದೆ ವ್ಯಾಜ್ಯಗಳ ರೀತಿಯಲ್ಲಿ ಹಾಜರಾಗುತ್ತಿದ್ದವು. ಈ ಪಂಚರು ಕುಲಪಂಚಾಯಿತಿ ವ್ಯವಸ್ಥೆಯ ರೀತಿ ನಡೆಗಳನ್ನು ಆಧರಿಸಿ ಒಂದು ತೀರ್ಮಾನವನ್ನು ಮಾಡುತ್ತಿದ್ದರು. ಈ ತೀರ್ಮಾನಕ್ಕೆ ಇಡೀ ಸಮುದಾಯ ತಲೆ ಬಾಗುತ್ತಿತ್ತು. ವಿವಾಹ ಸಂಬಂಧಗಳ ಮಾತುಕತೆ ಮತ್ತು ಆಚರಣೆ ಪಂಚರ ಸಮ್ಮುಖದಲ್ಲಿಯೇ ನೆರವೇರುತ್ತಿದ್ದವು. ಜಾತಿ ಪಂಚಾಯಿತಿಗೆ ಅಧ್ಯಕ್ಷ, ಉಪಾಧ್ಯಕ್ಷ, ಗೌಡ ಮೂರು ಹಂತದ ಅಧಿಕಾರ ಹಂಚಿಕೆ ಇರುತ್ತಿತ್ತು. ಇದರಲ್ಲಿ ಗೌಡ ವ್ಯಾಜ್ಯಕ್ಕೆ ಸಂಬಂಧಿಸಿದ ಮಾತುಕತೆ ಮಾಡಿ ಪಂಚಾಯಿತಿಗೆ ತರುತ್ತಿದ್ದ.
ವ್ಯಾಜ್ಯ ತಂದವರು ಪಂಚಾಯಿತಿಗೆ ಚಾಜಾ ಕಟ್ಟಬೇಕಿತ್ತು. ತಮ್ಮ ಸಮುದಾಯದ ಹಿರಿಯರೊಬ್ಬರು ಇವರಿಗೆ ಜಾಮೀನು ಕೊಡಬೇಕಿತ್ತು. ವ್ಯಾಜ್ಯದವರು ಪಂಚಾಯಿತಿ ತೀರ್ಮಾನವನ್ನು ಗೌರವಿಸದಿದ್ದರೆ ಜಾಮೀನುದಾರ ಪಂಚಾಯಿತಿಗೆ ದಂಡ ಕಟ್ಟಬೇಕಿತ್ತು. ಇಲ್ಲವೇ ಬೆನ್ನಮೇಲೆ ಕಲ್ಲು ಹೊತ್ತು ಬಗ್ಗಬೇಕಿತ್ತು. ಕೆಲವೊಮ್ಮೆ ಹಲವು ಜನ ತಪ್ಪಿತಸ್ಥರ ಆರೋಪದಲ್ಲಿ ಇರುವ ಒಬ್ಬ ತಪ್ಪಿತಸ್ಥನನ್ನು ಗುರುತಿಸಲು ಪಂಚಾಯಿತಿ ವ್ಯವಸ್ಥೆಯಲ್ಲಿ ಒಂದು ಸಾಂಪ್ರದಾಯಿಕ ಪದ್ಧತಿ ಇತ್ತು. ಉದಾಹರಣೆಗೆ, ಅಂಗೈಲಿ ಬೂದಿಗೆ ಉಗುಳು ಬೆರೆಸಿ ಉಂಡೆ ಮಾಡಬೇಕಿತ್ತು. ತಪ್ಪಿತಸ್ಥ ಭಯಕ್ಕೆ ಬಾಯಿ ಒಣಗಿ ಉಗುಳು ಬರದೆ ಬೂದಿ ಉಂಡೆ ಮಾಡಲಾಗದೆ ಸಿಕ್ಕಿಹಾಕಿಕೊಳ್ಳುವ ಸಂಭವವಿತ್ತು.
ಹಲವು ಅಪರಾಧವನ್ನು ಹನುಮಂತ ದೇವರ ಸಮ್ಮುಖದಲ್ಲಿ ಪತ್ತೆ ಹಚ್ಚುವ ಕೆಲಸ ಆಗುತ್ತಿತ್ತು. ನಾನು ತಪ್ಪು ಮಾಡಿಲ್ಲವೆಂದು ಹನುಮಂತ ದೇವಸ್ಥಾನದಲ್ಲಿ ದೀಪ ಹಚ್ಚುವುದು, ಪಾದ ಮುಟ್ಟುವುದು, ಆಣೆ ಮಾಡುವುದು ನಡೆಯುತ್ತಿತ್ತು. ಅಂತೆಯೇ ತಪ್ಪಿತಸ್ಥರ ತಂದೆ, ತಾಯಿ ಅಥವಾ ಸಂಬಂಧಿಕರನ್ನು ಮಲಗಿಸಿ ತಪ್ಪು ಮಾಡಿಲ್ಲವೆಂದು ಅವರನ್ನು ದಾಟಬೇಕಿತ್ತು. ತಪ್ಪು ಮಾಡಿಯೂ ಹೀಗೆ ದಾಟಿದರೆ ದಾಟಿಸಿಕೊಂಡವರ ಜೀವಕ್ಕೆ ಕುತ್ತು ಎಂಬ ನಂಬಿಕೆ ಇತ್ತು.
ಕುಲಪಂಚಾಯಿತಿ ತಪ್ಪಿತಸ್ಥರನ್ನು ಗುರುತಿಸಿ ಶಿಕ್ಷೆಯನ್ನೂ ಸಹ ಕೊಡುವ ಅಧಿಕಾರವನ್ನು ಹೊಂದಿತ್ತು. ತಪ್ಪಿನ ಗಂಭೀರತೆಯನ್ನು ಆಧರಿಸಿ ಹಲವು ಬಗೆಯ ಶಿಕ್ಷೆಗಳನ್ನು ಕೊಡುತ್ತಿದ್ದರು. ಹಣರೂಪದ ದಂಡವಿತ್ತು, ಕೆಲ ತಿಂಗಳು, ವರ್ಷ ಕುಲದಿಂದ ಹೊರ ಹಾಕುವ ಶಿಕ್ಷೆ ಇತ್ತು. ಅತಿ ದೊಡ್ಡ ಶಿಕ್ಷೆಯೆಂದರೆ ಶಾಶ್ವತವಾಗಿ ಕುಲದಿಂದ ಹೊರಹಾಕುವುದಾಗಿತ್ತು. ಹೀಗೆ ಕುಲದಿಂದ ಹೊರ ಹಾಕಿದವರನ್ನು ಪಂಚಾಯಿತಿಯ ಗಮನಕ್ಕೆ ಬರದಂತೆ ಅವರ ಜತೆ ಮಾತುಕತೆ ಕೊಡುಕೊಳೆ ಸಂಬಂಧ ಮಾಡಿದವರಿಗೂ ಪಂಚಾಯಿತಿ ಶಿಕ್ಷೆ ವಿಧಿಸುತ್ತಿತ್ತು.
ಹಲವು ಕಾರಣಗಳಿಗೆ ಜಾತಿ ಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಗುಂಪಾಗಿ ಕಳವು ಮಾಡಿ, ಹೀಗೆ ಗುಂಪು ಕಳವಿನ ಸಂಪತ್ತನ್ನು ಹಂಚಿಕೊಳ್ಳುವಲ್ಲಿ ಮೋಸ ಮಾಡಿದರೆ ಅಥವಾ ತಾನು ಇತರರಿಗೆ ತಿಳಿಯದಂತೆ ಬಚ್ಚಿಟ್ಟು ವಂಚನೆ ಮಾಡಿದರೆ ಅಂತಹವರನ್ನು ಕುಲಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಇಂಥವನನ್ನು ಮತ್ಯಾರೂ ಕಳವು ಮಾಡಲು ಸೇರಿಸಿಕೊಳ್ಳುವಂತಿಲ್ಲ. ಹಾಗೆ ಸೇರಿಸಿಕೊಂಡರೆ ದೈವಕ್ಕೆ ದಂಡ ಕಟ್ಟಬೇಕಿತ್ತು. ಹಾಗಾಗಿ ಬಹಿಷ್ಕಾರಕ್ಕೆ ಒಳಗಾದವರ ಸುದ್ದಿಯನ್ನು ಎಲ್ಲಾ ಭಾಗದ ಗಂಟಿಚೋರರಿಗೂ ತಿಳಿಸಿ ಈತನನ್ನು ಯಾರೂ ಕುಲದಲ್ಲಿ ಹೊಕ್ಕುಬಳಕೆ ಮಾಡಬಾರದು ಎಂದು ಹೇಳಲಾಗುತ್ತಿತ್ತು.
ಮದುವೆ ಸಂದರ್ಭದಲ್ಲಿ ಬ್ಯಾಟಿ ಕೊಡದಿದ್ದರೆ ಕುಲದಿಂದ ಬಹಿಷ್ಕಾರ ಹಾಕುವ ಪದ್ಧತಿಯಿತ್ತು. ಮದುವೆ ದೈವಕ್ಕೆ ಬರದಿದ್ದರೆ ಆತನನ್ನು ಬಹಿಷ್ಕಾರ ಹಾಕುವ ಪದ್ಧತಿ ಇತ್ತು. ಇದರಲ್ಲಿ ಚಾಜಾ ಏರುಕಟ್ಟುವ ಪದ್ಧತಿ ಚಾಲ್ತಿಯಲ್ಲಿತ್ತು. ಅಂದರೆ ಒಂದಷ್ಟು ಮಾಂಸದ ತುಂಡನ್ನು ಅರಿವೆಯಲ್ಲಿ ಗಂಟುಕಟ್ಟಿ ಅದನ್ನು ಮೇಲೆ ಕಟ್ಟಿದರೆ ಏರುಗಟ್ಟೋದು ಎಂದು ಕರೆಯುತ್ತಿದ್ದರು. ಈ ಪದ್ಧತಿ ಮೂಲಕ ಕುಲದಿಂದ ಬಹಿಷ್ಕಾರ ಹಾಕುವುದಿತ್ತು. ಹೀಗೆ ಮದುವೆಯಲ್ಲಿ ಮಾಡುತ್ತಿದ್ದ ಮಾಂಸಾಹಾರ ಇಂತಹ ಸಮಸ್ಯೆಗಳಿಗೆ ಮುಳುವಾಯಿತು. ಅಂತೆಯೇ ಮದುವೆ ಜನಕ್ಕೆಲ್ಲಾ ಮಾಂಸಾಹಾರ ಹಾಕುವುದು ಕಷ್ಟದ ಸಂಗತಿಯೂ ಆಗಿತ್ತು. ಮಾಂಸದ ಬೆಲೆ ಏರುತ್ತಾ ಬಂದಂತೆ, ಗಂಟಿಚೋರರ ಮದುವೆಗಳಲ್ಲಿ ಮಾಂಸಾಹಾರ ನಿಂತಿತು.
ಜಾತಿ ಒಳಗೆ ತಗೋಳ್ಳೋದು
ನಾನಾ ಕಾರಣಗಳಿಗೆ ಬಹಿಷ್ಕಾರಕ್ಕೆ ಒಳಗಾದವರನ್ನು ಮತ್ತೆ ಕುಲದ ಒಳಗೆ ಹಾಕಿಕೊಳ್ಳುವ ಇಂತಿಷ್ಟು ದಂಡಕಟ್ಟುವ ಪದ್ಧತಿ ಇತ್ತು. ಇದು ಆಯಾ ಬಹಿಷ್ಕಾರದ ಕಾರಣಗಳಿಗೆ ತಕ್ಕಂತೆ ದಂಡದ ಪ್ರಮಾಣ ನಿರ್ಧಾರವಾಗುತ್ತಿತ್ತು. ದಂಡವು ವರದ ಲೆಕ್ಕದಲ್ಲಿರುತ್ತಿತ್ತು. ಒಂದು ವರಕ್ಕೆGantichor community 4 ರೂಪಾಯಿ ಕೊಡಬೇಕಿತ್ತು. ಹತ್ತು ವರಕ್ಕೆ 40 ರೂ.ನಷ್ಟು ದೈವಕ್ಕೆ ಕಟ್ಟಬೇಕಿತ್ತು. ದಂಡ ಕಟ್ಟಿದ ಮೇಲೆ ಸಾಮಾನ್ಯವಾಗಿ ಎಲ್ಲರೂ ದೈವಕ್ಕೆ ಬ್ಯಾಟಿ ಕೊಡಬೇಕಿತ್ತು. ಆಗ ದೈವಕ್ಕೆ ಊಟ ಕೊಟ್ಟರೆಂದು ಅಂತಹವರನ್ನು ಕುಲದಲ್ಲಿ ಹೊಕ್ಕುಬಳಕೆಗೆ ಮುಕ್ತರನ್ನಾಗಿಸುತ್ತಿದ್ದರು.
ಗಂಟಿಚೋರ್ ಸಮುದಾಯದ ಕುಲಪಂಚಾಯಿತಿ ವ್ಯವಸ್ಥೆಯನ್ನು ಸರಿಯಾಗಿ ಗ್ರಹಿಸಿದ ಬ್ರಿಟಿಷರು ಸೆಟ್ಲ್ ಮೆಂಟ್‌ಗಳಲ್ಲಿ ಗಂಟಿಚೋರ್ ಸಮುದಾಯದ ಪಂಚಾಯಿತಿ ನಿರ್ದೇಶಕರ ಮಂಡಳಿಯನ್ನು ಸ್ಥಾಪಿಸಿದ್ದರು. ಸಮುದಾಯದ ಹಿರಿಯರನ್ನೇ ಪಂಚರನ್ನಾಗಿ ನೇಮಿಸಲಾಗುತ್ತಿತ್ತು. ಬಹಳ ಮುಖ್ಯವಾಗಿ ಗಂಟಿಚೋರ್ ಸಮುದಾಯ ಕುಲಪಂಚಾಯಿತಿಗೆ ಹೆಚ್ಚು ಗೌರವ ಕೊಡುತ್ತಿದ್ದುದನ್ನು ಬ್ರಿಟಿಷರು ಅರಿತಿದ್ದರು. ಹಾಗಾಗಿ ಈ ಪಂಚಾಯಿತಿ ನಿರ್ದೇಶಕರ ಮಂಡಳಿಯ ಮೂಲಕ ಪರೋಕ್ಷವಾಗಿ ಈ ಸಮುದಾಯವನ್ನು ನಿಯಂತ್ರಿಸುತ್ತಿದ್ದ ಜಾಣ್ಮೆ ಇದರಲ್ಲಿತ್ತು. ಹುಬ್ಬಳ್ಳಿ ಸೆಟ್ಲ್‌ಮೆಂಟ್ ಅಧಿಕಾರಿ ಒ.ಎಚ್.ಬಿ. ಸ್ಟಾರ್ಟೆ ಅವರ ವರದಿಗಳಲ್ಲಿ ಈ ಮಂಡಳಿಗಳ ಕಾರ್ಯವೈಖರಿಯ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತವೆ. ಇದೀಗ ಗಂಟಿಚೋರ್ ಸಮುದಾಯದಲ್ಲಿ ಕುಲಪಂಚಾಯಿತಿ ವ್ಯವಸ್ಥೆ ಸಡಿಲಗೊಂಡಿದೆ. ಸಾಂವಿಧಾನಿಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲರ ಹಾಗೆ ಹೊಸ ನಂಬಿಕೆ ಇರಿಸಿ ಮುನ್ನಡೆಯುತ್ತಿದ್ದಾರೆ.