ಅಸಲಿ ಬಂಡಾಯಗಾರ ‘ಜನನಾಯಕ’ನಾದ ಗಾಥೆ
ಎಂ.ಡಿ. ನಂಜುಂಡಸ್ವಾಮಿ ಹದಿಹರೆಯದಲ್ಲಿದ್ದಾಗ ಅವರ ಅಕ್ಕ ಲೀಲಾ ಪತಿಯನ್ನು ಕಳೆದುಕೊಂಡರು. ಮನೆಯವರು ಲೀಲಾ ಮೇಲೆ ವೈಧವ್ಯವನ್ನು ಹೇರಲು ಹೊರಟಾಗ ನಂಜುಂಡಸ್ವಾಮಿ ಬಂಡಾಯವೆದ್ದು, ‘ನಮ್ಮಕ್ಕನ್ನ ಮುಟ್ಟೀರಿ ಜೋಕೆ’ ಎಂದು ಕೆರಳಿ ನಿಂತರು.
ಬಾಲ್ಯದಲ್ಲೇ ವೈಚಾರಿಕ ನೋಟ ಬೆಳೆಸಿಕೊಂಡಿದ್ದ ನಂಜುಂಡಸ್ವಾಮಿಗೆ ವಿಜ್ಞಾನ ಪ್ರಿಯವಾದ ವಿಷಯ
ವಾಗಿತ್ತು. ಕನ್ನಡ, ಇಂಗ್ಲಿಷ್ ಎರಡೂ ಭಾಷೆಗಳನ್ನು ಚೆನ್ನಾಗಿ ಕಲಿತ ಅವರು ಬಿ.ಎಸ್ಸಿ, ಓದಿ, ನಂತರ ಲಾ ಓದಿದರು, ಜರ್ಮನಿಯಲ್ಲಿ ಪಿಎಚ್ಡಿ ಮಾಡಲು ಹೋಗಿ ಅರ್ಧದಲ್ಲೇ ಬಿಟ್ಟು ಬಂದರು. ಬೆಂಗಳೂರಿನ ಬಿಎಂಎಸ್ ಈವನಿಂಗ್ ಲಾ ಕಾಲೇಜಿನಲ್ಲಿ ಕಾನೂನು ಬೋಧಿಸುವ ಮೇಷ್ಟ್ರರಾದರು. ಅವರು ‘ಕಾನ್ಸ್ಟಿಟ್ಯೂಶನ್ ಲಾ’ ಬೋಧಿಸಿದ ರೀತಿ ರವಿವರ್ಮಕುಮಾರ್ ಥರದ ವಿಚಾರವಂತ ತರುಣ ಲಾಯರ್ಗಳ ಪಡೆಯನ್ನೇ ಸೃಷ್ಟಿಸಿತು. ಒಮ್ಮೊಮ್ಮೆ ಎಂಡಿಎನ್ ರಾತ್ರಿ ಪಾಠ ಮುಗಿಸಿದ ನಂತರ ಅಲ್ಲೇ ಹತ್ತಿರವಿದ್ದ ಕಿರಂ ನಾಗರಾಜರ ಮನೆಯಲ್ಲಿ ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ಚರ್ಚೆಯೂ ನಡೆಯುತ್ತಿತ್ತು. ಆಗಿನ್ನೂ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಾಪಕರಾಗಿ ಸೇರಿದ್ದ ಕಿರಂ ಮಾತಿನ ನಡುವೆ ಅವರನ್ನು ಕೇಳಿದರು: ‘ಸಾರ್, ಸಾಹಿತ್ಯ ಪಾಠ ಮಾಡುವಾಗ ರಾಜಕೀಯ, ಸಮಾಜವಾದ ಇವೆಲ್ಲವನ್ನೂ ಬೆರೆಸಿ ಹೇಳುವುದು ಹೇಗೆ?’
‘ಅವೆಲ್ಲವನ್ನೂ ನೇರವಾಗಿ ಹೇಳಬಾರದು’ ಎಂದ ಎಂಡಿಎನ್, ಪಠ್ಯದ ಸಂದರ್ಭಕ್ಕೆ ತಕ್ಕಂತೆ ಸಮಾಜವಾದವನ್ನು ಬೆರೆಸಿ ಪಾಠ ಮಾಡುವ ಕಲೆಯನ್ನು ಕಿರಂಗೆ ಹೇಳಿಕೊಟ್ಟರು. ಅಗ್ರಹಾರ ಕೃಷ್ಣಮೂರ್ತಿ, ಕರಿಗೌಡ ಬೀಚನಹಳ್ಳಿ ಮುಂತಾದ ಜಾಣ ತರುಣರು ಕೂತಿರುತ್ತಿದ್ದ ಎಂಎ ತರಗತಿಗಳಲ್ಲಿ ಕುಮಾರವ್ಯಾಸನ ಕೃಷ್ಣನನ್ನು ವ್ಯಾಖ್ಯಾನಿಸಲು ಕಿರಂ ಲೋಹಿಯಾರ ‘ರಾಮ, ಕೃಷ್ಣ ಶಿವ’ ಲೇಖನವನ್ನು ಓದಿಕೊಂಡು ಹೋದರು; ಲೋಹಿಯಾ ಚಿಂತನೆಯನ್ನು ಬಿತ್ತಿದರು. ಕನ್ನಡ ಅಧ್ಯಯನ ಕೇಂದ್ರದ ತರುಣರು ಸಮಾಜವಾದದತ್ತ ತಿರುಗಿ, ಉದಾರವಾದಿ ಜಾತ್ಯತೀತ ಲೇಖಕರಾದ ಹಿನ್ನೆಲೆಯಲ್ಲಿ ಇವೆಲ್ಲವೂ ಇವೆ.
ಆ ಸರಿಸುಮಾರಿನಲ್ಲಿ ಬೆಂಗಳೂರಿನ ಕೃಷಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ಶ್ರೀಧರ ಕಲಿವೀರ, ಕೆ. ಪುಟ್ಟಸ್ವಾಮಿ ಎಂಡಿಎನ್ ಅವರನ್ನು ಕಾಲೇಜಿನ ಸಮಾರಂಭಕ್ಕೆ ಕರೆದರು. ಅಲ್ಲಿ ಎಂಡಿಎನ್ ಮಾತಿನ ಪ್ರಭಾವದಿಂದ ಕೂಡ ವಿಚಾರವಂತ ಹುಡುಗರು ಸೃಷ್ಟಿಯಾದರು. ಈ ನಡುವೆ ಲಕ್ಮೀಪತಿಬಾಬು, ರಾ.ನ. ವೆಂಕಟಸ್ವಾಮಿ ಥರದ ಮೆಡಿಕಲ್ ವಿದ್ಯಾರ್ಥಿಗಳು ಎಂಡಿಎನ್ ಸೂಚಿಸುವ ವೈಚಾರಿಕ ಸಭೆಗಳನ್ನು ಏರ್ಪಡಿಸುತ್ತಿದ್ದರು. ಇಂಥ ಐದಾರು ತರುಣರು ವೈಚಾರಿಕ ಪ್ರತಿಭಟನೆಗಳನ್ನು ಮಾಡಿ ರಾಜ್ಯದಾದ್ಯಂತ ಸುದ್ದಿಯಾಗುತ್ತಿದ್ದರು.
ಒಂದು ದಿನ ಎಂಡಿಎನ್ ಸೂಚನೆಯಂತೆ ಅಗ್ರಹಾರ ಕೃಷ್ಣಮೂರ್ತಿ, ಕವಿ ಸಿದ್ಧಲಿಂಗಯ್ಯ, ಕರಿಗೌಡ ಬೀಚನಹಳ್ಳಿ, ಕಲ್ಲೂರು ಮೇಘರಾಜ್, ಗಂಗಣ್ಣ, ಉಮಾಕಾಂತ ಗುಬ್ಬಿಗ, ಲಕ್ಮೀಪತಿಬಾಬು ಬೆಂಗಳೂರಿನ ವಿಧಾನಸಭೆಯ ಗ್ಯಾಲರಿಗೆ ಹೋದರು; ರಾಜ್ಯದ ಶಾಸಕರು ಬರಗಾಲ ಪರಿಸ್ಥಿಯನ್ನು ನಿರ್ಲಕ್ಷಿಸುತ್ತಿರುವುದನ್ನು ಟೀಕಿಸಿ ಎಂಡಿಎನ್ ಬರೆದು ಕೊಟ್ಟ ಕರಪತ್ರಗಳನ್ನು ತೂರಿ ಅರೆಸ್ಟಾದರು. ರಾಜ್ಯದ ದಿನಪತ್ರಿಕೆಗಳು ಇಂಥ ಬಂಡಾಯಗಳನ್ನು ನಾಡಿನ ಎಲ್ಲೆಡೆ ತಲುಪಿಸಿ ಕರ್ನಾಟಕದುದ್ದಕ್ಕೂ ವೈಚಾರಿಕತೆ ಹಾಗೂ ರಾಜಕೀಯ ಎಚ್ಚರ ಮೂಡಿಸುತ್ತಿದ್ದವು.
ಸಾಹಿತ್ಯ, ಸಂಸ್ಕೃತಿ, ರಾಜಕಾರಣಗಳ ವಲಯಗಳಲ್ಲಿ ವಿಚಾರವಂತ ತರುಣರನ್ನು ತಯಾರು ಮಾಡುತ್ತಿದ್ದ ಎಂಡಿಎನ್ ಎಂಬತ್ತರ ದಶಕದಲ್ಲಿ ದೊಡ್ಡ ಮಟ್ಟದ ರೈತ ಸಂಘಟನೆಗೆ ಇಳಿದರು. ‘ಕರ್ನಾಟಕ ರಾಜ್ಯ ರೈತ ಸಂಘ’ ಸ್ಥಾಪಿಸಿ ಎನ್. ಡಿ. ಸುಂದರೇಶ್, ಎಚ್.ಎಸ್. ರುದ್ರಪ್ಪ, ಕಡಿದಾಳು ಶಾಮಣ್ಣರ ಜೊತೆಗೆ ಎಂಡಿಎನ್ ರಾಜ್ಯಾದ್ಯಂತ ರೈತರನ್ನು ಸಂಘಟಿಸಿದರು. ಬರಬರುತ್ತಾ ಕೆ.ಟಿ. ಗಂಗಾಧರ್, ಎನ್. ಜಿ. ರಾಮಚಂದ್ರ, ಶ್ರೀನಿವಾಸಕುಮಾರ್, ನಟರಾಜಪ್ಪ, ಜನಾರ್ದನ್ ಗುಂಗರಮಳೆ, ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ಬಸವರಾಜಪ್ಪ, ಕೋಡಿಹಳ್ಳಿ ಚಂದ್ರಶೇಖರ್ ಮೊದಲಾದ ನೂರಾರು ನಾಯಕರು ಸೃಷ್ಟಿಯಾದರು. ಇವರಲ್ಲನೇಕರು ತಂತಮ್ಮ ವಲಯಗಳಲ್ಲಿ ಇವತ್ತಿಗೂ ರೈತ ಚಳವಳಿಯನ್ನು ಜೀವಂತವಾಗಿಟ್ಟಿರುವ ರೀತಿ, ಎಲ್ಲ ಚಳವಳಿಗಳಂತೆ ರೈತ ಚಳುವಳಿಯೂ ಒಡೆದ ರೀತಿ? ಇವೆಲ್ಲವೂ ನಿಮಗೆ ಗೊತ್ತಿದೆ.
ಧೀಮಂತ ನಾಯಕ ಪ್ರೊಫೆಸರ್ ನಂಜುಂಡಸ್ವಾಮಿಯವರ ಹೋರಾಟ- ಮಾತು-ಬರಹಗಳು ನನ್ನಂಥ ಸಾವಿರಾರು ಲೇಖಕರನ್ನು ರೂಪಿಸಿವೆ. ನಾನು ಬಿ.ಎ. ವಿದ್ಯಾರ್ಥಿಯಾಗಿದ್ದಾಗ ತಿಪಟೂರಿನಲ್ಲಿ ನಟರಾಜ ಹೊನ್ನವಳ್ಳಿಯ ಜೊತೆ ಮೊದಲು ನೋಡಿದ ಎಂಡಿಎನ್ ನನ್ನ ಪ್ರಜ್ಞೆಯಲ್ಲಿ ಬೆಳೆಯುತ್ತಲೇ ಇದ್ದಾರೆ. ರೈತ ಚಳವಳಿಯಿಂದ ಸ್ಫೂರ್ತಿ ಪಡೆಯುತ್ತಿದ್ದ ನಾನು, ಎಂಡಿಎನ್ ತೀರಿಕೊಂಡಾಗ ಅವರನ್ನು ಕುರಿತು ಹಲವರು ಬರೆದ ‘ಹಸಿರು ಸೇನಾನಿ’ ಪುಸ್ತಕ ಮಾಡಿದೆ; ಲಕ್ಮೀಪತಿಬಾಬು ಪ್ರಕಟಿಸಿದರು. ನಟರಾಜ ಹೊನ್ನವಳ್ಳಿ ಎಂಡಿಎನ್ ಸ್ಪಿರಿಟ್ಟಿನಲ್ಲಿ ರಂಗಭೂಮಿ ಮಾಡಿದ. ಮುಂದೆ ಗೆಳೆಯ ರವಿಬಾಗಿ ನನ್ನ ಜೊತೆಗೂಡಿ ಮಾಡಿದ ಎಂಡಿಎನ್ ಮಾತು-ಬರಹಗಳ ಸಂಗ್ರಹ ‘ಬಾರುಕೋಲು’ ಪ್ರಕಟಿಸಿದ ಪಲ್ಲವ ವೆಂಕಟೇಶ್ ‘ಹಸಿರು ಸೇನಾನಿ’ಯನ್ನೂ ಎಲ್ಲೆಡೆ ತಲುಪಿಸಿದರು. ಈ ವಿವರಗಳು ಈ ವೆಬ್ ಸೈಟಿನಲ್ಲಿವೆ. READ HERE ( (https://natarajhuliyar.com/books/)
ಹಲವು ದಶಕಗಳಿಂದ ನನ್ನನ್ನು ಆವರಿಸಿಕೊಳ್ಳುತ್ತಲೇ ಇದ್ದ ಎಂಡಿಎನ್ ನನ್ನೊಳಗೆ ಬೆಳೆದು ನನ್ನ ನಾಟಕದಲ್ಲೂ ಮೂಡತೊಡಗಿದರು. ಕನ್ನಡ ರಂಗಭೂಮಿಯಿಂದ ಮೂಡಿದ ಎರಡು ಅಪ್ಪಟ ಪ್ರತಿಭೆಗಳಾದ ಕಬಡ್ಡಿ ನರೇಂದ್ರಬಾಬು ಹಾಗೂ ಸಂಪತ್ ಮೈತ್ರೇಯ ಈ ನಾಟಕಕ್ಕೆ ಸ್ಪಂದಿಸಿದ ಜೀವಂತ ರೀತಿ ನಾಟಕದ ಎಲ್ಲೆಗಳನ್ನು ವಿಸ್ತರಿಸತೊಡಗಿತು. ನರೇಂದ್ರಬಾಬು ‘ಕಬಡ್ಡಿ’ ಹಾಗೂ ಶಿವರಾಜ್ ಕುಮಾರ್ ಅವರ ‘ಸಂತೆಯಲ್ಲಿ ನಿಂತ ಕಬೀರ’ ಸಿನೆಮಾ ಮಾಡಿ ಖ್ಯಾತರಾದವರು. ಮೊನ್ನೆ ತಾನೇ ವಿಜಯ್ ತೆಂಡುಲ್ಕರ್ ಅವರ ‘ಪಾಯಿಜೇ ಜಾತಿ ಛೇ’ ನಾಟಕ ಆಧರಿಸಿ ಒಳ್ಳೆಯ ಮರಾಠಿ ಸಿನೆಮಾ ಮಾಡಿದವರು. ರೈತ, ದಲಿತ ಚಳವಳಿಗಳನ್ನು ಹತ್ತಿರದಿಂದ ಕಂಡವರು.
‘ಕವಲು ದಾರಿ’, ‘ಕೆ.ಜಿ.ಎಫ್.’, ‘ಬಿಸಿಲುಗುದುರೆ’ ಸಿನೆಮಾಗಳಲ್ಲಿ ವಿಶಿಷ್ಟವಾಗಿ ನಟಿಸಿರುವ ಸಂಪತ್ ‘ಡೈರೆಕ್ಟ್ ಆ್ಯಕ್ಷನ್’ ನಾಟಕದಲ್ಲಿ ಆಳವಾಗಿ ತೊಡಗಿ, ಚಿಂತನೆ-ಲುಕ್ ಎರಡರಲ್ಲೂ ಎಂಡಿಎನ್ ಆಗತೊಡಗಿದರು! ಈ ಇಬ್ಬರ ಜೊತೆಗೆ ‘ನಗ್ನ ಥಿಯೇಟರ್’ ತಂಡದ ವಿಷ್ಣುಕುಮಾರ್ ಜೊತೆ ಹೊಸ ಉತ್ಸಾಹಿ ಹುಡುಗ, ಹುಡುಗಿಯರು ಜೊತೆಯಾದರು. ಎಂಡಿಎನ್ ಅವರ ಕೊನೆಯ ಘಟ್ಟದಲ್ಲಿ ಜೊತೆಗಿದ್ದ ಐಡಿಯಲ್ ಹೋಮ್ಸ್ ರಾಜಕುಮಾರ್ ತುಂಬು ಔದಾರ್ಯದಿಂದ ನೂರು ದಿನ ರಿಹರ್ಸಲ್ ಮಾಡಲು ಸ್ಥಳ ಒದಗಿಸಿಕೊಟ್ಟರು. ಪಚ್ಚೆ ನಂಜುಂಡಸ್ವಾಮಿ, ರವಿಕುಮಾರ್ ಬಾಗಿ, ಸುಬ್ರಹ್ಮಣ್ಯಸ್ವಾಮಿ, ಆತ್ಮಾನಂದ ಹಲ ಬಗೆಯಲ್ಲಿ ನೆರವಾಗತೊಡಗಿದರು. ಇವರೆಲ್ಲರ ಅಪಾರ ಪರಿಶ್ರಮದಿಂದ ‘ಡೈರೆಕ್ಟ್ ಆ್ಯಕ್ಷನ್’ ಇದೀಗ ನಿಮ್ಮೆದುರು ಪ್ರದರ್ಶನಗೊಳ್ಳಲು ಸಿದ್ಧ.
ಪ್ರದರ್ಶನದ ಕಾಲಾವಧಿ ಒಂದೂವರೆ ಗಂಟೆ.
ನಾಟಕ: ಡೈರೆಕ್ಟ್ ಆ್ಯಕ್ಷನ್
ಎಂ.ಡಿ. ನಂಜುಂಡಸ್ವಾಮಿ ಹೋರಾಟ ಗಾಥೆ
ಪ್ರದರ್ಶನ: 18, 19 ಡಿಸೆಂಬರ್ 2023.
ಸಮಯ: ಸಂಜೆ ೭ ಗಂಟೆಗೆ
ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಪ್ಯಾಲೇಸ್ ರೋಡ್, ಏಟ್ರಿಯಾ ಹೋಟೆಲ್ ಎದುರು, ಬೆಂಗಳೂರು ೫೬೦೦೦೧
ದಯಮಾಡಿ ಕೆಳಗೆ ಕೊಟ್ಟಿರುವ ಪೋಸ್ಟರ್ ಗಮನಿಸಿ. ಎರಡು ದಿನವೂ ಗೆಳೆಯ, ಗೆಳತಿಯರು, ಬಂಧುಗಳೊಂದಿಗೆ ಬನ್ನಿ. ಎಂ.ಡಿ.ಎನ್ ಲೋಕದಲ್ಲಿ ಭಾಗಿಯಾಗಿ.