ಕರ್ನಾಟಕಕ್ಕೆ ಕೇಂದ್ರದಿಂದ ನೆರವು ದೊರಕುವುದು ಮರೀಚಿಕೆಯಷ್ಟೇ..!
‘ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎನ್ನುವ ಸ್ಥಿತಿ ಈಗ ರಾಜ್ಯದ ಜನತೆಯದ್ದು. ಅನುದಾನ ಹಂಚಿಕೆಯ ತಾರತಮ್ಯ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಈ ಸಂಘರ್ಷ ರಾಜ್ಯದ ಕಲ್ಯಾಣ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರತೊಡಗಿದೆ. ಕೇಂದ್ರ ಸರಕಾರದ ಮಲತಾಯಿ ಧೋರಣೆ ಎದ್ದು ಕಾಣುತ್ತದೆ. ಕೇಂದ್ರದ ನಿಲುವನ್ನು ಬಿಜೆಪಿ ನಾಯಕರು ಸಮರ್ಥಿಸುವ ಎಷ್ಟೇ ಪ್ರಯತ್ನ ನಡೆಸುತ್ತಿದ್ದರೂ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯವನ್ನು ಮರೆಮಾಚಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ನಾಯಕರ ಹೆಣಗಾಟ ನೋಡಿದರೆ ನಗು ಬರುತ್ತದೆ. ‘ಅತ್ತ ದರಿ- ಇತ್ತ ಪುಲಿ’ ಎನ್ನುವಂತಾಗಿದೆ ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿ.
ರಾಜ್ಯದ ಶೇ. 90ರಷ್ಟು ಪ್ರದೇಶದ ಜನತೆ ಬರದಿಂದ ತತ್ತರಿಸಿರುವಾಗ ತಾಯಿ ಸ್ಥಾನದಲ್ಲಿ ನಿಂತು ಸಂತೈಸಿ ನೆರವಾಗಬೇಕಾದ ಕೇಂದ್ರ ಸರಕಾರ ತೋರುತ್ತಿರುವ ಮಲತಾಯಿ ಧೋರಣೆ ಕ್ಷಮೆಗೆ ಅರ್ಹವಲ್ಲ. ಸೆಪ್ಟಂಬರ್ ತಿಂಗಳಲ್ಲೇ ಕೇಂದ್ರದ ಅಧ್ಯಯನ ತಂಡ ಬಂದು ಹೋಗಿ ವರದಿ ನೀಡಿದ್ದಲ್ಲದೆ, ರಾಜ್ಯದ ಕಂದಾಯ ಮತ್ತು ಕೃಷಿ ಸಚಿವರು ಕೇಂದ್ರದ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಕ್ಯಾರೇ ಎಂದಿಲ್ಲ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ತಿಂಗಳುಗಳು ಕಳೆದರೂ ಬಿಡಿಗಾಸು ಬಂದಿಲ್ಲ. ಬರಪರಿಹಾರದ ನೆರವು ನೀಡಲು ಮಾಡಬೇಕಾದ ಕನಿಷ್ಠ ಪ್ರಕ್ರಿಯೆಯನ್ನೇ ಕೇಂದ್ರ ಗೃಹ ಸಚಿವರು ನಡೆಸಿಲ್ಲ ಎಂದ ಮೇಲೆ ಕರ್ನಾಟಕದ ಜನತೆ ಪ್ರಶ್ನಿಸದೆ ಸುಮ್ಮನಿರಬೇಕು ಎಂದು ಬಿಜೆಪಿ ನಾಯಕರು ಬಯಸುವುದು ಎಷ್ಟು ಸರಿ? ಕೇಂದ್ರದ ತಾರತಮ್ಯ ಧೋರಣೆಯನ್ನು ಪ್ರಶ್ನಿಸಿದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಧಾಟಿಯನ್ನೇ ವಿವಾದವಾಗಿಸಿ ವಿಷಯಾಂತರ ಮಾಡಿ ವಾಸ್ತವ ಮರೆಮಾಚುವ ಪ್ರಯತ್ನ ನಡೆದಿದೆ. ಈ ವಿಚಾರದಲ್ಲಿ ಹಾದಿ-ಬೀದಿ ರಂಪಾಟ ಮಾಡಿದ್ದೂ ಆಯಿತು. ಆದರೆ ಫಲಿತಾಂಶ ಮಾತ್ರ ಶೂನ್ಯ. ಸಂಸದರು ಯಾಕೆ ಈ ರೀತಿ ಹೇಳುವ ಪ್ರಮೇಯ ಉದ್ಭವವಾಯಿತು, ಸರಕಾರ ಮಾಡಿರುವ ತಪ್ಪಾದರೂ ಏನು ಎಂದು ಕನಿಷ್ಠ ಆತ್ಮಾವಲೋಕನ ಮಾಡುವ ದೊಡ್ಡತನವನ್ನೂ ಯಾರೂ ಮಾಡುತ್ತಿಲ್ಲ. ಬಹಿರಂಗವಾಗಿ ಮುಗಿಬೀಳುತ್ತಿರುವ ರಾಜ್ಯ ಬಿಜೆಪಿ ನಾಯಕರು, ಖಾಸಗಿಯಾಗಿ ಮಾತನಾಡುವಾಗ ಡಿ.ಕೆ. ಸುರೇಶ್ ಧ್ವನಿ ಎತ್ತಿದ್ದು ಸರಿ ಇದೆ ಎಂದು ಹೇಳುತ್ತಾರೆ. ವಿವಾದದ ಮೂಲಕವಾದರೂ ದಿಲ್ಲಿ ದೊರೆಗಳ ಗಮನ ಸೆಳೆಯುವಂತಾಯಿತು ಎಂದು ಮೌನವಾಗಿ ಗೊಣಗುತ್ತಿದ್ದಾರೆ. ಮೈಸೂರಿಗೆ ಬಂದ ಗೃಹ ಸಚಿವ ಅಮಿತ್ ಶಾ, ಗ್ಯಾರಂಟಿಗಾಗಿ ಹಣ ಪೋಲು ಮಾಡುವವರಿಗೆ ಕೇಂದ್ರದ ನೆರವು ಇಲ್ಲ ಎಂದು ಹೇಳುವ ಮೂಲಕ ರಾಜ್ಯದ ಜನ ಕೇಂದ್ರದಿಂದ ಏನನ್ನೂ ನಿರೀಕ್ಷಿಸಬೇಡಿ ಎಂಬ ಸಂದೇಶ ರವಾನಿಸಿದ್ದಾರೆ. ಇದರ ವಿರುದ್ಧ ಧ್ವನಿ ಎತ್ತುವ ಬಲಿಷ್ಠ ನಾಯಕತ್ವ ರಾಜ್ಯ ಬಿಜೆಪಿಯಲ್ಲಿ ಇಲ್ಲ. ಇದುವೇ ಕೇಂದ್ರ ನಾಯಕರ ಈ ರೀತಿಯ ನಡವಳಿಕೆಗೆ ಮೂಲ ಕಾರಣ.
ಬರಪರಿಹಾರಕ್ಕೆ ನೆರವು ನೀಡಲ್ಲ, ದುಡ್ಡು ಕೊಡುತ್ತೇವೆ ಎಂದರೂ ಉಚಿತ ಪಡಿತರ ವಿತರಣೆಗೆ ಅಕ್ಕಿ ಕೊಡಲಿಲ್ಲ, ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನದಲ್ಲಿ ಬಿಡಿಗಾಸು ಕೊಟ್ಟಿಲ್ಲ, ಮಹದಾಯಿ ಯೋಜನೆ ಅನುಮತಿ ಕೊಡಿಸಲು ಮನಸ್ಸು ಮಾಡುತ್ತಿಲ್ಲ, ನಮ್ಮಿಂದ ಸಂಗ್ರಹಿಸಿದ ತೆರಿಗೆಯ ನ್ಯಾಯಸಮ್ಮತ ಪಾಲು ವಾಪಸ್ ಕೊಡುವುದರಲ್ಲೂ ತಾರತಮ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ ಎನ್ನುವ ಒಂದೇ ಕಾರಣಕ್ಕಾಗಿ ಕೇಂದ್ರ ಸರಕಾರ ತೋರುತ್ತಿರುವ ದಾರ್ಷ್ಟ್ಯತನ ಮಾತ್ರ ಅಕ್ಷಮ್ಯ. ಡಬಲ್ ಇಂಜಿನ್ ಸರಕಾರ ಇದ್ದರೆ ರಾಜ್ಯದಲ್ಲಿ ಅಭಿವೃದ್ಧಿ ಸುಲಭ ಎಂದು ಬಾಯಿ ಬಡಿದು ಕೊಂಡು ಓಡಾಡುತ್ತಿದ್ದ ಬಿಜೆಪಿ ನಾಯಕರು, ಡಬಲ್ ಇಂಜಿನ್ ಇದ್ದಾಗಲೂ ಏನೂ ಮಾಡದೆ ಕೈಚೆಲ್ಲಿದ್ದು ಇತಿಹಾಸ.
ಈಗ ಪ್ರಮುಖ ವಿಷಯ ಏನೆಂದರೆ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೀಗೆ ಪ್ರತಿಷ್ಠೆಗೆ ಬಿದ್ದು ಸಂಘರ್ಷ ಮುಂದುವರಿಸಿದರೆ ಆಗಬಹುದಾದ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ರಾಜ್ಯಕ್ಕೆ ನೆರವು ನೀಡಲೇಬಾರದು ಎಂದು ತೀರ್ಮಾನಿಸಿದಂತಿರುವ ಕೇಂದ್ರ ಸರಕಾರ, ರಾಜ್ಯ ಸರಕಾರ ಎಲ್ಲಿ ಎಡವುತ್ತೆ ಎಂದು ಕಾದು ಕುಳಿತಿದೆ. ರಾಜ್ಯದ ಮೇಲೆ ಹದ್ದಿನ ಕಣ್ಣಿಟ್ಟಿರುವ ದಿಲ್ಲಿ ದೊರೆಗಳು ಸಿಗುವ ಕುಂಟು ನೆಪ ಮುಂದಿಟ್ಟು ಮುಂದಿನ ದಿನಗಳಲ್ಲಿ ಅನುದಾನ ನೀಡಲು ಇನ್ನಷ್ಟು ಅಡ್ಡಗಾಲು ಹಾಕವುದು ನಿಶ್ಚಿತ. ಹೀಗಿರುವಾಗ ರಾಜ್ಯ ಸರಕಾರ ಎಚ್ಚರಿಕೆಯಿಂದ ಇರುವುದು ಒಳಿತು. ಅಧಿಕಾರದ ಮದದಲ್ಲಿ ಮೈಮರೆಯದೆ ಎಚ್ಚರಿಕೆಯಿಂದ ಯೋಜನೆಗಳ ಅನುಷ್ಠಾನ ಮಾಡುವುದು ಮತ್ತು ಪಾರದರ್ಶಕ ಆಡಳಿತ ನೀಡುವ ಕಡೆ ಗಮನ ಹರಿಸದಿದ್ದರೆ ಗಂಡಾಂತರ ಕಟ್ಟಿಟ್ಟ ಬುತ್ತಿ.
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಂದ ರಾಜ್ಯಕ್ಕೆ ಹೆಚ್ಚಿನ ನೆರವು ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ರಾಜ್ಯದ ಋಣ ತೀರಿಸುವ ಸುವರ್ಣಾವಕಾಶವನ್ನು ಅವರು ಕೈಚೆಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನೇ ಬಂಡವಾಳವಾಗಿಸಿ ಕುರ್ಚಿ ಭದ್ರ ಮಾಡಿಕೊಂಡಿರುವುದೇ ಅವರ ಸಾಧನೆ ಆಗಿದೆ. ಮೋದಿ ಜನಪ್ರಿಯತೆಯೇ ಇವರಿಗೆ ಶ್ರೀರಕ್ಷೆಯಾಗಿರುವುದರಿಂದ ಪ್ರಶ್ನಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಮಗೆ ನೆನಪಾಗುವುದು ಕೇಂದ್ರದ ಮಾಜಿ ಸಚಿವ ದಿವಂಗತ ಅನಂತಕುಮಾರ್. ಭಿನ್ನಾಭಿಪ್ರಾಯಗಳು ಏನೇ ಇದ್ದರೂ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕಾರಣ ಮಾಡದೆ, ಕೇಂದ್ರ-ರಾಜ್ಯಗಳ ನಡುವೆ ಸಮನ್ವಯ ಮೂಡಿಸುವ ಕೊಂಡಿಯಾಗಿ ಅವರು ಕಾರ್ಯನಿರ್ವಹಿಸುತ್ತಿದ್ದರು. ದಿಲ್ಲಿ ದೊರೆಗಳಿಗೆ ಮನವರಿಕೆ ಮಾಡಿ ಮನವೊಲಿಸಿ ಆಗಬೇಕಾದದ್ದನ್ನು ಕಾರ್ಯರೂಪಕ್ಕೆ ತರಲು ಅವರು ಕೈಜೋಡಿಸುತ್ತಿದ್ದರು. ರಾಜ್ಯದ ಕಾಂಗ್ರೆಸ್ ನಾಯಕರೇ ಇದನ್ನು ಹಲವು ಬಾರಿ ಬಹಿರಂಗವಾಗಿ ಹೇಳಿದ್ದುಂಟು. ಆದರೆ ಅವರ ಸ್ಥಾನ ತುಂಬುವ ನಾಯಕರು ರಾಜ್ಯ ಬಿಜೆಪಿಯಲ್ಲಿ ಇಲ್ಲದಂತಾಗಿದೆ. ಎಲ್ಲರೂ ದಿಲ್ಲಿ ದೊರೆಗಳ ಜೀಹುಜೂರುಗಳಾಗಿ ಬಿಟ್ಟಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಸ್ಥಾನ ತುಂಬುತ್ತಾರೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿದೆ. ಜೋಶಿ ಕೂಡ ಕೆಳಮಟ್ಟದ ನಾಯಕರ ರೀತಿ ವಿಷಯಾಂತರ ಮಾಡಿ ಸಮರ್ಥನೆಗೆ ಇಳಿದು ರಾಜಕೀಯ ನಾಟಕವಾಡುತ್ತಿರುವುದು ಹಲವು ಬಾರಿ ಸಾಬೀತಾಗಿದೆ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಂತೆ ಕೇಂದ್ರದ ನಾಯಕರ ಕತ್ತಿನಪಟ್ಟಿ ಹಿಡಿದು ಕೇಳುವ ಧಮ್ಮು ತಾಕತ್ತು ಯಾರಿಗೂ ಇಲ್ಲ. ಬಿಎಸ್‌ವೈ ಸ್ಥಾನ ಬೇರೆ ಯಾರೂ ತುಂಬಲಾಗದೆ ರಾಜ್ಯ ಬಿಜೆಪಿಯಲ್ಲಿ ಶೂನ್ಯ ಆವರಿಸಿದೆ.
ರಾಜ್ಯವನ್ನು ಪ್ರತಿನಿಧಿಸುವ ಸಂಸದರ ಮೌನ ಕ್ಷಮೆಗೆ ಅರ್ಹವಲ್ಲ. ಬಹುತೇಕ ಸಂಸದರು ತಮ್ಮ ಅವಧಿ ಪೂರೈಸಿ ಮತ್ತೊಮ್ಮೆ ಅವಕಾಶ ಸಿಗುತ್ತೋ ಇಲ್ಲವೋ ಎನ್ನುವ ಚಿಂತೆಯಲ್ಲೇ ಮುಳುಗಿದ್ದಾರೆ. ಧ್ವನಿ ಎತ್ತಿದರೆ ತಮ್ಮ ಬುಡಕ್ಕೆ ಬಂದು ಬಿಡುತ್ತೆ ಎನ್ನುವ ಆತಂಕದಲ್ಲೇ ಎಲ್ಲರೂ ಅವಧಿ ಪೂರೈಸಿದ್ದಾರೆ. ಆದರೆ ಯುವ ಸಂಸದರಾದ ತೇಜಸ್ವಿಸೂರ್ಯ ಮತ್ತು ಪ್ರತಾಪ ಸಿಂಹ ಅವರಾದರೂ ಭಿನ್ನವಾಗಿ ಈ ಪರಿಸ್ಥಿತಿಯನ್ನು ನಿಭಾಯಿಸುವ ಪ್ರಯತ್ನ ಮಾಡಬಹುದಿತ್ತು. ತತ್ವ ಸಿದ್ಧಾಂತದ ಹಗ್ಗ-ಜಗ್ಗಾಟ ಬದಿಗೊತ್ತಿ ವರಿಷ್ಠರ ಮನವೊಲಿಸುವ ಕೆಲಸ ಮಾಡಬೇಕಿತ್ತು. ಈ ಕೆಲಸಮಾಡಲು ಇನ್ನೂ ಕಾಲ ಮಿಂಚಿಲ್ಲ.
ಬಿಜೆಪಿ ಹೈಕಮಾಂಡ್ ಈಗ ತುಂಬಾ ಬಲಿಷ್ಠವಾಗಿರುವುದರಿಂದ, ಸದ್ಯ ರಾಜ್ಯದ ಯಾವುದೇ ನಾಯಕರ ಸಲಹೆಗಳನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಕೇವಲ ಕಣ್ಣುಸನ್ನೆ, ತೋರು ಬೆರಳಲ್ಲೇ ಇಲ್ಲಿನ ನಾಯಕರನ್ನು ಅವರು ನಿಯಂತ್ರಿಸುತ್ತಿದ್ದಾರೆ. ರಾಮಮಂದಿರ ನಿರ್ಮಾಣ, ರಾಷ್ಟ್ರೀಯವಾದ, ಪಾಕಿಸ್ತಾನ, ಧರ್ಮದ್ವೇಷ ರಾಜಕಾರಣವೇ ಲೋಕಸಭಾ ಚುನಾವಣೆಯಲ್ಲಿ ಕೈಹಿಡಿಯಲಿದೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿ ಇರುವಾಗ, ಬರದ ಸಂಕಷ್ಟಕ್ಕೆ ನೆರವು ಸೇರಿದಂತೆ ಯಾವುದೇ ಹೆಚ್ಚಿನ ಅನುದಾನಗಳನ್ನು ನೀಡಿ ರಾಜಕೀಯ ಲಾಭ ಆಗುವುದಿಲ್ಲ ಎಂಬ ಸ್ಪಷ್ಟ ನಿರ್ಧಾರಕ್ಕೆ ರಾಷ್ಟ್ರೀಯ ಬಿಜೆಪಿ ನಾಯಕರು ಬಂದಂತಿದೆ. ಅವರ ಆದ್ಯತೆ ಏನಿದ್ದರೂ ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರಗಳೇ ಹೊರತು ಕರ್ನಾಟಕ ಅಲ್ಲ ಎಂಬುದು ಜಗಜ್ಜಾಹೀರಾಗಿದೆ. ಧ್ವನಿ ಎತ್ತಿದರೆ ವಿಷಯಾಂತರ ಮಾಡಿ ಮರೆಮಾಚುವ ಕಲೆ ಕರಗತ ಮಾಡಿಕೊಂಡಿದ್ದಾರೆ..ಹೀಗಾಗಿ ರಾಜ್ಯದ ಬಿಜೆಪಿ ನಾಯಕರು ಅವರು ಹೇಳಿದ್ದನ್ನು ಕೇಳಿಕೊಂಡು ಬಂದು ಇಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಪರಸ್ಪರ ಕೆಸರು ಎರಚುತ್ತಾ, ಹೇಳಿಕೆ-ಪ್ರತಿಹೇಳಿಕೆ ಮೂಲಕ ತಿರುಗೇಟು ನೀಡುತ್ತಾ ಪಕ್ಷದ ಕಾರ್ಯಕರ್ತರನ್ನು ತೃಪ್ತಿಪಡಿಸಿ ಓಲೈಸುವ ಕೆಲಸದಲ್ಲಿ ತೊಡಗಿದ್ದಾರೆ ಅಷ್ಟೇ. ಕೇಂದ್ರ ಸಚಿವ ಅಮಿತ್ ಶಾ ಮೈಸೂರಿಗೆ ಬಂದಾಗಲಾದರೂ ಅವರಿಗೆ ವಾಸ್ತವ ಮನವರಿಕೆ ಮಾಡಿ ಕೇಂದ್ರದಿಂದ ದೊರೆಯಬಹುದಾದ ಹೆಚ್ಚಿನ ನೆರವನ್ನು ಪಡೆಯುವ ಪ್ರಯತ್ನ ಮಾಡಿದ್ದರೆ ಭೇಷ್ ಎನ್ನಬಹುದಿತ್ತು. ಇದು ಯಾವುದೂ ಆಗಿಲ್ಲ ಎಂದ ಮೇಲೆ, ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ನೆರವು ದೊರಕಿ ತಾರತಮ್ಯ ನಿವಾರಣೆಗೊಂಡು ಪರಿಸ್ಥಿತಿ ಸರಿ ಹೋಗುತ್ತದೆ ಎನ್ನುವುದು ಮರೀಚಿಕೆ ಅಷ್ಟೇ..!
ಎಲ್ಲರೂ ರಾಜ್ಯದ ಹಿತ ಮರೆತಂತೆ ಕಾಣುತ್ತದೆ. ವಾಸ್ತವ ವಿಷಯವನ್ನು ರಾಜ್ಯದ ಜನ ಅರ್ಥ ಮಾಡಿಕೊಂಡು ಧ್ವನಿ ಎತ್ತದಿದ್ದರೆ ಪರಿಸ್ಥಿತಿ ಇನ್ನಷ್ಟು ಅಧೋಗತಿಗೆ ತಲುಪುವುದಂತೂ ನಿಶ್ಚಿತ. ಸ್ವಾಭಿಮಾನಿ ಕನ್ನಡಿಗರು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕೇ ಹೊರತು ಬೇರೆ ಭಾವನಾತ್ಮಕ ವಿಷಯಗಳ ಬಗ್ಗೆ ಅಲ್ಲ. ಭವಿಷ್ಯದಲ್ಲಿ ನಮಗೆ ಬದುಕೇ ಮುಖ್ಯ..!