ಮೂಗಿಗೆ ಸವರಿದ ತುಪ್ಪ: ಬಜೆಟ್ ರಾಜಕೀಯದ ಹಿಂದೆ-ಮುಂದೆ

ಈಬಾರಿಯ ಅಂದರೆ 2025ರ ಮುಂಗಡಪತ್ರದ ಅಧಿವೇಶನವು ಮೋದಿ ನಾಯಕತ್ವದ ಸಮ್ಮಿಶ್ರ ಸರಕಾರದ ಬಜೆಟ್ ಅಧಿವೇಶನ. ಮರುದಿನ ಬಜೆಟ್ ಮಂಡಿಸಲ್ಪಡುವುದರಿಂದ ಈ ಅಧಿವೇಶನದ ನಿಜವಾದ ನಾಯಕಿಯೆಂದರೆ ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್. ಆದರೆ ಉಭಯ ಸದನಗಳ ಜಂಟಿ ಅಧಿವೇಶನವನ್ನು ರಾಷ್ಟ್ರಪತಿಯವರು ಉದ್ಘಾಟಿಸಿ ಭಾಷಣ ಮಾಡುವುದು ರೂಢಿ.
ನಮ್ಮ ಸಂಸದರ ಜ್ಞಾನಕೀರ್ತಿ ವಿಶ್ವವ್ಯಾಪಕವಾಗಿಲ್ಲ. ನಮ್ಮ ಚುನಾವಣೆಗಳು ಎಂಥವರನ್ನು ಆಯ್ಕೆ ಮಾಡುತ್ತವೆಯೆಂಬುದರಿಂದ ದೇಶದ ಯೋಗ್ಯತೆ ಗೊತ್ತಾಗುತ್ತದೆ; ಮಾನ ಕಳೆಯುತ್ತದೆ. ಆದರೆ ಬದಲಿ ಉತ್ತಮ ವ್ಯವಸ್ಥೆ ಬರುವ ವರೆಗೆ ಇದು ಅನಿವಾರ್ಯ. ವಿವೇಕಿಗಳಾಗಿರಬೇಕಾದರೆ ವಿದ್ಯೆ ಅಗತ್ಯವಿಲ್ಲವೆಂಬುದಕ್ಕೆ ಕೆಲವರು ಸಾಕ್ಷಿಯಾದರೆ, ಅಕ್ಷರವು ವಿವೇಕವನ್ನು ನೀಡುವುದಿಲ್ಲವೆಂಬುದಕ್ಕೆ ಅಕ್ಷರಸ್ಥ ಜನಪ್ರತಿನಿಧಿಗಳೇ ಸಾಕ್ಷಿ. ವಿಚಿತ್ರವೆಂದರೆ ಕೆಲವರಿಗೆ ಜನರಿಗೆ ಅಂಕಿ-ಸಂಖ್ಯೆ ಹೋಗಲಿ, ಭಾಷೆ ಕೂಡಾ ಅರ್ಥವಾಗುವುದಿಲ್ಲ. ಅಧಿಕಾರ ಹಿಡಿದವರಿಗೆ ಸರಿಯಾಗಿ ಓದಲು, ಬರೆಯಲು, ಮಾತನಾಡಲು ಬರದಿದ್ದರೂ ಅವರು ದೇಶದ ಹಣೆಬರೆಹವನ್ನು, ಅದೃಷ್ಟ-ದುರದೃಷ್ಟವನ್ನು ನಿರ್ಧರಿಸಬಲ್ಲ ತೀರ್ಮಾನಗಳನ್ನು ಕೈಗೊಳ್ಳುವ ಅರ್ಹತೆಯನ್ನು ಹೊಂದಿರುತ್ತಾರೆ. ಇದು ರಾಷ್ಟ್ರಮಟ್ಟದಲ್ಲೂ ಸತ್ಯ, ರಾಜ್ಯಮಟ್ಟದಲ್ಲೂ ಸತ್ಯ. ಈ ವಿಚಿತ್ರಕ್ಕೆ ನಮಿಸಿ ನಮ್ಮ ಪ್ರಜಾತಂತ್ರ ನಡೆಯಬೇಕಾಗಿದೆ ಮತ್ತು ಅದನ್ನು ನಾವು ಗ್ರಹಿಸಬೇಕಾಗಿದೆ.
ಇಂಥದ್ದೊಂದು ಸಂದರ್ಭ ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸೃಷ್ಟಿಯಾಗಿದೆ. ರಾಷ್ಟ್ರಪತಿಯವರು ಇಂತಹ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡುವುದು ವಾಡಿಕೆ. ಅವರು ಬಹು ದೀರ್ಘ ಭಾಷಣವನ್ನು ಮಾಡಿದರು. ಸರಕಾರದ ಸಾಧನೆಗಳನ್ನು ಸ್ತುತಿಸುತ್ತ ಮಾತನಾಡುವುದು ವಾಡಿಕೆಯಾದ್ದರಿಂದ ಹೆಚ್ಚೇನೂ ನಿರೀಕ್ಷಿಸಲಾಗದು. ಆದರೆ ಅವರ ಭಾಷಣದ ಕೊನೆಯಲ್ಲಿ ಅವರು ದಣಿದಂತಿದ್ದರು ಎಂದು ಹೇಳಿದ ಸೋನಿಯಾ ಗಾಂಧಿ ಬಳಸಿದ ‘ಅಯ್ಯೋ ಪಾಪ’ ಎಂಬ ಪದಕ್ಕೆ ಪರ್ಯಾಯವಾದ ಆಂಗ್ಲ ಪದಕ್ಕೆ ಆಳುವವರಿಂದ ಬಹಳ ಟೀಕೆ ವ್ಯಕ್ತವಾಯಿತು. ಇದು ಭಾಷೆ ಅರ್ಥವಾಗದ ಸ್ಥಿತಿ. ಎಷ್ಟೇ ದೊಡ್ಡವರಾದರೂ ಸಂಕಟಗ್ರಸ್ತರಾದಾಗ ಇಂತಹ ಪದವನ್ನು ಬಲ್ಲವರು ಬಳಸುತ್ತಾರೆ. ಆದರೆ ಇದು ಅರ್ಥವಾಗದವರೇ ಬಹುಮತದಲ್ಲಿದ್ದಾಗ ಇಂತಹ ಟೀಕೆ ಅನಿವಾರ್ಯ. ಈ ಬಗ್ಗೆ ಹೆಚ್ಚು ಚರ್ಚೆ ಬೇಡ.
ಆದರೆ ಮರುದಿನ ಅಂದರೆ ವಾರಾಂತ್ಯದಲ್ಲಿ ಮಾನ್ಯ ಅರ್ಥಸಚಿವರು 2025ರ ಮುಂಗಡ ಪತ್ರವನ್ನು ಮಂಡಿಸಿದರು. ಇದು ಎಷ್ಟು ಜನರಿಗೆ ಅರ್ಥವಾಯಿತೋ ಗೊತ್ತಿಲ್ಲ. ನಾನು ಆರ್ಥಿಕ ತಜ್ಞನಲ್ಲ. ನನಗೆ ಕೆಲವಂಶ ಅರ್ಥವಾಯಿತು. ಇನ್ನು ಕೆಲವೆಡೆ ಗೊಂದಲ ಸೃಷ್ಟಿಯಾಯಿತು. ದೃಶ್ಯಮಾಧ್ಯಮಗಳು ತಮ್ಮ ರಾಜಕೀಯ ಒಲವು ನಿಲುವುಗಳಿಗೆ ಖ್ಯಾತವಾದ್ದರಿಂದ ಅವನ್ನು ಗಮನಿಸಲು ನಾನು ಯತ್ನಿಸಲಿಲ್ಲ. ನಾಳೆ ಪತ್ರಿಕೆ ಓದೋಣವೆಂದು ಸುಮ್ಮನಾದೆ. ಅಲ್ಲಿ ಒಂದಿಷ್ಟಾದರೂ ಕ್ರಿಯೆ-ಪ್ರತಿಕ್ರಿಯೆಗಳ ಗ್ರಹಿಕೆಯಿರಬಹುದೆಂದು ಊಹೆ.
ಮರುದಿನದ ಪತ್ರಿಕೆಗಳಲ್ಲಿ ಮಾಧ್ಯಮಗಳ ವರದಿಗಳ ಆಕೃತಿ-ವಿಕೃತಿಗಳನ್ನು ಓದುವುದರೊಂದಿಗೆ ಜನಾಭಿಪ್ರಾಯಗಳನ್ನೋದಿದೆ. ಜನರು ನಮ್ಮ ರಾಜಕಾರಣಿಗಳಿಗಿಂತಲೂ ಧೂರ್ತ ಬುದ್ಧಿಮತ್ತೆಯವರು. ಪತ್ರಿಕೆಗಳಲ್ಲಿ ತಮ್ಮ ಅಭಿಪ್ರಾಯವು ಒಂದೆರಡು ವಾಕ್ಯಗಳಲ್ಲಾದರೂ ಭಾವಚಿತ್ರದೊಂದಿಗೆ ಪ್ರಕಟವಾಗುತ್ತದೆಯೆಂಬ ವಿಚಾರ ತಿಳಿದ ತಕ್ಷಣ ಎಲ್ಲರೂ ಅದನ್ನು ರಾಜಕೀಯವಾಗಿ ಪುನರಾವರ್ತಿಸತೊಡಗುತ್ತಾರೆ. ಯುವಜನರಿಗೆ, ಮಹಿಳೆಯರಿಗೆ, ಮಧ್ಯಮವರ್ಗದವರಿಗೆ, ಕೃಷಿಕರಿಗೆ ಪೂರಕ ಬಜೆಟ್ ಎಂದು ಸ್ಕೂಟಿಯಲ್ಲಿ ಓಡಾಡುವ ದೊಡ್ಡ ವ್ಯಾಪಾರಿಯೊಬ್ಬರು, ಪಾಲಿಸಿಗಾಗಿ ಮನವೊಲಿಸುವ ಉದ್ಯಮದಲ್ಲಿ ಪಾರಂಗತರಾದ ಜೀವವಿಮಾ ಏಜೆಂಟರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು. ಇಂತಹ ಒಬ್ಬರಲ್ಲಿ ‘‘ಹೌದೇ? ನಿಮಗೇನು ಲಾಭ? ತರಕಾರಿ, ಜೀನಸು ಬೆಲೆ ಕಡಿಮೆಯಾಯಿತೇ? ತೈಲಬೆಲೆ ಕಡಿಮೆಯಾಯಿತೇ? ಅಡುಗೆ ಅನಿಲ?’’ ಎಂದು ಪ್ರಶ್ನಿಸಿದೆ. ಅದಕ್ಕೆ ಬಂದ ಸಾಮಾನ್ಯ ಉತ್ತರ ‘‘ನಿಮಗೆ ಮೋದಿಯನ್ನು ಕಂಡರಾಗುವುದಿಲ್ಲ, ಅದಕ್ಕೇ ಹೀಗೆ ಹೇಳುತ್ತಿದ್ದೀರಿ. ನಮಗೆ ಅನುಕೂಲವಾಗದಿದ್ದರೇನಂತೆ? ದೇಶಕ್ಕೆ, ಯುವಜನರಿಗೆ, ಮಹಿಳೆಯರಿಗೆ, ಮಧ್ಯಮವರ್ಗದವರಿಗೆ ಅನುಕೂಲವಾಗಿದೆ’’ ಎಂದರು. ‘‘ನೀವು ಯಾವ ವರ್ಗ?’’ ಎಂದು ಮತ್ತೆ ಕೇಳಿದೆ. ‘ನಿಮ್ಮಂಥವರಿಗೆ ಉತ್ತರಿಸುವ ಅಗತ್ಯ ನನಗಿಲ್ಲ’ ಎಂದು ಅವರು ಮುಖ ಕೆಂಪು ಮಾಡಿಕೊಂಡು ದಾಟಿದರು.
ಈ ವಿಚಾರವನ್ನು ನನ್ನ ಗೆಳೆಯರೊಬ್ಬರಲ್ಲಿ ಹೇಳಿದೆ. ಅವರು ಮೋದಿಯವರ ಪರಮ ಭಕ್ತರು. ಅವರಲ್ಲಿ ‘‘ಮಾಧ್ಯಮದವರು ಪ್ರಶ್ನಿಸಿದರೆ ಹೀಗೆ ಉತ್ತರಿಸುತ್ತೀರಾ?’’ ಎಂದೆ. ಅವರು ನಗುತ್ತ ‘‘ಮಾಧ್ಯಮದವರು ಎಲ್ಲಿ ಪ್ರಶ್ನೆ ಹಾಕುತ್ತಾರೆ? ಅವರು ಸ್ಟೆನೋಗ್ರಾಫರ್ (ಶೀಘ್ರಲಿಪಿಕಾರರು)ಗಳಂತೆ ಹೇಳಿದ್ದನ್ನು ಬರೆದುಕೊಂಡು ಹೋಗುತ್ತಾರೆ. ಅವರು ಪ್ರಶ್ನಿಸುವುದೇನಿದ್ದರೂ ನಿಮ್ಮಂಥವರನ್ನು’’ ಎಂದರು. ಅವರಿಗೆ ವಾಸ್ತವದ ಅರಿವಿದೆ. ಆದರೆ ತಮ್ಮದೇ (ಸ್ವಾರ್ಥ) ಕಾರಣಗಳಿಗಾಗಿ ರಾಜಕೀಯದಲ್ಲಿ ತಮಗನುಕೂಲವಾದ ರೀತಿಯಲ್ಲಿ ಬೆಂಬಲಸುತ್ತಿದ್ದೇನೆಂದು ಖಾಸಗಿಯಾಗಿ ಹೇಳುತ್ತಾರೆ.
ಮಾಧ್ಯಮಗಳಲ್ಲಿ ಅತಿ ಇಷ್ಟವಾಗುವುದು ವ್ಯಂಗ್ಯಚಿತ್ರಕಾರರನ್ನು. ಅವರು ಕೆಲವೇ ರೇಖೆಗಳಲ್ಲಿ ಹೇಳಿದ್ದನ್ನು ಪತ್ರಿಕೆಯ ಇತರ ಎಲ್ಲ ಪುಟಗಳು ಒಟ್ಟಾಗಿಯೂ ಹೇಳುವುದಿಲ್ಲ. ಸಿಟ್ಟುಮಾಡುವುದಾದರೂ ಮೊದಲು ನಕ್ಕು ಆನಂತರ ಸಿಡುಕಬೇಕಷ್ಟೇ. ಬಜೆಟಿನ ನಂತರ ಬಂದ ವ್ಯಂಗ್ಯಚಿತ್ರಗಳು ಬಹುಪಾಲು ಸತ್ಯವನ್ನೇ ಹೇಳಿದ್ದವು. ಶಿಕ್ಷಣಕ್ಕೆ ಕಡಿಮೆ ಹಣ ಮೀಸಲಿಟ್ಟಿದ್ದನ್ನು ಒಂದು ವ್ಯಂಗ್ಯ ಚಿತ್ರದಲ್ಲಿ ಆಳುವ ರಾಜಕಾರಣಿಯೊಬ್ಬ ‘ಶಿಕ್ಷಣಕ್ಕೆ ಜಾಸ್ತಿ ಹಣ ನೀಡಿದರೆ ಉದ್ಯೋಗ ನೀಡಬೇಕು; ನಮ್ಮಲ್ಲಿ ಉದ್ಯೋಗವಿಲ್ಲದಿದ್ದರೆ ಕಲಿತವರು ವಿದೇಶಕ್ಕೆ ಹೋಗಬೇಕಾಗುತ್ತದಲ್ಲ,..’ ಎಂಬಂತೆ ಹೇಳುತ್ತಿದ್ದರು. ಆದರೆ ಒಟ್ಟಾರೆ ಜನಮಾನಸದಲ್ಲಿ ತಮಗೇನೋ ಲಾಭವಾಗಿದೆ ಎಂಬ ಠೀವಿಯಿತ್ತು. ಏನು ಲಾಭ ಎಂದು ಹೇಳುವ ಹಾಗಿಲ್ಲ; ಹಾಗೆಂದು ವಿರೋಧಿಸುವ ಮನಸ್ಸಿಲ್ಲ. ಏಕೆಂದರೆ ಮೋದಿಯವರು ದೇಶದ ಸಮ್ಮಿಶ್ರ ಬಹುಮತದ ಬಹುಸಂಖ್ಯಾತರ ಕುಲದೇವರು. ಅವರ ಸಂಪುಟದ ಅರ್ಥಸಚಿವರು ನೀಡಿದ ಮುಂಗಡ ಪತ್ರವೆಂದರೆ ಅದು ಕಹಿಯಾದರೂ ಔಷಧದಂತೆ. ತಕ್ಷಣದ ಪರಿಣಾಮ, ಫಲಿತಾಂಶವಿಲ್ಲದಿದ್ದರೂ ಗುಣವಾಗುವುದು ಖಚಿತ; ಖಂಡಿತ.
ವಿಶೇಷವೆಂದರೆ ವೈಯಕ್ತಿಕ ಆದಾಯ ತೆರಿಗೆಯ ಬಗ್ಗೆ ಅತೀ ಹೆಚ್ಚು ಮೆಚ್ಚುಗೆ ವ್ಯಕ್ತವಾದದ್ದು. ಎಲ್ಲರೂ 12.75 ಲಕ್ಷ ರೂ. ವಾರ್ಷಿಕ ಆದಾಯದವರಿಗೆ ತೆರಿಗೆ ಇಲ್ಲವೆಂದು ಕುಣಿದು ಕುಪ್ಪಳಿಸಿದರು. ಈ ಬಗ್ಗೆ ಸಂಬಳ ಪಡೆಯುವವರು ಮಾತ್ರವಲ್ಲ, ನಿರುದ್ಯೋಗಿಗಳೂ ಸಂತೋಷಿಸಿದ್ದನ್ನು ಕಂಡು ನಾನು ಒಂದು ಕ್ಷಣ ಬೆರಗಾದೆ. ಬೀದಿ ಬದಿಯ ಭಿಕ್ಷುಕರು ಎಷ್ಟು ಸಂತೋಷ ಪಟ್ಟರೋ ಗೊತ್ತಿಲ್ಲ. ಈ ಬಗ್ಗೆಯೂ ವ್ಯಂಗ್ಯಚಿತ್ರಕಾರರು ತಮ್ಮ ಕಿಲಾಡಿ ರೇಖೆಗಳನ್ನು ಸದುಪಯೋಗಮಾಡಿಕೊಂಡರು. ಈ ಮಿತಿಗಿಂತ ಹೆಚ್ಚು ಸಂಬಳ ಪಡೆಯುವವರು ತಮ್ಮ ಸಂಬಳವನ್ನು ಕಡಿಮೆಮಾಡಬೇಕೆಂದು ಮನವಿ ಮಾಡುವುದರಿಂದ ಹಿಡಿದು ಮುಂದೆ ಸಂಬಳ ಹೆಚ್ಚಾದರೇನು ಮಾಡಲಿ ಎಂದು ಅತ್ತುಕೊಳ್ಳುವ ದೃಶ್ಯದ ವರೆಗೆ ಕಲ್ಪನೆ ಹಬ್ಬಿತು. ವಿಚಿತ್ರವೆಂದರೆ ಗಂಭೀರವಾಗಿ, ಗಹನವಾಗಿ ಯೋಚಿಸುವವರೆಂದು ನಾವಂದುಕೊಳ್ಳುವ ಅನೇಕ ವಿದ್ಯಾವಂತ, ತಜ್ಞ ಸಂವೇದನಾಶೀಲರು ಬಾಯಿಗೆ ಭದ್ರ ಬೀಗಮುದ್ರೆಯನ್ನು ಅಳವಡಿಸಿ ಕುಳಿತದ್ದು. ತೈಲ, ಅಡುಗೆ ಅನಿಲ, ಗೊಬ್ಬರದ ಬೆಲೆಗಳ ಇಳಿಕೆಯನ್ನು ನಿರೀಕ್ಷಿಸಿದವರೂ ತಮಗೇನೂ ನಷ್ಟವಾಗಿಲ್ಲವೆಂಬಂತೆ ಮೆರೆದದ್ದು. ನಿರಾಶಾವಾದಿಗಳಿಗೆ ನೆಮ್ಮದಿಯಾಗಿರಬಹುದು. ತಮ್ಮ ಭಾಷಣದ ಕೊನೆಗೆ ಅರ್ಥಸಚಿವರು ಘೋಷಿಸಿದ ಈ ಆದಾಯ ತೆರಿಗೆಯ ಮಿತಿಯ ಒಂದು ಮಾತು ಕೋಟ್ಯಾನುಕೋಟಿ ಭಾರತೀಯರಿಗೆ ಬಹುಮಾನವಿಲ್ಲದ ಲಾಟರಿ ಟಿಕೆಟಿನಂತಿತ್ತು.
ಕೃಷಿಗೆ ಭಾರೀ ಉಡುಗೊರೆ ಸಿಕ್ಕಿದೆಯೆಂದು ಸಚಿವರು ಹೇಳಿದರು: ಅಂಕಿ-ಸಂಖ್ಯೆಗಳನ್ನವಲೋಕಿಸಿದರೆ ಈ ಬಾರಿಯ ಉಡುಗೊರೆ ಕಳೆದ ಬಾರಿಗಿಂತ ಕಡಿಮೆ. ಕೃಷಿ ಮತ್ತು ರೈತಾಪಿ ವರ್ಗದ ಹಿತರಕ್ಷಣಾ ನಿಧಿಗೆ ಕಳೆದ ಬಾರಿ ರೂ. 1,31,195.21 ಕೋಟಿಗಳಾಗಿದ್ದರೆ (ಇದು ಪರಿಷ್ಕೃತ) ಈ ಬಾರಿ ರೂ.1,27,290.16 ಕೋಟಿ; ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಗೆ ಕಳೆದ ಬಾರಿ ರೂ.15,864 ಕೋಟಿಯಿದ್ದರೆ ಈ ಬಾರಿ ರೂ.12,242.27 ಕೋಟಿ. ಗೊಬ್ಬರದ ಸಬ್ಸಿಡಿಯ ಕೊಡುಗೆಯೂ ಕಳೆದ ಬಾರಿಯ ರೂ. 1,83,003.29 ಕೋಟಿಯಿಂದ ಈ ಬಾರಿಯ ರೂ.1,56,502.44ಕ್ಕೆ ಸೊರಗಿದೆ. ಮೀನುಗಾರಿಕೆ ಮತ್ತು ಪಶುಸಂಗೋಪನೆಗಾಗಿ ಮೀಸಲಿಡುವ ನಿಧಿ ಮಾತ್ರ ರೂ.1,500 ಕೋಟಿಯಷ್ಟು ಹೆಚ್ಚಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡಿನ ಸಾಲದ ಮಿತಿ ರೂ.3 ಲಕ್ಷದಿಂದ ರೂ.5 ಲಕ್ಷಕ್ಕೆ ಏರಿಸಲಾಗಿದೆ. ಈ ಕುರಿತು ನಾನು ಸ್ಥಳೀಯ ಬ್ಯಾಂಕ್ ಮುಖ್ಯಸ್ಥರಲ್ಲಿ ವಿಚಾರಿಸಿದರೆ ಅವರು ಇದು ಭೂಮಿಯ ಆಧಾರದ ಅಗತ್ಯವಿರುವ ಮಿತಿ ಎಂದರು.
ಇನ್ನುಳಿದ ವಿಚಾರಗಳಲ್ಲಿ ಅರ್ಥಸಚಿವರು ಬಹು ಸಂಖ್ಯೆಯ ರಾಜ್ಯಗಳಿಗೆ ಏನೂ ನೀಡದೆ ತಮ್ಮ ಎರಡು ಊರುಗೋಲುಗಳಾದ ಬಿಹಾರ ಮತ್ತು ಆಂಧ್ರಪ್ರದೇಶಗಳ ಪೈಕಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯುವ ಬಿಹಾರಕ್ಕೆ-ಹೆಚ್ಚು ಕೊಡುಗೆಯನ್ನು ನೀಡಿದ್ದು. ಇಷ್ಟು ಬಹಿರಂಗವಾಗಿ ಕೇಂದ್ರ ಸರಕಾರವು ಬತ್ತಲೆ ನಿಂತ ಉದಾಹರಣೆಗಳು ಕಳೆದ ಹತ್ತು ವರ್ಷಗಳಲ್ಲಿ ಹೆಚ್ಚಿರಲಿಲ್ಲ. ಉತ್ತಾನಪಾದನೆಂಬ ಅರಸನ ಪತ್ನಿಯರಾದ ಸುರುಚಿ-ಸುಮತಿಯರೂ ಮಕ್ಕಳಾದ ಧ್ರುವ-ಉತ್ತಮರ ನಡುವೆ ಇಂತಹ ಸುಲಭದ ಭೇದನೀತಿ ನೋಡಿರಲಿಕ್ಕಿಲ್ಲ. ನಾವೆಲ್ಲ ಭಾರತೀಯರು ಎಂದು ಬೊಗಳೆ ಬಿಡುವ ರಾಷ್ಟ್ರಬಕ್ರಗಳ ಸಂತತಿಯು ಜಿಎಸ್‌ಟಿಯ ಮೂಲಕ ಉತ್ತರ-ದಕ್ಷಿಣದ ಅಂತರವನ್ನು ಹೆಚ್ಚಿಸುವುದು ಮಾತ್ರವಲ್ಲ, ಈಗ ರಾಜ್ಯ-ರಾಜ್ಯಗಳ ನಡುವೆ ಅಂತರವನ್ನು ಹೆಚ್ಚಿಸಿ ಒಕ್ಕೂಟ ವ್ಯವಸ್ಥೆಯನ್ನು ಛಿದ್ರಗೊಳಿಸುವ ಯೋಜನೆಯ ಬುನಾದಿಯನ್ನು ಭದ್ರಪಡಿಸಿದವು. ಬಜೆಟಿನ ಬಲೂನು ಬಹಳ ದೊಡ್ಡದಾಗಿತ್ತು. ಕಿಂದರಿಜೋಗಿಯ ಪೀಪಿಗೆ ಇಲಿಗಳು ತಲೆ ಮಾತ್ರವಲ್ಲ, ಮೈಯನ್ನೇ ಆಡಿಸುತ್ತ ಕುಣಿದಾಡುತ್ತ ಅನುಸರಿಸಿದವು. ಇದರ ಫಲಾಫಲಗಳು ಅರ್ಥವಾಗದಷ್ಟು ಮಹಿಮೆ ಬಜೆಟಿನ ಭಾಷಣದಲ್ಲಿದ್ದಂತಿತ್ತು. ಬಜೆಟಿನ ಒಟ್ಟಾರೆ ಶ್ರಮಕ್ಕೆ ಕೈಗಾರಿಕೆ, ವ್ಯಾಪಾರದ ಪ್ರತಿಕ್ರಿಯೆಯನ್ನು ಸೂಚಿಸುವ ಶೇರು ಮಾರುಕಟ್ಟೆ ಎಂದಿನಂತೆಯೇ ಇತ್ತು. ರೋಮಾಂಚಕಾರಿಯಾಗಿ ಮೇಲೇಳಬಹುದೆಂಬ ಸರಕಾರದ ನಿರೀಕ್ಷೆ ಹುಸಿಯಾಗಿತ್ತು.
ಎಲ್ಲರಿಗೂ ಅನುಕೂಲವಾಗಿದೆಯೆಂದು ಪ್ರಜೆಗಳು ಹೇಳಬೇಕೇ ಹೊರತು ಸರಕಾರವಲ್ಲ. ಸರಕಾರ ಮತ್ತು ಅದನ್ನು ಬೆಂಬಲಿಸುವ ಮಂದಿ ಇದನ್ನು ಎಷ್ಟೇ ಕೊಚ್ಚಿಕೊಂಡರೂ ಅದು ಆತ್ಮರತಿಯಾದೀತೇ ವಿನಾ ವಾಸ್ತವದ ಅಭಿಮತವಾಗಲಾರದು. ಇವೆಲ್ಲದರ ನಡುವೆ ಭಾರತದ ರೂಪಾಯಿಯ ಬೆಲೆ ಕುಸಿಯುತ್ತಿರುವುದರ ಬಗ್ಗೆ ಅರ್ಥಸಚಿವರು ಏನೂ ಹೇಳಲಿಲ್ಲ. ಭಾರತದ ರಫ್ತಿಗೆ ಅಮೆರಿಕ ಹೆಚ್ಚು ಸುಂಕ ವಿಧಿಸುವ ಗಾಬರಿಮಯ ಪರಿಸ್ಥಿತಿಯ ಬಗ್ಗೆಯೂ ಮೌನವೇ ಅರ್ಥಸಚಿವರ ಆಭರಣವಾಯಿತು. ಇದು ಸಾಲದೆಂಬಂತೆ ಬಜೆಟಿನ ಭಾಷಣದ ಬಿಸಿಯಾರುವ ಮೊದಲೇ ಅಮೆರಿಕದಿಂದ ಅಕ್ರಮ ವಲಸೆಯ ಆರೋಪವನ್ನು ಹೊತ್ತ ಲಕ್ಷಾನುಗಟ್ಟಲೆ ಭಾರತೀಯರ ಮೊದಲ ತಂಡ ಭಾರತಕ್ಕೆ ಬಂದಿಳಿಯಿತು. ಇವರನ್ನು ಪ್ರಧಾನಿ ಹೇಗೆ ಸ್ವಾಗತಿಸಿದರೆಂಬುದರ ಬಗ್ಗೆ ಸುದ್ದಿ ಈಗಷ್ಟೇ ಗೊತ್ತಾಗಬೇಕಷ್ಟೇ. ಅಮೆರಿಕದ ಸರಕುಗಳಿಗೆ ಸುಂಕ ಕಡಿತಗೊಳಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ವಿಶ್ವಗುರುವಿನ ಪೀಠದಿಂದ ಅಮೆರಿಕವೆಂಬ ದೊಡ್ಡಣ್ಣನನ್ನು ದೊರೆಯಂತೆ ಕಾಣುವ ಭಯಭೀತ ಗುಲಾಮನ ಸ್ಥಿತಿಗೆ ನಾವಿಳಿಯುತ್ತಿದ್ದೇವೆ. ಕಣ್ಣಿಗೆ ರಾಚುವ ವಾಸ್ತವದೆದುರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ವ್ಯವಹರಿಸುತ್ತಿದ್ದೇವೆ. ಪಾಳೇಗಾರರು ಚಕ್ರವರ್ತಿಯಂತೆ ತಮ್ಮ ಸಂಭ್ರಮವನ್ನು ಪ್ರಕಟಿಸುತ್ತಿದ್ದಾರೆ!
ಪ್ರತೀ ವರ್ಷ ಬಜೆಟ್ ಯಾಕೆ ತರುತ್ತಾರೋ ಗೊತ್ತಿಲ್ಲ. ಸಾತ್ವಿಕ ಮತ್ತು ತಾತ್ವಿಕ ಕಾರಣಗಳಿದ್ದರೆ ಸರಿ. ಚುನಾವಣೆ ಎದುರಿದ್ದರೆ ಒಂದು ರೀತಿಯ ಬಜೆಟ್, ಇಲ್ಲದಿದ್ದರೆ ಇನ್ನೊಂದು ರೀತಿಯದ್ದು. ಆರ್ಥಿಕ ತಜ್ಞರಿಗಿಂತ ರಾಜಕೀಯ ತಜ್ಞರೇ ಈ ಬಜೆಟುಗಳನ್ನು ರಚಿಸಿ ಶೃಂಗರಿಸಿ ಮಂಡಿಸುತ್ತಾರೆ. ಮಾಧ್ಯಮಗಳಿಗೆ ಮಧುಬನಿ ಸೀರೆಯ ಬಗ್ಗೆ, ರಾಷ್ಟ್ರಪತಿಯವರು ಅರ್ಥ ಸಚಿವರಿಗೆ ಸಿಹಿ ತಿನಿಸುವ ಕುರಿತು ಎಲ್ಲಿಲ್ಲದ ಆಸಕ್ತಿ. ಇರಲಿ, ತೆರಿಗೆಯೇ ಇಲ್ಲದ ರಾಷ್ಟ್ರಗಳು ತಮ್ಮ ಅರ್ಥವ್ಯವಸ್ಥೆಯನ್ನು ಹೇಗೆ ನಿಭಾಯಿಸುತ್ತವೆ ಎಂಬುದನ್ನಾದರೂ ಅಧ್ಯಯನ ಮಾಡಬೇಕಲ್ಲವೇ? ಜನರ ತೆರಿಗೆ ಹಣದಿಂದಲೇ ಬದುಕುವ ಸರಕಾರ ಜನರಿಗೆ ಸಿಹಿ ತಿನಿಸುವ ಬಜೆಟ್ ನೀಡುವುದಾದರೂ ಎಂದು?
ಆ ಅಮೃತ ಕಾಲಕ್ಕೆ ಕಾಯೋಣ.ಆ ಅಮೃತ ಕಾಲಕ್ಕೆ ಕಾಯೋಣ.